Tag: Last Visit

  • ಆತ್ಮೀಯ ಸ್ನೇಹಿತ, ಅಜಾತಶತ್ರುವನ್ನು ಕಳೆದುಕೊಂಡಿದ್ದೇನೆ: ಸಿಎಂ ಕುಮಾರಸ್ವಾಮಿ

    ಆತ್ಮೀಯ ಸ್ನೇಹಿತ, ಅಜಾತಶತ್ರುವನ್ನು ಕಳೆದುಕೊಂಡಿದ್ದೇನೆ: ಸಿಎಂ ಕುಮಾರಸ್ವಾಮಿ

    ಬೆಂಗಳೂರು: ಆತ್ಮೀಯ ಸ್ನೇಹಿತ ಹಾಗೂ ಅಜಾತಶತ್ರುವಾಗಿದ್ದ ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಮುಖಂಡ ಅನಂತಕುಮಾರ್ ಸಾವಿನ ಸುದ್ದಿ ಸಿಡಿಲುಬಡಿದಂತಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.

    ವಿಶ್ರಾಂತಿ ನಿಮಿತ್ತ ಮೈಸೂರಿಗೆ ತೆರಳಿದ್ದ ಸಿಎಂ ಕುಮಾರಸ್ವಾಮಿಯವರು ಅನಂತಕುಮಾರ್ ಅವರ ಸಾವಿನ ಸುದ್ದಿ ಕೇಳುತ್ತಲೇ ಬೆಂಗಳೂರಿಗೆ ವಾಪಾಸ್ಸಾಗಿದ್ದರು. ನಂತರ ಬಸವನಗುಡಿಯಲ್ಲಿರುವ ಸುಮೇರು ನಿವಾಸಕ್ಕೆ ಭೇಟಿ ನೀಡಿ, ಅನಂತಕುಮಾರ್ ಅವರ ಅಂತಿಮ ದರ್ಶನ ಪಡೆದುಕೊಂಡರು.

    ದರ್ಶನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರು ಹಾಗೂ ನನ್ನ ಆತ್ಮೀಯ ಸ್ನೇಹಿತರಾಗಿದ್ದ ಅನಂತಕುಮಾರ್ ಅವರ ನಿಧನ ಸುದ್ದಿ ನನಗೂ ಸೇರಿದಂತೆ ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ತಂದಿದೆ. ಈ ದುಃಖವನ್ನು ಭರಿಸುವ ಶಕ್ತಿ, ದೇವರು ಅವರ ಕುಟುಂಬಕ್ಕೆ ನೀಡಲಿ. ಈ ರೀತಿ ಅವರು ನಮ್ಮನ್ನೆಲ್ಲಾ ಅಗಲಿ ಹೋಗುತ್ತಾರೆಂದು ನಿರೀಕ್ಷಿಸಿರಲಿಲ್ಲ. ನಾಡಿನ ಲಕ್ಷಾಂತರ ಅಭಿಮಾನಿಗಳನ್ನು ಅನಾಥರನ್ನಾಗಿ ಬಿಟ್ಟು ಹೋಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆಂದು ಹೇಳಿದರು.

    ಸಾಮಾನ್ಯ ಕುಟುಂಬದಲ್ಲಿ ಜನಿಸಿ, ರಾಷ್ಟ್ರಮಟ್ಟದಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಣೆ ಮಾಡಿದ್ದರು. ಕೇಂದ್ರದ ಸಚಿವರಾಗಿ ನಾಡಿಗೆ ಸಲ್ಲಿಸಿರುವ ಸೇವೆ ಅಪಾರ. ಒಂದು ಪಕ್ಷದ ನಾಯಕರಾಗಿ, ಯಾವೊಂದು ಪಕ್ಷದ ಮುಖಂಡರ ಜೊತೆ ಸಂಘರ್ಷಕ್ಕೆ ಅವಕಾಶ ಮಾಡಿಕೊಡದೇ, ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುವ ಮೂಲಕ ಅಜಾತಶತ್ರು ಎಂದೆನಿಸಿಕೊಂಡಿದ್ದರು. ಕಾಕತಾಳಿಯವಂತೆ ಇಬ್ಬರೂ 1996 ರಲ್ಲಿ ಲೋಕಸಭೆ ಸಂಸದರಾಗಿ ಆಯ್ಕೆಯಾಗಿದ್ದೆವು ಎಂದು ತಮ್ಮ ನೆನಪನ್ನು ಹಂಚಿಕೊಂಡರು.

    ತಮ್ಮ ಕಿರಿಯ ವಯಸ್ಸಿನಲ್ಲೇ ನಾಡಿಗೆ ಅಪಾರವಾದ ಸೇವೆ ಸಲ್ಲಿಸಿದ್ದರು. ಆದರೆ ಅವಶ್ಯಕತೆಯಿರುವಾಗ ಅವರ ಸಾವು ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟತಂದಿದೆ. ನಾನು 2ನೇ ಬಾರಿ ಮುಖ್ಯಮಂತ್ರಿಯಾಗಿ ಜೂನ್ ತಿಂಗಳಲ್ಲಿ ದೆಹಲಿಗೆ ಹೋಗಿದ್ದೆ, ಆಗ ಅವರನ್ನು ಭೇಟಿ ಮಾಡಿದ್ದೆ. ಅಂದು ಅವರು ಆರೋಗ್ಯವಾಗಿಯೇ ಇದ್ದರು. ಅಚಾನಕ್ ಆಗಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿಕೊಂಡು, ನಾವು ಊಹೆ ಮಾಡದ ರೀತಿ ಬಾರದ ಲೋಕಕ್ಕೆ ಹೋಗಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

    ಜವರಾಯ ಕರೆದಾಗ ಎಲ್ಲರೂ ಹೋಗಲೇಬೇಕು. ಅವನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜವರಾಯನ ಕರೆಗೆ ಎಲ್ಲರೂ ತಲೆಬಾಗಲೇ ಬೇಕು. ಆದರೆ ಈ ರೀತಿ ಆಗುತ್ತದೆಂದು ನಿರೀಕ್ಷಿಸಿರಲಿಲ್ಲ. ನಾನು ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆಂದು ಭಾವುಕರಾದರು. ಇದನ್ನೂ ಓದಿ: ರಾಜಕಾರಣಕ್ಕೂ ಮೀರಿದ ಸ್ನೇಹ ನಮ್ಮ ಕುಟುಂಬಗಳ ಮಧ್ಯೆ ಇತ್ತು- ಸಿಎಂ ಸಂತಾಪ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews