ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದ ಅರ್ಚಕರಿಗೆ ಲಾಠಿ ಏಟು ಕೊಟ್ಟ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್‍ಪಿ ಆದೇಶ ಹೊರಡಿಸಿದ್ದಾರೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಶಂಕರ್ ಸಂಸಿಯನ್ನು ಎಸ್‍ಪಿ ಎಂ. ಲಕ್ಷ್ಮೀ ಪ್ರಸಾದ್ ಅವರು ಅಮಾನತುಗೊಳಿಸಿದ್ದಾರೆ. ಮೇಲ್ನೋಟಕ್ಕೆ ದುರ್ವರ್ತನೆ ಕಂಡುಬಂದ ಹಿನ್ನೆಲೆಯಲ್ಲಿ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆದಿ ಸುಬ್ರಹ್ಮಣ್ಯದ ಅರ್ಚಕ ಶ್ರೀನಿವಾಸ್ ಮೇಲೆ ಶಂಕರ್ ಲಾಠಿ ಬೀಸಿದ್ದರು. ಸಂಜೆಯ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿವುದಾಗಿ ದೇವಾಲದ ಕೀಯನ್ನು ತೋರಿಸಿದರೂ ಥಳಿಸಿದ್ದರು. ಇದರಿಂದ ಕೋಪಗೊಂಡ ಅರ್ಚಕ ವರ್ಗ ಎಸ್‍ಪಿ ಸಹಿತ ಐಜಿಪಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೇದೆ ಶಂಕರ್ ಅವರನ್ನು ಅಮಾನತುಗೊಳಿಸಲಾಗಿದೆ.
ಬೆಂಗಳೂರು: ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಹಿನ್ನೆಲೆಯಲ್ಲಿ ನಗರದ ಎಲ್ಲಾ ಪೊಲೀಸರು ಲಾಠಿ ಇಲ್ಲದೇ ಕರ್ತವ್ಯ ನಿರ್ವಹಿಸಬೇಕು ಎಂದು ನಗರ ಪೊಲೀಸ್ ಸಿಬ್ಬಂದಿಗೆ ಕಮಿಷನರ್ ಭಾಸ್ಕರ್ ರಾವ್ ಖಡಕ್ ಸೂಚನೆ ನೀಡಿದ್ದಾರೆ.
ಇಂದು ಬಂದೋಬಸ್ತ್‌ಗೆ ಬರುವ ನಗರದ ಎಲ್ಲ ಪೊಲೀಸರು ಲಾಠಿ ಇಲ್ಲದೇ ಕರ್ತವ್ಯ ನಿರ್ವಹಿಸಬೇಕು. ಅಲ್ಲದೇ ಸಿಬ್ಬಂದಿ ತಮ್ಮ ಲಾಠಿಗಳನ್ನು ಠಾಣೆಯಲ್ಲೇ ಇಟ್ಟು ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆ ಹಾಗೂ ಸಂಚಾರಿ ಪೊಲೀಸ್ ಸೇರಿ ಯಾರೂ ಲಾಠಿ ಬಳಸಬಾರದು. ಆದರೆ ಸಿಎಆರ್ ಮತ್ತು ಕೆಎಸ್‌ಆರ್‌ಪಿ ಸಿಬ್ಬಂದಿ ಮಾತ್ರ ಲಾಠಿ ಬಳಸಬಹುದು ಎಂದು ಭಾಸ್ಕರ್ ರಾವ್ ಖಡಕ್ ಸೂಚನೆ ಕೊಟ್ಟಿದ್ದಾರೆ.
ಈ ಮೂಲಕ ಬೆಂಗಳೂರಿನಲ್ಲಿ ಇವತ್ತು ಪೊಲೀಸ್ ಲಾಠಿಗೆ ಅಲ್ಪ ವಿರಾಮ ಕೊಟ್ಟಿದ್ದಂತಾಗಿದೆ. ಈಗಾಗಲೇ ಎಲ್ಲ ವಲಯ ಡಿಸಿಪಿ ಕಚೇರಿಗಳಲ್ಲಿ ಪಾಸ್ ವಿತರಿಸಲಾಗುತ್ತಿದೆ. ಯಾರಿಗೆ ಎಷ್ಟು ಪಾಸ್ ನೀಡಬೇಕು ಅಂತ ನಿರ್ಧರಿಸುವ ಹೊಣೆಗಾರಿಕೆಯನ್ನು ಆಯಾ ವಲಯದ ಡಿಸಿಪಿಗಳಿಗೆ ನೀಡಲಾಗಿದೆ. ಸಾರ್ವಜನಿಕರು ಪಾಸ್ ಬಗ್ಗೆ ಹೇಳಿದರೆ ಮಾಹಿತಿ ನೀಡಬೇಕು. ಯಾವುದೇ ರೀತಿಯೂ ಅವರಿಗೆ ತೊಂದರೆ ಕೊಡಬಾರದು ಎಂದು ಪೊಲೀಸ್ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತರು ಸೂಚನೆ ಕೊಟ್ಟಿದ್ದಾರೆ.
ಇನ್ನೂ ಹಗಲು-ರಾತ್ರಿ ಎನ್ನದೇ ಕರ್ತವ್ಯದಲ್ಲಿರುವ ಎಲ್ಲ ಪೊಲೀಸ್ ಸಿಬ್ಬಂದಿ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ಪೊಲೀಸರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಪೊಲೀಸರಿಗೆ ಯಾವುದೇ ರೀತಿ ತೊಂದರೆ ಆಗಬಾರದು. ಹೀಗಾಗಿ ಎಲ್ಲ ಠಾಣೆಗಳಲ್ಲಿ ಸಿಬ್ಬಂದಿಗೆ ನೀರು ಮತ್ತು ಊಟ ವಸತಿ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ಕಮಿಷನರ್ ಭಾಸ್ಕರ್ ನೀಡಿರುವ ಸೂಚನೆಗಳು:
* ದಿನಪತ್ರಿಕೆ ಹಂಚುವ ಹುಡುಗರಿಗೆ ತೊಂದರೆ ಕೊಡಬಾರದು.
* ತರಕಾರಿ ಮಾರುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
* ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನ ಕಡ್ಡಾಯವಾಗಿ ಬಳಸಬೇಕು.
* ಪೊಲೀಸ್ ಸಿಬ್ಬಂದಿ ಯಾವುದೇ ಕಾರಣಕ್ಕೂ ಬಲಪ್ರಯೋಗ ಮಾಡುವಂತಿಲ್ಲ.
* ಪುಡ್ ಡೆಲಿವರಿ ಬಾಯ್‍ಗಳಿಗೆ ಅಡ್ಡಿಪಡಿಸಬಾರದು..
* ಬೈಕ್‍ಗಳಲ್ಲಿ ಅನಗತ್ಯವಾಗಿ ತಿರುಗಾಡಿದರೆ ತಿಳಿ ಹೇಳಬೇಕು, ಬಲಪ್ರಯೋಗ ಮಾಡಬಾರದು.
* ಈಗಾಗಲೇ ನಗರದಲ್ಲಿ 12. 500 ಪಾಸ್ ವಿತರಣೆ ಮಾಡಲಾಗಿದೆ. ಹೀಗಾಗಿ ಪಾಸ್ ಹೊಂದಿರುವವರಿಗೆ ಗೌರವ ನೀಡಬೇಕು.
* ಎಲ್ಲಾ ಠಾಣೆಗಳಲ್ಲಿ 10 ಮೈಕ್ ಸೆಟ್‍ಗಳು ಇರಬೇಕು.
* ಮೈಕ್ ಸೆಟ್‍ಗಳಲ್ಲಿ ದಯವಿಟ್ಟು ಮನೆಗೆ ಹೋಗಿ ಹೊರಗೆ ಬರಬೇಡಿ ಅಂತ ಸಲಹೆ ಸೂಚನೆಗಳನ್ನ ನೀಡಬೇಕು.
* ಡಯಾಲಿಸಿಸ್ ಅಂತ ವೈದ್ಯಕೀಯ ತುರ್ತು ಚಿಕಿತ್ಸೆಗೆ ತೆರಳುವವರಿಗೆ ಗೌರವದಿಂದ ಕಳುಹಿಸಿಕೊಡಬೇಕು.
* ಮಹಿಳೆಯರು, ಮಕ್ಕಳು, ಹಾಗೂ ವೃದ್ಧರ ಜೊತೆ ಗೌರವಯುತವಾಗಿ ಮಾತಾಡಬೇಕು.
* ದಿನಸಿ ಅಂಗಡಿ, ಕಿರಾಣಿ ಶಾಪ್, ಮಾಂಸದ ಅಂಗಡಿಯವರಿಗೆ ಸಾಮಾಜಿಕ ಅಂತರದ ಬಗ್ಗೆ ತಿಳಿಸಬೇಕು.
* ಮೂರು ಅಡಿ ಅಂತರ ಕಾಯ್ದುಕೊಳ್ಳುವ ಬಗ್ಗೆ ತಿಳಿಸಬೇಕು.
* ಜನರು ಗುಂಪು ಸೇರಬಾರದು, ಗುಂಪು ಸೇರದಂತೆ ತಿಳಿಹೇಳಿ ನೋಡಿಕೊಳ್ಳಬೇಕು.
* ಪ್ರತಿ ಠಾಣೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿ ತೆರೆಯಬೇಕು.