Tag: Lakshmeshwara

  • ಗದಗ | ಬೀದಿನಾಯಿ ದಾಳಿ – 4 ವರ್ಷದ ಬಾಲಕನಿಗೆ ಗಂಭೀರ ಗಾಯ

    ಗದಗ | ಬೀದಿನಾಯಿ ದಾಳಿ – 4 ವರ್ಷದ ಬಾಲಕನಿಗೆ ಗಂಭೀರ ಗಾಯ

    ಗದಗ: ಬೀದಿನಾಯಿ ದಾಳಿ (Stray dog attack) ಮಾಡಿದ ಪರಿಣಾಮ ಬಾಲಕ ಗಂಭೀರ ಗಾಯಗೊಂಡಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ (Lakshmeshwara) ಪಟ್ಟಣ ಮ್ಯಾಗೇರಿ ಓಣಿಯಲ್ಲಿ ನಡೆದಿದೆ.

    ಮನೋಜ್ ಬನ್ನಿ (4) ಬಾಲಕನ ಮೇಲೆ ಬೀದಿನಾಯಿ ದಾಳಿ ಮಾಡಿದೆ. ಬಾಲಕನ ತಲೆ, ಬೆನ್ನು ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಬಾಲಕನನ್ನು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಹನಿಮೂನ್ ಮರ್ಡರ್‌ ಕೇಸ್ | 790 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ – ಕೊಲೆಯಾದ ರಘುವಂಶಿ ಪತ್ನಿಯೇ ಪ್ರಮುಖ ಆರೋಪಿ

     ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಮಕ್ಕಳನ್ನು ಮನೆಯಿಂದ ಹೊರಬಿಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಮುಂದೆ ಆಟ ಆಡುತ್ತಿರುವ ಚಿಕ್ಕ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ಮಾಡುತ್ತಿದ್ದರೂ ಸುಮ್ಮನೆ ಕುಳಿತಿರುವ ಲಕ್ಷ್ಮೇಶ್ವರ ಪುರಸಭೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಹೆಚ್ಚುತ್ತಿರುವ ಬೀನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ.

  • ದುರ್ಗಾದೇವಿ ವಿಸರ್ಜನೆ ವೇಳೆ ಹಲ್ಲೆ – ಅ.19 ರಂದು ಲಕ್ಷ್ಮೇಶ್ವರ ಬಂದ್ ಕರೆ ನೀಡಿದ ಶ್ರೀರಾಮಸೇನೆ

    ದುರ್ಗಾದೇವಿ ವಿಸರ್ಜನೆ ವೇಳೆ ಹಲ್ಲೆ – ಅ.19 ರಂದು ಲಕ್ಷ್ಮೇಶ್ವರ ಬಂದ್ ಕರೆ ನೀಡಿದ ಶ್ರೀರಾಮಸೇನೆ

    ಗದಗ: ಜಿಲ್ಲೆಯ ಲಕ್ಷ್ಮೇಶ್ವರದ (Lakshmeshwara) ಪಟ್ಟಣದ ಗೋಸಾವಿ ಸಮಾಜದವರ ಮೇಲೆ ಅನ್ಯಕೋಮಿನ ಯುವಕರಿಂದಾದ ಹಲ್ಲೆ, ಹಾಗೂ ಪಿಎಸ್‌ಐ ನಡೆ ಖಂಡಿಸಿ ಅ.19ರಂದು ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣ ಬಂದ್ ಕರೆ ಕೊಟ್ಟಿದ್ದಾರೆ.

    ಇಂದು (ಗುರುವಾರ) ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀರಾಮಸೇನೆ (Sri Ram Sena), ಗೋಸಾವಿ ಸಮಾಜ (Gosavi Samaj) ಹಾಗೂ ವಿವಿಧ ಸಂಘಟನೆಯ ನೇತೃತ್ವದಲ್ಲಿ ಬಂದ್ ಕರೆ ಘೋಷಿಸಿರುವುದಾಗಿ ತಿಳಿಸಿದರು. ವಿಜಯ ದಶಮಿ ದಿನದಂದು ಲಕ್ಷ್ಮೇಶ್ವರ ಪಟ್ಟಣದಲ್ಲಿ ಗೋಸಾವಿ ಸಮಾಜದಿಂದ ದುರ್ಗಾದೇವಿ ಮೂರ್ತಿ ವಿಸರ್ಜನೆಯ ಮೆರವಣಿಗೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಭಾನು ಮಾರ್ಕೆಟ್‌ನಲ್ಲಿ ಅನ್ಯಕೋಮಿನ ಆರೇಳು ಯುವಕರು ಮೆರವಣಿಗೆಯಲ್ಲಿ ನುಗ್ಗಿ ಗೋಸಾವಿ ಯುವಕರ ಮೇಲೆ ಹಲ್ಲೆ ಮಾಡಿ, ಕೇಸರಿ ಶಾಲು ನೆಲಕ್ಕೆ ಎಸೆದು ತುಳಿದು ಹಾಕಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು – ಸಿಎಂ ಸಿದ್ದರಾಮಯ್ಯ ಘೋಷಣೆ

    ಈ ಕುರಿತು ಸಮಾಜದವರೆಲ್ಲಾ ಸೇರಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಈ ವೇಳೆ ಠಾಣೆ ಪಿಎಸ್‌ಐ ಈರಣ್ಣ ರಿತ್ತಿ ಅವರು ದೂರುದಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು. ಹಲ್ಲೆ ಮಾಡಿದ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಿ ಅಂತ ಹೇಳಲು ಹೋದವರ ಮೇಲೆ ಪಿಎಸ್‌ಐ ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿದರು. ಈ ವಿಷಯವಾಗಿ ಹಲ್ಲೆಕೋರರನ್ನು ಬಂಧಿಸಿ ಶಿಕ್ಷೆ ನೀಡಬೇಕು. ಜೊತೆಗೆ ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡಿದ ಪಿಎಸ್‌ಐ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಂಘಟಿಕರು ಆಗ್ರಹಿಸಿದರು. ಇದನ್ನೂ ಓದಿ: ಡಿಕೆ ಸುರೇಶ್‌ಗೆ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಸಿಗಲಿ: ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ಬೆಂಬಲಿಗರು

    ಘಟನೆ ಆಗಿ ಐದು ದಿನಗಳಾದರೂ ಯಾವುದೇ ಕ್ರಮ ಆಗದೇ ಇರುವುದಕ್ಕೆ ಲಕ್ಷ್ಮೇಶ್ವರ ಪಟ್ಟಣ ಬಂದ್ ಕರೆ ನೀಡಲಾಗಿದೆ. ಗೋಸಾವಿ ಸಮಾಜ, ಶ್ರೀರಾಮಸೇನೆ ಸೇರಿದಂತೆ ಅನೇಕ ಸಂಘಟಿಕರು ಈ ಬಂದ್‌ಗೆ ಬೆಂಬಲ ಸೂಚಿಸಿರುವುದಾಗಿ ಹೇಳಿದ್ದಾರೆ. ಅ.19ರಂದು ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶಿಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಬಂದ್‌ಗೆ ಕರೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 50:50 ಅನುಪಾತದಲ್ಲಿ ಹಂಚಿಕೆಯಾಗಿರೊ 1,400 ನಿವೇಶನಗಳನ್ನ ಜಪ್ತಿ ಮಾಡಿ; ಸಿಎಂಗೆ ಬಿಜೆಪಿ ಶಾಸಕ ಆಗ್ರಹ

    ಈ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ ಕನ್ನಡಪರ ಹೋರಾಟಗಾರ ಶರಣು ಗೋಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಘಟನಾಕಾರ ಶರಣು ಅವರು ಅನ್ಯಕೋಮಿನ ಯುವಕರು ಹಾಗೂ ಪಿಎಸ್‌ಐ ರಿತ್ತಿ ಅವರನ್ನು ಎತ್ತಿಕಟ್ಟಿ ಮಾತನಾಡುತ್ತಿದ್ದಾರೆ. ಮುಸ್ಲಿಂ ಓಲೈಕೆ ಸರಿಯಲ್ಲ. ಮೊದಲು ನಿಮಗೆ ಕನ್ನಡ, ನಾಡು, ನುಡಿ, ಭಾಷೆ ಬಗ್ಗೆ ಕಾಳಜಿ ಇರಲಿ. ಶ್ರೀರಾಮಸೇನೆ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದರೆ ಮುಂದೆ ನಿಮ್ಮ ಜಾತಕ ತೆಗೆದು ಇಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಸುಳ್ಳು ಆಪಾದನೆ ಮಾಡ್ತಿದ್ದಾರೆ, ನಾವು ಸಿಎಂ ಜೊತೆ ನಿಲ್ಲಬೇಕು: ಕೆಎನ್ ರಾಜಣ್ಣ

    ಲಕ್ಷ್ಮೇಶ್ವರ ಪಟ್ಟಣದಲ್ಲಿ ಅನ್ಯಕೋಮಿನ ಗೂಂಡಾಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಗಲಾಟೆಗೆ ಕಾರಣರಾದ ಅನ್ಯಕೋಮಿನ ಯುವಕರ ಬಂಧನವಾಗಬೇಕು. ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡಿ ಅಧಿಕಾರದ ದರ್ಪದಿಂದ ಮೆರೆಯುವ ಪಿಎಸ್‌ಐ ಈರಣ್ಣ ರಿತ್ತಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಹಾಲಿನ ದರ ಏರಿಕೆ ಆಗುತ್ತಾ? – ಸಚಿವ ಕೆ.ವೆಂಕಟೇಶ್ ಹೇಳಿದ್ದೇನು?

    ಈ ವೇಳೆ ಶ್ರೀರಾಮಸೇನೆ ರಾಜ್ಯ ಕಾರ್ಯದರ್ಶಿ ರಾಜೂ ಖಾನಪ್ಪನವರ್, ಮಹೇಶ್ ರೋಖಡೆ, ರಾಜು ಗದ್ದಿ, ನಿಖಿಲ್ ಗೋಸಾವಿ, ಸೋಮು ಗುಡಿ, ಕಿರಣ್ ಹಿರೇಮಠ, ವೆಂಕಟೇಶ್ ದೊಡ್ಡಮನಿ, ಈರಣ್ಣ ಪೂಜಾರ, ಪ್ರಾಣೇಶ್ ವ್ಯಾಪಾರಿ, ವಾಸು ಗೋಸಾವಿ, ಮಲ್ಲಿಕಾರ್ಜುನ ಆಳತೋಟದ, ಕಿರಣ್ ಚಿಲ್ಲೂರಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಭಾರತೀಯ ಮೂಲದ ಸ್ವಿಸ್ ಉದ್ಯಮಿಯ ಮಗಳನ್ನು ಬಂಧಿಸಿದ ಉಗಾಂಡಾ – ಮಧ್ಯಪ್ರವೇಶಿಸಲು ವಿಶ್ವಸಂಸ್ಥೆಗೆ ಮನವಿ

  • ಶೌಚಾಲಯ ತುಂಬಿ ಗಬ್ಬು ನಾರುತ್ತಿವೆ, ಒಳ ರೋಗಿಗಳು ಶೌಚಕ್ಕೆ ಬಸ್ ನಿಲ್ದಾಣಕ್ಕೇ ತೆರಳಬೇಕು- ಸರ್ಕಾರಿ ಆಸ್ಪತ್ರೆ ಕರ್ಮಕಾಂಡ

    ಶೌಚಾಲಯ ತುಂಬಿ ಗಬ್ಬು ನಾರುತ್ತಿವೆ, ಒಳ ರೋಗಿಗಳು ಶೌಚಕ್ಕೆ ಬಸ್ ನಿಲ್ದಾಣಕ್ಕೇ ತೆರಳಬೇಕು- ಸರ್ಕಾರಿ ಆಸ್ಪತ್ರೆ ಕರ್ಮಕಾಂಡ

    – ಆಸ್ಪತ್ರೆ ಸಿಬ್ಬಂದಿ ಮೂಗು ಮುಚ್ಚಿಕೊಂಡು ಕೆಲಸ ಮಾಡ್ಬೇಕು

    ಗದಗ: ಸರ್ಕಾರಿ ಆಸ್ಪತ್ರೆಗಳು ಬಡವರ ಪಾಲಿನ ಸಂಜೀವಿನಿ ಅಂತಾರೆ. ಆದರೆ ಈ ಆಸ್ಪತ್ರೆಯಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸದೆ ತುಂಬಿ ತುಳುಕುತ್ತಿದ್ದು, ನಿತ್ಯ ಮೂಗು ಮುಚ್ಚಿಕೊಂಡೇ ರೋಗಿಗಳು ಚಿಕಿತ್ಸೆ ಪಡೆಯಬೇಕು. ಆಸ್ಪತ್ರೆ ಸಿಬ್ಬಂದಿಯದು ಸಹ ಇದೇ ಕಥೆಯಾಗಿದೆ.

    ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆ ಬಡವರ ಪಾಲಿಗೆ ಯಮಸ್ವರೂಪಿಯಾಗಿದೆ. ಆಸ್ಪತ್ರೆಯ ಶೌಚಾಲಯ ತುಂಬಿ ತುಳಕುತ್ತಿದ್ದು, ದುರ್ವಾಸನೆಯಿಂದ ಗಬ್ಬೆದ್ದು ನಾರುತ್ತಿದೆ. ಈ ಸರ್ಕಾರಿ ಆಸ್ಪತ್ರೆಯಲ್ಲಿ ಹೇಳೊರು ಕೇಳೊರು ಯಾರು ಇಲ್ಲದಂತಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಶೌಚಾಲಯ ತುಂಬಿ ಆಸ್ಪತ್ರೆ ತುಂಬೆಲ್ಲಾ ದುರ್ವಾಸನೆ ಬೀರುತ್ತಿದೆ. ಚಿಕಿತ್ಸೆ ನೀಡುವ ಸಿಬ್ಬಂದಿ ಮೂಗು ಮುಚ್ಚಿಕೊಂಡು ಚಿಕಿತ್ಸೆ ನೀಡುವಂತಾಗಿದೆ.

    ಆಸ್ಪತ್ರೆಯಲ್ಲಿರುವ ಒಳ ರೋಗಿಗಳು ಮಲ-ಮೂತ್ರ ವಿಸರ್ಜನೆಗೆ ಬಸ್ ನಿಲ್ದಾಣಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ತೀರಾ ಅನಾರೋಗ್ಯದಿಂದ ಬಳಲುವವರು ಹಾಗೂ ಮಹಿಳೆಯರ ಪರಸ್ಥಿತಿಯಂತೂ ಹೇಳ ತೀರದು. ಹತ್ತಾರು ಸಮಸ್ಯೆಗಳ ಸರಮಾಲೆ ಈ ತಾಲೂಕು ಆಸ್ಪತ್ರೆಯಲ್ಲಿವೆ.

    ಈ ಲಕ್ಷ್ಮೇಶ್ವರ ಆಸ್ಪತ್ರೆಗೆ ಸುತ್ತಲಿನ ಹತ್ತಾರು ಹಳ್ಳಿಯ ನೂರಾರು ಜನರು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಇಲ್ಲಿ ವೈದ್ಯರು, ಸಿಬ್ಬಂದಿ, ಔಷಧಿಗಳ ಕೊರತೆ ಎದ್ದು ಕಾಣುವುದರ ಜೊತೆಗೆ ಸ್ವಚ್ಛತೆ ಇಲ್ಲವಾಗಿದೆ. ಇಂತಹ ಆಸ್ಪತ್ರೆಯಲ್ಲಿ ಗುಣಮುಖರಾಗುವ ಬದಲು, ಹೆಚ್ಚು ರೋಗ ಸೇರುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ. ಆರೋಗ್ಯ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಅಂತಿದ್ದಾರೆ. ಅಧಿಕಾರಿಗಳ ವಿರುದ್ಧ ರೋಗಿಗಳು ಹಾಗೂ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಆಸ್ಪತ್ರೆ ಸ್ವಚ್ಛತೆ ಹಾಗೂ ಇಲ್ಲಿನ ಸಮಸ್ಯೆಗಳು ಸರಿಹೋಗದಿದ್ರೆ ಉಗ್ರ ಹೋರಾಟ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

  • ಬೈಕ್‍ಗೆ ಟಿಪ್ಪರ್ ಡಿಕ್ಕಿ- ಟಿಪ್ಪರ್ ಹಿಂಬದಿ ಚಕ್ರಕ್ಕೆ ಸಿಲುಕಿ ಬಾಲಕಿ ಅಪ್ಪಚ್ಚಿ

    ಬೈಕ್‍ಗೆ ಟಿಪ್ಪರ್ ಡಿಕ್ಕಿ- ಟಿಪ್ಪರ್ ಹಿಂಬದಿ ಚಕ್ರಕ್ಕೆ ಸಿಲುಕಿ ಬಾಲಕಿ ಅಪ್ಪಚ್ಚಿ

    – ಪವಾಡ ರೀತಿ ಬದುಕುಳಿದ ಬಾಲಕ, ಬೈಕ್ ಸವಾರ
    – ಸವಾರನ ಕೈ ಮೇಲೆ ಹರಿದ ಟಿಪ್ಪರ್

    ಗದಗ: ಬೈಕ್‍ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದು ಬೈಕ್‍ನಲ್ಲಿ ಕುಳಿತಿದ್ದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಲಕ್ಷ್ಮೇಶ್ವರದಲ್ಲಿ ನಡೆದಿದೆ.

    ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ರತ್ನಾ ಮಹೇಂದ್ರಕರ್ (14) ಮೃತ ದುರ್ದೈವಿ. ಬೈಕ್ ಸವಾರ ಫಕ್ಕೀರಯ್ಯ ಹಿರೇಮಠ ಹಾಗೂ ಸಚಿನ್ (2) ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

    ಕೆಲಸದ ನಿಮಿತ್ತ ಫಕ್ಕೀರಯ್ಯ ಹಿರೇಮಠ ಅವರು ಲಕ್ಷ್ಮೇಶ್ವರಕ್ಕೆ ಬಂದಿದ್ದರು. ಅವರೊಂದಿಗೆ ಅದೇ ಗ್ರಾಮದ ರತ್ನಾ ಹಾಗೂ ಸಚಿನ್ ಕೂಡ ಬಂದಿದ್ದರು. ಕೆಲಸ ಮುಗಿಸಿಕೊಂಡು ಶಿಗ್ಲಿಗೆ ಮರಳುತ್ತಿದ್ದಾಗ ವೇಗವಾಗಿ ಬಂದ ಟಿಪ್ಪರ್ ಚಾಲಕ ಬೈಕ್‍ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಚಾಲನ ನಿಯಂತ್ರಣ ತಪ್ಪಿ ಬೈಕ್ ಬಿದ್ದಿದ್ದು, ಹಿಂಬದಿಯಲ್ಲಿ ಕುಳಿತಿದ್ದ ರತ್ನಾ ಟಿಪ್ಪರ್ ಹಿಂಬದಿಯ ಚಕ್ರದಲ್ಲಿ ಸಿಲುಕಿ ಮೃತಪಟ್ಟಿದ್ದಾಳೆ.

    ಅದೃಷ್ಟವಶಾತ್ ಫಕ್ಕೀರಯ್ಯ ಹಾಗೂ ಬಾಲಕ ಸಚಿನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಫಕ್ಕೀರಯ್ಯ ಅವರ ಕೈ ಮೇಲೆ ಟಿಪ್ಪರ್ ಹರಿದಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಟಿಪ್ಪರ್ ಚಾಲಕನ ಅತಿಯಾದ ವೇಗವೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಈ ಘಟನೆ ನಡೆದ ಕೂಡಲೆ ಚಾಲಕ ಸ್ಥಳದಲ್ಲೇ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಟಿಪ್ಪರ್ ಚಾಲಕನಿಗೆ ಪೊಲೀಸರು ಬಲೆ ಬಿಸಿದ್ದಾರೆ.

  • ಟೋಲ್ ಅಳವಡಿಕೆಗೆ ವಿರೋಧ- ಡಿ.30 ರಂದು ಕುಂದಗೋಳ ಬಂದ್

    ಟೋಲ್ ಅಳವಡಿಕೆಗೆ ವಿರೋಧ- ಡಿ.30 ರಂದು ಕುಂದಗೋಳ ಬಂದ್

    ಹುಬ್ಬಳ್ಳಿ: ಲಕ್ಷ್ಮೇಶ್ವರ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಶೆರೆವಾಡ ಬಳಿ ಟೋಲ್ ನಿರ್ಮಿಸಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಡಿ.30ಕ್ಕೆ ಕುಂದಗೋಳ ಪಟ್ಟಣ ಬಂದ್‍ಗೆ ಕರೆ ನೀಡಲಾಗಿದೆ.

    ಟೋಲ್ ನಿರ್ಮಾಣ ವಿರೋಧಿಸಿ ವಿವಿಧ ಸಂಘಟನೆಗಳು, ರೈತ ಸಂಘ ಹಾಗೂ ತಾಲೂಕು ಹಿತರಕ್ಷಣಾ ಸಮಿತಿ ವತಿಯಿಂದ ಕುಂದಗೋಳ ಪಟ್ಟಣ ಬಂದ್ ಮಾಡಲಾಗುವುದೆಂದು ಕಾಂಗ್ರೆಸ್ ಮುಖಂಡ ಶಿವಾನಂದ ಬೆಂತೂರ ತಿಳಿಸಿದ್ದಾರೆ.

    ಕುಂದಗೋಳ ಹಿಂದುಳಿದ ತಾಲೂಕಾಗಿದ್ದು, ಇಲ್ಲಿನ ಜನರು ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಪ್ರತಿನಿತ್ಯ ಸಾವಿರಾರು ಜನ ಹುಬ್ಬಳ್ಳಿ ಲಕ್ಷ್ಮೇಶ್ವರಕ್ಕೆ ಕೆಲಸ ಅರಸಿಕೊಂಡು ಹೋಗುತ್ತಿದ್ದು, ಟೋಲ್ ನಿರ್ಮಾಣದಿಂದ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಬಂದ್‍ಗೆ ಕರೆ ನೀಡಲಾಗಿದೆ ಎಂದು ಶಿವಾನಂದ ತಿಳಿಸಿದ್ದಾರೆ.

    ಟೋಲ್ ನಿರ್ಮಾಣ ಹಗಲು ದರೋಡೆಯಾಗಿದ್ದು, ಕೂಡಲೇ ಸ್ಥಗಿತಗೊಳಿಸದಿದ್ದರೆ ಟೋಲ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಡಿಸೆಂಬರ್ 30ರಂದು ನಡೆಯುವ ಕುಂದಗೋಳ ಪಟ್ಟಣ ಬಂದ್ ಗೆ ತಾಲೂಕಿನ ಜನರ ಬೆಂಬಲವಿದ್ದು, ಯಾವುದೇ ಕಾರಣಕ್ಕೂ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.