Tag: Land Reform Act

  • ಬೆಳಗ್ಗೆ ಬಂದ್‍ಗೆ ಸಪೋರ್ಟ್, ಮಧ್ಯಾಹ್ನ ಬಿಲ್‍ಗೆ ಬೆಂಬಲ- ಮೇಲ್ಮನೆಯಲ್ಲಿ ಭೂಸುಧಾರಣೆ ಮಸೂದೆ ಪಾಸ್

    ಬೆಳಗ್ಗೆ ಬಂದ್‍ಗೆ ಸಪೋರ್ಟ್, ಮಧ್ಯಾಹ್ನ ಬಿಲ್‍ಗೆ ಬೆಂಬಲ- ಮೇಲ್ಮನೆಯಲ್ಲಿ ಭೂಸುಧಾರಣೆ ಮಸೂದೆ ಪಾಸ್

    – ಜೆಡಿಎಸ್ ಇಬ್ಬಗೆ ನೀತಿಗೆ ಆಕ್ರೋಶ

    ಬೆಂಗಳೂರು: ಭಾರತ್ ಬಂದ್ ನಡುವೆಯೇ ವಿವಾದಾತ್ಮಕ ಭೂಸುಧಾರಣಾ ತಿದ್ದುಪಡಿ ವಿಧೇಯಕ ಮೇಲ್ಮನೆಯಲ್ಲಿ ಪಾಸ್ ಆಗಿದೆ. ಸದನದ ಹೊರಗೆ ರೈತರ ಹೋರಾಟವನ್ನು ಬೆಂಬಲಿಸಿದ್ದ ಜೆಡಿಎಸ್, ಪರಿಷತ್‍ನಲ್ಲಿ ಮಾತ್ರ ವಿಧೇಯಕವನ್ನು ಇದ್ದಕ್ಕಿದ್ದಂತೆ ಬೆಂಬಲಿಸಿ ಅಚ್ಚರಿ ಮೂಡಿಸಿತು.

    ಮರಿತಿಬ್ಬೇಗೌಡ ಹೊರತುಪಡಿಸಿ ಉಳಿದೆಲ್ಲಾ ಜೆಡಿಎಸ್ ಸದಸ್ಯರು ವಿಧೇಯಕದ ಪರವಾಗಿ ಎದ್ದು ನಿಂತು ಬೆಂಬಲ ಸೂಚಿಸಿದರು. ಇದನ್ನು ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ವಿಧೇಯಕದ ಪರ 37 ಮತ ಬಿದ್ದರೆ, ವಿರುದ್ಧ 21 ಮತ ಬಿದ್ದವು. ಜೆಡಿಎಸ್ ನಡೆ ಎಲ್ಲರನ್ನು ಅಚ್ಚರಿಯಲ್ಲಿ ಮುಳುಗಿಸಿತು. ಇದಕ್ಕೂ ಮುನ್ನ ಭೂಸುಧಾರಣೆ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಯಡಿಯೂರಪ್ಪ, ರೈತರಿಗೆ ನಾನಾಗಲಿ, ಮೋದಿಯವರಾಗಲಿ ರೈತರಿಗೆ ಅನ್ಯಾಯ ಮಾಡಲ್ಲ ಎಂಬ ಭರವಸೆ ನೀಡಿದರು.

    ಸಿಎಂ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿಕೆ ಹರಿಪ್ರಸಾದ್, ರೈತರ ವಿಚಾರದಲ್ಲಿ ಕೈ ಹಾಕಿ ಎಷ್ಟೊ ಸರ್ಕಾರಗಳು, ಸಂಸ್ಥಾನಗಳು ಬಿದ್ದು ಹೋಗಿವೆ ಎಂದು ಎಚ್ಚರಿಸಿದರು. ಬಿಜೆಪಿ ಯಾಕೆ ಈ ಕಾಯ್ದೆ ತರಲು ಇಷ್ಟು ಆತುರ ಪಡುತ್ತಿದೆ ಎಂದ ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿಗೆ ಸಚಿವ ಅಶೋಕ್ ತಿರುಗೇಟು ನೀಡಿದರು.

    ಈ ಕಾಯ್ದೆ ಬಾರದೇ ಹೋದ್ರೆ ಅಧಿಕಾರಿಗಳು ದುಡ್ಡು ಹೊಡೆಯುತ್ತಾರೆ ಅಂತ ಈ ಹಿಂದಿನ ಅಧಿವೇಶನದಲ್ಲಿ ಡಿಕೆಶಿ ಮಾತಾಡಿದ್ದಾರೆ. ನಿಮಗೇನು ಪ್ರಾಬ್ಲಂ ಅಂದ್ರು. ಅಶೋಕ್ ಮಾತಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತು. ಅದು ಡಿಕೆ ಶಿವಕುಮಾರ್ ವೈಯಕ್ತಿಕ ಅಭಿಪ್ರಾಯ. ಕಾಂಗ್ರೆಸ್ ಅಭಿಪ್ರಾಯ ಅಲ್ಲ ಅಂತಾ ಹರಿಪ್ರಸಾದ್ ಸ್ಪಷ್ಟನೆ ನೀಡೋಕೆ ಯತ್ನಿಸಿದರು. ಈ ವೇಳೆ ಗದ್ದಲ ಗಲಾಟೆ ನಡೀತು.

    ಇನ್ನು ಬಿಲ್ ಪಾಸ್‍ಗೆ ರೈತ ಮುಖಂಡರು ಕಿಡಿಕಾರಿದ್ದಾರೆ. ಜೆಡಿಎಸ್‍ನವರು ಹೇಳೋದೊಂದು ಮಾಡೋದೊಂದು. ರೇವಣ್ಣ ಬಹಳ ಕುತಂತ್ರಿ. ಬೆಳಗ್ಗೆ ನಮ್ಮ ಜೊತೆ ಪ್ರತಿಭಟನೆಗೆ ಬರ್ತಾರೆ. ಮಧ್ಯಾಹ್ನ ಅಲ್ಲಿ ಹೋಗಿ ವಿಧೇಯಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ದ್ರೋಹ ಬಗೆದವರಿಗೆ ರೈತರೇ ಬುದ್ಧಿ ಕಲಿಸ್ತಾರೆ ಎಂದು ಕುರುಬೂರು ಶಾಂತ ಕುಮಾರ್ ಆಕ್ರೋಶ ಹೊರಹಾಕಿ ರಸ್ತೆ ತಡೆ ನಡೆಸಿದರು.

  • ರಾಜ್ಯ ಬಂದ್‍ಗೆ ರಾಯಚೂರಿನಲ್ಲಿ ಸಂಪೂರ್ಣ ಬೆಂಬಲ- ಬಿಸಿಲನಾಡು ಸ್ತಬ್ಧ

    ರಾಜ್ಯ ಬಂದ್‍ಗೆ ರಾಯಚೂರಿನಲ್ಲಿ ಸಂಪೂರ್ಣ ಬೆಂಬಲ- ಬಿಸಿಲನಾಡು ಸ್ತಬ್ಧ

    ರಾಯಚೂರು: ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಗೆ ವಿರೋಧಿಸಿ ರೈತ, ಕಾರ್ಮಿಕ ಸಂಘಟನೆಗಳಿಂದ ಕರೆ ನೀಡಲಾದ ಕರ್ನಾಟಕ ಬಂದ್‍ಗೆ ರಾಯಚೂರಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಅಂಗಡಿ ಮುಗ್ಗಟ್ಟು, ತರಕಾರಿ ಮಾರಾಟ, ಹೋಟೆಲ್ ವ್ಯಾಪಾರ, ಸಾರಿಗೆ ಬಸ್ ಸಂಚಾರ, ಎಂಪಿಎಂಸಿ ಎಲ್ಲವೂ ಸ್ಥಬ್ಧವಾಗಿತ್ತು. ರೈತ ಹೋರಾಟಕ್ಕೆ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಸಾಥ್ ನೀಡಿದರು.

    ನಗರದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಯ್ದೆ ಹಿಂಪಡೆಯಲು ಆಗ್ರಹಿಸಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆ ಕಾರ್ಯಕರ್ತರು, ಕಾಂಗ್ರೆಸ್, ಜೆಡಿ ಎಸ್ ಮುಖಂಡರು ಭಾಗವಹಿಸಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

    ರಾಯಚೂರು ನಗರ ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರದಲ್ಲೂ ಬಂದ್ ಜೋರಾಗಿತ್ತು. ಪ್ರತಿಭಟನಾ ಮೆರವಣಿಗೆ ಹಾಗೂ ನಿರಂತರ ಹೋರಾಟಗಳು ನಡೆದವು. ಕೇಂದ್ರ ಸರ್ಕಾರ ರೈತನಿಗೆ ಅನ್ನದಾತ ಅಂತ ಹೇಳುತ್ತಲೇ ಬೆನ್ನಿಗೆ ಚೂರಿ ಹಾಕುತ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಾದ್ಯಂತ ಬಂದ್ ಯಶಸ್ವಿಯಾಗಿದ್ದು ಎಲ್ಲೂ ಅಹಿತಕರ ಘಟನೆ ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲಾಯಿತು.

  • ಗದ್ದಲದ ನಡ್ವೆ ಕೃಷಿ ಮಸೂದೆಗಳು ವಿಧಾನಸಭೆಯಲ್ಲಿ ಪಾಸ್

    ಗದ್ದಲದ ನಡ್ವೆ ಕೃಷಿ ಮಸೂದೆಗಳು ವಿಧಾನಸಭೆಯಲ್ಲಿ ಪಾಸ್

    -ವಿಧೇಯಕದ ಪ್ರತಿ ಹರಿದು ಸಿದ್ದರಾಮಯ್ಯ ಆಕ್ರೋಶ
    -ರಾಜ್ಯ ಸರ್ಕಾರಕ್ಕೆ ರೈತರಿಂದ ಹಿಡಿ ಶಾಪ

    ಬೆಂಗಳೂರು: ವಾರದ ಹಿಂದೆ ಕೃಷಿ ಬಿಲ್ ಬಿಲ್ ವಿರೋಧಿಸಿ ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರು ಮಸೂದೆ ಪ್ರತಿ ಹರಿದು ಆಕ್ರೋಶ ಹೊರ ಹಾಕಿದ್ದರು. ಇದೀಗ ವಿಧಾನಸಭೆಯಲ್ಲೂ ಇದೇ ರೀತಿಯ ಘಟನೆ ಮರುಕಳಿಸಿದೆ. ವಿಪಕ್ಷ ಸದಸ್ಯರು ಭೂ ಸೂಧಾರಣಾ ತಿದ್ದುಪಡಿ ವಿಧೇಯಕದ ಪ್ರತಿಗಳು ಹರಿದು ಹಾಕಿದರು. ವಿಪಕ್ಷಗಳ ಗದ್ದಲ ಗಲಾಟೆ, ರೈತರ ಪ್ರತಿಭಟನೆಗಳ ನಡುವೆ ಅಧಿವೇಶನದ ಕೊನೆಯ ದಿನವಾದ ಇಂದು ಭೂಸುಧಾರಣಾ ತಿದ್ದುಪಡಿ ವಿಧೇಯಕ ಮತ್ತು ಎಪಿಎಂಸಿ ಬಿಲ್‍ಗಳಿಗೆ ವಿಧಾನಸಭೆಯ ಒಪ್ಪಿಗೆಯನ್ನು ಸರ್ಕಾರ ಪಡೆದುಕೊಂಡಿದೆ.

    ಇದಕ್ಕೂ ಮುನ್ನ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಪೋರೇಟ್ ಕಂಪನಿಗಳ ಲಾಬಿಗೆ ಮಣಿದಿರೋ ಸರ್ಕಾರ ಇದನ್ನು ಜಾರಿಗೆ ತರಲು ಮುಂದಾಗುತ್ತಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆಪಾದಿಸಿದರು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಈ ಕಾಯ್ದೆಯನ್ನ ತಂದರೆ 1964ರ ಹಿಂದಕ್ಕೆ ಹೋಗ್ತೇವೆ. ಇಲ್ಲಿಯವರೆಗೆ ಉಳುವವನೇ ಭೂ ಒಡೆಯ ಅನ್ನುವಂತಿತ್ತು. ಆದರೆ ಈಗ ಅದು ಉಲ್ಟಾ ಆಗಲಿದೆ. ಎಪಿಎಂಸಿಗಳು ಮುಚ್ಚಬಹುದಾದ ಆತಂಕವಿದೆ ಅಂತಾ ಆಕ್ಷೇಪ ವ್ಯಕ್ತಪಡಿಸಿದರು.

    ವಿಪಕ್ಷಗಳಿಗೆ ಸ್ಪಷ್ಟನೆ ಕೊಟ್ಟ ಸಿಎಂ ಬಿ.ಎಸ್.ಯಡಿಯೂರಪ್ಪ, ಸಣ್ಣ ಹಿಡುವಳಿದಾರರ ಹಿತ ಕಾಯಲು ಸರ್ಕಾರ ಬದ್ಧ. ಯಾವುದೇ ಆತಂಕ ನಿಮಗೆ ಬೇಡ ಎಂದರು. ಸಚಿವ ಅಶೋಕ್ ಮಾತನಾಡಿ, ಈ ತಿದ್ದುಪಡಿ ಕಾಯ್ದೆ ತಂದಿದ್ದು ನಾವಲ್ಲ. 2004ರಲ್ಲಿ ಕಂದಾಯ ಸಚಿವರಾಗಿದ್ದವರು ಅಂದ್ರು. ಇನ್ನು ರೈತರನ್ನು ಕೇಳಿ ಎಪಿಎಂಸಿ ಬಿಲ್ ತಂದ್ರಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಕೌಂಟರ್ ಕೊಟ್ಟ ಸಚಿವ ಸಿಟಿ ರವಿ, ಲೋಕಸಭೆ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಪ್ರಸ್ತಾಪಿಸಿದ್ದನ್ನು ಎತ್ತಿ ತೋರಿಸಿದರಿ. ಈ ವೇಳೆ ಭಾರೀ ಗದ್ದಲ ನಡೀತು.

    ಸಿದ್ದರಾಮಯ್ಯನವರು ಸೇರಿ ಹಲವರು ವಿಧೇಯಕ ಪ್ರತಿ ಹರಿದು ಹಾಕಿ, ಸಭಾತ್ಯಾಗ ಮಾಡಿದರು. ಇದರ ಮಧ್ಯೆಯೇ ಧ್ವನಿಮತದ ಮೂಲಕ ಮಸೂದೆಗಳಿಗೆ ಸರ್ಕಾರ ಅಂಗೀಕಾರ ಪಡೆಯಿತು. ಪರಿಷತ್‍ನಲ್ಲಿಯೂ ಭೂಸುಧಾರಣೆ ಬಿಲ್‍ಗೆ ಸರ್ಕಾರ ಒಪ್ಪಿಗೆ ಪಡೆದಿದೆ. ಎಪಿಎಂಸಿ ಬಿಲ್ ಮೇಲೆ ಚರ್ಚೆ ನಡೆಯುತ್ತಿದೆ.

  • ಸಿಎಂ ಹಸಿರು ಶಾಲು ಹಾಕ್ತಾರೆ, ರಾಜ್ಯದಲ್ಲಿ ರೈತರ ಕೊಲೆ ಆಗ್ತಿದೆ-ಅನ್ನದಾತರ ರಣಕಹಳೆ

    ಸಿಎಂ ಹಸಿರು ಶಾಲು ಹಾಕ್ತಾರೆ, ರಾಜ್ಯದಲ್ಲಿ ರೈತರ ಕೊಲೆ ಆಗ್ತಿದೆ-ಅನ್ನದಾತರ ರಣಕಹಳೆ

    -ಭೂಸುಧಾರಣೆ, ಎಪಿಎಂಸಿ, ವಿದ್ಯುತ್ ಕಾಯ್ದೆ ವಿರುದ್ಧ ರೈತರ ಸಮರ
    -ಕೇಂದ್ರ ಸರ್ಕಾರದ ವಿರುದ್ಧ ನೇಗಿಲಯೋಗಿಯ ಕೂಗು
    -ಕೊರೊನಾಗೆ ಹೆದರಲ್ಲ, ನ್ಯಾಯ ನಮಗೆ ಬೇಕು

    ಬೆಂಗಳೂರು: ಭೂ ಸುಧಾರಣೆ, ವಿದ್ಯುತ್ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ರೈತ ಮುಖಂಡರು ರಸ್ತೆಗಿಳಿದಿದ್ದು, ಸಿಲಿಕಾನ್ ಸಿಟಿಯಲ್ಲಿ ಸುಮಾರು ಒಂದೂವರೆ ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಗಿದೆ. ಇಂದು ಅಧಿವೇಶನದ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿರುವ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ಸದನದಲ್ಲಿ ಮೂರು ಕಾಯ್ದೆಗಳನ್ನ ಕೈ ಬಿಡುವಂತೆ ರೈತ ಸಂಘಟನೆಗಳು ಆಗ್ರಹಿಸಿವೆ.

    ರೈತ, ಕಾರ್ಮಿಕ, ದಲಿತ ಸಂಘಟನೆ ಸೇರಿದಂತೆ 30ಕ್ಕೂ ಹೆಚ್ಚು ಸಂಘಟನೆಗಳಿಂದ ಬೃಹತ್ ರ‌್ಯಾಲಿ ಆರಂಭಿಸಲಾಗಿದೆ. ರಾಜ್ಯ ಕಬ್ಬು ಬೆಳೆಗಾರರ ಸಂಘ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಮತ್ತು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದ್ರೆ ಇಬ್ಬರೂ ಮುಖಂಡರ ನಡುವೆ ಒಗ್ಗಟ್ಟು ಕಾಣಿಸುತ್ತಿಲ್ಲ. ವಿವಿಧ ಸಂಘಟನೆಗಳ ಬ್ಯಾನರ್ ಹಿಡಿದುಕೊಂಡಿರುವ ರೈತರ ಅಧಿವೇಶನ ಮುಗಿಯುವರೆಗೂ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದ್ದಾರೆ.

    ಮೆಜೆಸ್ಟಿಕ್ ನಿಂದ ಫ್ರೀಡಂ ಪಾರ್ಕಿನವರೆಗೂ ರೈತರು ರ‌್ಯಾಲಿ ಹೊರಟ್ಟಿದ್ದು, ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ರೈತರ ಪ್ರತಿಭಟನೆ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ 500ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಿದೆ.

    ವಿಧಾನಸೌಧದಲ್ಲಿ ಅಧಿವೇಶನ ನಡೆಯುವ ತನಕ ಹೋರಾಟ ನಡೆಯಲಿದ್ದು, ಯಾವುದೇ ಕಾರಣಕ್ಕೂ ವಿಧಾನಸೌಧ ಮುತ್ತಿಗೆ ಇಲ್ಲ. ಶಾಂತಿಯುತವಾಗಿ ಜನತಾ ಸಂಸತ್ ಹೋರಾಟ ನಡೆಯಲಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಮತೋರ್ವ ರೈತ ಮುಖಂಡ ಚಾಮರಸ ಪಾಟೀಲ್, ಸಿಎಂ ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ರೈತ ಪರ ಅಂತಾರೆ. ಆದ್ರೆ ರಾಜ್ಯದಲ್ಲಿ ರೈತರ ಕೊಲೆ ಆಗುತ್ತಿದೆ ಎಂದು ಆರೋಪಿಸಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರ ರೈತರು ಬೀದಿಗೆ ತಂದಿದೆ. ನಾವು ಸರ್ಕಾರವನ್ನು ಬೀದಿಗೆ ತರ್ತಿವಿ. ರೈತರ ಮಕ್ಕಳು ನಾವ್ ಅಂತಾರೆ. ನೀವೇ ಕೇಳಿಕೊಳ್ಳಿ ಸುಗ್ರೀವಾಜ್ಞೆ ಮಾರಕವಾಗಿದೆ. ಅಹೋ ರಾತ್ರಿ ಧರಣಿ ಮಾಡುತ್ತೇವೆ. ಈಗ ವಿಧಾನಸೌಧ ಮುತ್ತಿಗೆ ಹಾಕಿ ಬೀದಿಗೆ ತರುತ್ತೇವೆ ಎಂದು ಹೇಳಿದರು.

  • ಸಾವು ಯಾವಾಗ ಬರುತ್ತೋ ಗೊತ್ತಿಲ್ಲ, ನಾನು ಧೃತಿಗೆಡದೇ ಹೋರಾಟ ಮಾಡುತ್ತೇನೆ: ಹೆಚ್‍ಡಿಡಿ

    ಸಾವು ಯಾವಾಗ ಬರುತ್ತೋ ಗೊತ್ತಿಲ್ಲ, ನಾನು ಧೃತಿಗೆಡದೇ ಹೋರಾಟ ಮಾಡುತ್ತೇನೆ: ಹೆಚ್‍ಡಿಡಿ

    ಹಾಸನ: ಸಾವು ಯಾವಾಗ ಬರುತ್ತೋ ಯಾವಾಗ ಹೋಗುತ್ತೋ ಗೊತ್ತಿಲ್ಲ. ಆದರೆ ನಾನು ಧೃತಿಗೆಡದೇ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್‍ಡಿ.ದೇವೇಗೌಡರು ಹೇಳಿದ್ದಾರೆ.

    ಇಂದು ಹಾಸನದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರ್ನಾಟಕ ಭೂಸುಧಾರಣಾ ಕಾಯ್ದೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ಅಭಿವೃದ್ಧಿ ಕಾಯ್ದೆ ಸೇರಿದಂತೆ ರೈತರ ಹಿತಕ್ಕೆ ಧಕ್ಕೆ ತರುವ ತಿದ್ದುಪಡಿ ಹಿಂತೆಗೆದುಕೊಳ್ಳಲು ಆಗ್ರಹಿಸಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿತ್ತು.

    ಪ್ರತಿಭಟನೆಯಲ್ಲಿ ಜಿಲ್ಲೆಯ ಜೆಡಿಎಸ್ ಶಾಸಕರು, ಸಂಸದರು ಸೇರಿದಂತೆ ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದೇವೇಗೌಡರು, ಈ ಪಕ್ಷ ಹುಟ್ಟಿರೋದೆ ರೈತರಿಗೋಸ್ಕರ. ಈ ವಯಸ್ಸಲ್ಲಿ ಕೊರೊನಾದಿಂದ ದೇವೇಗೌಡರಿಗೆ ಏನು ತೊಂದರೆಯಾಗುತ್ತೊ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನಾನು ಯಾವುದಕ್ಕೂ ಧೃತಿಗೆಡಲ್ಲ. ಸಾವು ಯಾವಾಗ ಬರುತ್ತೋ, ಯಾವಾಗ ಹೋಗುತ್ತೋ ಯಾರಿಗೂ ಗೊತ್ತಿಲ್ಲ ಎಂದರು.

    ಲೂಟಿಕೋರರಿಗೆ ಅನುಕೂಲವಾಗುತ್ತೆ ಎಂದು ರೈತ ವಿರೋಧಿ ಕಾಯ್ದೆ ತರಲು ಮುಂದಾಗಿದ್ದಾರೆ. ಇದು ನನಗೆ ಗೊತ್ತಿದೆ. ಇದು ವ್ಯಕ್ತಿ ದ್ವೇಷದ ಹೋರಾಟವಲ್ಲ. ನಮ್ಮ ರೈತರನ್ನು ಉಳಿಸುವುದಕ್ಕೆ ಹೋರಾಟ ಮಾಡುತ್ತಿದ್ದೇವೆ. ಇಂದು ನಮ್ಮ ರಾಜಕಾರಣಿಗಳಿಗೆ ಹಣ ಮಾಡುವ ಸ್ವಾರ್ಥ ಹೆಚ್ಚಿದೆ. ಇದರ ವಿರುದ್ಧ ಹೋರಾಟ ಮಾಡುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.