Tag: Land Mafia

  • ಹೇಮಂತ್‌ ಸೊರೇನ್‌ಗೆ ಸೇರಿದ್ದ 31 ಕೋಟಿ ರೂ. ಮೌಲ್ಯದ ಆಸ್ತಿ, ಬಿಎಂಡಬ್ಲ್ಯೂ ಕಾರು ಇಡಿ ವಶ

    ಹೇಮಂತ್‌ ಸೊರೇನ್‌ಗೆ ಸೇರಿದ್ದ 31 ಕೋಟಿ ರೂ. ಮೌಲ್ಯದ ಆಸ್ತಿ, ಬಿಎಂಡಬ್ಲ್ಯೂ ಕಾರು ಇಡಿ ವಶ

    – ಇತರ ಆರೋಪಿಗಳಿಂದ 256 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
    – ಚಾರ್ಜ್‌ಶೀಟ್‌ನಲ್ಲಿ ಅನೇಕ ರಹಸ್ಯಗಳು ಬಯಲು

    ರಾಂಚಿ: ಅಕ್ರಮ ಹಣ ವರ್ಗಾವಣೆ & ಭೂ ಕಬಳಿಕೆ (Land Mafia) ಪ್ರಕರಣದಲ್ಲಿ ಬಂಧಿತರಾಗಿರುವ ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್‌ ಸೊರೇನ್‌ ಅವರಿಗೆ ಸೇರಿದ್ದ 31 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (Enforcement Directorate) ಜಪ್ತಿ ಮಾಡಿದೆ. ಇದರೊಂದಿಗೆ ದೆಹಲಿಯಲ್ಲಿರುವ ಅವರ ನಿವಾಸದಿಂದ 36 ಲಕ್ಷ ರೂ. ನಗದು ಹಾಗೂ ಬಿಎಂಡಬ್ಲ್ಯೂ ಕಾರನ್ನು ಜಪ್ತಿ ಮಾಡಲಾಗಿದೆ.

    ಈಗಾಗಲೇ ಹೇಮಂತ್‌ ಸೊರೇನ್‌ (Hemant Soren) ವಿರುದ್ಧ ಜಾರಿ ನಿರ್ದೇಶನಾಲಯ ಜಾರ್ಜ್‌ಶೀಟ್‌ ದಾಖಲಿಸಿದ್ದು, ಪ್ರಕರಣದ ಹಲವು ರಹಸ್ಯಗಳು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಇತರ ಆರೋಪಿಗಳಿಂದ ಸುಮಾರು 256 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ. ಪ್ರಕರಣದಲ್ಲಿ ಈವರೆಗೆ ಹೇಮಂತ್ ಸೊರೇನ್ ಮತ್ತು ರಾಂಚಿಯ ಮಾಜಿ ಐಎಎಸ್ ಅಧಿಕಾರಿ ಛಾವಿ ರಂಜನ್ ಸೇರಿ 16 ಆರೋಪಿಗಳನ್ನ ಬಂಧಿಸಲಾಗಿದೆ. ಆದ್ರೆ ಹೇಮಂತ್‌ ಸೊರೇನ್‌ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಇದನ್ನೂ ಓದಿ: ಇವಿಎಂನಲ್ಲೇ ಚುನಾವಣೆ, ಸ್ಲಿಪ್‌ ಮತದಾರನ ಕೈಗೆ ಸಿಗಬೇಕು : ಕಾಂಗ್ರೆಸ್‌ ಪ್ರಣಾಳಿಕೆ

    ಚಾರ್ಜ್‌ಶೀಟ್‌ನ ಪ್ರಕಾರ, ಹೇಮಂತ್ ಸೊರೇನ್ ಮತ್ತು ಅವರ ಇತರ ಸ್ನೇಹಿತರು ಭೂ ಮಾಫಿಯಾದ ಪ್ರಕರಣದ ಭಾಗವಾಗಿದ್ದಾರೆ. ಹಾಗಾಗಿ ಹೇಮಂತ್ ಸೊರೇನ್ ಮತ್ತು ಇತರ ನಾಲ್ವರಾದ ಭಾನು ಪ್ರತಾಪ್ ಪ್ರಸಾದ್, ರಾಜ್ ಕುಮಾರ್ ಪಹಾನ್, ಹಿಲರಿಯಾಸ್ ಮತ್ತು ಬಿನೋದ್ ಸಿಂಗ್ ವಿರುದ್ಧ ಮಾರ್ಚ್ 30 ರಂದು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌)ಯಡಿ ವಿಶೇಷ ನ್ಯಾಯಾಲಯದಲ್ಲಿ ಇ.ಡಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಅಲ್ಲದೇ 8.86 ಎಕರೆ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಇದನ್ನೂ ಓದಿ: 2019ರ ಲೋಕಸಭಾ ಚುನಾವಣೆ; ಹೆಚ್ಚು, ಕಡಿಮೆ ಮತಗಳ ಅಂತರದಿಂದ ಗೆದ್ದವರಿವರು

    ನ್ಯಾಯಾಲಯದ ಆದೇಶದ ಮೇರೆಗೆ ಕ್ರಮಕ್ಕೆ ಮುಂದಾಗಿದ್ದ ಇಡಿ, ಸಹಚರರಾದ ಭಾನುಪ್ರಸಾದ್‌ ಪ್ರತಾಪ್‌ ಅವರ ಕಚೇರಿಯನ್ನು ಪರಿಶೀಲಿಸಿದಾಗ 44 ಪುಟಗಳ ಕಡತವನ್ನ ಇಡಿ ಪತ್ತೆ ಮಾಡಿತ್ತು. ಇದರಲ್ಲಿ ಹೇಮಂತ್‌ ಸೊರೇನ್‌ ಒಡೆತನದಲ್ಲಿದ್ದ 8.86 ಎಕರೆ ಭೂಪ್ರದೇಶಕ್ಕೆ ಸಂಬಂಧಿಸಿದ ಬಗ್ಗೆ ನಿರ್ಣಾಯಕ ಮಾಹಿತಿಗಳಿತ್ತು. ಸೊರೇನ್‌ ರಾಂಚಿಯ ಬಾರ್ಗೇನ್ ಪ್ರದೇಶದಲ್ಲಿ 8.86 ಎಕರೆ ಭೂಮಿಯನ್ನು 2011 ರಿಂದ ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಅವರ ಆಪ್ತರಾದ ರಂಜಿತ್‌ ಸಿಂಗ್‌, ಹಿಲೇರಿಯಸ್‌ ಕಚಾಪ್‌ ಮತ್ತು ರಾಜ್‌ ಕುಮಾರ್‌ ಅವರು ಇದಕ್ಕೆ ಸಹಕಾರ ನೀಡಿದ್ದಾರೆ. ಅಲ್ಲದೇ ಅನೇಕ ಸರ್ಕಾರಿ ಅಧಿಕಾರಿಗಳೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಭೂಕಬಳಿಕೆಗೆ ಅನುಕೂಲವಾಗುವಂತೆ ದಾಖಲೆಗಳನ್ನು ಬದಲಾಯಿಸಿದ್ದಾರೆ ಎಂದು ಇಡಿ ತನ್ನ ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಿದೆ.

    ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ಜನವರಿಯಲ್ಲಿ ಸೊರೇನ್ ಅವರನ್ನು ಇ.ಡಿ ಬಂಧಿಸಿತ್ತು. ಬಂಧನಕ್ಕೂ ಮುನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದು, ರಾಂಚಿಯ ಹೊತ್ವಾರ್‌ನಲ್ಲಿರುವ ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇದನ್ನೂ ಓದಿ: ಮೋದಿ ನಾಯಕತ್ವ, ಪರಿಕಲ್ಪನೆಯ ಆಕರ್ಷಣೆಯೇ ಬಿಜೆಪಿ ಸೇರಲು ಕಾರಣ: ಸುಮಲತಾ

  • ಲ್ಯಾಂಡ್ ಮಾಫಿಯಾ ಸೇರಿ ಎಲ್ಲಾ ಮಾಫಿಯಾಗಳನ್ನ ರಾಜ್ಯದಲ್ಲಿ ಬಗ್ಗುಬಡಿಯುತ್ತೇವೆ: ಬೊಮ್ಮಾಯಿ

    ಲ್ಯಾಂಡ್ ಮಾಫಿಯಾ ಸೇರಿ ಎಲ್ಲಾ ಮಾಫಿಯಾಗಳನ್ನ ರಾಜ್ಯದಲ್ಲಿ ಬಗ್ಗುಬಡಿಯುತ್ತೇವೆ: ಬೊಮ್ಮಾಯಿ

    ಚಿಕ್ಕಬಳ್ಳಾಪುರ: ಅತ್ಯಾಚಾರ, ಲ್ಯಾಂಡ್ ಮಾಫಿಯಾ ಸೇರಿದಂತೆ ಎಲ್ಲಾ ಮಾಫಿಯಾಗಳನ್ನು ರಾಜ್ಯದಲ್ಲಿ ಬಗ್ಗು ಬಡಿಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಚಿಕ್ಕಬಳ್ಳಾಪುರ ತಾಲೂಕಿನ ಗುಂಗಿರ್ಲಹಳ್ಳಿ ಗ್ರಾಮದಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಸರ್ಕಾರ ಯಾರ ಮುಲಾಜಿನಲ್ಲಿ ಇಲ್ಲ. ಆದರೆ ಹಿಂದಿನ ಸರ್ಕಾರಗಳು ಮೈನ್ಸ್, ಎಕ್ಸೈಸ್, ಕಂಟ್ರಾಕ್ಟ್ಸ್, ಹಾಗೂ ಎಜುಕೇಷನಲ್ ಕ್ಯಾಪಿಟಲ್ಸ್‌ನ ಮುಲಾಜಿನಲ್ಲಿದ್ದವು. ಆದರೆ ಆ ಸರ್ಕಾರದವರು ತಾವು ಬಡವರ ಪರ ಅಂತ ಬರೀ ಭಾಷಣ ಬಿಗುತ್ತಿದ್ದರು ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರ ಭಾಷಣವನ್ನು ಅನುಕರಣೆ ಮಾಡಿ ವ್ಯಂಗ್ಯ ಮಾಡಿದರು.

    ಈಗ ಕಾಲ ಬದಲಾಗಿದೆ ಜನರ ಜಾಗೃತರಾಗಿದ್ದಾರೆ. ನಮ್ಮ ಸರ್ಕಾರದ ಒಳ್ಳೆಯ ಯೋಜನೆಗಳನ್ನು ಜನ ಬೆಂಬಲಿಸುತ್ತಾರೆ ಒಳ್ಳೆಯ ಕೆಲಸಗಳಿಗೆ ಜನ ಮುದ್ರೆ ಹಾಕಿ ಆರ್ಶೀವಾದ ಮಾಡಲಿದ್ದಾರೆ ಎಂದು ಪರೋಕ್ಷವಾಗಿ ಮುಂದಿನ ಚುನಾವಣೆಯಲ್ಲಿ ಜನ ಬಿಜೆಪಿ ಸರ್ಕಾರ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಜನರ ಉದ್ದಾರ ಮಾಡುತ್ತೇವೆ ಅಂತ ಸ್ವಯಂ ಉದ್ಧಾರ ಆದ ಸಾವಿರಾರು ಉದಾಹರಣೆಗಳಿವೆ: ಬೊಮ್ಮಾಯಿ

    ಕಂದಾಯ ಇಲಾಖೆಯ ಅದ್ಬುತವಾದ ಕಾರ್ಯಕ್ರಮ ಇದಾಗಿದೆ. ಕಂದಾಯ ಸಚಿವರ ನೇತೃತ್ವದಲ್ಲಿ ವಿನೂತನ ಕಾರ್ಯಕ್ರಮ ಮಾಡುತ್ತಿದ್ದೇವೆ. ಮನೆ ಮನೆಗೆ ಕಂದಾಯ ದಾಖಲೆಗಳು ಎಂಬ ಕಾರ್ಯಕ್ರಮ ಇದಾಗಿದೆ. ಸರ್ಕಾರ ಜನರ ಪಾಲಿಗೆ ಜೀವಂತವಾಗಿದೆಯಾ ಇಲ್ಲವಾ ಎಂಬುದು, ಜನರಿಗೆ ಸಂಕಷ್ಟ ಬಂದಾಗ ಅರ್ಥವಾಗುತ್ತದೆ ಎಂದು ತಿಳಿಸಿದರು.

    ಸ್ವಾತಂತ್ರ್ಯ ಬಂದು 70ವರ್ಷ ಆಯಿತು. ಹಿಂದಿನ ಸರ್ಕಾರ ರೈತರು ದೀನ ದಲಿತರ ಉದ್ಧಾರ ಮಾಡುತ್ತೇವೆ ಎಂದು ಹೇಳುತ್ತಿದ್ದರು. ಆದರೆ ಅವರು ಅವರ ಹೆಸರಿನ ಮೇಲೆ ಮತ ಪಡೆಯುವ ರಾಜಕಾರಣ ನಡೆದಿದೆ. ಬಡವರನ್ನು ಮತ ಬ್ಯಾಂಕ್ ಆಗಿ ಪರಿವರ್ತನೆ ಮಾಡಿದರು. ಜನರ ಉದ್ಧಾರ ಮಾಡುತ್ತೇವೆ ಎಂದು ಸ್ವಯಂ ಉದ್ಧಾರ ಆದ ಸಾವಿರಾರು ಉದಾಹರಣೆಗಳಿವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಂದಾಯ ದಾಖಲೆ ಮನೆ ಬಾಗಿಲಿಗೆ- ಯೋಜನೆಗೆ ಸಿಎಂ ಚಾಲನೆ

  • ಸಚಿವ ಬೈರತಿ ಬಸವರಾಜ್‌ಗೆ ಧಾರವಾಡ ಹೈಕೋರ್ಟ್‌ನಿಂದ ಬಿಗ್ ರಿಲೀಫ್‌ – ಸಮನ್ಸ್‌ಗೆ ಮಧ್ಯಂತರ ತಡೆ

    ಸಚಿವ ಬೈರತಿ ಬಸವರಾಜ್‌ಗೆ ಧಾರವಾಡ ಹೈಕೋರ್ಟ್‌ನಿಂದ ಬಿಗ್ ರಿಲೀಫ್‌ – ಸಮನ್ಸ್‌ಗೆ ಮಧ್ಯಂತರ ತಡೆ

    ಧಾರವಾಡ: ಭೂ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಬೈರತಿ ಬಸವರಾಜ್‌ಗೆ ಧಾರವಾಡ ಹೈಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಸಚಿವರಿಗೆ ಜಾರಿಗೊಳಿಸಿದ್ದ ಸಮನ್ಸ್‌ಗೆ ಧಾರವಾಡ ಹೈಕೋರ್ಟ್‌ ತಡೆ ನೀಡಿದೆ.

    2003ರಲ್ಲಿ ಬೈರತಿ ಬಸವರಾಜ್ ಬೆಂಗಳೂರಿನ ಕೆ.ಆರ್‌.ಪುರಂ ಹೋಬಳಿಯ ಕಲ್ಕೆರೆಯಲ್ಲಿ ಅಣ್ಣಯ್ಯಪ್ಪ ಎಂಬವರಿಂದ 22 ಏಕರೆ ಜಮೀನನ್ನು ಖರೀದಿಸಿ ಖಾಲಿ ಕಾಗದದ‌‌ ಮೇಲೆ ಸಹಿ ಪಡೆದು ವಂಚಿಸಿದ್ದರು ಎಂದು ಗಂಭೀರ ಆರೋಪ ಮಾಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಮಾದಪ್ಪ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಪೊಲೀಸರು ʻಬಿʼ ರಿಪೋರ್ಟ್ ಹಾಕಿ ಪ್ರಕರಣ ಮುಚ್ಚಿಹಾಕಿದ್ದರು. ‌ಇದನ್ನು ಪ್ರಶ್ನಿಸಿ ಮಾದಪ್ಪ, ನ್ಯಾಯಾಲಯದ‌‌ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ನಕಲಿ ನಂದಿನಿ ತುಪ್ಪದ ಜಾಲದ ಮೇಲೆ ಅಧಿಕಾರಿಗಳ ದಾಳಿ

    ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌, ಬೈರತಿ ಬಸವರಾಜ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿ ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ಬೆಂಗಳೂರು ಜನಪ್ರತಿನಿಧಿಗಳ‌‌ ವಿಶೇಷ ನ್ಯಾಯಾಲಯ ಬೈರತಿ ಬಸವರಾಜ್‌ಗೆ ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ಜಾರಿ‌ ಮಾಡಿತ್ತು. ಇದನ್ನು ಪ್ರಶ್ನಿಸಿ ಬೈರತಿ ಬಸವರಾಜ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲು ಏರಿದ್ದರು. ಇದರ‌‌‌ ವಿಚಾರಣೆ ಕೈಗೆ ಎತ್ತಿಕೊಂಡು ಧಾರವಾಡ ಹೈಕೋರ್ಟ್ ಏಕ‌ಸದಸ್ಯ ಪೀಠ, ಸಮನ್ಸ್ ಜಾರಿ‌ ಮಾಡಿದ್ದಕ್ಕೆ ಮಧ್ಯಂತರ ತಡೆ ನೀಡಿದೆ. ಅಲ್ಲದೇ ಮುಂದಿನ ವಿಚಾರಣೆಯನ್ನು ಜನವರಿ ಎರಡನೇ ವಾರಕ್ಕೆ ಮುಂದೂಡಿದೆ. ಇದನ್ನೂ ಓದಿ: ಜೂಜಾಡುತ್ತಿದ್ದ ಎಎಸ್‌ಐ, ಕಾನ್‌ಸ್ಟೇಬಲ್, ತಹಸೀಲ್ದಾರ್ ಚಾಲಕ ಸೇರಿದಂತೆ 20 ಮಂದಿ ಅರೆಸ್ಟ್

  • ಭೂ ಹಗರಣ – ಸಚಿವ ಬೈರತಿ ಬಸವರಾಜು ರಾಜೀನಾಮೆಗೆ ಸಿದ್ದರಾಮಯ್ಯ ಬಿಗಿಪಟ್ಟು

    ಭೂ ಹಗರಣ – ಸಚಿವ ಬೈರತಿ ಬಸವರಾಜು ರಾಜೀನಾಮೆಗೆ ಸಿದ್ದರಾಮಯ್ಯ ಬಿಗಿಪಟ್ಟು

    ಬೆಳಗಾವಿ: ನಾವು ಚರ್ಚೆಗೆ ಅವಕಾಶ ನೀಡಿದರು, ಸ್ಪೀಕರ್ ಅವಕಾಶ ಕೊಡಲಿಲ್ಲ. ಬೈರತಿ ಬಸವರಾಜು ರಾಜೀನಾಮೆ ಕೊಡಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

    ಕಲಾಪದ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಿಯಮ 60ರಡಿ ಸಾರ್ವಜನಿಕ ತುರ್ತಿನ ವಿಚಾರಗಳನ್ನು ಚರ್ಚೆ ನಡೆಸತಕ್ಕದ್ದು ಎಂದು ಸದನದ ನಿಯಮದಲ್ಲಿದೆ. ಇಂದು ನಾನು ಸದನದ ನಿಯಮದಂತೆ ಒಂದು ಗಂಟೆ ಮುಂಚಿತವಾಗಿ ಬೈರತಿ ಬಸವರಾಜ್ ಅವರು ಭಾಗಿಯಾಗಿರುವ ಭೂ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಕೋರಿದ್ದೆ. ಮಾನ್ಯ ಸಭಾಧ್ಯಕ್ಷರು ಮೊದಲು ನನಗೆ ಪ್ರಾಥಮಿಕ ಸಲ್ಲಿಕೆಗೆ ಅವಕಾಶ ನೀಡಿ, ನನ್ನ ಮಾತುಗಳು ಅವರಿಗೆ ತೃಪ್ತಿದಾಯಕವಾಗಿವೆ ಅನ್ನಿಸಿದರೆ ಚರ್ಚೆಗೆ ಅವಕಾಶ ನೀಡಬೇಕು. ಆದರೆ ಇತ್ತೀಚೆಗೆ ನಿಯಮ 60 ರಡಿ ಚರ್ಚೆ ಮಾಡದೆ ಅದನ್ನು ನಿಯಮ 69 ಕ್ಕೆ ಬದಲಾವಣೆ ಮಾಡಿಕೊಂಡು ಚರ್ಚೆಗೆ ಅವಕಾಶ ನೀಡಲಾಗುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಧಾನ ಪರಿಷತ್ ಕಲಾಪದಲ್ಲಿ ಪೊಲೀಸರ ವಿರುದ್ದ ಹಕ್ಕುಚ್ಯುತಿ ಮಂಡನೆ

    ಅಣ್ಣಯ್ಯಪ್ಪ ಎಂಬುವರಿಂದ 2003ರ ಮೇ 21 ರಲ್ಲಿ ಖಾಲಿ ಛಾಪಾ ಕಾಗದಕ್ಕೆ ಸಹಿ ಹಾಕಿಸಿಕೊಂಡು, ಅದೇ ದಿನ 22 ಎಕರೆ ಭೂಮಿಯನ್ನು ಕಾನೂನು ಬಾಹಿರವಾಗಿ ಖರೀದಿ ಮಾಡಲಾಗಿದೆ. ಬೈರತಿ ಬಸವರಾಜು ಅವರು ಈ ನಕಲಿ ದಾಖಲೆ ಸೃಷ್ಟಿ ಕೃತ್ಯದಲ್ಲಿ ಷಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್.ಪುರಂ ಹೋಬಳಿಯ ಕಲ್ಕೆರೆಯಲ್ಲಿರುವ ಈ ಜಮೀನನ್ನು ಬೈರತಿ ಬಸವರಾಜ್ ಅವರು ನಕಲಿ ದಾಖಲೆ ಸೃಷ್ಟಿಸಿ ಖರೀದಿ ಮಾಡಿದ್ದಾರೆ. ಈ ಭೂಮಿಯ ಮೌಲ್ಯ ಕನಿಷ್ಠ 350 – 400 ಕೋಟಿ ರೂಪಾಯಿ ಇದೆ. ದೂರುದಾರರಾದ ಮಾದಪ್ಪ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲು ಮಾಡಿದರು, ನಂತರ ಪೊಲೀಸರು ಬಿ ರಿಪೋರ್ಟ್ ಹಾಕಿದರು. ಇದನ್ನು ಪ್ರಶ್ನಿಸಿ ಮಾದಪ್ಪನವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯವು ಕ್ರಿಮಿನಲ್ ಅಪರಾಧ ಪ್ರಕರಣವೆಂದು ದಾಖಲಿಸಿಕೊಂಡು, ಸಮನ್ಸ್ ಜಾರಿಗೊಳಿಸುವಂತೆ ಆದೇಶಿಸಿದೆ. ಇವುಗಳಲ್ಲಿ ಕೆಲವು ಜಾಮೀನು ರಹಿತ ಅಪರಾಧಗಳಾಗಿವೆ ಎಂದು ವಿವರಿಸಿದರು.

    ನಮ್ಮ ಸರ್ಕಾರದ ಅಧಿಕಾರದಲ್ಲಿ ಇದ್ದಾಗ 2016 ರಲ್ಲಿ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ್ ಶೆಟ್ಟರ್ ಅವರು ಸನದನಲ್ಲಿ ನಿಯಮ 60 ರಡಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಧರಣಿ ಮಾಡಿದ್ದರು. ಬಿಜೆಪಿಯವರ ಧರಣಿ ನಂತರ ಅಂದಿನ ಸಭಾಧ್ಯಕ್ಷರು ನಿಯಮ 69 ರಡಿ ಚರ್ಚೆಗೆ ಅವಕಾಶ ನೀಡಿದ್ದರು. ಅಂದು ನಾನು ಚರ್ಚೆಗೆ ಸಿದ್ಧನಿದ್ದೇನೆ ಎಂದು ಹೇಳಿದ್ದೆ. ಜಾರ್ಜ್ ಅವರ ವಿರುದ್ಧ ಖಾಸಗಿ ದೂರು ದಾಖಲಾಗಿತ್ತು. ನ್ಯಾಯಾಲಯ ಪ್ರಾಥಮಿಕ ತನಿಖಾ ವರದಿ ಹಾಕುವಂತೆ ಆದೇಶಿಸಿದ ಕೂಡಲೆ ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೇ ರೀತಿ ಬೈರತಿ ಬಸವರಾಜ್ ಕೂಡ ಈಗಾಗಲೇ ರಾಜೀನಾಮೆ ಕೊಡಬೇಕಿತ್ತುಮ, ಇಲ್ಲ ಸರ್ಕಾರವೇ ಅವರನ್ನು ವಜಾಗೊಳಿಸಬೇಕಿತ್ತು ಎಂದು ತಿಳಿಸಿದರು.

    ಬೈರತಿ ಬಸವರಾಜ್ ಸಚಿವ ಸ್ಥಾನದಲ್ಲೇ ಮುಂದುವರೆದರೆ ದೂರುದಾರನಿಗೆ ನ್ಯಾಯ ಸಿಗಲು ಸಾಧ್ಯವೇ? ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕಿದ್ದ ಬಸವರಾಜ ಬೊಮ್ಮಾಯಿ ನಮಗೆ ನೈತಿಕತೆ ಪಾಠ ಮಾಡುತ್ತಿದ್ದಾರೆ. ತಕ್ಷಣ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕೈಗಾರಿಕೆ ಪ್ರಾರಂಭ ಮಾಡದ 500ಕ್ಕೂ ಹೆಚ್ಚು ಕೈಗಾರಿಕೆಗಳ ಜಮೀನು ವಾಪಸ್: ನಿರಾಣಿ

    ಡಿ.ಕೆ.ರವಿ ಹಾಗೂ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ನಮ್ಮ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿತ್ತು. ಎರಡೂ ಪ್ರಕರಣದಲ್ಲಿ ಜಾರ್ಜ್ ಅವರು ನಿರಪರಾಧಿ ಎಂದು ವರದಿ ಬಂದಿದೆ. ಇಂತಹ ಪ್ರಕರಣದಲ್ಲೇ ಜಾರ್ಜ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ಇಂದು ನನಗೆ ಪ್ರಾಥಮಿಕ ಪ್ರಸ್ತಾಪಕ್ಕೆ ಅವಕಾಶ ನೀಡುವ ಮೊದಲೇ ಸಭಾಧ್ಯಕ್ಷರು ನನ್ನ ನೋಟಿಸ್ ಅನ್ನು ತಿರಸ್ಕಾರ ಮಾಡಿದ್ದಾರೆ. ಮಾತನಾಡಲು ಅವಕಾಶವನ್ನೇ ಕೊಡಲ್ಲ ಅಂದರೆ ನಾವು ಸದನಕ್ಕೆ ಯಾಕೆ ಬರಬೇಕು? ಗಣಪತಿ, ಡಿ.ಕೆ.ರವಿ ಪ್ರಕರಣ ನ್ಯಾಯಾಲಯದಲ್ಲಿತ್ತು, ಆದರೂ ಸದನದಲ್ಲಿ ಚರ್ಚೆ ಮಾಡಲಾಗಿತ್ತು‌. ಈಗಲೂ ನಾವು ಪ್ರಕರಣದ ಮೆರಿಟ್ ಮೇಲೆ ಚರ್ಚೆ ಮಾಡಲ್ಲ. ಆದರೆ ಸಂತ್ರಸ್ತನಿಗೆ ನ್ಯಾಯ ಸಿಗಬೇಕು. ಅಪರಾಧ ಆರೋಪ ಎದುರಿಸುತ್ತಿರುವವರು ಸಚಿವ ಸ್ಥಾನದಲ್ಲಿದ್ದರೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ನಮಗಿಲ್ಲ. ನಿಯಮ‌ 60 ರಡಿ ಚರ್ಚೆಗೆ ಅವಕಾಶ ನೀಡಬೇಕು ಮತ್ತು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂಬುದು ನಮ್ಮ ಬೇಡಿಕೆ. ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೆ ಕೈ ಬಿಡುವ ಪ್ರಶ್ನೇಯೇ ಇಲ್ಲ. ಸಮಯಾವಕಾಶದ ಕೊರತೆ ಇದೆ ಎನಿಸಿದರೆ ಸರ್ಕಾರ ಸದನವನ್ನು ಒಂದು ತಿಂಗಳವರೆಗೆ ಮುಂದುವರೆಸಲಿ, ನಾವು ಸದನಕ್ಕೆ ಹಾಜರಾಗಲು ಸಿದ್ಧರಿದ್ದೇವೆ ಎಂದು ಹೇಳಿದರು.

  • ಒಳ ಉಡುಪು ನೇತುಹಾಕಿದ್ದಕ್ಕೆ ಶಿಕ್ಷಕನ ಮೇಲೆ ಬಿತ್ತು ಕೇಸ್

    ಒಳ ಉಡುಪು ನೇತುಹಾಕಿದ್ದಕ್ಕೆ ಶಿಕ್ಷಕನ ಮೇಲೆ ಬಿತ್ತು ಕೇಸ್

    ಲಕ್ನೋ: ಪ್ರತಿಭಟನಾ ನಿರತ ಶಿಕ್ಷಕರೊಬ್ಬರು ತಮ್ಮ ಒಳಉಡುಪನ್ನು ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಒಣಗಿಸಲು ನೇತುಹಾಕಿದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಮಾಜಿ ಶಾಸಕರೊಬ್ಬರು ಭೂ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಶಿಕ್ಷಕರೊಬ್ಬರು ಜಿಲ್ಲಾಧಿಕಾರಿ ಕಚೇರಿಯ ಬಳಿ 23ಕ್ಕೂ ಹೆಚ್ಚು ವರ್ಷಗಳಿಂದ ಧರಣಿ ನಡೆಸುತ್ತಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಕಚೇರಿಯ ಹೊರಗಡೆಯೇ ತಮ್ಮ ಒಳ ಉಡುಪನ್ನು ನೇತುಹಾಕಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

    ಐಪಿಸಿ ಸೆಕ್ಷನ್ 509(ಮಹಿಳೆಯ ಗೌರವಕ್ಕೆ ಧಕ್ಕೆ) ಅಡಿ ಶಿಕ್ಷಕ ವಿಜಯ್ ಸಿಂಗ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಉಸ್ತುವಾರಿ ನಜರತ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಸಮೀಪಾಲ್ ಅತ್ರಿ ತಿಳಿಸಿದ್ದಾರೆ.

    ಪ್ರತಿಭಟನೆಯನ್ನು ಹಿಂಪಡೆಯುವಂತೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ದೂರ ಹೋಗುವಂತೆ ಅಧಿಕಾರಿಗಳು ಹೇಳಿದ ನಂತರ ಸಿಂಗ್ ತಮ್ಮ ಧರಣಿಯ ಸ್ಥಳವನ್ನು ಬದಲಾಯಿಸಿದ್ದಾರೆ ಎಂದು ಸಹ ವರದಿಯಾಗಿದೆ. ಮಾಜಿ ಶಾಸಕರು ಭೂ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಇವರು ಫೆಬ್ರವರಿ 26, 1996ರಂದು ಈ ಸ್ಥಳದಲ್ಲಿ ಧರಣಿ ಪ್ರಾರಂಭಿಸಿದ್ದರು ಎಂದು ತಿಳಿದು ಬಂದಿದೆ.

  • ಭೂಗಳ್ಳರನ್ನು ಮಟ್ಟ ಹಾಕಲು ಬೆಂಗಳೂರಿಗೆ ಬರ್ತಿದ್ದಾರೆ ಎಸ್‍ಪಿ ಅಣ್ಣಾಮಲೈ

    ಭೂಗಳ್ಳರನ್ನು ಮಟ್ಟ ಹಾಕಲು ಬೆಂಗಳೂರಿಗೆ ಬರ್ತಿದ್ದಾರೆ ಎಸ್‍ಪಿ ಅಣ್ಣಾಮಲೈ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭೂ ಮಾಫಿಯಾ ಮಟ್ಟಹಾಕಲು ಸಿಎಂ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಭೂಗಳ್ಳರನ್ನು ಮಟ್ಟ ಹಾಕಲು ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಬೆಂಗಳೂರಿಗೆ ಬರುತ್ತಿದ್ದಾರೆ.

    ಬೆಂಗಳೂರಿನ ರಿಯಲ್ ಎಸ್ಟೇಟ್ ಹಾಗು ಭೂ ಮಾಫಿಯಾ ಕಡಿವಾಣಕ್ಕೆ ಸೆಪರೇಟ್ ವಿಂಗ್ ಮಾಡಲು ನಿರ್ಧರಿಸಿದ್ದಾರಂತೆ. ಖಡಕ್ ಸೂಪರ್ ಕಾಪ್ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ನೇತೃತ್ವದಲ್ಲಿ ಸೆಪರೇಟ್ ವಿಂಗ್ ಮಾಡಲು ಸಿಎಂ ನಿರ್ಧರಿಸಿದ್ದಾರೆ. ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ಸಾಕಷ್ಟು ಬಡವರ ಆಸ್ತಿ ಭೂ ಗಳ್ಳರ ಪಾಲಾಗಿದೆ. ಸದ್ಯ ಇಂತಹ ಭೂಗಳ್ಳರನ್ನು ಮಟ್ಟ ಹಾಕಲು ಎಸ್‍ಪಿ ಅಣ್ಣಾಮಲೈ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಲಿದೆ.

    ಸದ್ಯ ಚಿಕ್ಕಮಗಳೂರು ಎಸ್‍ಪಿಯಾಗಿ ಅಣ್ಣಾಮಲೈ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಮೀಟರ್ ಬಡ್ಡಿ, ಮಟ್ಕ, ಜೂಜು ಅಡ್ಡೆಗಳನ್ನು ಎಚ್‍ಡಿಕೆ ನಿರ್ಣಾಮ ಮಾಡಿಸುತ್ತಿದ್ದಾರೆ. ಅಲೋಕ್ ಕುಮಾರ್ ಮತ್ತು ಗಿರೀಶ್‍ರಂಥ ಅಧಿಕಾರಿಗಳನ್ನು ಸಿಸಿಬಿಗೆ ಹಾಕಿ ಸಿಎಂ ದಂಧೆಕೋರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಇದೀಗ ಭೂ ಮಾಫಿಯಾಗೆ ಸೆಪರೇಟ್ ವಿಂಗ್ ಮಾಡಿ ಅಣ್ಣಾಮಲೈ ಅವರನ್ನು ಕರೆ ತರುವ ಐತಿಹಾಸಿಕ ನಿರ್ಧಾರ ಮಾಡಿದ್ದಾರೆ. ಸದ್ಯ ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಸೂಪರ್ ಕಾಪ್ ಎಸ್‍ಪಿ ಅಣ್ಣಾಮಲೈ ಎಂಟ್ರಿ ಕೊಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv