Tag: Lalbhag

  • ಜನವರಿ 16ರ ರಿಂದ 215ನೇ ಫಲಪುಷ್ಪ ಪ್ರದರ್ಶನ- ಪ್ರಮುಖ ವಿಶೇಷವೇನು..?

    ಜನವರಿ 16ರ ರಿಂದ 215ನೇ ಫಲಪುಷ್ಪ ಪ್ರದರ್ಶನ- ಪ್ರಮುಖ ವಿಶೇಷವೇನು..?

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ (Lalbagh) ಈ ಬಾರಿಯ ಗಣರಾಜ್ಯೋತ್ಸವ ಅಂಗವಾಗಿ ಜನವರಿ 18ರಿಂದ 28ರವರೆಗೆ 215ನೇ ಫಲಪುಷ್ಪ ಪ್ರದರ್ಶನ (Flower Show) ನಡೆಯಲಿದೆ. ಈ ಬಾರಿ ಹಲವು ವಿಶೇಷಗಳೊಂದಿಗೆ ತೋಟಗಾರಿಕಾ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

    ಈ ಬಾರಿ ಬರೋಬ್ಬರಿ 11 ದಿನಗಳ ಕಾಲ ವಚನ ಸಾಹಿತ್ಯದ ಪರಿಕಲ್ಪನೆಯಡಿ ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. 12ನೇ ಶತಮಾನದ ಕನ್ನಡದ ತತ್ವಜ್ಞಾನಿ, ಸಮಾಜ ಸುಧಾರಕರಾದ ಬಸವಣ್ಣನವರು ಲಿಂಗ ತಾರತಮ್ಯದೊಂದಿಗೆ ಮೂಢನಂಬಿಕೆಗಳನ್ನು ನಿರಾಕರಿಸಿದ್ರು. ಮಹಿಳೆಯರಿಗೂ ಸಮಾನತೆ ಪ್ರತಿಪಾಸಿದ್ರು. ಅವರ ಚಿಂತನೆ, ಕಾಯಕ ವೈಖರಿಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ. ಹೀಗಾಗಿ ಈ ಬಾರಿ ಬಸವಣ್ಣ ಮತ್ತು `ವಚನ ಸಾಹಿತ್ಯ’ ಕುರಿತಂತೆ ಫಲಪುಷ್ಪ ಪ್ರದರ್ಶನ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ.

    ಕೇವಲ ಬಸವಣ್ಣ ಮಾತ್ರವಲ್ಲ ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಗಂಗಾಂಬಿಕೆ, ನೀಲಾಂಬಿಕೆ ಮತ್ತಿತರ ವಚನಕಾರರ ಪ್ರತಿಮೆಗಳು, ಅವರ ವಚನಗಳು ಮತ್ತು ವಚನಕಾರರ ಅಂಕಿತನಾಮಗಳು ಹೀಗೆ ಸಮಗ್ರ ವಚನ ಸಾಹಿತ್ಯವೇ ಫಲಪುಷ್ಪ ಪ್ರದರ್ಶನದಲ್ಲಿರಲಿದೆಯಂತೆ. ಫಲಪುಷ್ಪ ಪ್ರದರ್ಶನಕ್ಕೆ 80 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಹಾಲಿಡೇಸ್‍ನಲ್ಲಿ 100 ರೂ. ಟಿಕೆಟ್ ದರ ಇರಲಿದೆ. ಶಾಲಾ ಸಮವಸ್ತ್ರ ಧರಿಸಿ ಬರುವ ಮಕ್ಕಳಿಗೆ ಉಚಿತ ಪ್ರವೇಶವಿರುತ್ತೆ. ಸಮವಸ್ತ್ರ ಇಲ್ಲದ ವಿದ್ಯಾರ್ಥಿಗಳಿಗೆ, ಮಕ್ಕಳಿಗೆ 30 ರೂ. ದರ ನಿಗದಿ ಮಾಡಲಾಗಿದೆ.

    ಪ್ರಮುಖ ವಿಶೇಷವೇನು..?: 10 ಅಡಿಯ ಬಸವಣ್ಣನ ಪ್ರತಿಮೆ ಮತ್ತು 30 ಅಡಿ ಎತ್ತರದ ಅನುಭವ ಮಂಟಪ ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆ. ಅನುಭವ ಮಂಟಪದ ಮೂಲ ಪ್ರತಿರೂಪದ ರಚನೆಯನ್ನು ಐರನ್ ಫ್ರೇಮ್‍ವರ್ಕ್‍ನಿಂದ ರೂಪಿಸಿ, ಅದಕ್ಕೆ 750 ಕೆಜಿಗೂ ಹೆಚ್ಚು ವೈರ್ ಮೆಷ್ ಅಳವಡಿಸಿ, 10 ಸಾವಿರಕ್ಕೂ ಹೆಚ್ಚು ಫ್ಲೋರಲ್ ಫೋಮ್‍ಗಳನ್ನು ಬಳಸಿ ಅಂತಿಮ ರೂಪ ಕೊಡಲಾಗಿದೆ. ಅನುಭವ ಮಂಟಪ 34 ಅಡಿ ಅಗಲ ಮತ್ತು 30 ಅಡಿ ಎತ್ತರವಿರುತ್ತೆ. ಕಡುಗೆಂಪು, ಹಳದಿ ಮತ್ತು ಕಿತ್ತಳೆ ವರ್ಣದ 1.5 ಲಕ್ಷ ಗುಲಾಬಿ ಹೂಗಳು, ಹಳದಿ, ಪಿಂಕ್ ಮತ್ತು ಶ್ವೇತ ವರ್ಣದ 1.55 ಲಕ್ಷ ಆಕರ್ಷಕ ಸೇವಂತಿಗೆ ಹೂಗಳು ಹಾಗೂ 1.85 ಲಕ್ಷ ಗುಂಡುರಂಗು (ಗಾಂಫ್ರಿನಾ) ಹೂವುಗಳನ್ನು ಬಳಸಲಾಗುತ್ತದೆ. ಈ ಎಲ್ಲಾ ಹೂಗಳು ಸೇರಿ 4.8 ಲಕ್ಷ ಹೂಗಳನ್ನು ಒಂದು ಬಾರಿಗೆ ಬಳಸಲಾಗುತ್ತಿದೆ.

    ಈ ಬಾರಿ ವಚನಕಾರರನ್ನ ಫಲಪುಷ್ಪ ಪ್ರದರ್ಶನದಲ್ಲಿ ಸಂಭ್ರಮಿಸಲು ಹಾಗೂ ಜನತೆಗೆ, ವಿದ್ಯಾರ್ಥಿಗಳಿಗೆ ಫಲಪುಷ್ಪದ ಮೂಲಕ ಅವರನ್ನ ತಲುಪಿಸುವ ಕೆಲಸಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ.

  • 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ತೆರೆ- ಅಪ್ಪು ಜಾತ್ರೆ ವೀಕ್ಷಣೆಗೆ ಹರಿದು ಬಂತು ಜನಸಾಗರ

    10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ತೆರೆ- ಅಪ್ಪು ಜಾತ್ರೆ ವೀಕ್ಷಣೆಗೆ ಹರಿದು ಬಂತು ಜನಸಾಗರ

    ಬೆಂಗಳೂರು: ಲಾಲ್ ಬಾಗ್ ನಾ ಫಲಪುಷ್ಪ ಪ್ರದರ್ಶನಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿದೆ. ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಗೆ ಅರ್ಪಿಸಿದ್ದ ಫ್ಲವರ್ ಶೋ ವೀಕ್ಷಣೆಗೆ ಜನ ಸಾಗರವೇ ಹರಿದು ಬಂದಿದೆ.

    75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಆಯೋಜನೆ ಮಾಡಿದ್ದ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ತೆರೆ ಬಿದ್ದಿದೆ. ಆಗಸ್ಟ್ 5ರಿಂದ 15ರ ವರೆಗೆ 10 ದಿನಗಳ ಕಾಲ ನಡೆದ ಫ್ಲವರ್ ಶೋಗೆ ಕಡೆಯ ದಿನವಾದ ಸೋಮವಾರ ದಾಖಲೆ ಮಟ್ಟದಲ್ಲಿ ಜನ ಸಾಗರ ಹರಿದು ಬಂದಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈ ‘ಪ್ರಣಯ ಪಕ್ಷಿ’ಗಳದ್ದೇ ಮಾತು

    ಕೊರೋನಾ ಬಳಿಕ ಅದ್ಧೂರಿ ಆಗಿ ನಡೆದ ಮತ್ತು ಅಗಲಿದ ಕನ್ನಡ ನಾಡಿನ ಕರುನಾಡ ರತ್ನಗಳಾದ ಡಾ.ರಾಜ್ ಕುಮಾರ್ ಮತ್ತು ಡಾ.ಪುನೀತ್ ರಾಜ್ ಕುಮಾರ್‍ಗೆ ಈ ಬಾರಿ ಫ್ಲವರ್ ಶೋವನ್ನು ಅರ್ಪಿಸಲಾಗಿತ್ತು. ಹೀಗಾಗಿ ಫ್ಲವರ್ ಶೋ ವೀಕ್ಷಿಸಲು ಕಳೆದ 2 ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಜನಸ್ತೋಮವೇ ಆಗಮಿಸಿ ಹೂವಿನ ಲೋಕವನ್ನು ಕಣ್ತುಂಬಿಕೊಂಡಿದ್ದಾರೆ. ಹೂವಿನ ಲೋಕಕ್ಕೆ ಮರಳಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತೋಷ ಪಟ್ಟಿದ್ದಲ್ಲದೇ, ಕರುನಾಡ ರತ್ನ, ನಗುವಿನ ಒಡೆಯ ಡಾ.ಪುನೀತ್ ರಾಜ್‍ಕುಮಾರ್ ರನ್ನು ಕಂಡು ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

    ಕಳೆದ 10 ದಿನಗಳ ಕಾಲ ನಡೆದ ಈ ಪ್ಲವರ್ ಶೋ ವೀಕ್ಷಣೆಗೆ ಸುಮಾರು 10 ಲಕ್ಷ ಕ್ಕೂ ಹೆಚ್ಚು ಜನ ಆಗಮಿಸಿದ್ದಾರಂತೆ. ಇಷ್ಟು ಪ್ರಮಾಣದಲ್ಲಿ ಜನ ಬಂದಿರೋದು ಇದೇ ಮೊದಲು. ಈ ಬಾರಿಯ ಫ್ಲವರ್ ಶೋನಿಂದ ತೋಟಗಾರಿಕೆ ಇಲಾಖೆಗೆ ಬರೋಬ್ಬರಿ 3.36 ಕೋಟಿ ಆದಾಯ ಬಂದಿದೆಯಂತೆ. ಒಟ್ಟಾರೆ 10 ದಿನಗಳ ಫ್ಲವರ್ ಶೋಗೆ ಅದ್ದೂರಿಯಾಗಿ ತೆರೆ ಬಿದ್ದಿದ್ದು ನಗುವಿನ ದೊರೆಗಳಾದ ಡಾ.ರಾಜ್, ಅಪ್ಪುವನ್ನು ಹೂವಿನಲ್ಲಿ ಕಂಡು ಹೂವಿನ ಪ್ರೇಮಿಗಳು ಖುಷಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಘಮ ಘಮ ಸುಮಗಳಿಂದ ಕಂಗೊಳಿಸುತ್ತಿದೆ ಸಸ್ಯಕಾಶಿ – 6.4 ಲಕ್ಷ ಹೂಗಳಿಂದ ಸಬರಮತಿ ಆಶ್ರಮ ನಿರ್ಮಾಣ

    ಘಮ ಘಮ ಸುಮಗಳಿಂದ ಕಂಗೊಳಿಸುತ್ತಿದೆ ಸಸ್ಯಕಾಶಿ – 6.4 ಲಕ್ಷ ಹೂಗಳಿಂದ ಸಬರಮತಿ ಆಶ್ರಮ ನಿರ್ಮಾಣ

    ಬೆಂಗಳೂರು: ಸಿಲಿಕಾನ್ ಸಿಟಿಗೆ ಬರುವ ಪ್ರವಾಸಿಗರ ಹಾಟ್ ಫೇವರೇಟ್ ಸ್ಥಳವೆಂದರೆ ಲಾಲ್‍ಬಾಗ್. ಈ ಸಸ್ಯಕಾಶಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಇಂದಿನಿಂದ ಫಲಪುಷ್ಪ ಪ್ರದರ್ಶನ ಶುರುವಾಗುತ್ತಿದೆ.

    ಗಣರಾಜ್ಯೋತ್ಸವ ಅಂಗವಾಗಿ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ ಆರಂಭಗೊಳ್ಳಲಿದ್ದು, ಸಿಎಂ ಕುಮಾರಸ್ವಾಮಿ ಅವರು ಚಾಲನೆ ನೀಡಲಿದ್ದಾರೆ. ಇದು 209ನೇ ಫಲಪುಷ್ಪ ಪ್ರದರ್ಶನವಾಗಿದ್ದು, ಗಾಂಧೀಜಿಯವರಿಗೆ ಪುಷ್ಪನಮನ ಸಲ್ಲಿಸಲಾಗುತ್ತಿದೆ. ಬಾಪೂಜಿಯವರ 150ನೇ ಜನ್ಮ ದಿನಾಚರಣೆಯ ಸವಿನೆನಪಿಗಾಗಿ ಅವರು ಬದುಕಿನ ಪ್ರಮುಖ ಘಟನೆಗಳನ್ನು ಹೂಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ಹೇಳಿದ್ದಾರೆ.

    ಗುಲಾಬಿ, ಸೇವಂತಿಗೆ ಸೇರಿದಂತೆ ಬಗೆ ಬಗೆಯ ಒಟ್ಟು 6 ಲಕ್ಷದ 4 ಸಾವಿರ ಹೂಗಳಿಂದ ಸಬರಮತಿ ಆಶ್ರಮವನ್ನು ನಿರ್ಮಿಸಲಾಗಿದೆ. ಚರಕ, ಗಾಂಧಿ ಕನ್ನಡಕ, ಧ್ಯಾನಸ್ಥ ಗಾಂಧಿ ಸಸ್ಯಕಾಶಿಯೊಳಗೆ ಬಂದೊಡನೇ ಜನರನ್ನು ಸ್ವಾಗತಿಸುತ್ತದೆ. ಸಿರಿಧಾನ್ಯಗಳಿಂದ ಗಾಂಧಿ ಹಾಗೂ ಮೊಮ್ಮಗ ಕೋಲು ಹಿಡಿದಿರುವಂತೆ ಪ್ರತಿಮೆಯನ್ನು ರೂಪಿಸಲಾಗಿದೆ.

    ಮೂರು ಕೋತಿಗಳು ನೀತಿ ಪಾಠ ಹೇಳುತ್ತವೆ. ಈ ಪ್ರರ್ದಶನಕ್ಕೆ ಒಟ್ಟು 1.8 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ ಸಲ ವಯಸ್ಕರಿಗೆ 70 ರೂಪಾಯಿ, ಮಕ್ಕಳಿಗೆ 20 ರೂಪಾಯಿ ಪ್ರವೇಶ ಶುಲ್ಕ ನಿಗದಿ ಮಾಡಿದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ

    ಇಂದಿನಿಂದ ಅಂದರೆ ಜನವರಿ 18 ರಿಂದ ಇದೇ 27ರವರೆಗೆ ಈ ಫಲಪುಷ್ಪ ಪ್ರದರ್ಶನ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv