Tag: LBW

  • ಚೆನ್ನೈ ಎಡವಟ್ಟಿನಿಂದ ಆರ್‌ಸಿಬಿಗೆ ಗೆಲುವು – ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ DRS

    ಚೆನ್ನೈ ಎಡವಟ್ಟಿನಿಂದ ಆರ್‌ಸಿಬಿಗೆ ಗೆಲುವು – ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ DRS

    ಬೆಂಗಳೂರು: ಶನಿವಾರ ರಾತ್ರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನ (CSK) ಡೆವಾಲ್ಡ್ ಬ್ರೆವಿಸ್ (Dewald Brevis) ಎಲ್‌ಬಿಡಬ್ಲ್ಯೂ (LBW) ತೀರ್ಪು ಈಗ ಚರ್ಚೆಗೆ ಗ್ರಾಸವಾಗಿದೆ.

    ಕೊನೆಯ 24 ಎಸೆತಗಳಲ್ಲಿ ಚೆನ್ನೈ ಗೆಲುವಿಗೆ 43 ರನ್‌ ಬೇಕಿತ್ತು. ಕ್ರೀಸ್‌ನಲ್ಲಿ ಜಡೇಜಾ (Ravindra Jadeja) ಮತ್ತು ​ ಆಯುಷ್ ಮ್ಹಾತ್ರೆ ಇದ್ದರು. ಎರಡನೇ ಎಸೆತದಲ್ಲಿ ​ ಆಯುಷ್ ಮ್ಹಾತ್ರೆ ಕ್ಯಾಚ್‌ ನೀಡಿ ಔಟಾದರು. ಮೂರನೇ ಎಸೆತದಲ್ಲಿ ಕ್ರೀಸಿಗೆ ಬಂದ ಬ್ರೆವಿಸ್ ಪ್ಯಾಡ್‌ಗೆ ಬಾಲ್ ಬಡಿಯಿತು.

    ಎನ್‌ಗಿಡಿ ಮನವಿಯ ಬೆನ್ನಲ್ಲೇ ಅಂಪೈರ್‌ ಔಟ್‌ ತೀರ್ಪು ನೀಡಿದರು. ಬಾಲ್‌ ಹಿಂದಕ್ಕೆ ಹೋದ ಕಾರಣ ಬ್ರೆವಿಸ್‌ ಮತ್ತು ಜಡೇಜಾ ರನ್‌ ಓಡಿದರು. ಇದನ್ನೂ ಓದಿ: IPL 2025 | ಆರ್‌ಸಿಬಿಗೆ 2 ರನ್‌ಗಳ ರೋಚಕ ಜಯ – 16 ವರ್ಷಗಳ ಬಳಿಕ ಹೊಸ ಮೈಲುಗಲ್ಲು

     

    ರನ್‌ ಓಡಿದ ನಂತರ ರಿವ್ಯೂ ಪರಿಶೀಲನೆಗೆ ಮನವಿ ಮಾಡಿದರು. ಆದರೆ ಅಂಪೈರ್‌ ಈ ಮನವಿಯನ್ನು ಪುರಸ್ಕರಿಸಲಿಲ್ಲ. ಈ ವಿಚಾರಕ್ಕೆ ಜಡೇಜಾ ಅಂಪೈರ್‌ ಬಳಿ, ಯಾಕೆ ರಿವ್ಯೂ ಪರಿಶೀಲನೆ ಮಾಡಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಅಂಪೈರ್‌ 15 ಸೆಕೆಂಡ್‌ ಒಳಗಡೆ ಕೇಳದ ಕಾರಣ ಮನವಿ ಪುರಸ್ಕರಿಸುವುದಿಲ್ಲ ಎಂದು ತಿಳಿಸಿದರು. ಕೊನೆಗೆ ಅಸಮಾಧಾನದಿಂದ ಬ್ರೆವಿಸ್‌ ಪೆವಿಲಿಯನ್‌ ಕಡೆಗೆ ಹೆಜ್ಜೆ ಹಾಕಿದರು.

    ರಿಪ್ಲೈಯಲ್ಲಿ ಬಾಲ್‌ ವಿಕೆಟ್‌ಗೆ ತಾಗದೇ ಲೆಗ್‌ ಸೈಡ್‌ಗೆ ಹೋಗುತ್ತಿತ್ತು. ಒಂದು ವೇಳೆ ರನ್‌ ಓಡದೇ ಡಿಆರ್‌ಎಸ್‌ (DRS) ತೆಗೆದುಕೊಂಡಿದ್ದರೆ ಬ್ರೆವಿಸ್‌ ನಾಟೌಟ್‌ ಆಗುತ್ತಿದ್ದರು. ಬ್ರೆವಿಸ್‌ ಔಟಾಗದೇ ಇದ್ದರೆ ಪಂದ್ಯದ ಫಲಿತಾಂಶ ಬದಲಾಗುವ ಸಾಧ್ಯತೆ ಇತ್ತು.

     

     

     

    ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ರೋಚಕ 2 ರನ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 5 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿತು. ಕಠಿಣ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ 5 ವಿಕೆಟ್‌ ನಷ್ಟಕ್ಕೆ 211 ರನ್‌ ಹೊಡೆದು ರೋಚಕ ಸೋಲನ್ನು ಅನುಭವಿಸಿತು.

    ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ಇಲ್ಲಿಯವರೆಗೆ ಒಂದೇ ಆವೃತ್ತಿಯಲ್ಲಿ ಎರಡು ಬಾರಿ ಚೆನ್ನೈ ವಿರುದ್ಧ ಗೆಲುವು ಸಾಧಿಸಿರಲಿಲ್ಲ. ಮಾರ್ಚ್‌ 28 ರಂದು ನಡೆದ ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆರ್‌ಸಿಬಿ 50 ರನ್‌ಗಳ ಜಯ ಸಾಧಿಸಿತ್ತು. ಆರ್‌ಸಿಬಿ 7 ವಿಕೆಟ್‌ ನಷ್ಟಕ್ಕೆ 196 ರನ್‌ ಹೊಡೆದರೆ ಚೆನ್ನೈ 8 ವಿಕೆಟ್‌ ನಷ್ಟಕ್ಕೆ 146 ರನ್‌ ಹೊಡೆದಿತ್ತು.

  • IPL 2025 | ಧೋನಿ ವಿವಾದಾತ್ಮಕ ಔಟ್‌ ತೀರ್ಪು – ಮತ್ತೆ ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು

    IPL 2025 | ಧೋನಿ ವಿವಾದಾತ್ಮಕ ಔಟ್‌ ತೀರ್ಪು – ಮತ್ತೆ ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು

    ಚೆನ್ನೈ: ಇಲ್ಲಿನ ಚೆಪಾಕ್‌ ಮೈದಾನದಲ್ಲಿ ಶುಕ್ರವಾರ ನಡೆದ ಸಿಎಸ್‌ಕೆ vs ಕೆಕೆಆರ್‌ ನಡುವಿನ ಪಂದ್ಯದಲ್ಲಿ ಕ್ಯಾಪ್ಟನ್‌ ಎಂ.ಎಸ್‌ ಧೋನಿ (MS Dhoni) ಅವರ ಎಲ್‌ಬಿಡ್‌ಬ್ಲ್ಯೂ ಔಟ್‌ (LBW Out) ತೀರ್ಪು ಈಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಸೋಷಿಯಲ್‌ ಮೀಡಿಯಾದಲ್ಲಿ ನಡೆಯುತ್ತಿರುವ ಪರ-ವಿರೋಧ ಚರ್ಚೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಆರೋಪಗಳೂ ಕೇಳಿಬಂದಿವೆ.

    ಹೌದು. ಕೋಲ್ಕತ್ತಾ ನೈಟ್‌ರೈಡರ್ಸ್‌ (KKR) ವಿರುದ್ಧ ಶುಕ್ರವಾರ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಚೆನ್ನೈ ಕೆಡ್ಡ ದಾಖಲೆಯೊಂದನ್ನ ಹೆಗಲಿಗೇರಿಸಿಕೊಂಡಿತು. ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ತವರು ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್‌ ಸೋಲು ಹಾಗೂ ಸತತ 5ನೇ ಸೋಲು ಅನುಭವಿಸಿದ ಕೆಟ್ಟ ದಾಖಲೆಗೆ ಸಿಎಸ್‌ಕೆ ಪಾತ್ರವಾಯಿತು. ಆದ್ರೆ ಈ ಪಂದ್ಯದಲ್ಲಿ ಎಂ.ಎಸ್‌ ಧೋನಿ ಅವರ ಎಲ್‌ಬಿಡಬ್ಲ್ಯೂ ಔಟ್‌ ತೀರ್ಪು ಈಗ ವಿವಾದ ಎಬ್ಬಿಸಿದೆ.

    ಹೌದು, ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಧೋನಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲು ಬಂದಿದ್ದರು. ಸುನೀಲ್ ನರೈನ್ ಅವರ ಎಸೆತದಲ್ಲಿ ಎಲ್‌ಬಿಡಬ್ಲೂ ವಿಕೆಟ್ ಒಪ್ಪಿಸಿದರು. ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಧೋನಿ ತಕ್ಷಣವೇ 3ನೇ ಅಂಪೈರ್‌ ರಿವ್ಯೂ ಪಡೆದುಕೊಂಡರು. ಅಲ್ಟ್ರಾಎಡ್ಜ್‌ನಲ್ಲಿ ಸಣ್ಣ ಸ್ಪೈಕ್‌ಗಳು ಕಂಡುಬಂದರೂ, 3ನೇ ಅಂಪೈರ್ ಔಟ್‌ (Third Umpire) ಎಂದೇ ತೀರ್ಪು ನೀಡಿದರು.

    ಅಲ್ಟ್ರಾ ಎಡ್ಜ್‌ನಲ್ಲಿ ಕಂಡುಬಂದಂತೆ ಚೆಂಡು ಧೋನಿ ಅವರ ಪ್ಯಾಡ್‌ಗೆ ಬಡಿಯುವುದಕ್ಕೂ ಮುನ್ನ ಕೊಂಚ ಬ್ಯಾಟ್‌ಗೆ ತಗುಲಿದೆ ಎಂದು ಕೆಲವರು ವಾದಿಸುತ್ತಿದ್ದಾರೆ. ಕಾಮೆಂಟೇಟರ್‌ ಆಕಾಶ್‌ ಚೋಪ್ರಾ ಸಹ ಎರಡು ಮೂರು ಬಾರಿ ಇದನ್ನ ಹೇಳಿದ್ದರು. ಧೋನಿ ಅವರದ್ದು ನಾಟೌಟ್‌ ಆಗಿತ್ತು. 3ನೇ ಅಂಪೈರ್‌ ಈ ಸ್ಟ್ರೈಕ್‌ಗಳನ್ನು ಗುರುತಿಸಿಯೂ ಔಟ್‌ ಎಂದು ತೀರ್ಪು ನೀಡಿದ್ದು ಹೇಗೆ? ಎಂಬೆಲ್ಲಾ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕೇಳಲಾಗುತ್ತಿದೆ.

    ಇನ್ನೂ ಕೆಲವರು ಐಪಿಎಲ್‌ ಪಂದ್ಯಗಳು ಮೊದಲೇ ಫಿಕ್ಸ್‌ ಆಗಿರುತ್ತವೆ ಎಂಬುದಕ್ಕೆ ಧೋನಿ ಅವರ ವಿವಾದಾತ್ಮಕ ಔಟ್‌ ತೀರ್ಪು ಸಾಕ್ಷಿ ಎಂದು ಕೆಲವರು ಟೀಕಿಸಿದ್ರೆ, ಇನ್ನೂ ಕೆಲವರು ಆನ್‌ಫೀಲ್ಡ್‌ ಮತ್ತು ಟಿವಿ ಅಂಪೈರ್‌ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

  • ಅಂಪೈರ್ಸ್ ಕಾಲ್ ನಿಯಮ ಮುಂದುವರಿಕೆ – ಡಿಆರ್‍ಎಸ್‍ನಲ್ಲಿ 3 ಬದಲಾವಣೆಗೆ ಒಪ್ಪಿಗೆ

    ಅಂಪೈರ್ಸ್ ಕಾಲ್ ನಿಯಮ ಮುಂದುವರಿಕೆ – ಡಿಆರ್‍ಎಸ್‍ನಲ್ಲಿ 3 ಬದಲಾವಣೆಗೆ ಒಪ್ಪಿಗೆ

    – ಐಸಿಸಿ ಸಭೆಯಲ್ಲಿ ಗಂಭೀರ ಚರ್ಚೆ
    – ನಿಯಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೊಹ್ಲಿ

    ದುಬೈ: ಬಹಳ ಚರ್ಚೆಗೆ ಗ್ರಾಸವಾಗಿರುವ ಅಂಪೈರ್ಸ್ ಕಾಲ್ ನಿಯಮವನ್ನು ರದ್ದು ಮಾಡದೇ ಇರಲು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ನಿರ್ಧಾರ ತೆಗೆದುಕೊಂಡಿದೆ. ಆದರೆ ಈಗ ಅನುಸರಿಸುತ್ತಿರುವ ಡಿಆರ್‍ಎಸ್‍ನಲ್ಲಿ ಕೆಲ ಬದಲಾವಣೆ ಮಾಡಲು ಒಪ್ಪಿಗೆ ನೀಡಿದೆ.

    ಇಂಗ್ಲೆಂಡ್ ಜೊತೆಗಿನ ಕ್ರಿಕೆಟ್ ಸರಣಿ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕ ಅಂಪೈರ್ಸ್ ಕಾಲ್‍ನಲ್ಲಿ ಗೊಂದಲಗಳಿವೆ ಎಂದು ಹೇಳಿದ್ದರು. ಇದಕ್ಕೆ ಕೆಲ ಕ್ರಿಕೆಟಿಗರು ಸಹ ಬೆಂಬಲ ಸೂಚಿಸಿದ್ದ ಬಳಿಕ ಈ ನಿಯಮ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ಡೇವಿಡ್‌ ವಾರ್ನರ್‌ ಔಟ್‌? ನಾಟೌಟ್?‌ – ಚರ್ಚೆಗೆ ಗ್ರಾಸವಾದ ಮೂರನೇ ಅಂಪೈರ್‌ ನಿರ್ಧಾರ

    ಕೊಹ್ಲಿ ಹೇಳಿದ್ದು ಏನು?
    ಹಾಲಿ ನಿಯಮದ ಪ್ರಕಾರ ಎಲ್‍ಬಿಡಬ್ಲ್ಯೂ ಸಂದರ್ಭದಲ್ಲಿ ಅಂಪೈರ್ ನೀಡಿದ ನಾಟೌಟ್ ತೀರ್ಪನ್ನು ಪ್ರಶ್ನಿಸಿ ಮೂರನೇ ಅಂಪೈರ್ ಔಟ್ ಎಂಬ ತೀರ್ಮಾನಕ್ಕೆ ಬರಬೇಕಾದರೆ ಚೆಂಡಿನ ಅರ್ಧಕ್ಕಿಂತಲೂ(ಶೇ.50) ಹೆಚ್ಚಿನ ಭಾಗ ವಿಕೆಟಿಗೆ ತಾಗುವಂತಿರಬೇಕು. ಆದರೆ ಬಾಲ್ ವಿಕೆಟಿಗೆ ಸ್ವಲ್ಪವೇ  ಬಡಿಯುವಂತಿದ್ದರೂ ಔಟ್ ಕೊಡಬೇಕು ಎಂದು ವಿರಾಟ್ ಕೊಹ್ಲಿ ವಾದಿಸಿದ್ದರು.

    ಮೂರು ಬದಲಾವಣೆ
    1. ಈಗ ಡಿಆರ್‍ಎಸ್‍ಗೆ 3 ಸಣ್ಣ ಬದಲಾವಣೆಗಳನ್ನು ತರಲು ಐಸಿಸಿ ಮುಂದಾಗಿದೆ. ಹಾಲಿ ನಿಯಮದ ಪ್ರಕಾರ ಎಲ್‍ಬಿಡಬ್ಲ್ಯುಗೆ ಸಂಬಂಧಿಸಿದಂತೆ ಡಿಆರ್‍ಎಸ್ ತೆಗೆದುಕೊಳ್ಳುವಾಗ ಚೆಂಡು ಬೇಲ್ಸ್‌ನ ಕೆಳಭಾಗಕ್ಕೆ ಬಡಿಯುವಂತಿದ್ದರೆ ಆಗ ಅದು ಅಂಪೈರ್ಸ್ ಕಾಲ್ ವ್ಯಾಪ್ತಿಗೆ ಬರುತ್ತದೆ. ಆದರೆ ಈಗ ಚೆಂಡು ಬೇಲ್ಸ್ ಮೇಲ್ಭಾಗಕ್ಕೆ ಬಡಿಯುತ್ತದೆ ಎಂದು ಖಾತ್ರಿಯಾದರೂ ಅದನ್ನು ಅಂಪೈರ್ಸ್ ಕಾಲ್ ವ್ಯಾಪ್ತಿಗೆ ಸೇರಿಸಲು ಮುಂದಾಗಿದೆ. ಇದನ್ನೂ ಓದಿ: ಟೆಸ್ಟ್‌ ಚಾಂಪಿಯನ್‌ ಶಿಪ್‌ – ಐಸಿಸಿ ನಿಯಮದ ವಿರುದ್ಧ ಕೊಹ್ಲಿ ಕಿಡಿ ಕಾರಿದ್ದು ಯಾಕೆ?

    2. ಎಲ್‍ಬಿಡಬ್ಲ್ಯುಗೆ ಸಂಬಂಧಿಸಿ ಅಂಪೈರ್‌ಗೆ ಮನವಿ ಸಲ್ಲಿಸುವುದಕ್ಕೂ ಮೊದಲು ಬ್ಯಾಟ್ಸ್‌ಮನ್‌ ನಾನು ಹೊಡೆತಕ್ಕೆ ಮುಂದಾಗಿದ್ದೇನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಅವಕಾಶ ನೀಡಲಾಗಿದೆ.

    3. ಬ್ಯಾಟ್ಸ್‌ಮನ್‌ಗಳು ರನ್ ಓಡುವ ಸಂದರ್ಭದಲ್ಲಿ ಕ್ರೀಸ್ ಮುಟ್ಟಿದ್ದಾರೋ ಇಲ್ಲವೋ ಎನ್ನುವುದನ್ನು 3ನೇ ಅಂಪೈರ್ ಖಚಿತ ಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಒಂದು ವೇಳೆ ಓಡುವ ಭರದಲ್ಲಿ ಕ್ರೀಸ್‍ಮುಟ್ಟದೇ ಇದ್ದಾಗ 3ನೇ ಅಂಪೈರ್ ಫೀಲ್ಡ್ ಅಂಪೈರ್ ಜೊತೆ ಸಂವಹನ ನಡೆಸಿ ರನ್ ಕಡಿತಗೊಳಿಬಹುದಾಗಿದೆ.

    ಅಂಪೈರ್ಸ್ ಕಾಲ್ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು. ತಂತ್ರಜ್ಞಾನದಲ್ಲಿರುವ ಕೆಲ ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಅಂಪೈರ್ಸ್ ಕಾಲ್ ಜಾರಿಯಲ್ಲಿದೆ. ಇದರ ಜೊತೆ ಮೈದಾನದಲ್ಲಿರುವ ಅಂಪೈರ್‌ಗಳೇ ತೀರ್ಮಾನ ತೆಗೆದುಕೊಳ್ಳುವವರಾಗಿ ಮುಂದುವರಿಯಬೇಕು. ಈ ಕಾರಣಕ್ಕೆ ಅಂಪೈರ್ಸ್ ಕಾಲ್ ನಿರ್ಧಾರವನ್ನು ಮುಂದುವರಿಸಿರುವುದಾಗಿ ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.