Tag: leapord

  • ತಿನ್ನಲು ಬಂದ ಚಿರತೆಯನ್ನು ಹೆದರಿಸಿ ಓಡಿಸಿದ ನಾಯಿ: ವಿಡಿಯೋ

    ತಿನ್ನಲು ಬಂದ ಚಿರತೆಯನ್ನು ಹೆದರಿಸಿ ಓಡಿಸಿದ ನಾಯಿ: ವಿಡಿಯೋ

    ಜೈಪುರ್: ತನ್ನನ್ನು ತಿನ್ನಲು ಬಂದ ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ನಾಯಿಯೊಂದು ಅದನ್ನು ಬೆದರಿಸಿ ಓಡಿಸಿದ ವಿಡಿಯೋವೊಂದು ರಾಜಸ್ಥಾನದ ಝಲಾನಾ ಅರಣ್ಯದಲ್ಲಿ ಸಫಾರಿಗೆ ತೆರೆಳಿದ್ದ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

    ಸಫಾರಿಗೆ ಹೋದ ಪ್ರವಾಸಿಗರ ತಂಡಕ್ಕೆ ಈ ಚಿರತೆ ಎದುರಾಗಿದೆ. ಪಾಂಥರ್ ಜೋಪಾ ಮತ್ತು ಕಾಳಿ ಮಾತಾ ದೇವಸ್ಥಾನ ಮಾರ್ಗದಲ್ಲಿ ಟ್ರ್ಯಾಕ್ ನಂಬರ್ 2ರಲ್ಲಿ ಚಿರತೆ ಪೋದೆಯಿಂದ ಹೊರಬಂದು ಪ್ರವಾಸಿಗರ ವಾಹನದ ಮುಂದೆ ಪ್ರತ್ಯಕ್ಷವಾಗಿದೆ. ಚಿರತೆಯನ್ನು ನೋಡುತ್ತಿದ್ದಂತೆ ಚಾಲಕ ತಮ್ಮ ವಾಹನವನ್ನು ನಿಲ್ಲಿಸಿದ್ದರು.

    ಚಿರತೆಯನ್ನು ನೋಡುತ್ತಿದ್ದಂತೆ ನಾನು ವಾಹನವನ್ನು ನಿಲ್ಲಿಸಿದೆ. ಆ ಚಿರತೆಯನ್ನು ನೋಡಿ ಎಲ್ಲರು ಒಂದು ಕ್ಷಣ ಭಯಭೀತರಾಗಿದ್ದರು. ಆದರೆ ಈ ಭಯದ ನಡುವೆಯೂ ನಮಗೆ ಥ್ರಿಲ್ಲಿಂಗ್ ಹಾಗೂ ಅಡ್ವೆಂಚರ್ ದೃಶ್ಯ ನೋಡಲು ಸಿಗುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ನಾವು ವಾಹನ ನಿಲ್ಲಿಸಿದ್ದಾಗ ಅಲ್ಲಿ ನಾಯಿ ಇತ್ತು. ಚಿರತೆ ನೋಡಿ ನಾವು ಏನೂ ಶಬ್ಧ ಮಾಡಲಿಲ್ಲ. ಹಾಗಾಗಿ ನಾಯಿಗೆ ಅಲ್ಲಿ ಚಿರತೆ ಇದ್ದ ವಿಷಯ ಗೊತ್ತಾಗಲಿಲ್ಲ ಎಂದು ಟೂರಿಸ್ಟ್ ವಾಹನ ಚಾಲಕ ವೇದ್ ಪ್ರಕಾಶ್ ತಿಳಿಸಿದರು.

    ನಮ್ಮ ವಾಹನದ 10 ಅಡಿ ದೂರದ ಪೊದೆಯಲ್ಲಿ ಚಿರತೆ ಅಡಗಿತ್ತು. ಈ ವೇಳೆ ನಮ್ಮ ವಾಹನದ ಮುಂದೆಯೇ ನಾಯಿ ಮಲಗಿತ್ತು. ಆ ಚಿರತೆ ನಾಯಿಯ ಮೇಲೆ ಎರಗಿತ್ತು. ಆ ಚಿರತೆಯನ್ನು ನೋಡಿ ನಾಯಿ ಕೂಡ ಒಂದು ಕ್ಷಣ ಹೆದರಿತ್ತು. ಆದರೆ ಅದು ಚಿರತೆಯನ್ನು ನೋಡಿ ಜೋರಾಗಿ ಬೊಗಳಲು ಶುರು ಮಾಡಿತ್ತು. ನಾಯಿಯನ್ನು ನೋಡುತ್ತಾ ಚಿರತೆ ಕೆಲ ಹೊತ್ತು ಅಲ್ಲಿಯೇ ನಿಂತಿತ್ತು. ಆದರೆ ನಾಯಿ ಬೊಗಳುವುದು ನಿಲ್ಲಿಸದಿದ್ದಾಗ ಚಿರತೆ ಮತ್ತೆ ಪೊದೆಯೊಳಗೆ ಹೋಯಿತು ಎಂದರು ವೇದ್ ಪ್ರಕಾಶ್ ಹೇಳಿದರು.

    ನಾಯಿ ಆ ಚಿರತೆಯನ್ನು ಓಡಿಸಿದ್ದು ನೋಡಿ ಪ್ರವಾಸಿಗರು ಹಾಗೂ ಚಾಲಕ ಒಂದು ಕ್ಷಣ ದಂಗಾದರು. ಅಲ್ಲದೇ ಆ ನಾಯಿಯನ್ನು ಅಲ್ಲಿಯೇ ಬಿಟ್ಟರೆ ಅಪಾಯ ಎಂದು ತಮ್ಮ ಜೊತೆ ಅರಣ್ಯದಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಆ ನಾಯಿ ಕಾಡಿನಲ್ಲಿರುವ ಕಾಳಿ ಮಂದಿರದಲ್ಲಿ ವಾಸವಿರುತ್ತಿತ್ತು ಎಂದು ಹೇಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಿರುಮಲದಲ್ಲಿ ಈಗ ಕಲ್ಲಂಗಡಿ ಹಣ್ಣು ನಿಷೇಧ

    ತಿರುಮಲದಲ್ಲಿ ಈಗ ಕಲ್ಲಂಗಡಿ ಹಣ್ಣು ನಿಷೇಧ

    ತಿರುಮಲ: ಬೇಸಿಗೆಯಲ್ಲಿ ಹೆಚ್ಚು ಬೇಡಿಕೆ ಇರುವ ಕಲ್ಲಂಗಡಿ ಹಣ್ಣಿನ ಮಾರಾಟವನ್ನು ತಿರುಮಲದಲ್ಲಿ ನಿಷೇಧಿಸಲಾಗಿದೆ.

    ತಿರುಮಲ ಬೆಟ್ಟದ ತಪ್ಪಲಿನಲ್ಲಿರುವ ಅಲಿಪಿರಿ ಚೆಕ್‍ಪೋಸ್ಟ್ ನಲ್ಲಿ ಭದ್ರತಾ ಸಿಬ್ಬಂದಿ ಭಕ್ತಾದಿಗಳ ಬ್ಯಾಗ್‍ಗಳನ್ನ ಪರಿಶೀಲಿಸುತ್ತಿದ್ದು ಕಲ್ಲಂಗಡಿ ಹಣ್ಣುಗಳನ್ನ ಹೊತ್ತೊಯ್ಯದಂತೆ ನಿಗಾ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಅಂಗಡಿಗಳಲ್ಲೂ ಕಲ್ಲಂಗಡಿ ಹಣ್ಣನ್ನು ಮಾರಾಟ ಮಾಡುತ್ತಿಲ್ಲ ಎಂದು ವರದಿಯಾಗಿದೆ.

    ರಾಯಲ್‍ಸೀಮಾದಲ್ಲಿ ಪ್ರಸ್ತುತ 45 ಡಿಗ್ರಿ ಉಷ್ಣಾಂಶವಿದ್ದು ಭಕ್ತರು ಎಳನೀರು ಹಾಗೂ ಕಲ್ಲಂಗಡಿ ಹಣ್ಣು ತಿನ್ನಲು ಬಯಸುತ್ತಾರೆ. ಆದ್ರೆ ಅಧಿಕಾರಿಗಳು ಇದ್ದಕ್ಕಿದ್ದಂತೆ ಕಲ್ಲಂಗಡಿ ಹಣ್ಣನ್ನು ನಿಷೇಧಿಸಿರುವುದು ಭಕ್ತರ ಆಶ್ಚರ್ಯಕ್ಕೆ ಕಾರಣವಾಗಿದೆ.

    ಕಲ್ಲಂಗಡಿ ನಿಷೇಧಕ್ಕೆ ಕಾರಣವೇನು?: ಬಾಲಾಜಿಯ ಸನ್ನಿಧಾನದಲ್ಲಿ ಚಿರತೆಗಳ ಭಯದಿಂದ ಕಲ್ಲಂಗಡಿ ಹಣ್ಣನ್ನು ನಿಷೇಧಿಸಲಾಗಿದೆ. ಕಲ್ಲಂಗಡಿ ಹಣ್ಣಿಗೂ ಚಿರತೆಗಳು ಬರೋದಕ್ಕೂ ಏನು ಸಂಬಂಧ ಅಂತ ಕನ್‍ಫ್ಯೂಸ್ ಆಗ್ಬೇಡಿ. ಭಕ್ತಾದಿಗಳು ಕಲ್ಲಂಗಡಿ ಹಣ್ಣನ್ನು ತಿಂದ ನಂತರ ಅದರ ಹೊರಭಾಗ ಅಥವಾ ಸಿಪ್ಪೆಯನ್ನು ತಿರುಮಲದ ಕಸದ ತೊಟ್ಟಿಗಳಲ್ಲಿ ಹಾಕ್ತಾರೆ. ಇದನ್ನ ತಿನ್ನಲು ಜಿಂಕೆಗಳು ಬರುತ್ತವೆ. ಜಿಂಕೆಗಳು ಬಂದ ಮೇಲೆ ಚಿರತೆಗಳು ಕೂಡ ತಿರುಮಲಕ್ಕೆ ಲಗ್ಗೆ ಇಡುತ್ತವೆ. ಆದ್ದರಿಂದ ಕಲ್ಲಂಗಡಿ ಹಣ್ಣನ್ನು ನಿಷೇಧಿಸಿದ್ರೆ ಚಿರತೆಗಳು ಬರೋದನ್ನ ತಡೆಯಬಹುದು ಎಂದು ದೇವಸ್ಥಾನದ ಸಿಬ್ಬಂದಿ ನಿರ್ಧರಿಸಿದ್ದಾರೆ ಎಂದು ಇಲ್ಲಿನ ವೈದ್ಯಕೀಯ ಅಧಿಕಾರಿ ಡಾ. ಸರ್ಮಿಷ್ಟ ಹೇಳಿದ್ದಾರೆ.

    ತಿರುಮಲ ಬೆಟ್ಟದಲ್ಲಿ ಸಂಗ್ರಹವಾಗೋ ಕಸವನ್ನ ಬಾಲಾಜಿ ಕಾಲೋನಿಯಲ್ಲಿ ವಿಲೇವಾರಿ ಮಾಡಲಾಗುತ್ತಿದ್ದು, ಅಲ್ಲಿ ಈ ಹಿಂದೆ ಚಿರತೆಗಳು ಕಾಣಿಸಿಕೊಂಡಿದ್ದವು. ಕಸದಲ್ಲಿ ಆಹಾರ ಹುಡುಕಿ ಬರೋ ಕಾಡು ಹಂದಿ ಹಾಗೂ ಜಿಂಕೆಗಳ ಬೇಟೆಗೆಂದೇ ಚಿರತೆಗಳು ಕಾಯುತ್ತಿವೆ ಎಂದು ಅಧಿಕಾರಿಗಳು ವಾದಿಸಿದ್ದಾರೆ.

    ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಬದಲಾಗಿ ಬೇರೆ ಯಾವ ಹಣ್ಣು ತಿಂದರೂ ಬಿಸಿಲಿನ ಧಗೆ ನಿವಾರಣೆಗೆ ಸರಿಹೋಗುವುದಿಲ್ಲ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ವ್ಯಾಪಾರ ಕುಸಿದಿರುವುದಕ್ಕೆ ಹಣ್ಣಿನ ವ್ಯಾಪಾರಿಗಳು ಕೂಡ ಅಸಮಾಧಾನಗೊಂಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.