Tag: leave

  • ಭಾರೀ ಮಳೆ- ಬೆಂಗಳೂರು ಸೇರಿ 6 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ, ಅಲರ್ಟ್‌ ಆಗಿರಲು 13 ಜಿಲ್ಲೆಗಳಿಗೆ ಸೂಚನೆ

    ಭಾರೀ ಮಳೆ- ಬೆಂಗಳೂರು ಸೇರಿ 6 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ, ಅಲರ್ಟ್‌ ಆಗಿರಲು 13 ಜಿಲ್ಲೆಗಳಿಗೆ ಸೂಚನೆ

    ಬೆಂಗಳೂರು: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿರುವ ಬೆಂಗಳೂರು ನಗರ ಸೇರಿದಂತೆ ಆರು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೇ ಮುಂಜಾಗ್ರತೆ ಕ್ರಮಗಳೊಂದಿಗೆ ಅಲರ್ಟ್‌ ಆಗಿರುವಂತೆ ರಾಜ್ಯದ 13 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.

    ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮಂಜುನಾಥ್‌ ಆದೇಶ ಹೊರಡಿಸಿದ್ದಾರೆ. ಉಳಿದಂತೆ ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ಖಾಕಿಯಿಂದಲೇ ನ್ಯಾಯಾಧೀಶರ ಮೇಲೆ ಹಲ್ಲೆ- ಇಬ್ಬರು ಪೊಲೀಸರು ಅರೆಸ್ಟ್‌!

    ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ತುಂತುರು ಮಳೆಯಾಗುತ್ತಿದೆ. ತುಂತುರು ಮಳೆ ಹಿನ್ನೆಲೆ ಶಾಲಾ-ಕಾಲೇಜುಗಳು, ನಿತ್ಯ ಕೆಲಸಕ್ಕೆ ಹೋಗುವವರಿಗೆ ಸಮಸ್ಯೆ ಆಗಲಿದೆ. ಮುಂದಿನ ನಾಲ್ಕು ದಿನದವರೆಗೂ ಮಳೆ ಇರಲಿದೆ. ಚೆನ್ನೈನಲ್ಲಿ ರೆಡ್‌ ಅಲರ್ಟ್‌ ಇರುವ ಕಾರಣ ಬೆಂಗಳೂರಿನಲ್ಲೂ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ವೀರ್ ದಾಸ್‍ಗೆ ಪ್ರದರ್ಶನ ನೀಡಲು ಬಿಡುವುದಿಲ್ಲ: ನರೋತ್ತಮ್ ಮಿಶ್ರಾ

    ರಾಜ್ಯದ 13 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ನೀಡಿದೆ. ವ್ಯಾಪಕ ಮಳೆ ಜೊತೆಗೆ ವಿಪರೀತ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ 13 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಲರ್ಟ್ ಆಗಿರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಜೊತೆಗೆ ಕರಾವಳಿ ಕರ್ನಾಟಕದಲ್ಲಿ ಮೀನುಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ.

    chikkaballapura rain

    ಯಾವ್ಯಾವ ಜಿಲ್ಲೆಗಳಿಗೆ ಸೂಚನೆ?
    ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಲರ್ಟ್‌ ಆಗಿರುವಂತೆ ತಿಳಿಸಲಾಗಿದೆ.

  • ಅವಿವಾಹಿತೆಯರಿಗೆ ಮಾತ್ರ- ಲವ್ ಮಾಡಲು ತಿಂಗಳಿಗೊಂದು ರಜೆ!

    ಅವಿವಾಹಿತೆಯರಿಗೆ ಮಾತ್ರ- ಲವ್ ಮಾಡಲು ತಿಂಗಳಿಗೊಂದು ರಜೆ!

    ಬೀಜಿಂಗ್: ಮನೆ ಕೆಲಸ, ಉದ್ಯೋಗ ಎಂದು ಎಷ್ಟೋ ಮಹಿಳೆಯರಿಗೆ ಆರೋಗ್ಯ, ಕುಟುಂಬದ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಹಿಳೆಯರಿಗೆ ಉಳಿದ ರಜೆಗಳ ಜೊತೆ ಲವ್ ರಜೆ (LOVE LEAVE) ನೀಡಲು ಚೀನಾ ಸರ್ಕಾರ ಮುಂದಾಗಿದೆ.

    ಕ್ಯಾಷುವಲ್ ಲೀವ್(CL), ಸಿಕ್ ಲೀವ್(SL), ಹೀಗೆ ಇರುವ ರಜೆಗಳ ಜೊತೆ ತಿಂಗಳಿಗೊಮ್ಮೆ ಮಹಿಳೆಯರಿಗೆ ಲವ್‍ಲೀವ್ ಎಂದು ಘೋಷಿಸಲಾಗಿದೆ. ಆದರೆ ಇದು ಸಿಗುವುದು ಅವಿವಾಹಿತೆಯರಿಗೆ ಮಾತ್ರವಾಗಿದೆ. ಚೀನಾದ ಹ್ಯಾಂಗ್ಜೌದಲ್ಲಿರುವ ಕಂಪೆನಿಗಳು ಈಗಾಗಲೇ ತಮ್ಮ ಉದ್ಯೋಗಿಗಳಿಗೆ ಡೇಟಿಂಗ್ ರಜೆ ನೀಡುತ್ತಿವೆ. ಶಾಲಾ ಶಿಕ್ಷಕರಿಗೆ ನೂತನವಾಗಿ ಡೇಟಿಂಗ್ ರಜೆ ಆರಂಭಿಸಲಾಗಿದೆ. ಪ್ರೀತಿ ಯಾವಾಗ? ಎಲ್ಲಿ ಆಗುತ್ತದೆ ಎಂದು ಹೇಳಲು ಬರುವುದಿಲ್ಲ, ಹೀಗಾಗಿ ಒಂದು ದಿನ ಮುಂಚಿತವಾಗಿ ರಜೆ ಹಾಕುವುದನ್ನು ತಿಳಿಸಿದರೆ ಸಾಕಂತೆ. ಇದನ್ನೂ ಓದಿ: ಪ್ರವಾಹದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ- ಪಾತ್ರೆಯಲ್ಲಿ ಕುಳಿತು ಮಂಟಪಕ್ಕೆ ತೆರಳಿದ್ರು!

    ಮಹಿಳೆಯರು ಮದುವೆಯಾಗಲು ನಿರಾಕರಿಸುತ್ತಾರೆ. ಇದಕ್ಕೆ ಕಾರಣ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯೋಚಿಸಲು ಸಮಯ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಮದುವೆಯಾಗದೇ, ಮಕ್ಕಳಾಗುವುದಿಲ್ಲ, ಇದು ದೇಶಕ್ಕೆ ಸಮಸ್ಯೆ ತಂದೊಡ್ಡಬಹುದು. ಆದ್ದರಿಂದ ತಮ್ಮ ಸಂಗಾತಿ ಜೊತೆ ಅವರು ತಿಂಗಳಿಗೊಮ್ಮೆ ಸಮಯ ಕಳೆದು ನಂತರ ಅವರನ್ನು ಮದುವೆಯಾಗುವ ಬಗ್ಗೆ ಚಿಂತೆ ಮಾಡಬಹುದು ಎಂದು ಚೀನಾ ಸರ್ಕಾರ ಹೇಳಿದೆ. ಮಹಿಳಾ ಉದ್ಯೋಗಿಗಳಿಗೆ 30 ವರ್ಷಕ್ಕಿಂತ ಹೆಚ್ಚಿನ ವಯಸ್ಸು ಆಗಿರಬೇಕು. ಈ ಮೊದಲು ಮದುವೆಯಾಗಿರಬಾರದು ಎಂದು ಸರ್ಕಾರ ಷರತ್ತುಗಳನ್ನು ವಿಧಿಸಿದೆ. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು!

  • ರಜೆ ಮಂಜೂರಿಗೆ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಸಾರಿಗೆ ಅಧಿಕಾರಿ

    ರಜೆ ಮಂಜೂರಿಗೆ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಸಾರಿಗೆ ಅಧಿಕಾರಿ

    ಗದಗ: ಕೆಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆ ಚಾಲಕ/ನಿರ್ವಾಹಕರಿಗೆ ರಜೆ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ಡಿಪೋ ಮ್ಯಾನೇಜರ್‌ನನ್ನು ಎಸಿಬಿ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಜಿಲ್ಲೆಯ ರೋಣದಲ್ಲಿ ನಡೆದಿದೆ.

    ರೋಣ ಬಸ್ ಡಿಪೋ ಮ್ಯಾನೇಜರ್ ಬಿ.ಎಂ. ಗೆನ್ನೂರ ಎಸಿಬಿ ದಾಳಿಗೆ ಒಳಗಾದ ಅಧಿಕಾರಿಯಾಗಿದ್ದಾರೆ. ಸಂಸ್ಥೆಯ ನಿರ್ವಾಹಕರೊಬ್ಬರು, ತಾಯಿಗೆ ಹುಷಾರಿಲ್ಲದ ಕಾರಣ ರಜೆ ಕೇಳಿದ್ದರು. 20 ದಿನ ರಜೆ ಮಂಜೂರು ಮಾಡಲು 2 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಇಂದು ಹಣ ಕೊಡುವಾಗ ದಾಳಿ ನಡೆಸಿದ ಅಧಿಕಾರಿಗಳು, ಡಿಪೋ ಮ್ಯಾನೇಜರನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಶಾಸಕರ ಹುಟ್ಟುಹಬ್ಬ – ಹೂಮಳೆಗೆರೆದು ಸಂಭ್ರಮಿಸಿದ ಪೊಲೀಸರು

    ಯಾವುದೇ ಸಿಬ್ಬಂದಿ ರಜೆ ಕೇಳಿದ್ರೆ ಈ ಡಿಪೋ ಮ್ಯಾನೇಜರ್ ಲಂಚ ಪಡೆಯುತ್ತಿದ್ದರು ಎಂಬ ಆರೋಪ ಕೆಳಿಬಂದಿದೆ. ಎಸಿಬಿ ಡಿವೈಎಸ್‌ಪಿ ಎಂ.ವಿ. ಮಲ್ಲಾಪುರ ಮಾರ್ಗದರ್ಶನದಲ್ಲಿ ಗದಗ ಇನ್‍ಸ್ಪೆಕ್ಟರ್ ಆರ್. ದೇಸಾಯಿ, ಈರಣ್ಣ ಹಳ್ಳಿ, ಸಿಬ್ಬಂದಿ ಎಂ.ಎಂ. ಅಯ್ಯನಗೌಡರ, ವೀರೇಶ್ ಜೋಳದ, ಎನ್.ಎಸ್. ತಾಯಣ್ಣವರ, ವೀರೇಶ್ ಬಿಸನಳ್ಳಿ, ಐ.ಸಿ. ಜಾಲಿಹಾಳ, ಮಂಜು ಮುಳಗುಂದ ನೇತೃತ್ವದಲ್ಲಿ ದಾಳಿ ಮಾಡಲಾಯಿತು. ಅರೋಪಿ ಅಧಿಕಾರಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಗದಗ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಜೆ ನೀಡದ್ದಕ್ಕೆ ಆಕ್ಸಿಜನ್ ಸಿಲಿಂಡರ್ ಸಹಿತ ಬ್ಯಾಂಕಿಗೆ ಬಂದ ನೌಕರ

    ರಜೆ ನೀಡದ್ದಕ್ಕೆ ಆಕ್ಸಿಜನ್ ಸಿಲಿಂಡರ್ ಸಹಿತ ಬ್ಯಾಂಕಿಗೆ ಬಂದ ನೌಕರ

    ರಾಂಚಿ: ಅನಾರೋಗ್ಯದಿಂದ ಬಳಲುತಿದ್ರೂ ರಜೆ ನೀಡಿಲ್ಲ ಎಂದು ಆರೋಪಿಸಿ ಬ್ಯಾಂಕ್ ನೌಕರರೊಬ್ಬರು ಆಕ್ಸಿಜನ್ ಸಿಲಿಂಡರ್ ಸಹಿತ ಕೆಲಸಕ್ಕೆ ಹಾಜರಾಗಿದ್ದಾರೆ. ಜಾರ್ಖಂಡ್ ನ ಬೊಕೊರಾದ ಸೆಕ್ಟರ್ 4ರಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಈ ಘಟನೆ ನಡೆದಿದೆ.

    ಅರವಿಂದ್ ಕುಮಾರ್ ಆಕ್ಸಿಜನ್ ಸಿಲಿಂಡರ್ ಜೊತೆಯಲ್ಲಿ ಬ್ಯಾಂಕಿಗೆ ಬಂದ ನೌಕರ. ಕೆಲ ದಿನಗಳ ಹಿಂದೆ ಅರವಿಂದ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಬಳಿಕ ವರದಿ ನೆಗಟಿವ್ ಬಂದಿದ್ರೂ ಉಸಿರಾಟದ ತೊಂದರೆಯಿಂದ ಮನೆಯಲ್ಲಿ ಆಕ್ಸಿಜನ್ ಸಪೋರ್ಟ್ ಮೇಲಿದ್ದರು. ಉಸಿರಾಟದ ಸಮಸ್ಯೆ ಜೊತೆಗೆ ಶ್ವಾಸಕೋಶದಲ್ಲಿ ಸೋಂಕು ತಗುಲಿದ್ದರಿಂದ ಮನೆಯಲ್ಲಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ರು.

    ಅನಾರೋಗ್ಯದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ರಜೆ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ. ಆದ್ರೂ ಕೆಲಸಕ್ಕೆ ಹಾಜರಾಗುವಂತೆ ಒತ್ತಡ ಹಾಕಲಾಗ್ತಿದೆ. ಆದ್ದರಿಂದ ಆಕ್ಸಿಜನ್ ಸಿಲಿಂಡರ್ ಜೊತೆಯಲ್ಲಿಯೇ ಕೆಲಸಕ್ಕೆ ಬರುವಂತಾಗಿದೆ ಎಂದು ಅರವಿಂದ್ ಕುಮಾರ್ ಹೇಳಿದ್ದಾರೆ.

    ಅರವಿಂದ್ ಕುಮಾರ್ ರಾಜೀನಾಮೆ ನೀಡಿದ್ರೂ ಅಧಿಕಾರಿಗಳು ಸ್ವೀಕರಿಸುತ್ತಿಲ್ಲ ಎನ್ನಲಾಗುತ್ತಿದೆ. ಇಂದು ಅರವಿಂದ್ ಜೊತೆ ಅವರ ಕುಟುಂಬಸ್ಥರು ಸಹ ಬ್ಯಾಂಕಿಗೆ ಆಗಮಿಸಿದ್ದರು. ಇತ್ತ ಬ್ಯಾಂಕ್ ಹಿರಿಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.

  • ಏಪ್ರಿಲ್ 1ಕ್ಕೆ ಎನ್‍ಹೆಚ್‍ಎಂ ಸಿಬ್ಬಂದಿಗೆ ರಜೆ ಕೊಟ್ರೆ ಆರೋಗ್ಯ ಇಲಾಖೆಯಲ್ಲಿ ಅಲ್ಲೋಲ ಕಲ್ಲೋಲ

    ಏಪ್ರಿಲ್ 1ಕ್ಕೆ ಎನ್‍ಹೆಚ್‍ಎಂ ಸಿಬ್ಬಂದಿಗೆ ರಜೆ ಕೊಟ್ರೆ ಆರೋಗ್ಯ ಇಲಾಖೆಯಲ್ಲಿ ಅಲ್ಲೋಲ ಕಲ್ಲೋಲ

    ಉಡುಪಿ: ಕೊರೊನಾ ವೈರಸ್ ರಾಜ್ಯದಲ್ಲಿ ರಣಕೇಕೆ ಹಾಕುತ್ತಿದೆ. ಈ ಸಂದಿಗ್ಧ ಸಂದರ್ಭದಲ್ಲಿ ನ್ಯಾಶನಲ್ ಹೆಲ್ತ್ ಮಷೀನ್‍ನ(ಎನ್‍ಎಚ್‍ಎಂ) 23,700 ಸಿಬ್ಬಂದಿಗೆ ರಜೆ ನೀಡುತ್ತಿದೆ. ಕೊರೊನಾ ಎಮರ್ಜೆನ್ಸಿ ಇದ್ದರೂ ಇಲಾಖೆಗೆ ರಿನಿವಲ್ ಮಾಡೋದೆ ಮುಖ್ಯವಾಯ್ತಾ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.

    ರಾಜ್ಯದಲ್ಲಿ ಕೊರೊನಾ ವೈರಸ್ ಆತಂಕದ ಸೃಷ್ಟಿಸಿದೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಳ್ಳುತ್ತಿರುವ ಎನ್‍ಹೆಚ್‍ಎಂ ಸಿಬ್ಬಂದಿ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಕೆಲಸಕ್ಕೆ ಬರಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ.

    ಉಡುಪಿಯಲ್ಲಿ ಎನ್‍ಎಚ್‍ಎಂ ಕೈಕೆಳಗೆ 412 ಮಂದಿ ಕೆಲಸ ಮಾಡುತ್ತಿದ್ದಾರೆ. ಈ 412 ಮಂದಿ ಏಪ್ರಿಲ್ 1ಕ್ಕೆ ರಜೆ ಹಾಕಲು ತೀರ್ಮಾನಿಸಿದ್ದಾರೆ. ಸರ್ಕಾರದ ಮುಂದೆ ಹಲವಾರು ತಿಂಗಳಿಂದ ನಮ್ಮ ಬೇಡಿಕೆಗಳನ್ನು ಇಡುತ್ತಿದ್ದೇವೆ. ಆದರೆ ಆರೋಗ್ಯ ಇಲಾಖೆ ಅಥವಾ ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಕೊಟ್ಟಿಲ್ಲ ಎಂದು ಎನ್‍ಎಚ್‍ಎಂನ ಮುಖಂಡರು ಹೇಳಿದ್ದಾರೆ.

    ಒಟ್ಟು ಎನ್‍ಎಚ್‍ಎಂನ 23,700 ಸಿಬ್ಬಂದಿ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಕಳೆದ 15 ದಿನದಿಂದ ಕೈಜೋಡಿಸಿದ್ದಾರೆ. ಆದರೆ ನಮ್ಮ ಸೇವೆಗೆ ಸರಿಯಾದ ಮಾನ್ಯತೆ ಸಿಗುತ್ತಿಲ್ಲ. ನಮಗೆ ಸರಿಯಾಗಿ ಸಂಬಳ ಆಗುತ್ತಿಲ್ಲ. ಸವಲತ್ತುಗಳ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿಲ್ಲ ಎಂಬುದು ಎನ್‍ಎಚ್‍ಎಂನ ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಅವರ ಆರೋಪವಾಗಿದೆ.

    ಏಪ್ರಿಲ್ 1ರಂದು ಬ್ರೇಕ್ ಕೊಟ್ಟು ಮತ್ತೆ ನಮ್ಮನ್ನು ಕೆಲಸಕ್ಕೆ ತೆಗೆದುಕೊಂಡರೆ ನಾವು ಹೊಸದಾಗಿ ಸೇವೆಗೆ ಬಂದಂತೆ ಆಗುತ್ತದೆ. ಸರ್ಕಾರದ ಸವಲತ್ತುಗಳಿಂದ ತಪ್ಪಿಸಲು ಈ ತರದ ಪ್ಲಾನ್ ಮಾಡಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಎನ್‍ಎಚ್‍ಎಂ ಕಾರ್ಯಕರ್ತರೊಬ್ಬರು ನೋವು ತೋಡಿಕೊಂಡಿದ್ದಾರೆ.

    ನರ್ಸ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಯುಷ್ ಡಾಕ್ಟರ ಕೊರೊನಾ ವೈರಸ್ ತಡೆಗಟ್ಟಲು ಮನೆಮನೆಗೆ ಹೋಗಿ ಜಾಗೃತಿ ಮೂಡಿಸುತ್ತಿದ್ದಾರೆ. ಇಷ್ಟು ಸಂಖ್ಯೆಯ ಜನ ಒಂದೇ ದಿನ ರಜೆ ತೆಗೆದುಕೊಂಡರೆ ಇಡೀ ರಾಜ್ಯದ ವೈದ್ಯಕೀಯ ಪರಿಸ್ಥಿತಿ ವ್ಯವಸ್ಥೆಗಳು ಮೇಲೆ ಕೆಳಗಾಗುತ್ತದೆ ಎಂಬುದು ಸಾರ್ವಜನಿಕರ ಆತಂಕವಾಗಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಸಚಿವರಾದ ಶ್ರೀರಾಮುಲು, ವೈದ್ಯಕೀಯ ಸಚಿವ ಡಾ.ಸುಧಾಕರ್ ಅವರು ಮಧ್ಯಪ್ರವೇಶ ಮಾಡಿ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.

  • ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ರಜೆ ಹಾಕಲು ಇ-ಲೀವ್ ಜಾರಿ

    ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ರಜೆ ಹಾಕಲು ಇ-ಲೀವ್ ಜಾರಿ

    ಬೆಂಗಳೂರು : ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಇನ್ನುಂದೆ ಸಿಕ್ಕ ಸಿಕ್ಕ ಹಾಗೆ ರಜೆ ಹಾಕುವ  ಹಾಗಿಲ್ಲ. ಮನಬಂದಂತೆ ರಜೆ ತೆಗೆದುಕೊಳ್ಳುವ ಹಾಗಿಲ್ಲ. ಇವತ್ತು ರಜೆ ಹಾಕಿ ನಾಳೆ ಲೆಟರ್ ಕೊಡೋಣ ಎನ್ನುವ ಹಾಗಿಲ್ಲ. ಯಾಕಂದ್ರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ರಜೆ ಹಾಕೋ ವ್ಯವಸ್ಥೆಯನ್ನು ಬದಲಾಯಿಸಿದ್ದು, ಇ-ಲೀವ್ ವ್ಯವಸ್ಥೆ ಜಾರಿಗೆ ತಂದಿದೆ.

    ಇ-ಲೀವ್ ವ್ಯವಸ್ಥೆ ಸಂಪೂರ್ಣವಾಗಿ ವಿದ್ಯುನ್ಮಾನ ವ್ಯವಸ್ಥೆ ಅಗಿದೆ. ಇಷ್ಟು ದಿನ ರಜೆ ಹಾಕುವವರು ಕೈ ಬರಹದ ಮೂಲಕ ಸಂಬಂಧ ಪಟ್ಟವರಿಗೆ ರಜೆ ಅರ್ಜಿ ಸಲ್ಲಿಸಬೇಕಿತ್ತು. ಆದ್ರೆ ಈಗ ಈ ವ್ಯವಸ್ಥೆಯನ್ನೇ ಬದಲಾವಣೆ ಮಾಡಲಾಗಿದೆ.

    ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇಲಾಖೆ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಹೊಸ ವ್ಯವಸ್ಥೆಯಲ್ಲಿ ಸಿಬ್ಬಂದಿಗೆ ನೀಡಿರುವ, ಇ -ಆಫೀಸ್ ಐಡಿ ಮೂಲಕ ರಜೆಗೆ ಅರ್ಜಿ ಸಲ್ಲಿಸಬೇಕು. ರಜೆ ಅನುಮತಿ ಕೂಡ ಇಲ್ಲೇ ಸಿಗುತ್ತದೆ.

