Tag: Leaders

  • ಮಕ್ಕಳ ಕಳ್ಳರೆಂದು ಕಾಂಗ್ರೆಸ್ ನಾಯಕರನ್ನು ಥಳಿಸಿದ ಗ್ರಾಮಸ್ಥರು

    ಮಕ್ಕಳ ಕಳ್ಳರೆಂದು ಕಾಂಗ್ರೆಸ್ ನಾಯಕರನ್ನು ಥಳಿಸಿದ ಗ್ರಾಮಸ್ಥರು

    ಭೋಪಾಲ್: ಮೂವರು ಕಾಂಗ್ರೆಸ್ ನಾಯಕರನ್ನು ಮಕ್ಕಳ ಅಪಹರಣಕಾರರು ಎಂದು ತಪ್ಪಾಗಿ ತಿಳಿದು ಗ್ರಾಮಸ್ಥರು ಅವರನ್ನು ಥಳಿಸಿರುವ ಘಟನೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಗುರುವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ನವಲ್ಸಿಂಹ್ ಗ್ರಾಮದಲ್ಲಿ ಮಕ್ಕಳನ್ನು ಅಪಹರಿಸುವ ಕಳ್ಳರ ಗ್ಯಾಂಗ್ ಓಡಾಡುತ್ತಿದೆ ಎಂಬ ವದಂತಿಗಳ ಮೇರೆಗೆ ಊರಿನ ಗ್ರಾಮಸ್ಥರು ರಸ್ತೆ ಮಧ್ಯ ಮರಗಳನ್ನು ಹಾಕಿ ಮಾರ್ಗ ಬಂದ್ ಮಾಡಿ ಕಾಯುತ್ತಾ ಕುಳಿತಿದ್ದಾರೆ.

    ಈ ಸಮಯದಲ್ಲಿ ಅದೇ ಮಾರ್ಗದಲ್ಲಿ ಮೂವರು ಸ್ಥಳೀಯ ಕಾಂಗ್ರೆಸ್ ನಾಯಕರಾದ ಧರ್ಮೇಂದ್ರ ಶುಕ್ಲಾ, ಧರ್ಮ ಸಿಂಗ್ ಲಂಜಿವಾರ್ ಮತ್ತು ಲಲಿತ್ ಬರಾಸ್ಕರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ರಾತ್ರಿಯಲ್ಲಿ ಮರಗಳು ಬಿದ್ದಿರುವುದನ್ನು ನೋಡಿದ್ದಾರೆ. ಈ ಕೆಲಸವನ್ನು ಯಾರೋ ಹೆದ್ದಾರಿ ದರೋಡೆಕೋರರು ಮಾಡಿ ದರೋಡೆ ಮಾಡಲು ಕಾಯುತ್ತಿದ್ದಾರೆಂದು ಭಾವಿಸಿದ ನಾಯಕರು ಕಾರನ್ನು ವೇಗವಾಗಿ ಹಿಂದಿರುಗಿಸಲು ನೋಡಿದ್ದಾರೆ.

    ಈ ವೇಳೆ ಅನುಮಾನಗೊಂಡ ಗ್ರಾಮಸ್ಥರು ಅವರನ್ನು ಬೆನ್ನಟ್ಟಿ ಹಿಡಿದು ಅವರನ್ನು ಸುತ್ತುವರೆದು ವಾಹನವನ್ನು ಜಖಂ ಮಾಡಿ. ಅವರನ್ನು ಹೊರಗೆ ಎಳೆದುಕೊಂಡು ಮೂವರನ್ನು ಥಳಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ರಾಮ್ ಸ್ನೇಹಿ ಮಿಶ್ರಾ, ಗ್ರಾಮಸ್ಥರು ಮಕ್ಕಳ ಅಪಹರಣಕಾರರೆಂದು ಶಂಕಿಸಿ, ನಾಯಕರ ವಾಹನವನ್ನು ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ವಾಹನಕ್ಕೆ ಹಾನಿಯಾಗಿದೆ ಮತ್ತು ಮೂವರು ಕಾಂಗ್ರೆಸ್ ಮುಖಂಡರ ಮೇಲೂ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಬೆತುಲ್ ಪೊಲೀಸ್ ಠಾಣೆಯಲ್ಲಿ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

    ಕಳೆದ ಕೆಲ ವಾರಗಳಿಂದ ಮಕ್ಕಳ ಕಳ್ಳರೆಂದ ಭಾವಿಸಿ ಶಂಕಿತ ವ್ಯಕ್ತಿಗಳನ್ನು ಗ್ರಾಮಸ್ಥರು ಥಳಿಸಿರುವ ಸುಮಾರು 12 ಪ್ರಕರಣಗಳು ಮಧ್ಯಪ್ರದೇಶದಲ್ಲಿ ವರದಿಯಾಗಿವೆ. ಕಾಂಗ್ರೆಸ್ ಮುಖಂಡರನ್ನು ಥಳಿಸಿದ ಇದೇ ಜಿಲ್ಲೆಯ ಬೆತುಲ್‍ನಿಂದ ಮೂರು ಪ್ರಕರಣಗಳು ವರದಿಯಾಗಿವೆ. ಇದನ್ನು ಬಿಟ್ಟರೆ ಇಂದೋರ್, ಭೋಪಾಲ್, ಹೋಶಂಗಾಬಾದ್, ಸೆಹೋರ್, ನೀಮುಚ್, ರೈಸನ್ ಮತ್ತು ದೇವಾಸ್‍ನಿಂದ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ.

  • ಕರ್ನಾಟಕ, ಗೋವಾ ರಾಜಕೀಯ ಹೈಡ್ರಾಮ ಖಂಡಿಸಿ ಸೋನಿಯಾ, ರಾಹುಲ್ ಪ್ರತಿಭಟನೆ

    ಕರ್ನಾಟಕ, ಗೋವಾ ರಾಜಕೀಯ ಹೈಡ್ರಾಮ ಖಂಡಿಸಿ ಸೋನಿಯಾ, ರಾಹುಲ್ ಪ್ರತಿಭಟನೆ

    – ಬಿಜೆಪಿ ವಿರುದ್ಧ ಸಂಸತ್ತಿನ ಮುಂದೆ ಕೈ ಸಂಸದರ ಪ್ರತಿಭಟನೆ

    ನವದೆಹಲಿ: ಕರ್ನಾಟಕ ಹಾಗೂ ಗೋವಾದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮವನ್ನು ಖಂಡಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ಸಿನ ಈ ಪರಿಸ್ಥಿತಿಗೆ ಬಿಜೆಪಿಯೇ ಕಾರಣವೆಂದು ಆರೋಪಿಸಿ ಸಂಸತ್ತಿನ ಮುಂದೆ ಕೈ ಸಂಸದರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

    ಈ ಪ್ರತಿಭಟನೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಆನಂದ್ ಶರ್ಮಾ ಸೇರಿದಂತೆ ಹಲವು ಕೈ ಸಂಸದರು ಭಾಗಿಯಾಗಿದ್ದರು. ಸಂಸತ್ತಿನ ಸಂಕೀರ್ಣದ ಮುಂದಿರುವ ಗಾಂಧೀಜಿ ಪುತ್ಥಳಿಯ ಎದುರು ಬಿಜೆಪಿ ವಿರುದ್ಧ ಘೋಷಣೆ ಕೂಗಿ, ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಫಲಕಗಳನ್ನು ಹಿಡಿದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರವನ್ನು ಬೀಳಿಸಲು ಬಿಜೆಪಿ ಈ ತಂತ್ರಗಾರಿಕೆ ನಡೆಸುತ್ತಿದೆ. ಮೈತ್ರಿ ಪಕ್ಷಗಳ ಶಾಸಕರನ್ನು ರಾಜೀನಾಮೆ ನೀಡುವಂತೆ ಮಾಡಿ, ರಾಜ್ಯದಲ್ಲಿ ದೋಸ್ತಿ ಸರ್ಕಾರವನ್ನು ಕೆಡವುದು ಬಿಜೆಪಿಯ ಪ್ಲಾನ್. ಅಲ್ಲದೆ ಸರ್ಕಾರದ ಸಂಖ್ಯಾಬಲ ಕಡಿಮೆಯಾಗಿದೆ, ಹೀಗಾಗಿ ಸಿಎಂ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ ಎಂದು ಆರೋಪಿಸಲಾಯಿತು.

    ಇನ್ನೊಂದೆಡೆ ಗೋವಾದಲ್ಲಿ ಕಾಂಗ್ರೆಸ್ ನಾಯಕರು ಕೈತಪ್ಪಿ ಹೋಗಿದ್ದಾರೆ. ಒಟ್ಟು 15 ಮಂದಿ ಶಾಸಕರಲ್ಲಿ 10 ಮಂದಿ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಎರಡೂ ರಾಜ್ಯದಲ್ಲಿ ಕಾಂಗ್ರೆಸ್ ಅತಂತ್ರ ಸ್ಥಿತಿ ತಲುಪಲು ಕೇಸರಿ ಪಕ್ಷವೇ ಕಾರಣ. ಅವರಿಂದಲೇ ನಮ್ಮ ಪಕ್ಷಕ್ಕೆ ಈ ಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದ್ದಾರೆ.

  • ಹಲ್ಲೆ ನಡೆಸಿದ ಟಿಆರ್​ಎಸ್ ನಾಯಕರಿಗೆ ಸಸಿ ನೆಟ್ಟು ಪ್ರತ್ಯತ್ತುರ ನೀಡಿದ ಅರಣ್ಯಾಧಿಕಾರಿಗಳು

    ಹಲ್ಲೆ ನಡೆಸಿದ ಟಿಆರ್​ಎಸ್ ನಾಯಕರಿಗೆ ಸಸಿ ನೆಟ್ಟು ಪ್ರತ್ಯತ್ತುರ ನೀಡಿದ ಅರಣ್ಯಾಧಿಕಾರಿಗಳು

    ಹೈದರಾಬಾದ್: ಮಹಿಳಾ ಅರಣ್ಯಾಧಿಕಾರಿ ಮೇಲೆ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರೆಸ್) ಕಾರ್ಯಕರ್ತರು ಹಲ್ಲೆ ನಡೆಸಿದ್ದಕ್ಕೆ ಪ್ರತಿಯಾಗಿ, ಸಸಿ ನೆಡುವ ಮೂಲಕ ಅರಣ್ಯಾಧಿಕಾರಿಗಳು ತಕ್ಕ ಉತ್ತರ ನೀಡಿದ್ದಾರೆ.

    ಸುಮಾರು 400ಕ್ಕೂ ಹೆಚ್ಚು ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ಸಸಿಗಳನ್ನು ನೆಡುವ ಮೂಲಕ ಮಹಿಳಾ ಅಧಿಕಾರಿಗೆ ಬೆಂಬಲ ಸೂಚಿಸಿ, ಟಿಆರ್‍ಎಸ್ ನಾಯಕರಿಗೆ ತಕ್ಕ ಉತ್ತರ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಜೂನ್ 30 ರಂದು ಮಹಿಳಾ ಅರಣ್ಯಾಧಿಕಾರಿ ಚೋಲೆ ಅನಿತಾ ಅವರನ್ನು ಟಿಆರ್‍ಎಸ್ ಕಾರ್ಯಕರ್ತರು ಕೋಲುಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ಅನಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿ, ಜು.1ರಂದು ಸುಮಾರು 400ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ಸಾಲು ಸಾಲು ಸಸಿ ನೆಡುವ ಮೂಲಕ ಅನಿತಾ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. 400ಕ್ಕೂ ಹೆಚ್ಚು ಅಧಿಕಾರಿಗಳು ಸಸಿ ನೆಡುವ ವಿಡಿಯೋವನ್ನು ಐಎಫ್‍ಎಸ್ ಅಧಿಕಾರಿ ಪರ್ವೀಣ್ ಕಸ್ವಾನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟ್ಟರ್‍ ನಲ್ಲಿ ಅಭಿಯಾನವನ್ನೇ ಪ್ರಾರಂಭಿಸಲಾಗಿದೆ.

    ವಿಡಿಯೋ ಹಾಕುವಾಗ ಕೆಲವು ಸಾಲುಗಳನ್ನು ಬರೆದಿರುವ ಪರ್ವೀಣ್ ಕಸ್ವಾನ್, ‘ಮಹಿಳಾ ರೇಂಜ್ ಆಫೀಸರ್ ಮೇಲೆ ಹಲ್ಲೆ ಮಾಡಿದ ಸ್ಥಳದಲ್ಲೇ ಸುಮಾರು 400ಕ್ಕೂ ಹೆಚ್ಚು ಅರಣ್ಯ ಅಧಿಕಾರಿಗಳು, ಪೊಲೀಸರು ಹಾಗೂ ಇತರರಿಂದ ಸಸಿ ನೆಡಲಾಗಿದೆ. ಈ ವೇಳೆ ಎಲ್ಲ ಹಿರಿಯ ಅಧಿಕಾರಿಗಳೂ ಸಹ ಉಪಸ್ಥಿತರಿದ್ದರು. ಅಕ್ರಮವಾಗಿ ಒತ್ತುವರಿ ಮಾಡುವುದನ್ನು ತಡೆಯಲು ಸುಮಾರು 20 ಹೆಕ್ಟೇರ್ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗಿದೆ. ಹಲ್ಲೆ ಖಂಡಿಸಿ ಪ್ರತಿಕ್ರಿಯಿಸಲು ಇದೊಂದು ಉತ್ತಮ ಹೆಜ್ಜೆಯಾಗಿದೆ’ ಎಂದು ತಮ್ಮ ಟ್ವಿಟ್ಟರ್‍ ನಲ್ಲಿ ಬರೆದುಕೊಂಡಿದ್ದಾರೆ.

    ಇನ್ನೊಂದು ಟ್ವೀಟ್‍ನಲ್ಲಿ ಸಾಲಾಗಿ ನಿಂತಿರುವ ಅಧಿಕಾರಿಗಳ ಚಿತ್ರವನ್ನು ಹಾಕಿ ‘ಇದು ನಮ್ಮ ಪ್ರತಿಕ್ರಿಯೆ, ಚಿತ್ರವನ್ನು ಜೂಮ್ ಮಾಡಿ ನೋಡಿ, ಅದೇ ಜಾಗ. ಇಲಾಖೆಯ ಸಿಬ್ಬಂದಿಯ ಮನೋಸ್ಥೈರ್ಯ ಹೆಚ್ಚಿಸುವುದು ಮಾತ್ರವಲ್ಲ, ಹಲ್ಲೆಗೆ ಪ್ರತಿಕ್ರಿಯೆ ನೀಡುವುದು ಆಗಿದೆ’ ಎಂದು ಬರೆದಿದ್ದು, ಇದೀಗ ಟ್ವಿಟ್ಟರ್‍ ನಲ್ಲಿ ಚಿತ್ರ ವೈರಲ್ ಆಗಿದೆ.

  • ಎಲ್ಲರಿಗೂ ಜ್ಞಾನೋದಯವಾಗಿದೆ, ಮೈತ್ರಿ ಮುಖಂಡರ ವಾಕ್ಸಮರ ಇಂದಿನಿಂದ ನಿಲ್ಲುತ್ತದೆ – ಜಿ.ಟಿ ದೇವೇಗೌಡ

    ಎಲ್ಲರಿಗೂ ಜ್ಞಾನೋದಯವಾಗಿದೆ, ಮೈತ್ರಿ ಮುಖಂಡರ ವಾಕ್ಸಮರ ಇಂದಿನಿಂದ ನಿಲ್ಲುತ್ತದೆ – ಜಿ.ಟಿ ದೇವೇಗೌಡ

    ಮಂಡ್ಯ: ರಾಜ್ಯದಲ್ಲಿ ಹಾಗೂ ಮಂಡ್ಯದಲ್ಲಿ ನಡೆಯುತ್ತಿರುವ ಮೈತ್ರಿ ಸರ್ಕಾರದ ಮುಖಂಡರ ವಾಕ್ಸಮರ ಇಂದಿನಿಂದ ನಿಲ್ಲುತ್ತದೆ. ಎಲ್ಲಾ ನಾಯಕರಿಗೂ ಜ್ಞಾನೋದಯವಾಗಿದೆ ಎಂದು ಸಚಿವ ಜಿ.ಟಿ ದೇವೇಗೌಡ ಅವರು ಹೇಳಿದ್ದಾರೆ.

    ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ನಾಯಕರು ಕುಳಿತು ಮಾತನಾಡಿದ್ದಾರೆ. ನಾವೆಲ್ಲರು ಒಗ್ಗಾಟ್ಟಾಗಿದ್ದು ಒಂದೇ ತಟ್ಟೆಯಲ್ಲಿ ಊಟ ಮಾಡುವವರು ಎಂದು ಬುದ್ದಿ ಹೇಳಿದ್ದಾರೆ. ಇನ್ನು ಮುಂದೆ ಮೈತ್ರಿ ನಾಯಕರ ವಾಕ್ಸಮರ ನಿಲ್ಲುತ್ತದೆ ಎಂದು ಹೇಳಿದ್ದಾರೆ.

    ಮೇ 23 ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ದೇಶದ ಫಲಿತಾಂಶ ಏನಾಗುತ್ತೆ ಎಂದು ಮೇ 23ರ ತನಕ ಕಾಯುತ್ತಾ ಇದ್ದಾರೆ. ದೇಶದಲ್ಲಿ ಏನಾಗುತ್ತೆ ಯಾರು ಪ್ರಧಾನಿಯಾಗುತ್ತಾರೆ ಎಂದು ಆ ದಿನ ತೀರ್ಮಾನವಾಗುತ್ತದೆ. ಅದನ್ನು ಬಿಟ್ಟರೆ ರಾಜ್ಯದ ರಾಜಕೀಯದ ಮೇಲೆ ಈ ಫಲಿತಾಂಶದಿಂದ ಏನೂ ಆಗುವುದಿಲ್ಲ ಎಂದರು.

    ಕುಮಾರಸ್ವಾಮಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಧಿಕಾರ ಹೋಗುತ್ತೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಇನ್ನೂ ನಾಲ್ಕು ವರ್ಷದ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡುತ್ತಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುತ್ತೆ ಹಾಗೆಯೇ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿಯಾಗಿ ಜಿ. ಪರಮೇಶ್ವರ್ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರನ್ನು ಕುಮಾರಸ್ವಾಮಿ ಕರೆಯಬೇಕಿತ್ತು ಎಂಬ ವಿಚಾರಕ್ಕೆ ಪ್ರತಿಕ್ರಿಸಿದ ಅವರು, ಈಗಾಗಲೇ ಚುನಾವಣೆ ಮುಗಿದು ಹೋಗಿದೆ. ಅದೆಲ್ಲಾ ಮುಗಿದ ವಿಚಾರ ಅದರ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದರು.

  • ವೇದಿಕೆ ಕುಸಿದು ಬಿಜೆಪಿ ನಾಯಕರಿಗೆ ಗಾಯ: ವಿಡಿಯೋ ವೈರಲ್

    ವೇದಿಕೆ ಕುಸಿದು ಬಿಜೆಪಿ ನಾಯಕರಿಗೆ ಗಾಯ: ವಿಡಿಯೋ ವೈರಲ್

    ಲಕ್ನೋ: ಬಿಜೆಪಿ ಆಯೋಜಿಸಿದ್ದ ‘ಹೋಳಿ ಮಿಲನ್” ಕಾರ್ಯಕ್ರಮದ ವೇಳೆ ವೇದಿಕೆ ಕುಸಿದು ಬಿದ್ದ ಘಟನೆ ಶುಕ್ರವಾರ ಉತ್ತರ ಪ್ರದೇಶದ ಸಂಭಾಲ್‍ನಲ್ಲಿ ನಡೆದಿದೆ.

    ಈ ಘಟನೆಯಲ್ಲಿ ಬಿಜೆಪಿಯ ಕಿಸಾನ್ ಮೋರ್ಚಾದ ನಾಯಕ ಅವಿದೇಶ್ ಯಾದವ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ವೇದಿಕೆ ಕುಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಈ ಕಾರ್ಯಕ್ರಮ ನಡೆಯುವಾಗ ಹಲವು ಜನ ವೇದಿಕೆ ಮೇಲೆ ಹತ್ತಿದ್ದಾರೆ. ಪರಿಣಾಮ ಭಾರ ಹೆಚ್ಚಾಗಿ ವೇದಿಕೆ ಕುಸಿದು ಬಿದ್ದಿದೆ. ಈ ಘಟನೆಯಿಂದ ಹಲವರಿಗೆ ಗಾಯಗಳಾಗಿದ್ದು, ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಘಟನೆಯನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

  • ಆಪರೇಷನ್ ಕಮಲ ಫೇಲ್ ಆಗಿ ಅಮಿತ್ ಶಾಗೆ ಎಚ್1ಎನ್1 ಬಂದಿದೆ: ಬಿ.ಕೆ ಹರಿಪ್ರಸಾದ್ ಟೀಕೆ

    ಆಪರೇಷನ್ ಕಮಲ ಫೇಲ್ ಆಗಿ ಅಮಿತ್ ಶಾಗೆ ಎಚ್1ಎನ್1 ಬಂದಿದೆ: ಬಿ.ಕೆ ಹರಿಪ್ರಸಾದ್ ಟೀಕೆ

    ಬೆಂಗಳೂರು: ಆಪರೇಷನ್ ಕಮಲ ಸಂಪೂರ್ಣವಾಗಿ ವಿಫಲವಾಗಿದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಎಚ್1ಎನ್1 ಬಂದಿದೆ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

    ಬಿಜೆಪಿಯ ಆಪರೇಷನ್ ಕಮಲ ಖಂಡಿಸಿ ಇಂದು ಮೌರ್ಯ ಸರ್ಕಲ್‍ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು. ಈ ವೇಳೆ ವೇದಿಕೆ ಮೇಲೆ ಭಾಷಣ ಮಾಡುವಾಗ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ವಿರುದ್ಧ ಬಿ.ಕೆ ಹರಿಪ್ರಸಾದ್ ಕಿಡಿಕಾರಿದರು.

    ಬಿಜೆಪಿ ಪಕ್ಷ ಮೊದಲಿನಿಂದಲೂ ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಲೇ ಬಂದಿದೆ. ರಫೆಲ್ ಡೀಲ್‍ನಲ್ಲಿ ಬಿಜೆಪಿಗೆ 30 ಸಾವಿರ ಕೋಟಿ ಹಣ ಸಿಕ್ಕಿದೆ. ಇದೇ ಹಣದ ಅಹಂಕಾರದಲ್ಲಿ ಬಿಜೆಪಿ ಮೈತ್ರಿ ಸರ್ಕಾರ ಬೀಳಿಸಲು ಹೊರಟಿತ್ತು ಎಂದು ವಾಗ್ದಾಳಿ ನಡೆಸಿದರು.

    ಈ ರೀತಿ ಹಗರಣ ಮಾಡಿ 1 ಲಕ್ಷ ಕೋಟಿ ಹಣ ಬಂದರೂ ನಮ್ಮ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ. ನಮ್ಮ ಶಾಸಕರನ್ನು ಅಮಿತ್ ಶಾ ಕಿಡ್ನಾಪ್ ಮಾಡಿದ್ದಾರೆ. ಕಾಣೆಯಾದ ಶಾಸಕರ ಕುಟುಂಬಸ್ಥರು ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಬೇಕು. ಕರ್ನಾಟಕ ಸರ್ಕಾರವನ್ನ ಬೀಳಿಸಲು ಹೋಗಿ ಅಮಿತ್ ಶಾಗೆ ಈಗ ಜ್ವರ ಬಂದಿದೆ. ಈಗ ಬಂದಿರುವ ಜ್ವರ ಸಾಮಾನ್ಯ ಜ್ವರ ಅಲ್ಲ ಹಂದಿ ಜ್ವರ. ಮೃತ್ರಿ ಸರ್ಕಾರದ ವಿಚಾರಕ್ಕೆ ಬಂದು ಎಚ್1ಎನ್1 ಜೊತೆಗೆ ವಾಂತಿ ಬೇಧಿ ಕೂಡ ಶುರುವಾಗುತ್ತದೆ ಎಂದು ಟಾಂಗ್ ನೀಡಿದರು.

    ಈ ಪ್ರತಿಭಟನೆಯಲ್ಲಿ ಆಪರೇಷನ್ ಕಮಲದ ಅಣಕು ಪ್ರದರ್ಶನ ಮಾಡಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷದ ನಾಯಕರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಟ್ಟೆಯೊಳಗೆ ವಿಷ ಇಟ್ಕೊಂಡು ಅಧಿಕಾರ ಮಾಡಿದ್ರೆ ಹೀಗೆ ಆಗುತ್ತೆ: ಸಿ.ಟಿ ರವಿ ಕಿಡಿ

    ಹೊಟ್ಟೆಯೊಳಗೆ ವಿಷ ಇಟ್ಕೊಂಡು ಅಧಿಕಾರ ಮಾಡಿದ್ರೆ ಹೀಗೆ ಆಗುತ್ತೆ: ಸಿ.ಟಿ ರವಿ ಕಿಡಿ

    ಚಿಕ್ಕಮಗಳೂರು: ಹೊಟ್ಟೆಯೊಳಗೆ ವಿಷ ಇಟ್ಕೊಂಡಿರೋ ಎರಡು ಪಕ್ಷ ಒಟ್ಟಾಗಿ ಅಧಿಕಾರ ಮಾಡಿದ್ರೆ ಹೀಗೆ ಆಗುತ್ತೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ ಮಾಡಿಕೊಂಡು ಈಗ ಬಿಜೆಪಿಯನ್ನೇ ದೋಷಿಸುತ್ತಿದ್ದಾರೆ ಅಂತ ಶಾಸಕ ಸಿ.ಟಿ ರವಿ ಮೈತ್ರಿ ಸರ್ಕಾರದ ಮೇಲೆ ಕಿಡಿ ಕಾರಿದ್ದಾರೆ.

    ಜಿಲ್ಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಮೈತ್ರಿ ಸರ್ಕಾರ ಜನ ಬಯಸಿದ್ದಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರು ಸಿದ್ದರಾಮಯ್ಯ ಅವರನ್ನು ನೀಚ ಮುಖ್ಯಮಂತ್ರಿ ಅಂತ ಹೇಳಿದ್ದರು. ನಾನು ಎಂದಿಗೂ ಸಿದ್ದರಾಮಯ್ಯಗೆ ಆ ರೀತಿ ಹೇಳುವುದಿಲ್ಲ. ರಾಜಕೀಯವಾಗಿ ವಿರೋಧ ಇರಬಹುದು ಆದ್ರೆ ವೈಯಕ್ತಿಕವಾಗಿ ಇಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಇರಡು ಪಕ್ಷ ಮೈತ್ರಿ ಮಾಡಿಕೊಂಡಿದೆ ಅಷ್ಟೇ. ಹೊಟ್ಟೆಯೊಳಗೆ ವಿಷ ಇಟ್ಕೊಂಡು ಅಧಿಕಾರ ಮಾಡಿದ್ರೆ ಹೀಗೆ ಆಗುತ್ತದೆ. ಅವರವರ ಒಳ ಮುನಿಸುಗಳನ್ನು ಮುಚ್ಚಿಟ್ಟು ಎಲ್ಲದಕ್ಕೂ ಬಿಜೆಪಿ ಅವರನ್ನು ದೂರುತ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೈತ್ರಿ ಸರ್ಕಾರ ಬಂದ ಮೇಲೆ ನಾನೊಬ್ಬ ಸಾಂದರ್ಭಿಕ ಶಿಶು, ಅಸಹಾಯಕತೆಯಲ್ಲಿದ್ದೇನೆ, ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇನೆ, ಕ್ಲರ್ಕ್‍ಗಿಂತ ಕಡೆಯಾಗಿದ್ದೇನೆ ಅಂತ ಸಿಎಂ ಕುಮಾರಸ್ವಾಮಿಯವರೇ ಹೇಳಿದ್ದರು. ಇತೀಚೆಗೆ ಎ.ಟಿ ರಾಮಸ್ವಾಮಿ ಅವರು ಕಾಂಗ್ರೆಸ್ ಲಕ್ಷ್ಮಣ ರೇಖೆ ದಾಟಿದ್ರೆ ಹುಷಾರ್ ಅಂತ ಹೇಳಿದ್ದರು. ರೇವಣ್ಣ ಅವರು ನಮ್ಮ ಸಚಿವ ಖಾತೆ ಬಗ್ಗೆ ಒತ್ತಡ ಹೇರೋಕೆ ಅವರ್ಯಾರು ಅಂತ ಹೇಳಿಕೆ ನೀಡಿದ್ದರು. ರಾಜಕೀಯ ಹೇಗೆ ಮಾಡಬೇಕು ಗೊತ್ತಿದೆ ಅದನ್ನ ಜೆಡಿಎಸ್‍ನಿಂದ ಕಲಿಯಬೇಕಾಗಿಲ್ಲ ಅಂತ ದಿನೇಶ್ ಗುಂಡುರಾವ್ ಹೇಳಿದ್ದರು. ಇದ್ಯಾವುದನ್ನು ನಾವು ಹೇಳಿದ್ದಲ್ಲ ಮೈತ್ರಿ ನಾಯಕರೇ ಮಾತನಾಡಿದ್ದು. ಇಷ್ಟೆಲ್ಲ ಪರಸ್ಪರ ವಿರೋಧ ಇಟ್ಟುಕೊಂಡಿರುವವರು ಹೇಗೆ ಉತ್ತಮ ಸರ್ಕಾರ ನಡೆಸ್ತಾರೆ ಅಂತ ಪ್ರಶ್ನಿಸಿದರು.

    ಸರ್ಕಾರ ಉರುಳಿಸುವ ಕೆಲಸ ನಾವು ಮಾಡ್ತಿಲ್ಲ. ಅವರೇ ಮಾಡಿಕೊಳ್ಳುತ್ತಿದ್ದಾರೆ. ನಾವು ಸರ್ಕಾರ ಬೀಳಲಿ ಅಂತನೇ ಕಾಯುತ್ತಿದ್ದೇವೆ. ಅದನ್ನೆ ಜನರು ಬಯಸುತ್ತಿದ್ದಾರೆ. ಶಾಸಕರು ಸಭೆಗಳಿಗೆ ಹೋಗಿಲ್ಲ ಅಂದರೆ ನಮ್ಮನ್ನ ಯಾಕೆ ದೂರುವುದು. ಬಿಜೆಪಿಯವರು ಗುರುಗ್ರಾಮಕ್ಕೆ ಹೋದರೆ ಮೈತ್ರಿ ನಾಯಕರಿಗೆ ಭಯ ಯಾಕೆ? ಅವರಲ್ಲಿನ ಬಂಡಾಯ ಶಮನ ಮಾಡುವುದು ನಮ್ಮ ಕೆಲಸವಲ್ಲ. ನಾವು ಕಾಂಗ್ರೆಸ್ ಹೈಕಮಾಂಡಲ್ಲ. ಸರ್ಕಾರ ಬಿದ್ರೆ ಜನರಿಗೂ ಖುಷಿಯಾಗುತ್ತೆ ಜೊತೆಗೆ ನಮಗೂ ಖುಷಿಯಾಗುತ್ತೆ ಎಂದರು.

    ಬಳಿಕ ಬಿಜೆಪಿ ಶಾಸಕರು ಮೈತ್ರಿ ನಾಯಕರ ಜೊತೆ ಸೇರುವ ಕುರಿತಾಗಿ ಪ್ರತಿಕ್ರಿಯಿಸಿ, ಮೈತ್ರಿ ನಾಯಕರಿಗೆ ಅವರ ಶಾಸಕರನ್ನೇ ಉಳಿಸಿಕೊಳ್ಳಲು ಆಗುತ್ತಿಲ್ಲ. ಮತ್ತೆ ನಮ್ಮ ಶಾಸಕರ ಮೇಲೆ ಹೇಗೆ ಕೈಹಾಕುತ್ತಾರೆ. ಮೈತ್ರಿ ಸರ್ಕಾರ 7 ತಿಂಗಳುಗಳಲ್ಲಿ ಮಾಡಿರುವ ಒಳ್ಳೆ ಕೆಲಸಗಳನ್ನು ಪಟ್ಟಿ ಮಾಡಿಸಿ. ಜಗಳ ಮಾಡುವುದನ್ನು ಬಿಟ್ಟರೆ ಏನೂ ಕೆಲಸ ಮಾಡಿಲ್ಲ ಅಂತ ಸಿ.ಟಿ ರವಿ ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯ ಕೈ ನಾಯಕರನ್ನು ಪಂಚರಾಜ್ಯಗಳ ಚುನಾವಣೆಗೆ ಬಳಸಲು ಹೈಕಮಾಂಡ್ ಚಿಂತನೆ

    ರಾಜ್ಯ ಕೈ ನಾಯಕರನ್ನು ಪಂಚರಾಜ್ಯಗಳ ಚುನಾವಣೆಗೆ ಬಳಸಲು ಹೈಕಮಾಂಡ್ ಚಿಂತನೆ

    ಬೆಂಗಳೂರು: ದೇಶದಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ರಾಜ್ಯದ ನಾಯಕರನ್ನು ಉಸ್ತುವಾರಿಗಳನ್ನಾಗಿ ನಿಯೋಜಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.

    ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂ ಮತ್ತು ಛತ್ತೀಸ್‍ಗಡ ರಾಜ್ಯಗಳಲ್ಲಿ ಚುನಾವಣೆ ಸಮೀಪಿಸುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಧಿಪತ್ಯ ಸಾಧಿಸಲು ರಾಜ್ಯದ ಪ್ರಮುಖ ನಾಯಕರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲು ಹೈಕಮಾಂಡ್ ಪ್ಲಾನ್ ಮಾಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ರಾಜ್ಯದ ದಲಿತ ಮುಖಂಡ ಹಾಗೂ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಹಿಂದುಳಿದ ವರ್ಗಗಳ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಚುನಾವಣೆ ನಿರ್ವಹಣೆಕಾರ ಎಂದೇ ಹೆಸರು ಪಡೆದಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರನ್ನು ಆಯಾ ರಾಜ್ಯಗಳ ಉಸ್ತುವಾರಿಗಳನ್ನಾಗಿ ನೇಮಿಸಲು ಹೈಕಮಾಂಡ್ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

    ಈಗಾಗಲೇ ರಾಜ್ಯ ನಾಯಕರೊಂದಿಗೆ ಕಾಂಗ್ರೆಸ್ ಹೈಕಮಾಂಡ್ ಚರ್ಚೆ ನಡೆಸಿದ್ದು, ಶೀಘ್ರವೇ ರಾಜ್ಯಗಳನ್ನು ಹಂಚಿಕೆ ಮಾಡಿ ಉಸ್ತುವಾರಿ ವಹಿಸಲಿದೆ. ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಚುನಾವಣೆಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅಲ್ಲದೇ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ಸಿಗೆ ಹೆಚ್ಚಿನ ಪೂರಕ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಚುನಾವಣೆಯಲ್ಲಿ ಪ್ರಚಾರ ಸೇರಿದಂತೆ ನಿರ್ವಹಣೆಗೆ ರಾಜ್ಯದ ನಾಯಕರನ್ನು ಬಳಸಿಕೊಂಡು, ಅಧಿಕಾರ ಸ್ಥಾಪಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪ್ರಚಾರಕ್ಕೆ ಬಾರದ ಕೈ ನಾಯಕರು-ಕ್ರಮ ಕೈಗೊಳ್ಳಲು ಮುಂದಾದ ಡಿಸಿಎಂ

    ಪ್ರಚಾರಕ್ಕೆ ಬಾರದ ಕೈ ನಾಯಕರು-ಕ್ರಮ ಕೈಗೊಳ್ಳಲು ಮುಂದಾದ ಡಿಸಿಎಂ

    ಬಾಗಲಕೋಟೆ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಕೈ ನಾಯಕರು ಹಿಂದೇಟು ಹಾಕುತ್ತಿರುವುದರಿಂದ ಡಿಸಿಎಂ ಪರಮೇಶ್ವರ್ ಅಸಮಾಧಾನಗೊಂಡಿದ್ದು, ಅಲ್ಲದೇ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಪ್ತರ ಬಳಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಹೌದು, ಜಮಖಂಡಿ ಉಪಚುನಾವಣೆಯಲ್ಲಿ ಕೈ ಪಡೆ ಶತಾಯಗತಾಯ ಗೆಲುವು ಸಾಧಿಸಲೇಬೇಕೆಂದು ಹರಸಾಹಸ ಪಡುತ್ತಿದೆ. ಆದರೆ ಅಭ್ಯರ್ಥಿ ಪರ ಪ್ರಚಾರ ಮಾಡಲು ಪಕ್ಷದ ಪ್ರಮುಖರೇ ನಿರಾಸಕ್ತಿ ತೋರುತ್ತಿದ್ದಾರೆ. ಅಲ್ಲದೇ ಹಾಲಿ, ಮಾಜಿ ಸಚಿವರು ಹಾಗೂ ಶಾಸಕರು ಸಹ ಪ್ರಚಾರಕ್ಕೆ ಬರುತ್ತಿಲ್ಲ.

    ಸಚಿವರು ಮತ್ತು ಶಾಸಕರ ನಡೆಯಿಂದ ಡಿಸಿಎಂ ಅಸಮಾಧಾನಗೊಂಡಿದ್ದು, ಪ್ರಚಾರಕ್ಕೆ ಬಾರದೇ ಇರುವ ನಾಯಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಆಪ್ತರ ಬಳಿ ಮಾತನಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಹಾಲಿ ಸಚಿವರಾದ ಯು ಟಿ ಖಾದರ್, ಜಮೀರ್ ಅಹ್ಮದ್ ಸಚಿವ ಹಾಗೂ ಮಾಜಿ ಸಚಿವರಾಗಿದ್ದ ಎಸ್ ಆರ್ ಪಾಟೀಲ್, ವಿನಯ್ ಕುಲಕರ್ಣಿ ಹಾಗೂ ವೀರಕುಮಾರ್ ಪಾಟೀಲ್. ಶಾಸಕರಾದ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಪ್ರಸಾದ ಅಬ್ಬಯ್ಯ, ರೂಪಾ ಶಶಿಧರ್, ಬೈಲಹೊಂಗಲ ಮಾಂತೇಶ್ ಕೌಜಲಗಿ, ಶಿವರಾಮ ಹೆಬ್ಬಾರ್, ಇಂಡಿ ಕ್ಷೇತ್ರದ ಯಶವಂತರಾವ್ ಪಾಟೀಲ್ ಹಾಗೂ ಹುಕ್ಕೇರಿ ಶಾಸಕ/ಮುಖ್ಯ ಸಚೇತಕರಾದ ಗಣೇಶ್ ಹಾಗೂ ಮಾಜಿ ಶಾಸಕರಾದ ಸಿಎಸ್ ನಾಡಗೌಡ, ಎಸ್.ಜಿ. ನಂಜಯ್ಯನಮಠ, ಹಂಪನಗೌಡ ಬಾದರ್ಲಿ ಹಾಗೂ ಹುನಗುಂದದ ವಿಜಯಾನಂದ ಕಾಶಪ್ಪನವರ್ ಸಹ ಪ್ರಚಾರದಿಂದ ಗೈರಾಗಿದ್ದಾರೆ.

    ಇವರಲ್ಲದೇ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವೀಣಾ ಕಾಶಪ್ಪನವರು ಹಾಗೂ ವಿಧಾನಪರಿಷತ್ ಸದಸ್ಯರಾದ ವಿವೇಕ್‍ರಾವ್ ಪಾಟೀಲ್ ಹಾಗೂ ಸುನೀಲ್ ಗೌಡ ಪಾಟೀಲ್ ಸಹ ಪ್ರಚಾರಕ್ಕೆ ಆಗಮಿಸಿಲ್ಲ.

    ಈ ಮೇಲ್ಕಂಡ ಕೈ ಮುಖಂಡರು ಅಕ್ಟೋಬರ್ 22 ರಿಂದ ಜಮಖಂಡಿ ಕ್ಷೇತ್ರದಲ್ಲಿ ಪ್ರಚಾರ ಮಾಡಬೇಕಿತ್ತು. ಅಲ್ಲದೇ ಕಾಂಗ್ರೆಸ್ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಾಯಕರಿಗೆ ಉಸ್ತುವಾರಿಯನ್ನು ನೀಡಿತ್ತು. ಸಮುದಾಯವಾರು ಮತ ಸೆಳೆಯಲು, ಜಾತಿಯಾಧಾರದ ಮೇಲೆ ಕಾಂಗ್ರೆಸ್ ಮುಖಂಡರನ್ನು ನೇಮಿಸಿತ್ತು.

    ಕಳೆದ ಬಾರಿಯ ವಿಧಾನಸಭಾ ಚುನವಾಣೆಯಲ್ಲಿ ಕೈ ತಪ್ಪಿದ್ದ ಮತಗಳನ್ನು ಸೆಳೆಯಲು ಕಾಂಗ್ರೆಸ್ ರಣತಂತ್ರ ಹೆಣೆದಿತ್ತು. ಅಲ್ಲದೇ ಜಾತಿವಾರು ಮತಗಳನ್ನು ಸೆಳೆಯಲು ಆಯಾ ಸಮುದಾಯದ ಮುಖಂಡರನ್ನೇ ನೇಮಿಸಿತ್ತು. ಇದರ ಮೂಲಕ ಕಡಿಮೆ ಮತ ಬಿದ್ದ ಭಾಗದಲ್ಲಿ ಮತ ಕ್ರೋಢೀಕರಣ ಮಾಡುವ ಜವಬ್ದಾರಿಯನ್ನು ಪಕ್ಷದ ಪ್ರಮುಖ ನಾಯಕರಿಗೆ ನೀಡಿತ್ತು.

    ಪ್ರಚಾರಕ್ಕೆ ಗೈರಾಗಿ ಕಾಂಗ್ರೆಸ್ಸಿನ ರಣತಂತ್ರಕ್ಕೆ ಸ್ವ-ಪಕ್ಷೀಯರೇ ಬೆಂಬಲ ಸೂಚಿಸಿಲ್ಲದ್ದರಿಂದ ಡಿಸಿಎಂ ಪರಮೇಶ್ವರ್ ಎಲ್ಲಾ ಮುಖಂಡರ ಮೇಲೆ ಅಸಮಾಧಾನಗೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ಕೆಪಿಸಿಸಿಗೆ ದೂರನ್ನು ನೀಡಿ, ಮುಂಬರುವ ಚುನಾವಣೆಯ ಟಿಕೆಟ್ ಹಂಚಿಕೆ ವೇಳೆ ಈ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಲೆಗೆ ನುಗ್ಗಿ ಮಹಿಳಾ ಅಡುಗೆ ಸಹಾಯಕರನ್ನು ಹೊರಗೆ ಎಳೆದು ಗ್ರಾಮಸ್ಥರಿಂದ ಹಲ್ಲೆ

    ಶಾಲೆಗೆ ನುಗ್ಗಿ ಮಹಿಳಾ ಅಡುಗೆ ಸಹಾಯಕರನ್ನು ಹೊರಗೆ ಎಳೆದು ಗ್ರಾಮಸ್ಥರಿಂದ ಹಲ್ಲೆ

    ಮೈಸೂರು: ಮೂವರು ಮಹಿಳಾ ಅಡುಗೆ ಕೆಲಸಗಾರರಿಗೆ ಊರಿನ ಮುಖಂಡರು ತಮ್ಮ ಮಾತು ಕೇಳದೆ ಇದ್ದಿದ್ದಕ್ಕೆ ಕಿರುಕುಳ ನೀಡಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.

    ಸವ್ವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮಂಜುಳಾ, ದೇವಮ್ಮ, ಸಿದ್ದಮ್ಮ ಕಿರುಕುಳಕ್ಕೆ ಒಳಗಾದ ಮಹಿಳೆಯರು. ಶಾಲೆಯ ಆಂತರಿಕ ವಿಚಾರಕ್ಕೆ ಗ್ರಾಮದ ಮುಖಂಡರು ತಲೆ ಹಾಕಿದ್ದರು. ಇದರಿಂದಾಗಿ ಮೂವರು ಅಡುಗೆಯವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮಹಿಳೆಯರು ನಮ್ಮ ಶಾಲೆಯ ವಿಚಾರಕ್ಕೆ ಬರದಂತೆ ಮನವಿ ಕೂಡ ಮಾಡಿಕೊಂಡಿದ್ದರು. ಇದರಿಂದ ಆಕ್ರೋಶಗೊಂಡು ಗ್ರಾಮದ ಮುಖಂಡರು ಈ ಕೃತ್ಯವನ್ನು ಎಸಗಿದ್ದಾರೆ.

    ಮಂಗಳವಾರ ಶಾಲೆಗೆ ನುಗ್ಗಿ ಗಲಾಟೆ ನಡೆಸಿರುವ ಕೆಲ ಗ್ರಾಮಸ್ಥರು ಅಡುಗೆ ಮಾಡುತ್ತಿದ್ದ ಮೂವರು ಅಡುಗೆಯವರನ್ನು ಶಾಲೆಯಿಂದ ಹೊರ ಹಾಕಿದ್ದಾರೆ. ಹೊರಗೆ ಎಳೆದು ತಂದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೇ ಮೂವರಿಗೂ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.

    ಬೆಂಕಿ ಬಿಸಿನೀರು ಕೊಡದಂತೆ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಈ ಎಲ್ಲಾ ದೃಶ್ಯಗಳು ಮೊಬೈಲ್‍ನಲ್ಲಿ ರೆಕಾರ್ಡ್ ಆಗಿದೆ. ಸದ್ಯಕ್ಕೆ ಅಡುಗೆ ತಯಾರಕರನ್ನು ಹೆಚ್.ಡಿ ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹೆಚ್.ಡಿ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv