Tag: Land Audit

  • ಚಾಣಕ್ಯ ವಿವಿಗೆ ಹಂಚಿಕೆಯಾಗಿದ್ದ ಭೂಮಿಗೆ ಲ್ಯಾಂಡ್ ಆಡಿಟ್ – ಜಮೀನು ವಾಪಸ್ ಪಡೆಯುತ್ತಾ ಸರ್ಕಾರ?

    ಚಾಣಕ್ಯ ವಿವಿಗೆ ಹಂಚಿಕೆಯಾಗಿದ್ದ ಭೂಮಿಗೆ ಲ್ಯಾಂಡ್ ಆಡಿಟ್ – ಜಮೀನು ವಾಪಸ್ ಪಡೆಯುತ್ತಾ ಸರ್ಕಾರ?

    ಬೆಂಗಳೂರು: ಚಾಣಕ್ಯ ವಿಶ್ವವಿದ್ಯಾನಿಲಯದ (Chanakya University) ಮೇಲೆ ಮತ್ತೆ ರಾಜ್ಯ ಸರ್ಕಾರ ಕಣ್ಣು ಹಾಕಿದೆ. ಈಗಾಗಲೇ ವಿವಿಗೆ ಹಂಚಿಕೆಯಾಗಿದ್ದ ಜಮೀನಿನ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ದು, ಈ ಸಂಬಂಧ ವಿವಿಯ ಲ್ಯಾಂಡ್ ಆಡಿಟ್ ರಿಪೋರ್ಟ್ (Land  Audit Report) ಪಡೆದುಕೊಂಡಿದೆ.

    ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ಚಾಣಕ್ಯ ವಿವಿಗೆ ಭೂಮಿ ಮಂಜೂರು ಮಾಡಲಾಗಿತ್ತು. ಸರ್ಕಾರದಿಂದ ಹಂಚಿಕೆಯಾಗಿದ್ದು ಎಷ್ಟು ಜಾಗ? ಬಳಕೆಯಾಗಿರೋದು ಎಷ್ಟು? ಎಲ್ಲಾ ವಿವರ ಒಳಗೊಂಡ ಲ್ಯಾಂಡ್ ಆಡಿಟ್ ರಿಪೋರ್ಟ್ ಅನ್ನ ಈಗಿನ ಸರ್ಕಾರ ಪಡೆದಿದೆ. ಇತ್ತೀಚೆಗೆ ನಂದಿ ಬೆಟ್ಟದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಚಾಣಕ್ಯ ವಿವಿಯ ಲ್ಯಾಂಡ್ ಆಡಿಟ್ ವರದಿ ಬಗ್ಗೆ ಚರ್ಚೆ ಮಾಡಲಾಗಿದೆ. ಕ್ಯಾಬಿನೆಟ್‌ಗೆ ಉನ್ನತ ಶಿಕ್ಷಣ ಇಲಾಖೆ ವಿಷಯ ತಂದಿದ್ದು, ಇದೀಗ ಸರ್ಕಾರದ ಕೈಗೆ ಲ್ಯಾಂಡ್ ಆಡಿಟ್ ರಿಪೋರ್ಟ್ ಸೇರಿದೆ. ಹೀಗಾಗಿ ಚಾಣಕ್ಯ ವಿವಿಗೆ ಹಂಚಿಕೆಯಾಗಿದ್ದ ಜಮೀನಿನಲ್ಲಿ ಉಳಿದ ಜಮೀನನ್ನು ಸರ್ಕಾರ ವಾಪಸ್ ಪಡೆಯುತ್ತಾ ಎನ್ನುವ ಅನುಮಾನಗಳು ಶುರುವಾಗಿದೆ.ಇದನ್ನೂ ಓದಿ: ಕಾಂಗ್ರೆಸ್‌ನ ಎಲ್ಲಾ ಶಾಸಕರನ್ನು ಮಂತ್ರಿ ಮಾಡೋಕೆ ಆಗಲ್ಲ- ಆರ್.ವಿ.ದೇಶಪಾಂಡೆ

    ಚಾಣಕ್ಯ ವಿವಿಗೆ ಹಂಚಿಕೆ ಮಾಡಿದ್ದ ಜಮೀನಿನ ಬಗ್ಗೆ ಈ ಹಿಂದೆ ಸಿದ್ದರಾಮಯ್ಯ (Siddaramaiah) ಅವರು ವಿಪಕ್ಷ ನಾಯಕ ಆಗಿದ್ದಾಗ ವಿರೋಧ ಮಾಡಿದ್ದರು. ಮನುವಾದಿಗಳ ಸಂಸ್ಥೆಗೆ ಹಂಚಿಕೆಯಾಗಿರುವ ಜಮೀನು ಎಂದು ಟೀಕಿಸಿದ್ದರು.

    ಏನಿದು ಚಾಣಕ್ಯ ವಿವಿ ಜಮೀನು ವಿವಾದ?

    • 2021ರ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಅಂದಿನ ಬಿಜೆಪಿ ಸರ್ಕಾರ ಚಾಣಕ್ಯ ವಿವಿಗೆ ಜಮೀನು ಹಂಚಿಕೆ ಮಾಡುವ ತೀರ್ಮಾನ ತೆಗೆದುಕೊಂಡಿತ್ತು.
    • 116.60 ಎಕರೆ ಜಮೀನನ್ನ ಒಟ್ಟು 50 ಕೋಟಿ ರೂ.ಗೆ ಹಂಚಿಕೆ ಮಾಡಲಾಗಿತ್ತು.
    • 2022ರ ಏ.20ರಂದು ಸ್ವಾಧೀನ ಪತ್ರ ನೀಡಿ, ಕರಾರು ಮಾಡಲಾಗಿತ್ತು.
    • ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚಾಣಕ್ಯ ವಿವಿ ವಿಧೇಯಕಕ್ಕೆ ತಿದ್ದುಪಡಿ ಮಾಡಲಾಗಿತ್ತು.
    • ಸರ್ಕಾರ ಸದಸ್ಯರ ನಾಮನಿರ್ದೇಶನಕ್ಕೆ ಅವಕಾಶ ನೀಡಿ, ವಿಧೇಯಕ ತಿದ್ದುಪಡಿ ಮಾಡಿತ್ತು.
    •  ಇದೀಗ ಚಾಣಕ್ಯ ವಿವಿಗೆ ಹಂಚಿಕೆಯಾಗಿದ್ದ ಲ್ಯಾಂಡ್ ಆಡಿಟ್ ರಿಪೋರ್ಟ್ ಕೂಡ ಪಡೆದುಕೊಂಡಿದೆ.

    ಚಾಣಕ್ಯ ವಿವಿ ಲ್ಯಾಂಡ್ ಆಡಿಟ್ ರಿಪೋರ್ಟ್‌ನಲ್ಲೇನಿದೆ?

    • ಕೆಐಎಡಿಬಿ ಅಧಿಕಾರಿಗಳು ಲ್ಯಾಂಡ್ ಆಡಿಟ್ ರಿಪೋರ್ಟ್‌ನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
    • ಆಡಳಿತ ಭವನ, ಮಹಿಳಾ ಹಾಸ್ಟೆಲ್, ಫುಡ್ ಕೋರ್ಟ್ ನಿರ್ಮಾಣ ಮಾಡಲಾಗಿದೆ.
    • ಕೆಲ ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದು, ಆಟದ ಮೈದಾನ ಪ್ಲ್ಯಾನ್‌ ಪ್ರಕಾರ ನಿರ್ಮಾಣ ಮಾಡಲಾಗಿದೆ.
    • 2026ರ ಜೂ.25ರ ವೇಳೆಗೆ ಸಂಪೂರ್ಣವಾಗಿ ಕೆಲಸಗಳು ಮುಗಿಸಲಾಗುತ್ತದೆ ಎಂದು ಜಮೀನು ಹಂಚಿಕೆ ವೇಳೆ ಹೇಳಲಾಗಿದೆ.
    • ಒಟ್ಟಾರೆ ಜಾಗದ ಶೇ.25.60ರಷ್ಟು ಕಟ್ಟಡ ನಿರ್ಮಾಣ ಪ್ಲ್ಯಾನ್‌ಗೆ ಅನುಮತಿ ನೀಡಲಾಗಿದೆ.
    • ಇದರಲ್ಲಿ ಶೇ.6.93ರಷ್ಟು ಜಾಗದಲ್ಲಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
    • ಉಳಿದ ಶೇ.18.67ರಷ್ಟು ನಿರ್ಮಾಣ ಕಾರ್ಯ 2026ರ ಜೂ.25ರೊಳಗೆ ಪೂರ್ಣಗೊಳಿಸಬೇಕು
    • ಚಾಣಾಕ್ಯ ವಿವಿ 2026ರ ಜೂ.25ರೊಳಗೆ ಪ್ರಾಜೆಕ್ಟ್ ಮುಗಿಸದೇ ಇದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಬಹುದು.
    • ಕೆಐಎಡಿಬಿ ಕಾಯ್ದೆ 34(ಬಿ) ಅಡಿ ಕ್ರಮಕೈಗೊಳ್ಳಲು ಅವಕಾಶ ಇದೆ ಎಂದು ಲ್ಯಾಂಡ್ ಆಡಿಟ್ ವರದಿಯಲ್ಲಿ ಉಲ್ಲೇಖವಾಗಿದೆ.
    • ಚಾಣಕ್ಯ ವಿವಿ ಒಟ್ಟಾರೆ ಜಾಗದ ಶೇ.54.68ರಷ್ಟು ಜಮೀನು ಬಳಕೆ ಮಾಡಿಕೊಂಡಿದೆ.
    • ಉಳಿದ ಶೇ.45.31ರಷ್ಟು ಜಮೀನನ್ನು ಭವಿಷ್ಯದಲ್ಲಿ ಬಳಸಿಕೊಳ್ಳಲು ತೀರ್ಮಾನಿಸಿದೆ.ಇದನ್ನೂ ಓದಿ: ಕೊಹ್ಲಿಗಾಗಿ ಆರ್‌ಸಿಬಿಯ ಆತುರವೇ ಕಾಲ್ತುಳಿತಕ್ಕೆ ಕಾರಣ – ಸಿಐಡಿ ತನಿಖೆಯಲ್ಲಿ ಸ್ಫೋಟಕ ವಿಚಾರ ಬಯಲು

  • ಮಾರ್ಚಿನಲ್ಲೇ  ಮುಗಿಯಬೇಕಿತ್ತು – ಇನ್ನೂ ಮುಗಿದಿಲ್ಲ ಬಿಡಿಎ ಆಡಿಟ್

    ಮಾರ್ಚಿನಲ್ಲೇ ಮುಗಿಯಬೇಕಿತ್ತು – ಇನ್ನೂ ಮುಗಿದಿಲ್ಲ ಬಿಡಿಎ ಆಡಿಟ್

    – ಮಂದಗತಿಯಲ್ಲಿ ಬಿಡಿಎ ಲ್ಯಾಂಡ್ ಆಡಿಟ್
    – 5 ಸಾವಿರ ಕೋಟಿ ನಷ್ಟ ಸಾಧ್ಯತೆ

    ಬೆಂಗಳೂರು: ಮಾರ್ಚ್ ತಿಂಗಳಿನಲ್ಲೇ ಮುಗಿಯಬೇಕಿದ್ದ ಬಿಡಿಎ ಆಡಿಟ್ ಮಂದಗತಿಯಲ್ಲಿ ಸಾಗುತ್ತಿದ್ದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ(ಬಿಡಿಎ) ಒಟ್ಟು 5 ಸಾವಿರ ಕೋಟಿ ನಷ್ಟವಾಗಿರುವ ಸಾಧ್ಯತೆಯಿದೆ.

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆರಂಭಗೊಂಡ ಬಳಿಕ ಇಲ್ಲಿಯವರೆಗೆ 64 ಬಡಾವಣೆಗಳನ್ನು ನಿರ್ಮಾಣ ಮಾಡಿದೆ. ಬಿಡಿಎಯ ಆಸ್ತಿ ಬಗ್ಗೆ ನಿಖರವಾದ ಮಾಹಿತಿ ಬಿಡಿಎ ಬಳಿಯೇ ಇಲ್ಲದೇ ಇರುವುದರಿಂದ ಲ್ಯಾಂಡ್ ಆಡಿಟ್ ಮಾಡಲು ಖಾಸಗಿ ಸಂಸ್ಥೆಯೊಂದಕ್ಕೆ ಟೆಂಡರ್ ನೀಡಲಾಗಿತ್ತು.

    ದಾಖಲೆಗಳ ಪ್ರಕಾರ ಮಾರ್ಚ್ ತಿಂಗಳಿಗೇ ಲ್ಯಾಂಡ್ ಆಡಿಟ್ ಮುಗಿಯಬೇಕಾಗಿತ್ತು. ಆದರೆ ಅಕ್ಟೋಬರ್ ಆದರೂ ಲ್ಯಾಂಡ್ ಆಡಿಟ್ ಅಪೂರ್ಣವಾಗಿದೆ. ಇಲ್ಲಿಯವರೆಗೆ ಕೇವಲ 20 ಬಡಾವಣೆಗಳ ಆಡಿಟ್ ಮುಗಿದಿದೆ ಎಂದು ದಾಖಲೆಗಳು ತಿಳಿಸಿವೆ. ಲ್ಯಾಂಡ್ ಆಡಿಟ್ ನಿಧಾನವಾಗಲು, ಬಿಡಿಎ ನಲ್ಲಿ ಸಿಬ್ಬಂದಿ ಕೊರತೆಯ ಜೊತೆಗೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೂ ಕಾರಣ ಎಂದು ಹೇಳಲಾಗ್ತಿದೆ.

    ಲ್ಯಾಂಡ್ ಆಡಿಟ್ ಸಂಪೂರ್ಣಗೊಂಡರೆ ಬೆಲೆಬಾಳುವ ಆಸ್ತಿಯನ್ನು ಒತ್ತುವರಿ ತೆರವು ಮಾಡಬೇಕಿದೆ. ಅಲ್ಲದೆ ದುರ್ಬಳಕೆಮಾಡಿಕೊಂಡವರ ಹೆಸರೂ ಬಹಿರಂಗವಾಗಲಿದ್ದು, ತಪ್ಪಿತ್ತಸ್ಥ ಮಾಲೀಕರು ಹಾಗೂ ಅಧಿಕಾರಿಗಳಿಗೂ ಶಿಕ್ಷೆಯಾಗಲಿದೆ. ಈಗಾಗಲೇ 2,500 ಸಾವಿರ ಎಕರೆ ಜಾಗ ನಗರದ ಹೃದಯ ಭಾಗ ಹಾಗೂ ಸುತ್ತಮುತ್ತ ಖಾಸಗಿ ವ್ಯಕ್ತಿಗಳು, ಪ್ರಭಾವಿಗಳ ಪಾಲಾಗಿವೆ. ಇದರಿಂದ ಐದು ಸಾವಿರ ಕೋಟಿ ರುಪಾಯಿಗೂ ಹೆಚ್ಚು ಬಿಡಿಎಗೆ ನಷ್ಟವಾಗಿದೆ ಎಂಬ ಲೆಕ್ಕಾಚಾರವಿದೆ.

    ಲ್ಯಾಂಡ್ ಆಡಿಟ್ ಸಂಪೂರ್ಣವಾದರೆ ಇದರ ಪಕ್ಕಾ ಲೆಕ್ಕ ಸಿಗಲಿದ್ದು, ನಷ್ಟದಲ್ಲಿರುವ ಬಿಡಿಎಗೂ ಆರ್ಥಿಕ ಬಲ ಬರಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಪ್ರತಿಕ್ರಿಯಿಸಿದ್ದಾರೆ.

    ಬಿಡಿಎ ಆರಂಭದಿಂದ 64 ಬಡಾವಣೆಗಳನ್ನು ನಿರ್ಮಾಣ ಮಾಡಿದೆ. ಇದಕ್ಕಾಗಿ 38 ಸಾವಿರ ಎಕರೆ ಜಮೀನನ್ನು ಭೂಮಾಲೀಕರಿಂದ ವಶಪಡಿಸಿಕೊಂಡಿದೆ. 38 ಸಾವಿರ ಎಕರೆ ಜಮೀನಿನನಲ್ಲಿ ನಿವೇಶನ ನಿರ್ಮಾಣಕ್ಕಾಗಿ 19,000 ಎಕರೆ ಬಳಸಲಾಗಿದೆ. ಜಾಗದ ಮಾಲೀಕರಿಗೆ ಪರಿಹಾರ ನೀಡಿಯೂ, 2500 ಎಕರೆ ದುರ್ಬಳಕೆಯಾಗಿರುವ ಸಾಧ್ಯತೆ ಇದೆ. ಬಿಡಿಎಯ 38 ಸಿ ಬಿಡಿಎ ತಿದ್ದುಪಡಿ ಪ್ರಕಾರ, ನಿಗದಿತ ಶುಲ್ಕವನ್ನು ಭೂಮಾಲೀಕರಿಂದ ಪಡೆದರೆ, ಮಾಲೀಕರಿಗೆ ರೆವೆನ್ಯೂ ದಾಖಲೆಗಳು ಕೂಡಾ ಪಕ್ಕಾ ಆಗಲಿದೆ. ಬಿಡಿಎಗೂ ಆದಾಯ ಬರಲಿದೆ. ಆದರೂ ಲ್ಯಾಂಡ್ ಆಡಿಟ್ ಆಮೆಗತಿಯಲ್ಲಿ ಸಾಗುತ್ತಿದ್ದು, ವರ್ಷ ಕಳೆದರೂ ಆಡಿಟ್ ಸಂಪೂರ್ಣವಾಗುವುದು ಅನುಮಾನ ಎನ್ನುವ ಮಾತು ಕೇಳಿ ಬಂದಿದೆ.