    ಡಿ ದರ್ಜೆ ವಾಹನ ಸವಾರರನ್ನು ಹೊರತು ಪಡಿಸಿ ಉಳಿದ ಎ, ಬಿ, ಸಿ, ಡಿ ವರ್ಗದ ನೌಕರರು, ಸರ್ಕಾರದ ಎಲ್ಲಾ ಅಧಿಕಾರಿಗಳಿಗೂ ಈ ಹೊಸ ನಿಯಮ ಅನ್ವಯ ಆಗುತ್ತದೆ. 2020 ಜನವರಿ 1 ರಿಂದಲೇ ಇ-ಲೀವ್ ವ್ಯವಸ್ಥೆ ಜಾರಿಗೆ ಬರುತ್ತಿದೆ.

  • ರಜೆ ಕೊಡದ ಸಿಪಿಐಗೆ ಶಾಪ ಹಾಕಿದ ಮಹಿಳಾ ಪೇದೆ – ವಿಡಿಯೋ ವೈರಲ್

    ರಜೆ ಕೊಡದ ಸಿಪಿಐಗೆ ಶಾಪ ಹಾಕಿದ ಮಹಿಳಾ ಪೇದೆ – ವಿಡಿಯೋ ವೈರಲ್

    ಹುಬ್ಬಳ್ಳಿ: ರಜೆ ಕೊಡಲು ನಿರಾಕರಿಸಿದ ಮೇಲಾಧಿಕಾರಿಗೆ ಮಹಿಳಾ ಪೇದೆ(ಡಬ್ಲ್ಯೂಪಿಸಿ) ಫುಲ್ ಅವಾಜ್ ಹಾಕಿರುವ ಘಟನೆ ಹುಬ್ಬಳ್ಳಿಯ ಉಪ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಸಿಪಿಐ ಡಿಸೋಜಾ ಅವರಿಗೆ ಮಹಿಳಾ ಪೇದೆಯೊಬ್ಬರು ಅವಾಜ್ ಹಾಕಿದ್ದಾರೆ. ರಜೆ ಕೊಡಲಿಲ್ಲ ಎನ್ನುವ ಕಾರಣಕ್ಕೆ ಸಿಪಿಐ ಅವರನ್ನ ವಾಚಾಮಗೋಚರವಾಗಿ ನಿಂದಿಸಿ, ಶಾಪ ಹಾಕಿದ್ದಾರೆ.

    ಮೊದಲು ರಜೆ ಬೇಕು ಎಂದು ಸಿಪಿಐ ಬಳಿ ವಿನಯದಿಂದ ಕೇಳಿದ್ದಾರೆ. ಈ ಮನವಿಯನ್ನು ತಿರಸ್ಕರಿಸಿದ್ದಕ್ಕೆ ಸಿಟ್ಟಿಗೆದ್ದಿದ್ದಾರೆ. ಅಷ್ಟೇ ಅಲ್ಲದೇ ಸಿಪಿಐ ಕ್ಯಾಬಿನ್ ಗೆ ನುಗ್ಗಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಈ ವೇಳೆ ಠಾಣೆಯ ಸಿಬ್ಬಂದಿ ಸಮಾಧಾನ ಮಾಡಿದರೂ ಶಾಂತವಾಗದ ಡಬ್ಲ್ಯೂಪಿಸಿ ಸಂಜೆಯೊಳಗೆ ನಿನಗೇನಾದರೂ ಆಗಲಿ ಎಂದು ಸಿಪಿಐಗೆ ಶಾಪ ಹಾಕಿ ಕೋಪ ತೋರಿಸಿದ್ದಾರೆ. ಮಹಿಳಾ ಪೇದೆಯ ಈ ಆರ್ಭಟದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಉಪ ನಗರ ಠಾಣೆಯ ಸಿಪಿಐ ಡಿಸೋಜಾ ಒಬ್ಬ ಸಜ್ಜನ ಅಧಿಕಾರಿ. ಅವರ ವಿರುದ್ಧವೇ ಈ ರೀತಿ ಕಿರುಚಾಡಿದ್ದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಪೇದೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

  • ಹೊಸದಾಗಿ ಮದ್ವೆ ಆಗಿದ್ದೀನಿ, ಹೊಸ ಹುರುಪಿನಲ್ಲಿದ್ದೀನಿ – ಬೆಂಗ್ಳೂರು ಪೇದೆಯ ರಜೆ ಪತ್ರ ವೈರಲ್

    ಹೊಸದಾಗಿ ಮದ್ವೆ ಆಗಿದ್ದೀನಿ, ಹೊಸ ಹುರುಪಿನಲ್ಲಿದ್ದೀನಿ – ಬೆಂಗ್ಳೂರು ಪೇದೆಯ ರಜೆ ಪತ್ರ ವೈರಲ್

    ಬೆಂಗಳೂರು: ನಾನು ಹೊಸದಾಗಿ ಮದುವೆ ಆಗಿದ್ದೀನಿ. ಅಲ್ಲದೇ ಹೊಸ ಹುರುಪಿನಲ್ಲಿ ಇದ್ದೀನಿ. ಹಾಗಾಗಿ ನನಗೆ 10 ದಿನ ಪರಿವರ್ತಿತ ರಜೆ ಅಥವಾ ಗಳಿಕೆ ರಜೆ ನೀಡಿ ಎಂದು ಪೇದೆಯೊಬ್ಬರು ವಿನೂತನವಾಗಿ ರಜೆ ಪತ್ರವನ್ನು ಬರೆದಿದ್ದಾರೆ.

    ಪೇದೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಹೊಸ ಮದುವೆ ಗಂಡಿಗೆ ರಜೆ ನೀಡಿ ಎಂದು ಹಾಸ್ಯ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

    ಪತ್ರದಲ್ಲಿ ಏನಿದೆ?
    ನನಗೆ ಹೊಸದಾಗಿ ಮದುವೆ ಆಗಿದ್ದು, ಹೊಸ ಹುರುಪು ಇದೆ. ನಮ್ಮ ಊರಿನಲ್ಲಿ ನಮ್ಮ ಮನೆ ದೇವರ ಪೂಜಾ ಕಾರ್ಯಕ್ರಮ ಇರುವ ಕಾರಣ ನನಗೆ ಫೆಬ್ರವರಿ 24ರಿಂದ ಮಾರ್ಚ್ 5ರವರೆಗೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ 10 ದಿನಗಳ ವರೆಗೆ ಪರಿವರ್ತಿತ ರಜೆ ಅಥವಾ ಗಳಿಕೆ ರಜೆಯನ್ನು ಮಂಜೂರು ಮಾಡಬೇಕಾಗಿ ನಿವೇದಿಸಿಕೊಳ್ಳುತ್ತೇನೆ ಎಂದು ವಿನೂತನವಾಗಿ ಬೇಗೂರು ಪೊಲೀಸ್ ಠಾಣೆಗೆ ರಜೆ ಪತ್ರ ಬರೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ- 7 ದಿನ ಸರ್ಕಾರಿ ಶೋಕಾಚರಣೆ

    ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ- 7 ದಿನ ಸರ್ಕಾರಿ ಶೋಕಾಚರಣೆ

    ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರ ಶುಕ್ರವಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದೆ. ಜೊತೆಗೆ ಆಗಸ್ಟ್ 16 ರಿಂದ 22ರವರೆಗೆ ರಾಜ್ಯದಾದ್ಯಂತ 7 ದಿನಗಳ ಕಾಲ ಶೋಕಾಚರಣೆ ಕೈಗೊಳ್ಳಬೇಕು ಎಂದು ಆದೇಶ ಹೊರಡಿಸಿದೆ.

    ಗುರುವಾರದಿಂದ 7 ದಿನಗಳ ಅವಧಿಯಲ್ಲಿ ಯಾವುದೇ ಸರ್ಕಾರಿ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ನಿಯತವಾಗಿ ಹಾರಿಸಲ್ಪಡುವ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಬೇಕು ಎಂದು ಸರ್ಕಾರ ಪ್ರಕಟಿಸಿದೆ.

    ರಾಜ್ಯದ ಹಲವೆಡೆ ಪ್ರವಾಹ ಎದುರಾಗಿದ್ದು, ತುರ್ತು ಪರಿಸ್ಥಿತಿ ನಿಭಾಯಿಸುವ ಹಾಗೂ ಪರಿಹಾರ ಒದಗಿಸುವ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ಹೊರತು ಪಡಿಸಿ, ಉಳಿದವರಿಗೆ ಅನ್ವಯಿಸುವಂತೆ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಆಗಸ್ಟ್ 17ರಂದು ಒಂದು ದಿನ ರಜೆ ಘೋಷಿಸಲಾಗಿದೆ.

    ಕೌನ್ಸೆಲಿಂಗ್ ಮುಂದೂಡಿಕೆ:
    ಆ.17 ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ನಿಕಾಯದ ಕೌನ್ಸೆಲಿಂಗ್ ಮುಂದೂಡಲಾಗಿದೆ. ಮುಂದೂಡಿದ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜ್ಯದಲ್ಲಿ ಮುಂದುವರೆದ ಮಳೆ- ಕೆಲವು ಶಾಲಾ ಕಾಲೇಜುಗಳಿಗೆ ನಾಳೆ ರಜೆ

    ರಾಜ್ಯದಲ್ಲಿ ಮುಂದುವರೆದ ಮಳೆ- ಕೆಲವು ಶಾಲಾ ಕಾಲೇಜುಗಳಿಗೆ ನಾಳೆ ರಜೆ

    ಬೆಂಗಳೂರು: ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಚಿಕ್ಕಮಗಳೂರು, ಮಡಿಕೇರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲವು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ನಾಳೆ ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕಿನ ಶಾಲಾ-ಕಾಲೇಜಿಗೆ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ಆದೇಶ ಹೊರಡಿಸಿದ್ದಾರೆ.

    ಕೊಡಗು: ಜಿಲ್ಲೆಯ ಭಾಗಮಂಡಲ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತವಾಗಿದ್ದು, ಭಾಗಮಂಡಲ- ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದೆ. ಹೀಗೆ ಮಳೆ ಮುಂದುವರಿದರೆ ಮಡಿಕೇರಿ- ತಲಕಾವೇರಿ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಕಾವೇರಿ, ಕನ್ನಿಕೆ ಹಾಗೂ ಸುಜೋತಿ ನದಿಗಳು ಮೈದುಂಬಿ ಹರಿಯುತ್ತಿವೆ. ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿ 375 ರಲ್ಲಿ ಗುಡ್ಡ ಕುಸಿದ ಪರಿಣಾಮ ತೆರವು ಕಾರ್ಯ ಭರದಿಂದ ಸಾಗುತ್ತಿದೆ. ಜಿಲ್ಲೆಯಾದ್ಯಂತ ಅಂಗನವಾಡಿ ಸೇರಿದಂತೆ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ.

    ದಕ್ಷಿಣ ಕನ್ನಡ/ ಉತ್ತರ ಕನ್ನಡ: ಕರಾವಳಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ನಾಳೆ ಜಿಲ್ಲೆಯ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಜೆ ಘೋಷಿಸಿದ್ದಾರೆ. ಮಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದ್ದು, ವಾಹನ ಸಂಚಾರ ಸ್ತಬ್ಧಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕಿನ 1ರಿಂದ 10ನೇ ತರಗತಿ ಶಾಲೆಗಳಿಗೆ ಮಾತ್ರ ರಜೆ ಘೋಷಿಸಿದ್ದು. ಉಳಿದ ತಾಲೂಕಿನಲ್ಲಿ ಮಳೆಯ ಆಧಾರದಲ್ಲಿ ರಜೆ ನೀಡುವುದು ಆಯಾ ತಾಲೂಕಿನ ತಹಶೀಲ್ದಾರ್ ವಿವೇಚನೆಗೆ ಬಿಟ್ಟಿದ್ದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

    ಕಳೆದ ಎರಡು ದಿನದಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಅಲ್ಪ ಮಳೆ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗಿದೆ. ಸಮುದ್ರದಲ್ಲಿ 10 ರಿಂದ 12 ಅಡಿ ಎತ್ತರದ ಅಲೆಗಳು ಏಳುತ್ತಿವೆ. ಎರಡು ದಿನಗಳಿಂದ ಮೀನುಗಾರಿಕೆಗೆ ತೆರಳದಂತೆ ಬಂದರಿನಲ್ಲಿ ಬೋಟ್‍ಗಳಿಗೆ ತಡೆ ಹಾಕಿದ್ದಾರೆ.

    ಮಲೆನಾಡಿನಲ್ಲಿ ಹಲವೆಡೆ ಹೆಚ್ಚಾಗಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲೂಕಿನ ಶಾಲೆಗಳಿಗೆ ಹಾಗೂ ಉಡುಪಿಯಲ್ಲಿ ಶಾಲಾ-ಕಾಲೇಜುಗಳು ರಜೆ ಘೋಷಣೆ ಮಾಡಲಾಗಿದೆ. ಧಾರವಾಡದಲ್ಲಿಯೂ ಆಗಾಗ ಜಿಟಿಜಿಟಿ ಮಳೆ ಬರುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ರಾತ್ರಿಯೇ ಸ್ವಲ್ಪ ಮಟ್ಟಿಗೆ ಜಿಟಿಜಿಟಿಯಾಗಿ ಆರಂಭವಾಗಿದ್ದ ಮಳೆ, ಬೆಳಗ್ಗೆಯಿಂದ ಆಗಾಗ ಬರುತ್ತಲೇ ಇತ್ತು. ಜಿಲ್ಲೆಯಲ್ಲಿ ಸಂಪೂರ್ಣ ಮೋಡ ಕವಿದ ವಾತಾವರಣ ಇದ್ದು, ಸ್ವಲ್ಪ ಚಳಿ ಜಾಸ್ತಿಯಾಗಿದೆ.