Tag: laxmi hebbalkar

  • ಗುರುಗಳು ಯಾರ ಕಪಿಮುಷ್ಟಿಯಲ್ಲಿಲ್ಲ, ಧರ್ಮದಲ್ಲಿ ರಾಜಕಾರಣ ಬೇಡ: ಲಕ್ಷ್ಮಿ ಹೆಬ್ಬಾಳ್ಕರ್

    ಗುರುಗಳು ಯಾರ ಕಪಿಮುಷ್ಟಿಯಲ್ಲಿಲ್ಲ, ಧರ್ಮದಲ್ಲಿ ರಾಜಕಾರಣ ಬೇಡ: ಲಕ್ಷ್ಮಿ ಹೆಬ್ಬಾಳ್ಕರ್

    ಬೆಂಗಳೂರು: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟದಲ್ಲಿ ಗುರುಗಳು ಯಾರ ಕಪಿಮುಷ್ಟಿಯಲ್ಲಿಲ್ಲ. ಧರ್ಮದಲ್ಲಿ ರಾಜಕಾರಣ ಮಾಡೋದು ಬೇಡ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇಂದು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಪಕ್ಷದ ಬಿ ಟೀಮ್ ಅಂತ ನಿರಾಣಿ ಅವರು ಹೇಳಿರೋದು ತಪ್ಪು. ಪಕ್ಷಾತೀತವಾಗಿ ಮೀಸಲಾತಿ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಿದ್ದು, ಸರ್ಕಾರಕ್ಕೆ ಮನವಿ ಸಲ್ಲಿಸುವ ಕೆಲಸ ಮಾಡಲಾಗ್ತಿದೆ. ನಿರಾಣಿ ಅವರು ಯಾಕೆ ಹೋರಾಟಕ್ಕೆ ಬೆಂಬಲ ಸೂಚಿಸಿದರು ಎಂದು ಪ್ರಶ್ನಿಸಿದರು. ಹೋರಾಟದ ಮುಂಚೂಣಿಯಲ್ಲಿದ್ದವರು ಈ ರೀತಿ ಆರೋಪ ಮಾಡೋದು ಅವರಿಗೆ ಶೋಭೆ ತರಲ್ಲ ಎಂದು ಅಸಮಾಧಾನ ಹೊರ ಹಾಕಿದರು.

    ಸಮಾಜಕ್ಕಾಗಿ ಗುರುಗಳು ಈ ಹೋರಾಟ ಮಾಡುತ್ತಿದ್ದು, ಸ್ವಾರ್ಥಕ್ಕಲ್ಲ. ಗುರುಗಳು ಯಾರ ಕಪಿಮುಷ್ಟಿಯಲ್ಲಿಯೂ ಇಲ್ಲ. ವೀರಶೈವ ಲಿಂಗಾಯತದಲ್ಲಿ ಸುಮಾರು ನೂರು ಒಳ ಪಂಗಡಗಳಿವೆ. ಅದರಲ್ಲಿ 32 ಒಳ ಪಂಗಡಗಳಿಗೆ 2ಎ ಮಾನ್ಯತೆ ಸಿಕ್ಕಿದ್ದು, ಇನ್ನುಳಿದವರಿಗಾಗಿ ಈ ಹೋರಾಟ ನಡೆಸಲಾಗ್ತಿದೆ. ಈ ವಿಷಯವನ್ನ ಬಿಜೆಪಿಗರು ರಾಜಕೀಯವಾಗಿ ಬಳಸಿಕೊಳ್ಳಬಾರದು. ಧರ್ಮದಲ್ಲಿ ರಾಜಕಾರಣ ಒಳ್ಳೆಯದಲ್ಲ ಎಂದು ಹೇಳಿದರು.

    ನಮ್ಮಲ್ಲಿ ಒಗ್ಗಟ್ಟಿದ್ದು, ವಿಚಾರಧಾರೆಗಳು ಭಿನ್ನವಾಗಿವೆ. ಸಚಿವರು ಸರ್ಕಾರದೊಳಗಿದ್ದಾರೆ. ಅವರಿಗೆ ಅನೇಕ ಒತ್ತಡ ಇರಬಹುದು. ಸರ್ಕಾರದ ಹೊರಗೆ ಇದ್ದು ಮಾತಾಡೋದು ಬೇರೆಯಾಗಿರುತ್ತೆ. ಸರ್ಕಾರವನ್ನ ಪ್ರತಿನಿಧಿಸುತ್ತಿರುವುದರಿಂದ ಅವರ ಧ್ವನಿ ಕಡಿಮೆಯಾಗಿದೆ. ಯಾರ ಒತ್ತಡ ಇದೆ ಗೊತ್ತಿಲ್ಲ ನಿರಾಣಿಯವರನ್ನೇ ಕೇಳಿದ್ರೇ ಗೊತ್ತಾಗುತ್ತೆ ಎಂದು ಪ್ರಶ್ನಿಸಿದರು.

  • ಹಳ್ಳಕ್ಕೆ ಸೇರಿದ ಸಕ್ಕರೆ ಕಾರ್ಖಾನೆ ಕೆಮಿಕಲ್ ಮಿಶ್ರಿತ ನೀರು – ಮೀನುಗಳ ಸಾವು

    ಹಳ್ಳಕ್ಕೆ ಸೇರಿದ ಸಕ್ಕರೆ ಕಾರ್ಖಾನೆ ಕೆಮಿಕಲ್ ಮಿಶ್ರಿತ ನೀರು – ಮೀನುಗಳ ಸಾವು

    – ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಫ್ಯಾಕ್ಟರಿ
    – ತುಂಬಿ ಹರಿಯುತ್ತಿರುವ ಹಳ್ಳಕ್ಕೆ ವಿಷ ನೀರು ಸೇರ್ಪಡೆಯ ಆರೋಪ

    ಧಾರವಾಡ: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಶುಗರ್ ಫ್ಯಾಕ್ಟರಿಯಿಂದ ಹೊರಬರುತ್ತಿರುವ ಕೆಮಿಕಲ್ ಮಿಶ್ರಿತ್ ನೀರು ಧಾರವಾಡ ಜಿಲ್ಲೆಯ ತುಪ್ಪರಿ ಹಳ್ಳಕ್ಕೆ ಬಂದು ಸೇರಿದ್ದರಿಂದಲೇ ಸಾವಿರಾರು ಮೀನುಗಳ ಸಾವನ್ನಪ್ಪಿವೆ ಎಂದು ಆರೋಪಗಳು ಕೇಳಿ ಬಂದಿವೆ

    ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ಸ್ ಫ್ಯಾಕ್ಟರಿ ಇದೆ. ಈ ಫ್ಯಾಕ್ಟರಿ ಕಬ್ಬು ನುರಿಸಲು ಆರಂಭಿಸಿದ್ದು, ಎರಡು ದಿನಗಳಿಂದ ಫ್ಯಾಕ್ಟರಿಯಿಂದ ಅಪಾರ ಪ್ರಮಾಣದ ಕೆಮಿಕಲ್ ಮಿಶ್ರಿತ ನೀರು ಧಾರವಾಡ ಜಿಲ್ಲೆಯ ತುಪ್ಪರಿಹಳ್ಳವನ್ನು ಸೇರುತ್ತಿದೆ. ಕೆಮಿಕಲ್ ಮಿಶ್ರಿತ ನೀರು ಸೇರಿದ ತುಪ್ಪರಿ ಹಳ್ಳದ ನೀರನ್ನು ಜಾನುವಾರುಗಳು ಕುಡಿದಿವೆ ಈ ಕಾರಣಕ್ಕೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

    ಈ ವರ್ಷ ಚೆನ್ನಾಗಿ ಮಳೆ ಆಗಿರುವ ಹಿನ್ನೆಲೆಯಲ್ಲಿ ತುಪ್ಪರಿ ಹಳ್ಳದಲ್ಲಿ ನೀರು ಹರಿಯುತ್ತಿದೆ. ಈ ಕೆಮಿಕಲ್ ನೀರು ನೇರವಾಗಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಮತ್ತು ಐಯಟ್ಟಿ ಭಾಗದಲ್ಲಿ ಸಣ್ಣ ಹಳ್ಳದ ಮೂಲಕ ತುಪ್ಪರಿಹಳ್ಳವನ್ನು ಸೇರುತ್ತಿದೆ. ಕೆಮಿಕಲ್ ಮಿಶ್ರಿತ ನೀರು ಸೇರಿದ ಎರಡೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಮೀನುಗಳು ಸತ್ತು ಹೋಗಿವೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಈ ಫ್ಯಾಕ್ಟರಿಯಲ್ಲಿ ಬಳಕೆಯಾಗುವ ಕೆಮಿಕಲ್ ಮಿಶ್ರಿತ ನೀರನ್ನು ಶುದ್ಧೀಕರಿಸದೇ, ಹಾಗೆಯೇ ಹಳ್ಳಕ್ಕೆ ಬಿಡುತ್ತಿದ್ದಾರೆ. ಹಳ್ಳದ ನೀರು ಜಿಲ್ಲೆಯ ದೊಡ್ಡ ಹಳ್ಳ ಹಾಗೂ ಬೆಣ್ಣಿಹಳ್ಳಕ್ಕೂ ಸೇರುತ್ತದೆ. ಕೆಮಿಕಲ್ ಮಿಶ್ರಿತ ನೀರು ಒಂದು ವೇಳೆ ಬೆಣ್ಣೆ ಹಳ್ಳವನ್ನು ಸೇರಿದ್ದೇ ಆದಲ್ಲಿ, ಅದು ಮತ್ತೊಂದು ಅನಾಹುತಕ್ಕೆ ಕಾರಣ ಆಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

  • ಕುಕ್ಕರ್ ಬಂದ್, ಸ್ಟಾರ್ಟ್ ಮಾಡೋದು ನಮ್ಮ ಕಡೆ ಇಲ್ಲ: ಸತೀಶ್ ಜಾರಕಿಹೊಳಿ

    ಕುಕ್ಕರ್ ಬಂದ್, ಸ್ಟಾರ್ಟ್ ಮಾಡೋದು ನಮ್ಮ ಕಡೆ ಇಲ್ಲ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಕುಕ್ಕರ್ ಬಂದ್ ಮಾಡೋದು, ಸ್ಟಾರ್ಟ್ ಮಾಡೋದು ನಮ್ಮ ಬಳಿ ಇಲ್ಲ ಎಂದು ಹೇಳುವ ಮೂಲಕ ಸಚಿವ ರಮೇಶ್ ಜಾರಕಿಹೊಳಿ- ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಾಕ್ಸಮರದ ಬಗ್ಗೆ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.

    ಸಚಿವ ರಮೇಶ್ ಜಾರಕಿಹೊಳಿ- ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ಕುಕ್ಕರ್ ಫೈಟ್ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ, ಯಾರು ಸುಳ್ಳು ಹೇಳುತ್ತಾರೆ, ನಿಜ ಹೇಳ್ತಾರೆ ಅನ್ನೋದು ಗೊತ್ತಿಲ್ಲ. ಕುಕ್ಕರ್ ಬಂದ್ ಮಾಡೋದು ಸ್ಟಾರ್ಟ್ ಮಾಡೋದು ನಮ್ಮ ಬಳಿಯೂ ಇಲ್ಲ. ಇಬ್ಬರು ದೇವಸ್ಥಾನಕ್ಕೆ ಹೋಗಿ ಆಣೆ ಪ್ರಮಾಣ ಮಾಡಿ ತಾವು ಸತ್ಯವಂತರು ಅನ್ನೋದನ್ನ ಸಾಬೀತು ಮಾಡಲಿ ಎಂದರು.

    ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಮಾತಿನ ಚಕಮಕಿ ನಡೆತಯುತ್ತಿದೆ. 2018ರ ಅಸೆಂಬ್ಲಿ ಎಲೆಕ್ಷನ್ ನಲ್ಲಿ ನನ್ನ ಹಣದಿಂದ ಲಕ್ಷ್ಮಿ ಹೆಬ್ಬಾಳ್ಕರ್ ಪರವಾಗಿ ಕುಕ್ಕರ್ ಹಂಚಿದ್ದೆ ಎಂದಿದ್ದರು. ಇತ್ತ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಹೆಬ್ಬಾಳ್ಕರ್ ಆರೋಪಕ್ಕೆ ತಿರುಗೇಟು ನೀಡಿದ್ದ ಸಚಿವರು, ಮನೆ ದೇವರ ಮುಂದೆ ಆಣೆ ಮಾಡಲಿ ಎಂದು ಸವಾಲು ಹಾಕಿದ್ದರು.

  • ಜನತಾ ಕರ್ಫ್ಯೂ ಇದ್ರೂ ಪುತ್ರನ ನಿಶ್ಚಿತಾರ್ಥ ನೆರವೇರಿಸಿದ ಹೆಬ್ಬಾಳ್ಕರ್

    ಜನತಾ ಕರ್ಫ್ಯೂ ಇದ್ರೂ ಪುತ್ರನ ನಿಶ್ಚಿತಾರ್ಥ ನೆರವೇರಿಸಿದ ಹೆಬ್ಬಾಳ್ಕರ್

    ಬೆಳಗಾವಿ: ಜನತಾ ಕರ್ಫ್ಯೂ ನಡುವೆಯೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಪುತ್ರನ ನಿಶ್ಚಿತಾರ್ಥ ಕಾರ್ಯಕ್ರಮ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜನತಾ ಕರ್ಫ್ಯೂಗೆ ಕರೆಕೊಟ್ಟಿದ್ದರು. ಇದಕ್ಕೆ ಎಲ್ಲರೂ ಬೆಂಬಲ ಸೂಚಿಸಿದ್ದರು. ಆದರೆ ಲಕ್ಷ್ಮಿ ಹೆಬಾಳ್ಕರ್ ಅವರು ಮಾತ್ರ ಪುತ್ರ ಮೃನಾಲ್ ಹೆಬ್ಬಾಳ್ಕರ್ ನಿಶ್ಚಿತಾರ್ಥ ನೆರವೇರಿಸಿದ್ದಾರೆ.

    ಬೆಳಗಾವಿಯ ಕುವೆಂಪು ನಗರದ ನಿವಾಸದ ಮುಂಭಾಗದಲ್ಲಿ ಪೆಂಡಾಲ್ ಹಾಕಿ ಪುತ್ರ ಮೃನಾಲ್ ಹಾಗೂ ಭದ್ರಾವತಿ ಶಾಸಕ ಸಂಗಮೇಶ ಪುತ್ರಿ ಜೊತೆಗೆ ಎಂಗೇಜ್‍ಮೆಂಟ್ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಕುಟುಂಬದ ಸದಸ್ಯರು ಸೇರಿ ಆಪ್ತರಿಗೆ ಆಹ್ವಾನ ನೀಡಿದ್ದರು. ಸಮಾರಂಭದಲ್ಲಿ 300ಕ್ಕೂ ಅಧಿಕ ಜನರು ಭಾಗಿಯಾಗಿದ್ದರು ಎನ್ನಲಾಗಿದೆ.

  • ಹೆಬ್ಬಾಳ್ಕರ್ ಹೇಳಿದ ಡ್ಯಾಶ್ ಡ್ಯಾಶ್ ನಮಗೂ ಗೊತ್ತಿದೆ: ಯತ್ನಾಳ್

    ಹೆಬ್ಬಾಳ್ಕರ್ ಹೇಳಿದ ಡ್ಯಾಶ್ ಡ್ಯಾಶ್ ನಮಗೂ ಗೊತ್ತಿದೆ: ಯತ್ನಾಳ್

    ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ ಡ್ಯಾಶ್… ಡ್ಯಾಶ್‍ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.

    ಅಥಣಿ ಕ್ಷೇತ್ರದ ತೆಲಸಂಗ ಗ್ರಾಮದಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಹೆಣ್ಣು ಮಗಳಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಗಂಡಸ್ತನ ಪ್ರಶ್ನೆ ಮಾಡುವ ರೀತಿ ಮಾತನಾಡೋದು ಸರಿಯಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ 1200 ಕೋಟಿ ರೂ. ಅನುದಾನ ತಂದಿದ್ದಾರೆ ಎಂದು ಹೇಳುತ್ತಾರೆ. ಅವರೆನೋ ಡ್ಯಾಶ್ ಎಂದು ಮಾತನಾಡಿದ್ದಾರೆ. ಅವರ ಕ್ಷೇತ್ರಕ್ಕೆ 1200 ಕೋಟಿ ಅನುದಾನ ಹೇಗೆ ಸಿಕ್ಕಿದೆ ಎಂಬ ಡ್ಯಾಶ್ ಡ್ಯಾಶ್ ನಮಗೂ ಗೊತ್ತಿದೆ. ಮಹೇಶ್ ಕುಮಟಳ್ಳಿ ಓರ್ವ ಸಾತ್ವಿಕ ನಾಯಕರಾಗಿದ್ದು, ಅಂತಹವರ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.

    ಸಿದ್ದರಾಮಯ್ಯರಿಗೆ ಜಯಮಾಲಾ ನೆನಪು ಆಗ್ತಾರೆ. ಹಾಗಾಗಿ ಅವರು ಜಯಮ್ಮನ ಜಯಂತಿ ಮಾಡ್ತಾರೆ. ಸಿದ್ದರಾಮಯ್ಯನವರು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನ ಕಿತ್ತೂರು ರಾಣಿ ಚೆನ್ನಮ್ಮಾ ಅವರಿಗೆ ಹೋಲಿಸುತ್ತಾರೆ. ವೀರರಾಣಿ ಆಗಿರುವ ಕಿತ್ತೂರು ಚೆನ್ನಮ್ಮರ ಕಾಲಿನ ಧೂಳಿಗೆ ಸಮವಲ್ಲ. ಕೆಲವರು ನಾವೇ ಸಿಎಂ ಆಗತ್ತೇವೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಯಡಿಯೂರಪ್ಪನವರ ಬದಲಾವಣೆ ಅನ್ನೋದು ಮೂರ್ಖತನದ ಮಾತು. ಬಿಜೆಪಿ ಸರ್ಕಾರವನ್ನು ಮೂರುವರೆ ವರ್ಷ ಯಾರೂ ಅಲುಗಾಡಿಸಲು ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು? ನಾನು ಬೆಳಗಾವಿ ರಾಜಕಾರಣ ಬದಲು ಮಾಡಬಲ್ಲೆ. ಕೊಟ್ಟ ಕುದುರೆ ಏರಲು ಆಗದವನು ಇನ್ನೊಂದು ಕುದುರೆ ಏರುತ್ತೇನೆ ಅನ್ನೋನು ವೀರನೂ ಅಲ್ಲ ಶೂರನೂ ಅಲ್ಲ. ಡ್ಯಾಶ್ ನೂ ಅಲ್ಲ ಎಂದು ಅನರ್ಹರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಹೇಶ್ ಕುಮಟಳ್ಳಿ ಮಳ್ಳ ಮಳ್ಳ ಮಂಚಕ್ಕೆ ಎಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಅನ್ನೋವಂತಹ ಮಳ್ಳ. 2013 ಮತ್ತು 2018ರ ಚುನಾವಣೆಗೆ ಟಿಕೆಟ್ ಕೊಡಿಸಲು ನಾನೂ ಸಹಾಯ ಮಾಡಿದ್ದೆ. ಒಳ್ಳೆಯವರು, ಸುಸಂಸ್ಕೃತರು ಇದ್ದಾರೆ ಅಂದುಕೊಂಡಿದ್ದೆವು. ಆದರೆ ಅವರು ದ್ರೋಹ ಮಾಡಿದ್ದಾರೆ ಎಂದು ಕಿಡಿಕಾರಿದ್ದರು.

    ಪಕ್ಷವೆನ್ನುವ ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ. ಇವತ್ತು ಹಾಲು ಕುಡಿದ ಮಕ್ಕಳು ಬದುಕುತ್ತಿಲ್ಲ ಇನ್ನು ಇವರು ವಿಷ ಕುಡಿದವರು ಇವರು ಬದುಕುತ್ತಾರಾ? ಜನ್ಮಕೊಟ್ಟ ತಾಯಿ ಒಬ್ಬರಿದ್ರೆ ಜಗತ್ತನ್ನು ತೋರಿಸಿದ ತಾಯಿ ನಮ್ಮ ಪಕ್ಷ. ಅಂತಹ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ. ಅನುದಾನ ಕೊಡದಿದ್ದಕ್ಕೆ ಇವರೆಲ್ಲ ಪಕ್ಷ ಬಿಟ್ಟು ಹೋಗಿದ್ದಾರಂತೆ. ಲಕ್ಷ್ಮಿ ಹೆಬ್ಬಾಳ್ಕರ್ ಗೆ ಕೊಟ್ಟಷ್ಟು ಅನುದಾನ ನಮಗೆ ಕೊಡಲಿಲ್ಲ ಅಂತಾರೆ. ಅನುದಾನ ಕೇಳೋಕೆ ಆಗದೇ ಇವರೇನು ಬಾಯಲ್ಲಿ ಕಡಬು ಇಟ್ಟುಕೊಂಡಿದ್ದರಾ? ಮಂತ್ರಿಗಳ ಕಾಲು, ಕೈ ಹಿಡಿದು ಕೇಳಿ ಅನುದಾನ ಪಡೆಯಬಹುದಿತ್ತು ಎಂದು ವಾಗ್ದಾಳಿ ನಡೆಸಿದ್ದರು.

  • ಲಕ್ಷ್ಮೀ ಹೆಬ್ಬಾಳ್ಕರ್ ನಮ್ಮ ಸಹೋದರಿ, ಪಕ್ಷಕ್ಕೆ ಬಂದರೆ ಸ್ವಾಗತ: ಲಕ್ಷ್ಮಣ್ ಸವದಿ

    ಲಕ್ಷ್ಮೀ ಹೆಬ್ಬಾಳ್ಕರ್ ನಮ್ಮ ಸಹೋದರಿ, ಪಕ್ಷಕ್ಕೆ ಬಂದರೆ ಸ್ವಾಗತ: ಲಕ್ಷ್ಮಣ್ ಸವದಿ

    ವಿಜಯಪುರ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಮ್ಮ ಸಹೋದರಿ, ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ ಎಂದು ಅಥಣಿಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿಕೆ ಕೊಟ್ಟಿದ್ದಾರೆ.

    ಬೆಳಗಾವಿ ರಾಜಕೀಯ ಬದಲಿಸಬಲ್ಲೇ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರುವ ವಿಚಾರದಲ್ಲಿ ಹಾಗೆ ಹೇಳಿರಬಹುದು. ಅವರು ಸಿಕ್ಕರೆ ಈ ಬಗ್ಗೆ ಮಾತನಾಡುತ್ತೇನೆ. ರಾಜಕೀಯ ದೃವೀಕರಣ ಹಿನ್ನೆಲೆ ಅವರು ತಮ್ಮ ಪಕ್ಷ ಬಿಟ್ಟು ನಮ್ಮಲ್ಲಿ ಬರಬಹುದು. ಅವರು ನಮ್ಮ ಸಹೋದರಿ, ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ:ಬೆಳಗಾವಿ ರಾಜಕೀಯ ಬದಲಿಸ್ತೀನಿ- ಲಕ್ಷ್ಮೀ ಹೆಬ್ಬಾಳ್ಕರ್

    ಉಪಚುನಾವಣೆ ಬಳಿಕ ಇನ್ನಷ್ಟು ಜನ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬರಬಹುದು. ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಬಹುತೇಕರಿಗೆ ಮನವರಿಕೆ ಆಗಿದೆ. ಅಲ್ಲಿನ ವಾತಾವರಣ ನೋಡಿ ಬಿಜೆಪಿಗೆ ಬಂದರೆ ಒಳ್ಳೆ ಭವಿಷ್ಯ ಇದೆ ಎಂದು ಅನೇಕರು ತಿಳಿದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಬಹಳಷ್ಟು ಜನ ಬಿಜೆಪಿಗೆ ಬರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಶನಿವಾರ ಸಿಎಂ ಯಡಿಯೂರಪ್ಪ ನನ್ನ ಭಾಷಣದ ಬಳಿಕ ಭಾವುಕರಾಗಿದ್ದಾರೆ. ನಾನೇ ಅಭ್ಯರ್ಥಿ ಆಗಬೇಕು ಎಂದು ಕಾರ್ಯಕರ್ತರು ಬಯಸಿದ್ದರು. ಹೀಗಾಗಿ ಕಾರ್ಯಕರ್ತರಲ್ಲಿ ಗೊಂದಲಗಳಿದ್ದವು. ಶನಿವಾರ ಸಿಎಂ ಬಂದ ಮೇಲೆ ಆ ಗೊಂದಲಗಳಿಗೆಲ್ಲಾ ತೆರೆ ಬಿದ್ದಿದೆ. ನಾನು ಬಿಚ್ಚು ಮನಸ್ಸಿನಿಂದ ಎಲೆಕ್ಷನ್ ಮಾಡ್ತೇನೋ ಇಲ್ಲೋ ಅನ್ನೋ ಸಂಶಯ ಯಡಿಯೂರಪ್ಪ ಅವರಿಗೆ ಇತ್ತು. ಆದರೆ ಶನಿವಾರ ಅವರಿಗೆ ಎಲ್ಲವೂ ಸ್ಪಷ್ಟವಾಗಿ ಭಾವುಕರಾಗಿದ್ದರು ಎಂದು ಸಿಎಂ ಬಗ್ಗೆ ಮಾತನಾಡಿದರು.

    ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?
    ಶನಿವಾರ ರಾತ್ರಿ ಅಥಣಿ ಕ್ಷೇತ್ರದ ಕಕಮರಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಡೆದ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ನಾನು ಬೆಳಗಾವಿ ರಾಜಕಾರಣ ಬದಲು ಮಾಡಬಲ್ಲೆ. ಕೊಟ್ಟ ಕುದುರೆ ಏರಲು ಆಗದವನು ಇನ್ನೊಂದು ಕುದುರೆ ಏರುತ್ತೇನೆ ಅನ್ನೋನು ವೀರನೂ ಅಲ್ಲ ಶೂರನೂ ಅಲ್ಲ ಎಂದು ಅನರ್ಹರ ವಿರುದ್ಧ ಗುಡುಗಿದ್ದರು.

  • ಗೋಕಾಕ್‍ನಲ್ಲಿ ರಂಗೇರಿದ ಮಿನಿ ಕದನ-ಇಂದು ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ

    ಗೋಕಾಕ್‍ನಲ್ಲಿ ರಂಗೇರಿದ ಮಿನಿ ಕದನ-ಇಂದು ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ

    ಬೆಳಗಾವಿ: ಕುಂದಾ ನಗರಿಯ ಗೋಕಾಕ್ ಉಪ ಸಮರ ಕಾವೇರಿದೆ. ಬಿಜೆಪಿ ಸೇರಿರುವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಇವತ್ತು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಆದರೆ ಕಾಂಗ್ರೆಸ್‍ನಲ್ಲಿ ಗೊಂದಲ ಮುಂದುವರಿದಿದೆ. ರಮೇಶ್ ವಿರುದ್ಧ ಅಖಾಡ ಸಿದ್ಧಗೊಳಿಸಿಕೊಂಡಿರುವ ಲಖನ್ ಮತ್ತು ಕಾಂಗ್ರೆಸ್ ಟಿಕೆಟ್‍ಗಾಗಿ ಕಾದಿರೋ ಬಿಜೆಪಿಯ ಅಶೋಕ್ ಪೂಜಾರಿಗೆ ಇಲ್ಲೂ ಟಿಕೆಟ್ ತಪ್ಪಿದ ಟೆನ್ಷನ್. ಹಾಗಾಗಿ ಇಬ್ಬರು ನಾಯಕರು ಸಭೆಗಳನ್ನು ನಡೆಸುತ್ತಿದ್ದಾರೆ.

    ಇಂದು ಗೋಕಾಕ್‍ನ ಕೇಸರಿ ಕಾರ್ಯಕರ್ತರು ರಮೇಶ್ ಜಾರಕಿಹೊಳಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಮನೆ ಮುಂಭಾಗ ಮೈದಾನದಲ್ಲಿ ಸಂಕಲ್ಪ ಸಮಾವೇಶ ಆಯೋಜಿಸಿದ್ದಾರೆ. ಇದಕ್ಕಾಗಿ ಎಲ್ಲಾ ಗ್ರಾಮದ ಪಂಚಾಯಿತಿ ಸದಸ್ಯರು ತಲಾ 10ರಿಂದ 15 ಸಾವಿರ ಕಾರ್ಯಕರ್ತರನ್ನು ಸೇರಿಸುವ ಹೊಣೆ ಒಪ್ಪಿಸಿದ್ದಾರೆ.

    ಬಿಜೆಪಿಯಲ್ಲಿ ಅಭ್ಯರ್ಥಿ ಘೋಷಣೆಯಾದ್ರೆ, ಕಾಂಗ್ರೆಸ್‍ನಲ್ಲಿ ಇನ್ನೂ ಟಿಕೆಟ್ ಗೊಂದಲ ಮಾತ್ರ ಬಗೆ ಹರಿಯುತ್ತಿಲ್ಲ. ಅಶೋಕ್ ಪೂಜಾರಿಗೆ ಟಿಕೆಟ್ ಕೈತಪ್ಪಿದ್ದು ಈ ಕಾರಣಕ್ಕಾಗಿ ದಿಢೀರನೇ ಶನಿವಾರ ಕಾರ್ಯಕರ್ತರ ಸಭೆ ಕರೆದಿದ್ದಾರೆ.

    ಅಶೋಕ್ ಪೂಜಾರಿಗೆ ಟಿಕೆಟ್ ಕೊಡದಂತೆ ಈಗಾಗಲೇ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ವರಿಷ್ಠರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ,, ಲಖನ್ ಜಾರಕಿಹೊಳಿಗೆ ಟಿಕೆಟ್ ಕೊಡೋದು ಬೇಡ ಡಿಕೆಶಿ-ಲಕ್ಷ್ಮಿ ಹೆಬ್ಬಾಳ್ಕರ್ ಅಂಡ್ ಟೀಮ್ ವಿರೋಧ ಮಾಡುತ್ತಿದೆದೆ. ಸಿದ್ದರಾಮಯ್ಯರನ್ನು ಭೇಟಿಯಾಗಿರೋ ಸತೀಶ್‍ ಸಹೋದರ ಲಖನ್‍ಗೆ ಟಿಕೆಟ್ ಕನ್ಫರ್ಮ್ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

  • ನನ್ನ ಹೆಸರಲ್ಲಿ ಸೋಲಾರ್ ಪ್ಲ್ಯಾಂಟ್ ಇದ್ದರೆ ಸರ್ಕಾರಕ್ಕೆ ಬರೆದು ಕೊಡ್ತೀನಿ: ಲಕ್ಷ್ಮಿ ಹೆಬ್ಬಾಳ್ಕರ್

    ನನ್ನ ಹೆಸರಲ್ಲಿ ಸೋಲಾರ್ ಪ್ಲ್ಯಾಂಟ್ ಇದ್ದರೆ ಸರ್ಕಾರಕ್ಕೆ ಬರೆದು ಕೊಡ್ತೀನಿ: ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ನನ್ನ ಹೆಸರಿನಲ್ಲಿ ಸೋಲಾರ್ ಪ್ಲ್ಯಾಂಟ್ ಇದೆ ಎಂದು ದಾಖಲೆ ತೋರಿಸಿದ್ರೆ ಅದನ್ನು ಚಾಮುಂಡಿ ತಾಯಿಯ ಆಣೆಯಾಗಿ ಸರ್ಕಾರದ ಬೊಕ್ಕಸಕ್ಕೆ ಬರೆದು ಕೊಡುತ್ತೇನೆ. ಎಲ್ಲ ಆರೋಪಗಳಿಗೂ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

    ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರವಾದದ್ದು, ಕೆಲ ಸುದ್ದಿಗಳನ್ನು ವೈಭವೀಕರಿಸಿ ತೋರಿಸಲಾಗುತ್ತಿದೆ. ಅಪೆಕ್ಸ್ ಬ್ಯಾಂಕ್ ಕೇವಲ ನನ್ನ ತಮ್ಮನಿಗೆ ಮಾತ್ರ ಸಾಲ ನೀಡಿಲ್ಲ. ದೊಡ್ಡ ಮಟ್ಟದಲ್ಲಿ ವ್ಯವಹಾರ ಮಾಡುವ ಅಪೆಕ್ಸ್ ಬ್ಯಾಂಕ್ ಎಲ್ಲ ದಾಖಲಾತಿಗಳನ್ನು ಪಡೆದುಕೊಂಡು ಕಾನೂನುಬದ್ಧವಾಗಿ ಸಾಲ ನೀಡಿರುತ್ತದೆ. ನಮ್ಮ ಎಲ್ಲ ವ್ಯವಹಾರಗಳು ಕಾನೂನಿನ ಚೌಕಟ್ಟಿನಲ್ಲಿ ನಡೆದಿವೆ ಎಂದು ಸ್ಪಷ್ಟಪಡಿಸಿದರು.

    ಎಲ್ಲವೂ ವಿಚಾರಣೆ ಹಂತದಲ್ಲಿರುವಾಗ ಕಲ್ಪಿತ ಸುದ್ದಿಗಳು ಬಿತ್ತರವಾಗುತ್ತಿವೆ. ಸತ್ಯಕ್ಕೆ ಹತ್ತಿರ ಸುದ್ದಿಗಳು ಬಿತ್ತರವಾದ್ರೆ ಏನು ಆಗಲ್ಲ. ಆದ್ರೆ ನಾನು ಕಲ್ಪನೆಯೂ ಮಾಡಿಕೊಳ್ಳದ ರೀತಿಯಲ್ಲಿ ಸುದ್ದಿಗಳು ಬಿತ್ತರವಾಗೋದು ನೋಡಿ ವಿಚಿತ್ರ ಅನ್ನಿಸುತ್ತಿದೆ. ನನ್ನ ಕ್ಷೇತ್ರದ ಜನರಿಗೆ ನಾನು ಹೇಗೆ ಎಂಬುವುದು ಗೊತ್ತಿದೆ ಎಂದರು.

    ಜಾರಿ ನಿರ್ದೇಶನಾಲಯ ನನ್ನನ್ನು ವಿಚಾರಣೆಗೆ ಮತ್ತೊಮ್ಮೆ ಕರೆದಿಲ್ಲ. ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಅಪೆಕ್ಸ್ ಬ್ಯಾಂಕ್ ನಿಂದ ತಮ್ಮ ಚನ್ನರಾಜು ಸಾಲ ಪಡೆದುಕೊಂಡಿದ್ದಾರೆ. ಈ ವಿಚಾರವಾಗಿ ಕೆ.ಎನ್.ರಾಜಣ್ಣ ವಿಚಾರಣೆ ಹೋಗುತ್ತಾರೆ. ಇಡಿ ಮತ್ತು ಸಿಬಿಐ ಬಗ್ಗೆ ಕಲ್ಪನೆ ಇಲ್ಲ. ಹಾಗಾಗಿ ಗೊತ್ತಿಲ್ಲದ ವಿಚಾರ ಬಗ್ಗೆ ಮಾತನಾಡುವುದಿಲ್ಲ. ಇಡಿ ಅಧಿಕಾರಿಗಳು ತುಂಬಾನೇ ಸಮಾಧಾನವಾಗಿ ಪ್ರಶ್ನೆಗಳನ್ನು ಕೇಳಿ ನನ್ನಿಂದ ಉತ್ತರ ಪಡೆದುಕೊಂಡರು. ನನ್ನ ಉತ್ತರಗಳು ಇಡಿ ಅಧಿಕಾರಿಗಳಿಗೆ ಸಮಾಧಾನ ಆದಂತೆ ಕಾಣುತ್ತಿದೆ. ಹಾಗಾಗಿ ಮತ್ತೊಮ್ಮೆ ವಿಚಾರಣೆಗೆ ಕರೆದಿಲ್ಲ ಎಂದು ತಿಳಿಸಿದರು.

    ಇದೆಲ್ಲ ರಾಜಕೀಯ, ದೇವಾನುದೇವತೆಗಳಿಗೆ ಅಮೃತ ಮತ್ತು ವಿಷನೂ ಬಂದಿದೆ. ಅಮೃತ ಬಂದಾಗ ಖುಷಿ ಪಡೋದರ ಜೊತೆಗೆ ವಿಷ ಬಂದಾಗಲೂ ಎದುರಿಸುವ ಧೈರ್ಯ ಇರಬೇಕು. ಇಂತಹ ಕಷ್ಟಗಳನನು ಸಹಿಸಿಕೊಳ್ಳುವ ಶಕ್ತಿ ದೇವರು ನನಗೆ ಕೊಡಲಿ ಮತ್ತು ವಿರೋಧಿಗಳಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.