Tag: Land Sliding

  • ಭೂ ಕುಸಿತದಿಂದ ಸೂರು ಕಳೆದುಕೊಂಡ 500ಕ್ಕೂ ಹೆಚ್ಚು ಕುಟುಂಬ

    ಭೂ ಕುಸಿತದಿಂದ ಸೂರು ಕಳೆದುಕೊಂಡ 500ಕ್ಕೂ ಹೆಚ್ಚು ಕುಟುಂಬ

    ಮಡಿಕೇರಿ: ಕೊಡಗಿನ ಜೋಡುಪಾಲ, ಮದೆನಾಡು, ಮೊಣ್ಣಂಗೇರಿ ಗ್ರಾಮಗಳಲ್ಲಿ ನಡೆದಿರೋ ಭೂ ಕುಸಿತದಿಂದ ಸುಮಾರು 500 ಕ್ಕೂ ಹೆಚ್ಚು ಕುಟುಂಬಗಳು ಸೂರು ಕಳೆದುಕೊಂಡಿದ್ದರೆ, ಒಂದಷ್ಟು ಕುಟುಂಬಗಳು ತಾವು ಉಳಿದಿದ್ದೇ ಹೆಚ್ಚು ಅಂತ ನಿಟ್ಟುಸಿರು ಬಿಟ್ಟಿದ್ದಾರೆ. ಇಂಥ ಉದ್ಘಾರಕ್ಕೆ ಕಾರಣವಾಗಿರುವುದು ಅಲ್ಲಿನ ಸದ್ಯದ ಭೀಕರ ಸ್ಥಿತಿ.

    ಕೆಲವು ಭಾಗಗಳಲ್ಲಿ ಭೂಕುಸಿತ ಪ್ರಪಾತವನ್ನೇ ಸೃಷ್ಟಿಸಿದ್ದು, ಆಸುಪಾಸಲ್ಲಿದ್ದ ಮನೆ, ಪರಿಸರ ಗುರುತೇ ಸಿಗದಷ್ಟು ಬದಲಾಗಿದೆ. ಬೆಟ್ಟ ಒಡೆದು ಹೊರಬರುವ ನೀರು ಅಲ್ಲಲ್ಲಿ ಹೊಳೆಯೇ ಇರದಿದ್ದ ಜಾಗದಲ್ಲಿ ಹೊಳೆಗಳನ್ನು ಸೃಷ್ಟಿಸಿದ್ದರೆ, ಮತ್ತೊಂದ್ಕಡೆ ಅಲ್ಲಿನ ಹೆದ್ದಾರಿ ಸಂಪೂರ್ಣ ನಾಮಾವಶೇಷ ಆಗಿದೆ.

    ರಸ್ತೆ ಹತ್ತು ಅಡಿ ಆಳಕ್ಕೆ ಕುಸಿದಿದ್ದು, ಸದ್ಯಕ್ಕೆ ರಸ್ತೆ ರಿಪೇರಿ ಸಾಧ್ಯವೇ ಇಲ್ಲ ಅನ್ನುವಂತಿದೆ. ಆದರೂ ಎಲ್ಲಿವರೆಗೆ ರಸ್ತೆಯ ಮಣ್ಣು ತೆರವು ಮಾಡಲಾಗುತ್ತೋ ಅಲ್ಲಿವರೆಗೆ ಮಾಡ್ತೀವಿ ಅನ್ನುತ್ತಲೇ ಜೆಸಿಬಿ ಕೆಲಸ ಮಾಡುತ್ತಿದೆ. ಇನ್ನು ಜೋಡುಪಾಲ ಜಂಕ್ಷನ್ ಬಳಿಯ ಗುಡ್ಡದಲ್ಲೇ ಸ್ಫೋಟ ಸಂಭವಿಸಿದ್ದು ಹತ್ತಾರು ಮನೆಗಳನ್ನು ಮಣ್ಣಿನಡಿಗೆ ಹಾಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿನಲ್ಲಿ ಮುಂದುವರೆದ ಮಳೆ- ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ನೇತೃತ್ವದ ತಂಡ ಭೇಟಿ

    ಕೊಡಗಿನಲ್ಲಿ ಮುಂದುವರೆದ ಮಳೆ- ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ನೇತೃತ್ವದ ತಂಡ ಭೇಟಿ

    ಮಡಿಕೇರಿ: ಕೊಡಗಿನಲ್ಲಿ ಮಳೆ ಮುಂದುವರಿದಿದ್ದು, ಜನ ಜೀವನ ತತ್ತರಿಸಿದೆ. ಈ ನಡುವೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ನೇತೃತ್ವದ ತಂಡ ಭೇಟಿ ನೀಡಲಿದೆ.

    ಮಡಿಕೇರಿ-ಮಂಗಳೂರು 275 ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಗುಡ್ಡ ಕುಸಿಯುತ್ತಿದ್ದರೂ ಮಣ್ಣು ತೆರವು ಕಾರ್ಯ ಭರದಿಂದ ಸಾಗುತ್ತಿವೆ. ಈಗಾಗಲೇ ಎರಡು ಜೆಸಿಬಿ ಹಾಗೂ ಎರಡು ಟಿಪ್ಪರ್ ಸೇರಿದಂತೆ 20ಕ್ಕೂ ಹೆಚ್ಚು ರಕ್ಷಣಾ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತಿದೆ.

    ನಗರದ ಜಿಟಿ ಸರ್ಕಲ್ ಸಮೀಪದಿಂದ ಆರಂಭಿಸಿದ ತೆರವು ಕಾರ್ಯ ಎರಡು ಕಿ.ಮೀ. ದೂರದ ತಾಳತ್ತ ಮನೆ ತನಕ ಮುಗಿದಿದೆ. ಆದರೆ ಹೆದ್ದಾರಿಯುದ್ದಕ್ಕೂ ನೀರು ನಿಂತಿದೆ. ಈ ನಡುವೆ ಮುಖ್ಯರಸ್ತೆಯಲ್ಲಿ ಗುಡ್ಡ ಕುಸಿಯುವ ಹಂತದಲ್ಲಿದ್ದು ಕಟ್ಟಡವೊಂದು ಕುಸಿದು ಬೀಳುವ ಹಂತದಲ್ಲಿದೆ. ಇದರಿಂದ ಮಣ್ಣು ತೆರವು ಕಾರ್ಯಕ್ಕೆ ಅಡಚಣೆಯಾಗಿದೆ.

    ಇಂದಿರಾ ನಗರದಲ್ಲಿ ಬೃಹತ್ ಗುಡ್ಡವೊಂದು ತಾಳತ್ತ ಮನೆಯಲ್ಲಿದ್ದ ನಗರಸಭೆ ಸದಸ್ಯ ಪಿ.ಡಿ ಪೊನ್ನಪ್ಪ ಅವರ ಮನೆಯ ಹಿಂಭಾಗ ಬಿದ್ದು ಸಂಪೂರ್ಣ ಹಾನಿಯಾಗಿದೆ. ಗುಡ್ಡದ ಮಣ್ಣು ಸಾಕಷ್ಟು ರಸ್ತೆಯ ಮೇಲೆ ಇದೆ. ತೆರವು ಸಂದರ್ಭ ಮತ್ತಷ್ಟು ಮಣ್ಣು ರಸ್ತೆ ಮೇಲೆ ಬೀಳುತ್ತಿದೆ. ಜೊತೆಗೆ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮಣ್ಣು ತೆರವು ಕಾರ್ಯ ವಿಳಂಬವಾಗುತ್ತಿದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ.

    ಮಡಿಕೇರಿಯಿಂದ ತೆರಳುವ ಮಂಗಳೂರು ರಸ್ತೆ ಮೇಲೆ ಇಂದಿರಾ ಹಾಗೂ ಚಾಮುಂಡೇಶ್ವರಿ ನಗರಗಳಲ್ಲಿ ಜಲ ಮೂಲಗಳು ಹೆಚ್ಚಿರುವುದರಿಂದ ಗುಡ್ಡಗಳಿಂದ ಮನೆಗಳು ಆಗಿಂದಾಗ್ಗೆ ಮುಖ್ಯ ರಸ್ತೆಗೆ ಬೀಳುತ್ತಿದೆ. ಈ ಭಾಗದ ನೂರಕ್ಕೂ ಹೆಚ್ಚು ಕುಟುಂಬಗಳು ತಮ್ಮ ಮನೆ, ರಾಸುಗಳನ್ನು ಬಿಟ್ಟು ಆಶ್ರಯಕ್ಕಾಗಿ ಅಂಗಲಾಚುತ್ತಿದ್ದಾರೆ. ಬೆಳಗ್ಗೆ ಮತ್ತೆ ಎರಡು ಮನೆಗಳು ಕುಸಿದಿರುವುದರಿಂದ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರು ಆಶ್ರಯ ಪಡೆಯುತ್ತಿದ್ದಾರೆ.

    ಮಡಿಕೇರಿ-ವಿರಾಜಪೇಟೆ ರಸ್ತೆಯ ಮೇಕೇರಿ ಭಾಗದಲ್ಲಿ ದಿನಕ್ಕೆ 3-4 ಬಾರಿ ಗುಡ್ಡ ಕುಸಿಯುತ್ತಿದ್ದು, ಆಗಾಗ ರಸ್ತೆ ಸಂಪರ್ಕ ಬಂದ್ ಆಗುತ್ತಿದೆ. ಈ ಮಾರ್ಗ ಮೇಕೇರಿಯಿಂದ ಭಾಗಮಂಡಲಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವಾಗಿದ್ದು, ಗುಡ್ಡ ಕುಸಿತದಿಂದ ಇಕ್ಕಟಿನ ರಸ್ತೆಯಲ್ಲಿಯೂ ವಾಹನಗಳ ಸಂಖ್ಯೆ ಹೆಚ್ಚಿತ್ತು. ನಗರದ ಪೊಲೀಸ್ ಮೈತ್ರಿ ಭವನದಲ್ಲಿ 399ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆಯುತ್ತಿದ್ದು, ಈ ಹಿನ್ನೆಲೆ ಶೌಚಾಲಯಕ್ಕೆ ಹೋಗಲು ತೊಂದರೆಯಾಗದಂತೆ ಭಾನುವಾರ ಶೌಚಾಲಯ ನಿರ್ಮಿಸಲಾಗಿದೆ.

    ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿರುವ ನಿರಾಶ್ರಿತರಿಗೆ ಸಂಘ ಸಂಸ್ಥೆಗಳು ಹಾಗೂ ವೈಯುಕ್ತಿಕವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಒಂದು ದಿನ ಆಶ್ರಯ ಪಡೆದ ಕುಟುಂಬಗಳು ತಮ್ಮ ಬಂದು ಬಳಗದವರ ಮನೆಗಳಿಗೆ ತೆರಳುತ್ತಿದ್ದ ದೃಶ್ಯ ಕಂಡುಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv