Tag: Lasith Malinga

  • ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಲಸಿತ್‌ ಮಾಲಿಂಗ ನೇಮಕ

    ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಲಸಿತ್‌ ಮಾಲಿಂಗ ನೇಮಕ

    ಮುಂಬೈ: ಶ್ರೀಲಂಕಾದ ಮಾಜಿ ವೇಗದ ಬೌಲರ್ ಲಸಿತ್ ಮಾಲಿಂಗ ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

    15ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ರಾಜಸ್ಥಾನ ಫ್ರಾಂಚೈಸಿ ಬೌಲಿಂಗ್ ಕೋಚ್ ಆಗಿ ಮಾಲಿಂಗರನ್ನು ನೇಮಕ ಮಾಡಿದೆ. ಮಾಲಿಂಗ ಈ ಹಿಂದೆ 2019ರ ವರೆಗೆ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರರಾಗಿದ್ದರು. 2021ರಲ್ಲಿ ಎಲ್ಲಾ ಮಾದರಿ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಬಳಿಕ ಮಾಲಿಂಗ ಇದೀಗ ಐಪಿಎಲ್‍ನಲ್ಲಿ ಕೋಚ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮಂಕಡ್‌ಗೆ ಸಮ್ಮತಿ – ಬಾಲ್‌ ಎಸೆಯುವ ಮುನ್ನ ನಾನ್‍ಸ್ಟ್ರೈಕ್‍ ಬಿಟ್ಟರೆ ಉಳಿಗಾಲವಿಲ್ಲ

    ಮಾಲಿಂಗ ಐಪಿಎಲ್‍ನಲ್ಲಿ 2009 ರಿಂದ 2019ರ ವರೆಗೆ ಒಟ್ಟು 122 ಪಂದ್ಯಗಳನ್ನು ಆಡಿ 170 ವಿಕೆಟ್ ಪಡೆದಿದ್ದಾರೆ. ಇದೀಗ ಕೋಚ್ ಆಗಿ ಕಾರ್ಯನಿರ್ವಹಿಸಲು ಸಿದ್ಧರಾಗಿದ್ದಾರೆ. ರಾಜಸ್ಥಾನ ತಂಡದ ಮೆಂಟರ್ ಆಗಿ ಕುಮಾರ ಸಂಗಕ್ಕಾರ ಇದ್ದು, ನಾಯಕರಾಗಿ ಸಂಜು ಸ್ಯಾಮ್ಸನ್ ತಂಡದಲ್ಲಿದ್ದಾರೆ. ಮಾರ್ಚ್ 29 ರಂದು ರಾಜಸ್ಥಾನ ರಾಯಲ್ಸ್ ತಂಡ ಮೊದಲ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಶ್ರೀಶಾಂತ್‌ ವಿದಾಯ

    15ನೇ ಆವೃತ್ತಿ ಐಪಿಎಲ್ ಮಾರ್ಚ್ 26 ರಂದು ಐಪಿಎಲ್ ಆರಂಭವಾಗುತ್ತಿದ್ದು, ಮುಂಬೈ ಮತ್ತು ಪುಣೆಯಲ್ಲಿ ಒಟ್ಟು 70 ಲೀಗ್ ಮತ್ತು 4 ಪ್ಲೇ ಆಫ್ ಪಂದ್ಯಗಳು ನಡೆಯಲಿದೆ. ಒಟ್ಟು 65 ದಿನಗಳ ಕಾಲ ಟೂರ್ನಿ ನಡೆಯಲಿದೆ.

  • ಎಲ್ಲಾ ಮಾದರಿಯ ಕ್ರಿಕೆಟ್‍ಗೆ ಲಸಿತ್ ಮಾಲಿಂಗ ಗುಡ್ ಬೈ

    ಎಲ್ಲಾ ಮಾದರಿಯ ಕ್ರಿಕೆಟ್‍ಗೆ ಲಸಿತ್ ಮಾಲಿಂಗ ಗುಡ್ ಬೈ

    ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಲಸಿತ್ ಮಾಲಿಂಗ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತರಾಗಿದ್ದಾರೆ. 2011 ರಲ್ಲಿ ಟೆಸ್ಟ್ ನಿಂದ 2019 ರಲ್ಲಿ ಏಕದಿನ ಪಂದ್ಯಗಳಿಂದ ಮತ್ತು ಜನವರಿಯಲ್ಲಿ ಫ್ರಾಂಚೈಸಿ ಕ್ರಿಕೆಟ್‍ನಿಂದ ನಿವೃತ್ತರಾದ ಮಾಲಿಂಗ ಮಂಗಳವಾರ ಟಿ20 ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.

    38 ವರ್ಷದ ಮಾಲಿಂಗ ಅವರು ನನ್ನ ಶೂಗಳು ವಿಶ್ರಾಂತಿ ಪಡೆಯಲಿವೆ. ಆದರೆ ನನ್ನ ಆಟದ ಮೇಲಿನ ಪ್ರೀತಿ ಎಂದಿಗೂ ವಿಶ್ರಾಂತಿ ಪಡೆಯುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಂಡ್ಯ ಮೈಶುಗರ್ ಕಾರ್ಖಾನೆಗೆ ಬಿಡ್ ಮಾಡಲ್ಲ – ಪರಿಷತ್‍ನಲ್ಲಿ ನಿರಾಣಿ ಪ್ರಕಟ

    ಮಾಲಿಂಗ ತಮ್ಮ ನಿರ್ಧಾರವನ್ನು ಪ್ರಕಟಿಸುವ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಟಿ20ಯಲ್ಲಿ ಅವರ ವಿಕೆಟ್ ಗಳ ಬಗ್ಗೆ ತೋರಿಸಿ, ನನ್ನ ಶೂಗಳು ವಿಶ್ರಾಂತಿ ಪಡೆಯಲಿದ್ದರೂ ಆಟದ ಮೇಲಿನ ನನ್ನ ಪ್ರೀತಿ ಎಂದಿಗೂ ವಿಶ್ರಾಂತಿ ಪಡೆಯುವುದಿಲ್ಲ ಎಂದು ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.

    ಕಳೆದ 17 ವರ್ಷಗಳಲ್ಲಿ ನಾನು ಗಳಿಸಿದ ಅನುಭವ ಇನ್ನು ಮುಂದೆ ಈ ಕ್ಷೇತ್ರದಲ್ಲಿ ಅಗತ್ಯವಿಲ್ಲ. ನಾನು ಟಿ20 ಕ್ರಿಕೆಟ್‍ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಮಾತ್ರವಲ್ಲ ಕ್ರಿಕೆಟ್‍ನ ಎಲ್ಲಾ ಮಾದರಿಗಳಿಂದ ನಿವೃತ್ತಿಯಾಗಿದ್ದೇನೆ ಎಂದು ಘೋಷಿಸಿದ್ದಾರೆ.

    ಮಾಲಿಂಗ ಐಪಿಎಲ್‍ನಲ್ಲಿ ಇದುವರೆಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 5 ಸಲ ಹ್ಯಾಟ್ರಿಕ್ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಎರಡು ಬಾರಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆದಿದ್ದಾರೆ.  ಇದನ್ನೂ ಓದಿ: ಅರುಣ್ ಸಾಗರ್ ಮಗನ ಸಾಧನೆ ಕೊಂಡಾಡಿದ ಸುದೀಪ್

    https://www.youtube.com/watch?v=nzCYYRu4R5I

  • ನನಗೆ ಮಾಲಿಂಗ ಯಾರ್ಕರ್ ಹಾಕೋದನ್ನು ಹೇಳಿಕೊಟ್ಟಿಲ್ಲ – ಬೌಲಿಂಗ್ ಗುಟ್ಟು ಬಿಚ್ಚಿಟ್ಟ ಬುಮ್ರಾ

    ನನಗೆ ಮಾಲಿಂಗ ಯಾರ್ಕರ್ ಹಾಕೋದನ್ನು ಹೇಳಿಕೊಟ್ಟಿಲ್ಲ – ಬೌಲಿಂಗ್ ಗುಟ್ಟು ಬಿಚ್ಚಿಟ್ಟ ಬುಮ್ರಾ

    ನವದೆಹಲಿ: ಶ್ರೀಲಂಕಾದ ಯಾರ್ಕರ್ ಸ್ಪೆಶಲಿಸ್ಟ್ ಲಸಿತ್ ಮಾಲಿಂಗ ನನಗೆ ಯಾರ್ಕರ್ ಹಾಕುವುದನ್ನು ಹೇಳಿಕೊಟ್ಟಿಲ್ಲ ಎಂದು ಭಾರತದ ಯುವ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಹೇಳಿದ್ದಾರೆ.

    ಈಗ ಭಾರತದ ತಂಡದ ಬೌಲಿಂಗ್ ಸ್ಟಾರ್ ಆಗಿರುವ ಬುಮ್ರಾ ಹಾಗೂ ಮಾಲಿಂಗ ಐಪಿಎಲ್ ನಲ್ಲಿ ಒಂದೇ ತಂಡದ ಪರವಾಗಿ ಆಡುತ್ತಾರೆ. ಬುಮ್ರಾ ಅವರು ಮುಂಬೈ ಇಂಡಿಯನ್ಸ್ ಪರ ಆಡುವಾಗ ಮಾಲಿಂಗ ಅವರ ಬಳಿ ಯಾರ್ಕರ್ ಎಸೆತವನ್ನು ಮಾಡುವುದನ್ನು ಕಲಿತಿದ್ದಾರೆ. ಹಾಗಾಗಿ ಅವರು ಇಂದು ಡೆಡ್ಲಿ ಯಾರ್ಕರ್ ಗಳನ್ನು ಎಸೆಯುತ್ತಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬಂದಿತ್ತು.

    ಈಗ ಈ ಗಾಳಿ ಸುದ್ದಿಗೆ ತೆರೆ ಎಳೆದಿರುವ ಬುಮ್ರಾ, ಲಸಿತ್ ಮಾಲಿಂಗ ಅವರು ನನಗೆ ಯಾರ್ಕರ್ ಎಸೆತ ಹಾಕುವುದನ್ನು ಹೇಳಿಕೊಟ್ಟಿಲ್ಲ. ನಾನು ಮತ್ತು ಅವರು ಮುಂಬೈ ಇಂಡಿಯನ್ಸ್ ಪರ ಆಡುವಾಗ ಒಂದೇ ನೆಟ್‍ನಲ್ಲಿ ಅಭ್ಯಾಸ ಮಾಡಿದ್ದೇವೆ. ಆದರೆ ಅವರು ನನಗೆ ಯಾರ್ಕರ್ ಎಸೆತವನ್ನು ಹೇಗೆ ಎಸೆಯುವುದು ಎಂಬುದರ ಬಗ್ಗೆ ಹೇಳಿಕೊಟ್ಟಿಲ್ಲ. ಬದಲಿಗೆ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಒತ್ತಡವನ್ನು ಹೇಗೆ ನಿರ್ವಹಿಸಬೇಕು ಎಂದು ಹೇಳಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿರುವ ಬುಮ್ರಾ, ನನಗೆ ಯಾರು ಯಾರ್ಕರ್ ಎಸೆತವನ್ನು ಹೇಳಿಕೊಟ್ಟಿಲ್ಲ. ಮಾಲಿಂಗ ಅವರು ನಾನು ಐಪಿಎಲ್ ಅಲ್ಲಿ ಒಂದೇ ತಂಡಕ್ಕೆ ಆಡುತ್ತೇವೆ. ಆದರೆ ಮಾಲಿಂಗ ಕೂಡ ನನಗೆ ಯಾರ್ಕರ್ ಎಸೆತದ ಬಗ್ಗೆ ಹೇಳಿಕೊಟ್ಟಿಲ್ಲ. ನಾನು ಟಿವಿ ನೋಡಿಯೇ ಬೌಲಿಂಗ್ ಮಾಡುವುದನ್ನು ಕಲಿತ್ತಿದ್ದೇನೆ. ವಿಡಿಯೋ ನೋಡಿ ಅಲ್ಲಿನ ಪ್ರತಿಕ್ರಿಯೆಯನ್ನು ಅನುಸರಿಸಿ ನಾನು ಬೌಲಿಂಗ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

    ನಾನು ಈಗಲೂ ಕೂಡ ಟಿವಿ ನೋಡಿಯೇ ಬೌಲಿಂಗ್ ಕಲಿಯುತ್ತೇನೆ. ನನಗೆ ನನ್ನದೇ ದಾರಿಯಲ್ಲಿ ಅಭ್ಯಾಸ ಮಾಡಲು ಇಷ್ಟಪಡುತ್ತೇನೆ. ನನ್ನ ಬಗ್ಗೆ ನಾನೇ ವಿಶ್ಲೇಷಣೆ ಮಾಡಲು ಪ್ರಯತ್ನಿಸುತ್ತೇನೆ. ಏಕೆಂದರೆ ಕ್ರಿಕೆಟ್ ಆಡುವಾಗ ಮೈದಾನದಲ್ಲಿ ನಾನು ಒಬ್ಬಂಟಿಯಾಗಿ ಬೌಲಿಂಗ್ ಮಾಡಬೇಕು. ಅಲ್ಲಿ ನನಗೆ ಸಹಾಯ ಮಾಡಲು ಯಾರು ಇರುವುದಿಲ್ಲ. ಹಾಗಾಗಿ ನಾನು ನನ್ನ ದಾರಿಯಲ್ಲಿ ನಾನೇ ಅಭ್ಯಾಸ ಮಾಡಿ. ನನಗೆ ನಾನೇ ಸಹಾಯ ಮಾಡಿಕೊಳ್ಳುತ್ತೇನೆ ಎಂದು ತನ್ನ ಬೌಲಿಂಗ್ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

    ಕೆಲವರು ಮಾಲಿಂಗ ಅವರು ನನಗೆ ಯಾರ್ಕರ್ ಮಾಡುವುದನ್ನು ಹೇಳಿಕೊಟ್ಟಿದ್ದಾರೆ ಎಂದು ಹೇಳುತ್ತಾರೆ. ಅದು ನಿಜವಲ್ಲ. ಅವರು ನನಗೆ ಮೈದಾನದಲ್ಲಿ ಏನೂ ಹೇಳಿಕೊಟ್ಟಿಲ್ಲ. ಅವರ ಬಳಿ ನಾನು ಕಲಿತಿರುವುದು ಮನಸ್ಸನ್ನು ಹೇಗೆ ನಿಯಂತ್ರಣ ಮಾಡುವುದು, ಕೋಪ ಮಾಡಿಕೊಳ್ಳದೇ ಹೇಗೆ ಇರುವುದು. ವಿಭಿನ್ನ ಸಂದರ್ಭಗಳನ್ನು ಹೇಗೆ ನಿಭಾಯಿಸುವುದು ಮತ್ತು ಒಬ್ಬ ಬ್ಯಾಟ್ಸ್ ಮ್ಯಾನ್ ಅನ್ನು ಔಟ್ ಮಾಡಲು ಹೇಗೆ ಯೋಜನೆ ರೂಪಿಸುವುದು ಎಂಬುದನ್ನು ನಾನು ಅವರ ಬಳಿ ಕಲಿತಿದ್ದೇನೆ ಎಂದು ಹೇಳಿದ್ದಾರೆ.

    ಬೆನ್ನು ನೋವಿನ ಗಾಯದ ಸಮಸ್ಯೆಯಿಂದ ಕಳೆದ ಐದು ತಿಂಗಳಿಂದ ಭಾರತದ ತಂಡದಿಂದ ಹೊರಬಿದ್ದಿದ್ದ ಬುಮ್ರಾ ಅವರು ಜನವರಿ 5 ರಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಗೆ ಭಾರತ ತಂಡವನ್ನು ಸೇರಿಕೊಂಡಿದ್ದಾರೆ.

  • ನಾಲ್ಕು ಬಾಲ್‍ನಲ್ಲಿ 4 ವಿಕೆಟ್ ಪಡೆದ  ಮಾಲಿಂಗ ವಿಶ್ವದಾಖಲೆ

    ನಾಲ್ಕು ಬಾಲ್‍ನಲ್ಲಿ 4 ವಿಕೆಟ್ ಪಡೆದ ಮಾಲಿಂಗ ವಿಶ್ವದಾಖಲೆ

    ಕೊಲಂಬೊ: ಶ್ರೀಲಂಕಾದ ಅನುಭವಿ ವೇಗಿ ಲಸಿತ್ ಮಾಲಿಂಗ ಅವರು ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಪಡೆದು ಚುಟುಕು ಪಂದ್ಯದಲ್ಲಿ ಹೊಸ ದಾಖಲೆ ಮಾಡಿದ್ದಾರೆ.

    ಶುಕ್ರವಾರ ಪಲ್ಲಕೆಲೆಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಟಿ-20 ಪಂದ್ಯದಲ್ಲಿ, ಲಸಿತ್ ಮಾಲಿಂಗ ಮ್ಯಾಚ್‍ನ ಮೂರನೇ ಓವರ್ ನಲ್ಲಿ ಕಿವೀಸ್‍ನ ನಾಲ್ಕು ಆಟಗಾರರನ್ನು ಒಂದೇ ಓವರ್ ನಲ್ಲಿ ಔಟ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ.

    ಪಂದ್ಯದ ಮೂರನೇ ಓವರ್ ಬೌಲ್ ಮಾಡಲು ಬಂದ ಮಾಲಿಂಗ್ ಆ ಓವರ್ ನ ಮೂರನೇ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಕೊಲಿನ್ ಮುನ್ರೊವನ್ನು ಬೌಲ್ಡ್ ಮಾಡುವ ಮೂಲಕ ಮೊದಲ ವಿಕೆಟ್ ಪಡೆದರು. ನಂತರ 4 ನೇ ಎಸೆತದಲ್ಲಿ ಹಮೀಶ್ ರುದರ್‍ಫೋರ್ಡ್ ಅವರನ್ನು ಎಲ್‍ಬಿಡಬ್ಲ್ಯು ಬಲೆಗೆ ಬೀಳಿಸಿದರು. ನಂತರ ಬಂದ ಕಾಲಿನ್ ಡಿ ಗ್ರ್ಯಾಂಡ್‍ಹೋಮ್ ಮಾಲಿಂಗ್ ಅವರ 5ನೇ ಎಸೆತದಲ್ಲಿ ಬೌಲ್ಡ್ ಆದರು. ಓವರ್ ನ ಕೊನೆಯ ಬಾಲ್‍ನಲ್ಲಿ ಅನುಭವಿ ಆಟಗಾರ ರಾಸ್ ಟೇಲರ್‍ ರನ್ನು ಔಟ್ ಮಾಡುವ ಮೂಲಕ ಈ ಸಾಧನೆ ಮಾಡಿದರು.

    https://twitter.com/avulasunil/status/1169999036985643009

    ಇದೇ ಪಂದ್ಯದಲ್ಲಿ ಇನ್ನೊಂದು ಸಾಧನೆ ಮಾಡಿರುವ ಲಸಿತ್ ಮಾಲಿಂಗ ಅವರು, ಕೊಲಿನ್ ಮುನ್ರೊ ಅವರನ್ನು 3 ನೇ ಎಸೆತದಲ್ಲಿ ಬೌಲ್ಡ್ ಮಾಡುವ ಮೂಲಕ ವಿಶ್ವದಲ್ಲೇ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ನೂರು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಖ್ಯಾತಿ ಪಡೆದರು. ಇವರನ್ನು ಬಿಟ್ಟರೆ ಈ ಪಟ್ಟಿಯಲ್ಲಿ 98 ವಿಕೆಟ್ ಪಡೆದ ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಎರಡನೇ ಸ್ಥಾನದಲ್ಲಿ ಇದ್ದಾರೆ.

    ಒಂದೇ ಓವರ್ ನಲ್ಲಿ 4 ವಿಕೆಟ್ ಕಿತ್ತು ದಾಖಲೆ ಬರೆದ ಮಾಲಿಂಗ, ತಾನು ಬೌಲ್ ಮಾಡಿದ ಐದನೇ ಓವರ್‍ ನಲ್ಲಿ ಕೀವೀಸ್ ಆಟಗಾರ ಟಿಮ್ ಸೀಫರ್ಟ್ ಅವರನ್ನು ಔಟ್ ಮಾಡಿ 5 ವಿಕೆಟ್ ಪಡೆಯುವ ಮೂಲಕ ತನ್ನ ವೃತ್ತಿ ಜೀವನದಲ್ಲಿ ಟಿ-20 ಮಾದರಿಯಲ್ಲಿ ಎರಡು ಬಾರಿ ಒಂದು ಪಂದ್ಯದಲ್ಲಿ ಐದು ವಿಕೆಟ್ ಪಡೆದ ಸಾಧನೆ ಮಾಡಿದರು.

    2006ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20 ಮಾದರಿಗೆ ಮೊದಲು ಪಾದಾರ್ಪಣೆ ಮಾಡಿದ ಮಾಲಿಂಗ ಅವರು, ಇಲ್ಲಿಯವರೆಗೆ 76 ಟಿ-20 ಪಂದ್ಯಗಳನ್ನು ಆಡಿದ್ದು, 19.0 ಸರಾಸರಿಯಲ್ಲಿ ಒಟ್ಟು 104 ವಿಕೆಟ್ ಪಡೆದಿದ್ದಾರೆ. ಇದರ ಜೊತೆಗೆ 226 ಏಕದಿನ ಪಂದ್ಯಗಳನ್ನು ಆಡಿರುವ ಮಾಲಿಂಗ ಒಟ್ಟು 338 ವಿಕೆಟ್‍ಗಳನ್ನು ಪಡೆದಿದ್ದಾರೆ. ತನ್ನ ಡೆಡ್ಲಿ ಯಾರ್ಕರ್ ಮೂಲಕ ಹೆಸರುವಾಸಿಯಾಗಿರುವ ಮಾಲಿಂಗ 30 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 101 ವಿಕೆಟ್ ಪಡೆದು ಮಿಂಚಿದ್ದಾರೆ.

    ಶುಕ್ರವಾರ ಪಲ್ಲಕೆಲೆಯಲ್ಲಿ ನಡೆದ ಅಂತಿಮ ಟಿ-20 ಪಂದ್ಯದಲ್ಲಿ ಲಸಿತ್ ಮಾಲಿಂಗ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ನ್ಯೂಜಿಲೆಂಡ್ ಶ್ರೀಲಂಕಾ ನೀಡಿದ 125 ರನ್‍ಗಳ ಸಾಧಾರಣ ಗುರಿ ಬೆನ್ನಟ್ಟಲಾಗದೆ 88 ರನ್‍ಗಳಿಗೆ ಆಲ್‍ಔಟ್ ಆಯಿತು. ಈ ಮೂಲಕ ಈ ಪಂದ್ಯವನ್ನು 37 ರನ್‍ಗಳ ಅಂತರದಿಂದ ಶ್ರೀಲಂಕಾ ಗೆದ್ದುಕೊಂಡಿತು.

  • ವಿಶ್ವಕಪ್‍ಗೂ ಮುನ್ನ ಲಂಕಾ ಕ್ರಿಕೆಟ್ ಮಂಡಳಿಯಿಂದ ಮಾಲಿಂಗಗೆ ಶಾಕ್!

    ವಿಶ್ವಕಪ್‍ಗೂ ಮುನ್ನ ಲಂಕಾ ಕ್ರಿಕೆಟ್ ಮಂಡಳಿಯಿಂದ ಮಾಲಿಂಗಗೆ ಶಾಕ್!

    ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ವಿಶ್ವಕಪ್ ಮುನ್ನವೇ ಬೆಳಕಿಗೆ ಬಂದಿದ್ದು, ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿಶ್ವಕಪ್‍ಗೆ ತಂಡದ ನಾಯಕತ್ವವನ್ನು ಬದಲಾವಣೆ ಮಾಡುವ ನಿರ್ಧಾರ ಮಾಡಿದೆ.

