Tag: Leadership

  • ಶೀಘ್ರವೇ ಕಾಂಗ್ರೆಸ್‍ಗೆ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಬೇಕು: ಶಶಿ ತರೂರ್

    ಶೀಘ್ರವೇ ಕಾಂಗ್ರೆಸ್‍ಗೆ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಬೇಕು: ಶಶಿ ತರೂರ್

    ನವದೆಹಲಿ: ಈಗ ಮಧ್ಯಂತರ ಹಂತದಲ್ಲಿರುವ ಪಕ್ಷವನ್ನು ಮುನ್ನಡೆಸಲು ಶೀಘ್ರ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಲೋಕಸಭಾ ಸಂಸದ ಶಶಿ ತರೂರ್ ಹೇಳಿದ್ದಾರೆ.

    ಮೂವಾಟ್ಟುಪುಳಾ ಶಾಸಕ ಮ್ಯಾಥ್ಯೂ ಕುಜಲ್ನಾಡನ್ ಕಚೇರಿ ಉದ್ಘಾಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, ಸೋನಿಯಾ ಗಾಂಧಿ ಅವರು ಹಲವು ವರ್ಷಗಳಿಂದ ತಮ್ಮ ಕರ್ತವ್ಯದಿಂದ ಬಿಡುಗಡೆ ಹೊಂದಲು ಪ್ರಯತ್ನಿಸುತ್ತಿದ್ದಾರೆ. ರಾಹುಲ್ ಗಾಂಧಿ ಅಧಿಕಾರ ವಹಿಸಿಕೊಳ್ಳಲು ಬಯಸಿದರೆ, ಅದು ಶೀಘ್ರವಾಗಿ ಆಗಬೇಕು. ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಬೇಕಾದರೆ ಈ ಕೆಲಸಗಳು ಬೇಗನೆ ಆಗಬೇಕು. ಪಕ್ಷಕ್ಕೆ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಎಲ್ಲಾ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಎಂದು ಶಶಿ ತರೂರ್ ತಿಳಿಸಿದ್ದಾರೆ. ಇದನ್ನೂ ಓದಿ: ತಂಗಿಯನ್ನು ಗಂಡನ ಮನೆ ಸೇರಿಸೋ ಮುನ್ನವೇ ಮಸಣ ಸೇರಿತು ಕುಟುಂಬ!

    ನಾವೆಲ್ಲರೂ ಸೋನಿಯಾ ಗಾಂಧಿಯವರ ನಾಯಕತ್ವವನ್ನು ಇಷ್ಟಪಟ್ಟೆವು. ಆದರೆ ನಾವು ಈಗ ಮಧ್ಯಂತರ ಹಂತದಲ್ಲಿದ್ದೇವೆ. ಕಳೆದ ಎರಡು ವರ್ಷಗಳಿಂದ ನಾವು ಖಾಯಂ ಅಧ್ಯಕ್ಷರನ್ನು ಹೊಂದಿಲ್ಲ. ಅದನ್ನು ಸರಿಪಡಿಸಬೇಕು. ಕಾಂಗ್ರೆಸ್ ಸಂಘಟನೆಯಲ್ಲಿ ನಾವು ಶಕ್ತಿಯನ್ನು ತುಂಬಬೇಕು. ನಾವೆಲ್ಲರೂ ಪಕ್ಷಕ್ಕೆ ಖಾಯಂ ಅಧ್ಯಕ್ಷರನ್ನು ಬಯಸಿದ್ದೇವೆ, ಎಂದು ಹೇಳಿದ್ದಾರೆ.

  • ನಾಯಕತ್ವ ಬದಲಾವಣೆ, ನಾನು ವ್ಯಕ್ತಿ ಪೂಜೆ ಮಾಡುವವನಲ್ಲ: ಅಪ್ಪಚ್ಚು ರಂಜನ್

    ನಾಯಕತ್ವ ಬದಲಾವಣೆ, ನಾನು ವ್ಯಕ್ತಿ ಪೂಜೆ ಮಾಡುವವನಲ್ಲ: ಅಪ್ಪಚ್ಚು ರಂಜನ್

    – ಶಸಿಕಲಾ ಜೊಲ್ಲೆ ಹೇಳಿದ್ದೇನು..?

    ಮಡಿಕೇರಿ: ಸಿಎಂ ಬದಲಾವಣೆ ವಿಚಾರ ಇನ್ನೂ ಕೂಡ ತಣ್ಣಗೆ ಆಗಿಲ್ಲ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದು ಬಿಜೆಪಿಯ ಭಿನ್ನಭಿಪ್ರಾಯವನ್ನು ಸರಿದೂಗಿಸಲು ಪ್ರಯತ್ನ ಪಡುತ್ತಿದ್ದರು ಕೂಡ ಅತೃಪ್ತಿಯ ಬೆಂಕಿ ಹೊಗೆಯಾಡುತ್ತಲೇ ಇದೆ. ಈ ನಡುವೆ ನಾನು ವ್ಯಕ್ತಿ ಪೂಜೆ ಮಾಡುವವನಲ್ಲ ಎನ್ನುವ ಮೂಲಕ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಸಿಎಂ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಆಗಬೇಕು ಎನ್ನೋ ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ.

    ಮಡಿಕೇರಿಯಲ್ಲಿ ಮಾತನಾಡಿದ ಅಪ್ಪಚ್ಚು ರಂಜನ್, ನಾನು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ನಾನು ಪಕ್ಷದ ಪರವಾಗಿದ್ದೇನೆ, ಪಕ್ಷದ ವಿಚಾರವನ್ನು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಬಳಿ ಮಾತನಾಡಿದ್ದೇನೆ. ಪಕ್ಷ ಎಂದ ಮೇಲೆ ಜಗಳಗಳು ಇದ್ದದ್ದೇ. ಅದನ್ನು ಪಕ್ಷದ ಒಳಗೆ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಬಹಿರಂಗ ಚರ್ಚೆ ಮಾಡೋದಿಲ್ಲ ಎಂದರು.

    ಶಾಸಕ ಹೆಚ್ ವಿಶ್ವನಾಥ್ ಅವರು ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಹೇಳಿದ ವಿಷಯಕ್ಕಾಗಲಿ, ಅವರ ವಿರುದ್ಧ ರೇಣುಕಾಚಾರ್ಯ ಅವರು ಆಕ್ರೋಶ ವ್ಯಕ್ತಪಡಿಸಿದ ವಿಷಯಕ್ಕಾಗಲಿ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಮತ್ತು ಸಿಎಂ ಬದಲಾವಣೆ ವಿಚಾರದಲ್ಲಿ ಹೊತ್ತಿಕೊಂಡಿರುವ ಬೆಂಕಿ ಇನ್ನೂ ಬೂದಿಮುಚ್ಚಿದ ಕೆಂಡದಂತೆ ಇದೆ. ಇದನ್ನೂ ಓದಿ: ರಾಜ್ಯ ಸರ್ಕಾರ ವಜಾಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು – ಸಿದ್ದರಾಮಯ್ಯ

    ಹೈಕಮಾಂಡ್ ಸಮರ್ಥವಾಗಿದ್ದು ಎಲ್ಲವನ್ನೂ ನಿಭಾಯಿಸುತ್ತದೆ:
    ರಾಜ್ಯ ನಾಯಕತ್ವ ಬದಲಾವಣೆ ವಿಚಾರವಾಗಿ ಮಡಿಕೇರಿಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಒಂದು ಮನೆ ಎಂದ ಮೇಲೆ ವೈಮನಸ್ಸು ಇದ್ದೇ ಇರುತ್ತದೆ. ಅದನ್ನು ಮನೆ ಒಳಗೆ ಬಗೆಹರಿಸಿಕೊಳ್ಳುತ್ತೇವೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಹೈಕಮಾಂಡ್ ಸಮರ್ಥವಾಗಿದ್ದು ಎಲ್ಲವನ್ನೂ ನಿಭಾಯಿಸುತ್ತದೆ ಎಂದರು.

    ರಾಜ್ಯಕ್ಕೆ ಬಂದಿರುವ ಅರುಣ್ ಸಿಂಗ್ ಅವರೊಂದಿಗೆ ಪ್ರತ್ಯೇಕ ಸಭೆ ವಿಚಾರ ಹಿನ್ನೆಲೆಯಲ್ಲಿ ನಿನ್ನೆ ನನ್ನ ಇಲಾಖೆಯ ಕಾರ್ಯವೈಖರಿ ಅಭಿವೃದ್ಧಿ ಕುರಿತು ವರದಿ ನೀಡಿದ್ದೇನೆ. ಬೇರೆ ರಾಜಕೀಯವಾಗಿ ನಾನು ಯಾವುದೇ ವರದಿ ನೀಡಿಲ್ಲ. ಹೆಚ್ ವಿಶ್ವನಾಥ್ ಅವರು ಬಹಿರಂಗವಾಗಿ ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ನಾನು ವಿಶ್ವನಾಥ್ ವಿರುದ್ಧ ಮಾತನಾಡುವಷ್ಟು ದೊಡ್ಡವಳಲ್ಲ ಹೈಕಮಾಂಡ್ ಎಲ್ಲಾವವನ್ನು ನಿರ್ಧಾರ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

  • ಶಮಂತ್‌ಗೆ ನಾಯಕತ್ವದ ಪಾಠ ಹೇಳಿಕೊಟ್ಟ ಸುದೀಪ್‌

    ಶಮಂತ್‌ಗೆ ನಾಯಕತ್ವದ ಪಾಠ ಹೇಳಿಕೊಟ್ಟ ಸುದೀಪ್‌

    ಬೆಂಗಳೂರು: ಬಿಗ್‌ಬಾಸ್‌ ವಾರದ ಕಥೆಯಲ್ಲಿ ಸುದೀಪ್‌ ನಾಯಕ ಶಮಂತ್‌ ಗೌಡ(ಬ್ರೋ ಗೌಡ) ಅವರಿಗೆ ನಾಯಕತ್ವದ ಪಾಠ ಹೇಳಿಕೊಟ್ಟಿದ್ದಾರೆ.

    ಮೊದಲ ವಾರದಲ್ಲೇ ಚಂದ್ರಕಲಾ ಮೋಹನ್, ನಿರ್ಮಲ ಚೆನ್ನಪ್ಪ ಅಡುಗೆ ಮನೆ ವಿಚಾರವಾಗಿ ಕಿತ್ತಾಡಿಕೊಂಡಿದ್ದರು. ಚಂದ್ರಕಲಾ ಮೋಹನ್‌, ನಿರ್ಮಲ ಮತ್ತು ನಿಧಿ ಸುಬ್ಬಯ್ಯ ಅವರಿಗೆ ಅಡುಗೆ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ನಿರ್ಮಲ ಅಡುಗೆ ಮನೆ ಕೆಲಸದಲ್ಲಿ ತೊಡಗಿಕೊಳ್ಳದ ಕಾರಣ ಚಂದ್ರಕಲಾ ಅವರಿಗೆ ಸಿಟ್ಟು ಬಂದಿತ್ತು. ಈ ಕಾರಣಕ್ಕೆ ಇಬ್ಬರೂ ಎಲ್ಲರ ಮುಂದೆಯೇ ಜಗಳವಾಡಿದ್ದರು.

    ವಾರದ ಕಥೆಯಲ್ಲಿ ಸುದೀಪ್ ಈ ವಿಚಾರವನ್ನು ಪ್ರಸ್ತಾಪ ಮಾಡಿದರು. ಈ ಸಂದರ್ಭದಲ್ಲಿ ನಾಯಕ ಶಮಂತ್ ಗೌಡರನ್ನು ಈ ವಿಚಾರದ ಬಗ್ಗೆ ಕೇಳಿದಾಗ, “ನನಗೆ ಅಡುಗೆ ಮನೆಯಲ್ಲಿ ಕೆಲಸ ಇಲ್ಲ. ಚಂದ್ರಕಲಾ ಅವರೇ ಮಾಡುತ್ತಿದ್ದಾರೆ ನಾನು ಶೌಚಾಲಯ ಕ್ಲೀನ್ ಮಾಡುತ್ತೇನೆ ಎಂದು ನಿರ್ಮಲ ಹೇಳಿದ್ದರು. ಅದಕ್ಕೆ ನಾನು ಮೊದಲು ಅಡುಗೆ ಜವಾಬ್ದಾರಿಯನ್ನು ನೋಡಿಕೊಳ್ಳಿ. ನಂತರ ಫ್ರೀ ಆದರೆ ಶೌಚಾಲಯ ಇತ್ಯಾದಿ ಕೆಲಸ ಮಾಡಿ” ಎಂದು ಹೇಳಿದ್ದೆ ಎಂದರು.

    ಇದಕ್ಕೆ ಸುದೀಪ್‌ ಯಾರಿಗೆ ಯಾವ ಟಾಸ್ಕ್‌ ಕೊಡಲಾಗಿದೆಯೋ ಅವರು ಅದನ್ನೇ ಮಾಡಬೇಕು. ಬೇರೆಯವರು ಬೇರೆ ಕೆಲಸ ಮಾಡುತ್ತಾರೆ.  ನಾಯಕನಾದವರು ಈ ವಿಚಾರದಲ್ಲಿ ಸ್ಪಷ್ಟತೆಯನ್ನು ಹೊಂದಿರಬೇಕು. ಇನ್ನು ಮುಂದೆ ಈ ರೀತಿ ತಪ್ಪುಗಳು ಮನೆಯಲ್ಲಿ  ನಡೆಯಬಾರದು ಎಂದು  ನಾಯಕತ್ವದ ಪಾಠವನ್ನು ಹೇಳಿಕೊಟ್ಟರು.

    ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಕ್ಯಾಪ್ಟನ್ ಆಗಿದ್ದ ಶಮಂತ್ ಎರಡನೇ ವಾರವೂ ನಾಯಕನಾಗಿ ಮುಂದುವರಿದಿದ್ದಾರೆ. ಶಮಂತ್ ಅವರನ್ನು ಎರಡನೇ ವಾರವೂ ಸಹ ಕ್ಯಾಪ್ಟನ್ ಆಗಿ ಮುಂದುವರಿಸಲು ಮನೆಯವರು ತೀರ್ಮಾನ ತೆಗೆದುಕೊಂಡಿದ್ದಾರೆ.

  • ಯಡಿಯೂರಪ್ಪ ವಿಚಾರದಲ್ಲಿ ಏಕೆ ನಿಯಮ ಸಡಿಲಿಸಿದ್ದಾರೋ ಗೊತ್ತಿಲ್ಲ: ಎಚ್‍ಡಿಡಿ

    ಯಡಿಯೂರಪ್ಪ ವಿಚಾರದಲ್ಲಿ ಏಕೆ ನಿಯಮ ಸಡಿಲಿಸಿದ್ದಾರೋ ಗೊತ್ತಿಲ್ಲ: ಎಚ್‍ಡಿಡಿ

    ನವದೆಹಲಿ: ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿ ಬರುತ್ತಿದೆ. ಶಾಸಕರು ಸಚಿವರೇ ಬಿಎಸ್‍ವೈ ವಿರುದ್ಧ ಹೈಕಮಾಂಡ್‍ಗೆ ದೂರು ನೀಡಿದ್ದು ಬಿ.ವೈ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿಎಂ ಬಿಎಸ್‍ವೈ ದೆಹಲಿ ಪ್ರವಾಸ ವೇಳೆ ಈ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದ್ದು, ವಿರೋಧದ ನಡುವೆಯೇ ಬಿಎಸ್‍ವೈ ಮತ್ತಷ್ಟು ದಿನಗಳ ಕಾಲ ಮುಂದುವರಿಯಲು ಹೈಕಮಾಂಡ್  ಸೂಚನೆ ನೀಡಿದೆ ಎನ್ನಲಾಗಿದೆ.

    ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮೊದಲ ಬಾರಿಗೆ ಧ್ವನಿಗೂಡಿಸಿದ್ದು ಬಿಎಸ್‍ವೈ ವಿರುದ್ಧ ಪರೋಕ್ಷವಾಗಿ ನಾಯಕತ್ವ ಪ್ರಶ್ನಿಸಿದ್ದಾರೆ.

    ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಬಿಜೆಪಿಯಲ್ಲಿ 75 ವರ್ಷ ಆದವರಿಗೆ ಅಧಿಕಾರ ಇಲ್ಲ ಎಂಬ ನಿಯಮವಿದೆ. ಇದೇ ಕಾರಣಕ್ಕೆ 8 ಬಾರಿ ಗೆದ್ದಿದ್ದ ಸುಮಿತ್ರಾ ಮಹಾಜನ್ ಅವರಿಗೆ ಟಿಕೆಟ್ ಕೊಟ್ಟಿರಲಿಲ್ಲ ಆದರೆ ಯಡಿಯೂರಪ್ಪ ವಿಚಾರದಲ್ಲಿ ಏಕೆ ನಿಯಮ ಸಡಿಲಿಸಿದ್ದಾರೋ ಗೊತ್ತಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ದನಿಗೂಡಿಸಿದ್ದಾರೆ.

    ವಯಸ್ಸಿನ ಹಿನ್ನಲೆ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದೆ. ಆದರೆ ಒತ್ತಡದ ಮೇಲೆ ಸ್ಪರ್ಧಿಸಿದ್ದೆ. ಇದಾದ ಬಳಿಕ ಸೋನಿಯಾ ಗಾಂಧಿ ರಾಜ್ಯಸಭೆಗೆ ಬರುವಂತೆ ಒತ್ತಾಯಿಸಿದ್ದರು. ರಾಜ್ಯದ 3 ಪಕ್ಷಗಳು ಅವಿರೋಧವಾಗಿ ಒಪ್ಪಿದ್ದರಿಂದ ರಾಜ್ಯಸಭೆಗೆ ಬಂದಿದ್ದೇನೆ. ದೇವರ ಆಟ ಏನೇನಿದೆಯೋ ಗೊತ್ತಿಲ್ಲ ಎಂದರು.

  • ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ – ಆರ್‌ಸಿಬಿ ಚೇರ್‌ಮ್ಯಾನ್ ಹೇಳಿದ್ದೇನು?

    ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ – ಆರ್‌ಸಿಬಿ ಚೇರ್‌ಮ್ಯಾನ್ ಹೇಳಿದ್ದೇನು?

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಈಗಾಗಲೇ ಐಪಿಎಲ್-2020ಗಾಗಿ ಯುಎಇಗೆ ಪ್ರಯಾಣ ಬೆಳೆಸಿದೆ. ಐಪಿಎಲ್‍ಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

    ಐಪಿಎಲ್‍ನಲ್ಲಿ ಆರ್‌ಸಿಬಿ ಬಹಳ ಜನಪ್ರಿಯವಾದ ತಂಡ. ಆದರೆ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಭಾರತ ತಂಡವನ್ನು ಮುನ್ನಡೆಸುವ ನಾಯಕ ವಿರಾಟ್ ಕೊಹ್ಲಿಯವರೇ ನಾಯಕನಾದರೂ ತಂಡ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಹೀಗಾಗಿ ತಂಡದ ನಾಯಕತ್ವವನ್ನು ಬದಲಿಸಿ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ಎಂಬುದು ಕೆಲವರ ವಾದವಾಗಿದೆ.

    ಈ ಪ್ರಶ್ನೆಗೆ ಖಾಸಗಿ ವಾಹಿನಿಯೊಂದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರಿಸಿರುವ ಆರ್‌ಸಿಬಿ ತಂಡದ ಚೇರ್‌ಮ್ಯಾನ್ ಸಂಜೀವ್ ಚುರಿವಾಲಾ, ವಿರಾಟ್ ಭಾರತ ತಂಡದ ನಾಯಕ. ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಆಟಗಾರ. ಆಟ ಎಂದ ಮೇಲೆ ಸೋಲು ಗೆಲುವು ಸಾಮಾನ್ಯ. ಆದರೆ ವಿರಾಟ್ ಅವರು ಯಾವ ರೀತಿಯ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ ಎಂಬುದನ್ನು ನಾವು ಮರೆಯಬಾರದು. ಆರ್‌ಸಿಬಿ ತಂಡದ ಮಾಲೀಕನಾಗಿ ನಮಗೆ ಕೊಹ್ಲಿ ತಂಡದ ನಾಯಕನಾಗಿರುವುದು ಹೆಮ್ಮೆ ಎಂದು ಹೇಳಿದ್ದಾರೆ.

    ಈ ಬಾರಿಯ ಆರ್‌ಸಿಬಿ ತಂಡ ಬಹಳ ಬ್ಯಾಲೆನ್ಸ್ ಆಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ತಂಡ ಬಹಳ ಬಲಿಷ್ಠವಾಗಿದೆ. ಹಿಂದಿನ ಆವೃತ್ತಿಯಲ್ಲಿ ನಮ್ಮ ತಂಡಕ್ಕೆ ಇದ್ದ ವೈಫಲ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು, ಈ ಬಾರಿಯ ಹಾರಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿ ಮಾಡಿದ್ದೇವೆ. ಜೊತೆಗೆ ಸಿದ್ಧತೆಯನ್ನು ಕೂಡ ಮಾಡಿಕೊಂಡಿದ್ದೇವೆ. ಹೀಗಾಗಿ ಈ ಬಾರಿ ಕಪ್ ಗೆಲ್ಲುವ ವಿಶ್ವಾದಲ್ಲಿ ಇದ್ದೇವೆ ಎಂದು ಚುರಿವಾಲಾ ತಿಳಿಸಿದ್ದಾರೆ.

    ತಂಡದಲ್ಲಿ ಉತ್ತಮ ಆಟಗಾರರು ಇದ್ದರೂ ಆರ್‌ಸಿಬಿ ತಂಡ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ತಂಡದ ಆಟಗಾರರು ವೈಯಕ್ತಿಕವಾಗಿ ಉತ್ತಮವಾಗಿ ಆಡಿದರೂ ಒಂದು ತಂಡವಾಗಿ ಆಡುವಲ್ಲಿ ವಿಫಲರಾಗಿದ್ದಾರೆ. ಆರ್‌ಸಿಬಿ ಕಳೆದ ಮೂರು ಆವೃತ್ತಿಲ್ಲೂ ಅಂಕಪಟ್ಟಿಯಲ್ಲಿ, 8, 6 ಮತ್ತು 8ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಕಳೆದ ಮೂರು ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಫ್ಲೇಆಪ್ ಹಂತಕ್ಕೂ ಬಂದಿಲ್ಲ. ಇದು ಅಭಿಮಾನಿಗಳನ್ನು ನಿರಾಸೆಗೊಳಿಸಿದೆ.

    ಐಪಿಎಲ್‍ನಲ್ಲಿ ಬ್ಯಾಟ್ಸ್‍ಮ್ಯಾನ್ ಆಗಿ ಉತ್ತಮ ಸಾಧನೆ ಮಾಡಿರುವ ಕೊಹ್ಲಿ, ಐಪಿಎಲ್‍ನಲ್ಲಿ 37.84ರ ಸರಾಸರಿಯೊಂದಿಗೆ ಒಟ್ಟು 5,412 ರನ್ ಗಳಿಸಿದ್ದಾರೆ ಮತ್ತು 131.61 ಸ್ಟ್ರೈಕ್ ರೇಟ್ ಬ್ಯಾಟ್ ಬೀಸಿದ್ದಾರೆ. ಪ್ರಪಂಚದ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಕೊಹ್ಲಿ ಐದು ಶತಕ ಮತ್ತು ಮೂವತ್ತಾರು ಅರ್ಧಶತಕ ಗಳಿಸಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಇದುವರೆಗೆ ನಾಯಕನಾಗಿ ಅವರು ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ.

  • ಕೊರೊನಾ ನಿರ್ವಹಣೆ- ಮೋದಿಯನ್ನ ಹೊಗಳಿದ ಬಿಲ್ ಗೇಟ್ಸ್

    ಕೊರೊನಾ ನಿರ್ವಹಣೆ- ಮೋದಿಯನ್ನ ಹೊಗಳಿದ ಬಿಲ್ ಗೇಟ್ಸ್

    ನವದೆಹಲಿ: ವಿಶ್ವಾದ್ಯಂತ ಕೊರೊನಾ ವೈರಸ್‍ಗೆ ಭಾರೀ ಪ್ರಮಾಣದ ಸಾವು-ನೋವು ಸಂಭವಿಸಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ದೇಶವಾಗಿರುವ ಭಾರತದಲ್ಲಿ ಕೋವಿಡ್-19 ಹೆಚ್ಚಾಗಿ ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶ್ರಮಿಸಿದೆ. ಇದಕ್ಕೆ ಮೈಕ್ರೋಸಾಫ್ಟ್ ಸಹ ಸ್ಥಾಪಕ, ಜಗತ್ತಿನ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹೆಮ್ಮಾರಿ ಕೊರೊನಾ ವೈರಸ್‍ನಿಂದ ದೇಶದ ಜನರನ್ನು ಪಾರು ಮಾಡಲು ಪ್ರಧಾನಿ ಮೋದಿ ಇಡೀ ಭಾರತವನ್ನೇ ಲಾಕ್‍ಡೌನ್ ಮಾಡಿರುವುದು ಸ್ವಾಗತಾರ್ಹ. ಇದರಿಂದಾಗಿ ಭಾರತದಲ್ಲಿ ಸೋಂಕಿತರ ಪತ್ತೆ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬಿಲ್ ಗೇಟ್ಸ್ ಶ್ಲಾಘಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಿಲ್ ಗೇಟ್ಸ್, ”ಕೊರೊನಾ ಸೃಷ್ಟಿಸಿದ ಸಂಕಷ್ಟದ ವೇಳೆ ಭಾರತದಲ್ಲಿ ನಿಮ್ಮ ನಾಯಕತ್ವದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಸ್ವಾಗತಿಸುತ್ತೇವೆ. ದೇಶದಲ್ಲಿ ಕೊರೊನಾ ಹರಡಲು ಕಾರಣವಾದ ಹಾಟ್‍ಸ್ಪಾಟ್‍ಗಳನ್ನು ಗುರುತಿಸುವುದು, ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವುದು, ರೋಗಿಗಳೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳಿಗೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಕಡ್ಡಾಯ ಮಾಡಿರುವುದು ಕೊರೊನಾ ವೈರಸ್ ಕಡಿಮೆಯಾಗಲು ಕಾರಣವಾಗಿದೆ. ಇದು ದೇಶದ ಜನರ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಲಿದೆ” ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

    ಇಂತಹ ಪರಿಸ್ಥಿತಿಯಲ್ಲಿ ಡಿಜಿಟಲ್ ಮಾಧ್ಯಮಗಳನ್ನು ಬಳಸಿಕೊಂಡ ಬಗ್ಗೆಯೂ ಬಿಲ್ ಗೇಟ್ಸ್, ಅವರು ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ. ”ನೀವು ಕೊರೊನಾ ವಿರುದ್ಧದ ಹೋರಾಟದಲ್ಲಿ ಡಿಟಿಜಿಲ್ ಮೀಡಿಯಾಗೂ ಮೊದಲ ಆದ್ಯತೆ ನೀಡಿದ್ದೀರಿ. ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಆರೋಗ್ಯ ಸೇತು ಆ್ಯಪ್ ಸಿದ್ಧಪಡಿಸಿದ್ದೀರಿ. ನಿಮ್ಮ ಸರ್ಕಾರದ ನಿರ್ಧಾರದಿಂದ ತುಂಬಾ ಸಂತೋಷಗೊಂಡಿರುವೆ” ಎಂದು ಹೇಳಿದ್ದಾರೆ.

    ”ಎಲ್ಲಾ ಭಾರತೀಯರಿಗೆ ಸಾಕಷ್ಟು ಸಾಮಾಜಿಕ ರಕ್ಷಣೆಯನ್ನು ಖಾತ್ರಿಪಡಿಸಿದ್ದೀರಿ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಕ್ಕೆ ನನ್ನದೊಂದು ಸಲಾಮ್” ಎಂದಿದ್ದಾರೆ.

  • ಯಂಗಿಸ್ತಾನ್ ಸಂಪುಟ ರಚನೆಗೆ ಬಿಜೆಪಿ ಹೈಕಮಾಂಡ್ ಪ್ಲಾನ್ – ಯಾರಿಗೆ ಮಂತ್ರಿ ಸ್ಥಾನ?

    ಯಂಗಿಸ್ತಾನ್ ಸಂಪುಟ ರಚನೆಗೆ ಬಿಜೆಪಿ ಹೈಕಮಾಂಡ್ ಪ್ಲಾನ್ – ಯಾರಿಗೆ ಮಂತ್ರಿ ಸ್ಥಾನ?

    ಬೆಂಗಳೂರು: ರಾಜ್ಯ ಬಿಜೆಪಿಯ ಯುವ ಶಾಸಕರಲ್ಲಿ ನಾಯಕತ್ವ ಗುಣ ಬರಲು ಮತ್ತು ರಾಜ್ಯದಲ್ಲಿ ಬಿಜೆಪಿ ಬೇರು ಗಟ್ಟಿಗೊಳಿಸಲು ಹೈಕಮಾಂಡ್ ಈಗಿನಿಂದಲೇ ಪ್ಲಾನ್ ಮಾಡುತ್ತಿದೆ. ರಾಜ್ಯ ಸಚಿವ ಸಂಪುಟವನ್ನು ಯಂಗಿಸ್ತಾನ್ ಸಂಪುಟವಾಗಿಸಲು ಬಿಜೆಪಿ ಪ್ಲಾನ್ ಹಾಕಿಕೊಂಡಿದೆ. ಆದರೆ ಹೈಕಮಾಂಡ್ ಸದ್ಯದಲ್ಲೇ ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಈ ಪ್ಲಾನ್ ಜಾರಿ ಮಾಡುತ್ತಿಲ್ಲ. ಬದಲಾಗಿ ಮುಂಬರುವ ಸಂಪುಟ ಪುನಾರಚನೆಯಲ್ಲಿ ತನ್ನ ಪ್ಲಾನ್ ಅಳವಡಿಸಿಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗುತ್ತದೆ.

    ಸದ್ಯ ಮಿತ್ರಮಂಡಳಿಯ ಸದಸ್ಯರ ಋಣ ಸಂದಾಯಕ್ಕಾಗಿ ಈ ಸಲದ ವಿಸ್ತರಣೆಯನ್ನು ಮೀಸಲಿಡಲಾಗಿದೆ. ಹಾಗಾಗಿ ಈ ಸಂಪುಟ ವಿಸ್ತರಣೆ ಟಚ್ ಮಾಡಲು ಹೋಗಲ್ಲ ಬಿಜೆಪಿ ಹೈಕಮಾಂಡ್. ಮುಂದೆ ಒಂದು ವರ್ಷದೊಳಗೆ ಸಂಪುಟ ಪುನಾರಚನೆಯಾಗಲಿದ್ದು ಈ ಸಂದರ್ಭದಲ್ಲಿ ಎರಡು ವಿಚಾರದ ಮೇಲೆ ಹೈಕಮಾಂಡ್ ಫೋಕಸ್ ಮಾಡಿದೆ. ಮೊದಲನೇಯದು ಸಂಪುಟದಲ್ಲಿ ಕರಾವಳಿ ಶಾಸಕರ ಸೇರ್ಪಡೆ ಮಾಡಿಕೊಳ್ಳುವುದು. ಎರಡನೇಯ ಅಂಶ, ಹೊಸ ಮುಖಗಳ ಮೇಲೆ ವಿಶ್ವಾಸ ಇಟ್ಟು ಸಚಿವರನ್ನಾಗಿ ಮಾಡೋದು.

    ಕರಾವಳಿಯೇ ಯಾಕೆ?
    ಕರಾವಳಿ ಭಾಗದ ಶಾಸಕರು ಯಾವತ್ತೂ ಯಾವ ವಿಚಾರಕ್ಕೂ ಬೇಸರ ವ್ಯಕ್ತಪಡಿಸುವುದಿಲ್ಲ. ಪಕ್ಷ ಮತ್ತು ಸರ್ಕಾರದಲ್ಲಿ ಅವಕಾಶ ವಂಚಿತರಾದರೂ ಸಾಫ್ಟ್ ಆಗಿಯೇ ಇದ್ದು ನಿಷ್ಠೆ, ಶಿಸ್ತು ಪ್ರದರ್ಶಿಸುತ್ತಲೇ ಬಂದಿದ್ದಾರೆ. ಕರಾವಳಿ ಶಾಸಕರು ಅವಕಾಶ ವಂಚಿತರಾದಾಗ ವಿರೋಧ ವ್ಯಕ್ತಪಡಿಸಲ್ಲ ಅಂತ ಅವರನ್ನು ಕೈಬಿಡೋದು ಸರಿಯಲ್ಲ ಎನ್ನುವ ಅನುಕಂಪ ಬೆರೆತ ಆಲೋಚನೆ ಈಗ ಹೈಕಮಾಂಡ್ ಮನಸ್ಸಿನಲ್ಲಿ ಮೊಳೆತಿದೆ. ಹಾಗಾಗಿ ಕರಾವಳಿ ಭಾಗಕ್ಕೆ ಆದ್ಯತೆ ಕೊಡಲೇಬೇಕು ಎಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ. ಬಿಜೆಪಿ ಪಾಳಯದ ಮಾಹಿತಿಯನ್ವಯ ಮುಂದಿನ ಸಂಪುಟ ಪುನಾರಚನೆಯಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್, ಸುಳ್ಯದ ಶಾಸಕ ಎಸ್.ಅಂಗಾರ ಹಾಗೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಮಂತ್ರಿಗಿರಿ ಭಾಗ್ಯ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

    ಹೊಸ ಮುಖಗಳಿಗೆ ಜವಾಬ್ದಾರಿ:
    ಕಿರಿಯ ಮತ್ತು ಯುವ ಶಾಸಕರಿಗೆ ನಾಯಕತ್ವ ಹೊರೆಸಲು ಹೈಕಮಾಂಡ್ ಪ್ಲಾನ್ ಮಾಡಿಕೊಂಡಿದೆ. ಮುಂದಿನ ಸಂಪುಟ ಪುನಾರಚನೆಯಲ್ಲಿ ಪಕ್ಷದ ಯುವ ಶಾಸಕರಿಗೆ ಸಿಗಲಿದೆ ಸಚಿವ ಸ್ಥಾನ? ಭವಿಷ್ಯದ ಸಚಿವರು ಯಾರಾಗಬಹುದು ಅನ್ನೋ ಲೆಕ್ಕಾಚಾರ ಪಕ್ಷದಲ್ಲಿ ಜೋರಾಗಿ ನಡೆಯುತ್ತಿದೆ.

