Tag: lakshimpur kheri

  • ನಿಮ್ಮ ಕಾಲುಗಳನ್ನು ನೀವೇ ಎಳೆದುಕೊಳ್ಳುತ್ತಿದ್ದೀರಿ – ಯುಪಿ ಸರ್ಕಾರಕ್ಕೆ ಸುಪ್ರೀಂ ತರಾಟೆ

    ನಿಮ್ಮ ಕಾಲುಗಳನ್ನು ನೀವೇ ಎಳೆದುಕೊಳ್ಳುತ್ತಿದ್ದೀರಿ – ಯುಪಿ ಸರ್ಕಾರಕ್ಕೆ ಸುಪ್ರೀಂ ತರಾಟೆ

    ನವದೆಹಲಿ: ಎಂಟು ಜನರು ಸಾವನ್ನಪ್ಪಿದ ಲಖಿಂಪುರ್ ಖೇರಿ ಘಟನೆಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಇಂದು ಮತ್ತೊಮ್ಮೆ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇಂದು ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ನೇತೃತ್ವದ ತ್ರಿ ಸದಸ್ಯ ಪೀಠ “ನಿಮ್ಮ ಕಾಲುಗಳನ್ನು ನೀವೇ ಎಳೆದುಕೊಳ್ಳುತ್ತಿದ್ದೀರಿ” ಎಂದು ಸರ್ಕಾರವನ್ನು ಟೀಕಿಸಿದೆ.

    ಇಂದು ವಿಚಾರಣೆ ವೇಳೆ ಉತ್ತರ ಪ್ರದೇಶ ಸರ್ಕಾರ ಪರವಾಗಿ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ, ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಹರೀಶ್ ಸಾಳ್ವೆ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮು.ನ್ಯಾ ಎನ್‍ವಿ ರಮಣ ನೀವೂ ಈಗ ವರದಿ ಸಲ್ಲಿಸುವ ಅವಶ್ಯಕತೆ ಇಲ್ಲ, ನಾವು ಈ ವರದಿಗಾಗಿ ನಿನ್ನೆ ರಾತ್ರಿ ಒಂದು ಗಂಟೆವರೆಗೂ ಕಾದೆವು. ಆದರೆ ವರದಿ ಸಲ್ಲಿಕೆಯಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಳಿಕ ಹರೀಶ್ ಸಾಳ್ವೆ ಬಂಧಿತ ಆರೋಪಿಯ ಮಾಹಿತಿಯನ್ನು ಕೋರ್ಟಿಗೆ ನೀಡಿದರು. ಈ ವೇಳೆ ಪ್ರತಿಕ್ರಿಯಿಸಿದ ಪೀಠ, ಯುಪಿ ಸರ್ಕಾರ ಆರೋಪಿಗಳ ವಿರುದ್ಧ ಮೃದುವಾಗಿ ವರ್ತಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿತು. ಇದಕ್ಕೆ ಉತ್ತರ ನೀಡಿದ ಸಾಳ್ವೆ, ಈವರೆಗೂ ಎರಡು ಪ್ರಕರಣ ಸಂಬಂಧ 10 ಮಂದಿಯನ್ನು ಬಂಧಿಸಲಾಗಿದೆ. ಒಂದು ರೈತರ ಮೇಲೆ ವಾಹನ ಚಲಾಯಿಸಿದ್ದು, ಮತ್ತೊಂದು ಹತ್ಯೆಗೆ ಸಂಬಂಧಿಸಿದ್ದು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮೃತ ರೈತರಿಗೆ ಗೌರವ ಸಲ್ಲಿಸಿದ ಪ್ರಿಯಾಂಕಾ ಗಾಂಧಿ – ಲಖೀಂಪುರ್ ಖೇರಿಯಲ್ಲಿ ಭಾರಿ ಭದ್ರತೆ

    ಮುಂದುವರಿದು ಹತ್ತು ಆರೋಪಿಗಳ ಪೈಕಿ ನಾಲ್ಕು ಮಂದಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ, ಆರು ಮಂದಿ ನ್ಯಾಯಂಗ ಬಂಧನದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು. ಇದಕ್ಕೆ ಮರು ಪ್ರಶ್ನೆ ಮಾಡಿದ ಪೀಠ ಬಾಕಿ ಆರು ಮಂದಿಯನ್ನು ಕಸ್ಟಡಿಗೆ ಯಾಕೆ ಪಡೆಯಲಿಲ್ಲ ಎಂದು ಕೇಳಿತು. ಅಲ್ಲದೇ 44 ಮಂದಿ ಸಾಕ್ಷಿಗಳ ಪೈಕಿ ಕೇವಲ 4 ಮಂದಿಯನ್ನು ವಿಚಾರಣೆ ನಡೆಸಿರುವ ಬಗ್ಗೆ ಪೀಠ ಪ್ರಶ್ನೆ ಮಾಡಿತು.

    ಇದಕ್ಕೆ ಉತ್ತರಿಸಿದ ಹರೀಶ್ ಸಾಳ್ವೆ, ಬಾಕಿ ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಅದಕ್ಕೆ ಮತ್ತಷ್ಟು ಕಾಲಾವಕಾಶ ಬೇಕು ಎಂದು ಕೋರಿದರು. ಇದಕ್ಕೆ ಅವಕಾಶ ನೀಡಿದ ಕೋರ್ಟ್ ಅಕ್ಟೋಬರ್26 ಕ್ಕೆ ವಿಚಾರಣೆ ಮುಂದೂಡಿತು. ಇದನ್ನೂ ಓದಿ: ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