Tag: League baseball Games

  • ಕೊರೊನಾ ಉಲ್ಬಣದ ಮಧ್ಯೆ ಕ್ರೀಡಾಕೂಟ ಆರಂಭಿಸುವ ಇಚ್ಛೆ ಬಿಚ್ಚಿಟ್ಟ ಟ್ರಂಪ್

    ಕೊರೊನಾ ಉಲ್ಬಣದ ಮಧ್ಯೆ ಕ್ರೀಡಾಕೂಟ ಆರಂಭಿಸುವ ಇಚ್ಛೆ ಬಿಚ್ಚಿಟ್ಟ ಟ್ರಂಪ್

    ವಾಷಿಂಗ್ಟನ್: ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ವಿಶ್ವಾದ್ಯಂತ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಗಿದೆ ಅಥವಾ ಮುಂದೂಡಲಾಗಿದೆ. ಇಂತಹ ಪತಿಸ್ಥಿತಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕ್ರೀಡಾಕೂಟ ಆರಂಭಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

    ಟ್ರಂಪ್ ಮಂಗಳವಾರ ಮಾತನಾಡಿ, ನಾವು ನಮ್ಮ ಕ್ರೀಡೆಗಳನ್ನು ಪುನಾರಂಭಿಸಬೇಕಿದೆ. ನಾನು 14 ವರ್ಷ ವಯಸ್ಸಿ ಆಟಗಾರರ ಬೇಸ್‍ಬಾಲ್ ಆಟಗಳನ್ನು ನೋಡುವುದರಿಂದ ಬೇಸತ್ತಿದ್ದೇನೆ ಎಂದು ಹೇಳಿದ್ದಾರೆ.

    ಉತಾಹ್ ಜಾಝ್ ಸೆಂಟರ್‍ನ ರೂಡಿ ಗೊಬರ್ಟ್ ಅವರಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಅಂದ್ರೆ ಮಾರ್ಚ್ 11ರಂದು ಎನ್‍ಬಿಎ (ನ್ಯಾಷನಲ್ ಬಾಸ್ಕೆಟ್‍ಬಾಲ್ ಅಸೋಸಿಯೇಷನ್) ಸ್ಥಗಿತಗೊಂಡಿತು. ಅಂದಿನಿಂದ ಯುಎಸ್‍ಎ, ಎನ್‍ಬಿಎ, ನ್ಯಾಷನಲ್ ಹಾಕಿ ಲೀಗ್, ಫುಟ್ಬಾಲ್ ಲೀಗ್ ಮತ್ತು ಬೇಸ್ ಬಾಲ್ ಲೀಗ್ ಸೇರಿದಂತೆ ಎಲ್ಲಾ ಟೂರ್ನಿಗಳನ್ನು ಮುಂದೂಡಲಾಗಿದೆ. ಇತ್ತ ಜಪಾನ್‍ನಲ್ಲಿ ನಡೆಯಬೇಕಿದ್ದ ಟೋಕಿಯೊ ಒಲಿಂಪಿಕ್ಸ್ ಮತ್ತು ಭಾರತದಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ.

    ಫ್ಲೋರಿಡಾದಲ್ಲಿ ಬೇಸ್‍ಬಾಲ್ ಲೀಗ್‍ನಲ್ಲಿ 30 ತಂಡಗಳು ಆಡಲಿವೆ. ಈಗಾಗಲೇ ಪಂದ್ಯ ಆರಂಭವಾಗಿದ್ದರಿಂದ ಈ ಆವೃತ್ತಿಯಲ್ಲಿ ಉಳಿದ ಪಂದ್ಯಗಳನ್ನು ಖಾಲಿ ಕ್ರೀಡಾಂಗಣಗಳಲ್ಲಿ ನಡೆಸಲು ಆಯೋಜಕರು ಮುಂದಾಗಿದ್ದರು. ಈ ವಿಚಾರವಾಗಿ ಮಾತನಾಡಿದ್ದ ಮೇಜರ್ ಲೀಗ್ ಸಾಕರ್ (ಎಂಎಲ್‍ಬಿ) ಕಮಿಷನರ್ ರಾಬ್ ಮೆನ್‍ಫ್ರೆಡ್, ಇಂತಹ ಪರಿಸ್ಥಿತಿಯಲ್ಲಿ ನಮ್ಮಲ್ಲಿ ಯಾವುದೇ ಯೋಜನೆಗಳಿಲ್ಲ. ಸಾಕಷ್ಟು ಯೋಜನೆಗಳನ್ನು ಪರಿಗಣಿಸಲಾಗುತ್ತಿದೆ. ಇವುಗಳಲ್ಲಿ ಯಾವುದು ಫಲಿತಾಂಶವಾಗಿ ಬದಲಾಗುತ್ತದೆ ಎಂಬುದನ್ನು ತಿಳಿಯುತ್ತಿಲ್ಲ. ಜನರ ಜೀವನ ನಮಗೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದ್ದರು.

    ಅಮೆರಿಕಾದಲ್ಲಿ ಬುಧವಾರ ಬೆಳಗ್ಗೆಯವರೆಗೆ ಕೊರೊನಾ ವೈರಸ್‍ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 26 ಸಾವಿರಕ್ಕೂ ಅಧಿಕವಾಗಿದೆ. ಸೋಂಕಿತರ ಸಂಖ್ಯೆ 6.14 ಲಕ್ಷ ಮೀರಿದೆ. ವಿಶ್ವದಾದ್ಯಂತ 19,97, 906 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 1,26,604 ಮಂದಿ ಮೃತಪಟ್ಟಿದ್ದಾರೆ.