    ಯಾರಿಗೆ ಸಿಗಬಹುದು ಮಂತ್ರಿಗಿರಿ?
    1. ಸುನೀಲ್ ಕುಮಾರ್
    2. ದತ್ತಾತ್ರೇಯ ಪಾಟೀಲ್ ರೇವೂರ
    3. ರಾಜಕುಮಾರ್ ಪಾಟೀಲ್ ತೇಲ್ಕೂರ್
    4. ರಾಜುಗೌಡ
    5. ಪ್ರೀತಂ ಗೌಡ
    6. ಕುಡಚಿ ರಾಜೀವ್
    7. ಹರ್ಷವರ್ಧನ್
    8. ಅರವಿಂದ ಬೆಲ್ಲದ್

  • ಧೋನಿ ವೃತ್ತಿ ಜೀವನದ ವಿಶೇಷ ದಿನ ಸೆ.14- ನೆಟ್ಟಿಗರಿಂದ ಪ್ರಶಂಸೆ

    ಧೋನಿ ವೃತ್ತಿ ಜೀವನದ ವಿಶೇಷ ದಿನ ಸೆ.14- ನೆಟ್ಟಿಗರಿಂದ ಪ್ರಶಂಸೆ

    ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಸೆ.14 ವಿಶೇಷವಾದ ದಿನವಾಗಿದ್ದು, ಈ ಸಂದರ್ಭವನ್ನು ನೆಟ್ಟಿಗರು ನೆನಪಿಸಿಕೊಂಡು ತಮ್ಮ ನೆಚ್ಚಿನ ಆಟಗಾರನಿಗೆ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    12 ವರ್ಷಗಳ ಹಿಂದೆ 2007 ರಲ್ಲಿ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಏರ್ಪಡಿಸಿತ್ತು. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ತಂಡದ ನಾಯಕರಾಗಿ ಬಿಸಿಸಿಐ ಧೋನಿರನ್ನ ಆಯ್ಕೆ ಮಾಡಿತ್ತು. ಆ ಮೂಲಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡರು. ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯವನ್ನು ಸೆ.14 ರಂದು ಪಾಕಿಸ್ತಾವನ್ನು ಎದುರಿಸಿತ್ತು. ಪಂದ್ಯ ಟೈನಲ್ಲಿ ಅಂತ್ಯವಾದ ಪರಿಣಾಮ ಬೌಲ್ ಔಟ್ ಮೂಲಕ ಟೀಂ ಇಂಡಿಯಾ ಗೆಲುವು ಪಡೆದಿತ್ತು. ತಂಡದ ನಾಯಕರಾಗಿ ಧೋನಿ ಪಡೆದ ಮೊದಲ ಗೆಲುವು ಇದಾಗಿತ್ತು. ನಾಯಕತ್ವ ವಹಿಸಿಕೊಂಡ ಟೂರ್ನಿಯಲ್ಲೇ ಧೋನಿ ಬಳಗ ಕಪ್ ಗೆದ್ದು ಬೀಗಿತ್ತು. ಅಂದಹಾಗೇ ಟೂರ್ನಿಯಲ್ಲಿ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಸೆ.12 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಆಡಬೇಕಿತ್ತು. ಆದರೆ ಪಂದ್ಯ ಮಳೆಯಿಂದ ರದ್ದಾಗಿತ್ತು.

    https://www.youtube.com/watch?v=GY9fHrJf19I

    ನಾಯಕತ್ವ ವಹಿಸಿಕೊಂಡ ಮೊದಲ ಟೂರ್ನಿಯಲ್ಲೇ ಧೋನಿ ತಂಡ ಟ್ರೋಫಿ ಗೆದ್ದು ಬೀಗಿತ್ತು. ಈ ವಿಶೇಷ ದಿನವನ್ನು ನೆನಪಿಸಿಕೊಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಧೋನಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕ್ಯಾಪ್ಟನ್ ಧೋನಿಗೆ 12 ವರ್ಷ, ಟಿ20 ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಧೋನಿ ಶಕೆ ಆರಂಭವಾಗಿತ್ತು #12YearsOfCaptainDhoni ಎಂದು  ಟ್ವೀಟ್ ಮಾಡಿದ್ದಾರೆ.

    38 ವರ್ಷದ ಧೋನಿ ಟೀಂ ಇಂಡಿಯಾ ಪರ ಎಲ್ಲಾ ಐಸಿಸಿ ಏರ್ಪಡಿಸುವ ಎಲ್ಲಾ ಟೂರ್ನಿಗಳ ಕಪ್ ಗೆದ್ದ ನಾಯಕ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದು, ಟೀಂ ಇಂಡಿಯಾ ಕ್ರಿಕೆಟ್‍ನಲ್ಲಿ ಯಶಸ್ವಿಯಾಗಿ ನಾಯಕತ್ವ ನಡೆಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ. ಅಲ್ಲದೇ ಧೋನಿ ನಾಯತ್ವದಲ್ಲಿ ಟೀಂ ಇಂಡಿಯಾ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿತ್ತು. ಧೋನಿ ನಾಯಕತ್ವದಲ್ಲಿ ಆಡಿದ್ದ 60 ಟೆಸ್ಟ್ ಪಂದ್ಯಗಳಲ್ಲಿ 27 ಪಂದ್ಯಗಳಲ್ಲಿ ಗೆದ್ದು ದಾಖಲೆ ಬರೆದಿದ್ದರು. ಇತ್ತೀಚೆಗಷ್ಟೇ ಕೊಹ್ಲಿ ತಮ್ಮ ನಾಯಕತ್ವದಲ್ಲಿ 28 ಟೆಸ್ಟ್ ಗೆಲುವು ಪಡೆದು ಧೋನಿ ದಾಖಲೆಯನ್ನು ಮುರಿದಿದ್ದರು. 2014 ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಿಸಿದ್ದರು. 2017 ರಲ್ಲಿ ಸಿಮೀತ ಓವರ್ ಗಳ ಪಂದ್ಯಗಳ ನಾಯಕತ್ವವನ್ನು ತೊರೆದಿದ್ದರು.

  • ಕಾಂಗ್ರೆಸ್‍ಗಾಗಿ ಹಗಲು ರಾತ್ರಿ ಶ್ರಮಿಸಿದ ರಾಹುಲ್ ಭಯವಿಲ್ಲದ ನಾಯಕ: ಸೋನಿಯಾ ಗಾಂಧಿ

    ಕಾಂಗ್ರೆಸ್‍ಗಾಗಿ ಹಗಲು ರಾತ್ರಿ ಶ್ರಮಿಸಿದ ರಾಹುಲ್ ಭಯವಿಲ್ಲದ ನಾಯಕ: ಸೋನಿಯಾ ಗಾಂಧಿ

    ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷಕ್ಕಾಗಿ ಹಗಲು ರಾತ್ರಿ ಶ್ರಮಿಸದ್ದಾರೆ. ಈ ಮೂಲಕ ಭಯವಿಲ್ಲದ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ ಎಂದು ಕಾಂಗ್ರೆಸ್‍ನ ಸಂಸದೀಯ ನಾಯಕಿ ಸೋನಿಯಾ ಗಾಂಧಿ ಅವರು ಮೆಚ್ಚುಗೆ ವ್ಯಕ್ತಸಿಪಡಿದ್ದಾರೆ.

    ಕಾಂಗ್ರೆಸ್ ಸಂಸದೀಯ ನಾಯಕಿಯಾಗಿ ಆಯ್ಕೆಯಾದ ಸೋನಿಯ ಗಾಂಧಿ ಅವರು, ದೆಹಲಿಯಲ್ಲಿ ನಡೆದ ಪಕ್ಷದ ಸಂಸದರ ಸಭೆಯಲ್ಲಿ ಮಾತನಾಡಿ, ತಮ್ಮ ಮಗ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತೋರಿದ ಭಯವಿಲ್ಲದ ನಾಯಕತ್ವಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.

    ಇಂದು ನಡೆದ ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, “ಲೋಕಸಭಾ ಚುನಾವಣೆಯ ಸಮಯದಲ್ಲಿ ರಾಹುಲ್ ಗಾಂಧಿ ತೋರಿದ ಬಲಿಷ್ಠ ಮತ್ತು ಭಯವಿಲ್ಲದ ನಾಯಕತ್ವಕ್ಕಕೆ ಹೃದಯಪೂರ್ವಕ ಧನ್ಯವಾದಗಳು. ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರು ರಾತ್ರಿ ಹಗಲು ಎನ್ನದೇ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಮೋದಿ ಸರ್ಕಾರದ ವಿರುದ್ಧ ಭಯವಿಲ್ಲದ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿದ್ದಾರೆ.

    ರಾಹುಲ್ ಗಾಂಧಿ ಅವರು ಛತ್ತಿಸ್‍ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನಗೊಳಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷನಾಗಿ ಭಾರತದ ಎಲ್ಲಾ ಕಡೆಯಲ್ಲೂ ಪಕ್ಷದ ಕಾರ್ಯಕರ್ತರ ಮತ್ತು ಕೋಟಿ ಮತದಾರರ ಗೌರವ ಮತ್ತು ಪ್ರೀತಿಯನ್ನು ಗಳಿಸಿದ್ದಾರೆ ಎಂದು ಸಂತೋಷ ವ್ಯಕ್ತಪಡಿದರು.

    ರಾಹುಲ್ ಗಾಂಧಿ ಅವರು ರೈತರು, ಕಾರ್ಮಿಕರು, ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಹಾಗೂ ಯುವಜನತೆ ಮತ್ತು ಮಹಿಳೆಯರಿಗೆ ಆದ ಅನ್ಯಾಯಗಳ ವಿರುದ್ಧ ಹೋರಾಡಿ ಅವರಿಗೆ ಸಮಾಜದಲ್ಲಿ ನ್ಯಾಯ ಕೊಡಿಸಿದ್ದಾರೆ. ಅವರ ನಾಯಕತ್ವ ಅವರ ಪ್ರಾಮಾಣಿಕತೆ, ಶ್ರಮ ಎಲ್ಲಾವುದಕ್ಕೂ ನಾವು ಕೃತಜ್ಞತೆ ಹೇಳುತ್ತೇವೆ ಎಂದು ಹೇಳಿದ್ದಾರೆ.

    2014ರ ಲೋಕಸಭಾ ಚುನಾವಣೆಯಲ್ಲಿ 44 ಸ್ಥಾನಗಳನ್ನೂ ಗೆದ್ದಿದ್ದೇವು ಮತ್ತು 55 ರಾಜ್ಯಸಭಾ ಸ್ಥಾನಗಳನ್ನೂ ಪಡೆದುಕೊಂಡಿದ್ದವು. ಈ ಬಾರಿ ರಾಹುಲ್ ಅವರ ನಾಯಕತ್ವದಲ್ಲಿ ಸರ್ಕಾರದ ದುಷ್ಪರಿಣಾಮಗಳನ್ನು ಬಹಿರಂಗಪಡಿಸುವಲ್ಲಿ ಕಾಂಗ್ರೆಸ್ ಪಕ್ಷ ಧೈರ್ಯದಿಂದ ಹೋರಾಡಿದೆ. ಈ ಕಾರಣಕ್ಕಾಗಿ ನಾನು ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿದರು.