Tag: landline

  • ಶೀಘ್ರವೇ ಬಿಡುಗಡೆಯಾಗಲಿದೆ ಜಿಯೋ ಗಿಗಾ ಫೈಬರ್: ಏನೆಲ್ಲ ಸೇವೆ ಉಚಿತ ಸಿಗುತ್ತೆ? ಇಲ್ಲಿದೆ ಪೂರ್ಣ ಮಾಹಿತಿ

    ಶೀಘ್ರವೇ ಬಿಡುಗಡೆಯಾಗಲಿದೆ ಜಿಯೋ ಗಿಗಾ ಫೈಬರ್: ಏನೆಲ್ಲ ಸೇವೆ ಉಚಿತ ಸಿಗುತ್ತೆ? ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ: ಉಚಿತವಾಗಿ ಮೊಬೈಲ್ ಡೇಟಾ ನೀಡಿ ದೇಶದಲ್ಲಿ ಡೇಟಾ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ಈಗ ಬ್ರಾಡ್‍ಬ್ಯಾಂಡ್ ಕ್ಷೇತ್ರಕ್ಕೆ ಎಂಟ್ರಿ ನೀಡಲು ಮುಂದಾಗಿದೆ. ಬ್ರಾಡ್‍ಬ್ಯಾಂಡ್, ಲ್ಯಾಂಡ್‍ಲೈನ್ ಮತ್ತು ಟಿವಿ ಕಾಂಬೋ ಮೂರು ಸೇವೆಗಳನ್ನು ತಿಂಗಳಿಗೆ 600 ರೂ.ಗೆ ನೀಡಲು ಜಿಯೋ ಮುಂದಾಗಿದೆ.

    ಜಿಯೋ ಗಿಗಾಫೈಬರ್ ಕಳೆದ ವರ್ಷದಿಂದ ಮುಂಬೈ ಮತ್ತು ದೆಹಲಿಯಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ. 100 ಜಿಬಿ ಡೇಟಾವನ್ನು 100 ಮೆಗಾಬೈಟ್ಸ್ ಪರ್ ಸೆಕೆಂಡ್(ಎಂಬಿಪಿಎಸ್) ವೇಗದಲ್ಲಿ ಜಿಯೋ ಗ್ರಾಹಕರಿಗೆ ನೀಡುತ್ತಿದೆ. ಮುಂದಿನ 2 ತಿಂಗಳ ಒಳಗಡೆ ಅಧಿಕೃತವಾಗಿ ಈ ಸೇವೆ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಕಂಪನಿಯ ಮೂಲಗಳನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಆರಂಭದಲ್ಲಿ ಉಚಿತ:
    ಜಿಯೋ ಸೇವೆ 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭಗೊಂಡ ಮೂರು ತಿಂಗಳು ಉಚಿತ ಸೇವೆ ನೀಡಿತ್ತು. ಜಿಯೋ ಫೈಬರ್ ಕೂಡ ಒಂದು ವರ್ಷ ಉಚಿತವಾಗಿ ಸಿಗಲಿದೆ. ಲ್ಯಾಂಡ್‍ಲೈನ್‍ನಲ್ಲಿ ಹೊರ ಹೋಗುವ ಎಲ್ಲ ಕರೆಗಳು ಉಚಿತವಾಗಿ ನೀಡಲಿದೆ. ಲ್ಯಾಂಡ್‍ಲೈನ್ ಮತ್ತು ಟಿವಿ ವಾಹಿನಿ ಸೇವೆಗಳು ಮೂರು ತಿಂಗಳಿನಲ್ಲಿ ಸೇರ್ಪಡೆಯಾಗಲಿದೆ. ಈಗಾಗಲೇ ಟಿವಿ ವೀಕ್ಷಣೆಗೆ ಜಿಯೋ ಟಿವಿ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದು, ಈ ಅಪ್ಲಿಕೇಶನ್ ನಲ್ಲಿ ಬರುವ ಎಲ್ಲ ಟಿವಿಗಳನ್ನು ವೀಕ್ಷಿಸಬಹುದಾಗಿದೆ. ಈ ಸೇವೆ ಆರಂಭಗೊಂಡ ದಿನದಿಂದ ಒಂದು ವರ್ಷದವರೆಗೆ ಎಲ್ಲ ಸೇವೆಗಳು ಉಚಿತವಾಗಿ ಸಿಗಲಿದ್ದು, ಒಂದು ವರ್ಷದ ಬಳಿಕ ಗ್ರಾಹಕರು ಬೇಕಾದ ಪ್ಯಾಕ್‍ಗೆ ಅನುಗುಣವಾಗಿ ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಸ್ಪೀಡ್ ಎಷ್ಟು?
    ಭಾರತೀಯ ದೂರ ಸಂಪರ್ಕ ಪ್ರಾಧಿಕಾರ(ಟ್ರಾಯ್) ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಜಿಯೋದ ಡೌನ್‍ಲೋಡ್ ಸ್ಪೀಡ್ 22.2 ಮೆಗಾ ಬೈಟ್ಸ್ ಪರ್ ಸೆಕೆಂಡ್(ಎಂಬಿಪಿಎಸ್) ಇದೆ. ಸದ್ಯ ಜಿಯೋ ದೇಶದಲ್ಲಿ ಮೊಬೈಲ್ ಡೇಟಾ ಸ್ಪೀಡ್‍ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಈಗ ಬರುತ್ತಿರುವ ಜಿಯೋ ಫೈಬರ್‍ನಲ್ಲಿ 100 ಎಂಬಿಪಿಎಸ್ ವೇಗದಲ್ಲಿ ಇಂಟರ್‍ನೆಟ್ ಸೇವೆ ಸಿಗಲಿದೆ.

    ರೂಟರ್ ಖರೀದಿಸಬೇಕು:
    ಒಂದು ವರ್ಷ ಉಚಿತ ಸೇವೆ ಆದರೂ ಗ್ರಾಹಕರು ಆರಂಭದಲ್ಲಿ 4,500 ರೂ. ನೀಡಿ ರೂಟರ್ ಖರೀಸಬೇಕು. ಎಲ್ಲ ಇಂಟರ್‍ನೆಟ್ ಸೇವೆಗಳು ಆಪ್ಟಿಕಲ್ ನೆಟ್‍ವರ್ಕ್ ಟರ್ಮಿನಲ್ (ಒಎನ್‍ಟಿ) ಬಾಕ್ಸ್ ರೂಟರ್ ಮೂಲಕ ನಡೆಯಲಿದ್ದು, ಒಂದೇ ಬಾರಿಗೆ ಒಟ್ಟು 40-45 ಡಿವೈಸ್ ಗಳನ್ನು ಕನೆಕ್ಟ್ ಮಾಡಬಹುದು. ಮೊಬೈಲ್, ಸ್ಮಾರ್ಟ್ ಟಿವಿ, ಲ್ಯಾಪ್ ಟಾಪ್, ಟ್ಯಾಬ್ಲೆಟ್, ಗೇಮಿಂಗ್, ಸಿಸಿಟಿವಿ, ಸ್ಮಾರ್ಟ್ ಹೋಮ್ ಸಿಸ್ಟಂ ಸಹ ಕನೆಕ್ಟ್ ಮಾಡಬಹುದು.

    ಈ ಸೇವೆಯ ಇನ್ನೊಂದು ವಿಶೇಷ ಏನೆಂದರೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೇರಿದಂತೆ ಇತರ ಡೇಟಾಗಳನ್ನು ಕ್ಲೌಡ್ ಮೂಲಕ ಸೇವ್ ಆಗಲಿದೆ. ಈ ಮೂಲಕ ಎಲ್ಲೇ ಹೋದರೂ ಡೇಟಾಗಳನ್ನು ಗ್ರಾಹಕರು ಚೆಕ್ ಮಾಡಬಹುದು.

    ಎಲ್ಲೆಲ್ಲಿ ಸಿಗುತ್ತೆ?
    ಸದ್ಯ ದೆಹಲಿ ಮತ್ತು ಮುಂಬೈ ನಗರದಲ್ಲಿ ಪರೀಕ್ಷೆಗಳು ನಡೆಯುತ್ತಿದೆ. ದೇಶದ 1,600 ನಗರಗಳಲ್ಲಿ ಜಿಯೋ ಫೈಬರ್ ನೀಡಲು ಕಂಪನಿ ಪ್ಲಾನ್ ಮಾಡಿದೆ. ಕಳೆದ ಆಗಸ್ಟ್ ತಿಂಗಳಿನಿಂದ ಜಿಯೋ ಫೈಬರ್ ಗ್ರಾಹಕರ ನೊಂದಣಿ ಆರಂಭಿಸಿದೆ.

    ಇಲ್ಲಿಯವರೆಗೆ ಕಂಪನಿ ಈ ಪ್ಲಾನ್ ಬಗ್ಗೆ ಅಧಿಕೃತವಾದ ಹೇಳಿಕೆಯನ್ನು ನೀಡಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಕಂಪನಿ ಅಧಿಕಾರಿಯೊಬ್ಬರು, ಇಲ್ಲಿಯವರೆಗೂ ಯಾವ ಪ್ಲಾನ್ ಬಗ್ಗೆ ಮಾಹಿತಿ ನಮಗೆ ಇಲ್ಲ. ಜಿಯೋ ಗಿಗಾ ಫೈಬರ್ ಬ್ರಾಂಡ್ ಮಾರುಕಟ್ಟೆಗೆ ಬರಲು ಅಂದಾಜು ಎರಡು ತಿಂಗಳು ಸಮಯ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

    ಪ್ರಸ್ತುತ ಭಾರತದಲ್ಲಿ 1.8 ಕೋಟಿ ಜನ ಬ್ರಾಂಡ್ ಬ್ಯಾಂಡ್ ಬಳಕೆ ಮಾಡುತ್ತಿದ್ದರೆ 53 ಕೋಟಿ ಜನ ಮೊಬೈಲ್ ಡೇಟಾ ಬಳಕೆ ಮಾಡುತ್ತಿದ್ದಾರೆ. ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆ ಅಧಿಕೃತವಾಗಿ ಆರಂಭವಾದರೆ ಟೆಲಿಕಾಂ ಕಂಪನಿಗಳಿಗೆ ಹೇಗೆ ಹೊಡೆತ ನೀಡಿತ್ತೋ ಅದೇ ರೀತಿಯಾಗಿ ಬ್ರಾಡ್‍ಬ್ಯಾಂಡ್ ಕಂಪನಿಗಳಿಗೆ ಹೊಡೆತ ನೀಡಬಹುದು ಎನ್ನುವ ವಿಶ್ಲೇಷಣೆ ಈಗಾಗಲೇ ಕೇಳಿ ಬಂದಿದೆ.

  • ಠಾಣೆಯ ಲ್ಯಾಂಡ್ ಲೈನ್‍ಗೆ ಕರೆ ಮಾಡಿ ಮಹಿಳಾ ಪೇದೆಗೆ ಲೈಂಗಿಕ ದೌರ್ಜನ್ಯ!

    ಠಾಣೆಯ ಲ್ಯಾಂಡ್ ಲೈನ್‍ಗೆ ಕರೆ ಮಾಡಿ ಮಹಿಳಾ ಪೇದೆಗೆ ಲೈಂಗಿಕ ದೌರ್ಜನ್ಯ!

    ಬೆಂಗಳೂರು: ಪೊಲೀಸ್ ಠಾಣೆಯ ಲ್ಯಾಂಡ್ ಲೈನ್‍ಗೆ ಕರೆ ಮಾಡಿ ವ್ಯಕ್ತಿಯೊಬ್ಬ ಮಹಿಳಾ ಪೇದೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ರಾಜಧಾನಿಯ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಕಿರಿಕುಳ ನೀಡುತ್ತಿದ್ದ ಆರೋಪಿಯನ್ನು ಆಂಧ್ರ ಪ್ರದೇಶ ಮೂಲದ ರಮೇಶ್ ನಾಯಕ ಎಂದು ಗುರುತಿಸಲಾಗಿದೆ. ರಮೇಶ್ ಸುಮಾರು ಮೂರು ತಿಂಗಳಿನಿಂದ ನಿರಂತರವಾಗಿ ಬಾಗಲಗುಂಟೆ ಪೊಲೀಸ್ ಠಾಣೆಯ ಲ್ಯಾಂಡ್ ಲೈನ್‍ಗೆ ಕರೆ ಮಾಡಿ ಮಹಿಳಾ ಪೇದೆಗೆ ಕಿರುಕುಳ ನೀಡಿದ್ದಾನೆ. ಕರೆ ಮಾಡಿದ ಸೈಕೋಪಾತ್ ತನ್ನ ಜೊತೆ ಸಹಕರಿಸುವಂತೆ ಮಹಿಳಾ ಪೇದೆಯ ಬಳಿ ಅಸಭ್ಯವಾಗಿ ವರ್ತಿಸಿದ್ದಾನೆ.

    ನಾನು ಕೊಲೆ ಮಾಡಿದ್ದೇನೆ ಬಂದು ಅರೆಸ್ಟ್ ಮಾಡು. ನಾನು ರೇಪ್ ಮಾಡಿದ್ದೇನೆ ತಾಕತ್ತಿದ್ದರೆ ಹಿಡಿ ಎಂದು ಅವಾಜ್ ಹಾಕಿದ್ದಾನೆ. ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದರು. ಕರೆಯ ಮಾಹಿತಿ ಆಧರಿಸಿ ಕೊನೆಗೂ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv