Tag: Lawyers

  • ವಕೀಲರಿಗೆ ಟೋಲ್ ವಿನಾಯತಿ- ವೈರಲ್ ಸುದ್ದಿಯ ಸತ್ಯ

    ವಕೀಲರಿಗೆ ಟೋಲ್ ವಿನಾಯತಿ- ವೈರಲ್ ಸುದ್ದಿಯ ಸತ್ಯ

    ಬೆಂಗಳೂರು: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ವಕೀಲರಿಗೆ ದೇಶಾದ್ಯಂತ ಟೋಲ್ ಫೀ ವಿನಾಯತಿ ನೀಡಿದೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

    ಈ ಸಂಬಂಧ ಐಎಎಸ್ ಅಧಿಕಾರಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಲಾಯದ ಖಾಸಗಿ ಕಾರ್ಯದರ್ಶಿ ಸಂಕೇತ್ ಭೋಂಡ್ವೆ ಅವರು ವಕೀಲ ರವಿಗೌಡ ಅವರಿಗೆ ಡಿಸೆಂಬರ್ 3ರಂದು ಪತ್ರ ಬರೆದಿದ್ದಾರೆ. ಈ ಮೂಲಕ ಡಿಸೆಂಬರ್ 1ರಿಂದ ಅನ್ವಯವಾಗುವಂತೆ ಭಾರತದ ಎಲ್ಲಾ ರಾಜ್ಯಗಳ ವಕೀಲರಿಗೆ ದೇಶಾದ್ಯಂತ ಟೋಲ್ ಫೀ ವಿನಾಯತಿ ನೀಡಲಾಗಿದೆ. ಹೀಗಾಗಿ ವಕೀಲರು ಟೋಲ್ ಪ್ಲಾಜಾಗಳಲ್ಲಿ ತಮ್ಮ ಐಡಿ ಕಾರ್ಡ್ ತೋರಿಸಿದರೆ ಸಾಕು ಎಂದು ಪತ್ರದಲ್ಲಿ ಬರೆಯಲಾಗಿತ್ತು.

    ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪತ್ರ ಎನ್ನಲಾಗಿದ್ದ ಪತ್ರವು ವಾಟ್ಸಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಅಸಲಿಗೆ ಇದು ಸುಳ್ಳು ಪತ್ರವಾಗಿದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟ್ವೀಟ್ ಮೂಲಕ ಡಿಸೆಂಬರ್ 11ರಂದು ಸ್ಪಷ್ಟನೆ ನೀಡಿದ್ದು, ವಕೀಲರಿಗೆ ಟೋಲ್ ಪ್ಲಾಜಾಗಳಲ್ಲಿ ಯಾವುದೇ ರೀತಿಯ ಶುಲ್ಕ ವಿನಾಯತಿ ನೀಡಿಲ್ಲ ಎಂದು ತಿಳಿಸಿದೆ.

    ಈ ಕುರಿತು ಉತ್ತರ ನೀಡುವಂತೆ ಭೋಂಡ್ವೆ ಅವರು ಡಿಸೆಂಬರ್ 3ರಂದು ವಕೀಲ ಆರ್.ಬಾಸ್ಕರದಾಸ್ ಅವರಿಗೆ ಪತ್ರ ಬರೆದಿದ್ದರು. ಸಚಿವಾಲಯ ಕೇಳಿದ್ದ ಪ್ರಶ್ನೆಗಳಿಗೆ ಬಾಸ್ಕರದಾಸ್ ಅವರು ಉತ್ತರಿಸಿದ ಪತ್ರವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ರವಾನಿಸಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಮುಂದಿನ ಕ್ರಮ ಜರುಗಿಸಲಿದೆ ಎಂದು ಭೋಡ್ವೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

  • ಅಪ್ರಾಪ್ತೆ ಅತ್ಯಾಚಾರಗೈದ ಆರೋಪಿಯನ್ನು ಕೋರ್ಟ್ ಆವರಣದಲ್ಲೇ ಥಳಿಸಿದ ವಕೀಲರು

    ಅಪ್ರಾಪ್ತೆ ಅತ್ಯಾಚಾರಗೈದ ಆರೋಪಿಯನ್ನು ಕೋರ್ಟ್ ಆವರಣದಲ್ಲೇ ಥಳಿಸಿದ ವಕೀಲರು

    ಭೋಪಾಲ್: ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸಾರ್ವಜನಿಕರು ಸಹ ಅಷ್ಟೇ ಸಿಟ್ಟಿಗೇಳುತ್ತಿದ್ದು, ಇದೀಗ ಕೋರ್ಟ್ ಆವರಣದಲ್ಲಿ ವಕೀಲರ ಗುಂಪೊಂದು ಆರೋಪಿಗಳನ್ನು ಥಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಮಧ್ಯಪ್ರದೇಶದ ಇಂದೋರ್ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಈ ಪ್ರಕರಣ ನಡೆದಿದ್ದು, ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿ ವಿಚಾರಣೆಗೆಂದು ಕೋರ್ಟಿಗೆ ಆಗಮಿಸಿದಾಗ ವಕೀಲರ ಗುಂಪು ಥಳಿಸಿದೆ.

    ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆರೋಪಿಯ ಮುಖಕ್ಕೆ ಪೊಲೀಸರು ಕಪ್ಪು ಬಟ್ಟೆ ಕಟ್ಟಿದ್ದು, ಪ್ರಕರಣದ ಕುರಿತು ಅರಿತ ವಕೀಲರು ಆರೋಪಿಯನ್ನು ಅಟ್ಟಾಡಿಸಿಕೊಂಡು ಥಳಿಸಿದ್ದಾರೆ. ನಂತರ ವಕೀಲರಿಂದ ಆರೋಪಿಯನ್ನು ರಕ್ಷಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

    ಆರೋಪಿಯು ನಾಲ್ಕು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ ಘಟನೆ ಇಂದೋರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಈತನ ಬಂಧನದ ನಂತರ ಆರೋಪಿಯನ್ನು ಮೂರು ದಿನಗಳ ಕಾಲ ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿತ್ತು. ಶನಿವಾರ ಅವಧಿ ಮುಕ್ತಾಯವಾಗಿದ್ದು, ಆರೋಪಿಯನ್ನು ಪೊಲೀಸರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

    ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯನ್ನು ಜೈಲಿಗೆ ಕರೆದೊಯ್ಯುತ್ತಿದ್ದ ವೇಳೆ ವಕೀಲರ ಗುಂಪು ಆತನನ್ನು ಥಳಿಸಿದೆ.

  • ವಕೀಲರು, ಪೊಲೀಸರ ಮಧ್ಯೆ ಮಾರಾಮಾರಿ – ಕಾರುಗಳಿಗೆ ಬೆಂಕಿ, ಕೋರ್ಟ್ ಆವರಣದಲ್ಲಿ ಹೈಡ್ರಾಮಾ

    ವಕೀಲರು, ಪೊಲೀಸರ ಮಧ್ಯೆ ಮಾರಾಮಾರಿ – ಕಾರುಗಳಿಗೆ ಬೆಂಕಿ, ಕೋರ್ಟ್ ಆವರಣದಲ್ಲಿ ಹೈಡ್ರಾಮಾ

    ನವದೆಹಲಿ: ತೀಸ್ ಹಜಾರಿ ನ್ಯಾಯಾಲಯ ಆವರಣದಲ್ಲಿ ಇಂದು ಸಂಜೆ ಹೈಡ್ರಾಮಾ ನಡೆದಿದ್ದು ವಕೀಲರು, ಪೊಲೀಸರ ಮಧ್ಯೆ ಮಾರಾಮಾರಿ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

    ಘಟನೆಯಲ್ಲಿ ಹಲವು ಕಾರುಗಳಿಗೆ ಬೆಂಕಿ ಹಚ್ಚಲಾಗಿದ್ದು, ಒರ್ವ ವಕೀಲರಿಗೆ ಗಂಭೀರ ಗಾಯವಾಗಿದೆ. ಪೊಲೀಸರ ವರ್ತನೆ ಖಂಡಿಸಿ ನೂರಾರು ವಕೀಲರು ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಬೆಂಕಿಯನ್ನು ಹತೋಟಿಗೆ ತರಲು ಈಗಾಗಲೇ 10 ಅಗ್ನಿಶಾಮಕ ವಾಹನಗಳು ನ್ಯಾಯಾಲಯ ಆವರಣಕ್ಕೆ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ. ಗಲಾಟೆಯ ಸಂದರ್ಭದಲ್ಲಿ ಗುಂಡಿನ ಶಬ್ದ ಸಹ ಕೇಳಿ ಬಂದಿದೆ.

    ಗಾಯಗೊಂಡ ವಕೀಲರನ್ನು ಸೇಂಟ್ ಸ್ಟೀಫನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರನೇ ಬೆಟಾಲಿಯನ್ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.

    ಪಾರ್ಕಿಂಗ್ ಸಮಸ್ಯೆ ಕುರಿತು ಕೆಲವು ವಕೀಲರು ಮತ್ತು ಪೊಲೀಸ್ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆದಿದ್ದು, ಇದೇ ವಿಷಯ ಹಲ್ಲೆ ಮಾಡುವಷ್ಟರ ಮಟ್ಟಿಗೆ ಬೆಳೆದಿದೆ ಎಂದು ವಕೀಲರು ವಿವರಿಸಿದ್ದಾರೆ. ಇಬ್ಬರ ನಡುವಿನ ಗಲಾಟೆಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನ್ಯಾಯಾಲಯದ ಸಂಕೀರ್ಣದಲ್ಲಿ ಪಾರ್ಕಿಂಗ್ ಸಮಸ್ಯೆ ಕುರಿತು ವಕೀಲರು ಕೋಪಗೊಂಡಿದ್ದಾರೆ. ಪೊಲೀಸರು ಹಾಗೂ ಮಾಧ್ಯಮದವರು ಪ್ರವೇಶಿಸದಂತೆ ಆವರಣದೊಳಗೆ ಬೀಗ ಹಾಕಿದ್ದಾರೆ. ಈ ಕುರಿತು ಪೊಲೀಸರು ಹಾಗೂ ವಕೀಲರ ನಡುವೆ ವಾಗ್ವಾದ ನಡೆದು ಜಗಳಕ್ಕೆ ತಿರುಗಿದೆ ಎಂದು ಮೂಲಗಳು ತಿಳಿಸಿವೆ.

    ಉದ್ವಿಗ್ನ ಪರಿಸ್ಥತಿಯನ್ನು ಮನಗಂಡು ನ್ಯಾಯಾಲಯ ಸಂಕೀರ್ಣದ ಎಲ್ಲ ಗೇಟ್‍ಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ.

  • ಹಾಸನದಲ್ಲಿ ಸರ್ಕಾರದ ಹಣ ಪೋಲು – 150 ವರ್ಷದ ಹಿಂದಿನ ಕಟ್ಟಡದಲ್ಲಿದೆ ನ್ಯಾಯಾಲಯ

    ಹಾಸನದಲ್ಲಿ ಸರ್ಕಾರದ ಹಣ ಪೋಲು – 150 ವರ್ಷದ ಹಿಂದಿನ ಕಟ್ಟಡದಲ್ಲಿದೆ ನ್ಯಾಯಾಲಯ

    ಹಾಸನ: ನಗರದಲ್ಲಿ ಬೃಹತ್ ಹಾಗು ಸುಸಜ್ಜಿತ ನ್ಯಾಯಾಲಯದ ಕಟ್ಟಡ ನಿರ್ಮಾಣವಾಗಿದೆ. ಆದರೆ ಈ ಕಟ್ಟಡಕ್ಕೆ ಇನ್ನೂ ಉದ್ಘಾಟನಾ ಭಾಗ್ಯ ಸಿಗದ ಕಾರಣ 150 ವರ್ಷದ ಹಳೆಯ ಕಟ್ಟಡದಲ್ಲಿ ಈಗಲೂ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ.

    ಸರ್ಕಾರ ಹಣ ಪೋಲು ಮಾಡುವುದು ಎಂದರೆ ಇದೇ ಇರಬೇಕು. ಯಾಕೆಂದರೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣ ಮಾಡಿ ವರ್ಷಗಳೇ ಕಳೆದರೂ ಸಹ ಇನ್ನೂ ಇದಕ್ಕೆ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ. ಇದು ಜಿಲ್ಲೆಯ ವಕೀಲರ ಆಕ್ರೋಶಕ್ಕೆ ಕಾರಣವಾಗಿದೆ.

    ಮತ್ತೊಂದೆಡೆ ಪುರಾತನ ಕಾಲದ ಅಂದಾಜು 150 ವರ್ಷ ಹಳೆಯ ಬ್ರಿಟಿಷರ ಕಾಲದ ಕಟ್ಟಡದಲ್ಲಿ ಈಗಲೂ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ. ಸ್ವತಃ ಲೋಕೋಪಯೋಗಿ ಇಲಾಖೆಯೆ ಈ ಕಟ್ಟಡ ಅಪಾಯದಲ್ಲಿದೆ ಎನ್ನುವ ಬೋರ್ಡ್ ಹಾಕಿದ್ದರೂ ಕೂಡ ಅಲ್ಲಿಯೇ ಕಾರ್ಯನಿರ್ವಹಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

    ಒಂದೆಡೆ ಸುಸಜ್ಜಿತವಾದ ನ್ಯಾಯಾಲಯದ ಕಟ್ಟಡವನ್ನು ಕಟ್ಟಿರುವ ಲೋಕೋಪಯೋಗಿ ಇಲಾಖೆ ಅದನ್ನು ನ್ಯಾಯಾಂಗ ಇಲಾಖೆಗೆ ಕೊಟ್ಟಿಲ್ಲ. ಮತ್ತೊಂದು ಕಡೆ ಅದೇ ಲೋಕೋಪಯೋಗಿ ಇಲಾಖೆ ಈ ಕಟ್ಟಡ ಅಪಾಯದಲ್ಲಿದೆ ಇಲ್ಲಿ ಇರಬೇಡಿ ಎಂದು ಎಚ್ಚರಿಕೆಯ ಫಲಕ ಹಾಕಿದೆ. ಇದು ಹೀಗೆ ಆದರೆ ನಾವು ಪ್ರತಿಭಟನೆಯ ಹಾದಿ ಹಿಡಿಬೇಕಾಗುತ್ತದೆ ಎಂದು ವಕೀಲರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕದ್ದು ಮುಚ್ಚಿ ಸಮ್ಮಿಶ್ರ ಸರ್ಕಾರದ ರೂವಾರಿಯಿಂದ ಸಿಎಂ ಭೇಟಿ

    ಕದ್ದು ಮುಚ್ಚಿ ಸಮ್ಮಿಶ್ರ ಸರ್ಕಾರದ ರೂವಾರಿಯಿಂದ ಸಿಎಂ ಭೇಟಿ

    ಬೆಂಗಳೂರು: ಮೈತ್ರಿ ಸರ್ಕಾರ ಶಾಸಕರ ರಾಜೀನಾಮೆ ನಡುವೆ ಸರ್ಕಾರವನ್ನು ಉಳಿಸಿಕೊಳ್ಳಲು ದೋಸ್ತಿ ನಾಯಕರು ತೀವ್ರ ಪ್ರಯತ್ನ ನಡೆಸಿದ್ದಾರೆ. ಈ ಸಂದರ್ಭದಲ್ಲಿಯೇ ಈ ಹಿಂದೆ 20-20 ಸರ್ಕಾರ ರಚನೆಯ ರೂವಾರಿ ಎನಿಸಿಕೊಂಡಿದ್ದ ಹಿರಿಯ ವಕೀಲರಾದ ದೊರೆರಾಜು ಅವರು ಇಂದು ಕದ್ದು ಮುಚ್ಚಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.

    ಸಿಎಂ ಅವರನ್ನು ಭೇಟಿ ಮಾಡಲು ತಾಜ್ ವೆಸ್ಟೆಂಡ್ ಹೋಟೆಲ್ ಆಗಮಿಸಿದ್ದ ದೊರೆರಾಜು ಅವರು ಹೋಟೆಲಿನಿಂದ ಹೊರ ನಡೆಯುವ ವೇಳೆ ಮಾಧ್ಯಮಗಳ ಕ್ಯಾಮೆರಾಗೆ ಸಿಕ್ಕರು. ಆದರೆ ಈ ಸಂದರ್ಭದಲ್ಲಿ ಮಾಧ್ಯಮಗಳನ್ನು ನೋಡುತ್ತಿದಂತೆ ಮುಖ ಮುಚ್ಚಿಕೊಂಡ ಅವರು ಸ್ಥಳದಿಂದ ಹೊರ ನಡೆದರು.

    ಹೋಟೆಲ್‍ನಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ್ದ ದೊರೆಸ್ವಾಮಿ ಅವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮೈತ್ರಿ ಸರ್ಕಾರದ ರೂವಾರಿ ಎನಿಸಿಕೊಂಡಿದ್ದ ಅವರು ಮಾಧ್ಯಮಗಳನ್ನು ನೋಡಿ ಗಾಬರಿಗೊಂಡಿದ್ದು, ಏಕೆ ಎಂಬ ಅನುಮಾನ ಮೂಡಿದೆ. ಸಿಎಂ ಅವರ ಕಾರನ್ನು ಏರಿದ ದೊರೆರಾಜು ಅವರು ಅಲ್ಲಿಯೂ ಮಾಧ್ಯಮಗಳನ್ನು ನೋಡಿ ಮುಖ ಮುಚ್ಚಿಕೊಂಡಿದ್ದರು.

    ಸಿಎಂ ಅವರ ಭೇಟಿಗೆ ಆಗಮಿಸಿದ್ದ ಅವರು ಹೋಟೆಲ್ ಎದುರು ಕಾದು ನಿಂತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಿಎಂ ಅವರು ದೊರೆಸ್ವಾಮಿ ಅವರನ್ನು ಕಂಡು ಕರೆ ನೀಡಿದ್ದರು. ಕೂಡಲೇ ಸಿಎಂರತ್ತ ತೆರಳಿದ್ದ ದೊರೆಸ್ವಾಮಿ ಅವರು ಕಾರಿನಲ್ಲೇ ಹೋಟೆಲ್ ಒಳಗೆ ತೆರಳಿದ್ದರು. ಆ ಬಳಿಕ ಸಿಎಂ ಅವರೊಂದಿಗೆ ಮಾತುಕತೆ ನಡೆಸಿ ಹೊರ ನಡೆದಿದ್ದರು. ಈ ಸಂದರ್ಭದಲ್ಲೂ ಮಾಧ್ಯಮಗಳಿಗೆ ಮುಖ ತೋರದೆ ತೆರಳಲು ಯತ್ನಿಸಿದರು. ಸಾಮಾನ್ಯವಾಗಿ ಸಿಎಂ ಅವರನ್ನು ಭೇಟಿ ಮಾಡಲು ಆಗಮಿಸಿದ್ದ ಯಾವುದೇ ವ್ಯಕ್ತಿಯಾದರೂ ನೇರವಾಗಿ ತೆರಳುತ್ತಾರೆ. ಆದರೆ ಹಿರಿಯ ವಕೀಲರ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

  • ಸುಳ್ವಾಡಿ ವಿಷ ಪ್ರಕರಣ – 6 ತಿಂಗಳ ನಂತ್ರ ಆರೋಪಿಗಳ ಪರ ವಕೀಲರು ಅರ್ಜಿ

    ಸುಳ್ವಾಡಿ ವಿಷ ಪ್ರಕರಣ – 6 ತಿಂಗಳ ನಂತ್ರ ಆರೋಪಿಗಳ ಪರ ವಕೀಲರು ಅರ್ಜಿ

    ಚಾಮರಾಜನಗರ: ಸುಳ್ವಾಡಿಯ ಮಾರಮ್ಮ ದೇವಸ್ಥಾನದ ಪ್ರಸಾದಕ್ಕೆ ವಿಷ ಹಾಕಿ 17 ಮಂದಿಗೆ ಸಾವಿಗೆ ಕಾರಣವಾಗಿರುವ ಆರೋಪದ ಮೇಲೆ ಬಂಧಿತರಾಗಿರುವ ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ಇದೀಗ ವಕೀಲರು ಮುಂದೆ ಬಂದಿದ್ದಾರೆ.

    ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸುಳ್ವಾಡಿ ವಿಷ ದುರಂತ ನಡೆದು 6 ತಿಂಗಳು ಕಳೆದಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೂ ಬಂಧಿತ ಅರೋಪಿಗಳಾದ ಇಮ್ಮಡಿ ಮಹದೇವಸ್ವಾಮೀಜಿ, ಅಂಬಿಕಾ, ಮದೇಶ್ ಹಾಗೂ ದೊಡ್ಡಯ್ಯ ಪರವಾಗಿ ವಕಾಲತ್ತು ವಹಿಸಲು ಯಾರೋಬ್ಬ ವಕೀಲರು ಕೂಡ ಮುಂದೆ ಬಂದಿರಲಿಲ್ಲ. ಇದೀಗ ಇಂದು ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಆರೋಪಿಗಳ ವಿಚಾರಣೆಯ ವೇಳೆ ಇಬ್ಬರು ವಕೀಲರು ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ:  ಸುಳ್ವಾಡಿ ವಿಷಪ್ರಸಾದ ದುರಂತಕ್ಕೆ ಇಂದಿಗೆ ಒಂದು ತಿಂಗಳು- ಇನ್ನೂ ಡಿಸ್ಚಾರ್ಜ್ ಆಗಿಲ್ಲ ಅಸ್ವಸ್ಥರು

    ಇಮ್ಮಡಿ ಮಹದೇವಸ್ವಾಮೀಜಿ ಪರ ಮಡಿಕೇರಿ ಮೂಲದ ವಕೀಲ ಅಪ್ಪಣ್ಣ ವಕಾಲತ್ತು ವಹಿಸಲು ಮುಂದೆ ಬಂದಿದ್ದಾರೆ. ಇನ್ನೂ ಅಂಬಿಕಾ, ಮದೇಶ್ ಹಾಗೂ ದೊಡ್ಡಯ್ಯ ಪರವಾಗಿ ವಕಾಲತ್ತು ಮಾಡಲು ಬೆಂಗಳೂರು ಮೂಲದ ಡಿ.ಪಿ.ಸದಾನಂದ ಅವರು ವಕಾಲತ್ತು ವಹಿಸಲು ಅರ್ಜಿ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಈ ಇಬ್ಬರು ವಕೀಲರ ಪರವಾಗಿ ಅವರ ಜೂನಿಯರ್ ಗಳು ಇಂದು ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಸ್ವೀಕಾರ ಮಾಡಿರುವ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದ್ದಾರೆ.