Tag: Land fall

  • ಹೆದ್ದಾರಿಯಲ್ಲಿಯೇ ಭಾರೀ ಭೂಕುಸಿತ – ಮಣ್ಣಿನಡಿ ಸಿಲುಕಿರುವ ಬಸ್, ಕಾರ್, ಟ್ರಕ್

    ಹೆದ್ದಾರಿಯಲ್ಲಿಯೇ ಭಾರೀ ಭೂಕುಸಿತ – ಮಣ್ಣಿನಡಿ ಸಿಲುಕಿರುವ ಬಸ್, ಕಾರ್, ಟ್ರಕ್

    – 10 ಸಾವು, 50ಕ್ಕೂ ಹೆಚ್ಚು ಜನ ಅವಶೇಷಗಳಡಿ ಸಿಲುಕಿರುವ ಶಂಕೆ

    ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಮತ್ತು ಹರಿದ್ವಾರದ ಹೆದ್ದಾರಿಯಲ್ಲಿ ಭಾರೀ ಭೂ ಕುಸಿತವಾಗಿದ್ದು, ವಾಹನಗಳು ಮಣ್ಣಿನಡಿ ಸಿಲುಕಿವೆ. ಸುಮಾರು 10 ಜನ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನ ಮಣ್ಣಿನಡಿ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳೀಯರು, ಎನ್‍ಡಿಆರ್ ಎಫ್, ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

    ಭೂಕುಸಿತದಲ್ಲಿ ಒಂದು ಬಸ್, ಒಂದು ಟ್ರಕ್, ಒಂದು ಬೊಲೆರೋ ಮತ್ತು ಮೂರು ಟ್ಯಾಕ್ಸಿ ಸಿಲುಕಿವೆ. ಆದ್ರೆ ಈ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಜನರ ಸಂಖ್ಯೆ ನಿಖರವಾಗಿ ಗೊತ್ತಾಗಿಲ್ಲ. ಮಣ್ಣಿನಡಿ ಸಿಲುಕಿರುವ ಜನರು ಬದುಕುಳಿದಿರುವ ಸಾಧ್ಯತೆಗಳು ವಿರಳ ಎಂದು ವರದಿಯಾಗಿದೆ. ಸೇನಾ ಹೆಲಿಕಾಪ್ಟರ್ ನಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

    ಈ ಅವಘಡದಲ್ಲಿ ಬದುಕುಳಿದಿರುವ ಬಸ್ ಕಂಡಕ್ಟರ್ ಮಹೇಂದ್ರ ಪಾಲ್ ಬಿಲಾಸಪುರದ ನಿವಾಸಿ ಎಂದು ತಿಳಿದು ಬಂದಿದೆ. ಬಸ್ ನಲ್ಲಿ ಒಟ್ಟು 25 ಜನ ಪ್ರಯಾಣಿಕರಿದ್ದರು ಎಂದು ಮಹೇಂದ್ರ ಹೇಳುತ್ತಾರೆ. ಇತ್ತ ಬಸ್ ಚಾಲಕ ಗುಲಾಬ್ ಸಿಂಗ್ ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬಸ್ ನಲ್ಲಿ ಸುಮಾರು 25 ಜನ ಪ್ರಯಾಣಿಕರಿದ್ದರು. ನಿಗುಲ್ಸೇರಿ ತಲುಪುತ್ತಿದ್ದಂತೆ ಬೆಟ್ಟ ಕುಸಿಯಲಾರಂಭಿಸಿತು. ಭೂ ಕುಸಿತವಾಗ್ತಿದ್ದ ಸ್ಥಳದ 100 ಮೀಟರ್ ಹಿಂದೆಯೇ ಬಸ್ ನಿಲ್ಲಿಸಿದೇವು. ನಮ್ಮ ಹಿಂದೆಯೇ ಕಾರ್, ಟ್ರಕ್ ಸೇರಿದಂತೆ ಹಲವು ವಾಹನಗಳು ನಿಂತಿದ್ದವು. ಬದುಕಿತು ಜೀವ ಅನ್ನೋಷ್ಟರಲ್ಲಿಯೇ ನಮ್ಮ ಮೇಲ್ಭಾಗದಿಂದಲೇ ಮಣ್ಣು ಕುಸಿಯಲಾರಂಭಿಸಿತು. ನೋಡ ನೋಡುತ್ತಿದ್ದಂತೆ ನಮ್ಮೆಲ್ಲರ ಮೇಲೆ ಮಣ್ಣು ಬಿತ್ತು ಎಂದು ಘಟನೆಯನ್ನು ಚಾಲಕ ಮತ್ತು ನಿರ್ವಾಹಕ ವಿವರಿಸಿದ್ದಾರೆ.

  • ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ- ಶಿರಸಿಯಲ್ಲಿ ಮತ್ತೆ ಭೂ ಕುಸಿತ

    ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ- ಶಿರಸಿಯಲ್ಲಿ ಮತ್ತೆ ಭೂ ಕುಸಿತ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಮುಂದುವರಿದಿದ್ದು, ಶಿರಸಿ ತಾಲೂಕಿನ ಜಾಜಿ ಗುಡ್ಡದಲ್ಲಿ ಭೂ ಕುಸಿತ ಸಂಭವಿಸಿದೆ. ಇದರಿಂದಾಗಿ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.

    ಭೂ ಕುಸಿತ ಸಂಭವಿಸಿದ್ದರಿಂದ ಜಾಜಿಗುಡ್ಡ ಗ್ರಾಮದ 7 ಮನೆಗಳ ಜನರನ್ನು ಸ್ಥಳಾಂತರಿಸಲು ಶಿರಸಿ ತಹಶಿಲ್ದಾರ್ ಎಂ.ಆರ್.ಕುಲಕರ್ಣಿ ಆದೇಶ ನೀಡಿದ್ದಾರೆ. ಶಿರಸಿಯ ಹುಣಸೆ ಕೊಪ್ಪದಲ್ಲಿ ಸಹ ಭೂ ಕುಸಿತದಿಂದ ಬುಧವಾರ ಮಂಜುನಾಥ್ ಗಣಪ ಗೌಡ ಅವರು ಮೃತಪಟ್ಟಿದ್ದರು.

    ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಬ್ಬರದ ಮಳೆ ಮುಂದುವರೆದಿದ್ದು, ಈ ತಿಂಗಳ 18ರ ವರೆಗೂ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೆ ಹವಾಮಾನ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲಿ ಇನ್ನೂ ಒಂದು ವಾರಗಳ ಕಾಲ ಅಬ್ಬರದ ಮಳೆ ಮುಂದುವರೆಯುವ ಸೂಚನೆ ನೀಡಿದ್ದಾರೆ.

  • ಕೊಡಗಿನಲ್ಲಿ ಈ ಬಾರಿಯೂ 77 ಗ್ರಾಮಗಳಿಗೆ ಪ್ರವಾಹ, ಭೂ ಕುಸಿತದ ಭೀತಿ- ಸೋಮಣ್ಣ ಆತಂಕ

    ಕೊಡಗಿನಲ್ಲಿ ಈ ಬಾರಿಯೂ 77 ಗ್ರಾಮಗಳಿಗೆ ಪ್ರವಾಹ, ಭೂ ಕುಸಿತದ ಭೀತಿ- ಸೋಮಣ್ಣ ಆತಂಕ

    ಮಡಿಕೇರಿ: ಮಳೆಗಾಲ ಆರಂಭವಾಗಿದ್ದು, ಕೊಡಗು ಜಿಲ್ಲೆಯಲ್ಲಿ ಈ ಬಾರಿಯೂ 77 ಗ್ರಾಮಗಳಿಗೆ ಪ್ರವಾಹ ಮತ್ತು ಭೂಕುಸಿತದ ಭೀತಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.

    ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಳೆ ಸಂಬಂಧಿತ ಮುಂಜಾಗ್ರತಾ ಕ್ರಮಗಳ ಕುರಿತು ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 77 ಗ್ರಾಮಗಳು ಪ್ರವಾಹ ಮತ್ತು ಭೂಕುಸಿತದಿಂದ ಭಾದಿತವಾಗುವ ಸಾಧ್ಯತೆ ಇದ್ದು, 2,878 ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಅವರೆಲ್ಲರನ್ನೂ ಸ್ಥಳಾಂತರ ಮಾಡಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

    ಕೋವಿಡ್ ಸೋಂಕು ಇರುವುದರಿಂದ ಈ ಬಾರಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಕಾಳಜಿ ಕೇಂದ್ರಗಳನ್ನು ತೆರೆಯಲಾಗುವುದು. ಅಲ್ಲದೆ ಅವರನ್ನು ಸ್ಥಳಾಂತರ ಮಾಡುವ ಮೊದಲು ಸ್ವ್ಯಾಬ್ ಟೆಸ್ಟ್ ಮಾಡಿ ಬಳಿಕ ಸ್ಥಳಾಂತರ ಮಾಡಲಾಗುವುದು ಎಂದಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲಿ ಮಳೆಗಾಲಕ್ಕೂ ಮೊದಲೇ ಅಪಾಯ ಎದುರಾಗುವ ಗ್ರಾಮಗಳ ಬಗ್ಗೆ ಮಾಹಿತಿ ಕಲೆಹಾಕಿರುವ ಅಧಿಕಾರಿಗಳು, ಕೊಡಗಿಗೆ ಈ ಬಾರಿಯೂ ಅಪಾಯ ತಪ್ಪಿದ್ದಲ್ಲ ಎಂಬ ಸುಳಿವು ನೀಡಿದ್ದಾರೆ.

  • ಉತ್ತರ ಕನ್ನಡದಲ್ಲಿ ಭೂಕುಸಿತ- ಅಡಿಕೆ ತೋಟ ಸಂಪೂರ್ಣ ನಾಶ

    ಉತ್ತರ ಕನ್ನಡದಲ್ಲಿ ಭೂಕುಸಿತ- ಅಡಿಕೆ ತೋಟ ಸಂಪೂರ್ಣ ನಾಶ

    ಕಾರವಾರ: ಬೇಸಿಗೆಯಲ್ಲೂ ಶಿರಸಿಯಲ್ಲಿ ಭೂಕುಸಿತವಾಗಿದ್ದು, ಅಡಿಕೆ ತೋಟ ಸಂಪೂರ್ಣ ನಾಶವಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮತ್ತಿಘಟ್ಟದ ಕೆಳಗಿನಕೇರಿ ಗ್ರಾಮದಲ್ಲಿ ಇಂದು ಭೂ ಕುಸಿತವಾಗಿ ಜನರನ್ನು ಬೆಚ್ಚಿಬೀಳಿಸಿದೆ. ಕಳೆದ ವರ್ಷದ ಭಾರೀ ಮಳೆಯಿಂದಾಗಿ ಇಲ್ಲಿನ ಗುಡ್ಡಭಾಗದಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಇಂದು ದಿಢೀರ್ ಕುಸಿತಕಂಡಿದೆ.

    ಭೂ ಕುಸಿತದಿಂದಾಗಿ ಮಧುಸೂದನ್ ಹೆಗಡೆ ಅವರಿಗೆ ಸೇರಿದ ಒಂದು ಎಕರೆ ಅಡಿಕೆ ತೋಟ ಸಂಪೂರ್ಣ ನಾಶವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, 15 ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

  • ಭೂ ಕುಸಿತದಿಂದ ಮಣ್ಣಿನ ಅವಶೇಷದಡಿ ಸಿಲುಕಿದ್ದ ಬಾಲಕಿಯ ರಕ್ಷಣೆ

    ಭೂ ಕುಸಿತದಿಂದ ಮಣ್ಣಿನ ಅವಶೇಷದಡಿ ಸಿಲುಕಿದ್ದ ಬಾಲಕಿಯ ರಕ್ಷಣೆ

    ಗದಗ: ಭೂ ಕುಸಿತದಿಂದ ಮನೆಯ ಒಳಾಂಗ ಕುಸಿತವಾಗಿ ಮಣ್ಣಿನ ಅವಶೇಷದಡಿ ಸಿಲುಕಿ ನರಳಾಡಿದ್ದ ಬಾಲಕಿಯ ರಕ್ಷಣೆ ಮಾಡಿರುವ ಘಟನೆ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಕುರಬಗೇರಿ ಪ್ರದೇಶದ ನಿಂಗಪ್ಪ ನುಗ್ಗಾನಟ್ಟಿ ಎಂಬುವರ ಮನೆಯಲ್ಲಿ ಭೂಕುಸಿತವಾಗಿ, ಸ್ವಲ್ಪ ಭಾಗ ಮನೆಯ ಒಳಾಂಗಣ ಸಹ ಕುಸಿದಿದೆ. ಈ ವೇಳೆ ಮನೆಯ ಮುಂಗಾದಲ್ಲಿದ್ದ 14 ವರ್ಷದ ಕಾವ್ಯಾ ನುಗ್ಗಾನಟ್ಟಿ ಮಣ್ಣಿನ ಅವಶೇಷಗಳಡಿ ಸಿಲುಕಿ ಸುಮಾರು ಎರಡು ಗಂಟೆ ನರಳಾಡಿದ್ದಳು.

    ಮನೆ ಕುಸಿದ ತಕ್ಷಣ ಬಾಲಕಿಯ ರಕ್ಷಣೆಗೆ ಕಾರ್ಯಪ್ರವೃತ್ತರಾದ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಸುಮಾರು 2 ಗಂಟೆಗಳ ಕಾಲ ಬಾಲಕಿಯ ಮೇಲೆ ಬಿದ್ದ ಕಲ್ಲು, ಮಣ್ಣು, ಕಟ್ಟಿಗೆಗಳನ್ನ ತೆರುವುಗೊಳಿಸಿ ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಬಾಲಕಿ ಕಾವ್ಯಾ ಬದುಕುಳಿದಿದ್ದಾಳೆ. ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

    ನರಗುಂದ ಪಟ್ಟಣದಲ್ಲಿ ಪದೇ ಪದೇ ಭೂ ಕುಸಿತದ ಅನೇಕ ದುರ್ಘಟನೆಗಳು ಸಂಭವಿಸುತ್ತಲೇ ಇವೆ. ಈ ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಅಂತರ್ಜಲ ಹೆಚ್ಚಳದಿಂದ ಪದೇ ಪದೇ ಭೂಕುಸಿತವಾಗುತ್ತಿದೆ ಎನ್ನುವ ಕಾರಣ ಒಂದಾದರೆ, ನರಗುಂದ ಬಾಬಾಸಾಹೇಬ್ ಆಳ್ವಿಕೆಯ ಸುರಂಗ ಮಾರ್ಗಗಳಿದ್ದವು ಮತ್ತು ದವಸ-ಧಾನ್ಯಗಳನ್ನು ಸಂಗ್ರಹಿಸಿಡಲು ಕಣಿಜಗಳಿದ್ದವು ಎನ್ನಲಾಗುತ್ತಿದೆ. ಆದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಸಿ.ಸಿ ಪಾಟೀಲ್ ತವರಲ್ಲೆ ಭೂಕುಸಿತ ಆಗುತ್ತಿದ್ದರೂ ಇದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯುವಲ್ಲಿ ವಿಫಲವಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

     

  • ಭೂಕುಸಿತದಿಂದ ಮನೆ ಕಳೆದುಕೊಂಡಿದ್ದ ಬಡ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದ ಕೊರೊನಾ

    ಭೂಕುಸಿತದಿಂದ ಮನೆ ಕಳೆದುಕೊಂಡಿದ್ದ ಬಡ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದ ಕೊರೊನಾ

    – ಲಾಕ್‍ಡೌನ್‍ನಿಂದ ಕೂಲಿ ಕಳೆದುಕೊಂಡ ಕುಟುಂಬ

    ಮಡಿಕೇರಿ: ಕೊರೊನಾ ಮಹಾಮಾರಿ ಪ್ರತಿಯೊಬ್ಬರ ಜೀವನನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಭೂಕುಸಿತದಲ್ಲಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಕುಟುಂಬ ಇದೀಗ ಲಾಕ್‍ಡೌನ್ ನಿಂದ ಕೂಲಿಯನ್ನೂ ಕಳೆದುಕೊಂಡು ಒಂದೊತ್ತಿನ ಗಂಜಿಗೂ ಪರಿದಾಡುತ್ತಿದೆ. ಹಲವು ಖಾಯಿಲೆಗಳಿಂದ ನರಳುವ ತಂದೆ, ತಾಯಿಯನ್ನು ಸಾಕುವುದು ಪಿಯುಸಿ ಓದುತ್ತಿದ್ದ ಮಗನ ಹೆಗಲಿಗೆ ಬಿದ್ದಿದೆ.

    ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟಂಗೊಲ್ಲಿ ಗ್ರಾಮದ ಪ್ರೇಮ ಮತ್ತು ಕಣ್ಣನ್ ದಂಪತಿಯ ಕುಟುಂಬ ಸಂಕಷ್ಟ ಎದುರಿಸುತ್ತಿದೆ. ಎರಡು ವರ್ಷಗಳ ಮುಂಚೆ ಸಣ್ಣ ಮನೆಯಲ್ಲಿ ಹೇಗೋ ಜೀವನ ನಡೆಸುತ್ತಿದ್ದ ಕುಟುಂಬ 2018 ರಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇಡೀ ಮನೆ ನೆಲಸಮವಾಗಿತ್ತು. ಅಂದಿನಿಂದ ಕೂಲಿ ಮಾಡುತ್ತಿದ್ದ ಕುಟುಂಬದ ಯಜಮಾನ ಕಣ್ಣನ್ ಅವರಿಗೆ ಇದ್ದಕ್ಕಿದ್ದಂತೆ ಕಣ್ಣು ಕಾಣಿಸದಂತೆ ಆಗಿತ್ತು. ನಂತರ ಮನೆಯ ಆಧಾರ ಸ್ಥಂಭವೇ ಇಲ್ಲದಂತೆ ಆಗಿತ್ತು. ಹೀಗಾಗಿ ಬೇರೆ ದಾರಿಯಿಲ್ಲದೆ ಪಿಯುಸಿ ಓದುತ್ತಿದ್ದ ಮಗ ಜನಾರ್ಧನ್ ಕಾಲೇಜ್ ಬಿಟ್ಟು ಕೂಲಿ ಮಾಡಿ ಅಪ್ಪ, ಅಮನ್ನನ್ನು ಸಾಕುತ್ತಿದ್ದಾರೆ.

    ಇದೀಗ ದೇಶಾದ್ಯಂತ ಗಾಳಿವೇಗದಲ್ಲಿ ಹಬ್ಬಿದ ಕೊರೊನಾ ಮಹಾಮಾರಿ ಕೂಲಿಯನ್ನೂ ಕಿತ್ತುಕೊಂಡಿದೆ. ತಾಯಿಗೆ ಚಿಕಿತ್ಸೆ ಕೊಡಿಸಲು ಒಂದೂವರೆ ಲಕ್ಷ ಸಾಲ ಮಾಡಿರುವ ಇನ್ನೂ ಏನೂ ಅರಿಯದ ಜನಾರ್ಧನ್, ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದನಂತೆ. 2018ರ ಆಗಸ್ಟ್ ತಿಂಗಳಲ್ಲಿ ಭೂಕುಸಿತದಿಂದ ಮನೆ ಕಳೆದುಕೊಂಡ ಬಡಕುಟುಂಬ ಮನೆ ಕಟ್ಟಿಕೊಡುವಂತೆ ಸೆಪ್ಟೆಂಬರ್ ತಿಂಗಳಲ್ಲಿ ತಹಶೀಲ್ದಾರ್ ಗೆ ಮನವಿ ಕೊಟ್ಟಿದೆ. ಆದರೆ ಇದುವರೆಗೆ ಯಾವ ಅಧಿಕಾರಿಗಳು ಕ್ಯಾರೆ ಅಂದಿಲ್ಲ.

    ಪಕ್ಕದ ಮನೆಯಲ್ಲಿ ಬಾಡಿಗೆ ಇದ್ದ ಕುಟುಂಬಕ್ಕೆ ಜಿಲ್ಲಾಡಳಿತ ಕನಿಷ್ಠ ಬಾಡಿಗೆ ಹಣವನ್ನು ನೀಡಿಲ್ಲ. ಬಾಡಿಗೆ ಕಟ್ಟಲು ಹಣವಿಲ್ಲದೆ ಬಾಡಿಗೆ ಮನೆಯನ್ನು ಬಿಟ್ಟು ಬಂದು ಸದ್ಯ ಗುಡಿಸಲು ಕಟ್ಟಿಕೊಂಡು ಬದುಕುತ್ತಿದ್ದೇವೆ. ಗುಡಿಸಿಲಿನಲ್ಲಿ ಇಬ್ಬರು ಮಾತ್ರವೇ ಮಲಗಲು ಸಾಧ್ಯ. ಪತಿ ಹೊರಗೆ ಮಲಗುವ ಸ್ಥಿತಿ ಎದುರಾಗಿದೆ ಪ್ರೇಮ ಕಣ್ಣೀರಿಡುತ್ತಿದ್ದಾರೆ. ತಾವೇ ಮನೆ ನಿರ್ಮಿಸಿಕೊಳ್ಳಲು ಸಾಲ ಮಾಡಿ ಮನೆಯ ಅಡಿಪಾಯ ಹಾಕಿದ್ದಾರೆ. ಇದುವರೆಗೆ ಪರಿಹಾರ ನೀಡಿಲ್ಲ. ನಾವು ಬದುಕುವುದಾದರೂ ಹೇಗೆ ಎಂದು ಕುಟುಂಬ ರೋಧಿಸುತ್ತಿದೆ.

  • ನರಗುಂದದಲ್ಲಿ 20 ಅಡಿಯಷ್ಟು ಭೂಮಿ ಕುಸಿತ- ಜನರಲ್ಲಿ ಆತಂಕ

    ನರಗುಂದದಲ್ಲಿ 20 ಅಡಿಯಷ್ಟು ಭೂಮಿ ಕುಸಿತ- ಜನರಲ್ಲಿ ಆತಂಕ

    ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮನೆಯ ಮುಂದೆ ಭೂ ಕುಸಿತವಾಗಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.

    ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ತವರಲ್ಲೇ ಭೂ ಕುಸಿತ ಸಂಭವಿಸಿದೆ. ಜಿಲ್ಲೆಯ ನರಗುಂದದ ಶಂಕರಲಿಂಗ ಕಾಲೋನಿಯ ಅಂಬೋಜಿ ಪೇಟೆಯವರ ಮನೆ ಮುಂದೆ ಭೂಮಿ ಕುಸಿದಿದೆ. ಬೆಳಗ್ಗೆ ಈ ಘಟನೆ ನಡೆದಿದ್ದು, ಕ್ಷಣಾರ್ಧದಲ್ಲಿ ಬಾರಿ ಅನಾಹುತ ತಪ್ಪಿದೆ. ಸುಮಾರು 20 ಅಡಿಯಷ್ಟು ಭೂಮಿ ಕುಸಿತವಾಗಿದೆ. ಇದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

    ಅಂತರ್ಜಲ ಹೆಚ್ಚಳ, ನರಗುಂದ ಬಾಬಾಸಾಹೇಬ್ ಆಳ್ವಿಕೆಯ ಸುರಂಗ ಮಾರ್ಗ, ಧಾನ್ಯಗಳ ಸಂಗ್ರಹಣೆಗೆ ತೆಗೆದ ಕಣಿಜ ಇರಬಹುದು. ಹೀಗಾಗಿ ಭೂಮಿ ಕುಸಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಭೂ ತಜ್ಞರಿಂದಲೂ ಸ್ಪಷ್ಟನೆ ಸಿಗುತ್ತಿಲ್ಲ. ಘಟನೆ ನಡೆದ ವಿಷಯ ತಿಳಿದ ನರಗುಂದ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರು ಇದೇ ಕ್ಷೇತ್ರದವರಾಗಿರುವುದರಿಂದ ಕಾಳಜಿ ವಹಿಸಿ ಇದರಿಂದ ಮುಕ್ತಿ ಕೊಡಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.

  • ಮಡಿಕೇರಿಯಲ್ಲಿ ಭೂ ಕುಸಿತದ ಆತಂಕ- ರಾತ್ರೋರಾತ್ರಿ ಕುಟುಂಬಗಳು ಸ್ಥಳಾಂತರ

    ಮಡಿಕೇರಿಯಲ್ಲಿ ಭೂ ಕುಸಿತದ ಆತಂಕ- ರಾತ್ರೋರಾತ್ರಿ ಕುಟುಂಬಗಳು ಸ್ಥಳಾಂತರ

    ಮಡಿಕೇರಿ: ಮುಂಗಾರು ಆರಂಭವಾಗಿ ಕೇವಲ ಒಂದು ವಾರವಷ್ಟೇ ಕಳೆದಿದೆ. ಅದರಲ್ಲೂ ಮಳೆಯ ತೀವ್ರತೆ ಅಷ್ಟೇನು ಇಲ್ಲ. ಕಡಿಮೆ ಮಳೆಗೇ ಜಿಲ್ಲೆಯಲ್ಲಿ ಪ್ರಾಕೃತಿಕವಾಗಿ ಮತ್ತೇನಾದರೂ ದುರಂತ ಸಂಭವಿಸುವುದೇ ಎಂಬ ಆತಂಕ ಎದುರಾಗಿದೆ.

    ಕೊಡಗು ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ಸಂಭವಿಸಿದ ಭೀಕರ ಭೂಕುಸಿತ ಮತ್ತು ಪ್ರವಾಹದ ದುರಂತಗಳು ಜಿಲ್ಲೆಯ ಜನರ ಕಣ್ಮುಂದೆ ಇವೆ. ಅದಾಗಲೇ ಜಿಲ್ಲೆಯಲ್ಲಿ ಮತ್ತೊಂದು ದುರಂತದ ಲಕ್ಷಣ ಎದುರಾಗಿದೆ. ಒಂದು ವಾರದಲ್ಲಿ ಮೂರ್ನಾಲ್ಕು ದಿನದಿಂದ ಸಂಜೆ ವೇಳೆ ಸುರಿದ ಮಳೆಗೆ ಮಡಿಕೇರಿಯ ಚಾಮುಂಡೇಶ್ವರಿ ನಗರದ ಶ್ಯಾಮ್ ಅವರ ಮನೆಯ ಬಳಿ ಸ್ವಲ್ಪ ಪ್ರಮಾಣದ ಭೂ ಕುಸಿತವಾಗಿದೆ. ಇದು ಸುತ್ತಲಿನ ಹಲವು ಕುಟುಂಬಗಳ ಆತಂಕಕ್ಕೆ ಕಾರಣವಾಗಿದೆ.

    ಬುಧವಾರ ಸಂಜೆ ಸ್ವಲ್ಪ ಪ್ರಮಾಣದ ಭೂ ಕುಸಿತವಾಗುತ್ತಿದ್ದಂತೆ ಜನರು ಭಯಗೊಂಡು ಜಿಲ್ಲಾ ಸಹಾಯವಾಣಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು, ಎನ್‍ಡಿಆರ್ ಎಫ್ ತಂಡ ಸೇರಿದಂತೆ ನೋಡಲ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಲ್ಲದೆ ತಕ್ಷಣವೇ ಐದು ಕುಟುಂಬಗಳನ್ನು ಸ್ಥಳಾಂತರಿಸಿದ್ದಾರೆ. ಆದರೆ ಇನ್ನೂ ಕೂಡ ಕೆಲವು ಮನೆಗಳಿಗೆ ಇದರಿಂದ ಆತಂಕ ಎದುರಾಗಿದ್ದು, ಮನೆಗಳಿಂದ ನಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಬೇಕೆಂದು ಜನ ಆಗ್ರಹಿಸಿದ್ದಾರೆ.

    ಚಾಮುಂಡೇಶ್ವರಿ ನಗರದ ಶ್ಯಾಮ್ ಅವರ ಮನೆಯ ಸುತ್ತಮುತ್ತಲಿನ ಐದು ಕುಟುಂಬಗಳನ್ನು ರಾತ್ರೋ ರಾತ್ರಿ ಸ್ಥಳಾಂತರ ಮಾಡಲಾಗಿದೆ. ಉಳಿದಿರುವ ಮನೆಗಳಲ್ಲೂ ಮಕ್ಕಳು, ವೃದ್ಧರಿದ್ದು, ಭೂ ಕುಸಿತವಾದಲ್ಲಿ ಭಾರೀ ಅನಾಹುತ ಎದುರಾಗುವ ಸಾಧ್ಯತೆ ಇದೆ. ಹೀಗಾಗಿಯೇ ಬೆಳಿಗ್ಗೆ ಉಪವಿಭಾಗ ಅಧಿಕಾರಿ ಜವರೇಗೌಡ, ನಗರ ನೋಡೆಲ್ ಅಧಿಕಾರಿ ಅರುಂಧತಿ ಸೇರಿದಂತೆ ಮಡಿಕೇರಿ ನಗರ ಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

    ಭಾಗ್ಯ ಅವರ ಮನೆ ಮತ್ತು ಎದುರಿನ ಮನೆಗಳು ತೀವ್ರ ಅಪಾಯದಲ್ಲಿ ಇರುವುದರಿಂದ ಎರಡು ಮನೆಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡಲಾಗುವುದು. 2018ರಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ವಿತರಣೆ ಮಾಡಲು ಜಂಬೂರಿನಲ್ಲಿ ನಿರ್ಮಿಸುತ್ತಿರುವ ಮನೆಗಳಲ್ಲಿ ಈ ಇಬ್ಬರಿಗೂ ಮನೆಗಳನ್ನು ಕೊಡಲಾಗುವುದು. ಅಲ್ಲದೆ ತೀರಾ ಆತಂಕಗೊಳ್ಳುವ ರೀತಿಯಲ್ಲಿ ಭೂ ಕುಸಿತವಾಗಿಲ್ಲ. ಸಣ್ಣ ಪ್ರಮಾಣದಲ್ಲಿ ಬರೆ ಕುಸಿದಿದ್ದು, ಯಾವುದೇ ತೊಂದರೆ ಇಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಉಪವಿಭಾಗಾಧಿಕಾರಿ ಜವರೇಗೌಡ ಹೇಳಿದ್ದಾರೆ.

  • ಬೆಂಗಳೂರಲ್ಲಿ ರಸ್ತೆ ಮಧ್ಯೆ ಏಕಾಏಕಿ ಭೂ ಕುಸಿತ

    ಬೆಂಗಳೂರಲ್ಲಿ ರಸ್ತೆ ಮಧ್ಯೆ ಏಕಾಏಕಿ ಭೂ ಕುಸಿತ

    ಬೆಂಗಳೂರು: ಸಿಲಿಕಾನ್ ಸಿಟಿಯ ಆರ್‌ಎಂಸಿ ಯಾರ್ಡ್‌ನಲ್ಲಿ ಇದ್ದಕ್ಕಿದ್ದಂತೆ ಭೂ ಕುಸಿತ ಸಂಭವಿಸಿದ್ದು, ವಾಹನ ಸವಾರರನ್ನು ಆತಂಕಕ್ಕೀಡು ಮಾಡಿದೆ.

    ನಗರದ ಆರ್‌ಎಂಸಿ ಯಾರ್ಡ್‌ನ ಎಂಇಐ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಏಕಾಏಕಿ ಭೂ ಕುಸಿತ ಉಂಟಾಗಿದೆ. ಸುಮಾರು 12 ಅಡಿಗಿಂತ ಹೆಚ್ಚು ಆಳಕ್ಕೆ ರಸ್ತೆ ಕುಸಿದು ಸ್ಥಳೀಯರಲ್ಲಿ ಹಾಗೂ ವಾಹನಸವಾರರಲ್ಲಿ ಭಯ ಮೂಡುವಂತೆ ಮಾಡಿದೆ. ಎಂಇಐ ರಸ್ತೆಯ ಮಧ್ಯಭಾಗದಲ್ಲಿ ಭೂ ಕುಸಿತವಾಗಿದ್ದು, ಕೆಳಗೆ ನೀರು ಹರಿಯುತ್ತಿರುವುದರಿಂದ ಮತ್ತಷ್ಟು ಭೂಮಿ ಕುಸಿಯುವ ಆತಂಕದಲ್ಲಿ ಜನ ಇದ್ದಾರೆ.

    ಮಣ್ಣು ಪೂರ್ತಿ ಕುಸಿದಿರುವುದರಿಂದ ಒಂದು ಭಾಗದ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ. ರಸ್ತೆ ಸಮೀಪದಲ್ಲಿ ಓಡಾಡಲು ಜನ ಭಯ ಪಡುತ್ತಿದ್ದಾರೆ. ನಿನ್ನೆ ಮಧ್ಯಾಹ್ನ ಲಾರಿಯೊಂದು ಹಾದು ಹೋದ ನಂತರ ಈ ಭೂ ಕುಸಿತ ಸಂಭವಿಸಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಈ ಕುರಿತು ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸದ್ಯ ಸ್ಥಳೀಯರೇ ಭೂಕುಸಿತವಾದ ರಸ್ತೆಗೆ ಬ್ಯಾರಿಕೇಡ್ ಹಾಕಿ ಹಗ್ಗ ಕಟ್ಟಿದ್ದಾರೆ. ಕೆಳಗೆ ನೀರು ಹರಿಯುತ್ತಿರುವುದರಿಂದ ಮತ್ತಷ್ಟು ಮಣ್ಣು ಕುಸಿಯುವ ಆತಂಕ ಎದುರಾಗಿದೆ.

    ಈ ಹಿಂದೆ ಸುಮ್ಮನಹಳ್ಳಿ ಮೇಲ್ಸೇತುವೆ ಮೇಲೆ ಸಹ ಗುಂಡಿ ಬಿದ್ದು ಆತಂಕ ಸೃಷ್ಟಿಸಿತ್ತು. ನಂತರ ದುರಸ್ಥಿ ಮಾಡಲಾಯಿತು. ಈಗಲೂ ಸಹ ಸುಮ್ಮನಹಳ್ಳಿ ಮೇಲ್ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಇದರ ಬಳಿಕ ಇದೀಗ ಆರ್‍ಎಂಸಿ ಯಾರ್ಡ್ ಬಳಿ ರಸ್ತೆ ಮಧ್ಯೆ ಭೂ ಕುಸಿತ ಸಂಭವಿಸಿದೆ.

  • ಷರತ್ತು ವಿಧಿಸಿ ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನಗಳಿಗೆ ಅನುಮತಿ

    ಷರತ್ತು ವಿಧಿಸಿ ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನಗಳಿಗೆ ಅನುಮತಿ

    ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಷರತ್ತು ವಿಧಿಸಿ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

    ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶ ಪ್ರಕಟಿಸಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಮಾತ್ರ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

    ಕಳೆದ ತಿಂಗಳು ಸುರಿದ ಮಹಾಮಳೆಯಿಂದಾಗಿ ಗುಡ್ಡ ಕುಸಿದು, ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿತ್ತು. ಹೀಗಾಗಿ ಆಗಸ್ಟ್ 9 ರಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚಾರ ಬಂದ್ ಆಗಿದ್ದರಿಂದ ಚಿಕ್ಕಮಗಳೂರು-ದಕ್ಷಿಣ ಕನ್ನಡ ಸಂಪರ್ಕ ಕಡಿತವಾಗಿತ್ತು.

    ಬಿರುಗಾಳಿ ಸಹಿತ ಭಾರೀ ಮಳಯಾದ ಪರಿಣಾಮ ಹಾಳಾದ ರಸ್ತೆಯನ್ನು ಶಾಶ್ವತವಾಗಿ ದುರಸ್ತಿ ಮಾಡಲು ಸುಮಾರು 300 ಕೋಟಿ ರೂ. ಅನುದಾನದ ಅವಶ್ಯಕತೆಯಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

    ಷರತ್ತು ಏನು?
    ಘಾಟಿಯಲ್ಲಿ ಪ್ರತಿ ಗಂಟೆಗೆ 20 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸುವುದು, ಭೂ ಕುಸಿತದಿಂದ ರಸ್ತೆಗೆ ಸಮಸ್ಯೆ ಆಗಿರುವುದರಿಂದ ಜಾಗರೂಕತೆಯಿಂದ ಚಾಲನೆ ಮಾಡುವುದು, ಫೋಟೋಗ್ರಫಿ, ಸೆಲ್ಫಿ ತೆಗೆಯುವುದಕ್ಕೆ ನಿಷೇಧ ವಿಧಿಸಲಾಗಿದೆ.

    ಕಾರುಗಳು, ಜೀಪು, ಟೆಂಪೋ, ವ್ಯಾನ್, ಎಲ್‍ಸಿವಿ(ಮಿನಿ ವ್ಯಾನ್), ಅಂಬುಲೆನ್ಸ್, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬುಲೆಟ್ ಟಾಂಕರ್ಸ್, ಷಿಪ್ ಕಾರ್ಗೋ ಕಾಂಟೈನರ್, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್, ಸಾರ್ವಜನಿಕರು ಸಂಚರಿಸುವ ಎಲ್ಲ ಸರ್ಕಾರಿ, ಖಾಸಗಿ ಬಸ್ಸುಗಳ ಸಂಚಾರವನ್ನು ನಿಷೇಧಿಸಲಾಗಿದೆ.