Tag: Land fall

  • ಚಾರ್ಮಾಡಿ ಘಾಟ್ ಒಂದು ತಿಂಗಳು ಬಂದ್ – ಜಿಲ್ಲಾಧಿಕಾರಿ ಆದೇಶ

    ಚಾರ್ಮಾಡಿ ಘಾಟ್ ಒಂದು ತಿಂಗಳು ಬಂದ್ – ಜಿಲ್ಲಾಧಿಕಾರಿ ಆದೇಶ

    ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿಘಾಟ್ ರಸ್ತೆಗೆ ಭಾರೀ ಮಳೆಯಿಂದ ಹಾನಿಯಾಗಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಎಲ್ಲಾ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ.

    ಭಾರೀ ಮಳೆಗೆ ಚಾರ್ಮಾಡಿ ಘಾಟ್ ಹಲವು ಭಾಗಗಳಲ್ಲಿ ರಸ್ತೆ ಮೇಲೆ ಗುಡ್ಡ ಕುಸಿತವಾಗಿತ್ತು. ಸದ್ಯ ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ಮುಂದುವರಿಸಲಾಗಿದೆ. ಈ ಕಾರ್ಯ ಪೂರ್ಣಗೊಂಡರೂ, ಕೆಲವೆಡೆ ರಸ್ತೆ ಕುಸಿತವಾಗಿರುವುದರಿಂದ ಆಗಸ್ಟ್ 15 ರಿಂದ ಸೆಪ್ಟೆಂಬರ್ 14 ವರೆಗೂ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

    ಚಿಕ್ಕಮಗಳೂರಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿದೆ. ಇವುಗಳ ದುರಸ್ಥಿಗೆ 1 ತಿಂಗಳ ಸಮಯಾವಕಾಶದ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿರುವುದರಿಂದ ಮಾರ್ಗವನ್ನು ಬಂದ್ ಮಾಡಲಾಗಿದೆ.

    ಕಳೆದ ವರ್ಷದ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿದು ಹಲವು ಬಾರಿ ಸಂಚಾರವನ್ನು ಬಂದ್ ಮಾಡಲಾಗಿತ್ತು. ಈ ಬಾರಿಯೂ ಇದೇ ಪರಿಸ್ಥಿತಿ ಮುಂದುವರಿದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಭಾರೀ ಪ್ರಮಾಣದ ಮರಗಳು ಕೂಡ ರಸ್ತೆ ಮೇಲೆ ಉರುಳಿ ಬಿದ್ದಿದೆ. ರಸ್ತೆಗಳ ಕೆಲ ತಿರುವುಗಳಲ್ಲಿ ರಸ್ತೆ ಭಾಗಶಃ ಕೊಚ್ಚಿ ಹೋಗಿದೆ. ಶತಮಾನಗಳಿಂದಲೂ ತನ್ನ ಸೌಂದರ್ಯ ಉಳಿಸಿಕೊಂಡಿದ್ದ ಚಾರ್ಮಾಡಿ ಘಾಟ್‍ನಲ್ಲಿ ಈಗ ಗುಡ್ಡ ಕುಸಿತವೇ ಕಣ್ಣಿಗೆ ರಾಚುತ್ತಿದ್ದು, ತಿರುವುಗಳಲ್ಲಿ ಭೂಭಾಗ ಬಾಯ್ತೆರೆದಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.

  • ಮಲೆನಾಡಿನಲ್ಲಿ ಭೂ ಕುಸಿತ, ಕಾರ್ಗಲ್ – ಜೋಗ ರಾಜ್ಯ ಹೆದ್ದಾರಿ ಬಂದ್

    ಮಲೆನಾಡಿನಲ್ಲಿ ಭೂ ಕುಸಿತ, ಕಾರ್ಗಲ್ – ಜೋಗ ರಾಜ್ಯ ಹೆದ್ದಾರಿ ಬಂದ್

    ಶಿವಮೊಗ್ಗ: ಮಲೆನಾಡಿನಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕಾರ್ಗಲ್ – ಜೋಗ ರಾಜ್ಯ ಹೆದ್ದಾರಿ ಬಂದ್ ಆಗಿದೆ.

    ಶಿವಮೊಗ್ಗ ಜಿಲ್ಲೆಯಾದ್ಯಂತ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಮಳೆ ಹೆಚ್ಚಾಗುತ್ತಿದ್ದಂತೆ, ನೆರೆ, ಭೂಕುಸಿತ ಹೆಚ್ಚಾಗುತ್ತಿದೆ. ಹೀಗಾಗಿ ಸಾರ್ವಜನಿಕರಲ್ಲಿ ತೀವ್ರ ಭೀತಿ ಶುರುವಾಗಿದೆ. ಸಾಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಮಲೆನಾಡಿನಾದ್ಯಂತ ಭೂಕುಸಿತದ ಭೀತಿ ಎದುರಾಗುತ್ತಿದೆ. ಇನ್ನೂ ಹಲವೆಡೆ ರಸ್ತೆಗೆ ಮಣ್ಣು ಕುಸಿದು ಬಿದ್ದಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ.

    ಭೂ ಕುಸಿತದಿಂದ ಕಾರ್ಗಲ್ ಹಾಗೂ ಜೋಗದ ನಡುವಿನ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಲಾಗಿದ್ದು, ವಾಹನ ಸಾವರರು ಪರದಾಡುವಂತಾಗಿದೆ. ಭೂ ಕುಸಿತದಿಂದಾಗಿ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

    ಚೂರಿಕಟ್ಟೆ ಮೂಲಕ ಜೋಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಹ ಬಂದ್ ಆಗಿದ್ದು, ಜೋಗಕ್ಕೆ ತೆರಳುವ ಪ್ರವಾಸಿಗರಿಗೆ ತಾಳಗುಪ್ಪ ಮಾರ್ಗವಾಗಿ ತೆರಳುವಂತೆ ಸೂಚನೆ ನೀಡಲಾಗಿದೆ. ಸಾಗರ ತಾಲೂಕು ಅರಳಗೋಡ ಬಳಿ ಸುಮಾರು ನಾಲ್ಕು ಹೆಕ್ಟೇರ್ ನಷ್ಟು ವಿಶಾಲ ಗುಡ್ಡ ಕುಸಿದಿದ್ದು, ತೋಟ, ಗದ್ದೆಗಳಲ್ಲಿ ಸಂಪೂರ್ಣವಾಗಿ ಮಣ್ಣು ತುಂಬಿಕೊಂಡಿದೆ. ಒಂದುಕಡೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಮೀತಿ ಮೀರಿದ್ದರೆ, ಇತ್ತ ಮಲೆನಾಡಿನಲ್ಲಿಯೂ ಸಹ ಮಳೆಯಿಂದ ಭೂ ಕುಸಿತ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತವಾಗುತ್ತಿದೆ.

  • ಚಾರ್ಮಾಡಿಯಲ್ಲಿ ಮತ್ತೆ ಗುಡ್ಡ ಕುಸಿತ – ಬೇಲೂರಿನ ವಿಷ್ಣು ಸಮುದ್ರ ಕೆರೆ ಭರ್ತಿ

    ಚಾರ್ಮಾಡಿಯಲ್ಲಿ ಮತ್ತೆ ಗುಡ್ಡ ಕುಸಿತ – ಬೇಲೂರಿನ ವಿಷ್ಣು ಸಮುದ್ರ ಕೆರೆ ಭರ್ತಿ

    ಬೆಂಗಳೂರು: ಮಲೆನಾಡಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ. ಮಲೆನಾಡ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಮತ್ತೆ ಎರಡು ದಿನಗಳ ಕಾಲ ರಜೆಯನ್ನು ವಿಸ್ತರಿಸಲಾಗಿದೆ.

    ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿದಿದ್ದು, ಮಲೆಯ ಮಾರುತ ಬಳಿ ಗುಡ್ಡ ಕುಸಿಯುತ್ತಿದೆ. ಪದೇ ಪದೆ ಗುಡ್ಡ ಕುಸಿಯುತ್ತಿರುವ ಕಾರಣ ವಾಹನ ಸವಾರರು ಪರದಾಡುವಂತಾಗಿದ್ದು, ಕುಸಿದ ಮಣ್ಣನ್ನು ತೆರವುಗೊಳಿಸುವ ಕಾರ್ಯವು ಸಹ ಅಷ್ಟೇ ಭರದಿಂದ ಸಾಗಿದೆ. ಧಾರಾಕಾರ ಮಳೆಯಾಗಿ ಘಾಟ್ ರಸ್ತೆಯಲ್ಲಿ ಅಲ್ಲಲ್ಲಿ‌ ಕುಸಿತ ಕಂಡಿರುವುದರಿಂದ 2 ದಿನಗಳ ಕಾಲ ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಸ್ಥಗಿತಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಮಾಡಿದ್ದಾರೆ.

    ಕಾಫಿನಾಡಲ್ಲಿ ಅನ್ನಪೂರ್ಣೇಶ್ವರಿ ದರ್ಶನ ಅಸಾಧ್ಯ ಎನ್ನುವಂತಹ ವಾತಾರಣ ನಿರ್ಮಾಣವಾಗಿದ್ದು, ಹೊರನಾಡಿನ ಎರಡೂ ಮಾರ್ಗವೂ ಬಂದ್ ಆಗಿದೆ. ಭಾರೀ ಮಳೆಯಿಂದ ಹೆಬ್ಬಾಳೆ ಸಂಪೂರ್ಣ ಬಂದ್ ಆಗಿದೆ. ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹಳುವಳ್ಳಿ ಮಾರ್ಗವೂ ರಸ್ತೆ ಕುಸಿತದಿಂದ ಮುಚ್ಚಲ್ಪಟ್ಟಿದೆ. ಭೂ ಕುಸಿತದಿಂದ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬಾಳೆಹೊನ್ನುರು, ಕಳಸದಿಂದ ಹೊರನಾಡಿಗೆ ಇರುವ ಪ್ರತ್ಯೇಕ ಮಾರ್ಗವೂ ಇಲ್ಲದಂತಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

    ಭದ್ರೆಯ ಅಬ್ಬರಕ್ಕೆ ಹೆಬ್ಬಾಳೆ, ಮಳೆಗಾಳಿ ಅಬ್ಬರಕ್ಕೆ ಹಳುವಳ್ಳಿ ರಸ್ತೆಯೂ ಬಂದ್ ಆಗಿವೆ. ಇದರಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಸಂಪೂರ್ಣ ಬಂದ್ ಆದಂತಾಗಿವೆ.

    ಹಾಸನ: ಬೇಲೂರಿನ ಐತಿಹಾಸಿಕ ವಿಷ್ಣು ಸಮುದ್ರ ಕೆರೆ ಭರ್ತಿಯಾಗಿದ್ದು, ಕೆರೆ ಉಕ್ಕಿ ಹರಿಯುತ್ತಿದೆ. ಕೆರೆ ಭರ್ತಿಯಾಗಿದ್ದರಿಂದ ನೀರು ಹೊರಗೆ ಹರಿಯುತ್ತಿದ್ದು, ಕೆರೆಯ ಬಳಿ ಇರುವ ಹತ್ತಾರು ಎಕರೆ ಜಮೀನಿಗೆ ನೀರು ನುಗ್ಗಿದೆ. ಇದರಿಂದ ಭತ್ತ ಹಾಗೂ ವಿವಿಧ ಬೆಳೆಗಳು ನೀರುಪಾಲಾಗಿವೆ. ಕೆರೆ ತುಂಬಿದ್ದರಿಂದ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಹಾಸನ ತಾಲೂಕಿನ ಅಗಸರಹಳ್ಳಿ ಸೇತುವೆ ಸಹ ಮುಳುಗಡೆಯಾಗಿದ್ದು, ಈ ಮಾರ್ಗದ ವಾಹನ ಸವಾರರು ಪರದಾಡುತ್ತಿದ್ದಾರೆ.

    ಸಕಲೇಶಪುರದಲ್ಲಿ ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ಹೊಳೆಮಲ್ಲೇಶ್ವರ ದೇವಾಲಯ ಜಲಾವೃತಗೊಂಡಿದೆ. ಪಟ್ಟಣದ ಮೀನು ಮಾರುಕಟ್ಟೆ ಮತ್ತು ಆಝಾದ್ ರಸ್ತೆಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಬಿರುಗಾಳಿ ಸಹಿತ ಮಳೆಗೆ ಮಲೆನಾಡಿನ ಜನತೆ ತತ್ತರಿಸಿ ಹೋಗಿದ್ದಾರೆ. ಇನ್ನೂ ಸಹ ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗುತ್ತಿದ್ದು, ಪ್ರವಾಹದ ಭೀತಿ ಇನ್ನೂ ಹೆಚ್ಚಾಗಿದೆ.

    ಉತ್ತರ ಕನ್ನಡ: ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದ್ದು, ಕಾರವಾರ ತಾಲೂಕಿನ ಕಿನ್ನರ ಗ್ರಾಮ ಜಲಾವೃತಗೊಂಡಿದೆ. ಗ್ರಾಮದ 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಕಾಳಿ ನದಿಯ ನೀರಿನ ಪ್ರವಾಹಕ್ಕೆ ಗ್ರಾಮಗಳು ಜಲಾವೃತಗೊಂಡಿವೆ.

  • ಕೊಡಗಿನಲ್ಲಿ ರೆಡ್ ಅಲರ್ಟ್ ವಾಪಸ್ – ಹೆದ್ದಾರಿಯಲ್ಲಿ ರಿಟೈನಿಂಗ್ ವಾಲ್ ನಿರ್ಮಾಣಕ್ಕೆ ನಿಧಿ ಬಿಡುಗಡೆ

    ಕೊಡಗಿನಲ್ಲಿ ರೆಡ್ ಅಲರ್ಟ್ ವಾಪಸ್ – ಹೆದ್ದಾರಿಯಲ್ಲಿ ರಿಟೈನಿಂಗ್ ವಾಲ್ ನಿರ್ಮಾಣಕ್ಕೆ ನಿಧಿ ಬಿಡುಗಡೆ

    ಮಡಿಕೇರಿ: ಕೊಡಗಿನಲ್ಲಿ ಮಳೆಯ ತೀವ್ರತೆ ಸ್ವಲ್ಪ ಇಳಿಮುಖವಾಗಿದೆ. ಮಡಿಕೇರಿಯಲ್ಲಿ ಆಗಾಗ ಬಿಡುವು ಪಡೆದುಕೊಂಡು ಸಾಧಾರಣ ಮಳೆ ಸುರಿಯುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಹಿಂತೆಗೆದುಕೊಳ್ಳಲಾಗಿದೆ.

    ಕೊಡಗಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 877.99 ಮಿ.ಮೀ. ಮಳೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೆ.35ರಷ್ಟು ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ರೆಡ್, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಇದುವರೆಗೂ ಎಲ್ಲೂ ಏನೂ ಸಮಸ್ಯೆ ಆಗಿಲ್ಲ.

    ನಿಧಿ ಬಿಡುಗಡೆ: ಮಳೆಗಾಲದಲ್ಲಿ ಸಂಪಾಜೆ ಘಾಟಿ ರಸ್ತೆ ಬಿರುಕು ಬಿಡುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರಕ್ಕಾಗಿ ಸಂಸದ ಪ್ರತಾಪ್ ಸಿಂಹ ಅವರು ಬುಧವಾರ ಹೆದ್ದಾರಿ ಖಾತೆಯ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಈ ಸಂಬಂಧ ಟ್ವೀಟ್ ಮಾಡಿರುವ ಸಂಸದರು, ಭಾರೀ ಮಳೆಯಿಂದಾಗಿ ಮಡಿಕೇರಿ-ಸಂಪಾಜೆ ಭಾಗದ ರಾಷ್ಟ್ರೀಯ ಹೆದ್ದಾರಿ ಮತ್ತೆ ಬಿರುಕು ಬಿಟ್ಟಿದೆ. ಅದನ್ನು ಸರಪಡಿಸಲು ಹಾಗೂ ರೀಟೈನಿಂಗ್ ವಾಲ್ ನಿರ್ಮಾಣಕ್ಕೆ ಮನವಿ ಮಾಡಿದಾಗ, ಕೂಡಲೇ ನಿಧಿ ಬಿಡುಗಡೆಗೆ ಸಚಿವರಾದ ನಿತಿನ್ ಗಡ್ಕರಿಯವರು ಆದೇಶ ನೀಡಿದರು ಎಂದು ಹೇಳಿದ್ದಾರೆ.

    ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪ್ರತಿಕ್ರಿಯಿಸಿ, ಎರಡು ತಿಂಗಳಿಂದ ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಿಕೊಂಡಿರುವುದರಿಂದ ತುರ್ತು ಸ್ಪಂದನೆ ಸಾಧ್ಯವಾಗಿದೆ. ಮಂಗಳೂರು ಮತ್ತು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಣ್ಣಪುಟ್ಟ ಮಳೆಗೂ ಗುಡ್ಡ ಕುಸಿಯುತ್ತಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರದ ಅಧಿಕಾರಿಗಳು, ಎಂಜಿನಿಯರ್‌ಗಳು ಸೇರಿದಂತೆ 4 ಜೆಸಿಬಿ, ಟಿಪ್ಪರ್ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.

    ಜಿಲ್ಲಾಡಳಿತ ಸುಮಾರು ಒಂದು ಲಕ್ಷ ಮರಳು ಮೂಟೆಗಳನ್ನ ರೆಡಿ ಮಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಡಿಲವಾದ ಮಣ್ಣು ಕುಸಿತವಾಗದಂತೆ ಕ್ರಮ ವಹಿಸಲು ಈ ಮರಳು ಮೂಟೆಗಳನ್ನ ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ಪ್ರಾಧಿಕಾರದ ಅಧಿಕಾರಿಗಳು ಕೂಡ ಪ್ರಕೃತಿ ವಿಕೋಪವಾಗಿದ್ದ ಸ್ಥಳಗಳಿಗೆ ಭೇಟಿ ನೀಡಿ ಅವಲೋಕನ ಮಾಡಿ ಡಿಸಿಗೆ ವರದಿ ನೀಡುತ್ತಿದ್ದಾರೆ ಎಂದು ಎನ್‍ಡಿಆರ್‍ಎಫ್ ಆಧಿಕಾರಿ ಉದಯ್ ಕುಮಾರ್ ದೀಕ್ಷಿತ್ ತಿಳಿಸಿದ್ದಾರೆ.

    ಈ ತನಕ ಜಿಲ್ಲೆಯ 14 ಕಡೆಗಳಲ್ಲಿ ಸಣ್ಣ ಮಟ್ಟದ ಬರೆ ಕುಸಿತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 275 ಮತ್ತು ಗ್ರಾಮೀಣ ರಸ್ತೆಗಳಲ್ಲೂ ಕುಸಿತ ಕಂಡುಬಂದಿದೆ. ಎಲ್ಲವನ್ನೂ ಸಮರೋಪಾದಿಯಲ್ಲಿ ಟಾಸ್ಕ್ ಫೋರ್ಸ್ ನಿಭಾಯಿಸಿದೆ. ಮೇ ತಿಂಗಳಿಂದಲೇ ಕೊಡಗಿನಲ್ಲಿ ಟಾಸ್ಕ್ ಫೋರ್ಸ್ ತಂಡ ಬೀಡು ಬಿಟ್ಟಿದ್ದು, ಅಪಾಯಕಾರಿ ಎಂದು ಗುರುತಿಸಲಾದ 13 ಸ್ಥಳಗಳಿಗೆ ಹೋಗಿ ಬಂದಿದೆ. ಸಣ್ಣ ಪ್ರಮಾಣದಲ್ಲಿ ಕುಸಿದ ಸ್ಥಳಕ್ಕೂ ಎನ್‍ಡಿಆರ್‍ಎಫ್ ಭೇಟಿ ಕೊಟ್ಟಿದೆ. ಕಂಟ್ರೋಲ್ ರೂಮ್‍ನಲ್ಲಿ ದೂರುಗಳನ್ನು ಸ್ವೀಕರಿಸಿ ಕೂಡಲೇ ಸಮಸ್ಯೆ ಪರಿಹರಿಸಲಾಗುತ್ತಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಪ್ರವಾಸಿತಾಣ ಮಾಂದಲ್ ಪಟ್ಟಿಯನ್ನು ಆಗಸ್ಟ್ 31 ರ ವರೆಗೆ ಬಂದ್ ಮಾಡಲಾಗಿದೆ.

  • ಭೂ ಕುಸಿತದಿಂದ ಕಾಡಿನಲ್ಲಿ ಸಿಲುಕಿದ್ದ 50 ಪ್ರಯಾಣಿಕರ ರಕ್ಷಣೆ

    ಭೂ ಕುಸಿತದಿಂದ ಕಾಡಿನಲ್ಲಿ ಸಿಲುಕಿದ್ದ 50 ಪ್ರಯಾಣಿಕರ ರಕ್ಷಣೆ

    ಹಾಸನ: ಭೂ ಕುಸಿತದಿಂದ ಕಾಡಿನಲ್ಲಿ ಸಿಲುಕಿದ್ದ 50 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ.

    ಹಾಸನದ ಸಕಲೇಶಪುರ ತಾಲೂಕಿನ ಬಿಸಿಲೆಘಾಟ್ ನ ಹಡ್ಲಗದ್ದೆ ಬಳಿ ಭೂ ಕುಸಿತ ಸಂಭವಿಸಿತ್ತು. ಈ ಅವಘಡದಿಂದಾಗಿ ಮಂಗಳವಾರ ರಾತ್ರಿ ಸಾರಿಗೆ ಇಲಾಖೆ ಬಸ್ ಪ್ರಯಾಣಿಕರು ಕಾಡಿನಲ್ಲಿ ಸಿಲುಕಿದ್ದು, ರಾತ್ರಿಯೆಲ್ಲ ಕುಡಿಯಲು ನೀರಿಲ್ಲದೆ ಪರದಾಡಿದ್ದರು. ಮರುದಿನ ಸ್ಥಳೀಯರ ನೆರವಿನಿಂದ ಬೆಟ್ಟವನ್ನೇರಿ ರಸ್ತೆಯ ಮತ್ತೊಂದು ಬದಿಗೆ ಬಂದು ಸೇರಿದ್ದಾರೆ. ಈ ವೇಳೆ ಸ್ಥಳೀಯರೇ ವಯೋವೃದ್ಧರನ್ನ ಬೆನ್ನಮೇಲೆ ಹೊತ್ತು ತಂದು ರಕ್ಷಿಸಿದ್ದಾರೆ.

    ಜನರ ನೋವಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸದ್ಯ ಮಡಿಕೇರಿ ಡಿಪೋ ಬಸ್ ಮೂಲಕ ತೆರಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv