Tag: Land collapse

  • ಗದಗದಲ್ಲಿ ಮತ್ತೆ ಭೂಕುಸಿತ – ಮನೆಯೊಳಗೆ ಬಿತ್ತು ಬೃಹತ್ ಹೊಂಡ

    ಗದಗದಲ್ಲಿ ಮತ್ತೆ ಭೂಕುಸಿತ – ಮನೆಯೊಳಗೆ ಬಿತ್ತು ಬೃಹತ್ ಹೊಂಡ

    ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತವಾಗಿದ್ದು, ಮನೆಯೊಂದರಲ್ಲಿ ಬಿದ್ದ ಬೃಹತ್ ಹೊಂಡವನ್ನು ನೋಡಿ ಜನರು ಆತಂಕಕ್ಕೀಡಾಗಿದ್ದಾರೆ.

    ನರಗುಂದ ಪಟ್ಟಣದ ಕಸಬಾ ಕಾಲೋನಿಯಲ್ಲಿ ಪದೇ ಪದೇ ಭೂಮಿ ಕುಸಿಯುತ್ತಿದ್ದು, ಜನರಲ್ಲಿ ದಿನೇ ದಿನೇ ಆತಂಕ ಹೆಚ್ಚಾಗುತ್ತಿದೆ. ಕಸಬಾ ಕಾಲೋನಿಯ ನಿವಾಸಿ ನಬೀಸಾಬ್ ಮೊಕಾಶಿ ಅವರ ಮನೆಯಲ್ಲಿ ಭೂಮಿ ಕುಸಿತವಾಗಿದ್ದು, ಮನೆಯ ಸದಸ್ಯರು ತಕ್ಷಣ ಮನೆಬಿಟ್ಟು ಓಡಿಬಂದಿದ್ದಾರೆ. ಒಂದೇ ತಿಂಗಳಲ್ಲಿ ಹತ್ತಾರು ಬಾರಿ ಭೂಮಿ ಏಕಾಏಕಿ ಕುಸಿದ ಘಟನೆ ನಡೆದಿದ್ದು ಜನರು ಕಂಗಾಲಾಗಿದ್ದಾರೆ.

    ಸಚಿವ ಸಿ.ಸಿ ಪಾಟೀಲ್ ಕ್ಷೇತ್ರದಲ್ಲೇ ಪದೇ ಪದೇ ಭೂಮಿ ಕುಸಿಯುತ್ತಿದೆ. ಇದರಿಂದ ಮನೆಯ ಗೋಡೆಗಳು ಬಿರುಕುಗೊಳ್ಳುತ್ತಿವೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದು, ನಿಖರ ಕಾರಣ ತಿಳಿದು ಬಾರದ ಹಿನ್ನೆಲೆಯಲ್ಲಿ ನರಗುಂದ ಜನರು ಭಯ, ಆತಂಕದೊಂದಿಗೆ ದಿನ ಕಳೆಯುತ್ತಿದ್ದಾರೆ.

    ಈ ಹಿಂದೆ ಕೂಡ ಕಸಬಾ ಓಣಿಯಲ್ಲಿಯೇ ಭೂಕುಸಿತ ಸಂಭವಿಸಿತ್ತು. ಇಲ್ಲಿಯ ನಿವಾಸಿ ಮಹಾಂತೇಶಗೌಡ, ಪ್ರಭುಗೌಡ ಅವರ ಮನೆ ಮುಂಭಾಗದಲ್ಲಿ ಭೂಮಿ ಕುಸಿದಿತ್ತು. ಪರಿಣಾಮ ಆ ಸ್ಥಳದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಮಣ್ಣಿನಡಿ ಸಿಲುಕಿಕೊಂಡಿತ್ತು. ಈ ವೇಳೆ ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯರು ಆಳಕ್ಕೆ ಇಳಿಯುತ್ತಿದ್ದ ಟ್ರ್ಯಾಕ್ಟರ್‌ನನ್ನು ಜೆಸಿಬಿ ಸಹಾಯದಿಂದ ಮೇಲಕ್ಕೆ ಎತ್ತಿದ್ದರು.

    ಅಷ್ಟೇ ಅಲ್ಲದೆ ಅಕ್ಟೋಬರ್‌ನಲ್ಲಿ ಇದೇ ಓಣಿಯ ನಿವಾಸಿ ರತ್ನಾಕರ ದೇಶಪಾಂಡೆ ಅವರ ಮನೆ ಹಿಂಭಾಗದಲ್ಲಿ ಭೂಮಿ ಕುಸಿದಿತ್ತು. ಆಗ ಗುಂಡಿಯಲ್ಲಿ ರತ್ನಾಕರ ಅವರು ಸಿಲುಕಿಕೊಂಡಿದ್ದರು. ರತ್ನಾಕರ ಅವರು ತಮ್ಮ ಮನೆಯ ಹಿತ್ತಲಿನಲ್ಲಿ ಹೂ ಕಿತ್ತು ತರುವ ವೇಳೆ ದಿಢೀರ್ ಭೂ ಕುಸಿತವಾಗಿತ್ತು. ಪರಿಣಾಮ ರತ್ನಾಕರ ಅವರು ಸುಮಾರು 10 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದರು. ಅವರ ನರಳಾಟ, ಕೂಗಾಟ ಕೇಳಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಬಂದು ರಕ್ಷಣೆ ಮಾಡಿದ್ದರು.

  • ಕೊಡಗಿನಲ್ಲಿ ಕೊಚ್ಚಿಹೋಯ್ತು ನಾಲ್ಕು ಎಕ್ರೆ ಕಾಫಿತೋಟ – ಬಿರುನಾಣಿಯಲ್ಲಿ ಭಾರೀ ಭೂಕುಸಿತ

    ಕೊಡಗಿನಲ್ಲಿ ಕೊಚ್ಚಿಹೋಯ್ತು ನಾಲ್ಕು ಎಕ್ರೆ ಕಾಫಿತೋಟ – ಬಿರುನಾಣಿಯಲ್ಲಿ ಭಾರೀ ಭೂಕುಸಿತ

    ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದು ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ. ಈ ನಡುವೆ ವರುಣನ ರೌದ್ರಾವತಾರಕ್ಕೆ ಭೂಕುಸಿತವಾಗಿ ನಾಲ್ಕು ಎಕ್ರೆ ಕಾಫಿತೋಟ ಕೊಚ್ಚಿಹೋಗಿದೆ.

    ವಿರಾಜಪೇಟೆ ತಾಲ್ಲೂಕಿನ ಬಿರುನಾಣಿಯಲ್ಲಿ ಭಾರೀ ಭೂಕುಸಿತವಾಗಿದ್ದು, ಕರ್ತಮಾಡಿನ ನಿವಾಸಿ ಸುಜನ್ ಅವರ ಕಾಫಿತೋಟ ಸಂಪೂರ್ಣ ಕೊಚ್ಚಿಹೋಗಿದೆ. ದಕ್ಷಿಣ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆ ಜನರಲ್ಲಿ ಮತ್ತೆ ಆತಂಕ ಮನೆಮಾಡಿದೆ.

    ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣಕ್ಕೆ ಜಿಲ್ಲೆಯ ಹಾರಂಗಿ ಜಲಾಶಯದ ನೀರಿನ ಒಳಹರಿವು ಹೆಚ್ಚುತ್ತಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ 30 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಆದ್ದರಿಂದ ನದಿ ತಟದಲ್ಲಿರುವ ಸಾರ್ವಜನಿಕರು ಎಚ್ಚರದಿಂದಿರಲು ಜಿಲ್ಲಾಡಳಿತ ಸೂಚಿಸಿದೆ. ಕಾವೇರಿ ನದಿ ನೀರಿನಿಂದ ನಾಪೋಕ್ಲುವಿನ ಹಲವು ಬಡಾವಣೆಗಳಿಗೆ ನೀರು ನುಗ್ಗಿ, 150 ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸದ್ಯ ನಿರಾಶ್ರಿತರಿಗೆ ನಾಪೋಕ್ಲಿನ ಕಲ್ಲುಮಟ್ಟೆ ಸಮುದಾಯ ಭವನದಲ್ಲಿ ಆಶ್ರಯ ಕಲ್ಪಿಸಿಕೊಡಲಾಗಿದೆ. ಆದರೆ ಸ್ಥಳದಲ್ಲಿ ಯಾವುದೇ ಸೌಲಭ್ಯವಿಲ್ಲದೆ ನಿರಾಶ್ರಿತರು ಪರದಾಡುತ್ತಿದ್ದಾರೆ. ಅಲ್ಲದೆ ತಕ್ಷಣವೇ ಸೌಲಭ್ಯ ಕಲ್ಪಿಸಿಕೊಡಿ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

    ಇತ್ತ ಮಡಿಕೇರಿ ತಾಲೂಕಿನ ಭೇತ್ರಿ ಹೊಳೆ ಉಕ್ಕಿ ಹರಿಯುತ್ತಿರುವ ಪರಿಣಾಮ ಮಡಿಕೇರಿ ವಿರಾಜಪೇಟೆ ಸಂಪರ್ಕ ರಸ್ತೆ ಜಲಾವೃತವಾಗಿದೆ. ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಕಳೆದ ಬಾರಿಯಂತೆ ಈ ವರ್ಷವೂ ಕುಶಾಲನಗರ ಮತ್ತೆ ಮುಳುಗುವ ಭೀತಿಯಲ್ಲಿದೆ. ಕುಶಾಲನಗರ ಕುವೆಂಪು ಬಡಾವಣೆ ಮತ್ತು ಸಾಯಿ ಬಡಾವಣೆಗಳು ಕಳೆದ ಬಾರಿ ಮುಳುಗಡೆಯಾಗಿತ್ತು. ಸದ್ಯ ಕುಶಾಲನಗರದ ತಗ್ಗು ಪ್ರದೇಶಗಳಿಗೆ ನೀರು ಹರಿದಿದೆ. ಇದರಿಂದ ಇಲ್ಲಿನ ನಿವಾಸಿಗಳು ಸ್ವಯಂ ಪ್ರೇರಿತರಾಗಿ ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ.

    ಜಿಲ್ಲಾಡಳಿತದಿಂದ ಕುಶಾಲನಗರದಲ್ಲಿ ನಿರಾಶ್ರಿತರ ಕೇಂದ್ರವನ್ನು ತೆರಯಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಅನೀಸ್ ಎಪಿ ಸುಮಾನ್ ಪನ್ನೇಕರ್ ಸೇರಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇತ್ತ ಕಾವೇರಿ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಅವಾಂತರ ಸೃಷ್ಟಿಯಾಗಿದೆ. ಗೋಣಿಕೊಪ್ಪದ ಹರಿಶ್ಚಂದ್ರಪುರದ ಬಡಾವಣೆಗೆ ನೀರು ನುಗ್ಗಿ ಹಲವು ಮನೆಗಳು ಜಲಾವೃತವಾಗಿದೆ.

    ವರುಣನ ಆರ್ಭಟಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡು, ಮೊಬೈಲ್ ನೆಟ್‍ವರ್ಕ್ ಸರಿಯಾಗಿ ಸಿಗದ ಕಾರಣಕ್ಕೆ ಕೊಡಗಿನ ಸೂರ್ಲಬ್ಬಿ, ಕಿಕ್ಕರಳ್ಳಿ, ಗರ್ವಾಲೆ, ಹಮ್ಮಿಯಾಲ, ಮುಟ್ಲು ಗ್ರಾಮಗಳಲ್ಲಿ ಕತ್ತಲಲ್ಲಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸ್ಥಳೀಯರು ಮನವಿ ಮಾಡುತ್ತಿದ್ದಾರೆ.

    ಕುಟ್ಟಾ-ಕೇರಳ ರಸ್ತೆಯಲ್ಲಿ ಮರ ಬಿದ್ದ ಹಿನ್ನೆಲೆ ಕೊಡಗು-ಕೇರಳ ಅಂತರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ಹಿನ್ನೆಲೆ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯಲ್ಲಿ ಬಸ್ಸುಗಳನ್ನು ನಿಲ್ಲಿಸಲಾಗಿದೆ. 5 ದಿನಗಳ ಹಿಂದೆ ಮಾಕುಟ್ಟ ರಸ್ತೆ ಕುಸಿತವಾಗಿ ಕೇರಳದ ಒಂದು ಮಾರ್ಗ ಬಂದ್ ಆಗಿತ್ತು, ಇಂದು ಮರ ಬಿದ್ದ ಪರಿಣಾಮ ಕುಟ್ಟ ಮಾರ್ಗ ಕೂಡ ಬಂದ್ ಆಗಿದೆ. ಪರಿಣಾಮ ಕೇರಳಕ್ಕೆ ತೆರಳುವ ವಾಹನ ಸವಾರರು ಪರದಾಡುತ್ತಿದ್ದಾರೆ.

  • ಕೊಡಗು ಮಳೆ – ಜೋಡುಪಾಲ ಬಳಿ ಮತ್ತೆ ಭೂ ಕುಸಿತ

    ಕೊಡಗು ಮಳೆ – ಜೋಡುಪಾಲ ಬಳಿ ಮತ್ತೆ ಭೂ ಕುಸಿತ

    ಮಡಿಕೇರಿ: ಜೋಡುಪಾಲ ಬಳಿ ಕಳೆದ ಬಾರಿ ಗುಡ್ಡ ಕುಸಿದ ಜಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಮತ್ತೆ ಗುಡ್ಡ ಕುಸಿದಿದೆ.

    ಗುಡ್ಡ ಕುಸಿತದ ಪರಿಣಾಮ ನಿರ್ಮಾಣ ಹಂತದ ಮನೆ ಜಖಂಗೊಂಡಿದೆ. ಆದರೆ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

    ಕಳೆದ ಬಾರಿ ಗುಡ್ಡಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಅಲ್ಲಿನ ಜಾಗದ ವಾಸ್ತವ ಸ್ಥಿತಿ ಬಗ್ಗೆ ಭೂವಿಜ್ಞಾನಿಗಳು ಅಧ್ಯಯನ ನಡೆಸಿದ್ದರು. ಬಳಿಕ ಜೋಡುಪಾಲ ಬಳಿಯ ಇನ್ನೂ ಕೆಲವು ಪ್ರದೇಶಗಳಲ್ಲಿ ಗುಡ್ಡ ಕುಸಿಯಬಹುದು ಎನ್ನುವ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಈ ಬಾರಿ ಅಷ್ಟೊಂದು ಮಳೆ ಬಾರದಿದ್ದರೂ ಗುಡ್ಡ ಕುಸಿದಿರುವುದು ಅಲ್ಲಿನ ನಿವಾಸಿಗಳಿಗೆ ಮತ್ತಷ್ಟು ಆತಂಕ ಸೃಷ್ಟಿಸಿದೆ

    ಹವಾಮಾನ ಇಲಾಖೆ ಶನಿವಾರ ಜಿಲ್ಲೆಯಲ್ಲಿ ಸಿಕ್ಕಾಪಟ್ಟೆ ಮಳೆಯಾಗುವ ಸೂಚನೆಯನ್ನ ನೀಡಿತ್ತು. ಹೀಗಾಗಿ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿತ್ತು. ಆದರೆ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯನ್ನ ವಾಪಸ್ ಪಡೆದು ಆರೆಂಜ್ ಅಲರ್ಟ್ ಜಾರಿ ಮಾಡಿದೆ. ಅದರೆ ಬೆಳಿಗ್ಗೆಯಿಂದಲೂ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ.

    ಮುರಿದು ಬಿದ್ದ ಮರ: ಮೈಸೂರು ವಿರಾಜಪೇಟೆ ಅಂತರಾಜ್ಯ ಹೆದ್ದಾರಿ ಮಧ್ಯದಲ್ಲಿ ರೋ ಮಜ್ಜಿಗೆ ಹಳ್ಳದ ಬಳಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಮೇಲೆ ಮರ ಮುರಿದು ಬಿದ್ದು ಮೂರು ವಾಹನಗಳು ಜಖಂಗೊಂಡಿದೆ. ಒಂದು ಜೀಪು,ಕಾರು, ಗೂಡ್ಸ್ ಆಟೋ ಜಖಂಗೊಂಡಿದೆ.