    2015 ರಿಂದಲೂ ಒಂದು ಏಕದಿನ ಪಂದ್ಯವನ್ನು ಆಡದ ಎಡಗೈ ವೇಗಿ ದಿಮುತ್ ಕರುಣಾರತ್ನೆ ಅವರನ್ನು ತಂಡದ ಕ್ಯಾಪ್ಟನ್ ಆಗಿ ನೇಮಕ ಮಾಡಿದೆ. 30 ವರ್ಷದ ಕರುಣಾರತ್ನೆ 60 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅಂತಿಮ ಏಕದಿನ ಪಂದ್ಯವನ್ನು 2015ರಲ್ಲಿ ಆಡಿದ್ದರು. ಈ ಮಾದರಿಯಲ್ಲಿ ಕರುಣರತ್ನೆ 17 ಏಕದಿನ ಪಂದ್ಯಗಳಿಂದ ಸರಾಸರಿ 15.83 ರಂತೆ 190 ರನ್ ಗಳನ್ನ ಮಾತ್ರ ಗಳಿಸಿದ್ದಾರೆ.

    ಶ್ರೀಲಂಕಾ ಕ್ರಿಕೆಟ್‍ನಲ್ಲಿ ಫಿಕ್ಸಿಂಗ್ ಆರೋಪ ಕೇಳಿ ಬಂದ ಬಳಿಕ ನಿರಂತರವಾಗಿ ಮಂಡಳಿ ತಂಡದ ನಾಯಕತ್ವದ ಬದಲಾವಣೆಯಲ್ಲಿ ತೊಡಗಿದ್ದು, ಕಳೆದ ಕೆಲ ಸಮಯದಿಂದ ಮಾಲಿಂಗ ತಂಡದ ನಾಯಕತ್ವ ವಹಿಸಿದ್ದರು. ಆದರೆ ಕಳೆದ 14 ಪಂದ್ಯಗಳಲ್ಲಿ ಮಾಲಿಂಗ ನಾಯಕತ್ವದ ತಂಡ 13 ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತ ತಂಡದ ನಾಯಕತ್ವದ ಬದಲಾವಣೆಯಿಂದ ಬೇಸರಗೊಂಡಿರುವ ಅನುಭವಿ ಆಟಗಾರ, ಮಾಜಿ ನಾಯಕ ಲಸಿತ್ ಮಾಲಿಂಗ ಆಟಗಾರರ ವಾಟ್ಸಾಪ್ ಗ್ರೂಪಿನಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಅಂತಿಮವಾಗಿ 15 ಆಟಗಾರರ ಪಟ್ಟಿ ಘೋಷಣೆ ಆಗಿದ್ದು, ಮಾಲಿಂಗ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೇ 30 ರಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಶ್ರೀಲಂಕಾ ಜೂನ್ 01 ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

    ತಂಡ ಇಂತಿದೆ: ಏಂಜಲೊ ಮ್ಯಾಥ್ಯೂಸ್, ಅವಿಷ್ಕ ಫರ್ನಾಂಡೊ, ಲಾಹಿರು ತಿರಿಮನ್ನೆ, ದಿಮುತ್ ಕರುಣಾರತ್ನೆ, ಲಸಿತ್ ಮಾಲಿಂಗ, ಕುಶಾಲ್ ಪೆರೆರಾ, ಕುಶಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಜೀವನ್ ಮೆಂಡಿಸ್, ಮಲಿಂಡಾ ಸಿರಿವರ್ಧನ, ಜೆಫ್ರಿ ವಾಂಡಸ್ರ್ಸೆ, ನುವಾನ್ ಪ್ರದೀಪ್, ಸುರಂಗ ಲಕ್ಮಲ್, ನುವಾನ್ ಪ್ರದೀಪ್, ತಿಸರಾ ಪೆರೆರಾ, ಇಸುರು ಉದಾನ.

  • ಟಾರ್ಗೆಟ್ ಮಾಡಿದ ಲಸಿತ್ ಮಾಲಿಂಗಾ ಪತ್ನಿ – ಕ್ರಿಕೆಟ್ ಬೋರ್ಡ್ ಮೊರೆ ಹೋದ ತಿಸಾರ ಪೆರೆರಾ

    ಟಾರ್ಗೆಟ್ ಮಾಡಿದ ಲಸಿತ್ ಮಾಲಿಂಗಾ ಪತ್ನಿ – ಕ್ರಿಕೆಟ್ ಬೋರ್ಡ್ ಮೊರೆ ಹೋದ ತಿಸಾರ ಪೆರೆರಾ

    ಕೊಲಂಬೊ: ಶ್ರೀಲಂಕಾ ತಂಡದ ವೇಗದ ಬೌಲರ್ ಲಸಿತ್ ಮಾಲಿಂಗಾ ಪತ್ನಿ ಹಾಗೂ ಆಲ್‍ ರೌಂಡರ್ ತಿಸಾರ ಪೆರೆರಾರ ನಡುವಿನ ಸಾಮಾಜಿಕ ಜಾಲತಾಣದ ಕದನ ಹೆಚ್ಚಾಗಿದ್ದು, ಸದ್ಯ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಪೆರೆರಾ ಪತ್ರ ಬರೆದು ಮನವಿ ಮಾಡಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ಮಾಲಿಂಗಾ ಪತ್ನಿ ತಾನ್ಯಾ ಪೆರೆರಾ ಫೇಸ್‍ಬುಕ್ ಖಾತೆಯಲ್ಲಿ ತಿಸಾರರನ್ನು ಟಾರ್ಗೆಟ್ ಮಾಡಿ ಪೋಸ್ಟ್ ಪ್ರಕಟಿಸಿದ್ದರು. ಇದರಲ್ಲಿ ತಿಸಾರ ಪೆರೆರಾ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಶ್ರೀಲಂಕಾದ ಕ್ರೀಡಾ ಸಚಿವರನ್ನು ಭೇಟಿಯಾಗಿದ್ದರು ಎಂದು ಬರೆದುಕೊಂಡಿದ್ದರು.

    ತಾನ್ಯಾರ ಈ ಪೋಸ್ಟ್ ಗೆ ತಿರುಗೇಟು ನೀಡಿದ್ದ ತಿಸ್ಸಾರ ಪೆರಾರ, ಕ್ಯಾಲೆಂಟರ್ ವರ್ಷದಲ್ಲಿ ತಾವು ಮಾಡಿದ ಸಾಧನೆಗಳ ಪಟ್ಟಿ ಮಾಡಿ ತಂಡದಲ್ಲಿ ಸ್ಥಾನ ಪಡೆಯಲು ತಮ್ಮ ಉತ್ತಮ ಪ್ರದರ್ಶನವೇ ಕಾರಣ ಎಂದು ಟಾಂಗ್ ನೀಡಿದ್ದರು. ಇದರ ಬಳಿಕವೂ ತಾನ್ಯಾ ಅವರು, ತಿಸಾರರನ್ನು ಟಾರ್ಗೆಟ್ ಮಾಡಿ ಮತ್ತೊಂದು ಪೋಸ್ಟ್ ಮಾಡಿದ್ದರು.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ಉಂಟಾಗುತ್ತಿರುವ ಚರ್ಚೆಗೆ ಬ್ರೇಕ್ ಹಾಕಲು ಮುಂದಾಗಿರುವ ತಿಸಾರ ಪೆರೆರಾ ಶ್ರೀಲಂಕಾ ಕ್ರಿಕೆಟ್ ಬೋರ್ಡಿನ ಸಿಇಒ ಆಶ್ಲೇ ಡಿ ಸಿಲ್ವಾ ಅವರಿಗೆ ಪತ್ರ ಬರೆದಿದ್ದಾರೆ. ಕೆಲವರ ವೈಯಕ್ತಿಕ ದ್ವೇಷಕ್ಕೆ ತಂಡದ ಸಾಮರಸ್ಯ ಹಾಳಾಗುತ್ತಿದೆ. ಇಡೀ ದೇಶಕ್ಕೆ ನಾವು ನಗುವ ವಸ್ತುವಾಗಿದ್ದೇವೆ ಎಂದು ತಿಳಿಸಿ ಪ್ರಕರಣದಲ್ಲಿ ಮಧ್ಯಪ್ರವೇಶದ ಮಾಡುವಂತೆ ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv