Tag: laxmi hebbalkar

  • ರಾತ್ರಿ ನಿದ್ದೆ ಬರುತ್ತಿಲ್ಲ, ಕಣ್ಣಲ್ಲಿ ನೀರು ಬರುತ್ತೆ, ತಾಯಿ ಕಷ್ಟ ನೋಡಿ ತಡೆದುಕೊಳ್ಳಲು ಆಗುತ್ತಿಲ್ಲ- ಹೆಬ್ಬಾಳ್ಕರ್ ಪುತ್ರ

    ರಾತ್ರಿ ನಿದ್ದೆ ಬರುತ್ತಿಲ್ಲ, ಕಣ್ಣಲ್ಲಿ ನೀರು ಬರುತ್ತೆ, ತಾಯಿ ಕಷ್ಟ ನೋಡಿ ತಡೆದುಕೊಳ್ಳಲು ಆಗುತ್ತಿಲ್ಲ- ಹೆಬ್ಬಾಳ್ಕರ್ ಪುತ್ರ

    ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಇಡಿ ಅಧಿಕಾರಿಗಳು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದು, ಈ ಕುರಿತು ಶಾಸಕಿ ಪುತ್ರ ಮೃಣಾಲ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

    ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದ ಕೆರೆ ಅಭಿವೃದ್ಧಿ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ನನ್ನ ತಾಯಿ ಕಷ್ಟ ನೋಡಿ ನನಗೆ ತಡೆದುಕೊಳ್ಳಲು ಆಗುತ್ತಿಲ್ಲ. ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ, ಕಣ್ಣಲ್ಲಿ ನೀರು ಬರುತ್ತವೆ ಎಂದು ಕ್ಷೇತ್ರದ ಮತದಾರರ ಮುಂದೆ ಮೃಣಾಲ್ ಅಳಲು ತೊಡಿಕೊಂಡಿದ್ದಾರೆ.

    ಯಾವುದೇ ಕಷ್ಟದಲ್ಲೂ ನನ್ನ ತಾಯಿ ಮುಖದಲ್ಲಿ ನಗು ಇರುತ್ತದೆ. ನನ್ನ ತಾಯಿಯ ಈ ಗುಣವನ್ನು ನಾವು ಕಲಿಯಬೇಕು. ನಿಮಗೆ ಕಾಲು ಮುಗಿದು ಕೇಳುತ್ತೇನೆ ನಿಮ್ಮ ಆಶೀರ್ವಾದ ನಮ್ಮ ತಾಯಿಯ ಮೇಲೆ ಇರಲಿ. ನಿಮ್ಮ ಆಶೀರ್ವಾದ ಇದ್ದಷ್ಟು ಒಳ್ಳೆ ಕೆಲಸ ಕ್ಷೇತ್ರದಲ್ಲಿ ಮಾಡುತ್ತೇವೆ. ನನ್ನ ತಾಯಿ ಕಾರಣಾಂತರಗಳಿಂದ ಈ ಕಾರ್ಯಕ್ರಮಕ್ಕೆ ಬಂದಿಲ್ಲ. ತಾಯಿ ಕಾರ್ಯಕ್ರಮಕ್ಕೆ ಬಾರಲು ಸಾಧ್ಯವಾಗಿಲ್ಲ. ಹೀಗಾಗಿ ನಾನು ಬಂದಿದ್ದೇನೆ ಎಂದು ತಿಳಿಸಿದರು.

    ಶುಕ್ರವಾರವೂ ಸಹ ಇಡಿ ಅಧಿಕಾರಿಗಳ ಎದುರು 2ನೇ ದಿನ ವಿಚಾರಣೆಗೆ ಹಾಜರಾಗಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ 6 ಗಂಟೆಗಳ ವಿಚಾರಣೆ ಎದುರಿಸಿದ್ದರು. ಮಧ್ಯಾಹ್ನ 12 ಗಂಟೆ ವೇಳೆಗೆ ಇಡಿ ಕಚೇರಿಗೆ ತೆರಳಿದ್ದ ಅವರು, ನಗುಮುಖದೊಂದಿಗೆ ಕಂಡರು. ಆದರೆ ಗುರುವಾರ ವಿಚಾರಣೆಗೆ ತೆರಳಿದ್ದ ವೇಳೆ ಅವರ ಮುಖದಲ್ಲಿ ಆತಂಕ ಕಂಡು ಬಂದಿತ್ತು. ಗುರುವಾರ ವಿಚಾರಣೆ ಅಂತ್ಯವಾದ ಬಳಿಕ ಮತ್ತೆ ಶುಕ್ರವಾರ ವಿಚಾರಣೆಗೆ ಬರುವಂತೆ ಇಡಿ ಅಧಿಕಾರಿಗಳು ಸೂಚಿಸಿದ್ದರು.

    ಶುಕ್ರವಾರ ವಿಚಾರಣೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಹಲವು ದಾಖಲೆಗಳೊಂದಿಗೆ ಹಾಜರಾಗಿದ್ದರು. ಇಡಿ ಅಧಿಕಾರಿಗಳು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ದಾಖಲೆ ಸಮೇತ ಮಾಹಿತಿ ಪಡೆದಿದ್ದಾರೆ. ವಿಚಾರಣೆಯ ವೇಳೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಡೆಸಿರುವ ಆರ್ಥಿಕ ವ್ಯವಹಾರಗಳ ಬಗ್ಗೆ ಇಡಿ ಅಧಿಕಾರಿಗಳು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ವಿವಿಧ ಕಂಪನಿಗಳಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹೂಡಿಕೆ ಹಾಗೂ ಹೂಡಿಕೆ ಮಾಡಿರುವ ಹಣದ ಮೂಲದ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂಬ ಸಂಗತಿ ಮೂಲಗಳಿಂದ ಲಭಿಸಿದೆ.

    ವಿಚಾರಣೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ನಾಳೆ ಮತ್ತೆ ವಿಚಾರಣೆಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿಲ್ಲ. ಮುಂದೆ ವಿಚಾರಣೆ ಬರುವ ಬಗ್ಗೆ ಅಧಿಕಾರಿಗಳು ಏನು ಹೇಳಿಲ್ಲ. ಇಂದಿನ ವಿಚಾರಣೆ ವೇಳೆ ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು, ವಿಚಾರಣೆಗೆ ಸಹಕರಿಸಿದ್ದೇನೆ ಎಂದಿದ್ದರು.

    ಡಿಕೆ ಶಿವಕುಮಾರ್ ನನ್ನ ರಾಜಕೀಯ ಗುರು ಎಂದು ಹೇಳಿದ ಲಕ್ಷ್ಮಿ ಹೆಬ್ಬಾಳ್ಕರ್, ನನ್ನನ್ನು ರಾಜಕೀಯವಾಗಿ ಡಿಕೆಶಿ ಬೆಳೆಸಿದ್ದಾರೆ. ಆದರೆ ನನ್ನ ಮತ್ತು ಡಿಕೆಶಿ ಅವರ ನಡುವೆ ಯಾವುದೇ ಹಣ ವರ್ಗಾವಣೆ ನಡೆದಿಲ್ಲ. ನಮ್ಮ ನಡುವೆ ವ್ಯವಹಾರಿಕ ಸಂಬಂಧ ಇಲ್ಲ. ಈ ಕುರಿತು ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ದಾಖಲೆ ನೀಡಿ ಉತ್ತರಿಸಿದ್ದೇನೆ. ಈ ಸಂದರ್ಭ ವಿಚಾರಣೆಗೆ ಸಂಬಂಧ ಇಷ್ಟು ಮಾತ್ರ ಹೇಳಬಲ್ಲೆ ಎಂದು ತಿಳಿಸಿದ್ದರು.

  • ದೆಹಲಿ ಆಸ್ಪತ್ರೆಯಲ್ಲೇ ಕನಕಪುರ ಬಂಡೆಗೆ ಚಿಕಿತ್ಸೆ- ಇಡಿ ಮುಂದೆ ಲಕ್ಷ್ಮಿ ಹೆಬ್ಬಾಳ್ಕರ್

    ದೆಹಲಿ ಆಸ್ಪತ್ರೆಯಲ್ಲೇ ಕನಕಪುರ ಬಂಡೆಗೆ ಚಿಕಿತ್ಸೆ- ಇಡಿ ಮುಂದೆ ಲಕ್ಷ್ಮಿ ಹೆಬ್ಬಾಳ್ಕರ್

    ನವದೆಹಲಿ: ಇಡಿ ಬಂಧನದಲ್ಲಿರುವ ಮಾಜಿ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಇಂದು ಸಹ ಕೋರ್ಟಿನಲ್ಲಿ ನಡೀತಿರುವ ವಾದ-ಪ್ರತಿವಾದ ಇವತ್ತೂ ಮುಂದುವರಿಯಲಿದೆ. ಇತ್ತ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.

    ಬುಧವಾರ ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ಆದರೆ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ಹಾಜರಾಗಿರಲಿಲ್ಲ. ಹೀಗಾಗಿ ನ್ಯಾಯಾಧೀಶ ಅಜಯ್‍ಕುಮಾರ್ ಕುಹರ್ ವಿಚಾರಣೆಯನ್ನ ಇವತ್ತಿಗೆ ಮುಂದೂಡಿದ್ದಾರೆ. ಜಾಮೀನು ಕೋರಿ ಡಿಕೆಶಿ ಪರ ವಕೀಲರ ವಾದಕ್ಕೆ ಇಡಿ ವಕೀಲರು ಪ್ರತಿವಾದ ಮಂಡಿಸಬೇಕಿದೆ.

    ಒಂದು ವೇಳೆ ಇವತ್ತೂ ವಾದ-ಪ್ರತಿವಾದ ಮುಂದುವರಿಯಬಹುದು ಅಥವಾ ವಾದ-ಪ್ರತಿವಾದ ಮುಗಿದು ಇವತ್ತೇ ಡಿಕೆಶಿಗೆ ಜಾಮೀನು ನೀಡಬಹುದು ಇಲ್ಲವೇ ಜಾಮೀನು ಅರ್ಜಿ ತಿರಸ್ಕರಿಸಬಹುದು ಅಥವಾ ಆದೇಶವನ್ನ ಕಾಯ್ದಿರಿಸಬಹುದು. ಈಗಾಗಲೇ ಡಿಕೆಶಿವಕುಮಾರ್ ಅವರನ್ನ ಅಕ್ಟೋಬರ್ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.

    ಶನಿವಾರದಿಂದ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಯಲ್ಲೇ ಇರುವ ಡಿಕೆ ಶಿವಕುಮಾರ್ ಆರೋಗ್ಯ ಸುಧಾರಿಸಿಲ್ಲ. ರಕ್ತದೊತ್ತಡ, ಎದೆನೋವು, ಕೆಮ್ಮು ಕಾರಣದಿಂದ ಹೃದ್ರೋಗ ತೀವ್ರ ನಿಗಾ ಘಟಕದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ವೇಳೆ ಆರೋಗ್ಯ ಸುಧಾರಿಸಿದರೆ ಇವತ್ತೇ ತಿಹಾರ್ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆಗಳಿವೆ.

    ಅತ್ತ ಡಿಕೆ ಶಿವಕುಮಾರ್ ಜಾಮೀನಿಗಾಗಿ ಒದ್ದಾಡುತ್ತಿದ್ರೆ ಇತ್ತ ಇವತ್ತು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಇಡಿ ಎದುರು ವಿಚಾರಣೆಗೆ ಹಾಜರಾಗಬೇಕಿದೆ. ಸಾಕ್ಷಿಯಾಗಿ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಲಾಗಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ಚನ್ನರಾಜು ಮೂಲಕ ಡಿಕೆಶಿ ಬೇನಾಮಿ ಹೂಡಿಕೆ ಮಾಡಿದ್ದಾರೆ ಅನ್ನೋ ಗುಮಾನಿ ಇಡಿಯದ್ದು. ಸಾಕ್ಷಿಯಾಗಿ ಪರಿಗಣಿಸಿರುವ ಕಾರಣ ತಮ್ಮ ರಾಜಕೀಯ ಗುರುವಿನ ವಿರುದ್ಧವೇ ಬೆಳಗಾವಿ ಗ್ರಾಮೀಣ ಶಾಸಕಿ ಸಾಕ್ಷ್ಯ ಹೇಳ್ತಾರಾ ಅನ್ನೋದು ಕುತೂಹಲ ಸೃಷ್ಟಿಸಿದೆ.

  • ಡಿಕೆಶಿ ನಮ್ಗೆ ರಾಜಕೀಯ ಮಾರ್ಗದರ್ಶಕರು, ಯಾವುದೇ ವ್ಯವಹಾರವಿಲ್ಲ: ಹೆಬ್ಬಾಳ್ಕರ್ ಸೋದರ

    ಡಿಕೆಶಿ ನಮ್ಗೆ ರಾಜಕೀಯ ಮಾರ್ಗದರ್ಶಕರು, ಯಾವುದೇ ವ್ಯವಹಾರವಿಲ್ಲ: ಹೆಬ್ಬಾಳ್ಕರ್ ಸೋದರ

    ಬೆಳಗಾವಿ: ನಮಗೆ ಯಾವುದೇ ನೋಟಿಸ್ ಬಂದಿಲ್ಲ. ಅಕ್ಕ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಮನ್ಸ್ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ್ದು, ಗುರುವಾರ ದೆಹಲಿಯಲ್ಲಿ ಇಡಿ ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ. ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಕೇಳಿ ಬರುತ್ತಿದೆ ಎಂಬುವುದು ಗೊತ್ತಾಗುತ್ತಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸೋದರ ಚನ್ನರಾಜು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    2017 ಜನವರಿಯಲ್ಲಿ ಐಟಿ ಅಧಿಕಾರಿಗಳು ನಮ್ಮ ಮನೆ, ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದರು. ಅಂದು ಅಧಿಕಾರಿಗಳಿಗೆ ಯಾವುದೇ ರೀತಿಯ ಅಕ್ರಮ ಆಸ್ತಿಯ ಬಗ್ಗೆ ದಾಖಲೆಗಳು ಲಭ್ಯವಾಗಿಲ್ಲ. ನಮ್ಮ ಎಲ್ಲ ವ್ಯವಹಾರಗಳು ಸ್ಪಷ್ಟವಾಗಿವೆ. ಡಿಕೆ ಶಿವಕುಮಾರ್ ರಾಜ್ಯಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ರಾಜ್ಯದ ಬಹುತೇಕ ಕಾರ್ಯಕರ್ತರಿಗೆ ರಾಜಕೀಯವಾಗಿ ಮೇಲೆ ಬರಲು ಸಹಾಯ ಮಾಡಿದ್ದಾರೆ. ಹಾಗೆಯೇ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ರಾಜಕೀಯವಾಗಿ ಸಹಾಯ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ರಾಜಕೀಯವಾಗಿ ನಮ್ಮ ಮಾರ್ಗದರ್ಶಕರು. ಆದ್ರೆ ನಮ್ಮ ಕುಟುಂಬ ಡಿ.ಕೆ.ಶಿವಕುಮಾರ್ ಜೊತೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳನ್ನು ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

    ಇಂಡೋನೇಷಿಯಾದಲ್ಲಿ ಕಲ್ಲಿದ್ದಲು ವ್ಯವಹಾರ ಮಾಡುತ್ತಿದ್ದೇನೆ. ಬಳ್ಳಾರಿಯಲ್ಲಿ ಸೋಲಾರ್ ಪವರ್ ವ್ಯವಹಾರವಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾದದ್ದು, ದಯವಿಟ್ಟು ಆಧಾರ ರಹಿತ ಆರೋಪಗಳನ್ನು ಮಾಡಬೇಡಿ. ಕಾಲ್ಪನಿಕವಾಗಿ ಸುದ್ದಿ ಮಾಡುವ ಮೊದಲು ನಮ್ಮಿಂದ ಸ್ಪಷ್ಟನೆ ಪಡೆದುಕೊಳ್ಳಿ ಎಂದು ಮನವಿ ಮಾಡಿಕೊಂಡರು.

    ಇಡಿ ಇಲಾಖೆಯ ಸುಮಾರು 184 ಜನರಿಗೆ ಸಮನ್ಸ್ ನೀಡಿದ್ದಾರೆ. ಕೇವಲ ನಮಗೆ ಮಾತ್ರ ಸಮನ್ಸ್ ನೀಡಿಲ್ಲ. 184ರಲ್ಲಿ ನಮ್ಮನ್ನು ಸಹ ಕರೆದಿದ್ದಾರೆ. ವಿಚಾರಣೆಗೆ ಹಾಜರಾದ ಮೇಲೆ ಅಲ್ಲಿ ಏನು ನಡೆಯುತ್ತದೆ ಎಂಬ ವಿಷಯ ಅರ್ಥವಾಗುತ್ತದೆ. ವಿಚಾರಣೆಗೂ ಮೊದಲು ಕೇಳಿದ್ರೆ ನಮಗೆ ಏನು ಗೊತ್ತಾಗಬೇಕು. ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ. ವಿಚಾರಣೆಗೆ ಕರೆದಿದ್ದಾರೆ ಹೋಗುತ್ತೇವೆ. ಅಧಿಕಾರಿಗಳು ಕೇಳುವ ಪ್ರಶ್ನೆಗೆ ನಮಗೆ ಗೊತ್ತಿರುವಷ್ಟು ಮಾಹಿತಿಯನ್ನು ತಿಳಿಸುತ್ತೇವೆ. ವಿಚಾರಣೆಗೆ ನಮ್ಮಿಂದ ಯಾವುದೇ ತೊಂದರೆ ಆಗಲ್ಲ ಎಂದು ತಿಳಿಸಿದರು.

  • ನನ್ನ ಮತ್ತು ಡಿಕೆಶಿ ನಡುವೆ ಯಾವುದೇ ವ್ಯವಹಾರಗಳೂ ಇಲ್ಲ – ಲಕ್ಷ್ಮಿ ಹೆಬ್ಬಾಳ್ಕರ್

    ನನ್ನ ಮತ್ತು ಡಿಕೆಶಿ ನಡುವೆ ಯಾವುದೇ ವ್ಯವಹಾರಗಳೂ ಇಲ್ಲ – ಲಕ್ಷ್ಮಿ ಹೆಬ್ಬಾಳ್ಕರ್

    ಬೆಂಗಳೂರು: ನನ್ನ ಮತ್ತು ಡಿಕೆ ಶಿವಕುಮಾರ್ ಅವರ ನಡುವೆ ಯಾವುದೇ ವ್ಯವಹಾರಗಳೂ ಇಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, 14 ನೇ ತಾರೀಕಿಗೆ ಬರುವಂತೆ ಇಡಿ ಸಮನ್ಸ್ ಕೊಟ್ಟಿದ್ದರು. ಆದರೆ 14 ಕ್ಕೆ ಬರುವಂತೆ ಸಾಧ್ಯವಿಲ್ಲ ಎಂದು ಹೇಳಿದ್ದೆ, ಹೀಗಾಗಿ ನಾಳೆ ಹೋಗುತ್ತಿದ್ದೇನೆ ಎಂದು ಹೇಳಿದರು.

    ಈ ವಿಚಾರದಲ್ಲಿ 180 ಜನರಿಗೆ ಕರೆದಿದ್ದಾರೆ, ಅದರಲ್ಲಿ ನನ್ನನ್ನೂ ಕರೆದಿದ್ದಾರೆ. ಯಾವ ವಿಚಾರಕ್ಕೆ ಕರೆದಿದ್ದಾರೆ ಎನ್ನುವುದು ಗೊತ್ತಿಲ್ಲ. ನಾನು ಬೆಂಗಳೂರಿನಲ್ಲಿ ವಿಚಾರಣೆಗೆ ಬರುತ್ತೇನೆ. ಇಲ್ಲವೇ ಬೆಳಗಾವಿಯಲ್ಲೇ ವಿಚಾರಣೆ ನಡೆಸಿ ಎಂದು ಕೇಳಿಕೊಂಡಿದ್ದೇನೆ. ಆದರೆ ಇನ್ನೂ ಇಡಿಯಿಂದ ಉತ್ತರ ಬಂದಿಲ್ಲ ಎಂದು ತಿಳಿಸಿದರು.

    ಇದೇ ವೇಳೆ ನನ್ನ ಮತ್ತು ಡಿಕೆ ಶಿವಕುಮಾರ್ ನಡುವೆ ಯಾವುದೇ ವ್ಯವಹಾರಗಳೂ ಇಲ್ಲ. ಹಾಗಿದ್ದರೂ ಯಾಕೆ ಕರೆದಿದ್ದಾರೆ ಎನ್ನುವುದು ವಿಚಾರಣೆಗೆ ಹಾಜರಾದ ಬಳಿಕ ಗೊತ್ತಾಗಬೇಕಷ್ಟೇ ಎಂದು ಹೇಳಿದರು. ಡಿಕೆ ಶಿವಕುಮಾರ್ ಅಕೌಂಟ್ ನಿಂದ ಹೆಬ್ಬಾಳ್ಕರ್‍ ಗೆ ಹಣ ವರ್ಗಾವಣೆ ಆಗಿರುವ ಬಗ್ಗೆ ಇಡಿಗೆ ದಾಖಲೆ ಲಭ್ಯವಾದ ಹಿನ್ನೆಲೆಯಲ್ಲಿ ಸಮನ್ಸ್ ಜಾರಿ ಮಾಡಿದೆ ಎನ್ನಲಾಗುತ್ತಿದೆ.

  • ಲಕ್ಷ್ಮಿ ಹೆಬ್ಬಾಳ್ಕರ್ ಸಂಸ್ಕಾರವಿಲ್ಲದ ರಾಜಕಾರಣಿ- ಶ್ರೀರಾಮುಲು

    ಲಕ್ಷ್ಮಿ ಹೆಬ್ಬಾಳ್ಕರ್ ಸಂಸ್ಕಾರವಿಲ್ಲದ ರಾಜಕಾರಣಿ- ಶ್ರೀರಾಮುಲು

    ವಿಜಯಪುರ: ಲಕ್ಷ್ಮಿ ಹೆಬ್ಬಾಳ್ಕರ್ ಸಂಸ್ಕಾರವಿಲ್ಲದ ರಾಜಕಾರಣಿ, ಪ್ರಚಾರಕ್ಕಾಗಿ ಹೇಳಿಕೆ ನೀಡುತ್ತಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆರೋಗ್ಯ ಸಚಿವ ಶ್ರೀರಾಮುಲು ಹರಿಹಾಯ್ದಿದ್ದಾರೆ.

    ಹೆಬ್ಬಾಳ್ಕರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಲಕ್ಷ್ಮಿ ಹೆಬ್ಬಾಳ್ಕರ್ ಸಂಸ್ಕಾರವಿಲ್ಲದ ರಾಜಕಾರಣಿ, ಪ್ರಚಾರಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿರುತ್ತಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮನೆಯಿಂದಲೇ ಮೊದಲು ಆತ್ಮಹತ್ಯೆ ಶುರುವಾಗಲಿ. ಅವರೇ ಮೊದಲು ಅದಕ್ಕೆ ಚಾಲನೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇಂದು ಬೆಳಗ್ಗೆ ಗೋಕಾಕ್‍ನಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೆರೆ ಸಂತ್ರಸ್ತರ ಭೇಟಿಗೆ ತೆರಳಿದಾಗ ಸಂಘದವರು ಯಾರಾದರೂ ಸಾಲ ವಸೂಲಾತಿಗೆ ಬಂದರೆ, ನೀವು ಸಾಲ ತುಂಬಬೇಡಿ ನಿಮ್ಮ ಹೆಸರು ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿರಿ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

    ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಸಂದರ್ಭಕ್ಕನುಗುಣವಾಗಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಾಗುತ್ತದೆ. ಯಾವುದೇ ಸ್ಥಾನಮಾನಗಳು ನಮಗೆ ಗೌರವ ತರುವುದಕ್ಕಿಂತ ಹೆಚ್ಚಾಗಿ ನಾವು ಮಾಡುವ ಕೆಲಸಗಳು ನಮ್ಮನ್ನು ಹೆಚ್ಚು ಗುರುತಿಸುವಂತೆ ಮಾಡುತ್ತವೆ ಎಂದು ಡಿಸಿಎಂ ಹುದ್ದೆ ತಪ್ಪಿರುವುದರ ಕುರಿತು ಸ್ಪಷ್ಟನೆ ನೀಡಿದರು.

    ಯಾವುದೇ ಗುರುಗಳು ತಮ್ಮ ಶಿಷ್ಯಂದಿರಿಗೆ ಒಳ್ಳೆಯದಾಗಲು ಬೇಡಿಕೆ ಇಡುವುದು ಸಾಮಾನ್ಯ, ಯಡಿಯೂರಪ್ಪನವರು ನಮ್ಮ ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಾರೆ ಎಂಬ ನಂಬಿಕೆ ಇದೆ. ನನಗೆ ಮುಂದೆ ದೊಡ್ಡ ಸ್ಥಾನ ಸಿಗಬಹುದು, ಹೀಗಾಗಿ ನಾನು ಯಾವುದೇ ಸ್ಥಾನಮಾನದ ಆಕಾಂಕ್ಷಿಯಲ್ಲ. ಈ ಹಿಂದೆ ನಾನು ಆರೋಗ್ಯ ಸಚಿವನಾಗಿ ಮಾಡಿದ ಕೆಲಸವನ್ನು ಗುರುತಿಸಿ ಈಗ ಮತ್ತೆ ಅದೇ ಕೆಲಸ ನೀಡಿದ್ದಾರೆ ಎಂದು ತಿಳಿಸಿದರು.

    ಎಲ್ಲರೂ ಒಂದೇ: ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ, ಸಚಿವ ಸ್ಥಾನ ನೀಡಿದರ ಕುರಿತು ಪ್ರತಿಕ್ರಿಯಿಸಿದ ಅವರು, ಸಂದರ್ಭಕ್ಕನುಗುಣವಾಗಿ ಪಕ್ಷ ನಿರ್ಣಯ ಕೈಗೊಳ್ಳುತ್ತದೆ. ನಾವು ಅದನ್ನು ಯಾರು ಪ್ರಶ್ನಿಸುವಂತಿಲ್ಲ. ಅಲ್ಲದೆ, ಬಿ.ಎಸ್.ಯಡಿಯೂರಪ್ಪ ಯಾರನ್ನೂ ತುಳಿಯುವ ಪ್ರಯತ್ನ ಮಾಡಿಲ್ಲ. ಪಕ್ಷದಲ್ಲಿ ಎಲ್ಲರೂ ಒಂದೆ, ಇಲ್ಲಿ ಯಾವ ಗುಂಪು ಇಲ್ಲ ಎಂದರು.

    ಸಿದ್ದರಾಮಯ್ಯನವರು ಇನ್ನೂ ಮುಖ್ಯಮಂತ್ರಿಯ ಗುಂಗಿನಲ್ಲಿದ್ದಾರೆ. ಈ ಗುಂಗಿನಲ್ಲೇ ವೈಮನಸ್ಸು ಉಂಟಾಗಿ ಅವರ ಸರ್ಕಾರ ಬಿದ್ದಿದೆ. ಹೀಗಾಗಿ ಸಿದ್ದರಾಮಯ್ಯನವರು ಮೊದಲು ವಿರೋಧ ಪಕ್ಷದ ಸ್ಥಾನವನ್ನು ಉಳಿಸಿಕೊಳ್ಳಲಿ, ಸಿಎಂ ಆಸೆಯನ್ನು ಬಿಡಲಿ ಎಂದು ಶ್ರೀರಾಮುಲು ಸಲಹೆ ನೀಡಿದ್ದಾರೆ.

    ನೀರು ಕುಡಿಯಲೇಬೇಕು: ಇಡಿ ವಿರುದ್ಧ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಕಾನೂನು ವಿಚಾರಗಳ ಕುರಿತು ಹೆಚ್ಚು ಮಾತನಾಡುವುದಿಲ್ಲ. ಕಾನೂನು ಅದರ ಕೆಲಸವನ್ನು ಮಾಡುತ್ತದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅದು ನಾನಾದರೂ ಸರಿ, ಯಾರಾದರೂ ಸರಿ ಎಂದು ಹೇಳಿದರು.

  • ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಫುಲ್ ಆ್ಯಕ್ಟೀವ್

    ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಫುಲ್ ಆ್ಯಕ್ಟೀವ್

    – ಪ್ರವಾಹ ಪೀಡಿತರಿಗಾಗಿ ಭಿಕ್ಷೆ ಬೇಡಲು ಸಿದ್ಧ ಎಂದ ಶಾಸಕಿ

    ಬೆಳಗಾವಿ: ಅನರ್ಹ ಶಾಸಕ ರಮೇಶ್ ಜಾರಕಿಹೊಳಿಯವರ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪಾರುಪತ್ಯ ಸಾಧಿಸಲು ಮುಂದಾದರಾ ಎಂಬ ಮಾತುಗಳು ಬೆಳಗಾವಿ ರಾಜಕಾರಣದಲ್ಲಿ ಕೇಳಿ ಬರುತ್ತಿವೆ. ರಮೇಶ್ ಜಾರಕಿಹೊಳಿವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮಿಂಚಿನ ಸಂಚಾರ ನಡೆಸುತ್ತಿದ್ದು, ಪ್ರವಾಹ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡಲು ತಾವು ಭಿಕ್ಷೆ ಬೇಡಲು ಸಹ ಸಿದ್ಧ ಎಂದು ಭರವಸೆ ನೀಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ನಿರಾಶ್ರಿತರೊಂದಿಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

    ಘಟಪ್ರಭಾ ಜಲ ಪ್ರವಾಹಕ್ಕೆ ಮನೆ ಕಳೆದುಕೊಂಡು ಗೋಕಾಕ್‍ನ ಬಹುತೇಕ ಕುಟುಂಬಗಳು ಬೀದಿಗೆ ಬಂದಿವೆ. ಸರ್ಕಾರ ಸೇರಿದಂತೆ ಯಾವ ಪ್ರತಿನಿಧಿಗಳು ನಿರಾಶ್ರಿತರ ಸಹಾಯಕ್ಕೆ ಮುಂದಾಗುತ್ತಿಲ್ಲ. ಈ ಹಿಂದೆ ಬರಗಾಲ ಇದೆ ಎಂದು ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದರು. ಬರಗಾಲದ ಪರಿಹಾರವಾಗಿ ಕೇಂದ್ರ ಸರ್ಕಾರ ಒಂದು ಸಾವಿರ ರೂ. ಕೋಟಿ ನೀಡಿದೆ. ಆ ಹಣದಲ್ಲಿ ನಿಮಗೆ 10 ಸಾವಿರ ರೂ. ನೀಡಿ ರಾಜ್ಯ ಸರ್ಕಾರ ನಿಮ್ಮ ದಿಕ್ಕು ತಪ್ಪಿಸುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರವಾಹ ಸಂತ್ರಸ್ತರಿಗೆ ಧೈರ್ಯ ತುಂಬಿದ ಲಕ್ಷ್ಮಿ ಹೆಬ್ಬಾಳ್ಕರ್

    ನಿಮಗಾಗಿ ಬೆಂಗಳೂರಿನಲ್ಲಿ ಭಿಕ್ಷೆ ಕೇಳಲು ಸಿದ್ಧಳಿದ್ದೇನೆ. ಭಿಕ್ಷೆ ಬೇಡುವ ಮೂಲಕ ಕೇಂದ್ರ ಸರ್ಕಾರದ ಕಣ್ಣು ತೆರೆಸಲು ಪ್ರಯತ್ನಿಸುತ್ತೇನೆ. ಸಂಘದಿಂದ ಸಾಲ ತುಂಬಿ ಅಂತಾ ಯಾರಾದರೂ ಕೇಳಿದರೆ, ನೀವು ಹಣ ಕಟ್ಟಬೇಡಿ. ಬದಲಾಗಿ ಅವರ ಹೆಸರು ಬರೆದಿಟ್ಟು ವಿಷ ತೆಗೆದುಕೊಳ್ಳುತ್ತೇವೆ ಅಂತಾ ಹೇಳಿ. ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವೃದ್ಧನ ಅಳಲು ಕೇಳಿ ಕಣ್ಣೀರಿಟ್ಟ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

    ಗೋಕಾಕ್ ವಿಧಾನಸಭಾ ಕ್ಷೇತ್ರದ ಪ್ರವಾಹ ಪೀಡಿತ ಕ್ಷೇತ್ರಗಳಿಗೆ ಭೇಟಿ ನೀಡುವ ಮೂಲಕ ಸ್ಥಳೀಯವಾಗಿ ತಮ್ಮ ಪಾರುಪತ್ಯ ಸ್ಥಾಪಿಸಲು ಲಕ್ಷ್ಮಿ ಹೆಬ್ಬಾಳ್ಕರ್ ಪ್ರಯತ್ನಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಬೆಳಗಾವಿ ಗ್ರಾಮಾಂತರದ ಶಾಸಕಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಪ್ರವಾಹದ ಸಮಯದಲ್ಲಿ ಮಳೆಯನ್ನು ಲೆಕ್ಕಿಸದೇ ಸಂತ್ರಸ್ತರ ಸಹಾಯಕ್ಕೆ ಮುಂದಾಗಿದ್ದರು. ಪ್ರವಾಹದಲ್ಲಿ ಸಂಬಂಧಿಗಳನ್ನು ಕಳೆದುಕೊಂಡ ಕುಟುಂಬಸ್ಥರಿಗೆ ಸಾಂತ್ವಾನ ಹೇಳುವ ಕೆಲಸವನ್ನು ಮಾಡುವ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದ್ದರು.

  • ವೃದ್ಧನ ಅಳಲು ಕೇಳಿ ಕಣ್ಣೀರಿಟ್ಟ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

    ವೃದ್ಧನ ಅಳಲು ಕೇಳಿ ಕಣ್ಣೀರಿಟ್ಟ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ಕುಂದಾನಗರಿ ಬೆಳಗಾವಿ ಸೇರಿದಂತೆ ಜಿಲ್ಲೆಯ ಸಂಪೂರ್ಣವಾಗಿ ಪ್ರವಾಹಕ್ಕೆ ತುತ್ತಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಗಳಿಂದ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಬೆಳಗಾವಿ ಗ್ರಾ. ಕ್ಷೇತ್ರ ಸಹ ಪ್ರವಾಹಕ್ಕೆ ತುತ್ತಾಗಿದೆ. ಸ್ಥಳೀಯ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಿರಾಶ್ರಿತ ವೃದ್ಧನ ಅಳಲು ಕೇಳಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಣ್ಣೀರು ಹಾಕಿದ್ದಾರೆ.

    ಸ್ಥಳಕ್ಕಾಗಮಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನೋಡಿದ ಕೂಡಲೇ ಶಾಸಕರ ಬಳಿ ಬಂದ ನಂದಿಹಳ್ಳಿ ಗ್ರಾಮದ ವೃದ್ಧ, ಪ್ರವಾಹದಲ್ಲಿ ಎಲ್ಲವನ್ನು ಕಳೆದುಕೊಂಡಿದ್ದೇನೆ. ಮುಂದಿನ ಜೀವನ ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ ಎಂದು ಕಣ್ಣೀರು ಹಾಕಲು ಆರಂಭಿಸಿದರು. ಅಜ್ಜನ ಮಾತು ಕೇಳಿ ಭಾವುಕರಾದ ಲಕ್ಷ್ಮಿ ಹೆಬ್ಬಾಳ್ಕರ್, ನಾನು ಇರೋವರೆಗೂ ನೀವೆಲ್ಲ ಹೆದರಬೇಡಿ. ಸರ್ಕಾರದೊಂದಿಗೆ ಮಾತನಾಡಿಸಿ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಧೈರ್ಯ ತುಂಬಿದರು.

    ಪ್ರವಾಹಕ್ಕೆ ಒಳಗಾದ ಪ್ರತಿಯೊಂದ ಗ್ರಾಮಗಳಿಗೂ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡುತ್ತಿದ್ದಾರೆ. ಇನ್ನು ಗಂಜಿ ಕೇಂದ್ರಗಳಿಗೂ ತೆರಳಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅನೇಕ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಜೀವನ ಅಸ್ತವ್ಯಸ್ತವಾಗಿದೆ. ಇನ್ನೊಂದೆಡೆ ಪ್ರಳಯ ಮಳೆ, ಡ್ಯಾಂಗಳಿಂದ ಮುನ್ನುಗ್ಗಿ ಬರುತ್ತಿರುವ ಜಲರಾಶಿಯ ನಡುವೆ ತೇವಾಂಶದಿಂದ ಮಣ್ಣು ಸಡಿಲುಗೊಂಡು ಬಹುತೇಕ ಕಡೆಗಳಲ್ಲಿ ಭೂಕುಸಿತವಾಗುತ್ತಿದೆ. ಅತಿಯಾದ ಮಳೆಯಿಂದಾಗಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಫೋಷಣೆ ಮಾಡಲಾಗಿದೆ.

  • 10 ವರ್ಷ ನನ್ನನ್ನು ಚುಚ್ಚಿದ್ರು, ಈಗ ಜನರೆ ನನ್ನ ಹಣೆಬರಹ ಬದಲಾಯಿಸಿದ್ರು: ಲಕ್ಷ್ಮೀ ಹೆಬ್ಬಾಳ್ಕರ್

    10 ವರ್ಷ ನನ್ನನ್ನು ಚುಚ್ಚಿದ್ರು, ಈಗ ಜನರೆ ನನ್ನ ಹಣೆಬರಹ ಬದಲಾಯಿಸಿದ್ರು: ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ: ಕಳೆದ 10 ವರ್ಷ ಕೆಲವರು ನನ್ನನ್ನು ವ್ಯಂಗ್ಯ ಮಾತುಗಳಿಂದ ಚುಚ್ಚಿದರು. ಆದರೆ ಈ ಭಾರೀ ಕ್ಷೇತ್ರ ಮತದಾರರು ನನ್ನ ಹಣೆಬರಹ ಬರೆದಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    2013ರ ವಿಧಾನಸಭೆ ಹಾಗೂ 2014ರ ಲೋಕಸಭೆ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋತಿದ್ದು, ಈ ಬಾರಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಗೆಲವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

    ಅಭಿನಂದನಾ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಚುನಾವಣೆಯಲ್ಲಿ ಸೋತಾಗ ಚುಚ್ಚು ಮಾತನಾಡಿದ್ದರು. ಆದರೆ ನಾನು ಹಾಗೇ ಮಾಡಲ್ಲ ಎಂದು ಪರೋಕ್ಷವಾಗಿ ಸಂಜಯ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.

    ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯೆ ನೀಡಿದ ಶಾಸಕಿ, ಯಾವುದೇ ಕಾರಣಕ್ಕೂ ನಾನು 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬೆಳಗಾವಿ ಗ್ರಾಮೀಣ ಮತಕ್ಷೇತ್ರ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

  • ಕಾಂಗ್ರೆಸ್‍ನಲ್ಲಿ ಮುಂದುವರಿದ `ಸೇವೆ’ ಸಮರ!

    ಕಾಂಗ್ರೆಸ್‍ನಲ್ಲಿ ಮುಂದುವರಿದ `ಸೇವೆ’ ಸಮರ!

    ಬೆಂಗಳೂರು: ಮಂತ್ರಿ ಸ್ಥಾನ ಹಂಚಿಕೆಯಾದ ದಿನದಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾರ ನಡುವಿನ `ಸೇವೆ’ ಸಮರ ದಿನೇ ದಿನೇ ಹೆಚ್ಚುತ್ತಿದ್ದು ಇಂದು ಮಂದುವರಿದಿದೆ.

    ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎನ್ನುವುದು ಜಗತ್ತಿಗೆ ಗೊತ್ತಿರುವ ವಿಚಾರ. ನಾನು ಹೇಳಿದ ಸೇವೆಯನ್ನು ಅವರು ಯಾವ ಸೇವೆ ಅಂದುಕೊಂಡರೋ ಗೊತ್ತಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳುವ ಮೂಲಕ ಮತ್ತೊಮ್ಮೆ ಜಯಮಾಲಾರನ್ನು ಕೆಣಕಿದ್ದಾರೆ.

    ಜಯಮಾಲಾರವರ ಸೇವೆಯನ್ನು ಮೆಚ್ಚಿ ಕಾಂಗ್ರೆಸ್ ಮುಖಂಡರು ಸಚಿವ ಸ್ಥಾನ ನೀಡಿದ್ದಾರೆ. ಸಚಿವ ಸ್ಥಾನ ಸಿಕ್ಕಿದ್ದರ ಬಗ್ಗೆ ನನಗೇನೂ ಹೊಟ್ಟೆಕಿಚ್ಚು ಇಲ್ಲ. ಉತ್ತರ ಕರ್ನಾಟಕದ ಕಡೆ ಉರುಳು ಸೇವೆ, ದೇವರ ಸೇವೆ ಹಾಗೂ ಅಭಿಷೇಕ ಸೇವೆ ಎಲ್ಲವೂ ಇದೆ. ಈ ಅರ್ಥದಲ್ಲಿ ನಾನು ಸೇವೆ ಎಂದು ಪದ ಬಳಕೆ ಮಾಡಿದ್ದೆ, ನಮ್ಮಲ್ಲಿ `ಸೇವೆ’ ಎಂದರೆ `ಕೆಲಸ’ ಎಂಬರ್ಥ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

    ಏನಿದು ಟಾಂಗ್ ರಾಜಕೀಯ?
    ಜಯಮಾಲಾ ಅವರಿಗೆ ಸಚಿವ ಸ್ಥಾನ ಸಿಕ್ಕ ದಿನದಿಂದಲೂ ಕಾಂಗ್ರೆಸ್ ಪಕ್ಷದಲ್ಲೇ ಅಪಸ್ವರ ಎದ್ದಿತ್ತು. ಜೂನ್ 9 ರಂದು ಮಾಧ್ಯಮದೊಂದಿಗೆ ಮಾತನಾಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್, ನಾನು ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದೇನೆ. ಆದರೂ ನನಗೆ ಸಚಿವ ಸ್ಥಾನ ಕೈತಪ್ಪಿತು. ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಜಯಮಾಲಾ ಅವರ `ಸೇವೆ’ಯನ್ನು ಕಾಂಗ್ರೆಸ್ ಮುಖಂಡರು ಮೆಚ್ಚಿದ್ದು, ಅದೇ ಕಾರಣಕ್ಕೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸಚಿವೆ ಜಯಮಾಲಾ, ಜಗತ್ತಿನಲ್ಲಿ ಎಲ್ಲದಕ್ಕೂ ಔಷಧವಿದೆ. ಆದರೆ ಹೊಟ್ಟೆಕಿಚ್ಚಿಗೆ ಯಾವುದೇ ಔಷಧಿ ಇಲ್ಲವೆಂದು ತಿರುಗೇಟು ನೀಡಿದ್ದರು.