Tag: Leader

  • ನೂರಾರು ಜನರ ಎದುರೇ ಎಸ್‍ಪಿ ಮುಖಂಡ, ಮಗನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

    ನೂರಾರು ಜನರ ಎದುರೇ ಎಸ್‍ಪಿ ಮುಖಂಡ, ಮಗನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

    – ನರೇಗಾ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ
    – ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು

    ಲಕ್ನೋ: ನೂರಾರು ಜನರ ಎದುರೇ ಸಮಾಜವಾದಿ ಪಕ್ಷ (ಎಸ್‍ಪಿ) ಮುಖಂಡ ಹಾಗೂ ಅವರ ಮಗನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಚೋಟೆಲಾಲ್ ದಿವಾಕರ್ (50) ಮತ್ತು ಸುನಿಲ್ ಕುಮಾರ್ (28) ಕೊಲೆಯಾದವರು. ಸಂಭಾಲ್ ಜಿಲ್ಲೆಯ ಬಹ್ಜೋಯಿ ಸಮೀಪದ ಶಂಶೋಯಿ ಹಳ್ಳಿಯಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆರೋಪಿಗಳು

    ಎಸ್‍ಪಿ ಮುಖಂಡ ಚೋಟೆಲಾಲ್ ಅವರು ಪುತ್ರನ ಜೊತೆಗೆ ಶಂಶೋಯಿ ಗ್ರಾಮದ ಸಮೀಪದ ನರೇಗಾ ಯೋಜನೆ ಅಡಿ ನಡೆಯುತ್ತಿದ್ದ ರಸ್ತೆ ಕಾಮಗಾರಿ ಪರಿಶೀಲನೆಗೆ ಹೋಗಿದ್ದರು. ಈ ವೇಳೆ ಸ್ಥಳೀಯ ಸವಿಂದರ್ ಜೊತೆಗೆ ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಸವಿಂದರ್, ಆತನ ಓರ್ವ ಸಂಬಂಧಿ ಬಂದೂಕಿನಿಂದ ಗುಂಡು ಹಾರಿಸಿ ಚೋಟೆಲಾಲ್ ಹಾಗೂ ಸುನೀಲ್ ಅವರನ್ನು ಹತ್ಯೆಗೈದಿದ್ದಾರೆ.

    ಈ ವೇಳೆ ಸ್ಥಳದಲ್ಲಿದ್ದ ಕೆಲವರು ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಎಸ್‍ಪಿ, ಪರಿಸ್ಥಿತಿಯನ್ನು ತಿಳಿಗೊಳಿಸಿ ಭಾರೀ ಭದ್ರತಾ ಪಡೆ ನಿಯೋಜಿಸಿದ್ದಾರೆ.

    ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಸಂಭಾಲ್ ಪೊಲೀಸ್ ವರಿಷ್ಠಾಧಿಕಾರಿ ಯಮುನಾ ಪ್ರಸಾದ್, “ಶಂಶೋಯಿ ಗ್ರಾಮದಲ್ಲಿ ನರೇಗಾ ಯೋಜನೆ ಅಡಿ ರಸ್ತೆ ನಿರ್ಮಿಸಲಾಗುತ್ತಿದೆ. ಈ ವಿಚಾರವಾಗಿ ಚೋಟೆಲಾಲ್ ದಿವಾಕರ್ ಮತ್ತು ಸವಿಂದರ್ ನಡುವೆ ಜಗಳವಾಗಿದೆ. ಪರಿಣಾಮ ಬಂದೂಕು ಹಿಡಿದಿದ್ದ ಸವಿಂದರ್ ಹಾಗೂ ಮತ್ತೋರ್ವ ಚೋಟೆಲಾಲ್, ಸುನಿಲ್ ಕುಮಾರ್ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೈದಿದ್ದಾರೆ. ಈ ಸಂಬಂಧ ಕೆಲ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸಲು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

    ಚೋಟೆಲಾಲ್ ದಿವಾಕರ್ ಮತ್ತು ಸವಿಂದರ್ ಇಬ್ಬರ ನಡುವೆ ಹಳೆಯ ದ್ವೇಷವಿತ್ತು. ಅದೇ ಕಾರಣಕ್ಕೆ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಚೋಟೆಲಾಲ್ ಹಾಗೂ ಸುನಿಲ್ ಕುಮಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಯಮುನಾ ಪ್ರಸಾದ್ ಮಾಹಿತಿ ನೀಡಿದ್ದಾರೆ.

    ಮಾಜಿ ಎಸ್‍ಪಿ ಸಂಸದ ಧರ್ಮೇಂದ್ರ ಯಾದವ್ ಪ್ರತಿಕ್ರಿಯಿಸಿ, ಚೋಟೆಲಾಲ್ ದಿವಾಕರ್ ನಮ್ಮ ಪಕ್ಷದ ಕ್ರೀಯಾಶೀಲ ನಾಯಕ. ಅವರಿಗೆ 2017ರಲ್ಲಿ ಪಕ್ಷವು ಚಂದೌಸಿ ವಿಧಾನಸಭೆಯಿಂದ ಟಿಕೆಟ್ ನೀಡಿತ್ತು. ಆದರೆ ಈ ಸ್ಥಾನವು ಮೈತ್ರಿಗೆ ಹೋಯಿತು. ಸಂಭಾಲ್‍ನಲ್ಲಿ ನಮ್ಮ ನಾಯಕನ ಹತ್ಯೆಯಿಂದ ಪೊಲೀಸರು ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ವಿರೋಧ ಪಕ್ಷದವರನ್ನು ವಿಶೇಷವಾಗಿ ಸಮಾಜವಾದಿ ಪಕ್ಷದ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ ಎಂಬುದು ರಾಜ್ಯದಲ್ಲಿ ಸ್ಪಷ್ಟವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    https://twitter.com/Sirbaraj/status/1262715267882332170

  • ದೆಹಲಿಯಲ್ಲಿ ಗಣರಾಜ್ಯೋತ್ಸವ – ದಾವಣಗೆರೆ ವಿದ್ಯಾರ್ಥಿನಿ ಎನ್‍ಸಿಸಿ ಪರೇಡ್ ಲೀಡರ್

    ದೆಹಲಿಯಲ್ಲಿ ಗಣರಾಜ್ಯೋತ್ಸವ – ದಾವಣಗೆರೆ ವಿದ್ಯಾರ್ಥಿನಿ ಎನ್‍ಸಿಸಿ ಪರೇಡ್ ಲೀಡರ್

    ದಾವಣಗೆರೆ: ದೆಹಲಿಯಲ್ಲಿ ನಡೆಯುವ 2020ನೇ ಗಣರಾಜ್ಯೋತ್ಸವದ ಎನ್‍ಸಿಸಿ ಪರೇಡ್‍ಗೆ ನಮ್ಮ ರಾಜ್ಯದ ದಾವಣಗೆರೆ ವಿದ್ಯಾರ್ಥಿನಿ ಲೀಡರ್ ಆಗಿ ಸೆಲೆಕ್ಟ್ ಆಗಿದ್ದಾರೆ.

    ಇದೇ ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್ ನಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದ ಯುವತಿ ಶ್ರೀಷ್ಮಾ ಹೆಗ್ಡೆ ಎನ್‍ಸಿಸಿ ಪರೇಡ್ ಲೀಡರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಹರಿಹರ ಪಟ್ಟಣದ ನಿವಾಸಿಗಳಾದ ಡಾ.ಪ್ರವೀಣ್ ಹೆಗ್ಡೆ- ಬಿಂದು ಹೆಗ್ಡೆ ದಂಪತಿ ಪುತ್ರಿ ಶ್ರೀಷ್ಮಾ ಹೆಗ್ಡೆ, ಕುಮಾರಪಟ್ಟಣದ ಆದಿತ್ಯ ಬಿರ್ಲಾ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ಈಗ ಇವರು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಎನ್‍ಸಿಸಿ ಪೆರೇಡ್‍ಗೆ ಆಯ್ಕೆಯಾಗಿದ್ದು, 2020ರ ಗಣರಾಜ್ಯೋತ್ಸವದ ಎನ್‍ಸಿಸಿ ಪರೇಡ್ ಲೀಡ್ ಮಾಡಲಿದ್ದಾರೆ. 2017 ದ ದೆಹಲಿಯ ಗಣರಾಜ್ಯೋತ್ಸದ ಪರೇಡ್‍ನಲ್ಲಿ ಕೊಡಗಿನ ಐಶ್ವರ್ಯಾ ಲೀಡರ್ ಆಗಿದ್ದರು. ಈಗ 3 ವರ್ಷದ ನಂತರ ಮತ್ತೆ ಕರ್ನಾಟಕದ ಎನ್‍ಸಿಸಿ ಯುವತಿಗೆ ಅವಕಾಶ ದೊರೆತಿದೆ.

  • ಮತ್ತೊಬ್ಬ ಬಿಜೆಪಿ ಮುಖಂಡನ ಕಗ್ಗೊಲೆ- ಒಂದೇ ವಾರದಲ್ಲಿ ಮೂವರ ಹತ್ಯೆ

    ಮತ್ತೊಬ್ಬ ಬಿಜೆಪಿ ಮುಖಂಡನ ಕಗ್ಗೊಲೆ- ಒಂದೇ ವಾರದಲ್ಲಿ ಮೂವರ ಹತ್ಯೆ

    ಲಕ್ನೋ: ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಮುಖಂಡನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಹತ್ಯೆ ಸೇರಿ ಒಂದೇ ವಾರದಲ್ಲಿ ಮೂವರನ್ನು ಕೊಲೆಗೈಯಲಾಗಿದೆ.

    ಹತ್ಯೆಯಾದವನನ್ನು 47 ವರ್ಷದ ಧರಾ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಕಾರ್ಪೋರೇಟರ್ ಆಗಿದ್ದನು. ಅಲ್ಲದೆ ಸ್ಥಳೀಯ ಸಕ್ಕರೆ ಕಾರ್ಖಾನೆಯಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದನು. ಧರಾ ಸಿಂಗ್ ಶನಿವಾರ ಶಹರಾನ್ ಪುರದಲ್ಲಿರುವ ತನ್ನ ಮನೆಯಿಂದ ಕೆಲಸಕ್ಕೆ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಈತನನ್ನು ತಡೆದಿದ್ದಾರೆ. ಅಲ್ಲದೆ ಕೂಡಲೇ ಧರಾ ಸಿಂಗ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

    ಈ ಸಂಬಂಧ ಶಹರಾನ್ ಪುರ ಪೊಲೀಸ್ ಅಧಿಕಾರಿ ದಿನೇಶ್ ಕುಮಾರ್ ಮಾತನಾಡಿ, ರಣ್ಖಂಡ್ ರೈಲೈ ಕ್ರಾಸಿಂಗ್ ಬಳಿ ಅಪರಿಚಿತ ವ್ಯಕ್ತಿಗಳು ಧರಾ ಸಿಂಗ್ ಮೇಲೆ ಗುಂಡಿಕ್ಕಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡಿರುವ ಆತನನ್ನು ಕೂಡಲೇ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು ಎಂದು ತಿಳಿಸಿದರು.

    ಈ ಕೊಲೆಗೆ ಕಾರಣವೇನೆಂದು ಪೊಲೀಸರಿಗೆ ಇದೂವರೆಗೂ ಗೊತ್ತಾಗಿಲ್ಲ. ಧರಾ ಸಿಂಗ್ ಬಗ್ಗೆ ಅವರ ಕುಟುಂಬದ ಸದಸ್ಯರ ಬಳಿ ಮಾತನಾಡುತ್ತೇವೆ. ಈ ಮೂಲಕ ಕೊಲೆಗೆ ಕಾರಣವೇನೆಂಬುದನ್ನು ತಿಳಿಯುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.

    ಅಕ್ಟೋಬರ್ 8ರಂದು ಬಿಜೆಪಿ ಮುಖಂಡ ಚೌಧರಿ ಯಶ್ ಪಾಲ್ ಸಿಂಗ್ ನನ್ನು ಕೊಲೆ ಮಾಡಲಾಗಿತ್ತು. ಅದಾದ ಬಳಿಕ ದಿನದ ಹಿಂದೆಯಷ್ಟೇ ಬಿಜೆಪಿ ನಾಯಕ ಕಬೀರ್ ತಿವಾರಿಯನ್ನು ಹತ್ಯೆ ಮಾಡಲಾಗಿತ್ತು.

  • ದರ್ಶನ್ – ಪ್ರಕಾಶ್ ಪುನರ್ ಮಿಲನ!

    ದರ್ಶನ್ – ಪ್ರಕಾಶ್ ಪುನರ್ ಮಿಲನ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು ಕೊಂಚ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಇನ್ನೇನು ಗೌರಿ ಗಣೇಶ ಹಬ್ಬ ಮುಗಿಯುತ್ತಲೇ ಆ ಚಿತ್ರದ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ. ರಾಬರ್ಟ್ ಜೊತೆಗೇ ಮತ್ತೊಂದಷ್ಟು ಚಿತ್ರಗಳೂ ಕೂಡಾ ದರ್ಶನ್ ಅವರ ಲಿಸ್ಟಿನಲ್ಲಿ ಸಾಲುಗಟ್ಟಿ ನಿಂತಿವೆ. ಹಾಗಿದ್ದರೂ ಕೂಡಾ ದರ್ಶನ್ ಮತ್ತೊಂದು ಚಿತ್ರವನ್ನೀಗ ಒಪ್ಪಿಕೊಂಡಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ.

    ವರ್ಷಗಳ ಹಿಂದೆ ದರ್ಶನ್ ಅಭಿನಯ ತಾರಕ್ ಚಿತ್ರ ತೆರೆ ಕಂಡಿತ್ತು. ಆ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಮಿಲನ ಪ್ರಕಾಶ್. ಆ ಕಾಲಕ್ಕೆ ದರ್ಶನ್ ಪಕ್ಕಾ ಮಾಸ್ ಚಿತ್ರಗಳತ್ತಲೇ ಹೆಚ್ಚಾಗಿ ಒತ್ತು ನೀಡಿದ್ದರು. ಅಂಥಾ ಹೊತ್ತಿನಲ್ಲಿಯೇ ದರ್ಶನ್ ಅಭಿಮಾನಿಗಳು ಬಹುಕಾಲದಿಂದ ಕಾಯುತ್ತಿದ್ದ ಫ್ಯಾಮಿಲಿ ಸಬ್ಜೆಕ್ಟಿನ ಕಥೆಯೊಂದಿಗೆ ಪ್ರಕಾಶ್ ಮೋಡಿ ಮಾಡಿದ್ದರು. ಈ ಫ್ಯಾಮಿಲಿ ಎಂಟರ್ ಟೈನರ್ ಚಿತ್ರ ಸೂಪರ್ ಹಿಟ್ ಆಗಿತ್ತು. ಅದರಲ್ಲಿನ ದರ್ಶನ್ ನಟನೆಯಂತೂ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿತ್ತು. ಹೀಗೆ ಹಿಟ್ ಸಿನಿಮಾ ನಿರ್ದೇಶನ ಮಾಡಿದ್ದ ಪ್ರಕಾಶ್ ದರ್ಶನ್ ಅವರ ಮತ್ತೊಂದು ಚಿತ್ರ ನಿರ್ದೇಶನ ಮಾಡೋದು ಗ್ಯಾರೆಂಟಿ ಎನ್ನಲಾಗುತ್ತಿದೆ.

    ಇದಕ್ಕೆ ದರ್ಶನ್ ಕಡೆಯಿಂದಲೇ ಒಪ್ಪಿಗೆ ಸಿಕ್ಕಿದೆಯಂತೆ. ಪ್ರಕಾಶ್ ಕೂಡಾ ಸಮರ್ಥ ತಂಡದೊಂದಿಗೆ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಲು ತಯಾರಾಗಿದ್ದಾರೆ. ಸದ್ಯದಲ್ಲಿಯೇ ಟೈಟಲ್ ಲಾಂಚ್ ಮಾಡಿ, ಈ ಚಿತ್ರವನ್ನು ಅಧಿಕೃತಗೊಳಿಸಿ ನಂತರ ಉಳಿದ ಕೆಲಸ ಮಾಡೋ ನಿರ್ಧಾರ ಅವರದ್ದು. ಹಾಗಂತ ಈ ಚಿತ್ರ ಈ ಕೂಡಲೇ ಶುರುವಾಗುತ್ತೆ ಅಂತೇನಲ್ಲ. ದರ್ಶನ್ ಈಗ ರಾಬರ್ಟ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಾದ ನಂತರ ಒಡೆಯ ಮತ್ತು ವೀರ ಮದಕರಿ ನಾಯಕ ಚಿತ್ರಗಳು ಅವರಿಗಾಗಿ ಕಾದಿವೆ. ಇದಾದ ನಂತರ ಮಿಲನ ಪ್ರಕಾಶ್ ನಿರ್ದೇಶನದ ಚಿತ್ರ ಶುರುವಾಗಲಿದೆಯಂತೆ.

  • ಬೆಂಗಳೂರಲ್ಲಿ ಕಾಂಗ್ರೆಸ್ ಮುಖಂಡ ನೇಣಿಗೆ ಶರಣು

    ಬೆಂಗಳೂರಲ್ಲಿ ಕಾಂಗ್ರೆಸ್ ಮುಖಂಡ ನೇಣಿಗೆ ಶರಣು

    ಬೆಂಗಳೂರು: ಕಾಂಗ್ರೆಸ್ ಮುಖಂಡ ನೇಣಿಗೆ ಶರಣಾದ ಘಟನೆಯೊಂದು ಬೆಂಗಳೂರಿನ ಯಲಹಂಕ ನ್ಯೂಟೌನ್‍ನಲ್ಲಿ ನಡೆದಿದೆ.

    ವೀರಣ ಗೌಡ(50) ಆತ್ಮಹತ್ಯೆ ಮಾಡಿಕೊಂಡ ಮುಖಂಡ. ವೀರಣ್ಣ ಗೌಡ ಅವರು ಮೂಲತಃ ಹೆಸರುಘಟ್ಟ ನಿವಾಸಿಯಾಗಿದ್ದು, ಮಂಗಳವಾರ ರಾತ್ರಿ 7:30ರ ಸುಮಾರಿಗೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಹಲವು ವರ್ಷಗಳಿಂದ ವೀರಣ್ಣ ಗೌಡ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ ವೀರಣ್ಣ ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಹಾಗೂ ಉದ್ಯಮಿ ಆಗಿದ್ದರು. ವೀರಣ್ಣ ಅವರು ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.

    ಈ ಬಗ್ಗೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೆ ಬಿಜೆಪಿ ಮುಖಂಡ ಬಲಿ

    ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೆ ಬಿಜೆಪಿ ಮುಖಂಡ ಬಲಿ

    – ನಾಲ್ವರು ಆಸ್ಪತ್ರೆಗೆ ದಾಖಲು

    ಕೋಲಾರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ನಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಿಜೆಪಿ ಮುಖಂಡ ಉಸಿರುಗಟ್ಟಿ ಸಾವನ್ನಪ್ಪಿದ್ರೆ, ಮನೆಯಲ್ಲಿದ್ದ ಉಳಿದ ನಾಲ್ಕು ಜನ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆ ಪಾಲಾಗಿದ್ದಾರೆ.

    ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮನೆಯಲ್ಲಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಎಸ್. ನಾಗಪ್ರಕಾಶ್(58) ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಬಜಾರ್ ರಸ್ತೆಯಲ್ಲಿಂದು ಮುಂಜಾನೆ ಈ ಘಟನೆ ನಡೆದಿದೆ.

    ಮನೆಯಲ್ಲಿದ್ದ ಶೋಭ, ಸ್ವರೂಪ್, ಹಾಗೂ ಸತ್ಯನಾರಾಯಣ ಎಂಬವರು ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ದುರ್ಘಟನೆ ಮುಂಜಾನೆ ನಡೆದಿದ್ದರಿಂದ ನಾಗಪ್ರಕಾಶ್ ಉಸಿರುಗಟ್ಟಿ ಹೃದಯಾಘಾತವಾಗಿರಬಹುದು ಎನ್ನಲಾಗಿದೆ. ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.

    ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ವಿಜಯಪುರದ ಕಾಂಗ್ರೆಸ್ ಮುಖಂಡೆಯ ಬರ್ಬರ ಹತ್ಯೆ!

    ವಿಜಯಪುರದ ಕಾಂಗ್ರೆಸ್ ಮುಖಂಡೆಯ ಬರ್ಬರ ಹತ್ಯೆ!

    ವಿಜಯಪುರ: ಜೆಡಿಎಸ್‍ನ ಮಾಜಿ ಜಿಲ್ಲಾಧ್ಯಕ್ಷೆ ಹಾಗೂ ಹಾಲಿ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಶವ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕೋಲ್ಹಾರ ಬಳಿಯ ಕೃಷ್ಣಾ ನದಿಯಲ್ಲಿ ಪತ್ತೆಯಾಗಿದೆ.

    ಕಳೆದ ರಾತ್ರಿ ದುಷ್ಕರ್ಮಿಗಳು ಕೊಲೆ ಮಾಡಿ ಬಿಸಾಕಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗುರುವಾರ ರಾತ್ರಿ ನೆರೆಯ ಮಹಾರಾಷ್ಟ್ರದ ಎಂಐಎಂ ಮುಖಂಡನೊಬ್ಬನೊಂದಿಗೆ ಕಾರ್ ನಲ್ಲಿ ತೆರಳಿದ್ದರು ಎಂದು ಶಂಕಿಸಲಾಗಿದೆ.

    ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ನಿಂದ ದೇವರಹಿಪ್ಪರಗಿ ಮತಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅಲ್ಲದೆ 2013ರಲ್ಲಿ ದೇವರ ಹಿಪ್ಪರಗಿ ಕ್ಷೇತ್ರದಿಂದ ಜೆಡಿಎಸ್ ನಿಂದ ರೇಷ್ಮಾ ಪಡೇಕನೂರ ಸ್ಪರ್ಧಿಸಿ ಸೋಲು ಕಂಡಿದ್ದರು.

    ಕೋಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮಂಡ್ಯದವರನ್ನು ದಡ್ಡರನ್ನಾಗಿ ಮಾಡ್ಬೇಡಿ, ಮುದಿ ಎತ್ತುಗಳನ್ನು ಸಂತೆಗೆ ಕಳಿಸ್ತೀವಿ: ಸಿಎಂಗೆ ಟಾಂಗ್ ವಿಡಿಯೋ

    ಮಂಡ್ಯದವರನ್ನು ದಡ್ಡರನ್ನಾಗಿ ಮಾಡ್ಬೇಡಿ, ಮುದಿ ಎತ್ತುಗಳನ್ನು ಸಂತೆಗೆ ಕಳಿಸ್ತೀವಿ: ಸಿಎಂಗೆ ಟಾಂಗ್ ವಿಡಿಯೋ

    ಮಂಡ್ಯ: ದರ್ಶನ್ ಹಾಗೂ ಯಶ್ ಜೋಡೆತ್ತಲ್ಲ ನಾನು, ಡಿಕೆಶಿ ಜೋಡೆತ್ತುಗಳು ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಕಾರ್ಯಕರ್ತ ವ್ಯಂಗ್ಯವಾಗಿ ಮಾತನಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಎರಡು ಎತ್ತುಗಳ ಮಧ್ಯೆ ನಿಂತು ಸಿಎಂ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಾವೂ ಒಂಟಿ ಒಂಟಿ ಎತ್ತುಗಳನ್ನು ಜೊತೆ ಹಾಕಿದ್ದೇವೆ, ಆದರೆ ಅವು ಕೂಡಲೇ ಇಲ್ಲ. ಒಂದು ಕನಕಪುರದ ಬಿಳಿ ಎತ್ತು, ಇನ್ನೊಂದು ಹಾಸನದ ಕರಿ ಎತ್ತು. ಕರಿ ಎತ್ತಿನ ಜೊತೆ ಸೇರಿ ಬಿಳಿ ಎತ್ತು ಹಾಳಾಗಿದೆ. ಕರಿ ಎತ್ತಿನ ಜೊತೆ ಸೇರಿ ಹಾಳಾಗಬೇಡ ಎಂದು ಬಿಳಿ ಎತ್ತಿಗೆ ಕಿವಿಮಾತು ಹೇಳಿದ್ದೇನೆ ಎಂದು ಕಾರ್ಯಕರ್ತ ವ್ಯಂಗ್ಯವಾಡಿದ್ದಾರೆ.

    ಅಲ್ಲದೆ ಮುದಿ ಎತ್ತುಗಳು ಕೆಲಸ ಮಾಡಲ್ಲ, ಮೇ 23ರಂದು ಈ ಮುದಿ ಎತ್ತುಗಳನ್ನು ಸಂತೆಗೆ ಕೊಟ್ಟು ಬಿಡುತ್ತೀವಿ. ಮಂಡ್ಯ ಜನರನ್ನು ದಡ್ಡರು ಮಾಡಬೇಡಿ. ಮುದಿ ಎತ್ತುಗಳನ್ನು ಮಂಡ್ಯ ಜನರು ಸಂತೆಗೆ ಕಳುಹಿಸಲಿದ್ದಾರೆ ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

    ಖಾಸಗಿ ಹೋಟೆಲ್‍ನಲ್ಲಿ ಸುಮಲತಾ ನಡೆಸಿದ ಸುದ್ದಿಗೋಷ್ಠಿ ವೇಳೆ, ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ ಎಂಬ ಕಿಚ್ಚ ಸುದೀಪ್ ಹೇಳಿಕೆಗೆ ದರ್ಶನ್ ಪ್ರತಿಕ್ರಿಯಿಸಿ, ನಾನೊಬ್ನೇ ಇಲ್ಲ. ನಮ್ ಹೀರೋ ಯಶ್ ಸಹಾ ಇದ್ದಾರೆ. ನಮ್ಮದು ಒಂಟಿ ಎತ್ತಲ್ಲ. ನಮ್ಮದು ಜೋಡಿ ಎತ್ತು. ಸುದೀಪ್ ಪ್ರಚಾರ ಮಾಡುವ ಬಗ್ಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು ಎಂದು ಪ್ರತಿಕ್ರಿಯಿಸಿದ್ದರು.

    ಸಿಎಂ ಕುಮಾರಸ್ವಾಮಿ ಒಹೋ ಇವು ಜೋಡೆತ್ತುಗಳಂತೆ, ಇವು ಉಳುವ ಎತ್ತುಗಳಲ್ಲ. ರೈತರು ಬೆಳೆದ ಪೈರನ್ನು ಅರ್ಧ ರಾತ್ರಿ ಹೋಗಿ ತಿನ್ನುವ ಎತ್ತುಗಳು. ಜಿಲ್ಲೆಯಲ್ಲಿ ಹಲವು ದುರಂತಗಳು ನಡೆದಾಗ ಎಲ್ಲಿದ್ದರು? ಅಮ್ಮನ ಮೇಲಿನ ಪ್ರೀತಿಯಿಂದ ಅವರನ್ನು ಉಳಿಸಲು ಬಂದಿದ್ದಾರಲ್ಲ. ಅಂದು ನಡೆದ ದುರಂತದಲ್ಲಿ ನೀರಲ್ಲಿ ಬಿದ್ದಿದ್ದ ಶವಗಳನ್ನು ತೆಗೆಯಲು ಅವರು ಬಂದಿದ್ದರ ಎಂದು ಪ್ರಶ್ನಿಸಿ ಸಿಎಂ ದರ್ಶನ್ ಮತ್ತು ಯಶ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

  • ಜೇಬಲ್ಲಿ ದುಡ್ಡಿಲ್ದೇ ದರ್ಶನ್ ಜನರ ಬಳಿ ತಿನ್ನೋಕೆ ಬರೋನು: ಜೆಡಿಎಸ್ ಮುಖಂಡ

    ಜೇಬಲ್ಲಿ ದುಡ್ಡಿಲ್ದೇ ದರ್ಶನ್ ಜನರ ಬಳಿ ತಿನ್ನೋಕೆ ಬರೋನು: ಜೆಡಿಎಸ್ ಮುಖಂಡ

    ಮಂಡ್ಯ: ನಟ ದರ್ಶನ್ ಜೇಬಲ್ಲಿ ದುಡ್ಡಿಲ್ಲದೆ ಜನರ ಬಳಿ ತಿನ್ನೋಕೆ ಬರೋನು ಎಂದು ಹೇಳುವ ಮೂಲಕ ಸುಮಲತಾ ಬೆಂಬಲಕ್ಕೆ ನಿಂತ ನಟರ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಎಂ. ಸಂತೋಷ್ ವಾಗ್ದಾಳಿ ನಡೆಸಿದ್ದಾರೆ.

    ಮಂಡ್ಯದಲ್ಲಿ ಚಿತ್ರ ನಟರ ವಿರುದ್ಧ ಜೆಡಿಎಸ್ ನಾಯಕರ ವಾಗ್ದಾಳಿ ಮುಂದುವರಿದಿದೆ. ಸುಮಲತಾ ಬೆಂಬಲಕ್ಕೆ ನಿಂತರುವ ದರ್ಶನ್ ವಿರುದ್ಧ ಜೆಡಿಎಸ್ ಮುಖಂಡರು ನಿಂದಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಮುಖಂಡರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ದರ್ಶನ್ ದನದ ಚಾಕಣ(ಸ್ಕಿನ್) ತಿಂತಿದ್ದ:
    ದರ್ಶನ್ ಜೇಬಲ್ಲಿ ದುಡ್ಡಿಲ್ಲದೆ ಜನರ ಬಳಿ ತಿನ್ನೋಕೆ ಬರೋನು. ಇವರ ಸಿನಿಮಾಗೆ ನಾವು ಹಣ ಕೊಡ್ತೀವಿ. ಅವರು ಎಲ್ಲೆಲ್ಲಿ ಏನೇನು ಕೆಲಸ ಮಾಡಿದ್ದಾರೆ. ದರ್ಶನ್ ಹೋಗಿ ಎಲ್ಲಿ ಚಾಕಣ ತಿಂತಿದ್ದ, ಯಾರಿಗೆ ಟೀ ತಂದು ಕೊಡ್ತಿದ್ದ ಎನ್ನುವುದು ಮೈಸೂರಿನ ಪಡುವಾರಳ್ಳಿ ಜನರಿಗೆ ಗೊತ್ತು. ನಾನು ಆ ಸಂದರ್ಭದಲ್ಲಿ ಎಲ್ ಎಲ್ ಬಿ ಓದುತ್ತಾ ಇದ್ದೆ. ಅವನ ಜೇಬಲ್ಲಿ ದುಡ್ಡಿಲ್ಲದೆ ದನದ ಮಾಂಸದ ಚಾಕಣ ತಿನ್ನೋಕೆ ಬರುತ್ತಿದ್ದನು. ನಿಜವಾಗಲೂ ಅದನ್ನೆಲ್ಲಾ ಹೇಳಬಾರದು ಎಂದು ಸಂತೋಷ್ ಅವರು ದರ್ಶನ್ ಹಾಗೂ ಯಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇದೇ ಕಾರ್ಯಕ್ರಮದಲ್ಲಿ ಮಾತನಾಡಿರುವ ಶಾಸಕ ರವೀಂದ್ರ ಶ್ರೀಕಂಠಯ್ಯ, ಅಂಬರೀಶ್ ಹಾಗೂ ಯಶ್ ವಿರುದ್ಧ ಹರಿಹಾಯ್ದಿದ್ದಾರೆ. “ಅಂಬರೀಶ್‍ಗೆ ಅನೇಕ ವರ್ಷಗಳ ಕಾಲ ಅಧಿಕಾರ ನೀಡಿದ್ದೆವು. ಆದರೆ ಜಿಲ್ಲೆಗೆ ಏನ್ ಮಾಡಿದ್ದಾರೆ. ಮೆಡಿಕಲ್ ಕಾಲೇಜು ಐದಾರು ಜನರ ಪ್ರಯತ್ನದಿಂದ ಬಂದಿರೋದೆ ಹೊರತು ಒಬ್ಬರ ಶ್ರಮದಿಂದಲ್ಲ. ಸಮಾಜನ ತಿಳಿ ಮಾಡಲು ಸಹಕರಿಸಬೇಕಾದ ಜನ ನೀವು. ನೀವುಗಳೇ ಜನರನ್ನ ತಪ್ಪುದಾರಿಗೆ ಎಳೆಯುವಂತೆ ನಡೆದುಕೊಳ್ಳುವುದು ಪ್ರಚೋದನೆ ಮಾಡುವುದು ನಿಮಗೆ ಸಿಂಧುವಲ್ಲ” ಎಂದು ಚಿತ್ರನಟರ ವಿರುದ್ಧ ಹರಿಹಾಯ್ದಿದ್ದಾರೆ.

  • ಚಲಿಸುತ್ತಿರುವ ರೈಲಿನಲ್ಲಿ ಬಿಜೆಪಿ ಮುಖಂಡನ ಕಗ್ಗೊಲೆ..!

    ಚಲಿಸುತ್ತಿರುವ ರೈಲಿನಲ್ಲಿ ಬಿಜೆಪಿ ಮುಖಂಡನ ಕಗ್ಗೊಲೆ..!

    ಅಹಮದಾಬಾದ್: ಹಿರಿಯ ಬಿಜೆಪಿ ಮುಖಂಡ, ಮಾಜಿ ಶಾಸಕ ಜಯಂತಿ ಭಾನುಶಾಲಿ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆಗೈದ ಘಟನೆ ಇಂದು ನಡೆದಿದೆ.

    ಈ ಘಟನೆ ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಭುಜ್- ದಾದರ್ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ. 53 ವರ್ಷದ ಭಾನುಶಾಲಿ ಅವರು ಗುಜರಾತ್ ನ ಕುಚ್ ಜಿಲ್ಲೆಯ ಭುಜ್ ನಿಂದ ಅಹಮದಾಬಾದ್ ನತ್ತ ರೈಲಿನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

    ಗಾಂಧಿಧಾಮ ಮತ್ತು ಸುರಜ್ಬಾರಿ ರೈಲು ನಿಲ್ದಾಣಗಳ ಮಧ್ಯದಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧೀಕ್ಷಕ ಕರಣ್ ರಾಜ್ ವಾಘೆಲಾ ತಿಳಿಸಿದ್ದಾರೆ.

    ಭುಜ್- ದಾದರ್ ಎಕ್ಸ್ ಪ್ರೆಸ್ ನ ರೈಲ್ವೇ ಅಧಿಕಾರಿಗಳು ಭಾನುಶಾಲಿ ಮೃತಪಟ್ಟಿರುವುದಾಗಿ ಮೊರ್ಬಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ರೈಲು ಮೊರ್ಬಿಯ ಮಲಿಯಾ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ರೈಲಿನಿಂದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯ ವೇಳೆ 2 ಗುಂಡುಗಳು ಪತ್ತೆಯಾಗಿವೆ ಎಂದು ಅವರು ವಿವರಿಸಿದ್ರು.

    ಸದ್ಯ ಭಾನುಶಾಲಿಗೆ ಹೊಡೆದ 2 ಗುಂಡುಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣ ಸಂಬಂಧ ರೈಲ್ವೇ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ ಅಂತ ವಾಘೇಲಾ ತಿಳಿಸಿದ್ದಾರೆ.

    ಅತ್ಯಾಚಾರ ಆರೋಪ ಎದುರಿಸುತ್ತಿದ್ದುದರಿಂದ ಭಾನುಶಾಲಿ ಅವರು ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಗುಜರಾತ್ ನ ಬಿಜೆಪಿ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಮಹಿಳೆ ದೂರನ್ನು ಹಿಂತೆಗೆದುಕೊಂಡಿದ್ದರಿಂದ ಗುಜರಾತ್ ಹೈಕೋರ್ಟ್ 2018ರ ಆಗಸ್ಟ್ ತಿಂಗಳಲ್ಲಿ ಈ ಪ್ರಕರಣವನ್ನು ಕೈಬಿಟ್ಟಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv