Tag: landslides

  • ಹೂಳೆತ್ತದಿದ್ದರೆ ಪ್ರವಾಹ ಖಚಿತ – ಶಾಸಕ ಅಪ್ಪಚ್ಚು ರಂಜನ್ ಆತಂಕ

    ಹೂಳೆತ್ತದಿದ್ದರೆ ಪ್ರವಾಹ ಖಚಿತ – ಶಾಸಕ ಅಪ್ಪಚ್ಚು ರಂಜನ್ ಆತಂಕ

    ಮಡಿಕೇರಿ: ಕೊಡಗು ಜಿಲ್ಲೆ ಎರಡು ವರ್ಷಗಳಿಂದ ನಿರಂತರವಾಗಿ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದೆ. 2018ರಲ್ಲಿ ಭೂ ಕುಸಿತ ಮತ್ತು ಪ್ರವಾಹ ಎರಡು ಒಟ್ಟೊಟ್ಟಿಗೆ ಸಂಭವಿಸಿತ್ತು. ಈ ವೇಳೆ ಇಡೀ ಬೆಟ್ಟಗಳ ಮಣ್ಣು ಜಲಾಶಯ ನದಿಗಳಲ್ಲಿ ತುಂಬಿ ಹೋಗಿತ್ತು.

    ಕೊಡಗಿನ ಏಕೈಕ ಜಲಾಶಯದಲ್ಲಂತು ಬರೋಬ್ಬರಿ 7 ರಿಂದ 8 ಅಡಿಯಷ್ಟು ಮಣ್ಣು ತುಂಬಿತ್ತು. 2019ರಲ್ಲಿ ಕಾವೇರಿ ನದಿ ಉಕ್ಕಿಹರಿದ ಪರಿಣಾಮ ನದಿ ತಟಕ್ಕೆ ಹೊಂದಿಕೊಂಡಂತೆ ಇರುವ ನಾಪೋಕ್ಲು, ಕೊಟ್ಟಡಮುಡಿ, ಕುಶಾಲನಗರ ಸೇರಿದಂತೆ ಹತ್ತಾರು ಹಳ್ಳಿಗಳು ತೀವ್ರ ಸಮಸ್ಯೆ ಎದುರಿಸಿದ್ದವು. ಇದೆಲ್ಲದಕ್ಕೂ ಪ್ರಕೃತಿ ಮೇಲೆ ಮಾನವನು ನಡೆಸಿರುವ ಹಸ್ತಕ್ಷೇಪವೇ ಮುಖ್ಯ ಕಾರಣ ಎಂದು ಭೂ ವಿಜ್ಞಾನಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

    ಈ ಎರಡು ವರ್ಷಗಳಲ್ಲೂ ಹಾರಂಗಿ ಜಲಾಶಯ ಮತ್ತು ಕಾವೇರಿ ನದಿಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿ ಹೋಗಿತ್ತು. ಕಾವೇರಿ ನದಿ ಮತ್ತು ಜಲಾಶಯದ ಹಿನ್ನೀರಿನಲ್ಲಿ ತುಂಬಿದ್ದ ಹೂಳಿನಲ್ಲಿ ಗಿಡಗಂಟಿಗಳು ಬೆಳೆದು ಕಾವೇರಿ ನದಿಯ ಸಾಕಷ್ಟು ಕಡೆ ನಡುಗಡ್ಡೆಗಳೇ ನಿರ್ಮಾಣವಾಗಿ, ನದಿ ಹರಿಯುವಿಕೆ ಬದಲಾಗಿದೆ. ಜೊತೆಗೆ ನದಿಯಲ್ಲಿ ನೀರಿನ ಸರಾಗ ಹರಿಯುವಿಕೆಗೆ ಅಡ್ಡಿಯಾಗಿದ್ದು, ಸ್ವಲ್ಪ ಜೋರಾಗಿ ಮಳೆ ಬಂದರು ಮತ್ತೆ ಪ್ರವಾಹ ಉಂಟಾಗುವ ಅಪಾಯ ಎದುರಾಗಿದೆ.

    ಈ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ಕಾವೇರಿ ನದಿಯ ಹಲವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಕಾವೇರಿ ನದಿಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದೆ. ಇದನ್ನು ತೆಗೆಯದಿದ್ದರೆ ಮತ್ತೆ ಪ್ರವಾಹ ಉಂಟಾಗೋದು ಖಚಿತ. ಅದಕ್ಕಾಗಿ ಕನಿಷ್ಠ 130 ಕೋಟಿ ಅಗತ್ಯವಿದ್ದು, ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸಿಎಂ ಯಡಿಯೂರಪ್ಪ ಅವರು ಗಮನಹರಿಸಿ ರೈತರ ಸಮಸ್ಯೆ ಆಲಿಸಿ ಹೂಳು ತೆಗೆಯುವುದಕ್ಕೆ ಅನುದಾನ ನೀಡಬೇಕು. ಮಳೆಗಾಲ ಆರಂಭದ ಒಳಗಾಗಿ ಹೂಳು ತೆಗೆಯುವ ಅಗತ್ಯತೆ ಇದೆ ಎಂದರು.

  • ನೆರೆ ನಿಂತ್ರೂ ನಿಲ್ಲದ ಅವಾಂತರ- ಮನೆಗಳಲ್ಲಿ ಬೀಳುತ್ತಿವೆ 20 ಅಡಿ ಆಳದ ಗುಂಡಿಗಳು

    ನೆರೆ ನಿಂತ್ರೂ ನಿಲ್ಲದ ಅವಾಂತರ- ಮನೆಗಳಲ್ಲಿ ಬೀಳುತ್ತಿವೆ 20 ಅಡಿ ಆಳದ ಗುಂಡಿಗಳು

    ರಾಯಚೂರು: ಒಂದೆಡೆ ನೆರೆಹಾವಳಿಯಿಂದ ತತ್ತರಿಸಿದ್ದ ರಾಯಚೂರು ಜಿಲ್ಲೆಯ ಜನ ಈಗ ಮಳೆಯಿಂದ ಕಂಗಾಲಾಗಿದ್ದಾರೆ. ನೆರೆ ಹಾವಳಿಯಿಂದ ಕಳೆದುಕೊಂಡ ಆಸ್ತಿಪಾಸ್ತಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ, ಸರ್ಕಾರ ಕಷ್ಟಗಳಿಗೆ ಕಿವಿ ಕೊಡುತ್ತಿಲ್ಲ ಎನ್ನುವಾಗಲೇ ಜನ ಮತ್ತಷ್ಟು ಕಷ್ಟಗಳನ್ನ ಅನುಭವಿಸುತ್ತಿದ್ದಾರೆ. ನೀರಿನ ಬಸಿಯುವಿಕೆಯಿಂದ ಮನೆಗಳಲ್ಲಿ ನೀರಿನ ಗುಂಡಿಗಳು ಬೀಳುತ್ತಿದ್ದು ಜನ ಜೀವಭಯದಲ್ಲಿ ಗ್ರಾಮಗಳನ್ನೇ ಬಿಡಬೇಕಾದ ಪರಿಸ್ಥಿತಿ ಇದೆ.

    ನೆರೆಯ ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಗೆ ಕೃಷ್ಣಾ ನದಿ ಪ್ರವಾಹದಿಂದ ರಾಯಚೂರು ಜಿಲ್ಲೆಯ ನದಿ ಪಾತ್ರದ ಗ್ರಾಮಗಳ ಜನರು ನಿರಾಶ್ರಿತರಾಗಿದ್ದಾರೆ. ಮನೆಗಳು ಕುಸಿದು, ಬೆಳೆ ಹಾನಿಯಾಗಿ ಬೀದಿಗೆ ಬಂದಿದ್ದಾರೆ. ಆದರೆ ಸಂತ್ರಸ್ತರ ಕಣ್ಣೀರು ಒರೆಸಲು ಅಲ್ಪ ಸಹಾಯ ಮಾಡಿದ ಸರ್ಕಾರ ಈಗ ಸಂತ್ರಸ್ತರನ್ನ ಮರೆತೇ ಹೋಗಿದೆ. ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸದೇ ಇರುವುದರಿಂದ ಸಂತ್ರಸ್ತರು ಕಂಗಾಲಾಗಿದ್ದಾರೆ. ಇದರ ನಡುವೆ ರಾಯಚೂರಿನ ಅರಶಿಣಿಗಿ ಸೇರಿದಂತೆ ಕೆಲ ನೆರೆಪೀಡಿತ ಗ್ರಾಮಗಳ ಮನೆಗಳಲ್ಲಿ ಇದ್ದಕ್ಕಿದ್ದ ಹಾಗೇ ಭೂಮಿ ಕುಸಿದು ಗುಂಡಿ ಬೀಳುತ್ತಿವೆ. ಹದಿನೈದು ಇಪ್ಪತ್ತು ಅಡಿ ಆಳದ ಗುಂಡಿ ನಿರ್ಮಾಣವಾಗುತ್ತಿದ್ದು ಜನ ಜೀವ ಭಯದಲ್ಲಿ ಮನೆಗಳನ್ನೇ ತೊರೆಯುತ್ತಿದ್ದಾರೆ. ಮಳೆಯಿಂದಾಗಿ ಅಂತರ್ಜಲ ಹೆಚ್ಚಾಗಿ ಎಲ್ಲೆಂದರಲ್ಲಿ ಭೂಮಿ ಕುಸಿದು ಗುಂಡಿ ಬೀಳುತ್ತಿವೆ ಎನ್ನಲಾಗಿದೆ.

    ಜಿಲ್ಲೆಯಲ್ಲಿ ಎನ್‍ಡಿಆರ್‍ಎಫ್ ನಿಯಮದ ಪ್ರಕಾರ 38.96 ಕೋಟಿ ರೂ. ಹಾನಿಯಾಗಿದೆ. ಆದರೆ ಜಿಲ್ಲಾಡಳಿತ ಅಂದಾಜು ಮಾಡಿರುವ ಹಾನಿ ಪ್ರಮಾಣ 242.77 ಕೋಟಿ ರೂ. ಇದೆ. ಸದ್ಯ ನೆರೆ ನಿರ್ವಹಣೆಗೆ 20.67 ಕೋಟಿ ರೂ. ಬೇಕಿದ್ದು, ಜಿಲ್ಲಾಡಳಿತದ ವಿಪತ್ತು ನಿರ್ವಹಣೆ ಖಾತೆಯಲ್ಲಿದ್ದ 12.87 ಕೋಟಿ ರೂ. ಖರ್ಚಾಗಿದೆ. ಹೀಗಾಗಿ ಸದ್ಯ ತುರ್ತಾಗಿ 7. 80 ಕೋಟಿ ಹಣ ಜಿಲ್ಲೆಗೆ ಅಗತ್ಯವಿದೆ. ಮನೆಗಳಿಗೆ ನೀರು ನುಗ್ಗಿದ್ದ 543 ಸಂತ್ರಸ್ತರಿಗೆ ತಲಾ 10 ಸಾವಿರ ನೀಡಲಾಗಿದೆ. ಬಿದ್ದ ಮನೆಗಳಿಗೆ ತಲಾ 25 ಸಾವಿರ ರೂಪಾಯಿಯಂತೆ 73 ಮನೆಗಳಿಗೆ 19 ಲಕ್ಷ 50 ಸಾವಿರ ರೂ. ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

    73 ಮನೆಗಳಲ್ಲಿ 8 ಸಂಪೂರ್ಣ, 16 ಭಾಗಶಃ, 49 ಮನೆಗಳು ಅಲ್ಪ ಹಾನಿಯಾಗಿವೆ ಎಂದು ಸಮೀಕ್ಷೆ ಮಾಡಲಾಗಿದೆ. ಆದರೆ ಸಮಿಕ್ಷೆ ಸರಿಯಾಗಿ ನಡೆಯುತ್ತಿಲ್ಲ ಎಂದು ಜನ ಆರೋಪಿಸಿದ್ದಾರೆ. ಇಂತಹದರಲ್ಲಿ ಭೂ ಕುಸಿತದಿಂದ ಮನೆಗಳು ಜಖಂಗೊಳ್ಳುತ್ತಿರುವುದು ಸಂತ್ರಸ್ತರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಬರಗಾಲದಿಂದ ತತ್ತರಿಸಿದ್ದ ರಾಯಚೂರು ಜಿಲ್ಲೆಗೆ ಬಂದ ನೆರೆಹಾವಳಿ ಜನ ಜೀವನವನ್ನೇ ಬುಡಮೇಲಾಗಿ ಮಾಡಿದೆ. ಈಗ ಸಾಕು ಎನ್ನುವ ಮಟ್ಟಿಗೆ ಬರುತ್ತಿರುವ ಮಳೆ ಮತ್ತೊಂದು ರೀತಿಯ ತೊಂದರೆಗಳಿಗೆ ಕಾರಣವಾಗುತ್ತಿದೆ. ಕನಿಷ್ಠ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.

  • ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಮಣ್ಣಿನಲ್ಲಿ ಸಂಪೂರ್ಣ ಮುಳುಗಡೆ

    ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಮಣ್ಣಿನಲ್ಲಿ ಸಂಪೂರ್ಣ ಮುಳುಗಡೆ

    ಚಿಕ್ಕಮಗಳೂರು: ಕರುಣೆಯಿಲ್ಲದ ವರುಣನ ಅಬ್ಬರಕ್ಕೆ ಮಲೆನಾಡು ಕೊಚ್ಚಿ ಹೋಗಿದೆ. ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಸಾವಿರಾರು ಜನ ನಿರ್ಗತಿಕರಾಗಿದ್ದಾರೆ.

    ಮೂಡಿಗೆರೆ ತಾಲೂಕಿನ ಜಾವಳಿ ಸಮೀಪದ ಮಲೆಮನೆ ಗ್ರಾಮದಲ್ಲಿ 12 ಮನೆ, 2 ದೇವಸ್ಥಾನ ಸಂಪೂರ್ಣ ನೆಲಸಮವಾಗಿವೆ. 3800 ಅಡಿ ಎತ್ತರದಿಂದ ಬಿದ್ದ ಗುಡ್ಡದ ಮಣ್ಣು ಇಡೀ ಗ್ರಾಮವನ್ನೇ ನಾಶ ಮಾಡಿದೆ. ಮನೆಯ ವಸ್ತುಗಳು 300 ಮೀಟರ್ ದೂರಕ್ಕೆ ಕೊಚ್ಚಿ ಹೋಗಿವೆ. ಮನೆ ಮುಂದಿದ್ದ ಬೈಕ್ ಕೂಡ ಸುಮಾರು 200 ಮೀಟರ್ ದೂರಕ್ಕೆ ಕೊಚ್ಚಿ ಹೋಗಿದೆ. ಬೈಕಿನ ಹಿಡಿ ಕಾಣುತ್ತಿದ್ದರಿಂದ ಸ್ಥಳೀಯರು ಸುತ್ತಲೂ ಅಗೆದು ಬಿಟ್ಟಿದ್ದಾರೆ.

    ಕಳೆದ ಸುಮಾರು 50 -60 ವರ್ಷ ಹಿಂದೆ ಕಾಣಿದ ಮಳೆ ಈಗ ಕಂಡು ಬಂದಿದ್ದರಿಂದ ಮಲೆನಾಡಿನ ಹತ್ತಾರು ಗ್ರಾಮಗಳು ಜಲಾವೃತಗೊಂಡಿದೆ. ಭಾರೀ ಮಳೆಗೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ 200 ಮೀ. ಕೊಚ್ಚಿಕೊಂಡು ಬಂದ ಬೈಕ್ ಸಂಪೂರ್ಣ ಮಣ್ಣಿನಲ್ಲಿ ಮುಳುಗಡೆ ಆಗಿದೆ. ಬೈಕಿನ ಅಡಿ ಕಾಣುತ್ತಿದ್ದರಿಂದ ಸ್ಥಳೀಯರು ಅದನ್ನು ಹೊರ ತೆಗೆದಿದ್ದಾರೆ. ಬೈಕ್ ಸೇರಿದಂತೆ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್ ಹಲವು ವಸ್ತುಗಳು ಮಣ್ಣಿನಲ್ಲಿ ಮುಚ್ಚಿಕೊಂಡು ಹೋಗಿದೆ.

  • ಕೇರಳದಲ್ಲಿ ಮತ್ತೆ ಭೂ ಕುಸಿತ – 80 ಮಂದಿ ಕಣ್ಮರೆ

    ಕೇರಳದಲ್ಲಿ ಮತ್ತೆ ಭೂ ಕುಸಿತ – 80 ಮಂದಿ ಕಣ್ಮರೆ

    ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಮಲಪ್ಪುರಂ ಜಿಲ್ಲೆಯ ಕವಳಪ್ಪಾರಂ ಬಳಿ ಮೋಘಸ್ಫೋಟ ಸಂಭವಿಸಿದೆ. ಪರಿಣಾಮ ಭೂ ಕುಸಿತ ಉಂಟಾಗಿ ಸುಮಾರು 35 ಮನೆಗಳು ನಾಮಾವಶೇಷವಾಗಿದೆ ಎಂಬ ಮಾಹಿತಿ ಲಭಿಸಿದೆ.

    ಜಿಲ್ಲೆಯ ನಿಲಂಬೂರ್ ಬಳಿಯ ಭೂಧನಂ ಬಳಿ ಭೂಕುಸಿತ ಸಂಭವಿಸಿದ್ದು, ಸುಮಾರು 35 ಮನೆಗಳು ನೆಲಸಮವಾಗಿದೆ. ಈಗ ಈ ಪ್ರದೇಶ ಸಂಪೂರ್ಣ ಬಯಲು ಪ್ರದೇಶವಾಗಿ ಕಾಣುತ್ತಿದೆ. ಮನೆಗಳಲ್ಲಿ ವಾಸವಿದ್ದ ನಿವಾಸಿಗಳ ಫೋನ್‍ಗೆ ಕರೆ ಮಾಡಿದರೆ ಸ್ವಿಚ್ ಆಫ್, ನಾಟ್ ರೀಚಬಲ್ ಎಂದ ಸಂದೇಶ ಬರುತ್ತಿದ್ದು, ಸುಮಾರು 80ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಗುಡ್ಡ ಪ್ರದೇಶದ ಸುಮಾರು 100 ಎಕರೆ ಭೂಮಿ ಕುಸಿತವಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಪ್ರವಾಹ ಮತ್ತು ಭೂಕುಸಿತದಿಂದ ವಿವಿಧ ಭಾಗಗಳಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ.

    ದುರ್ಘಟನಾ ಸ್ಥಳದಲ್ಲಿ ಸದ್ಯ 3 ರಿಂದ 4 ಮನೆ ಇರುವ ಕುರುಹುಗಳು ಮಾತ್ರ ಕಾಣುತ್ತಿದೆ. ಕವಳಪ್ಪಾರಂ ಮಾತ್ರವಲ್ಲದೇ ನೀಲಂಬೂರ್, ಭುತಾನಂ ಎಂಬಲ್ಲೂ ಭೂಕುಸಿತ ಸಂಭವಿಸಿರುವ ಕುರಿತು ಮಾಹಿತಿ ಲಭಿಸಿದೆ. ದುರ್ಘಟನೆ ಕುರಿತು ಮಾಹಿತಿ ಪಡೆದಿರುವ ಎನ್‍ಡಿಆರ್ ಎಫ್ ತಂಡ ಪ್ರದೇಶವನ್ನು ತಲುಪಲು ಹರಸಾಹಸ ಪಡುತ್ತಿದೆ.

    ಮುನ್ಸೂಚನೆಯಂತೆಯೇ ಕೇರಳದಲ್ಲಿ ಕಳೆದ 2 ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಸರ್ಕಾರ ನೀಡಿರುವ ಅಧಿಕೃತ ಮಾಹಿತಿಯ ಅನ್ವಯ 22 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 315 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 22 ಸಾವಿರ ಜನ ಈ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಆಗಸ್ಟ್ 15ರ ವರೆಗೂ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.

  • ಚಾರ್ಮಾಡಿ ಘಾಟಿಯಲ್ಲಿ ಭೂ ಕುಸಿತ, ಹೆದ್ದಾರಿ ಬಂದ್

    ಚಾರ್ಮಾಡಿ ಘಾಟಿಯಲ್ಲಿ ಭೂ ಕುಸಿತ, ಹೆದ್ದಾರಿ ಬಂದ್

    ಮಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಹಾಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಇದೀಗ ಮಂಗಳೂರು-ಚಿಕ್ಕಮಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ಸಹ ಭೂ ಕುಸಿತ ಸಂಭವಿಸಿದ್ದರಿಂದ ಸಂಚಾರ ಸ್ಥಗಿತವಾಗಿದೆ.

    ಬೆಳ್ತಂಗಡಿ ತಾಲೂಕಿನ 3 ಮತ್ತು 10ನೇ ತಿರುವಿನಲ್ಲಿ ರಸ್ತೆಗೆ ಮಣ್ಣು ಕುಸಿದು ಬಿದ್ದಿದ್ದು, ರಸ್ತೆ ತುಂಬೆಲ್ಲ ಮಣ್ಣು ಬಿದ್ದಿದೆ. ಮಣ್ಣು ತೆರವು ಕಾರ್ಯಾಚರಣೆ ಚುರುಕುಗೊಂಡಿದ್ದು, ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

    ಇತ್ತ ಮಲೆನಾಡು ಭಾಗಗಳಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನ ಆತಂಕಕ್ಕೀಡಾಗಿದ್ದಾರೆ. ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ಎನ್.ಆರ್.ಪುರ, ಮೂಡಿಗೆರೆ, ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜೀವ ನದಿಗಳಿಗೆ ಕಳೆ ಬಂದಿದ್ದು, ತುಂಗಾ-ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಕೊಟ್ಟಿಗೆಹಾರ, ಚಾರ್ಮಾಡಿಯಲ್ಲಿ ಮಳೆಯ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ಚಾರ್ಮಾಡಿಯಲ್ಲಿ ರಸ್ತೆ ಬದಿಯ ಗುಡ್ಡ ಕುಸಿತ ಉಂಟಾಗುತ್ತಿದ್ದು, ಮಳೆ-ಗಾಳಿಗೆ ಮರಗಳು ಧರೆಗುರುಳುತ್ತಿವೆ.

    ಶಾಲಾ-ಕಾಲೇಜುಗಳಿಗೆ ರಜೆ:
    ಮಹಾ ಮಳೆ, ಪ್ರವಾಹ ಹಿನ್ನೆಲೆ ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ರಾಮದುರ್ಗ ತಾಲೂಕು ಹೊರತುಪಡಿಸಿ ಬೆಳಗಾವಿಯಾದ್ಯಂತ ಶಾಲಾ-ಕಾಲೇಜಿಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ. ಕರಾವಳಿ, ಮಲೆನಾಡು, ಉತ್ತರ ಕನ್ನಡದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಉತ್ತರ ಕನ್ನಡದ ಹಳಿಯಾಳ, ದಾಂಡೇಲಿ ತಾಲೂಕು ಹೊರತುಪಡಿಸಿ ಉಳಿದ 9 ತಾಲೂಕುಗಳ ಶಾಲೆಗಳಿಗೆ ರಜೆ ನೀಡಲಾಗಿದೆ.

    ಇತ್ತ ದಕ್ಷಿಣ ಕನ್ನಡದ ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಫೋಷಿಸಲಾಗಿದೆ. ಮಲೆನಾಡಿನ ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿಯಲ್ಲೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಶಿವಮೊಗ್ಗದ ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳಲ್ಲೂ ಶಾಲೆಗಳಿಗೆ ರಜೆ ನೀಡಲಾಗಿದೆ. ಶಿರಸಿ, ಸಿದ್ದಾಪುರ ಭಾಗದಲ್ಲಿಯೂ ರಜೆ ನೀಡಲಾಗಿದೆ. ಹಾಸನದ ಬೇಲೂರು ತಾಲೂಕಿನ ಅರೆಹಳ್ಳಿ, ಚೀಕನಹಳ್ಳಿ ನಾರ್ವೆ ಹೋಬಳಿ, ಆಲೂರು ತಾಲ್ಲೂಕಿನ ಹೊಸಕೋಟೆ, ಕುಂದೂರು, ಪಾಳ್ಯ ಹೋಬಳಿಗಳ ಶಾಲೆ ಕಾಲೇಜುಗಳಿಗೆ ರಜೆ ಫೋಷಿಸಲಾಗಿದೆ.

  • ಪಶ್ಚಿಮ ಘಟ್ಟಗಳ ಶ್ರೇಣಿಗಳಲ್ಲಿ ಕಾಣಿಸಿಕೊಂಡ ಬಿರುಕು

    ಪಶ್ಚಿಮ ಘಟ್ಟಗಳ ಶ್ರೇಣಿಗಳಲ್ಲಿ ಕಾಣಿಸಿಕೊಂಡ ಬಿರುಕು

    ಮಂಗಳೂರು: ಪಶ್ಚಿಮ ಘಟ್ಟಗಳ ಶ್ರೇಣಿಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮತ್ತಷ್ಟು ಭೂ-ಕುಸಿತವಾಗುವ ಸಾಧ್ಯತೆ ಹೆಚ್ಚಾಗಿರುವುದಾಗಿ ತಿಳಿದು ಬಂದಿದೆ.

    ಹೌದು, ಕೊಡಗಿನ ಗಡಿಭಾಗದ ಗಾಳಿಬೀಡು, ವಣಚ್ಚಲ್ ಬೆಟ್ಟಗಳ ತುದಿಯಲ್ಲಿ ಭಾರೀ ಬಿರುಕು ಬಿಟ್ಟಿದ್ದಲ್ಲದೆ, ಹಲವು ಎಕರೆಗಟ್ಟಲೇ ಭೂ-ಕುಸಿತವಾಗಿರುವುದು ಬೆಳಕಿಗೆ ಬಂದಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಆರ್ ಪಿಐ ಗಣೇಶ್ ಜೊತೆ ಸುಳ್ಯದ ಸ್ವಯಂ ಸೇವಕರ ತಂಡ ಬೆಟ್ಟದ ತುದಿಗೆ ತೆರಳಿದ್ದಾಗ ಬೆಟ್ಟಗಳ ತುದಿಯಲ್ಲಿ ಭಾರೀ ಬಿರುಕು ಬಿಟ್ಟಿರುವುದು ಕಂಡುಬಂದಿದೆ. ಹೀಗಾಗಿ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಮತ್ತಷ್ಟು ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಈಗಾಗಲೇ ಬೆಟ್ಟಗಳ ತಪ್ಪಲು ಪ್ರದೇಶದ ಜೋಡುಪಾಲ, ಮದೆನಾಡು ಮತ್ತು ಮೊಣ್ಣಂಗೇರಿ ಗ್ರಾಮಗಳಲ್ಲಿ ಭೂಕುಸಿತದಿಂದ ನೂರಾರು ಮನೆಗಳು ನೆಲ ಸಮವಾಗಿವೆ. ಅಲ್ಲದೇ ಸಮುದ್ರ ಮಟ್ಟದಿಂದ 5 ಸಾವಿರ ಅಡಿ ಎತ್ತರದಲ್ಲಿರುವ ನಿಸರ್ಗ ರಮಣೀಯ ತಾಣವೆಂದೇ ಬಣ್ಣಿಸುವ ಶೋಲಾ ಕಾಡುಗಳಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿದ್ದು, ಸುತ್ತಮುತ್ತ ಗ್ರಾಮಗಳ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಶ್ಚಿಮ ಘಟ್ಟಗಳ ಮಧ್ಯೆ ಬಿರುಕು, ಬೃಹತ್ ಬೆಟ್ಟಗಳಲ್ಲಿ ಜಲಸ್ಫೋಟ..!

    ಪಶ್ಚಿಮ ಘಟ್ಟಗಳ ಮಧ್ಯೆ ಬಿರುಕು, ಬೃಹತ್ ಬೆಟ್ಟಗಳಲ್ಲಿ ಜಲಸ್ಫೋಟ..!

    -ಬಾಳುಗೋಡು ಗ್ರಾಮದ 30ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

    ಮಂಗಳೂರು: ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರೀ ದುರಂತದ ಲಕ್ಷಣಗಳು ಕಂಡುಬಂದಿವೆ. ಶಿರಾಡಿ, ಸಂಪಾಜೆ ಘಾಟ್ ಹೆದ್ದಾರಿಯ ಕುಸಿತದ ಬಳಿಕ ಈಗ ಬಿಸ್ಲೆ ಮತ್ತು ಕುದುರೆಮುಖ ಹೆದ್ದಾರಿಯ ಉದ್ದಕ್ಕೂ ಭಾರೀ ಭೂಕುಸಿತ ಸಂಭವಿಸಿದೆ. ಇತ್ತೀಚೆಗಷ್ಟೆ ಕಾಂಕ್ರೀಟ್ ಆಗಿದ್ದ ಬಿಸ್ಲೆ ಘಾಟ್ ರಾಜ್ಯ ಹೆದ್ದಾರಿ ಕುಕ್ಕೆ ಸುಬ್ರಹ್ಮಣ್ಯದಿಂದ ಸಕಲೇಶಪುರಕ್ಕೆ ಸಂಪರ್ಕಿಸುವ ರಸ್ತೆ. ಬಿಸ್ಲೆ ಘಾಟ್ ಉದ್ದಕ್ಕೂ ಜಲ ಸ್ಫೋಟಗೊಂಡು ಬೃಹತ್ ಮರಗಳು ತರಗೆಲೆಗಳಂತೆ ನೀರಿನ ರಭಸಕ್ಕೆ ತೇಲಿ ಬರುತ್ತಿವೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೂಜುಮಲೆ ಎಂಬಲ್ಲಿ ಸೇತುವೆಯೊಂದು ಕೊಚ್ಚಿಹೋಗಿದೆ. ಮುಂಜಾಗ್ರತಾವಾಗಿ ಬಾಳುಗೋಡು, ಕಲ್ಮಕಾರು, ಮರ್ಕಂಜ ಗ್ರಾಮಗಳ 30ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಭಾರೀ ದುರಂತ ಸಂಭವಿಸಿದ್ದ ಜೋಡುಪಾಲದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಜೋಡುಪಾಲ ಆಸುಪಾಸಿನ ಗ್ರಾಮಗಳ 700ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ.

    ಕುದುರೆಮುಖ- ಎಸ್ ಕೆ ಬಾರ್ಡರ್ ಹೆದ್ದಾರಿಯೂ ಕುಸಿದಿದ್ದು, ಮಂಗಳೂರು- ಬೆಂಗಳೂರು ರಸ್ತೆ ಸಂಚಾರವೇ ಕಷ್ಟವಾಗಿದೆ. ಏಕೈಕ ಹೆದ್ದಾರಿ ಆಗಿರುವ ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ಸಂಪರ್ಕ ಕಷ್ಟವಾಗಿದೆ. ಇತ್ತ ಭಾರಿ ಮಳೆ ಪರಿಣಾಮ ಸಕಲೇಶಪುರ ಬಳಿಯ ವನಗೂರು, ಸೋಮವಾರಪೇಟೆ, ಹೆಗ್ಗದ್ದೆ ಕಡಗರವಳ್ಳಿ ರಸ್ತೆಗಳು ಭೂಕುಸಿತದಿಂದಾಗಿ ಕಡಿತಗೊಂಡಿವೆ. ಝರಿ ಜಲಪಾತಗಳು ತುಂಬಿ ಹರಿಯುತ್ತಿದ್ದು ಮಣ್ಣು ಸಡಿಲವಿರುವ ಸ್ಥಳಗಳಲ್ಲಿ ಭೂಕುಸಿತವಾಗುತ್ತಿದೆ. ಹಾಸನದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಹಾರಂಗಿಯಿಂದ ನೀರು ಕಡಿಮೆ ಬಿಡುಗಡೆ ಮಾಡಿದ ಪರಿಣಾಮ ಜಲಪ್ರವಾಹ ತಗ್ಗಿದೆ. ರಸ್ತೆ ಸಂಚಾರ ಕೂಡ ಸಹಜ ಸ್ಥಿತಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸುಳ್ಯದ ಕೂಜುಮಲೆ ಅರಣ್ಯದಲ್ಲಿ ಗುಡ್ಡ ಕುಸಿತ- ಹಲವು ಗ್ರಾಮಗಳ ನಿವಾಸಿಗಳ ಸ್ಥಳಾಂತರ

    ಸುಳ್ಯದ ಕೂಜುಮಲೆ ಅರಣ್ಯದಲ್ಲಿ ಗುಡ್ಡ ಕುಸಿತ- ಹಲವು ಗ್ರಾಮಗಳ ನಿವಾಸಿಗಳ ಸ್ಥಳಾಂತರ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೂಜುಮಲೆ ಅರಣ್ಯದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗುತ್ತಿದ್ದು, ಮುಂಜಾಗೃತ ಕ್ರಮವಾಗಿ ಬಾಳುಗೋಡು ಸುತ್ತಮುತ್ತಲಿನ ಹಲವು ಗ್ರಾಮಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.

    ಜಿಲ್ಲೆಯಲ್ಲಿ ಮಹಾಮಳೆಗೆ ಗುಡ್ಡಗಳು ಹಸಿಯಾಗಿ, ಮಣ್ಣು ಸಡಿಲಗೊಂಡಿದೆ. ಇದರಿಂದಾಗಿ ಕಳೆದ ಎರಡು ದಿನಗಳಿಂದ ಗುಡ್ಡ ಕುಸಿತವಾಗುತ್ತಿದ್ದು, ಇಂದು ಸುಳ್ಯ ತಾಲೂಕು ಕೂಜುಮಲೆಯ ಕೆಲವು ಭಾಗದಲ್ಲಿಯೂ ಗುಡ್ಡ ಕುಸಿಯುತ್ತಿದೆ. ಕೂಜುಮಲೆಯ ಅರಣ್ಯದ ಅಡಿಯಲ್ಲಿರುವ ಮಾನಡ್ಕ, ಅಡ್ಕರ್, ಕಲ್ಮಕಾರು ಬಾಳುಗೋಡು ಸೇರಿದಂತೆ ಹಲವು ಗ್ರಾಮಗಳ ನಿವಾಸಿಗಳನ್ನು ಪೊಲೀಸರು ಸ್ಥಳಾಂತರ ಮಾಡುತ್ತಿದ್ದಾರೆ.

     

    ಭಾರೀ ರಭಸದಿಂದ ನೀರು ಹರಿಯುತ್ತಿದ್ದು, ಕೂಜುಮಲೆ ಅರಣ್ಯ ಪ್ರದೇಶದಿಂದ ಮರಗಳು ಬುಡ ಸಮೇತ ಕಿತ್ತು ಬರುತ್ತಿದೆ. ಸಂಪಾಜೆ ಗಡಿಯಲ್ಲಿರುವ ಮದೇನಾಡು, ಜೋಡುಪಾಲದಲ್ಲಿ ಮನೆಗಳ ಮೇಲೆ ಬೆಟ್ಟಗಳು ಬೀಳುತ್ತಿರುವ ಹಿನ್ನೆಲೆಯಲ್ಲಿ ಈ ನಿವಾಸಿಗಳ ಮನೆಗಳ ಮೇಲೂ ಕುಸಿತವಾಗಬಹುದು ಎನ್ನುವ ಆತಂಕದಲ್ಲಿ ಎಚ್ಚೆತ್ತ ಬಾಳುಗೋಡು ಪೊಲೀಸರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv