Tag: Laxmi

  • ಎಸ್‍ಪಿಬಿ-ಲಕ್ಷ್ಮಿ ಅಭಿನಯದ ಸಿನಿಮಾ ರಿಲೀಸ್‍ಗೆ ಸಿದ್ಧತೆ

    ಎಸ್‍ಪಿಬಿ-ಲಕ್ಷ್ಮಿ ಅಭಿನಯದ ಸಿನಿಮಾ ರಿಲೀಸ್‍ಗೆ ಸಿದ್ಧತೆ

    – ಕನ್ನಡದಲ್ಲಿ ಡಬ್ ಆಗ್ತಿರೋ ಚಿತ್ರ

    ಬೆಂಗಳೂರು: ಸ್ವರ ಮಾಂತ್ರಿಕ, ಸಂಗೀತ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಂದನದ ಗೊಂಬೆ ಲಕ್ಷ್ಮಿ ಅಭಿನಯದ ‘ಮಿಥುನಂ’ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿದ್ದು, ಕೆಲವೇ ದಿನಗಳಲ್ಲಿ ಸಿನಿಮಾ ಚಿತ್ರಮಂದಿರ ಪ್ರವೇಶಿಸಲಿದೆ. ಕೇವಲ ಗಾಯಕರಾಗಿ ಅಲ್ಲದೇ ಎಸ್‍ಪಿಬಿ ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಕನ್ನಡ ಸೇರಿದಂತೆ 70ಕ್ಕೂ ಅಧಿಕ ಸಿನಿಮಾಗಳಲ್ಲಿ ಎಸ್‍ಪಿಬಿ ನಟಿಸಿದ್ದಾರೆ.

    8 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ತೆಲುಗು ಮಿಥುನಂ ಕನ್ನಡದಲ್ಲಿ ಮಿಥುನನಾಗಿ ತೆರೆಗೆ ಅಪ್ಪಳಿಸಲಿದೆ. 2012ರಲ್ಲಿ ತೆರೆಕಂಡಿದ್ದ ಈ ಸಿನಿಮಾದಲ್ಲಿ ಎಸ್‍ಪಿಬಿ ಮತ್ತು ಲಕ್ಷ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಶ್ರೀರಮಣ ರಚಿತ ಮಿಥುನಂ ಕಾದಂಬರಿಯನ್ನ ನಿರ್ದೇಶಕ ತನಿಕೆಳ್ಳ ಭರಣಿ ತೆರೆಯ ಮೇಲೆ ತಂದು ಮೋಡಿ ಮಾಡಿದ್ದರು. ಕಾದಂಬರಿ ಆಧಾರಿತ ಈ ಸಿನಿಮಾ ನಾಲ್ಕು ರಾಜ್ಯ ಪ್ರಶಸ್ತಿಗಳನ್ನ ತನ್ನದಾಗಿಸಿಕೊಂಡಿತ್ತು.

    ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್ ಸ್ಟುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ಕಾರ್ಯಗಳು ನಡೆದಿವೆ. ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ರಾಜ್ಯಾದ್ಯಂತ ಚಿತ್ರ ಬಿಡುಗಡೆಗೆ ಪ್ಲಾನ್ ಮಾಡಿಕೊಳ್ಳಲಾಗಿದ್ದು, ರಿಲೀಸ್ ದಿನಾಂಕ ಅಂತಿಮವಾಗಬೇಕಿದೆ.

    ಅನ್‍ಲಾಕ್ ಬಳಿಕ ಕಳೆದ 15 ದಿನಗಳಿಂದ ಚಿತ್ರಮಂದಿರಗಳು ತೆರೆದಿವೆ. ಕೊರೊನಾ ಆತಂಕದ ನಡುವೆಯೂ ಜನರು ಸಹ ನಿಧಾನವಾಗಿ ಚಿತ್ರಮಂದಿರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಪ್ರೇಕ್ಷಕರ ಕೊರತೆ ಹಿನ್ನೆಲೆ ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರತಂಡಗಳು ಹಿಂದೇಟು ಹಾಕುತ್ತಿವೆ. ಹಾಗಾಗಿ ಹಳೆಯ ಸೂಪರ್ ಹಿಟ್ ಫಿಲಂಗಳನ್ನ ರೀ ರಿಲೀಸ್ ಮಾಡಲಾಗುತ್ತಿದೆ. ಕೆಲ ಬೇರೆ ಭಾಷೆಯ ಹೊಸ ಸಿನಿಮಾಗಳನ್ನ ಡಬ್ ಮಾಡಿ ಕನ್ನಡಕ್ಕೆ ತರಲಾಗ್ತಿದೆ. ಈ ಎಲ್ಲ ಬೆಳವಣಿಗೆಗಳ ಹಳೆ ತೆಲುಗು ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿದೆ.