Tag: law

  • ಕರ್ನಾಟಕ ಪೊಲೀಸ್ ರಾಜ್ ಆಗುತ್ತಿದ್ಯಾ – ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಚಾಟಿ

    ಕರ್ನಾಟಕ ಪೊಲೀಸ್ ರಾಜ್ ಆಗುತ್ತಿದ್ಯಾ – ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಚಾಟಿ

    – ರಾಜ್ಯದಲ್ಲಿ ಆಡಳಿತ ಸುವ್ಯವಸ್ಥೆ ಕುಸಿದಿದ್ಯಾ?
    – ಜಾಮೀನು ಮಂಜೂರು ಆಗಿದ್ರೂ ಮತ್ತೊಂದು ಎಫ್‍ಐಆರ್ ಹಾಕಿದ್ದು ಯಾಕೆ
    – ಕೂಡಲೇ ಟ್ರೋಲ್ ಮಗ ಅಡ್ಮಿನ್ ಬಿಡುಗಡೆ ಮಾಡಿ

    ಬೆಂಗಳೂರು:“ಕರ್ನಾಟಕ ಪೊಲೀಸ್ ರಾಜ್ ಆಗುತ್ತಿದೆಯೇ? ರಾಜ್ಯದಲ್ಲಿ ಆಡಳಿತ ಸುವ್ಯವಸ್ಥೆ ಕುಸಿದಿದೆಯಾ?” – ಈ ರೀತಿಯಾಗಿ ಪ್ರಶ್ನಿಸಿ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

    ಜೆಡಿಎಸ್ ನಾಯಕರ ವಿರುದ್ಧ ಫೇಸ್‍ಬುಕ್ ಕಮೆಂಟ್ ಮಾಡಿದ್ದ ‘ಟ್ರೋಲ್ ಮಗ’ ಪುಟದ ಅಡ್ಮಿನ್ ಜಯಕಾಂತ್ ಅವರಿಗೆ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದರೂ ಐದು ದಿನಗಳ ಕಾಲ ಅವರನ್ನು ಪೊಲೀಸ್ ವಶದಲ್ಲಿಟ್ಟುಕೊಂಡಿದ್ದಕ್ಕೆ ಹೈಕೋರ್ಟ್ ಚಾಟಿ ಬೀಸಿದೆ.

    ಜಾಮೀನು ಮಂಜೂರು ಆಗಿದ್ದರೂ ವಶದಲ್ಲಿಟ್ಟುಕೊಂಡಿದ್ದು ಸರಿಯಲ್ಲ. ಇದೊಂದು ಗಂಭೀರ ವಿಚಾರವಾಗಿದ್ದು, ಪೊಲೀಸರ ಕ್ರಮ ಖಂಡನಾರ್ಹ ಎಂದು ನ್ಯಾ.ಪಿ.ಎಸ್. ದಿನೇಶ್‍ಕುಮಾರ್ ಅವರಿದ್ದ ಏಕಸದಸ್ಯಪೀಠ ಅಭಿಪ್ರಾಯಪಟ್ಟು ಕೂಡಲೇ ಜಯಕಾಂತ್ ಅವರನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸೂಚಿಸಿತು.

    ಅರ್ಜಿದಾರರ ಪರ ವಾದಿಸಿದ ವಕೀಲ ಅರುಣ್ ಶ್ಯಾಮ್, ನನ್ನ ಕಕ್ಷಿದಾರರು ನ್ಯಾಯಾಲಯದ ನಿರೀಕ್ಷಣಾ ಜಾಮೀನು ಪಡೆದಿದ್ದರೂ ಅದೇ ಆರೋಪದ ಇನ್ನೊಂದು ದೂರಿನ ಮೇಲೆ ಅವರನ್ನು ಮತ್ತೆ ಐದು ದಿನಗಳಿಂದ ಪೊಲೀಸರು ತಮ್ಮ ಕಸ್ಟಡಿಯಲ್ಲಿರಿಸಿಕೊಂಡಿದ್ದಾರೆ. ಈ ರೀತಿ ಕಸ್ಟಡಿಯಲ್ಲಿ ಇರಿಸಿರುವುದು ಅಕ್ರಮ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

    ಈ ವೇಳೆ ನ್ಯಾ. ದಿನೇಶ್‍ಕುಮಾರ್, ಪದೇ ಪದೇ ಇಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸುತ್ತಿವೆ. ಜನ ಸಾಮಾನ್ಯರು ರಸ್ತೆ ಮೇಲೆ ಕೂಡ ಓಡಾಡಲು ಸಾಧ್ಯವಾಗದಂತಹ ವಾತಾವರಣ ಇದೆಯಲ್ಲ. ಈ ಪ್ರಕರಣದಲ್ಲಿ ಆರೋಪಿಯನ್ನು ತರಾತುರಿಯಲ್ಲಿ ಬಂಧನ ನಡೆಸುವ ಅಗತ್ಯ ಏನಿತ್ತು? ನ್ಯಾಯಾಲಯ ಜಾಮೀನು ನೀಡಿದ್ದರೂ ಇನ್ನೊಂದು ಎಫ್‍ಐಆರ್ ದಾಖಲಿಸಿ ಬಂಧಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಸಿವಿಲ್ ಪ್ರಕರಣದಲ್ಲಿ ಪೊಲೀಸರ ಹಸ್ತಕ್ಷೇಪ ದಿನೇ ದಿನೇ ಜಾಸ್ತಿ ಆಗುತ್ತಿದೆ. ಕಳೆದ ವಾರ ಡಿಸಿಪಿಯನ್ನು ನ್ಯಾಯಾಲಯಕ್ಕೆ ಕರೆಸಿ ಸೂಚನೆ ನೀಡಿದ್ದರೂ ನಿಮ್ಮ ಪ್ರವೃತ್ತಿ ಮತ್ತೆ ಮುಂದುವರಿದಿದೆ. ಆಸ್ತಿ ವ್ಯಾಜ್ಯ ಸೇರಿದಂತೆ ಎಲ್ಲ ಪ್ರಕರಣದಲ್ಲಿ ಮೂಗು ತೂರಿಸುತ್ತಿದ್ದೀರಿ ಎಂದು ಅಭಿಪ್ರಾಯಪಟ್ಟು ಪೊಲೀಸರಿಗೆ ನ್ಯಾಯಾಧೀಶರು ಚಾಟಿ ಬೀಸಿದರು.

    ಏನಿದು ಪ್ರಕರಣ?
    ಮೇ 26ರಂದು ಜೆಡಿಎಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ್‍ಕುಮಾರ್ ‘ಟ್ರೋಲ್ ಮಗ’ ಪುಟದಲ್ಲಿ ಜೆಡಿಎಸ್ ನಾಯಕರ ಬಗ್ಗೆ ಅವಹೇಳನಕಾರಿ ಹಾಗೂ ಜಾತಿನಿಂದನೆ ಪೋಸ್ಟ್ ಮಾಡಲಾಗಿದೆ ಎಂದು ದೂರು ನೀಡಿದ್ದರು. ಆ ಪ್ರಕರಣದ ಹಿನ್ನೆಲೆಯಲ್ಲಿ ಪುಟದ ಅಡ್ಮಿನ್ ಜಯಕಾಂತ್ ಜೂ.17ರಂದು ನಿರೀಕ್ಷಣಾ ಜಾಮೀನು ಪಡೆದಿದ್ದರು. ಜಾಮೀನು ದಾಖಲೆಗಳನ್ನು ಜಯಕಾಂತ್ ಸಲ್ಲಿಸಲು ಹೋದಾಗ ಜೆಡಿಎಸ್ ಐಟಿ ವಿಭಾಗದ ರವಿರಾಜ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಜೂನ್ 23 ರಂದು ಮತ್ತೊಂದು ಎಫ್‍ಐಆರ್ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಜಯಕಾಂತ್ ಪರ ವಕೀಲರು ಹೈ ಕೋರ್ಟ್ ಮೆಟ್ಟಿಲೇರಿದ್ದರು.

  • ಬಿಸಿಸಿಐ ವಿರುದ್ಧದ ಕಾನೂನು ಸಮರದಲ್ಲಿ ಪಾಕ್‍ಗೆ ಭಾರೀ ಮುಖಭಂಗ

    ಬಿಸಿಸಿಐ ವಿರುದ್ಧದ ಕಾನೂನು ಸಮರದಲ್ಲಿ ಪಾಕ್‍ಗೆ ಭಾರೀ ಮುಖಭಂಗ

    ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಐಸಿಸಿಯಲ್ಲಿ ದಾಖಲಿಸಿದ್ದ ದೂರಿನಲ್ಲಿ ಪಿಸಿಬಿಗೆ ಸೋಲುಂಟಾಗಿದ್ದು, ಭಾರೀ ಮುಖಭಂಗ ಅನುಭವಿಸಿದೆ.

    ಬಿಸಿಸಿಐ ತಮ್ಮೊಂದಿಗೆ ದ್ವಿಪಕ್ಷೀಯ ಸರಣಿ ಆಡದ ಕಾರಣ ತಮಗೆ ಭಾರೀ ನಷ್ಟ ಉಂಟಾಗಿದ್ದು, ಪರಿಣಾಮವಾಗಿ 70 ದಶಲಕ್ಷ ಡಾಲರ್ (ಅಂದಾಜು 471 ಕೋಟಿ ರೂ.) ಪರಿಹಾರ ನೀಡುವಂತೆ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪಿಸಿಬಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

    ಒಪ್ಪಂದದಂತೆ ಭಾರತ 2014 ಹಾಗೂ 2015 ಅವಧಿಯಲ್ಲಿ ಪಾಕ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಬಿಸಿಸಿಐಗೆ ಭಾರತ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಪಾಕ್ ಪ್ರವಾಸವನ್ನು ಕೈಗೊಂಡಿರಲಿಲ್ಲ. ಈ ಕುರಿತು ಪಾಕ್ ಕ್ರಿಕೆಟ್ ಮಂಡಳಿ ತನ್ನ ವಕೀಲರ ಮೂಲಕ ಐಸಿಸಿ ಮಧ್ಯ ಪ್ರವೇಶ ಮಾಡುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿತ್ತು.

    2014ರ ಫ್ಯೂಚರ್ ಟೂರ್ಸ್ ಆಂಡ್ ಪ್ರೋಗ್ರಾಂ (ಎಫ್‍ಟಿಪಿ) ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವೆ 6 ಕ್ರಿಕೆಟ್ ಸರಣಿ ನಡೆಯಬೇಕಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಸರಣಿ ನಡೆಯದ ಕಾರಣ ನಮಗೆ 70 ದಶಲಕ್ಷ ಡಾಲರ್ ನಷ್ಟವಾಗಿದೆ. ಒಪ್ಪಂದ ಉಲ್ಲಂಘನೆಯಾಗಿರುವ ಕುರಿತು ನಾವು ಐಸಿಸಿಗೆ ಅರ್ಜಿ ಸಲ್ಲಿಸಿ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ. ಪಾಕಿಸ್ತಾನದಲ್ಲಿ ನಡೆಯುವ ಸರಣಿಯಲ್ಲೂ ಭಾರತ ಭಾಗವಹಿಸಬೇಕಾಗಿತ್ತು. 2008 ನಂತರ ಬಿಸಿಸಿಐ ಯಾವುದೇ ಕಾರಣ ನೀಡದೆ ನಮ್ಮೊಂದಿಗೆ ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸಿಲ್ಲ. ಆದರೆ ಐಸಿಸಿ ನಡೆಸುವ ಎಲ್ಲಾ ಸರಣಿಯಲ್ಲೂ ನಮ್ಮ ವಿರುದ್ಧ ಆಡಿದೆ ಎಂದು ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರು ಈ ಹಿಂದೆ ಹೇಳಿದ್ದರು.

    ಪಾಕಿಸ್ತಾನದ ಉಗ್ರಗಾಮಿಗಳು 2008 ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆಸಿದ ಬಳಿಕ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿಗೆ ಬ್ರೇಕ್ ಬಿದ್ದಿತ್ತು. ಇದಾದ ಬಳಿಕ 2012 ರಲ್ಲಿ ಎರಡು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಗೆ ಪಾಕ್ ಭಾರತಕ್ಕೆ ಆಗಮಿಸಿತ್ತು. ಈ ಸರಣಿಯ ಬಳಿಕ ಇಲ್ಲಿಯವರೆಗೆ ಭಾರತ-ಪಾಕ್ ಮಧ್ಯೆ ಯಾವುದೇ ಸರಣಿ ನಡೆದಿಲ್ಲ.

    2016ರಲ್ಲಿ ಯುಎಇಯಲ್ಲಿ ಸರಣಿ ನಡೆಸಲು ಬಂದಿದ್ದ ಪ್ರಸ್ತಾಪವನ್ನು ಬಿಸಿಸಿಐ ತಿರಸ್ಕರಿಸಿತ್ತು. ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಕ್ರಿಕೆಟ್ ಸರಣಿ ನಡೆಸುವಂತೆ ಬಹಳಷ್ಟು ಮಾತುಕತೆ ನಡೆದಿದ್ದರೂ ಯಾವುದೇ ಫಲಪ್ರದವಾಗಿರಲಿಲ್ಲ.

    ಐಸಿಸಿ ತಿಳಿಸಿರುವ ಪ್ರಕಾರ ಈ ಪ್ರಕರಣವನ್ನ ಇಲ್ಲಿಯೇ ಕೈಬಿಡುವಂತೆ ಪಾಕಿಸ್ತಾನಕ್ಕೆ ತಿಳಿಸಿದ್ದು, ಹೀಗಾಗಿ ಉಭಯ ದೇಶಗಳ ನಡುವೆ ನಡೆಯುತ್ತಿದ್ದ ಕಾನೂನು ಸಮರದಲ್ಲಿ ಬ್ರೇಕ್ ಬಿದ್ದಂತಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಖಜಾಂಚಿ ಅನಿರುಧ್ ಚೌಧರಿ ಅವರು, ಐಸಿಸಿ ನೀಡಿರುವ ತೀರ್ಮಾನದ ಸಂಪೂರ್ಣ ಮಾಹಿತಿ ಇನ್ನು ಲಭ್ಯವಾಗಿಲ್ಲ. ಆದರೆ ಪ್ರಕರಣದಲ್ಲಿ ಬಿಸಿಸಿಐ ಪರ ನಿಂತ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸ್ವಂತ ಮಕ್ಕಳನ್ನೇ ಕಿಡ್ನಾಪ್ ಮಾಡಿ ದುಬೈಗೆ ತಂದೆ ಪರಾರಿ!

    ಸ್ವಂತ ಮಕ್ಕಳನ್ನೇ ಕಿಡ್ನಾಪ್ ಮಾಡಿ ದುಬೈಗೆ ತಂದೆ ಪರಾರಿ!

    ಉಡುಪಿ: ಐಸ್ ಕ್ರೀಂ ಕೊಡಿಸುವುದಾಗಿ ಹೇಳಿ ತನ್ನಿಬ್ಬರು ಮಕ್ಕಳನ್ನು ತಂದೆಯೇ ಕಿಡ್ನಾಪ್ ಮಾಡಿ, ದುಬೈಗೆ ಪರಾರಿಯಗಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಉಡುಪಿಯ ಮಾನವಹಕ್ಕುಗಳ ಪ್ರತಿಷ್ಠಾನದಲ್ಲಿ ದೂರು ದಾಖಲಿಸಿದ್ದಾರೆ.

    ದಕ್ಷಿಣ ಕನ್ನಡದ ರಿಶಾನಾ ನಿಲೋಫರ್ ದೂರು ಕೊಟ್ಟ ಮಹಿಳೆ. ಕೇರಳದ ಕುಂಬ್ಳೆ ಮೂಲದ ಪತಿ ಮಹಮ್ಮದ್ ಶಾನಿಬ್ ತನ್ನಿಬ್ಬರು ಮಕ್ಕಳನ್ನು ಕಿಡ್ನಾಪ್ ಮಾಡಿಕೊಂಡು ದುಬೈಗೆ ಪರಾರಿಯಾಗಿದ್ದಾನೆ ಎಂದು ರಿಶಾನಾ ದೂರು ನೀಡಿದ್ದಾರೆ.

    ಏಳು ವರ್ಷದ ಹಿಂದೆ ರಿಶಾನಾ ಹಾಗೂ ಮಹಮ್ಮದ್ ಮದುವೆಯಾಗಿದ್ದರು. ವರದಕ್ಷಿಣೆಗಾಗಿ ಪತಿ ಹಾಗೂ ಅತ್ತೆ ರಿಶಾನಾಗೆ ತುಂಬ ಚಿತ್ರಹಿಂಸೆ ನೀಡುತ್ತಿದ್ದರು. ಅಷ್ಟೇ ಅಲ್ಲದೆ ರಿಶಾನಾ ತಂದೆಯಿಂದ ಬರೋಬ್ಬರಿ ಅರ್ಧ ಕೋಟಿ ಬೆಳೆಬಾಳುವ 1 ಫ್ಲಾಟ್ ಹಾಗೂ 130 ಪವನ್ ಚಿನ್ನವನ್ನು ಪಡೆದಿದ್ದನು. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಮಹಮ್ಮದ್, ಕೆಲಸದ ಮೇಲೆ ದುಬೈಗೆ ತೆರಳಿದ್ದ. ಎರಡು ತಿಂಗಳ ಹಿಂದೆ ದುಬೈನಿಂದ ಊರಿಗೆ ಬಂದಿದ್ದನು. ಇಲ್ಲಿಂದ ವಾಪಸ್ ಹೋಗುವ ವೇಳೆ ತನ್ನ ಐದು ವರ್ಷದ ಮಗನನ್ನು ಹಾಗೂ ಒಂದೂವರೆ ವರ್ಷದ ಹೆಣ್ಣು ಮಗುವನ್ನು ತನಗೆ ತಿಳಿಸದೇ ಕಿಡ್ನಾಪ್ ಮಾಡಿ ದುಬೈಗೆ ಕರೆದೊಯ್ದಿದ್ದಾನೆ ಎಂದು ರಿಶಾನಾ ಆರೋಪಿಸಿದ್ದಾರೆ.

    ಈ ಕುರಿತು ಮಂಗಳೂರಿನ ಪಾಂಡೇಶ್ವರ ಮತ್ತು ಉಳ್ಳಾಲ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಯಾಕೆಂದರೆ ಆರೋಪಿ ಮಹಮ್ಮದ್ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಸಂಬಂಧಿಯಾಗಿದ್ದು, ಸಚಿವರ ಪ್ರಭಾವದಿಂದ ನನಗೆ ನ್ಯಾಯ ಸಿಗುತ್ತಿಲ್ಲ. ಎದೆಹಾಲು ಕುಡಿಯುವ ಮಗುವನ್ನು ಅಮ್ಮನಿಂದ ದೂರ ಮಾಡುವುದು ಮುಸ್ಲಿಂ ಕಾನೂನಿನಲ್ಲೂ ತಪ್ಪು, ಭಾರತೀಯ ಕಾನೂನಲ್ಲೂ ತಪ್ಪು ಎಂದು ನ್ಯಾಯಕ್ಕಾಗಿ ಮಾನವಹಕ್ಕುಗಳ ಪ್ರತಿಷ್ಠಾನದಲ್ಲಿ ರಿಶಾನಾ ದೂರು ದಾಖಲಿಸಿದ್ದಾರೆ.

    ಇದೀಗ ಎರಡು ತಿಂಗಳ ಮಗುವನ್ನು ಕೈಯಲ್ಲಿ ಎತ್ತಿಕೊಂಡು ಮತ್ತಿಬ್ಬರು ಮಕ್ಕಳಿಗಾಗಿ ಹೋರಾಟದ ಕೊನೆಯ ಹಂತವೆಂಬಂತೆ ರಿಶಾನಾ ಮಾನವಹಕ್ಕುಗಳ ಪ್ರತಿಷ್ಠಾನಕ್ಕೆ ಬಂದಿದ್ದಾರೆ. ಈಗಾಗಲೇ ಪ್ರತಿಷ್ಠಾನ ಮಹಮ್ಮದ್ ಸಂಬಂಧಿಕರನ್ನು ಕರೆಸಿ ಮಾತನಾಡಿ ಜಮಾತನ್ನು ಸಂಪರ್ಕಿಸಿದೆ. ನಂತರ ಮುಸ್ಲಿಂ ಮುಖಂಡರ ಜೊತೆಗೆ ಮಾತುಕತೆ ಮಾಡಿ ಕೊನೆಗೆ ಕೇಂದ್ರ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದೆ. ಈ ನಡುವೆಯೆ ಮುಸ್ಲಿಂ ಯುವ ಸಂಘಟನೆ, ಅಬುದಾಬಿ ಕನ್ನಡಿಗರನ್ನು ಮಾನವಹಕ್ಕುಗಳ ಪ್ರತಿಷ್ಠಾನ ಸಂಪರ್ಕಿಸಿ ಸಹಕರಿಸುವಂತೆ ಕೇಳಿದೆ. ರಿಶಾನಾಗೆ ನ್ಯಾಯ ಸಿಗುವಂತೆ ಹೋರಾಡುತ್ತೇವೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಡಾ. ರವೀಂದ್ರನಾಥ್ ಶಾನುಭಾಗ್ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಚುನಾವಣಾ ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಶಾಸಕ ರಾಮ್‍ದಾಸ್

    ಚುನಾವಣಾ ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಶಾಸಕ ರಾಮ್‍ದಾಸ್

    ಬಾಗಲಕೋಟೆ: ಜಮಖಂಡಿಯ ಚುನಾವಣಾ ಪ್ರಚಾರದ ವೇಳೆ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರಾಮ್ ದಾಸ್ ಅವರು ಹಣ ನೀಡುವ ಮೂಲಕ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆ.

    ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ರಾಮ್‍ದಾಸ್ ಮನೆ ಮನೆ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಎದೆ ತುಂಬಿ ಹಾಡುವೆನು ಹಾಡಿದ ಗಾಯಕಿ ಶಾಂಭವಿ ಭಾರ್ಗವಿಯ ಮನೆಗೆ ಭೇಟಿ ನೀಡಿದ್ದರು. ಇದೇ ವೇಳೆ ಗಾಯಕಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದರು.

    ಸನ್ಮಾನದ ನಂತರ ಉಡುಗೊರೆ ನೀಡುವ ವೇಳೆ ಹಣವನ್ನು ನೀಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಶಾಸಕರು ಹಣ ನೀಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.

    ಶಾಂಭವಿ ಭಾರ್ಗವಿ ಖಾಸಗಿ ಚಾನೆಲ್‍ನ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಭಾಗಿಯಾಗಿ ಖ್ಯಾತಿಯನ್ನು ಗಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ: 156 ವರ್ಷದ ಬ್ರಿಟಿಷ್ ಕಾನೂನು ರದ್ದು

    ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ: 156 ವರ್ಷದ ಬ್ರಿಟಿಷ್ ಕಾನೂನು ರದ್ದು

    ನವದೆಹಲಿ: ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಈ ಮೂಲಕ 17 ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ.

    ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಕೋರ್ಟ್ ಈ ತೀರ್ಪು ಪ್ರಕಟಿಸಿದೆ. ಕಾಲದ ಜೊತೆ ಕಾನೂನು ಕೂಡ ಬದಲಾಗಬೇಕು ಎಂದು ಹೇಳಿ ಐಪಿಸಿ 377 ಅನ್ನು ಅಸಿಂಧುಗೊಳಿಸಿದೆ. ಈ ಮೂಲಕ 156 ವರ್ಷದ ಹಿಂದಿನ ಬ್ರಿಟಿಷ್ ಕಾನೂನು ರದ್ದಾಗಿದೆ.

    ಇಬ್ಬರು ವಯಸ್ಕರು ಸಮ್ಮತಿಯಿಂದ ನಡೆಸುವ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ, ಕಳೆದ ಜುಲೈ 17 ರಂದು ತೀರ್ಪು ಕಾಯ್ದಿರಿಸಿತ್ತು.

    ಕೇಂದ್ರ ಸರ್ಕಾರ ಸೆಕ್ಷನ್ 377ರ ರದ್ದತಿ ವಿಚಾರವನ್ನು ನ್ಯಾಯಾಲಯದ ವಿವೇಚನೆಗೆ ಬಿಡುವುದಾಗಿ ಹೇಳಿತ್ತು. ಆದರೆ ಸಲಿಂಗ ವಿವಾಹ ಮತ್ತು ಕೆಲವು ಹಕ್ಕುಗಳ ವಿಚಾರದಲ್ಲಿ ಗೊಂದಲ ಉಂಟಾಗಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಿತ್ತು.

    ಈ ಹಿಂದೆ ಅಂದರೆ 2009ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗಕಾಮವು ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಆದರೆ, 2014ರಲ್ಲಿ ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್ ತೀರ್ಪನ್ನು ವಜಾ ಮಾಡಿ, ಸಲಿಂಗಕಾಮವನ್ನು ಅಪರಾಧವೆಂದು ಘೋಷಿಸಿತ್ತು. ನಂತರ ಹೋಟೆಲ್ ಉದ್ಯಮಿ ಕೇಶವ್ ಸೂರಿ ಅವರು ಸೆಕ್ಷನ್ 377ರ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಇದಾದ ಬಳಿಕ ಹಮ್ಸಫರ್ ಟ್ರಸ್ಟ್ ನ ಅಶೋಕ್ ರಾವ್ ಕವಿ ಮತ್ತು ಆರಿಫ್ ಜಾಫರ್ ಏಪ್ರಿಲ್ 27ರಂದು ಸೆಕ್ಷನ್ ರದ್ದತಿಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ಮೇ ತಿಂಗಳಿನಿಂದ ನಡೆದ ವಿಚಾರಣೆಯ ತೀರ್ಪು ಇಂದು ಹೊರಬಿದ್ದಿದೆ.

    ಐಪಿಸಿ ಸೆಕ್ಷನ್ 377 ಏನು ಹೇಳುತ್ತೆ?
    ಯಾವುದೇ ವ್ಯಕ್ತಿ, ಮಹಿಳೆ ಅಥವಾ ಪ್ರಾಣಿಗಳೊಂದಿಗೆ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ, ಅದು ಅಪರಾಧ. ಇಂತಹ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷ ಜೈಲು ಹಾಗೂ ದಂಡ ವಿಧಿಸಬಹುದಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾನೂನು ಸುವ್ಯವಸ್ಥೆ ಕಾಪಾಡಲು ವಿಜಯಪುರದಲ್ಲಿ ರೌಡಿಗಳ ಪರೇಡ್!

    ಕಾನೂನು ಸುವ್ಯವಸ್ಥೆ ಕಾಪಾಡಲು ವಿಜಯಪುರದಲ್ಲಿ ರೌಡಿಗಳ ಪರೇಡ್!

    ವಿಜಯಪುರ: ಗಣೇಶ ಚತುರ್ಥಿ ಮತ್ತು ಮೊಹರಂ ಹಬ್ಬದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂದು ವಿಜಯಪುರದಲ್ಲಿ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್ ರೌಡಿಗಳ ಪರೇಡ್ ನಡೆಸಿದರು.

    ಜಿಲ್ಲೆಯಲ್ಲಿ ಅಧಿಕ ಕ್ರೈಂ ಗಳು ನಡೆಯುವುದರಿಂದ ರೌಡಿಗಳಿಗೆ ಕ್ಲಾಸ್ ತೆಗೆದುಕೊಂಡು ತಾಕೀತು ಮಾಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಐಜಿಪಿ, ಒಂದೇ ಕೋಮುವಿನ ಗುಂಪುಗಳು ಜಗಳದಲ್ಲಿ ಕಚ್ಚಾಬಾಂಬ್ ಬಳಕೆ ಮಾಡಿದ್ದಾರೆ. ಈ ಬಾಂಬ್ ನಿಷೇಧಿತ ಆಗಿದ್ದು, ನಾಡಬಾಂಬ್ ಬಳಕೆ ಮಾಡಿದ ಸ್ಥಳಕ್ಕೆ ಸಂಜೆ ಭೇಟಿಕೊಡುವುದಾಗಿ ತಿಳಿಸಿದರು. ಅಲ್ಲದೆ ನಿನ್ನೆ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದವರ ಬಳಿ ಹಣ ಕೇಳಿದ್ದಕ್ಕೆ ಪೊಲೀಸ್ ಪೇದೆ ಪರಶುರಾಮನನ್ನು ಅಮಾನತು ಮಾಡಿರುವುದಾಗಿ ತಿಳಿಸಿದರು. ಇದನ್ನು ಓದಿ: ದೂರು ನೀಡಲು ಬಂದವನ ಬಳಿ ಲಂಚ ಪಡೆದ ಪೊಲೀಸ್ ಪೇದೆ! -ವಿಡಿಯೋ ನೋಡಿ

    ಇದೀಗ 491 ವ್ಯಕ್ತಿಗಳು ಜಿಲ್ಲಾಧಿಕಾರಿಗೆ ವೆಪನ್ ಲೈಸೆನ್ಸ್ ಗೆ ಮನವಿ ಮಾಡಿದ್ದಾರೆ. ಅದರಲ್ಲಿ ಯಾರಿಗೆ ಬೇಕು ಅನ್ನುವುದನ್ನು ಗಮನಿಸಿ ಆಮೇಲೆ ಕೊಡುತ್ತೇವೆ. ರೌಡಿಗಳು ಚುರುಕಾಗಿರುವ ಆಧಾರದ ಮೇಲೆ ಪರೇಡ್ ಗೆ ಕರೆಸಲಾಗಿದೆ. 20 ವರ್ಷಗಳಿಂದ ಯಾರ ಹೆಸರಿನಲ್ಲಿ ಕೇಸ್ ಗಳಿಲ್ಲ ಅವರ ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ತೆಗೆಯುತ್ತೇವೆ. ನಮ್ಮ ನಿಗಾ ಯಾವಾಗಲೂ ಭೀಮಾತೀರದ ಮೇಲಿರುತ್ತೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=Tw2RFpT6AJk

  • ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಪತ್ನಿ ವಿಧಿವಶ

    ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಪತ್ನಿ ವಿಧಿವಶ

    ಬೆಂಗಳೂರು: ಕಡೂರು ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಪತ್ನಿ ಆರ್.ನಿರ್ಮಲಾ (60) ವಿಧಿವಶರಾಗಿದ್ದಾರೆ.

    ಕ್ಯಾನ್ಸರ್‍ನಿಂದ ಬಳಲುತ್ತಿದ್ದ ನಿರ್ಮಲಾ ಅವರನ್ನು ನಗರದ ಶಂಕರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಂಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ರಾಜಾಜಿನಗರ ನಿವಾಸದಲ್ಲಿ ನಾಳೆ ಬೆಳಗ್ಗೆ 10 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಬಳಿಕ ಚಿಕ್ಕಮಗಳೂರಿನ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿರುವ ದತ್ತಾ ಅವರ ತೋಟದಲ್ಲಿ ಗುರುವಾರ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪುತ್ರಿಯನ್ನು ನಿರ್ಮಲಾ ಅಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೃಷ್ಣ ಮಠದ ಆರು ಮಠಾಧೀಶರಿಗೆ ಬಿಗ್ ರಿಲೀಫ್

    ಕೃಷ್ಣ ಮಠದ ಆರು ಮಠಾಧೀಶರಿಗೆ ಬಿಗ್ ರಿಲೀಫ್

    ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥರು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಹಾಕಿದ್ದ ಕೇವಿಯಟ್ ಅನೂರ್ಜಿತವಾಗಿದೆ. ಈ ಮೂಲಕ ಏಳು ಮಠದ ಯತಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ.

    ಉಡುಪಿ ಕೃಷ್ಣಮಠದ ಗರ್ಭಗುಡಿಯಲ್ಲಿರುವ ಪಟ್ಟದ ದೇವರನ್ನು ವಾಪಾಸ್ ಕೊಡಿಸಬೇಕು, ನನ್ನ ವಾದವನ್ನೂ ಕೋರ್ಟ್ ಆಲಿಸಬೇಕು ಅಂತ ಸಲ್ಲಿಸಿದ್ದ ಕೇವಿಯಟ್ ಅರ್ಜಿ ಬಿದ್ದು ಹೋಗಿದೆ. ಜುಲೈ 4 ರಂದು ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿ ಸಲ್ಲಿಕೆಯಾಗಿತ್ತು. ಜುಲೈ 19 ರಂದು ಸ್ವಾಮೀಜಿ ನಿಧನ ಹಿನ್ನೆಲೆಯಲ್ಲಿ ಕೇವಿಯಟ್ ಅನೂರ್ಜಿತವಾಗಿದೆ.

    ಕೇವಿಯಟ್‍ಗೆ 90 ದಿನಗಳ ಕಾಲಾವಕಾಶ ಇರುತ್ತದೆ. ಕೇವಿಯಟ್ ಸಲ್ಲಿಸಿದವರು ಮರಣ ಹೊಂದಿದರೆ ಅದು ಅನೂರ್ಜಿತವಾಗುತ್ತದೆ ಎಂಬುದು ಕಾನೂನು. ಶಿಷ್ಯ ಸ್ವೀಕಾರಕ್ಕಾಗಿ ಯಾರೂ ಒತ್ತಾಯ ಮಾಡುವಂತಿಲ್ಲ. ಉಳಿದ ಏಳು ಮಠಾಧೀಶರು ಕೋರ್ಟ್ ಮೆಟ್ಟಿಲೇರಿದರೆ ಆ ಸಂದರ್ಭ ನನ್ನ ವಾದವನ್ನೂ ಕೇಳಬೇಕು ಎಂದು ನಮೂದಿಸಲಾಗಿತ್ತು.

    ಪಟ್ಟದ ದೇವರನ್ನು ವಾಪಾಸ್ ಕೊಡದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಶಿರೂರು ಸ್ವಾಮೀಜಿ ಹೇಳಿದ್ದರು. ಇತರೆ ಆರು ಮಠಾಧೀಶರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಶಿರೂರು ಶ್ರೀ ಸಜ್ಜಾಗಿದ್ದರು. ಆದರೆ ಕಳೆದ ಗುರುವಾರ ಸ್ವಾಮೀಜಿ ನಿಗೂಢವಾಗಿ ಸಾವನ್ನಪ್ಪಿದ್ದರು. ಸದ್ಯ ಪಟ್ಟದ ದೇವರ ವಿಗ್ರಹ ಈಗ ಕೃಷ್ಣಮಠದಲ್ಲಿದ್ದು, ಪರ್ಯಾಯ ಸ್ವಾಮೀಜಿ ದಿನಂಪ್ರತಿ ಪೂಜೆ ಮಾಡುತ್ತಿದ್ದಾರೆ.

  • ಡಿಕೆ ಶಿವಕುಮಾರ್ ಪ್ರಾಮಾಣಿಕ ಶಿಸ್ತಿನ ಸಿಪಾಯಿ: ಪರಮೇಶ್ವರ್

    ಡಿಕೆ ಶಿವಕುಮಾರ್ ಪ್ರಾಮಾಣಿಕ ಶಿಸ್ತಿನ ಸಿಪಾಯಿ: ಪರಮೇಶ್ವರ್

    ತುಮಕೂರು: ಡಿಕೆ ಶಿವಕುಮಾರ್ ಒಬ್ಬ ಪಕ್ಷದ ಪ್ರಾಮಾಣಿಕ ಶಿಸ್ತಿನ ಸಿಪಾಯಿ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.

    ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರಿಗೆ ಯಾವುದೇ ಅಸಮಾಧಾನ ಇಲ್ಲ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನ ಅವರು ನಿಭಾಯಿಸುತ್ತಾರೆ ಎಂದು ಹೊಗಳಿದರು.

    5 ವರ್ಷ ನಾವು ಸುಭದ್ರವಾಗಿ ಸರ್ಕಾರ ನಡೆಸ್ತೀವಿ ಅನ್ನೋ ವಿಶ್ವಾಸ ಇದೆ, ಬುಧವಾರ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಯಾರಿಗೆ ಯಾವ ಖಾತೆ ಎನ್ನುವುದು ಜೂನ್ 6 ರಂದು ಗೊತ್ತಾಗಲಿದೆ. ಎಲ್ಲಾ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ಹಂಚಲಾಗುತ್ತದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಕಾನೂನು ಚೌಕಟ್ಟಿನೊಳಗೆ ಸಮ್ಮಿಶ್ರ ಸರ್ಕಾರವನ್ನು ವಿಶ್ವಾಸಮತದಿಂದ ರಚನೆ ಮಾಡಿದ್ದೇವೆ. ಈ ಕುರಿತು ರಾಜ್ಯಪಾಲರಿಗೆ ಅನುಮತಿ ಕೋರಿದ್ದೆವು. ರಾಜ್ಯಪಾಲರು ಕಾನೂನನ್ನ ಸ್ವಲ್ಪ ಬದಲಿಸಿ ಬಿಜೆಪಿಗೆ ಅವಕಾಶ ನೀಡಿದ್ದರು. ನಾವು ಇದರ ವಿರುದ್ದ ಸುಪ್ರಿಂಕೋರ್ಟ್ ಗೆ ಮೊರೆಹೋಗಿದ್ದೆವು. ವಿಶ್ವಾಸಮತದಿಂದ ಸರ್ಕಾರ ಆಯ್ಕೆ ಮಾಡಿ ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿತು ಎಂದು ತಿಳಿಸಿದರು.

    ಅಧಿಕಾರಿಗಳೊಟ್ಟಿಗೆ ನಾವು ಯಾವುದೇ ಲೋಪ ಇಲ್ಲದೇ ಆಡಳಿತ ನಡೆಸುತ್ತೇವೆ. ಸರಿಯಾದ ಸಮಯಕ್ಕೆ ಮುಂಗಾರು ಬಂದಿದೆ. ರೈತರಿಗೆ ಸಮರ್ಪಕವಾಗಿ ಗೊಬ್ಬರ, ಬೀಜ ವಿತರಣೆಗೆ ನಾವು ಸೂಚನೆ ನೀಡಿದ್ದೇವೆ. ರೈತರಿಗೆ ಎಷ್ಟು ಅಗತ್ಯ ಇದೆ ಅದೆಲ್ಲಾ ಪೂರೈಕೆಯಾಗುತ್ತಿದೆ. ಯಾವುದೇ ಲೋಪವಿಲ್ಲದೇ ರೈತರ ಏಳಿಗೆಗಾಗಿ ಕೆಲಸ ಮಾಡುತ್ತೇವೆ. ಪ್ರತಿಯೊಂದು ಜಿಲ್ಲೆಗೆ ಸಚಿವರನ್ನ ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.

    ತುಮಕೂರು ಜಿಲ್ಲೆಗೆ ಡಿಸಿಎಂ ಆಗಿ ಪ್ರಥಮ ಬಾರಿಗೆ ಗೌರವ ಸಿಕ್ಕಿದೆ. ಈ ಅವಕಾಶವನ್ನು ವಿನಿಯೋಗ ಮಾಡಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಇನ್ನೂ ಹೆಚ್ಚಿನ ಯೋಜನೆಗಳು ಕಾರ್ಯಕ್ರಮಗಳನ್ನ ಜಿಲ್ಲೆಗೆ ತರುತ್ತೇನೆ ಎಂದು ಹೇಳಿದರು.

    ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಒಟ್ಟಿಗೆ ಹೋಗುತ್ತೇವೆ. ಆದರೆ ಸೀಟುಗಳ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಐದು ವರ್ಷ ಹೆಚ್‍ಡಿಕೆ ಸಿಎಂ ಆಗಿ ಮುಂದುವರಿಯುತ್ತಾರ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಅದು ನಮ್ಮ ಪಕ್ಷದ ಸಮಸ್ಯೆ, ಮಾಧ್ಯಮದವರ ಸಮಸ್ಯೆ ಅಲ್ಲ. ಈಗಾಗಲೇ ಅದರ ಬಗ್ಗೆ ನಮ್ಮ ಪ್ರಧಾನ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.

  • ಸತತ 10 ವರ್ಷ ಹೋರಾಡಿ ಕೊನೆಗೂ ಸರ್ಕಾರಿ ಹುದ್ದೆ ಸಿಕ್ತು!

    ಸತತ 10 ವರ್ಷ ಹೋರಾಡಿ ಕೊನೆಗೂ ಸರ್ಕಾರಿ ಹುದ್ದೆ ಸಿಕ್ತು!

    ಯಾದಗಿರಿ:“ಕಾನೂನ್ ಕೆ ಘರ್ ಮೆ ದೇರ್ ಹೈ, ಲೇಕಿನ್ ಅಂಧೇರ್ ನಹೀಂ?”(ನ್ಯಾಯ ಸಿಗೋದು ತಡವಾಗಬಹುದು, ಅದ್ರೆ, ಸತ್ಯವೇ ಗೆಲ್ಲೋದು, ಕತ್ತಲು ಆವರಿಸೋಲ್ಲ) ಇಂತಹುದ್ದೊಂದು ಪ್ರಕರಣಕ್ಕೆ ಸಾಕ್ಷಿಯಾಗಿದ್ದು ಯಾದಗಿರಿ ಜಿಲ್ಲೆಯ ಬಡ ಯುವಕನೊಬ್ಬನ ಸತತ ಹೋರಾಟ.

    ನ್ಯಾಯಯುತವಾಗಿ ತನಗೆ ಸಿಗಬೇಕಾಗಿದ್ದ ಸರ್ಕಾರಿ ಶಿಕ್ಷಕ ಹುದ್ದೆಗೆ ಬರೋಬ್ಬರಿ ಹತ್ತು ವರ್ಷಗಳ ಕಾಲ ಅವಿರತ ಹೋರಾಟ ನಡೆಸಿ, ಕೊನೆಗೂ ಯಶಸ್ವಿಯಾದ. ಯಾದಗಿರಿಯ ವಡ್ನಳ್ಳಿ ಗ್ರಾಮದ ಶಿವಯೋಗಿ ಬಿನ್ ಚಂದ್ರಾಮ ಛಲಬಿಡದ ತ್ರಿವಿಕ್ರಮ.? ಏನಿದು ಒಂಬತ್ತು ವರ್ಷಗಳ ಹೋರಾಟ.? ಇಲ್ಲಿದೆ ಶಿವಯೋಗಿಯ ಹೋರಾಟದ ಕತೆ.

    ಯಾದಗಿರಿ ನಗರದಿಂದ 14 ಕಿ.ಮೀ. ದೂರದ ವಡ್ನಳ್ಳಿ ಗ್ರಾಮದ ಬಡ ರೈತ ಕುಟುಂಬದ ಶಿವಯೋಗಿಯ ಹೋರಾಟ 2008-09ರಿಂದ ಆರಂಭಗೊಂಡಿದೆ. ಆಗ ಸರ್ಕಾರಿ ಪ್ರೌಢಶಾಲೆಗೆ ದೈಹಿಕ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಶಿವಯೋಗಿ, ನೇಮಕಾತಿಗೆ ಅರ್ಹರಾಗಿದ್ದರೂ, ಇವರ ಬದಲು ಸರ್ಕಾರಕ್ಕೇ ವಂಚಿಸಿ, ಒಂದೇ ವರ್ಷದಲ್ಲಿ ಎರಡೆರಡು ಪದವಿಗಳನ್ನು ಪೂರೈಸಿದ್ದ ಸಂಗನಸಬಸವ ಅನ್ನೋವ್ರಿಗೆ ನೌಕರಿ ಸಿಕ್ಕಿತ್ತು.

    ಶಿಕ್ಷಣ ಇಲಾಖೆಯಲ್ಲಿನ ಮಧ್ಯವರ್ತಿಗಳ ಹಾವಳಿಯಿಂದ ಶಿವಯೋಗಿ ನೌಕರಿಯಿಂದ ವಂಚಿತಗೊಂಡಿದ್ದರು. ವಂಚನೆಯಾದ ಹಿನ್ನೆಲೆಯಲ್ಲಿ ನಿಮ್ಮ ಪಬ್ಲಿಕ್ ಟಿವಿಯಲ್ಲಿ 2012 ಏಪ್ರಿಲ್ 25 ರಂದು ಶಿವಯೋಗಿ ವರದಿಯೂ ಪ್ರಸಾರವಾಗಿತ್ತು. ನಿರಂತರವಾಗಿ ಹೋರಾಡಿದ ಶಿವಯೋಗಿಗೆ ಕೊನೆಗೂ ಈಗ ಜಯ ಸಿಕ್ಕಿದೆ.

    ವಂಚನೆಯನ್ನು ಪ್ರಶ್ನಿಸಿ ಶಿವಯೋಗಿ ಕಾನೂನು ಇಲಾಖೆಯ ಮೊರೆ ಹೋಗಿದ್ದರು. ಆಗ ರಾಜ್ಯಪಾಲರಾಗಿದ್ದ ರಾಮೇಶ್ವರ ಠಾಕೂರ್ ಅವರ ಎದುರು ಅಳಲು ತೋಡಿಕೊಂಡಿದ್ದರು. ರಾಜಭವನದಲ್ಲೂ ಇವರ ಹೋರಾಟ ಮಾರ್ದನಿಸಿತ್ತು. ರಾಜಕೀಯ ಹಾಗೂ ಆರ್ಥಿಕವಾಗಿ ಸಬಲರಾಗಿದ್ದ ಎದುರಾಳಿ, ಇವರ ಹೋರಾಟವನ್ನು ಹಿಮ್ಮೆಟ್ಟಿಸಿದ್ದರು.

    ಯಾದಗಿರಿ ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳು ಹಾಗೂ ಕೆಲವು ಸಿಬ್ಬಂದಿಗಳ ಷಡ್ಯಂತ್ರವೂ ಸಹ ಇವರ ಹೋರಾಟಕ್ಕೆ ಅಡ್ಡಿಯಾಗತೊಡಗಿತ್ತು. ಈ ಹೋರಾಟದಿಂದ ಹಿಂದೆ ಸರಿಯುವಂತೆ ಅನೇಕ ಬಾರಿ ಇವರ ಮೇಲೆ ಹಲ್ಲೆ ಯತ್ನ ಹಾಗೂ ಬೆದರಿಕೆ ಒಡ್ಡುವ ಪ್ರಯತ್ನಗಳೂ ನಡೆದವು. ದಶಕದ ಈ ಹೋರಾಟದಲ್ಲಿ ಮನೆ-ಹೊಲ, ಆಸ್ತಿಪಾಸ್ತಿಯೆಲ್ಲವನ್ನೂ ಮಾರಾಟ ಮಾಡಿದ್ದ ಶಿವಯೋಗಿ ಕುಟುಂಬವೂ ಹತಾಶರಾಗಿತ್ತು.

    ಕೊನೆಗೆ, ಎಲ್ಲ ವಿಚಾರಣೆಗಳ ನಂತರ, ಶಿಕ್ಷಣ ಇಲಾಖೆಯ ಶ್ರೀಮತಿ ಶಾಲಿನಿ ರಜನೀಶ್ ಗೋಯೆಲ್ ಅವರು ನೀಡಿದ ಅದೇಶವನ್ನೂ ಸ್ಥಳೀಯ ಅಧಿಕಾರಿಗಳು ಮುಚ್ಚಿಟ್ಟಾಗ, ಪಬ್ಲಿಕ್ ಟವಿಯ ವರದಿಯನ್ನು ಗಮನಿಸಿದ ಯಾದಗಿರಿ ಜಿಲ್ಲಾಧಿಕಾರಿ ಮಂಜುನಾಥ್ ಜೆ, ಎಲ್ಲವನ್ನೂ ಪರಿಶೀಲಿಸಿ, ಇದಕ್ಕೆ ತೊಡರುಗಾಲಾಗುತ್ತಿದ್ದ ಯಾದಗಿರಿ ಡಿಡಿಪಿಐ ಹಾಗೂ ಸಿಬ್ಬಂದಿಗೆ ಪಾಠ ಕಲಿಸಿದ ಜಿಲ್ಲಾಧಿಕಾರಿ, ಕೇವಲ ಒಂದೇ ದಿನದಲ್ಲಿ ಆದೇಶ ಕೈಸೇರುವಂತೆ ಮಾಡಿದರು.

    ಯಾದಗಿರಿಯ ಶಿವಯೋಗಿಯ ಈ ಹೋರಾಟ ಅನೇಕರಿಗೆ ಸ್ಫೂರ್ತಿ. ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಅನ್ನೋ ಹಾಗೆ, ಛಲಬಿಡದ ತ್ರಿವಿಕ್ರಮನಂತೆ ಅಲೆದಾಡಿ ಕೊನೆಗೂ ನ್ಯಾಯ ಪಡೆಯುವಲ್ಲಿ ಗೆದ್ದ ಶಿವಯೋಗಿಯ ಹಠ ಇಡೀ ಶಿಕ್ಷಣ ಇಲಾಖೆಯಲ್ಲೇ ಸಂಚಲನ ಮೂಡಿಸಿದೆ. ಕಾನೂನು ರೀತ್ಯ ಹಾಗೂ ನಿಯಮಾನುಸಾರ ನೇಮಕಾತಿಗೆ ಅರ್ಹನಿದ್ದೂ, ಹತ್ತು ವರ್ಷಗಳಿಂದಲೂ ನೌಕರಿಯಿಂದ ವಂಚಿತಗೊಂಡಿದ್ದ ಶಿವಯೋಗಿ ಹೋರಾಟ ನಿಜಕ್ಕೂ ಶ್ಲಾಘನೀಯ.