Tag: lalbagh

  • ಕೊರೊನಾ ಸ್ಫೋಟದ ಮಧ್ಯೆ ಬೆಂಗ್ಳೂರಲ್ಲಿ ಎಂದಿನಂತೆ ಜನ ಓಡಾಟ

    ಕೊರೊನಾ ಸ್ಫೋಟದ ಮಧ್ಯೆ ಬೆಂಗ್ಳೂರಲ್ಲಿ ಎಂದಿನಂತೆ ಜನ ಓಡಾಟ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ದಿನೇ ದಿನೇ ಹೊಸ ದಾಖಲೆ ಬರೆಯುತ್ತಿದ್ದು, ಶನಿವಾರ ಒಂದೇ ದಿನ 8,818 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಆದರೂ ಸಿಲಿಕಾನ್ ಸಿಟಿ ಜನರು ಎಂದಿನಿಂದ ಭರ್ಜರಿಯಾಗಿ ಓಡಾಟ ಮಾಡುತ್ತಿದ್ದಾರೆ.

    ಕಳೆದ ದಿನ ಬೆಂಗಳೂರಿನಲ್ಲಿ 3,495 ಮಂದಿ ಕೊರೊನಾಗೆ ತುತ್ತಾಗಿದ್ದಾರೆ. ಅಲ್ಲದೇ ಮಹಾಮಾರಿ 35 ಜನರನ್ನು ಬಲಿ ಪಡೆದುಕೊಂಡಿದೆ. ಆದರೂ ಜನರು ಎಂದಿನಂತೆ ಲಾಲ್‍ಬಾಗ್‍ನಲ್ಲಿ ಬೆಳ್ಳಂಬೆಳ್ಳಗೆ ವಾಕಿಂಗ್ ಮಾಡುತ್ತಿದ್ದಾರೆ. ಈ ಹಿಂದೆ ಲಾಕ್‍ಡೌನ್ ಸಮಯದಲ್ಲಿ ಲಾಗ್‍ಬಾಗ್‍ಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದರೆ ಅನ್‍ಲಾಕ್ ಮಾಡಿದ ನಂತರ ಜನರು ಹೆಚ್ಚಾಗಿ ವಾಕಿಂಗ್ ಬರುತ್ತಿದ್ದಾರೆ.

    ಅದರಲ್ಲೂ ವಯಸ್ಸಾದರೂ ವಾಕಿಂಗ್‍ಗೆ ಹೋಗಬಾರದು ಎಂದು ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಆದರೂ ಕೆಲ ಹಿರಿಯರು ಆರೋಗ್ಯ ದೃಷ್ಟಿಯಿಂದ ಬೆಳ್ಳಂಬೆಳಗ್ಗೆ ವಾಕಿಂಗ್ ಮಾಡುತ್ತಿದ್ದಾರೆ.

    ಇನ್ನೂ ಆನಂದಪುರ ಮಾರ್ಕೆಟ್ ಮತ್ತು ಯಶವಂತಪುರ ಮಾರ್ಕೆಟ್‍ನಲ್ಲಿ ವ್ಯಾಪಾರ ಜೋರಾಗಿದೆ. ಇಂದು ಭಾನುವಾರ ಆಗಿರುವುದರಿಂದ ನಿಧಾನವಾಗಿ ವ್ಯಾಪಾರ-ವಹಿವಾಟನ್ನು ಶುರು ಮಾಡುತ್ತಿದ್ದಾರೆ. ವ್ಯಾಪಾರ ಮಾಡುವಾಗ ಕೆಲವರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ವಾಕಿಂಗ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

  • 20 ವರ್ಷದ ಬಳಿಕ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ ರದ್ದು

    20 ವರ್ಷದ ಬಳಿಕ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ ರದ್ದು

    ಬೆಂಗಳೂರು: ಮಹಾಮಾರಿ ಕೊರೊನಾದಿಂದ 20 ವರ್ಷದ ಬಳಿಕ ಈ ಬಾರಿ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫಲಪುಷ್ಟ ಪ್ರದರ್ಶನವನ್ನು ರದ್ದು ಮಾಡಲಾಗಿದೆ.

    ಪ್ರತಿ ವರ್ಷ ಸ್ವಾತಂತ್ರ್ಯ ದಿನಚರಣೆಗೆ ಫ್ಲವರ್ ಶೋ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಭಯದಿಂದಾಗಿ ಫಲಪುಷ್ಟ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ತೋಟಗಾರಿಕಾ ಸಂಘದ ಸಹಯೋಗದಲ್ಲಿ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗುತ್ತಿತ್ತು.

    ಪ್ರತಿವರ್ಷ ಫ್ಲವರ್ ಶೋಗೆ ಎರಡು ತಿಂಗಳಿಂದಲೇ ಸಿದ್ಧತೆಗಳನ್ನ ನಡೆಸಲಾಗುತ್ತಿತ್ತು. ಜೊತೆಗೆ ಆಗಸ್ಟ್ ತಿಂಗಳ ಮೊದಲ ವಾರದಲ್ಲಿಯೇ ಪ್ರದರ್ಶನಕ್ಕೆ ಅನುವು ಮಾಡಲಾಗುತ್ತಿತ್ತು. ಆದರೆ ಈ ವರ್ಷ ಆಗಸ್ಟ್ ಮೊದಲವಾರ ಬಂದರೂ ಯಾವುದೇ ಸಿದ್ಧತೆಗಳು ನಡೆದಿಲ್ಲ. ಫ್ಲವರ್ ಶೋಗೆ ಲಕ್ಷಾಂತರ ಮಂದಿ ಲಾಲ್‍ಬಾಗ್‍ಗೆ ಬರುತ್ತಾರೆ. ಇದರಿಂದ ಕೊರೊನಾ ಸೋಂಕು ಹೆಚ್ಚಾಗಬಹುದು ಎಂಬ ಕಾರಣಕ್ಕಾಗಿ ಈ ಬಾರಿಯ ಫ್ಲವರ್ ಶೋವನ್ನು ರದ್ದುಪಡಿಸಲಾಗುತ್ತಿದೆ.

    1912 ರಿಂದ ಆರಂಭವಾದ ಫ್ಲವರ್ ಶೋ 108 ವರ್ಷಗಳ ಕಾಲ ಸತತವಾಗಿ ಆಚಾರಿಸಿಕೊಂಡು ಬಂದಿದೆ. ಆದರೆ ಕೊರೊನಾದಿಂದ 20 ವರ್ಷದ ಬಳಿಕ ಈ ಬಾರಿ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫಲಪುಷ್ಟ ಪ್ರದರ್ಶನವನ್ನು ರದ್ದು ಮಾಡಲಾಗಿದೆ.

  • ಲಾಲ್‍ಬಾಗ್‍ನಲ್ಲಿ ಫೋಟೋಶೂಟ್ ನಿಷೇಧ- ತಪ್ಪಿದ್ರೆ ಠಾಣೆ ಮೆಟ್ಟಿಲು ಹತ್ಲೇಬೇಕು

    ಲಾಲ್‍ಬಾಗ್‍ನಲ್ಲಿ ಫೋಟೋಶೂಟ್ ನಿಷೇಧ- ತಪ್ಪಿದ್ರೆ ಠಾಣೆ ಮೆಟ್ಟಿಲು ಹತ್ಲೇಬೇಕು

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಕಳ್ಳಾಟ ಬಲು ಜೋರಾಗಿದೆ. ಬೇಡ ಬೇಡ ಅಂತ ಹೇಳಿದರೂ ಕದ್ದು ಮುಚ್ಚಿ ಮಾಡ್ತಾನೆ ಇರುತ್ತಾರೆ. ಲಾಲ್‍ಬಾಗ್‍ನಲ್ಲಿ ನಿಷೇಧ ಗೊತ್ತಿದ್ದರೂ ಫೋಟೋಶೂಟ್ ಮಾಡಿಸಿಕೊಳ್ಳುವವರು ಯಾವುದೇ ಕಾರಣಕ್ಕೆ ಸುಮ್ಮನೆ ಇರಲ್ಲ.

    ಹೌದು. ಲಾಲ್‍ಬಾಗ್‍ನಲ್ಲಿ ಕಳೆದ 6 ತಿಂಗಳಿಂದ ಚಿತ್ರೀಕರಣವನ್ನ ನಿಷೇಧಿಸಲಾಗಿದೆ. ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೊಟೋಶೂಟ್ ಬ್ಯಾನ್ ಮಾಡಲಾಗಿದೆ. ಅದರಲ್ಲೂ ಜನರು ಮಾತ್ರ ಬಿಡಲ್ಲ. ಕದ್ದು ಮುಚ್ಚಿ ನೀ ಹಿಂಗೆ ನಿಂತ್ಕೋ, ಈ ಜಾಗದಲ್ಲಿ ಈ ಫೋಟೋ ಓಕೆ, ಮತ್ತೆ ಬ್ಯಾಗ್ರೌಂಡ್‍ಗೆ ತಕ್ಕಂತೆ ಡ್ರೆಸ್ ಚೇಂಜ್ ಮಾಡು ಅಂತ ಫೋಟೋಶೂಟ್ ಕಳ್ಳಾಟ ನಿತ್ಯ ನಡೆಯುತ್ತಿದೆ. ಇದು ತೋಟಗಾರಿಕೆ ಇಲಾಖೆ ಪ್ರಕಾರ ನಿಯಮ ಬಾಹಿರವಾಗಿದೆ.

    ಸ್ಲೋ ಲೈಫು ಬೋರ್ ಆಗಿದೆ ಅನ್ನುವಂತೆ ಎಲ್ಲರೂ ಸಿನಿಮೀಯ ಮಾದರಿಗೆ ಮೊರೆ ಹೋಗ್ತಾ ಇದ್ದಾರೆ. ಮಕ್ಕಳನ್ನ ಮರದ ಮೇಲೆ ಹತ್ತಿಸುವುದು. ಮತ್ತೆ ಅಪ್ಪ-ಅಮ್ಮನ ಮೇಲೆ ಪ್ರೀತಿಯಿಂದ ಎಗರುವುದು. ಹೀಗೆ ಮಂಗಾಟದ ಫೋಟೋ ಶೂಟ್‍ಗೆ ಮುಗಿ ಬೀಳ್ತಾ ಇದ್ದಾರೆ. ಈ ಹಿಂದೆ 2016ರಲ್ಲಿ 6 ವರ್ಷದ ವಿಕ್ರಮ್ ಎಂಬ ಬಾಲಕ ಸೆಲ್ಫಿ ತೆಗೆಸಿಕೊಳ್ಳುವಾಗ ಕಲ್ಲು ಬಿದ್ದು ಸಾವನ್ನಪ್ಪಿದ ಪ್ರಕರಣ ಈಗಲೂ ಪೋಷಕರ ಎದೆನಡುಗಿಸುತ್ತದೆ. ಈ ಹಿನ್ನೆಲೆಯಲ್ಲಿ ಕೆಲ ಕಡೆ ಸೆಲ್ಫಿ ನಿಷೇಧವಿದೆ. ಅದಕ್ಕೂ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

    ನಾನು ಕಾಡಿಗೆ ಹೋಗಿದ್ದೆ, ಟ್ರಕ್ಕಿಂಗ್ ಮಾಡಿದ್ದೆ. ಹೀಗೆ ಬಡಾಯಿ ಕೊಚ್ಚಿಕೊಳ್ಳಲು ಕೆಲ ಪಡ್ಡೆ ಯುವಪಡೆ ತಂಡ ಲಾಲ್‍ಬಾಗ್‍ಗೆ ಬಂದು ಬಿಡುತ್ತೆ. ಕಾಡಿನ ಸೀನ್‍ಗೆ ಮ್ಯಾಚ್ ಆಗುವಂತೆ ಇಲ್ಲೂ ಮರಗಳ ರೆಂಬೆಗಳ ಮೇಲೆ ಹತ್ತಿ ಫೋಟೋ ಕ್ಲಿಕ್ಕಿಸಿಕೊಳ್ತಾ ಇದ್ದಾರೆ. 250 ಎಕರೆಯ ಲಾಲ್‍ಬಾಗ್‍ನಲ್ಲಿ ನೂರಾರು ಕುರ್ಚಿಗಳಿವೆ. ಅದರಲ್ಲಿ ಕುಳಿತುಕೊಳ್ಳುವ ಬದಲು ಜನರು ಹುಲ್ಲಿನ ಕುಳಿತುಕೊಳ್ತಾರೆ. ಇದರಿಂದ ಸುತ್ತಮುತ್ತಲಿನವರೆಗೆ ಮುಜುಗರ. ಅದರಲ್ಲಿ ಫೋಟೋಶೂಟ್ ಬೇರೆ ಮಾಡ್ತಾರೆ. ಇದೆಲ್ಲ ತಪ್ಪು ಅಂತ ಭದ್ರತಾ ಸಿಬ್ಬಂದಿ ವಾರ್ನಿಂಗ್ ಕೊಟ್ಟರೂ ಡೋಂಟ್ ಕೇರ್ ಅಂತಾರೆ.

    ಲಾಲ್‍ಬಾಗ್‍ ಜನರ ಆರ್ಕಷಣೆ ಮಾಡುವ ಕೇಂದ್ರವಾಗಿದ್ದು, ಲಕ್ಷಾಂತರ, ಸಾವಿರಾರು ಜನರು ಭೇಟಿ ಕೊಡುತ್ತಾ ಇರುವ ಜಾಗವಾಗಿದೆ. ಹೀಗಿರೊವಾಗ ಲಾಲ್‍ಬಾಗ್‍ನಲ್ಲಿ ಈ ಫೋಟೋಶೂಟ್ ಅದಕ್ಕಾಗಿ ಬಟ್ಟೆ ಬದಲಾಯಿಸುವುದು ಸಾಕಷ್ಟು ಮುಜುಗರ ತಂದಿದೆ. ಹೀಗಾಗಿ ಸಂಪೂರ್ಣವಾಗಿ ಲಾಲ್‍ಬಾಗ್‍ನಲ್ಲಿ ಫೋಟೋಶೂಟ್ ಬ್ಯಾನ್ ಮಾಡಿದ್ದಾರೆ. ಆದರೂ ಕಳ್ಳಾಟ ಮಾಡಿ ಫೋಟೋ ಕ್ಲಿಕ್ಕಿಸೋರ ಸಂಖ್ಯೆನೇ ಜಾಸ್ತಿ. ಫೋಟೋಶೂಟ್ ನಿಷೇಧದ ನಡುವೆ ಫೋಟೋ ತೆಗೆದ್ರೆ, ಡೇಂಜರ್ ಅಂತ ಬರೆದಿರುವ ಕಡೆ ಫೋಟೊ ತೆಗೆಯುವುದು, ಅಶ್ಲೀಲವಾಗಿ ಕೂತು ಫೋಟೋ ತೆಗೆಯೋದು ಮಾಡಿದರೆ ಭದ್ರತೆ ಸಿಬ್ಬಂದಿ ವಾರ್ನಿಂಗ್ ಕೊಡ್ತಾರೆ. ಬಗ್ಗದಿದ್ರೆ ಠಾಣೆ ಮೆಟ್ಟಿಲು ಹತ್ತಬೇಕಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ಆಯುಕ್ತ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

  • ಬಿದಿರಿನ ಪರಿಕರಗಳಿಗೆ ಮನಸೋತ ಯುವತಿಯರು

    ಬಿದಿರಿನ ಪರಿಕರಗಳಿಗೆ ಮನಸೋತ ಯುವತಿಯರು

    ಬೆಂಗಳೂರು: ವಿಶ್ವ ಬಿದಿರು ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಲಾಲ್‍ಬಾಗ್‍ನ ಬೊಟಾನಿಕಲ್ ಗಾರ್ಡನ್‍ನಲ್ಲಿ ಬಿದಿರು ಹಬ್ಬ ಆಯೋಜನೆ ಮಾಡಲಾಗಿದೆ.

    ಈ ಉತ್ಸವವನ್ನು ಬ್ಯಾಂಬೂ ಸೊಸೈಟಿ ಆಫ್ ಇಂಡಿಯಾ ಆಯೋಜಿಸಿದ್ದು, ಬುಧವಾರ ಉದ್ಘಾಟನೆಯಾದ ಬಿದಿರು ಹಬ್ಬವು ಗುರುವಾರವೂ ನಡೆಯಲಿದೆ. ಉತ್ಸವಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಬಿದಿರು ಹಬ್ಬದಲ್ಲಿ ನಾನಾ ಜಾತಿಯ ಬಿದಿರು, ಬಿದಿರಿನಿಂದ ಮಾಡಿದ ವಿಶೇಷ ಹಾಗೂ ವಿಭಿನ್ನ ರೀತಿಯ ಪರಿಕರಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಜೊತೆಗೆ ಬಿದಿರಿನಿಂದ ತಯಾರಿಸಿದ ವಾದ್ಯಗಳಿಂದ ಸಂಗೀತ ಕಾರ್ಯಕ್ರಮ, ಬಿದಿರಿನಿಂದ ಮಾಡಿದ ಖಾದ್ಯ, ಬಿದಿರಿನ ಉಡುಪುಗಳ ಫ್ಯಾಷನ್ ಶೋ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಅದರಲ್ಲೂ ಬಿದಿರಿನಿಂದ ತಯಾರಿಸಿದ ಉಡುಪು ಧರಿಸಿ, ಬೆಡಗಿಯರು ನಡೆಸಿಕೊಟ್ಟ ಬ್ಯಾಂಬೂ ಫ್ಯಾಷನ್ ಶೋ ಎಲ್ಲರ ಹುಬ್ಬೇರಿಸಿತು.

    2009ರಲ್ಲಿ ವಿಶ್ವಸಂಸ್ಥೆಯ ಸೂಚನೆ ಮೇರೆಗೆ ಥೈಲ್ಯಾಂಡ್‍ನಲ್ಲಿ ಸೆಪ್ಟೆಂಬರ್ 18ರಂದು ವಿಶ್ವ ಬಿದಿರು ದಿನ ಆಚರಿಸಲಾಯಿತು. ಅಂದಿನಿಂದ ಇಲ್ಲಿಯವರೆಗೆ ಪ್ರತಿ ವರ್ಷವೂ ಭಾರತದಲ್ಲಿ ಬಿದಿರು ದಿನಾಚರಣೆ ಆಯೋಜಿಸುತ್ತಾ ಬರಲಾಗಿದೆ.

  • ಪರ್ಫ್ಯೂಮ್  ಹಾಕಿಕೊಂಡು ಈಗ ಲಾಲ್ ಬಾಗ್‍ಗೆ ಹೋಗಬೇಡಿ!

    ಪರ್ಫ್ಯೂಮ್ ಹಾಕಿಕೊಂಡು ಈಗ ಲಾಲ್ ಬಾಗ್‍ಗೆ ಹೋಗಬೇಡಿ!

    ಬೆಂಗಳೂರು: ಲಾಲ್‍ಬಾಗ್‍ನಲ್ಲಿ ಜೇನುಹುಳುಗಳ ಹಾವಳಿ ಹೆಚ್ಚಾಗಿದ್ದು ಪರ್ಫ್ಯೂಮ್ ಹಾಕಿಕೊಂಡು ಹೋಗಬೇಡಿ. ಕಪ್ಪು ಬಟ್ಟೆ ಅಂತೂ ಮೊದ್ಲೇ ಬೇಡ. ಏಕೆಂದರೆ ಅಂತವರನ್ನು ಜೇನುಹುಳುಗಳು ಹುಡುಕಿ ಹುಡುಕಿ ಕಚ್ಚುತ್ತಿವೆ.

    2016ನೇ ರಲ್ಲಿ ಈ ರೀತಿಯಾಗಿ ಜೇನುಹುಳುಗಳ ಕಿರಿಕ್ ನಡೆದಿತ್ತು. ಮಾರ್ಚ್, ಏಪ್ರಿಲ್ ನಲ್ಲಿ ಲಾಲ್‍ಬಾಗ್ ನಲ್ಲಿ ಜೇನು ಹುಳಗಳು ಹೆಚ್ಚಾಗಿ ಗೂಡು ಕಟ್ಟುತ್ತದೆ. ಈಗ ಲಾಲ್ ಬಾಗ್ ನ ಐದು ಕಡೆ ಜೇನುಹುಳಗಳು ದೊಡ್ಡ ಗೂಡು ಕಟ್ಟಿದ್ದು ಅಧಿಕಾರಿಗಳು ಮರದ ಹತ್ತಿರ ಗ್ರಿಲ್ ಹಾಕಿದ್ದಾರೆ.

    ಈಗಾಗಲೇ ಒಂದೇ ತಿಂಗಳಲ್ಲಿ ಐದು ಜನ ಬುರ್ಖಾ ಹಾಕಿಕೊಂಡು ಬಂದ ಮಹಿಳೆಯರಿಗೆ ಜೇನುಹುಳುಗಳು ಕಚ್ಚಿದೆ. ಪರ್ಫ್ಯೂಮ್ ಸ್ಮೆಲ್ ಮತ್ತು ಕಪ್ಪು ಬಟ್ಟೆ ಕಂಡರೆ ಜೇನುಗಳಿಗೆ ಆಗುವುದಿಲ್ಲ. ಇದರಿದಾಗಿ ಹೆಚ್ಚಾಗಿ ಅವರ ಮೇಲೆ ದಾಳಿ ನಡೆಸುತ್ತಿದೆ ಎಂದು ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ.

    ಜೇನು ಹುಳುಗಳ ದಾಳಿಯಿಂದ ಎಚ್ಚೆತ್ತ ತೋಟಾಗಾರಿಕಾ ಇಲಾಖೆಯ ಸಿಬ್ಬಂದಿ, ಕಪ್ಪು ಬಟ್ಟೆ, ಪರ್ಫ್ಯೂಮ್ ಹಾಕಿಕೊಂಡು ಬಂದವರನ್ನು ದೂರ ಕಳುಹಿಸುತ್ತಿದ್ದಾರೆ. ಲಾಲ್‍ಬಾಗ್ ಹೊರಗಡೆಯಿಂದ ವಿಹಾರಿಗಳಿಗೆ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದೇವೆ ಎಂದು ತೋಟಗಾರಿಕಾ ಇಲಾಖೆಯ ಜಂಟಿ ಆಯುಕ್ತ ಚಂದ್ರಶೇಖರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ಹೊಸ ವರ್ಷದಿಂದ ಲಾಲ್ ಬಾಗ್‍ಗೆ ಹೋಗೋ ಪ್ರವಾಸಿಗರಿಗೆ ತೋಟಗಾರಿಕಾ ಇಲಾಖೆ ಶಾಕ್

    ಹೊಸ ವರ್ಷದಿಂದ ಲಾಲ್ ಬಾಗ್‍ಗೆ ಹೋಗೋ ಪ್ರವಾಸಿಗರಿಗೆ ತೋಟಗಾರಿಕಾ ಇಲಾಖೆ ಶಾಕ್

    ಬೆಂಗಳೂರು: ವೀಕೆಂಡ್ ಹಾಟ್ ಫೇವರಿಟ್, ಫ್ಯಾಮಿಲಿ-ಫ್ರೆಂಡ್ಸ್ ಜೊತೆ ಒನ್ ಡೇ ಪಿಕ್‍ನಿಕ್, ರಿಲ್ಯಾಕ್ಸ್ ಅಂತ ಪ್ಲಾನ್ ಮಾಡುವವರು ಮೊದಲಿಗೆ ಲಾಲ್‍ಬಾಗ್‍ಗೆ ಹೋಗೋಣ ಅಂತಾರೆ. ಜೊತೆಗೆ ಸಖತ್ ಆಗಿರೋ ಫುಡ್ ಐಟಮ್ಸ್ ಸಿಗುತ್ತೆ ಅನ್ನೋ ಲೆಕ್ಕಾಚಾರವೂ ಇರುತ್ತೆ. ಆದ್ರೆ, ಇನ್ಮುಂದೆ ಕೆಂಪು ತೋಟದಲ್ಲಿ ನಿಮ್ಮ ಇಷ್ಟದ ತಿಂಡಿ ಸವಿಯೋ ಪ್ಲಾನ್ ಫ್ಲಾಪ್ ಆಗಲಿದೆ.

    ಹೌದು. ಹೊಸ ವರ್ಷದಿಂದಲೇ ಲಾಲ್‍ಬಾಗ್‍ಗೆ ತಿಂಡಿ-ತೀರ್ಥ ಕೊಂಡೊಯ್ಯುವಂತಿಲ್ಲ ಅಂತ ಕಟ್ಟುನಿಟ್ಟಿನ ನಿರ್ಣಯವನ್ನ ತೋಟಗಾರಿಕಾ ಇಲಾಖೆ ಕೈಗೊಂಡಿದೆ. ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಾಗ್ತಿದ್ದು, ಎಲ್ಲಂದರಲ್ಲಿ ವೇಸ್ಟ್ ಎಸೆಯಲಾಗ್ತಿದೆ. ಇದು ಸಸ್ಯಕಾಶಿಯ ಸ್ವಚ್ಛತೆ ಹಾಗೂ ಅಂದಕ್ಕೆ ಅಡ್ಡಿಯಾಗ್ತಿದೆ ಅಂತ ಇಲಾಖೆ ಹೇಳಿದೆ.

    ಈ ಹಿಂದೆಯೂ ಈ ನಿಯಮ ಇತ್ತು. ಇದಕ್ಕೆ ಪ್ರವಾಸಿಗರು ಸೊಪ್ಪು ಹಾಕಿರಲಿಲ್ಲ. ಆದ್ರೆ ಈ ಬಾರಿ ಜನವರಿ 1ರಿಂದಲೇ ಇದನ್ನ ಕಟ್ಟುನಿಟ್ಟಿನಿಂದ ಜಾರಿಗೆ ತರಲಾಗ್ತಿದೆ. ನಿಯಮ ಮೀರಿದ್ರೆ ದಂಡವೂ ಇದೆ ಅಂತ ತೋಟಗಾರಿಕಾ ಇಲಾಖೆ ಎಚ್ಚರಿಸಿದೆ. ಈ ನಿರ್ಣಯಕ್ಕೆ ಬೆಂಗಳೂರಿಗರೂ ಸೇರಿದಂತೆ ಪ್ರವಾಸಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.