Tag: law

  • ನನ್ನನ್ನು ಸುತ್ತಮುತ್ತ ಇದ್ದೋರು ದಿನಾ ಅತ್ಯಾಚಾರ ಮಾಡ್ತಾರೆ!

    ನನ್ನನ್ನು ಸುತ್ತಮುತ್ತ ಇದ್ದೋರು ದಿನಾ ಅತ್ಯಾಚಾರ ಮಾಡ್ತಾರೆ!

    ಮನೆಯ ಪಡಸಾಲೆಯಲ್ಲಿ ಕೂತು ದಿನಾ ಕಣ್ಣೀರಲ್ಲಿ ಕೈ ತೊಳೆಯೋ ಮಾನಿಕಾ ಅನ್ನೋ ಹೆಣ್ಣಿನ ಕಥೆಯಲ್ಲ, ಜೀವನ ಇದು. ಈಗಂತೂ ಮಾನಿಕಾಳ ಕಣ್ಣಾಲಿಗಳು ಅತ್ತು ಅತ್ತು ಸಂಪೂರ್ಣವಾಗಿ ಬತ್ತಿ ಹೋಗಿವೆ. 14ರ ಹರೆಯದಲ್ಲಿ ಮದುವೆಯಾಗಿ ಸುಂದರ ಕನಸುಗಳನ್ನು ಕಾಣುತ್ತಾ ಗಂಡನ ಮನೆಗೆ ಕಾಲಿಟ್ಟಾಗ ಮಾನಿಕಾಗೆ ಈಗ ಕೇವಲ 21ರ ಹರೆಯ. ಈಗಂತೂ ಮಾನಿಕಾಗೆ ಈಗ ಗಂಡನ ಮನೆ ಹಾಗೂ ತನ್ನ ತವರು ಮನೆ ಅಕ್ಷರಶಃ ನರಕವಾಗಿಬಿಟ್ಟಿದೆ. ಶೌಚಾಲಯಕ್ಕೆ ಹೋಗಬೇಕೆಂದರೂ ಮನೆಯವರ ಅನುಮತಿ ಇಲ್ಲದೆ ಹೊರಹೋಗುವಂತಿಲ್ಲ.

    ಹೊರಗಿನವರು ಬಿಡಿ ಮಾನಿಕಾಳ ಮನೆಯವರೇ ಆಕೆಯನ್ನು ಅಸ್ಪೃಶ್ಯಳಂತೆ ಕಾಣತೊಡಗಿದ್ದಾರೆ. ಮದುವೆಯಾಗಿ ಸರಿಯಾಗಿ ಎರಡು ವರ್ಷ ತುಂಬುತ್ತಿದ್ದಂತೆ ಮಾನಿಕಾ 5 ಜನ ಗಂಡಸರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು. ಹರಿಯಾದ ಪಾನಿಪತ್, ಸೋನೇಪತ್, ಕುರುಕ್ಷೇತ್ರ ಹೀಗೆ ನಾನಾ ಕಡೆಗಳಲ್ಲಿ ಸತತ ನಾಲ್ಕು ದಿನಗಳ ಕಾಲ ಮಾನಿಕಾ ದೈಹಿಕ ದೌರ್ಜನ್ಯವನ್ನು ಅನುಭವಿಸಿದ್ದಳು. ಹೀಗಾಗಿ ಆಕೆಯ ಮನೆಯವರ ಪ್ರಕಾರ ಇಂತಹಾ ಘಟನೆ ನಡೆಯಲು ಮಾನಿಕಾಳೇ ನೇರ ಕಾರಣ ಎಂದಾಗಿತ್ತು. ಆರೋಪಿಗಳಿಗೇನೋ ಸಜೆಯಾಯಿತು. ಆದ್ರೆ, ಮಾನಿಕಾ ಇಂದಿಗೂ ಮನೆಯವರ ಅಮಾನವೀಯ ವರ್ತನೆಯಿಂದಾಗಿ ಬೇಸತ್ತು ಹೋಗಿದ್ದಾಳೆ.

    ಹೇಳಿ ಕೇಳಿ ಮಾನಿಕಾ ವಾಸವಾಗಿದ್ದದ್ದು ಪುಟ್ಟ ಹಳ್ಳಿಯೊಂದರಲ್ಲಿ. ಅನಕ್ಷರಸ್ಥರೇ ಹೆಚ್ಚಿರುವ ಹಳ್ಳಿಯಲ್ಲಿ ಮಾನಿಕಾಳ ಸ್ಥಿತಿ ಕಂಡು ಮರುಗುವವರಿಗಿಂತ ದೂಷಿಸುವವರೇ ಹೆಚ್ಚಿದ್ದರು. ಹೀಗಾಗಿ ಸಾಯೋಕೂ ಆಗದೆ ಬದುಕೋಕೂ ಆಗದೆ ಇಂದಿಗೂ ಕಣ್ಣೀರಲ್ಲಿ ಕೈ ತೊಳೀತಿದ್ದಾಳೆ. ಇದು ಕೇವಲ ಮಾನಿಕಾಳ ಕಥೆಯಲ್ಲ. ಆಕೆಯ ಮೇಲೆ ಗ್ಯಾಂಗ್ ರೇಪ್ ಆಗಿದ್ದು 2012ರ ಸೆಪ್ಟೆಂಬರ್ 28 ರಂದು. ಅದೇ ತಿಂಗಳಲ್ಲಿ ಒಟ್ಟು 12 ಅತ್ಯಾಚಾರ ಪ್ರಕರಣಗಳು ಹರಿಯಾಣದಲ್ಲಿ ದಾಖಲಾಗಿತ್ತು. ಇದು ಕೇವಲ ಒಂದು ನಿದರ್ಶನ ಅಷ್ಟೇ. ಕೆಳ ವರ್ಗದ, ಭೂ ರಹಿತ ಸಮುದಾಯದ ಒಬ್ಬ ಹೆಣ್ಣು ಮಗಳು ಇಂದಿಗೂ ಈ ರೀತಿಯ ಕಷ್ಟ ಅನುಭವಿಸ್ತಾ ಇದ್ದಾಳೆ ಅಂದ್ರೆ ಭಾರತದಲ್ಲಿ ಇನ್ನು ಅತ್ಯಾಚಾರಕ್ಕೆ ಒಳಗಾದ ಅದೆಷ್ಟೋ ಹೆಣ್ಣು ಮಕ್ಕಳ ಸ್ಥಿತಿ ಹೇಗಿರಬೇಡ ಯೋಚಿಸಿ.

    ಅತ್ಯಾಚಾರಕ್ಕೆ ಒಳಗಾದ ಹೆಣ್ಣಿಗೆ ಮಾನಸಿಕ ಆಸರೆ, ಆರೈಕೆ ಬೇಕಾಗುತ್ತದೆ ಅನ್ನೋ ಕನಿಷ್ಠ ಸೌಜನ್ಯವೂ ನಮ್ಮ ಜನಕ್ಕೆ ಯಾಕೆ ಬಂದಿಲ್ಲ? ಇಂಡಿಯಾಸ್ ಡಾಟರ್ ಅನ್ನೋ ಶೀರ್ಷಿಕೆ ಅಡಿ ದೆಹಲಿ ನಿರ್ಭಯಾ ಅತ್ಯಾಚಾರಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರ ಬಿಡುಗಡೆಯಾಗಿ ಸಾಕಷ್ಟು ವಿವಾದ ಎದ್ದಿದ್ದು ನಿಮಗೆಲ್ಲ ನೆನಪಿರಬಹುದು. ಆ ನಿರ್ಭಯಾ ಈಗ ನಮ್ಮ ನಡುವೆ ಇಲ್ಲ. ಒಂದು ವೇಳೆ ಆಕೆ ಬದುಕಿದ್ದಿದ್ರೆ ನಮ್ಮ ಸಮಾಜ ಆಕೆಯನ್ನು ಯಾವ ರೀತಿ ನೋಡುತ್ತಿತ್ತು? ಎಲ್ಲೋ ಒಂದೋ ಎರಡೋ ಉದಾರ ಮನಸ್ಥಿತಿಯವರು ಇರಬಹುದು. ಆದ್ರೆ, ಎಲ್ಲರೂ ಆಕೆಯನ್ನು ಮುಕ್ತ ಮನಸ್ಸಿನಿಂದ ನಮ್ಮಲ್ಲಿ ಆಕೆಯೂ ಒಬ್ಬಳು ಅನ್ನೋದಾಗಿ ಸ್ವೀಕಾರ ಮಾಡುತ್ತಿದ್ದರಾ ಗೊತ್ತಿಲ್ಲ. ಬಹುಶಃ ಅತ್ಯಾಚಾರ ಸಂತ್ರಸ್ತೆ ಅನ್ನೋ ಹಣೆ ಪಟ್ಟಿ ಕೊನೆಯವರೆಗೂ ಆಕೆಯ ಹಿಂದೆ ಭೂತದಂತೆ ಕಾಡ್ತಾನೇ ಇರ್ತಾ ಇತ್ತೇನೋ.

    ಇನ್ನು ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರದಲ್ಲಿ ಅಪರಾಧಿ ಮುಖೇಶ್ ಅತ್ಯಾಚಾರ ಮಾಡುವುದಕ್ಕೆ ನಿರ್ಭಯಾಳೇ ಕಾರಣವಾಗಿದ್ದಳು ಅಂತಾ ಏನೊಂದೂ ಪಶ್ಚಾತಾಪವಿಲ್ಲದೇ ಹೇಳಿಕೆ ಕೊಟ್ಟಿದ್ದ. ಹಾಗಾದ್ರೆ, ಶೌಚಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಾನಿಕಾಳ ಮೇಲೆ ಅತ್ಯಾಚಾರವಾಗಿತ್ತು. ನಮ್ಮ ಹೆಣ್ಣು ಮಕ್ಕಳಿಗೆ ಶೌಚಕ್ಕೆ ಹೋಗುವುದಕ್ಕೂ ಅನುಮತಿ ಇಲ್ಲವೇ? ಇನ್ನು ನಿರ್ಭಯಾ ರಾತ್ರಿ ಹೊತ್ತಲ್ಲಿ ತಿರುಗಾಡುತ್ತಿದ್ದದ್ದು, ಸಿನಿಮಾ ಹೋಗುತ್ತಿದ್ದದ್ದು ತಪ್ಪು ಎಂದಾದರೆ ಚಿಕ್ಕ ಚಿಕ್ಕ ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆಯುತ್ತದಲ್ಲಾ? ಅವರೆಲ್ಲಾ ಆಟ ಆಡುವುದು, ಶಾಲೆಗೆ ಹೋಗುವುದು, ಅಂಕಲ್ ಅಂತಾ ಎಳೆ ತೋಳಲ್ಲಿ ಬಂದು ಆಲಂಗಿಸುತ್ತವಲ್ಲಾ ಅವೆಲ್ಲವನ್ನೂ ಕೆಟ್ಟ ದೃಷ್ಟಿಯಲ್ಲಿ ನೋಡಬೇಕೇ ಅನ್ನುವ ಪ್ರಶ್ನೆ ಕೂಡಾ ಕಾಡುತ್ತೆ.

    ಅತ್ಯಾಚಾರಕ್ಕೆ ಒಳಗಾಗೋ ಹೆಣ್ಣು ತನಗಾಗುವ ದೈಹಿಕ ಹಾಗೂ ಮಾನಸಿಕ ಆಘಾತಕ್ಕಿಂತ ಅದರ ನಂತರದಲ್ಲಿ ಬಚಾವಾಗಿ ಇದೇ ಸಮಾಜವನ್ನು ಎದುರಿಸಬೇಕಾಗುತ್ತದಲ್ಲಾ ಅದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ತನ್ನನ್ನು ನೋಡುವ ಸಾವಿರಾರು ಕಣ್ಣುಗಳು ಕುಟುಕೋ ಭಯ, ಮೊನಚು ಮಾತುಗಳಿಂದಾಗುವ ನೋವು, ಯಾರೋ ಆಡಿಕೊಂಡು ನಗುವ ಸಂದರ್ಭ, ಹೀಗೆ ಹೆಣ್ಣು ದಿನಾ ಒಂದಲ್ಲಾ ಒಂದು ರೀತಿಯಲ್ಲಿ ಅತ್ಯಾಚಾರಕ್ಕೆ ಒಳಗಾಗುತ್ತಲೇ ಇರುತ್ತಾಳೆ. ಬೆಂಕಿಯಿಂದ ಬಾಣಲೆಗೆ ಬೀಳುವ ಸ್ಥಿತಿ ಆಕೆಯದ್ದು. ಆಕೆಯ ದುಗುಡ, ಆತಂಕವನ್ನು ಯಾರಾದರೂ ಪರಿಹರಿಸಬಲ್ಲರಾ? ಇನ್ನು ಮಾನಿಕಾಳ ಈಗಿನ ಸ್ಥಿತಿಯ ಬಗ್ಗೆ ಮಾತನಾಡುವುದಾದರೆ, ಆಕೆ ಏನಾದರೂ ಬನ್ನಿ ನನ್ನ ಮೇಲೆ ಅತ್ಯಾಚಾರ ಎಸಗಿ, ನಾನು ನಿಮ್ಮ ದೈಹಿಕ ವಾಂಛೆಗಳನ್ನು ಈಡೇರಿಸುತ್ತೇನೆ ಅನ್ನೋದಾಗಿ ಹೇಳಿದ್ದಳಾ? ಇಲ್ಲವಲ್ಲಾ? ಅಂದ ಮೇಲೆ ಆಕೆಗೆ ಮನೆಯಿಂದ ಹೊರ ಹೋಗದ ಸ್ಥಿತಿ ಯಾಕೆ ಬಂತು? ಗಂಡನೊಡನೆ ಸೇರಿ ಅದೆಷ್ಟೋ ತಿಂಗಳುಗಳೇ ಇರುಳಿದವು. ಹಾಗಾದ್ರೆ, ಜೀವನ ಪೂರ್ತಿ ಇದೇ ರೀತಿ ಇರಬೇಕಾ?

    ಹೆಣ್ಣು ಅಂದ್ರೆ ನಮ್ಮ ಸುಖಕ್ಕೆ ಅನ್ನೋ ಧೋರಣೆ ಏನಾದರೂ ಈ ಸಮಾಜದಲ್ಲಿ ಇದೆಯಾ? ಅಥವಾ ಹೆಣ್ಣಿಗೆ ನಮ್ಮ ಸಮಾಜದಲ್ಲಿ ಸ್ವಾತಂತ್ರ್ಯ ಅನ್ನೋದು ಮರೀಚಿಕೆಯಾಯಿತೇ? ಇಲ್ಲಾ ತನ್ನ ಸ್ವಾತಂತ್ರ್ಯವನ್ನು ಅನುಭವಿಸುವ ಹಕ್ಕು ಆಕೆಗಿಲ್ಲವೇ? ಒಬ್ಬ ಹೆಣ್ಣಾಗಿ ಇಂತಹಾ ಅನೇಕ ಪ್ರಶ್ನೆಗಳು ದಿನಾ ಮನಸ್ಸಿನಲ್ಲಿ ಕೊರೆಯುತ್ತಲೇ ಇರುತ್ತದೆ. ದಾಖಲೆಗಳ ಪ್ರಕಾರ ಭಾರತದಲ್ಲಿ ಪ್ರತೀ 1 ನಿಮಿಷಕ್ಕೊಂದು ಲೈಂಗಿಕ ದೌರ್ಜನ್ಯ, ಪ್ರತೀ 20 ನಿಮಿಷಕ್ಕೊಂದು ಅತ್ಯಾಚಾರ, 150 ನಿಮಿಷಕ್ಕೊಂದು 16 ವರ್ಷದ ಒಳಗಿನ ಹೆಣ್ಣು ಮಗುವಿನ ಮೇಲೆ ರೇಪ್ ಆಗುತ್ತದೆ. ಇದರಲ್ಲಿ ದಾಖಲಾಗದ ಪ್ರಕರಣಗಳು ಅದೆಷ್ಟು ಅನ್ನೋದು ಇದುವರೆಗೂ ಕಂಡುಕೊಳ್ಳಲಾಗಿಲ್ಲ. ಹಾಗಾದರೆ ನಾವು ಎಂಥಾ ಹೇಸಿಗೆಯಲ್ಲಿದ್ದೇವೆ? ನಾವು ಮನೆಯಿಂದ ಹೊರಗೆ ಹೊರಟಾಗ ಅದೆಷ್ಟು ಕಾಮಾಲೆ ಕಣ್ಣುಗಳು ನಮ್ಮನ್ನು ಅದೆಂತೆಂಥಾ ಭಾವನೆಯಿಂದ ನೋಡಬಹುದು ಅನ್ನೋದನ್ನು ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ನಮಗೂ ಬದುಕುವ ಹಕ್ಕಿದೆ, ಇಷ್ಟ ಕಷ್ಟಗಳ ಪರಿವೆ ಇದೆ. ಹೆಣ್ಣು ದೈಹಿಕವಾಗಿ ಪುರುಷರಷ್ಟು ಶಕ್ತಳಲ್ಲ ಅನ್ನೋ ಒಂದು ಅಂಶವನ್ನು ಬಳಸಿಕೊಂಡು ಸರಕಾಗಿ ನೋಡುವ ಪ್ರವೃತ್ತಿ ಯಾವಾಗ ದೂರವಾಗುತ್ತದೆ.

    ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಮಹಿಳೆಯ ದನಿಯಾಗಿ ಬೆಂಬಲ ಕೊಡುವ ಮನಸ್ಥಿತಿ ಈ ಸಮಾಜಕ್ಕೆ ಯಾಕಿಲ್ಲ? ಅದೆಷ್ಟೋ ಸಂತ್ರಸ್ತರು ಮರ್ಯಾದೆಗೆ ಅಂಜಿ ಸುಮ್ಮನೆ ಇದ್ದು ಬಿಡ್ತಾರೆ. ಕಾಮುಕರ ಬೆದರಿಕೆಗಳಿಗೆ ಹೆದರಿ ಅದೆಷ್ಟೋ ಪ್ರಕರಣಗಳು ಮುಚ್ಚಿಹೋಗುತ್ತದೆ. ಇನ್ನೂ ಕೆಲವಷ್ಟು ಕಡೆ ಅತ್ಯಾಚಾರಿಗೇ ಮದುವೆ ಮಾಡಿಕೊಡುವ ಪ್ರವೃತ್ತಿಯೂ ಇದೆ. ಅತ್ಯಾಚಾರಿಯನ್ನು ದಂಡಿಸುವ ಕಾನೂನುಗಳು ಇದೆ ಅನ್ನೋ ಜ್ಞಾನವೂ ಅದೆಷ್ಟೋ ಜನರಿಗೆ ಇರುವುದಿಲ್ಲ. ಹೀಗಾಗಿ ಅನ್ಯಾಯದ ವಿರುದ್ಧ ದನಿ ಎತ್ತಲೂ ಸಾಧ್ಯವಾಗದ ಅಸಹಾಯಕ ಪರಿಸ್ಥಿತಿಯಲ್ಲಿರುತ್ತಾರೆ. ಇವಕ್ಕೆಲ್ಲಾ ಕೊನೆ ಯಾವಾಗ ಬರುವುದೋ ಗೊತ್ತಿಲ್ಲ. ಆದರೆ ರಕ್ತ ಬೀಜಾಸುರರ ಥರ ಒಂದಾದ ನಂತರ ಮತ್ತೊಬ್ಬರಂತೆ ಹುಟ್ಟಿಕೊಳ್ಳುತ್ತಿರುವ ಕಾಮಾಂಧರ ಕೃತ್ಯಗಳಿಗೆ ಬ್ರೇಕ್ ಹಾಕೋ ಅಸ್ತ್ರ ಅಂದ್ರೆ ಒಂದು ಕಾನೂನು. ಇನ್ನೊಂದು ಸಮಾಜ ಮಾತ್ರ. ಹಾಗಾಗಿ ಸಮಾಜ ಬದಲಾಗಲಿ. ನೋಡುವ ಹಳದಿ ಕಣ್ಣುಗಳು ತಿಳಿಯಾಗಲಿ ಅನ್ನೋದು ಪ್ರತೀ ಹೆಣ್ಣಿನ ಹೆಬ್ಬಯಕೆ.

    ಕ್ಷಮಾ ಭಾರದ್ವಾಜ್

  • ಮೋದಿಯಂತಹ ಸಹೋದರ ಸಿಕ್ಕಿದ್ರೆ ನೀವು ಚಿಂತೆ ಮಾಡೋ ಅಗತ್ಯವಿಲ್ಲ: ಬಿಜೆಪಿ

    ಮೋದಿಯಂತಹ ಸಹೋದರ ಸಿಕ್ಕಿದ್ರೆ ನೀವು ಚಿಂತೆ ಮಾಡೋ ಅಗತ್ಯವಿಲ್ಲ: ಬಿಜೆಪಿ

    ನವದೆಹಲಿ: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಗುರುವಾರದ ಲೋಕಸಭೆ ಕಲಾಪದಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಮಂಡಿಸಿದ್ದಾರೆ. ಈ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿಯ ಮೀನಾಕ್ಷಿ ಲೇಖಿ, ಪ್ರಧಾನಿ ನರೇಂದ್ರ ಮೋದಿ ಅವರಂತಹ ಸಹೋದರ ಮುಸ್ಲಿಂ ಮಹಿಳೆಯರಿಗೆ ಸಿಕ್ಕಿದರೆ ಅವರು ಚಿಂತೆ ಪಡುವ ಅಗತ್ಯವೇ ಇಲ್ಲ ಎಂದು ಹೇಳಿದರು.

    ಈ ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾಗಿರುವುದು ಮಹಿಳೆಯರು. ಹಿಂದಿನಿಂದಲೂ ಹಿಂಸಿಸಿ ಮಹಿಳೆಯನ್ನು ತುಳಿಯಲಾಗುತ್ತಿದೆ. ಈಗ ಈ ಹಿಂಸಾಚಾರಗಳಿಗೆ ಕಡಿವಾಣ ಹಾಕುವ ಸಮಯ ಬಂದಿದ್ದು ನಾವೆಲ್ಲ ಆಲೋಚಿಸಬೇಕಿದೆ ಎಂದು ಹೇಳಿದರು.

    ಮುಸ್ಲಿಂ ಮಹಿಳೆಯರ ಸಮಾನ ಹಕ್ಕು ಮತ್ತು ನ್ಯಾಯಕ್ಕಾಗಿ ಕಾನೂನು ತರಲಾಗುತ್ತದೆ ಹೊರತು ಪ್ರಾರ್ಥನೆ, ಧರ್ಮಕ್ಕೆ ಸಂಬಂಧಿಸಿಲ್ಲ ಎಂದು ಕೇಂದ್ರಸರ್ಕಾರದ ಮಸೂದೆಯನ್ನು ರವಿಶಂಕರ್ ಪ್ರಸಾದ್ ಸಮರ್ಥಿಸಿಕೊಂಡರು.

    ಮಸೂದೆಯಲ್ಲಿ ಏನಿದೆ?
    ಕರಡು ಮಸೂದೆಯಲ್ಲಿ ತ್ರಿವಳಿ ತಲಾಖ್ ನೀಡಿದರೆ ಆ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬೇಕೆಂಬ ಅಂಶವಿದೆ. ತ್ರಿವಳಿ ತಲಾಖ್ ಅಥವಾ ತಲಾಕ್ ಇ ಬಿದ್ದತ್ ಅನ್ನು ಕಾಗ್ನಿಸೆಬಲ್ ಅಪರಾಧ ಎಂದು ಪರಿಗಣಿಸಬೇಕು. ಅಷ್ಟೇ ಅಲ್ಲದೇ ಜಾಮೀನು ನೀಡಬಾರದು. ಜೈಲು ಶಿಕ್ಷೆಯ ಜೊತೆ ತಲಾಖ್ ನೀಡಿದ ಪತಿಗೆ ದಂಡ ವಿಧಿಸುವ ಅವಕಾಶ ಕೂಡ ಇದ್ದು, ಸಂಬಂಧ ನ್ಯಾಯಾಧಿಶರು ದಂಡದ ಪ್ರಮಾಣವನ್ನು ನಿರ್ಧರಿಸಲು ಅನುಮತಿ ನೀಡಲಾಗಿದೆ.

    ಕರುಡು ಮಸೂದೆಯ ಪ್ರಕಾರ ಬಾಯಿ ಮಾತು, ಬರವಣಿಗೆ ಅಥವಾ ಯಾವುದೇ ಎಲೆಕ್ಟ್ರಾನಿಕ್ ಅಂದರೆ ಇಮೇಲ್, ಎಸ್‍ಎಂಎಸ್, ವಾಟ್ಸಪ್ ಮೂಲಕ ತಲಾಖ್ ಹೇಳಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ.

    ಇದೇ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ನಿಷೇಧಿಸಿ ಕಾನೂನು ರೂಪಿಸುವಂತೆ ಕೇಂದ್ರಕ್ಕೆ ಆದೇಶಿಸಿತ್ತು. ಈ ಆದೇಶದ ಅನ್ವಯ ಕೇಂದ್ರ ಸರ್ಕಾರ ಮುಸ್ಲಿಂ ಮಹಿಳೆಯರ ಮದುವೆ, ಹಕ್ಕುಗಳ ರಕ್ಷಣೆಯ ಕರಡು ಮಸೂದೆ 2017ನ್ನು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ನೇತೃತ್ವದ ಆಂತರಿಕ ಸಚಿವಾಲಯ ಸಿದ್ಧಪಡಿಸಿತ್ತು.

     

     

  • ಅತ್ಯಾಚಾರಿಗಳ ಪುರುಷತ್ವ ಹರಣ ಮಾಡುವ ಕಾನೂನು ಜಾರಿಗೆ ತರಬೇಕು: ಶೋಭಾ ಕರಂದ್ಲಾಜೆ

    ಅತ್ಯಾಚಾರಿಗಳ ಪುರುಷತ್ವ ಹರಣ ಮಾಡುವ ಕಾನೂನು ಜಾರಿಗೆ ತರಬೇಕು: ಶೋಭಾ ಕರಂದ್ಲಾಜೆ

    ವಿಜಯಪುರ: ಅತ್ಯಾಚಾರ ನಡೆಸುವ ಆರೋಪಿಗಳ ಪುರುಷತ್ವ ಹರಣ ಮಾಡುವ ಕಾನೂನು ಜಾರಿಗೆ ತರಬೇಕು ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕಠಿಣವಾಗಿ ಹೇಳಿದ್ದಾರೆ.

    ದಲಿತ ಅಪ್ರಾಪ್ತೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆಯ ಹಿನ್ನೆಲೆಯಲ್ಲಿ ಸಂತ್ರಸ್ಥೆಯ ಮನೆಗೆ ಇಂದು ಭೇಟಿ ನೀಡಿದ್ದು, ಬಾಲಕಿಯ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಅಷ್ಟೇ ಅಲ್ಲದೇ ವೈಯಕ್ತಿಕವಾಗಿ 25,000 ರೂ. ಪರಿಹಾರ ಘೋಷಿಸಿದ್ದಾರೆ.

    ಈ ಕೃತ್ಯವನ್ನು ಖಂಡಿಸಿ ಮಾತನಾಡಿದ ಅವರು, ಈ ಘಟನೆ ನೋವಿನ ಸಂಗತಿಯಾಗಿದೆ. ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ನಗರದಲ್ಲಿ ಏನು ನಡೆಯುತ್ತಿದೆ, ಹಾಡಹಗಲೇ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡುತ್ತಾರೆ ಎಂದರೆ ಕಾನೂನು ಪರಿಸ್ಥಿತಿ ಯಾವ ರೀತಿ ಇದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಆಕ್ರೋಶದಿಂದ ಹೇಳಿದರು.

    ನಗರದಲ್ಲಿ ಅಫೀಮು ಹಾಗೂ ಗಾಂಜಾ ಪದಾರ್ಥ ಮಾರಾಟವಾಗುತ್ತಿದೆ. ಇದಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ. ಬಾಲಕಿ ಶವ ಮನೆಯಲ್ಲಿ ಹೇಗೆ ಸಿಕ್ಕಿತು ಎಂದು ಪೊಲೀಸರು ತನಿಖೆ ಮಾಡಬೇಕು. ಅಲ್ಲದೆ ನಿರ್ಭಯಾ ಪ್ರಕರಣದ ಬಳಿಕ ಕ್ರಿಮಿನಲ್ ತಿದ್ದುಪಡಿ ಕಾನೂನು ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

    ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ಅಲ್ಲದೆ ಇಂತಹ ತಪ್ಪು ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಪುರುಷತ್ವ ಹರಣ ಮಾಡುವ ಕಾನೂನು ಜಾರಿಗೆ ತರಬೇಕು. ಇಂತಹ ಶಿಕ್ಷೆಯನ್ನು ಜಾರಿಗೆ ತಂದರೆ ಅತ್ಯಾಚಾರಿಗಳಲ್ಲಿ ಭಯ ಹುಟ್ಟಿಸಿದಂತಾಗುತ್ತದೆ. 2013 ಕ್ರಿಮಿನಲ್ ತಿದ್ದುಪಡಿ ಕಾನೂನನ್ನು ಇನ್ನೂ ಕಠಿಣ ರೀತಿಯಲ್ಲಿ ಜಾರಿಗೆ ತರಬೇಕೆಂದು ಅಧಿವೇಶನದಲ್ಲಿ ನಾನು ಆಗ್ರಹ ಮಾಡುತ್ತೇನೆ ಎಂದು ತಿಳಿಸಿದರು.

    ಏನು ಕಾಯ್ದೆ ತಿದ್ದುಪಡಿಯಾಗಿದೆ?
    ನಿರ್ಭಯಾ ಪ್ರಕರಣದ ಬಳಿಕ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆದು ಬಾಲಾಪರಾಧಿಯನ್ನು ಅಪರಾಧಿಯನ್ನಾಗಿಸಬೇಕೆಂಬ ಕೂಗು ಎದ್ದಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಬಾಲಾಪರಾಧ ಕಾಯ್ದೆಗೆ ತಿದ್ದುಪಡಿ ತಂದಿದೆ. ಪರಿಣಾಮ ಈಗ ಹದಿನಾರರಿಂದ ಹದಿನೆಂಟು ವರ್ಷದ ಮಧ್ಯೆ ಇರುವವರು ಕ್ರೂರ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡರೆ ಅವರನ್ನು ವಯಸ್ಕರು ಎಂದೇ ಈಗ ಪರಿಗಣಿಸಲಾಗುತ್ತದೆ.

    ಇದನ್ನು ಓದಿ: ನಿರ್ಭಯಾ ಪ್ರಕರಣದ ಬಾಲಾಪರಾಧಿ ಈಗ ಎಲ್ಲಿದ್ದಾನೆ, ಏನು ಮಾಡ್ತಿದ್ದಾನೆ? ಈ ಸುದ್ದಿ ಓದಿ

  • ಠಾಣೆಯಲ್ಲೇ ಕಚ್ಚಾಡಿ, ಕೈ-ಕೈ ಮಿಲಾಯಿಸಿಕೊಂಡ ಪೊಲೀಸರು

    ಠಾಣೆಯಲ್ಲೇ ಕಚ್ಚಾಡಿ, ಕೈ-ಕೈ ಮಿಲಾಯಿಸಿಕೊಂಡ ಪೊಲೀಸರು

    ಬೆಂಗಳೂರು: ಊರಿಗೆಲ್ಲಾ ಬುದ್ಧಿ ಹೇಳೋ ಪೊಲೀಸರೇ ಕೈ-ಕೈ ಮಿಲಾಯಿಸಿಕೊಂಡು ಠಾಣೆಯಲ್ಲಿ ಕಚ್ಚಾಡಿಕೊಂಡ ಘಟನೆ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಜೂಜು ಅಡ್ಡೆ ಮೇಲೆ ನಡೆದ ದಾಳಿ ಸಂಬಂಧಪಟ್ಟಂತೆ ಮಹದೇವಪುರ ಠಾಣೆಯ ಎಎಸ್‍ಐ ಅಮೃತೇಶ್, ಹೆಡ್‍ ಕಾನ್ಸ್ ಟೆಬಲ್ ಜಯಕಿರಣ್ ಮತ್ತು ಸಬ್ ಇನ್ಸ್ ಪೆಕ್ಟರ್ ಅಶ್ವಥ್ ನಡುವೆ ಗಲಾಟೆ ನಡೆದಿದೆ.

    ಏನಿದು ಘಟನೆ?
    ಶನಿವಾರ ಸಂಜೆ 6 ಗಂಟೆ ವೇಳೆಗೆ ಇಸ್ಪಿಟ್ ಅಡ್ಡೆ ಮೇಲೆ ದಾಳಿ ನಡೆಸಿ ಪೊಲೀಸರು ಈ ವೇಳೆ 10 ಜನರನ್ನು ಬಂಧಿಸಿ, 42 ಸಾವಿರ ರೂ. ಹಣವನ್ನು ವಶಕ್ಕೆ ಪಡೆದಿದ್ದರು. ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆತಂದ ಈ ಇಬ್ಬರು ಪೊಲೀಸರು 8 ಗಂಟೆ ವೇಳೆಗೆ ಅವರನ್ನು ಬಿಟ್ಟು ಕಳುಹಿಸಿದ್ದರು. ಯಾವುದೇ ಕಾನೂನು ಪಾಲನೆ ಮಾಡದೇ ಆರೋಪಿಗಳನ್ನು ಬಿಟ್ಟಿದ್ದು, ಯಾಕೆ ಎಂದು ಸಬ್ ಇನ್ಸ್ ಪೆಕ್ಟರ್ ಅಶ್ವಥ್ ಇಬ್ಬರನ್ನು ಪ್ರಶ್ನೆ ಮಾಡಿದ್ದಾರೆ.

    ಅಶ್ವಥ್ ಪ್ರಶ್ನೆಗೆ ಅಮೃತೇಶ್ ಮತ್ತು ಜಯಕಿರಣ್ ಕೆಂಡಮಂಡಲವಾಗಿ ನಾವು ಬಿಟ್ಟಿದ್ದೇವೆ. ಅದನ್ನು ಪ್ರಶ್ನಿಸಲು ನೀವು ಯಾರು? ನಿನ್ನಂಥ ಎಸ್‍ಐಗಳನ್ನ ನೂರಾರು ಜನ ನೋಡಿದ್ದೇನೆ ಎಂದು ಹೇಳಿದ್ದಾರೆ. ಈ ವೇಳೆ ಅಶ್ವಥ್ ಕೇಸ್ ದಾಖಲಿಸದೇ ಬಿಡಬಾರದು ಎಂಬ ಜ್ಞಾನ ಇಲ್ಲವೇ ಎಂದು ಪ್ರಶ್ನಿಸಿ ತರಾಟಗೆ ತೆಗೆದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಈ ವೇಳೆ ಮೂವರ ನಡುವೆ ಮಾತಿನ ಚಕಾಮಕಿ ನಡೆದಿದ್ದು, ಏಕವಚನದಲ್ಲಿ ಬೈದಾಡಿಕೊಂಡು ಠಾಣೆಯ ಸಿಬ್ಬಂದಿ ಸಮ್ಮುಖದಲ್ಲೇ ಕೈ-ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ತಲುಪಿದೆ. ನಂತರ ಸ್ಟೇಷನ್ ಡೈರಿಯಲ್ಲಿ ಎಂಟ್ರಿ ಮಾಡಿ ಗಲಾಟೆ ಬಗ್ಗೆ ಡಿಸಿಪಿಗೆ ಎಸ್‍ಐ ಅಶ್ವಥ್ ಮಾಹಿತಿ ನೀಡಿದ್ದಾರೆ.

    ಈ ವಿಚಾರದ ಬಗ್ಗೆ ಡಿಸಿಪಿ ಅಬ್ದುಲ್ ಅಹ್ಮದ್ ಪ್ರತಿಕ್ರಿಯಿಸಿ, ಪೊಲೀಸರು ಠಾಣೆಯಲ್ಲೇ ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಸ್ಟೇಷನ್ ಡೈರಿಯಲ್ಲಿ ಎಂಟ್ರಿ ಮಾಡಿ ಗಲಾಟೆ ಬಗ್ಗೆ ಎಸ್‍ಐ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಎಎಸ್‍ಐ ಮತ್ತು ಹೆಡ್ ಕಾನ್ಸ್ ಟೆಬಲ್ ಕರ್ತವ್ಯ ಲೋಪ ಕಂಡು ಬಂದಿದ್ದು ಈಗ ಇವರಿಬ್ಬರನ್ನು ಅಮಾನತು ಮಾಡಲಾಗಿದ್ದು ಮಾರತ್ತಹಳ್ಳಿ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಅದೇಶ ನೀಡಲಾಗಿದೆ ಎಂದು ತಿಳಿಸಿದರು.

                                                                                                 ಎಎಸ್‍ಐ ಅಮೃತೇಶ್

     

                                                                                    ಹೆಡ್‍ ಕಾನ್ಸ್ ಟೆಬಲ್ ಜಯಕಿರಣ್

     

                                                                             ಡಿಸಿಪಿ ಅಬ್ದುಲ್ ಅಹ್ಮದ್
  • ಪ್ರಾಣಿಗಳನ್ನು ಮನೆಯಲ್ಲಿ ಸಾಕಲು 250, 500 ರೂ. ಪಾವತಿಸಬೇಕು!

    ಪ್ರಾಣಿಗಳನ್ನು ಮನೆಯಲ್ಲಿ ಸಾಕಲು 250, 500 ರೂ. ಪಾವತಿಸಬೇಕು!

    ಚಂಡೀಘಡ: ಪಂಜಾಬ್ ನಲ್ಲಿನ್ನು ಸಾಕು ಪ್ರಾಣಿಗಳನ್ನು ಮನೆಯಲ್ಲಿಟ್ಟುಕೊಳ್ಳೋದಿಕ್ಕೂ ತೆರಿಗೆ ಪಾವತಿಸಬೇಕು. ಹೌದು, ಇನ್ನು ಮುಂದೆ ಸಾಕು ಪ್ರಾಣಿಗಳನ್ನು ಮನೆಯಲ್ಲಿಟ್ಟಿರುವ ಮಾಲೀಕರು ವರ್ಷಕ್ಕೆ 250 ಹಾಗೂ 500 ರೂ. ತೆರಿಗೆ ಪಾವತಿಸಬೇಕು.

    ಸ್ಥಳೀಯಾಡಳಿತ ಸಂಸ್ಥೆಗಳ ಸಚಿವ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಈ ಬಗ್ಗೆ ನೋಟಿಸ್ ಹೊರಡಿಸಿದ್ದಾರೆ.

    ನಾಯಿ, ಬೆಕ್ಕು, ಹಂದಿ, ಕುರಿ, ಜಿಂಕೆ ಇತ್ಯಾದಿ ಸಾಕು ಪ್ರಾಣಿಗಳನ್ನು ಸಾಕುವವರು ಒಂದು ವರ್ಷಕ್ಕೆ 250 ರೂಪಾಯಿ ತೆರಿಗೆಯನ್ನು ಪಾವತಿಸಬೇಕು. ಎಮ್ಮೆ, ಗೂಳಿ, ಹಸು, ಒಂಟೆ, ಆನೆಯಂತಹ ಸಾಕು ಪ್ರಾಣಿಗಳಿಗೆ ಪ್ರತಿಯೊಂದು ಪ್ರಾಣಿಗೂ ಒಂದು ವರ್ಷಕ್ಕೆ 500 ರೂಪಾಯಿಗಳನ್ನು ಪಾವತಿಸುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.

    ಎಲ್ಲಾ ಸಾಕು ಪ್ರಾಣಿಗಳಿಗೂ ಗುರುತು ಅಥವಾ ಸಂಖ್ಯೆಯನ್ನು ನೀಡಿ, ಮೈಕ್ರೋಚಿಪ್ ಗಳನ್ನು ಅಳವಡಿಸಲಾಗುವುದು ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.

    ಇದರ ಜೊತೆಗೆ ಪ್ರಾಣಿಗಳನ್ನು ಸಾಕಬೇಕಾದರೆ ಕಡ್ಡಾಯವಾಗಿ ಅಧಿಕಾರಿಗಳಿಂದ ಲೈಸೆನ್ಸ್ ಪಡೆಯಬೇಕು. ನಂತರ ಪ್ರತಿ ವರ್ಷವು ಲೈಸೆನ್ಸ್ ನವೀಕರಿಸಬೇಕು ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.

     

  • ರೈತರಿಗೆ ಪರಿಹಾರ ನೀಡದ್ದಕ್ಕೆ 7 ಕರ್ನಾಟಕ ವೈಭವ್ ಬಸ್ ಜಪ್ತಿ!

    ರೈತರಿಗೆ ಪರಿಹಾರ ನೀಡದ್ದಕ್ಕೆ 7 ಕರ್ನಾಟಕ ವೈಭವ್ ಬಸ್ ಜಪ್ತಿ!

    ಚಿತ್ರದುರ್ಗ: ಈ ಹಿಂದೆ ಜಿಲ್ಲಾಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳ ವಾಹನಗಳನ್ನು ಜಪ್ತಿ ಮಾಡಿದ್ದಾಯ್ತು, ಪೀಠೋಪಕರಣಗಳನ್ನ ಹರಾಜು ಹಾಕಿದ್ದೂ ಆಯ್ತು, ಅಷ್ಟು ಸಾಲದು ಅಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರ ಸರ್ಕಾರದ ಅಧೀನದಲ್ಲಿರೋ ರೈಲನ್ನು ಜಪ್ತಿ ಮಾಡಲು ಆದೇಶಿಸಿದ್ದ ಚಿತ್ರದುರ್ಗದ ನ್ಯಾಯಾಲಯ ಇಂದು ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ವೈಭವ ಬಸ್‍ಗಳನ್ನೂ ಜಪ್ತಿ ಮಾಡಲು ಆದೇಶಿಸಿದೆ.

    12 ವರ್ಷಗಳ ಹಿಂದೆ ಚಿತ್ರದುರ್ಗ ತಾಲೂಕಿನ ಭರಮಸಾಗರದ ಬಳಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ತಮ್ಮ ವಾಣಿಜ್ಯ ನಿವೇಶನಗಳನ್ನು 7 ಮಂದಿ ರೈತರು ನೀಡಿದ್ದರು. ಈ ವೇಳೆ ಒಂದು ವರ್ಷದ ಒಳಗೆ ಪರಿಹಾರ ನೀಡುತ್ತೇವೆ ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ ಇನ್ನೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ರೈತರು ಚಿತ್ರದುರ್ಗದ ಒಂದನೇ ಅಪರ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಿವಣ್ಣ, 7 ಕೆಎಸ್‍ಆರ್‍ಟಿಸಿ ಕರ್ನಾಟಕ ವೈಭವ ಬಸ್‍ಗಳನ್ನ ಜಪ್ತಿ ಮಾಡಿ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಸೋಮವಾರ ಆದೇಶಿಸಿದ್ದಾರೆ.

    ಸಂತ್ರಸ್ತರ ಪರವಾಗಿ ಹಿರಿಯ ವಕೀಲ ಬಿ.ಕೆ.ರೆಹಮತುಲ್ಲ ವಾದ ಮಂಡಿಸಿದ್ದರು.

  • ಯುವತಿ ಅಲ್ಲ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದೆ: ಕಾಮಿ ಸ್ವಾಮೀಜಿ

    ಯುವತಿ ಅಲ್ಲ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದೆ: ಕಾಮಿ ಸ್ವಾಮೀಜಿ

    ತಿರುವನಂತಪುರಂ: ಅತ್ಯಾಚಾರಕ್ಕೆ ಯತ್ನಿಸಿದ್ದಕ್ಕೆ ನಾನು ಸ್ವಾಮೀಜಿಯ ಮರ್ಮಾಂಗವನ್ನೇ ಕತ್ತರಿಸಿದ್ದೇನೆ ಎಂದು ಯುವತಿ ಪೊಲೀಸರಿಗೆ ಹೇಳಿಕೆ ನೀಡಿದ್ದರೆ, ಸ್ವಾಮೀಜಿ ಮಾತ್ರ ಇದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡಿದ್ದಾನೆ.

    ಶ್ರೀಹರಿ ಅಲಿಯಾಸ್ ಗಣೇಶಾನಂದ ತೀರ್ಥಪಾದ ಸ್ವಾಮಿಯನ್ನು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಆತ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದ್ದೇನೆ. ಯುವತಿ ಸುಳ್ಳು ಹೇಳುತ್ತಿದ್ದಾಳೆ. ಆಕೆಯ ಮಾತನ್ನು ನಂಬಬೇಡಿ. ಸುಳ್ಳು ವರದಿಯನ್ನು ಪ್ರಸಾರ ಮಾಡಬೇಡಿ ಎಂದು ಹೇಳಿದ್ದಾನೆ.

    ಈ ಘಟನೆಯ ಬಗ್ಗೆ ಕೇರಳ ಮುಖ್ಯಮಮತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿ ಯುವತಿಯ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಹುಡುಗಿಯ ಉತ್ತಮವಾದ ಕೆಲಸವನ್ನೇ ಮಾಡಿದ್ದಾಳೆ ಎಂದು ಹೊಗಳಿದ್ದಾರೆ.

    23 ವರ್ಷದ ಕಾನೂನು ವಿದ್ಯಾರ್ಥಿನಿ ಶುಕ್ರವಾರ ರಾತ್ರಿ ಅತ್ಯಾಚಾರಕ್ಕೆ ಯತ್ನಿಸಿದ ಸ್ವಾಮೀಜಿ ಮರ್ಮಾಂಗವನ್ನು ಚಾಕುವಿನಿಂದ ಕತ್ತರಿಸಿದ್ದಳು. ತನ್ನ ಕೃತ್ಯದ ಬಳಿಕ ತಿರುವನಂತಪುರಂ ಪೊಲೀಸ್ ಠಾಣೆಗೆ ಕರೆ ಮಾಡಿ ತನ್ನ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಳು.

    ಈ ಪ್ರಕರಣದ ಸಂಬಂಧ ಯುವತಿಯ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ. ಪೊಲೀಸರಿಗೆ ನೀಡಿದ ಹೇಳಿಕೆಯನ್ನು ಸ್ವಾಮೀಜಿ ನನ್ನ ಮೇಲೆ ಎಸಗುತ್ತಿದ್ದ ಕೃತ್ಯ ನನ್ನ ತಾಯಿಗೂ ತಿಳಿದಿತ್ತು ಎಂದು ಯುವತಿ ಹೇಳಿಕೆ ನೀಡಿದ್ದಳು.

    ಇದೇ ವೇಳೆ ಯುವತಿಯ ವಿರುದ್ಧ ಯಾವುದೇ ಕೇಸ್ ದಾಖಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಸ್ವಾಮೀಜಿಯ ಮರ್ಮಾಂಗವನ್ನೇ ಕತ್ತರಿಸಿದ ಕಾನೂನು ವಿದ್ಯಾರ್ಥಿನಿ.. ಏನಿದು ಘಟನೆ?