Tag: Lakhan Jarakiholi

  • ಜಾರಕಿಹೊಳಿ ಬ್ರದರ್ಸ್ ಸವಾಲು- ಹೈಕಮಾಂಡ್ ಮೊರೆ ಹೋದ ಹೆಬ್ಬಾಳ್ಕರ್

    ಜಾರಕಿಹೊಳಿ ಬ್ರದರ್ಸ್ ಸವಾಲು- ಹೈಕಮಾಂಡ್ ಮೊರೆ ಹೋದ ಹೆಬ್ಬಾಳ್ಕರ್

    ಬೆಂಗಳೂರು/ಬೆಳಗಾವಿ: ಸಹೋದರರ ಸವಾಲಿನ ಹಿಂದೆ ಬೇರೆಯದೆ ಕಹಾನಿ ಇದೆಯಾ ಎಂಬ ಪ್ರಶ್ನೆ ಕಾಡುತ್ತಿದ್ದು, ಪರಸ್ಪರ ಸವಾಲು ಹಾಕಿಕೊಂಡು ತೊಡೆ ತಟ್ಟಿರುವ ಸಹೋದರರ ನಡೆಯ ಹಿಂದೆ ಮ್ಯಾಚ್ ಫಿಕ್ಸಿಂಗ್ ನೆರಳಿದೆಯಾ ಎಂಬ ಅನುಮಾನವೊಂದು ಇದೀಗ ಕೈ ನಾಯಕರಲ್ಲಿ ಹುಟ್ಟಿಕೊಂಡಿದೆ.

    ಹೌದು. ಗೋಕಾಕ್ ಅಂಗಳದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ನಡುವೆ ನಡೆಯುತ್ತಿರುವ ಫೈಟ್ ಅಸಲಿನಾ ಅಥವಾ ನಕಲಿನಾ ಅನ್ನೋ ಅನುಮಾನವೊಂದು ಕೈ ನಾಯಕರನ್ನ ಕಾಡುತ್ತಿದೆ. ಈ ಬಗ್ಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎನ್ನಲಾಗುತ್ತಿದೆ.

    ಆದ್ದರಿಂದ ಗೋಕಾಕ್ ನಲ್ಲಿ ಸಹೋದರರ ನಡುವೆ ಮ್ಯಾಚ್ ಫಿಕ್ಸಿಂಗ್ ಏನಾದರು ನಡೆಯುತ್ತಿದೆಯಾ ಎಂಬ ಬಗ್ಗೆ ತಿಳಿಯಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ .ಕೆ.ಸಿ ವೇಣುಗೋಪಾಲ್ ಅವರೇ ಇಂದು ಬೆಳಗಾವಿಗೆ ಬರಲಿದ್ದಾರೆ. ಗೋಕಾಕ್ ಗೆ ಭೇಟಿ ನೀಡಲಿರುವ ವೇಣುಗೋಪಾಲ್, ಪಕ್ಷದ ಅಭ್ಯರ್ಥಿ ಲಖನ್ ಪರ ಪ್ರಚಾರ ಅಷ್ಟೆ ಅಲ್ಲದೆ ಗೋಕಾಕ್ ಅಖಾಡದ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಲಿದ್ದಾರೆ.

    ಹೀಗೆ ಗೋಕಾಕ್ ಅಖಾಡದಲ್ಲಿ ಜಾರಕಿಹೊಳಿ ಸಹೋದರರ ನಡುವೆ ಮ್ಯಾಚ್ ಫಿಕ್ಸಿಂಗ್ ಏನಾದರು ನಡೆದಿದೆಯಾ ಎಂಬುದರ ಬಗ್ಗೆ ಕೈ ಹೈಕಮಾಂಡ್ ಕಣ್ಣಿಟ್ಟಿದ್ದು ಸ್ವತಃ ರಾಜ್ಯ ಕಾಂಗ್ರೆಸ್ ಉಸ್ತುವಾರಿಯೇ ಭೇಟಿಗೆ ಮುಂದಾಗಿದ್ದಾರೆ. ಸಾಹುಕಾರ್ ಸಹೋದರರ ಪಾಲಿಗೆ ಲಕ್ಷ್ಮಿ ದೂರಿನಿಂದ ಏನಾಗುತ್ತೆ ಅನ್ನೋದೇ ಸದ್ಯದ ಕುತೂಹಲವಾಗಿದೆ.

  • ಸತೀಶ್ ಜಾರಕಿಹೊಳಿಗೆ ಆರತಿ ಬೆಳಗಿ, ಕಾಲಿಗೆ ಬಿದ್ದ ಮಹಿಳೆಯರು

    ಸತೀಶ್ ಜಾರಕಿಹೊಳಿಗೆ ಆರತಿ ಬೆಳಗಿ, ಕಾಲಿಗೆ ಬಿದ್ದ ಮಹಿಳೆಯರು

    ಬೆಳಗಾವಿ: ಗೋಕಾಕ್ ಕ್ಷೇತ್ರದಲ್ಲಿ ಉಪಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಪ್ರಚಾರಕ್ಕೆ ತೆರೆಳಿದ್ದ ಸತೀಶ್ ಜಾರಕಿಹೊಳಿ ಅವರಿಗೆ ಅಂಕಲಗಿ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಕೋರಲಾಯ್ತು. ಅದರಲ್ಲೂ ಸತೀಶ್ ಅವರಿಗೆ ಮಹಿಳೆಯರು ಆರತಿ ಬೆಳಗಿ, ಕಾಲಿಗೆ ಬಿದ್ದಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

    ಬೆಳಗಾವಿಯ ಅಂಕಲಗಿ ಗ್ರಾಮದಲ್ಲಿ ತಮ್ಮ ಲಖನ್ ಪರ ಉಪಚುನಾವಣಾ ಪ್ರಚಾರಕ್ಕೆ ಸತೀಶ್ ಜಾರಕಿಹೊಳಿ ತೆರೆಳಿದ್ದರು. ಈ ವೇಳೆ ಗ್ರಾಮಕ್ಕೆ ಆಗಮಿಸಿದ್ದ ಸತೀಶ್ ಜಾರಕಿಹೊಳಿಗೆ ಹೂಮಳೆಗೈದು ಜನರು ಸ್ವಾಗತ ಕೋರಿದರು. ಬಳಿಕ ಗ್ರಾಮದ ಮಹಿಳೆಯರು ಸತೀಶ್ ಜಾರಕಿಹೊಳಿ ಅವರಿಗೆ ಆರತಿ ಬೆಳಗಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸಖತ್ ವೈರಲ್ ಆಗಿದೆ.

    ಡಿಸೆಂಬರ್ 5ರಂದು ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಕೇವಲ 10 ದಿನ ಬಾಕಿ ಇದೆ. ಅದರಲ್ಲೂ ಗೋಕಾಕ್ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರ ನಡುವೆಯೇ ಸ್ಪರ್ಧೆ ನಡೆಯುತ್ತಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

    ಕಾಂಗ್ರೆಸ್ಸಿಂದ ಲಖನ್ ಜಾರಕಿಹೊಳಿ ಸ್ಪರ್ಧಿಸುತ್ತಿದ್ದರೆ, ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಕಣಕ್ಕಿಳಿದಿದ್ದಾರೆ. ಇತ್ತ ಜೆಡಿಎಸ್‍ನಿಂದ ಅಶೋಕ್ ಪೂಜಾರಿ ಟಕ್ಕರ್ ಕೊಡಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

  • ರಮೇಶ್ ತಲೆ ಮೊಬೈಲ್ ಇದ್ದಂತೆ, ಯಾವಾಗ ಬೇಕಾದ್ರೂ ಹ್ಯಾಂಗ್ ಆಗುತ್ತೆ: ಸತೀಶ್

    ರಮೇಶ್ ತಲೆ ಮೊಬೈಲ್ ಇದ್ದಂತೆ, ಯಾವಾಗ ಬೇಕಾದ್ರೂ ಹ್ಯಾಂಗ್ ಆಗುತ್ತೆ: ಸತೀಶ್

    – ಸಚಿವನಾಗಲು ಲಕ್ಷ್ಮಿ ಕಾಲು ಹಿಡಿದಿದ್ದ ರಮೇಶ್

    ಬೆಳಗಾವಿ: ಉಪ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಗೋಕಾಕ್ ನಲ್ಲಿ ಸಹೋದರರ ಮುನಿಸು ಜೋರಾಗಿದೆ. ರಮೇಶ್ ಜಾರಕಿಹೊಳಿ ತಲೆ ಮೊಬೈಲ್ ಇದ್ದಹಾಗೆ. ಅದು ಯಾವಾಗ ಬೇಕಾದರೂ ಹ್ಯಾಂಗ್ ಆಗುತ್ತದೆ ಎಂದು ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ರಮೇಶ್ ನ ಮಂತ್ರಿ ಮಾಡಿದರು. ಹೆಬ್ಬಾಳ್ಕರ್ ಕೈಕಾಲು ಬಿದ್ದು, ಅತ್ತು ಮಂತ್ರಿಯಾಗಿದ್ದನು. ಲಕ್ಷ್ಮಿ ಹೆಬ್ಬಾಳ್ಕರ್ ಪವರ್ ಫುಲ್ ಇಲ್ಲ ಎಂದು ಬಹಿರಂಗವಾಗಿ ಹೇಳಲಿ ನೋಡೋಣ. ಈ ಕಾರಣದಿಂದ ನಾನು ಲಕ್ಷ್ಮಿ ಜೊತೆಗೆ ಜಗಳ ಆಡಿದ್ದೆ. ಡಿಕೆಶಿ, ಹೆಬ್ಬಾಳ್ಕರ್ ಗೋಕಾಕ್ ಪ್ರಚಾರಕ್ಕೆ ಬರಲಿದ್ದಾರೆ. ರಮೇಶ್ ಮಂತ್ರಿ ಮಾಡಿದ್ದು ಹೇಗೆ ಎಂದು ಅವರೇ ಹೇಳಲಿದ್ದಾರೆ. ಯಡಿಯೂರಪ್ಪನನ್ನು ರಮೇಶ್ ಯಾವ ಗುಂಡಿಯಲ್ಲಿ ಹಾಕುತ್ತಾನೆ ಗೊತ್ತಿಲ್ಲ ಎಂದು ಹೇಳಿದರು.

    25 ವರ್ಷ ರಮೇಶ್ ಜಾರಕಿಹೊಳಿ ಸಹ ಕೈಚೀಲ ಹಿಡಿದಿದ್ದಾನೆ. ಯಾವುದೇ ಪಕ್ಷದಲ್ಲಿ ಸ್ವಾಮಿನಿಷ್ಠೆ ಬೇಕು. ರಾಜಕೀಯದಲ್ಲಿ ಬೆಳೆಯೋಕೆ ಗಾಡ್ ಫಾದರ್ ಬೇಕೇ ಬೇಕು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ಈ ಸಂಸ್ಕೃತಿ ಇದೆ. ಕೈಚೀಲ ಹಿಡಿಯೋದು ಅಂದರೆ ಚಮಚಾಗಿರಿ ಮಾಡೋದು ಅಂತ ಅಲ್ಲ. ರಮೇಶ್ ಜಾರಕಿಹೊಳಿ ಶಂಕ್ರಾನಂದ್ ಕೈಚೀಲ ಹಿಡಿದು ಓಡಾಡಿದನು. ಹೆಬ್ಬಾಳ್ಕರ್, ಡಿಕೆಶಿ ಹಾಗೂ ರಮೇಶ್ ಜಾರಕಿಹೊಳಿ ಒಂದು ಗ್ರೂಪ್‍ನಲ್ಲಿ ಇದ್ದವರು. ಆ ನಂತರ ಸಮಸ್ಯೆ ಆಗಿ ರಮೇಶ್ ಹೊರ ಬಂದಿದ್ದಾನೆ ಎಂದರು.

    ಷೇರ್ ಮಾರ್ಕೆಟ್ ರೀತಿ ರಮೇಶ್ ಜಾರಕಿಹೊಳಿ ಅಪ್ ಅಂಡ್ ಡೌನ್ ಆಗ್ತಾನೆ. ರಮೇಶ್ ಮೊದಲು ಕೆ.ಎಚ್ ಪಾಟೀಲ್, ಎಸ್ ಎಂ ಕೃಷ್ಣ ನಂತರ ಸಿದ್ದರಾಮಯ್ಯ ನಮ್ಮ ಲೀಡರ್ ಅಂತ ಹೇಳಿದನು. ಎರಡು ವರ್ಷಗಳ ಹಿಂದೆ ಡಿಕೆ ಶಿವಕುಮಾರ್ ನನ್ನು ಸಿಎಂ ಮಾಡಲು ಹೊರಟಿದ್ದನು. ತನಗೆ ಹೇಗೆ ಬೇಕು ಹಾಗೆಯೇ ಬದಲಾವಣೆ ಆಗುತ್ತಾನೆ. ಸುಳ್ಳು ಹೇಳುವುದರಲ್ಲಿ ರಮೇಶ್‍ಗೆ ಪಿಎಚ್‍ಡಿ ಆಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತಾರಕಕ್ಕೇರಿತು ಗೋಕಾಕ್ ಬೈ ಎಲೆಕ್ಷನ್ ಫೈಟ್ – ರಮೇಶ್ ಸೋಲಿಸೋಕೆ ಲಕ್ಷ್ಮಿ ಪಣ

    ಇದೇ ವೇಳೆ ಲಖನ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬ ರಮೇಶ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸತೀಶ್, ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದ ಜನರ ಬೆನ್ನಿಗೆ ರಮೇಶ್ ಚೂರಿ ಹಾಕಿದ್ದಾನೆ. ಲಖನ್ ಕಾಂಗ್ರೆಸ್ಸಿನಲ್ಲಿ ಇದ್ರು ಈಗಲೂ ಕಾಂಗ್ರೆಸ್ಸಿನಲ್ಲಿಯೇ ಇದ್ದಾರೆ. ಕಾಶಿಯಲ್ಲಿ ಅರ್ಧ ತಲೆ ಬೋಳಿಸಿದ ಹಾಗೆಯೇ ರಮೇಶ್ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಸೇರೋ ಹಿಂದಿನ ರಾತ್ರಿ ನಿದ್ದೆಯೇ ಮಾಡಿಲ್ಲ- ಸತ್ಯ ಬಿಚ್ಚಿಟ್ಟ ರಮೇಶ್ ಜಾರಕಿಹೊಳಿ

    ಲಕ್ಷ್ಮಿ ಹೆಬ್ಬಾಳ್ಕರ್ ಮನೆಗೆ ಈ ಹಿಂದೆ ಚಹಾ ಕುಡಿಯಲು ಹೋಗಿದ್ದು ನಿಜ. ಈಗ ಹೋಗಿಲ್ಲ, ಇನ್ನು ಮುಂದೆ ಹೋಗುತ್ತೇನೆ. ಗೋಕಾಕ್ ಉಸ್ತುವಾರಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಇದ್ದಾರೆ. ಹೀಗಾಗಿ ಚಹಾ, ಊಟಕ್ಕೆ ಇನ್ನು ಮುಂದೆ ಹೋಗುತ್ತೇನೆ. ರಮೇಶ್ ನನ್ನು ಸಚಿವನನ್ನಾಗಿ ಮಾಡಿದ್ದಕ್ಕೆ ನಾನು ಲಕ್ಷ್ಮಿಯನ್ನು ವಿರೋಧಿಸಿದೆ. ಲಕ್ಷ್ಮಿ, ಡಿಕೆಶಿ ನನ್ನ ನಡುವೆ ಯಾವುದೇ ಜಗಳ ಇಲ್ಲ. ಹುಚ್ಚನನ್ನು ಮಂತ್ರಿ ಮಾಡಿದರು ಅಂತ ಜಗಳ ಇತ್ತು ಅಷ್ಟೇ. ನಾನು, ಡಿಕೆಶಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಚೆನ್ನಾಗಿಯೇ ಇದ್ದೇವೆ. ಮೊದಲಿನಿಂದಲೂ ರಮೇಶ್ ಜಾರಕಿಹೊಳಿ ಸ್ವಾರ್ಥಿ. ಹೀಗಾಗಿ ಆತನನ್ನು ಮೊದಲಿನಿಂದಲೂ ವಿರೋಧಿಸುತ್ತೇನೆ. ಈಗನೂ ಮಾಡುತ್ತೇನೆ ಮುಂದೆಯೂ ಮಾಡುವುದಾಗಿ ತಿಳಿಸಿದರು. ಇದನ್ನೂ ಓದಿ: ಎಚ್.ವಿಶ್ವನಾಥ್ ನನ್ನ ಗುರು, ಸಿದ್ದರಾಮಯ್ಯ ನಮ್ಮ ಜೂನಿಯರ್: ರಮೇಶ್ ಜಾರಕಿಹೊಳಿ

  • Exclusive: ಬೆಳಗಾವಿ ರಾಜಕಾರಣದಲ್ಲೀಗ ವಿಷಕನ್ಯೆ ರಾಜಕೀಯ..!

    Exclusive: ಬೆಳಗಾವಿ ರಾಜಕಾರಣದಲ್ಲೀಗ ವಿಷಕನ್ಯೆ ರಾಜಕೀಯ..!

    – ಬೈಎಲೆಕ್ಷನ್ ಹೊತ್ತಲ್ಲೇ ಸದ್ದಾಗ್ತಿದೆ ರಕ್ತ ಕಣ್ಣೀರು-2

    ಬೆಂಗಳೂರು/ಬೆಳಗಾವಿ: ಸಹೋದರರ ಸವಾಲಿಗೆ ಸಾಕ್ಷಿ ಆಗಿರುವ ರಾಜಕೀಯ ಅಖಾಡ ಬೆಳಗಾವಿ. ಸಹೋದರರ ನಡುವಿನ ಸವಾಲು ಪ್ರತಿ ಸವಾಲಿನ ಮಧ್ಯೆ ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಅದು ಅಂತಿಂತ ಬಾಂಬ್ ಅಲ್ಲ ಸಹೋದರರ ಸವಾಲನ್ನು ಮೀರಿದ ವಿಷ ಕನ್ಯೆಯ ಕಥೆ. ಶೀಘ್ರವಾಗಿ ಬೆಳ್ಳಿ ಪರದೆ ಮೇಲೆ ವಿಷ ಕನ್ಯೆಯ ರಕ್ತ ಕಣ್ಣೀರಿನ ಕಥೆ ಬರಲಿದೆ.

    ಹೌದು. ರಾಜ್ಯ ರಾಜಕಾರಣದಲ್ಲಿರುವ ವಿಷ ಕನ್ಯೆಯೊಬ್ಬರ ಕುರಿತು ಲಖನ್ ಜಾರಕಿಹೊಳಿ ಚಲನಚಿತ್ರ ನಿರ್ಮಾಣ ಮಾಡಲಿದ್ದಾರೆ. ಬೆಳಗಾವಿ ಜಿಲ್ಲಾ ರಾಜಕಾರಣದ ವಸ್ತು ವಿಷಯ ಇಟ್ಟುಕೊಂಡು ಈ ಚಿತ್ರ ನಿರ್ಮಾಣ ಮಾಡುತ್ತಾರೆ. ಆ ವಿಷ ಕನ್ಯೆಯೊಬ್ಬರ ಕುರಿತ ಚಲನ ಚಿತ್ರಕ್ಕೆ ರಕ್ತ ಕಣ್ಣೀರು ಪಾರ್ಟ್-2 ಎಂದು ನಾಮಕರಣ ಮಾಡಲಿದ್ದಾರೆ.

    ವಿಷ ಕನ್ಯೆಯ ವಿಷ ವರ್ತುಲದಲ್ಲಿ ಸಿಲುಕಿದ ಭಗ್ನ ಪ್ರೇಮಿ ರಾಜಕಾರಣಿಯೊಬ್ಬರ ರಾಜಕೀಯ ಜೀವನದ ಬಗ್ಗೆ ಕಥೆಗೆ ಸ್ಕ್ರಿಪ್ಟ್ ಸಿದ್ಧವಾಗುತ್ತಿದೆಯಂತೆ. ಉಪೇಂದ್ರರ ರಕ್ತ ಕಣ್ಣೀರು ಮಾದರಿಯಲ್ಲೇ ರಕ್ತ ಕಣ್ಣೀರು ಪಾರ್ಟ್ -2 ಚಿತ್ರ ನಿರ್ಮಾಣ ಮಾಡುತ್ತೇನೆ ಅಂತ ಪಬ್ಲಿಕ್ ಟಿವಿಗೆ ಸ್ವತಃ ಲಖನ್ ಜಾರಕಿಹೊಳಿ ಹೇಳಿದ್ದಾರೆ.

    ಗೋಕಾಕ್ ಉಪ ಚುನಾವಣಾ ಅಖಾಡದಲ್ಲಿ ಪರಸ್ಪರ ತೊಡೆ ತಟ್ಟಿರುವ ಜಾರಕಿಹೊಳಿ ಸಹೋದರರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ರಮೇಶ್ ಜಾರಕಿ ಹೊಳಿ ಸಹೋದರ ಲಖನ್ ಜಾರಕಿಹೊಳಿ ಇಂಥದೊಂದು ಬಾಂಬ್ ಸಿಡಿಸಿದ್ದಾರೆ. ರಾಜಕೀಯ ಭಗ್ನ ಪ್ರೇಮಿ ಹಾಗೂ ವಿಷ ಕನ್ಯೆ ಇಬ್ಬರ ಕುರಿತ ಕಥಾ ಹಂದರವಿರುವ ರಕ್ತ ಕಣ್ಣೀರು ಪಾರ್ಟ್-2 ನಿರ್ಮಾಣ ಮಾಡುತ್ತೇನೆ ಚುನಾವಣೆ ಮುಗಿಯಲಿ ಎಂದಿದ್ದಾರೆ.

    ಚಿತ್ರಕ್ಕೆ ರಮೇಶ್ ಶುಭಹಾರೈಕೆ!
    ರಾಜಕೀಯ ಅಗ್ನಿ ಪರೀಕ್ಷೆಗೆ ಇಳಿದಿರುವ ಲಖನ್ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಬಗ್ಗೆ ಎದುರಾಳಿ ರಮೇಶ್ ಜಾರಕಿಹೊಳಿ ಶುಭ ಹಾರೈಸಿದ್ದಾರೆ. ರಕ್ತ ಕಣ್ಣೀರು ಚಿತ್ರ ಮಾಡುವುದಾದರೆ ಮಾಡಲಿ. ವಿಷ ಕನ್ಯೆ ಯಾರೋ ಗೊತ್ತಿಲ್ಲ. ವಿಷ ಕನ್ಯೆಯರು ಇದ್ದರೆ ಮೈಸೂರು ಅಥವಾ ಮಂಗಳೂರಿನ ಕಡೆ ಇರಬೇಕು ಅಂತ ಲಖನ್‍ಗೆ ರಮೇಶ್ ಟಾಂಗ್ ಕೊಟ್ಟಿದ್ದಾರೆ.

    ಹೀಗೆ ರಾಜಕೀಯ ಅಖಾಡದಲ್ಲಿ ಅಗ್ನಿ ಪರೀಕ್ಷೆ ಎದುರಿಸುತ್ತಿರುವ ಲಖನ್ ಜಾರಕಿಹೊಳಿ ರಕ್ತ ಕಣ್ಣೀರು ಪಾರ್ಟ್-2 ಚಿತ್ರ ನಿರ್ಮಾಣ ಮಾಡುವ ಮಾತನಾಡಿದ್ದಾರೆ. ರಾಜಕಾರಣದ ವಿಷ ಕನ್ಯೆ ಒಬ್ಬರ ಕುರಿತ ಆ ಚಿತ್ರ ನಿರ್ಮಾಣಕ್ಕೇನೋ ನಿರ್ಧರಿಸಿದ್ದಾರೆ. ಆದರೆ ಆ ವಿಷ ಕನ್ಯೆ ಯಾರು ಅಂತ ಗೊತ್ತಾಗಬೇಕಾದರೆ ರಕ್ತ ಕಣ್ಣೀರು ಪಾರ್ಟ್2 ಬಿಡುಗಡೆವರೆಗೆ ಕಾಯಲೇಬೇಕು.

  • ಗೋಕಾಕ್‍ನಲ್ಲಿ ಸಹೋದರರ ಸವಾಲ್!

    ಗೋಕಾಕ್‍ನಲ್ಲಿ ಸಹೋದರರ ಸವಾಲ್!

    ಬೆಳಗಾವಿ: ಗೋಕಾಕ್ ಉಪಚುನಾವಣೆ ಇದೀಗ ಸಹೋದರತ್ವದ ಮಾತೃ ಪ್ರೇಮವನ್ನು ತೂಗೊಯ್ಯಾಲೆಯಂತಾಗಿಸಿದೆ. 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ಪ್ರತಿನಿಧಿಸಿದ ರಮೇಶ್ ಜಾರಕಿಹೊಳಿ ಅತೃಪ್ತರಾಗಿ ಕೊನೆಗೆ ಅನರ್ಹರಾಗಿದ್ದಾರೆ. ವಿಧಿಯಿಲ್ಲದೇ ಬಿಜೆಪಿಯನ್ನು ಅಪ್ಪಿಕೊಂಡ ಇವರ ನಿರ್ಧಾರವನ್ನ ಜನ ಒಪ್ಪಿಕೊಳ್ಳಲಿ ಎಂದು ಜನಾದೇಶ ಪಡೆಯಲು ಕಾತುರರಾಗಿದ್ದಾರೆ. ಆದರೆ ಅಣ್ಣ ರಮೇಶ್ ನಾಗಾಲೋಟಕ್ಕೆ ಕಾಂಗ್ರೆಸ್ಸಿನಿಂದ ಅಖಾಡಕ್ಕೆ ಇಳಿಯುತ್ತಿರುವ ಕಿರಿಯ ತಮ್ಮ ಲಖನ್ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ.

    10 ವರ್ಷಗಳ ಹಿಂದೆ ರಮೇಶ್ ಸಹೋದರ ಭೀಮಶಿ ಜಾರಕಿಹೊಳಿ ಬಿಜೆಪಿಯಲ್ಲಿ ಸ್ಪರ್ಧಿಸಿ ಸಾವಿರಾರು ಮತಗಳ ಅಂತರದಿಂದ ಪರಾಭವಗೊಂಡಿದ್ದರು. 2008ರ ಚುನಾವಣೆಯಲ್ಲಿ ಬಿರುಸಿನ ಸ್ಪರ್ಧೆ ಏರ್ಪಟ್ಟು 7,700 ಮತಗಳಿಂದ ತಮ್ಮನ ವಿರುದ್ಧವೇ ರಮೇಶ್ ಗೆದ್ದು ಬೀಗಿದ್ದರು. ಇದೀಗ, ಮತ್ತೆ ಸಹೋದರನ ವಿರುದ್ಧವೇ ಅಖಾಡದಲ್ಲಿ ಸೆಣಸಬೇಕಿದೆ.

    ಸತೀಶ್ ಹಾಗೂ ಲಖನ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡರೆ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಕಮಲದ ತೆಕ್ಕೆಯಲ್ಲಿದ್ದಾರೆ. ಇನೋರ್ವ ಸಹೋದರ ಭೀಮಶಿ ಜಾರಕಿಹೊಳಿ ಮಾತ್ರ ತಟಸ್ಥವಾಗಿ ಉಳಿದಿದ್ದು ಗೋಕಾಕ್ ಜನತೆಯಲ್ಲಿ ಕುತೂಹಲ ಕೆರಳಿಸಿದೆ.

  • ಜಾರಕಿಹೊಳಿ ಸಹೋದರರ ಗುದ್ದಾಟ- ಜಾನಪದ ಗೀತೆ ಮೂಲಕ ರಮೇಶ್‍ಗೆ ಸತೀಶ್ ಟಾಂಗ್

    ಜಾರಕಿಹೊಳಿ ಸಹೋದರರ ಗುದ್ದಾಟ- ಜಾನಪದ ಗೀತೆ ಮೂಲಕ ರಮೇಶ್‍ಗೆ ಸತೀಶ್ ಟಾಂಗ್

    -ಚುನಾವಣೆಯಲ್ಲಿ ಅವರು ಅತ್ತು ಉಳಿದ 5 ವರ್ಷ ನಿಮ್ಮನ್ನ ಅಳಿಸ್ತಾರೆ
    -ಯಾರೇ ದುಡ್ಡು ಕೊಟ್ರೂ ತಗೊಳ್ಳಿ, ಮತ ಮಾತ್ರ ನಮ್ಗೇ ಹಾಕಿ

    ಬೆಳಗಾವಿ: ಜಿಲ್ಲೆಯ ಗೋಕಾಕ್ ನಗರಸಭೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಸತೀಶ್ ಜಾರಕಿಹೊಳಿ ಅದನ್ನು ಹಾಡಿನ ಮುಖಾಂತರವೇ ಹೇಳಿ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ.

    ಕಥೆಯ ಕೇಳಿರಣ್ಣ ದ್ರೋಹದ ಕಥೆಯ ಕೇಳಿರಣ್ಣ ಎಂಬ ಹಾಡಿನ ಮೂಲಕ ಸತೀಶ್ ಜಾರಕಿಹೊಳಿ ಗೋಕಾಕ್ ನಗರ ಮತ್ತು ತಾಲೂಕಿನಲ್ಲಿ ನೆರೆ ಬಂದಾಗ ನಡೆದ ಅವ್ಯವಹಾರ ಬಗ್ಗೆ ತಿಳಿಸಿದರು. ಇನ್ನೊಂದೆಡೆ ಮಂಗಳವಾರ ನಡೆದ ಗೋಕಾಕ್ ಪಟ್ಟಣದ ಸ್ವಚ್ಛತಾ ಕಾರ್ಯಕ್ರಮದ ಅಭಿನಂದನಾ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಸಹೋದರ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ, ನಗರ ಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೊತ್ವಾಲ್, ನಾವು ಯಾವ ಹಾಡು ಬಿಡುಗಡೆಗೊಳಿಸಬೇಕು ಎಂಬ ಚಿಂತೆಯಲ್ಲಿದ್ದಾರೆ ಎಂದು ಸತೀಶ್ ಟೀಕಿಸಿದರು.

    ರಮೇಶ್ ಬೆಂಬಲಿಗ ಕೊತ್ವಾಲ ಹೋಸ 500 ರೂ. ನೋಟು ತಗೊಂರು ಬರುತ್ತಾನೆ. ಹಮಾರಾ ಆದ್ಮಿ ಅಂತ ನೀವು ಮೋಸ ಹೋಗದಿರಿ, ಆತ 500 ಕೊಟ್ಟು 500 ಕೋಟಿ ಲೂಟಿ ಮಾಡುತ್ತಾನೆ. ನನಗೆ ನಮ್ಮ ಸಮಸ್ಯೆಗಳನ್ನ ಕೇಳಲು ಶಾಸಕ ಬರಬೇಕು, ಆದರೆ ರಮೇಶ್ ಬೆಂಬಲಿಗರು ಮತ ಕೇಳಲು ಬೇರೆಯೇ ಸೋಗಿನಲ್ಲಿ ಬರುತ್ತಾರೆ. ಯಾರೇ ದುಡ್ಡು ಕೊಟ್ಟರೂ ತೆಗೆದುಕೊಳ್ಳಿ. ಆದರೆ ಮತ ಮಾತ್ರ ನಮಗೇ ಹಾಕಿ ಎಂದು ಲಖನ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದರು.

    ಕೊತ್ವಾಲ, ಅಂಬಿ ಇಬ್ಬರೂ ಗೋಕಾಕ್‍ನಲ್ಲಿ ಪ್ರವಾಹಕ್ಕೆ ಮನೆ ಕಳೆದುಕೊಂಡವರ ಹೆಸರಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ. ಗೋಕಾಕ್ ನಗರವನ್ನು ಸ್ವಚ್ಛ ಮಾಡುವ ಹೆಸರಲ್ಲಿ ಲಕ್ಷ ಲಕ್ಷ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಗೋಕಾಕ್ ತಾಲೂಕಿನಲ್ಲಿ ಹೊರ ಕಾರ್ಖಾನೆ ಬರುತ್ತಿಲ್ಲ, ಕಾರ್ಖಾನೆ ಬಂದರೆ ಅದರಲ್ಲೂ ಪಾಲು ಕೊಡಿ ಅಂತ ರಮೇಶ್ ಬೆಂಬಲಿಗರು ಬಂದು ಕೇಳುತ್ತಾರೆ. ಆದ್ದರಿಂದ ಈ ಬಾರಿ ಉಪಚುಣಾವಣೆಯಲ್ಲಿ ಶಾಸಕರನ್ನ ಬದಲಾವಣೆ ಮಾಡಲೇಬೇಕು. ಸಿಎಂ ಯಡಿಯೂರಪ್ಪ ಅವರನ್ನ ಕರೆಸಿ, ಅವರು ಸ್ಟೇಜ್ ಮೆಲೆ ಕಣ್ಣೀರು ಹಾಕುತ್ತಾರೆ. ರಮೇಶ್ ಜಾರಕಿಹೊಳಿನೂ ಅಳುತ್ತಾನೆ. ಅವರು ಒಂದು ಸಾರಿ ಅತ್ತರೆ ನಿಮ್ಮನ್ನ ಐದು ವರ್ಷ ಕಣ್ಣೀರು ಹಾಕಿಸುತ್ತಾರೆ. ಆದ್ದರಿಂದ ಈ ಬಾರಿ ಲಖನ್ ಅವರನ್ನ ಆರಿಸಿ, ನಗರದ ಅಭಿವೃದ್ಧಿ ಮಾಡಲು ಅವಕಾಶ ನೀಡಿ. ಜನರಿಂದ ನಾವು ಇಷ್ಟೊಂದು ಎತ್ತರಕ್ಕೆ ಬಂದಿದ್ದೆವೆ. ಲಖನ್ ಜಾರಕಿಹೊಳಿ ಮತ್ತು ನಾನು ನಿಮ್ಮ ಪರವಾಗಿದ್ದೇವೆ ಎಂದರು.

    ನಾವೂ ನಿಮ್ಮ ಜೊತೆ ಇದ್ದೇವೆ. ಇಂತಹ 10 ಪ್ರವಾಹ ಬರಲಿ ಗೋಕಾಕ್ ಸ್ವಚ್ಛತೆಗೆ ನಾನೂ ಸದಾ ಸಿದ್ಧ. ಒಂದು ತಿಂಗಳಲ್ಲಿ 40 ಗ್ರಾಮವನ್ನ ಸ್ವಚ್ಛ ಮಾಡಿದ್ದೇವೆ. ಗೋಕಾಕ್ ನಗರದಲ್ಲಿ ಪ್ರವಾಹ ಬಂದ ಬಳಿಕ ಸ್ವಚ್ಛತೆಯನ್ನ ನಾವು ಮಾಡಿದ್ದು. ಆದರೆ ರಮೇಶ್ ಜಾರಕಿಹೊಳಿ ಹಾಗೂ ಅವರ ಬೆಂಬಲಿಗರು ನಗರಸಭೆ ಸ್ವಚ್ಛ ಮಾಡಿದೆ ಎಂದು ಒಂದು ಕೋಟಿ ಲೂಟಿ ಮಾಡಿದ್ದಾರೆ. ಲೂಟಿ ಹಣದಲ್ಲಿ ಅರ್ಧ ಕೊತ್ವಾಲ್ ಗೌಡಾ ಕಿ ಜೆಬ್ ಮೆ, ಅರ್ಧ ಅಂಬಿಗೆ ಎಂದು ಸತೀಶ್ ಮಾರ್ಮಿಕವಾಗಿ ಕಿಡಿಕಾರಿದರು.

    ಮುಂಬರುವ ದಿನಗಳಲ್ಲಿ ನಿಮ್ಮ ಪರವಾಗಿ ಇರುವಂತವರು ಶಾಸಕರಾಗಬೇಕು. ನಮ್ಮನ್ನ ಜನ ಶಾಸಕರನ್ನಾಗಿ ಮಾಡಿದ್ದಾರೆ, ಯಾವುದೇ ಶ್ರೀಮಂತಿಕೆ ನಮ್ಮನ್ನ ಶಾಸಕನನ್ನಾಗಿ ಮಾಡಿಲ್ಲ. ಅದರ ಅರಿವು ನಮಗೆ ಇರಬೇಕು. ಈ ಸ್ಥಾನಕ್ಕೆ ಎಷ್ಟು ಮಹತ್ವ ಇದೆ ಎನ್ನುವುದನ್ನು ಈ ಚುನಾವಣೆಯಲ್ಲಿ ತೋರಿಸಬೇಕು. ಈ ಬಾರಿ ಕೊತ್ವಾಲ್, ಅಂಬಿ, ರಮೇಶ್ ಜಾರಕಿಹೊಳಿ ಮೆರೆ ದರ್ಬಾರ್ ಕಿ ಟೀಮ್ ಎನ್ನುತ್ತಾರೆ. ಇವರು ಗೋಕಾಕ್‍ನ ಮೂರು ಅಮೂಲ್ಯ ರತ್ನಗಳು ಇದ್ದಂಗೆ. ಈ ಮೂರು ರತ್ನ ಹೋಗುವವರೆಗೆ ನಿಮ್ಮನ್ನ ಮಲಗಲಿಕ್ಕೆ ಬಿಡಲ್ಲ. ರಮೇಶ್ ಜಾರಕಿಹೊಳಿ ಕಾಂಗ್ರೆಸ್‍ನಲ್ಲಿ ಇದ್ದರೆ ಮತ್ತೆ ಶಾಸಕ ಆಗುತ್ತಿದ್ದ, ಆದರೆ ಈಗ ಅವರು ಬಿಜೆಪಿಗೆ ಹೋಗಿದ್ದಾರೆ ಟಾಂಗ್ ಕೊಟ್ಟರು.

  • ಬಂಡೆಗೆ ಸವಾಲು ಹಾಕಿದ ಸಾಹುಕಾರನಿಗೆ ಸಂಕಷ್ಟ

    ಬಂಡೆಗೆ ಸವಾಲು ಹಾಕಿದ ಸಾಹುಕಾರನಿಗೆ ಸಂಕಷ್ಟ

    -ಸಿದ್ದರಾಮಯ್ಯಗೆ ಕುಂದಾನಗರಿಯ ಸಾರಥ್ಯ

    ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅನರ್ಹಗೊಂಡಿರುವ ಎಲ್ಲ ಶಾಸಕರನ್ನು ಚುನಾವಣೆಯ ರಣರಂಗದಲ್ಲಿ ಎದುರಾಗುತ್ತೇನೆ. ಅಲ್ಲಿಯೇ ನಮ್ಮ-ನಿಮ್ಮ ಮುಖಾಮುಖಿ ಎಂದು ಸವಾಲು ಹಾಕಿದ್ದರು. ಆದರೆ ಇದೀಗ ತಿಹಾರ್ ಜೈಲು ಸೇರಿರುವ ಡಿಕೆ ಶಿವಕುಮಾರ್ ಉಪ ಚುನಾವಣೆಯಿಂದ ದೂರ ಉಳಿಯುವಂತಾಗಿದೆ. ಡಿ.ಕೆ.ಶಿವಕುಮಾರ್ ಗೆ ಸವಾಲು ಹಾಕಿದ್ದ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿಯನ್ನು ಸೋಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಪಣ ತೊಟ್ಟಿದ್ದಾರೆ. ಹೀಗಾಗಿ ಸಿದ್ದರಾಮಯ್ಯರಿಗೆ ಸತೀಶ್ ಜಾರಕಿಹೊಳಿ ಸಾಥ್ ನೀಡಿದ್ದಾರೆ.

    ಸರ್ಕಾರ ಪತನಕ್ಕೆ ರಮೇಶ್ ಜಾರಕಿಹೊಳಿ ಕಾರಣ ಎಂದು ಡಿಕೆಶಿ ಬಹಿರಂಗವಾಗಿಯೇ ಸವಾಲು ಹಾಕಿದ್ದರು. ಡಿಕೆಶಿ ಅನುಪಸ್ಥಿತಿಯಲ್ಲಿ ಸಿದ್ದರಾಮಯ್ಯ ಗೋಕಾಕ್ ಅಖಾಡದ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಗೋಕಾಕ್ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಿಂದ ಲಖನ್ ಜಾರಕಿಹೊಳಿ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ನಿಟ್ಟಿನಲ್ಲಿ ಲಖನ್ ಜಾರಕಿಹೊಳಿ ಪರ ಕೈ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆ.

    ಪಕ್ಷ ತೊರೆದು ಸರ್ಕಾರ ಬೀಳಿಸಿದ್ದರಿಂದ ಸಹಜವಾಗಿ ರಮೇಶ್ ಜಾರಕಿಹೊಳಿ ಮೇಲೆ ಮುನಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಸೋದರನ ವಿರುದ್ಧ ಬಿರುಸಿನ ಪ್ರಚಾರದ ಪ್ಲಾನ್ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಬಹಿರಂಗ ಸಮಾವೇಶಗಳನ್ನು ಆಯೋಜಿಸುವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಬಾರಿಯ ಉಪ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿಯನ್ನ ಸೋಲಿಸುವ ಜವಾಬ್ದಾರಿ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿ ಹೊಳಿಯವರಿಗೆ ಹೈಕಮಾಂಡ್ ನೀಡಿದೆ ಎಂದು ತಿಳಿದು ಬಂದಿದೆ.

    ಬಂಡೆಗೆ ಸವಾಲ್ ಹಾಕಿದ ಸಾಹುಕಾರನಿಗೆ ಈಗ ಹೊಸ ಸವಾಲು ಎದುರಾಗಿದೆ. ಒಂದು ಕಡೆ ರಾಜಕೀಯ ಗುರು ಮತ್ತೊಂದು ಕಡೆ ಸಹೋದರ ಇಬ್ಬರ ಸವಾಲನ್ನ ಒಟ್ಟೊಟ್ಟಿಗೆ ರಮೇಶ್ ಜಾರಕಿಹೊಳಿ ಎದುರಿಸಬೇಕಾಗಿದೆ. ಎರಡೂ ಸವಾಲನ್ನ ಒಟ್ಟಿಗೆ ಎದುರಿಸಿ ಸಾಹುಕಾರ ಸೈ ಅನ್ನಿಸಿಕೊಳ್ಳುತ್ತಾರಾ ಅಥವಾ ಸೋತು ಕೈ ಚೆಲ್ತಾರಾ ಅನ್ನೋದೇ ಸದ್ಯದ ಕುತೂಹಲವಾಗಿದೆ.

  • ತ್ರಿ ಈಡಿಯಟ್ಸ್ ಅಳಿಯಂದಿರ ಮಾತು ಕೇಳಿ ರಮೇಶ್ ಬಿಜೆಪಿ ಸೇರಿದ್ದಾರೆ- ಲಖನ್ ಜಾರಕಿಹೊಳಿ

    ತ್ರಿ ಈಡಿಯಟ್ಸ್ ಅಳಿಯಂದಿರ ಮಾತು ಕೇಳಿ ರಮೇಶ್ ಬಿಜೆಪಿ ಸೇರಿದ್ದಾರೆ- ಲಖನ್ ಜಾರಕಿಹೊಳಿ

    – ಗೋಕಾಕ್ ಕೈ ಅಭ್ಯರ್ಥಿ ನಾನೇ

    ಬೆಳಗಾವಿ: ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮೂರು ಜನ ಅಳಿಯಂದಿರ ಮಾತು ಕೇಳಿ ಬಿಜೆಪಿ ಸೇರಿದ್ದಾರೆ. ನಮ್ಮ ತಂದೆಯಿಂದಲೂ ಜಾರಕಿಹೊಳಿ ಕುಟುಂಬದವರು ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತರು. ಆದರೆ ರಮೇಶ್ ಅಳಿಯಂದಿರ ಮಾತು ಕೇಳಿ ಬಿಜೆಪಿ ಸೇರಿದ್ದಾರೆ ಎಂದು ಸಹೋದರ ಲಖನ್ ಜಾರಕಿಹೊಳಿ ಹರಿಹಾಯ್ದಿದ್ದಾರೆ.

    ಜಿಲ್ಲೆಯ ಗೋಕಾಕ್ ತಾಲೂಕಿನ ಧೂಪದಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ್‍ನಲ್ಲಿ ರಮೇಶ್ ಜಾರಕಿಹೊಳಿ ಅಳಿಯಂದಿರ ಭ್ರಷ್ಟಾಚಾರ ಬಹಳ ಆಗಿದೆ. ಇದಕ್ಕೆ ಕಡಿವಾಣ ಹಾಕಲು ನಾನು ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಸತೀಶ್, ಲಖನ್ ತಲೆ ಕೆಡಿಸುತ್ತಿದ್ದಾನೆ ಎಂಬ ರಮೇಶ್ ಜಾರಕಿಹೊಳಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದೆ ನಾನು ಯಮಕನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದೆ. ಯಾರು ನಮಗೆ ತಲೆ ಕೆಡಸುತ್ತಿದ್ದಾರೆ ಎಂಬುದರ ಬಗ್ಗೆ ಮಾತನಾಡುವುದು ಬೇಡ. ರಮೇಶ್ ಬಿಜೆಪಿ ಸೇರಲು ಅವರ ಅಳಿಯಂದಿರು ತಲೆ ಕೆಡಿಸಿದ್ದಾರೆ. ನಮ್ಮ ಮಾತು ಕೇಳಿದ್ದರೆ ರಮೇಶ್ ಕಾಂಗ್ರೆಸ್ಸಿನಲ್ಲಿರುತ್ತಿದ್ದರು. ಸತೀಶ್ ಜಾರಕಿಹೊಳಿ ನನ್ನ ತಲೆ ಕೆಡಿಸಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರಿ ಒಳ್ಳೆಯದಾಗುತ್ತೆ ಎಂದು ರಮೇಶ್‍ಗೆ ಹೇಳಿದ್ದೆ. ಆದರೆ ನನ್ನ ಮಾತನ್ನು ಅವರು ಕೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಅಳಿಯಂದಿರ ಮೇಲೆ ರಮೇಶ್‍ಗೆ ಬಹಳ ಪ್ರೀತಿ. ಅಳಿಯಂದಿರು ತ್ರಿ ಈಡಿಯಟ್ಸ್ ಇದ್ದ ಹಾಗೆ. ಚುನಾವಣೆ ಮಾಡುವವರೊಬ್ಬರು, ದುಡಿಯುವವರೊಬ್ಬರು ನಂತರ ಬಂದು ಮೇಯುವವರೊಬ್ಬರು. ಅಳಿಯಂದಿರ ಭ್ರಷ್ಟಾಚಾರ ಬಹಳ ಇದೆ. ಅದನ್ನ ಹೇಳಲು ಒಂದು ದಿನ ಬೇಕು. ಬ್ಲ್ಯಾಕ್ ಮೇಲ್ ಮತ್ತು ಗೂಂಡಾಗಿರಿ ರಾಜಕಾರಣ ಬಹಳ ದಿನ ನಡೆಯುವುದಿಲ್ಲ. ನಮ್ಮ ಕ್ಷೇತ್ರದ ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅವರನ್ನು ಬದುಕಿಸುವ ಸಲುವಾಗಿ ನಾನು ಸ್ಪರ್ಧಿಸುತ್ತಿದ್ದೇನೆ. ಅಂಬಿರಾವ್ ಪಾರ್ಟ್-2, 420 ಎಂದು ಲಖನ್ ವ್ಯಂಗ್ಯ ಮಾಡಿದ್ದಾರೆ.

    ಇಂದಿನಿಂದ ಪ್ರಚಾರ ಆರಂಭಿಸಿದ್ದು, ಕಾಂಗ್ರೆಸ್ಸಿನಿಂದ ನಾನೇ ಸ್ಪರ್ಧಿಸುತ್ತಿದ್ದೇನೆ. ಎದುರಾಳಿ ಯಾರು ಆಗುತ್ತಾರೆ ಗೊತ್ತಿಲ್ಲ. ಆದರೆ ಗೋಕಾಕ್ ಅಭ್ಯರ್ಥಿ ನಾನೇ. ಈಗ ಟಾಸ್ ಆಗಿದೆ ಮ್ಯಾಚ್ ಆಮೇಲೆ ಆರಂಭವಾಗುತ್ತದೆ. ನಾನು ಬ್ಯಾಟಿಂಗ್ ತೆಗೆದುಕೊಂಡಿದ್ದೇನೆ. 25 ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿದ್ದು, ಕೈ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಗೋಕಾಕ್ ಮತದಾರರ ನಾಡಿಮಿಡಿತ ನನಗೆ ಗೊತ್ತು. ನಮ್ಮ ಭಾಗದ ಜನರಿಗೆ ಬಹಳ ಅನ್ಯಾಯ ಆಗಿದೆ ಅದನ್ನು ಸರಿಪಡಿಸಬೇಕಿದೆ. ಉಪಚುನಾವಣೆ ಐಎಎಸ್ ಪರೀಕ್ಷೆ ಇದ್ದ ಹಾಗೆ. ಪರೀಕ್ಷೆ ಆರಂಭವಾದಾಗಲೇ ಬರಬೇಕು, ಇಂದಿನಿಂದ ನಮ್ಮ ಪರೀಕ್ಷೆ ಆರಂಭವಾಗಿದೆ. ರಮೇಶ್ ಅವರ ರಾಜಕೀಯ ಗೊತ್ತು, ಹೀಗಾಗಿಯೇ ಅದಕ್ಕೆ ತಡವಾಗಿ ಕಣಕ್ಕಿಳಿದಿದ್ದೇನೆ ಎಂದು ಲಖನ್ ತಿಳಿಸಿದರು.

  • ದಾಯಾದಿ ಕಲಹ- ತಾವೇ ಕಟ್ಟಿದ ಸಾಮ್ರಾಜ್ಯ ಕೆಡವಲು ಮುಂದಾಗಿದ್ದೇಕೆ ಜಾರಕಿಹೊಳಿ ಬ್ರದರ್ಸ್?

    ದಾಯಾದಿ ಕಲಹ- ತಾವೇ ಕಟ್ಟಿದ ಸಾಮ್ರಾಜ್ಯ ಕೆಡವಲು ಮುಂದಾಗಿದ್ದೇಕೆ ಜಾರಕಿಹೊಳಿ ಬ್ರದರ್ಸ್?

    -ಹೊಸ ತಿರುವು ಪಡೆದ ಜಾರಕಿಹೊಳಿ ಬ್ರದರ್ಸ್ ಫೈಟ್!

    ಬೆಳಗಾವಿ: ಕಳೆದ ಮೂವತ್ತು ವರ್ಷದಿಂದ ಅಣ್ಣ ತಮ್ಮಂದಿರೆಲ್ಲರೂ ಸೇರಿಕೊಂಡು ಕಟ್ಟಿದ್ದ ಕೋಟೆಯದು. ಜನರ ಒಳಿತಿಗಾಗಿ ಸಮಾಜದ ಸೇವೆಗಾಗಿ ಕಟ್ಟಿದ ಸಾಮ್ರಾಜ್ಯ ಆರಂಭದಲ್ಲಿ ಒಳೆಯ ಕೆಲಸ ಮಾಡಿತು. ಆದರೆ ಅಣ್ಣ-ತಮ್ಮಂದಿರ ರಾಜಕೀಯ ಕಿತ್ತಾಟದಿಂದ ಇಂದು ಆ ಕೋಟೆಯನ್ನ ಕಟ್ಟಿ ಬೆಳೆಸಿದ ಸಹೋದರನೇ ಕೆಡವಲು ಹೊರಟಿದ್ದಾರೆ.

    ಗೋಕಾಕ್ ಅಂದ್ರೆ ಜಾರಕಿಹೊಳಿ, ಜಾರಕಿಹೊಳಿ ಅಂದ್ರೆ ಗೋಕಾಕ್ ಅನ್ನುವಷ್ಟರ ಮಟ್ಟಿಗೆ ರಾಜ್ಯದಲ್ಲಿ ಪ್ರಸಿದ್ಧಿಯಾಗಿತ್ತು. ಈ ಜಾರಕಿಹೊಳಿ ಸಾಮ್ರಾಜ್ಯ, ಅಣ್ಣ-ತಮ್ಮಂದಿರು ಒಂದಾಗಿದ್ದರೆ ಏನೆಲ್ಲಾ ಮಾಡಬಹುದು ಅನ್ನೋದಕ್ಕೆ ಉದಾಹರಣೆ ಆಗಿತ್ತು. ಆದರೆ ಎಷ್ಟೇ ಆದರೂ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನುವ ಗಾದೆ ಎಂದಿಗೂ ಸುಳ್ಳಾಗಲ್ಲ ಎಂಬುದು ಮತ್ತೊಮ್ಮೆ ನಿಜ ಆಗಿದೆ.

    ಗೋಕಾಕ್ ಸಾಹುಕಾರರಾದ ಜಾರಕಿಹೊಳಿ ಬ್ರದರ್ಸ್ ನಡುವೆ ಸದ್ಯ ರಾಜಕೀಯ ಪೈಟ್ ಆರಂಭವಾಗಿದೆ. ಒಂದು ಕಡೆ ಅನರ್ಹ ಶಾಸಕ ರಮೇಶ್ ಮತ್ತು ಬಿಜೆಪಿ ಶಾಸಕ ಬಾಲಚಂದ್ರ ಇದ್ದರೆ ಇನ್ನೊಂದು ಕಡೆ ಮಾಜಿ ಸಚಿವ ಸತೀಶ್ ಮತ್ತು ಕಾಂಗ್ರೆಸ್ ಮುಖಂಡ ಲಖನ್ ಇದ್ದಾರೆ. ಈ ಅಣ್ಣ-ತಮ್ಮಂದಿರ ಜಗಳದಿಂದ ಮೂವತ್ತು ವರ್ಷದ ಹಿಂದೆ ಕಟ್ಟಿಕೊಂಡಿದ್ದ ಜಾರಕಿಹೊಳಿ ಸಾಮ್ರಾಜ್ಯವನ್ನ ಕಟ್ಟಿ ಬೆಳೆಸಿದ್ದ ಸತೀಶ್ ಕೆಡವಲು ಮುಂದಾಗಿದ್ದಾರೆ. ಕಳೆದ ಐದು ಬಾರಿ ಗೋಕಾಕ್ ನಲ್ಲಿ ಶಾಸಕನಾಗಿ ಆಡಳಿತ ನಡೆಸಿರುವ ರಮೇಶ್ ಇತ್ತಿಚೀನ ದಿನಗಳಲ್ಲಿ ಯಾವುದೇ ಕೆಲಸ ಮಾಡದೇ ಬರೀ ಬ್ಲ್ಯಾಕ್ ಮೇಲ್ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ ಎನ್ನಲಾಗುತ್ತಿದ್ದು, ಖುದ್ದು ಸಹೋದರ ಸತೀಶ್ ಜಾರಕಿಹೊಳಿ ಅಣ್ಣನ ವಿರುದ್ಧ ಇಂತಹದ್ದೊಂದು ಆರೋಪ ಮಾಡಿದ್ದಾರೆ.

    ಗೋಕಾಕ್ ನಲ್ಲಿ ಸದ್ಯ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನೂರಕ್ಕೂ ಅಧಿಕ ಕೇಸ್ ದಾಖಲಾಗಿದ್ದು, ಕಾರಣವಿಲ್ಲದೇ ಈ ರೀತಿ ಪೊಲೀಸರು ಕೇಸ್ ಮಾಡುತ್ತಿದ್ದಾರೆ ಎಂದು ಖದ್ದು ಸತೀಶ್ ಜಾರಕಿಹೊಳಿ ಎಸ್.ಪಿ ಲಕ್ಷ್ಮಣ್ ಅವರಿಗೆ ಪತ್ರ ಬರೆದಿದ್ದಾರೆ. ಇದರಿಂದ ಸದ್ಯ ಗೋಕಾಕ್ ನಲ್ಲಿ ಬೇರೊಂದು ರೀತಿಯಲ್ಲಿ ರಾಜಕೀಯ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.

    ಕಳೆದ ಒಂದು ವಾರದ ಹಿಂದಷ್ಟೇ ರಮೇಶ್ ಜಾರಕಿಹೊಳಿ ಸಾವಿರಾರು ಜನರನ್ನ ಸೇರಿಸಿ ಸಂಕಲ್ಪ ಸಮಾವೇಶ ಮಾಡಿ ವೋಟ್ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಕೆಲಸ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಸದ್ಯ ಸತೀಶ್ ಕೂಡ ಬೇರೊಂದು ರೀತಿಯ ಗೇಮ್ ಆಡುತ್ತಿದ್ದು, ತಮ್ಮತ್ತ ಗೋಕಾಕ್ ಜನರನ್ನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲ ಬೆಳವಣಿಗೆ ನಡುವೆ ಕಳೆದ ನಾಲ್ಕು ದಿನಗಳ ಹಿಂದೆ ರಮೇಶ್ ಜಾರಕಿಹೊಳಿ ಗೋಕಾಕ್ ಅಧಿಕಾರಿಗಳ ಸಭೆ ಕರೆದು ಅಳಿಯ ಅಂಬಿರಾವ್ ಪಾಟೀಲ್ ಹೇಳಿದಂತೆ ಕೆಲಸ ಮಾಡಿ ಎಂದು ಸೂಚನೆ ಕೂಡ ನೀಡಿದ್ದಾರೆ ಎನ್ನಲಾಗಿದೆ.

    ಇದು ಸತೀಶ್ ಗೆ ನಿದ್ದೆಗೆಡಸಿದ್ದು ಈ ಕಾರಣಕ್ಕೆ ಅಳಿಯ ಅಂಬಿರಾವ್ ವಿರುದ್ಧ ಶುಕ್ರವಾರ ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲದೆ ಅಂಬಿರಾವ್ ಗೆ ನಮ್ಮ ಬಗ್ಗೆ ಭಯವಿಲ್ಲ. ಗೋಕಾಕ್ ನಲ್ಲಿ ಜನರ ಮೇಲೆ ಗುಲಾಮಗಿರಿ ನಡೆಸುತ್ತಿದ್ದು, ಈ ಕಾರಣಕ್ಕೆ ಜನರಿಗೆ ಸ್ವಾತಂತ್ರ್ಯ ಕೊಡಿಸಲು ಹೋರಾಟ ಮಾಡುತ್ತಿದ್ದೇನೆ. ಗೋಕಾಕ್ ಜನರಿಗೆ ಅಂಬಿರಾವ್ ಪಾಟೀಲ್ ನಿಂದ ಸ್ವಾತಂತ್ರ್ಯಗೊಳ್ಳಬೇಕಿದೆ. ಅಷ್ಟೇ ಅಲ್ಲದೆ ಮೂವತ್ತು ವರ್ಷಗಳ ಹಿಂದೆ ಜಾರಕಿಹೊಳಿ ಕೋಟೆಯನ್ನ ಸಮಾಜ ಸೇವೆ ಮಾಡಲು ಕಟ್ಟಿದ್ದೆವು. ಈಗ ಜಾರಕಿಹೊಳಿ ಶಕ್ತಿ ಒಳ್ಳೆಯದಕ್ಕೆ ಬಳಕೆ ಆಗುತ್ತಿಲ್ಲ. ಈ ಕಾರಣಕ್ಕೆ ಅದನ್ನ ಕೆಡುವ ಚಿಂತನೆಗೆ ಬಂದಿದ್ದೇವೆ. ಹೀಗೆ ಜಾರಕಿಹೊಳಿ ಕಟ್ಟಿ ಬೆಳೆಸಿದ ಸತೀಶ್ ಜಾರಕಿಹೊಳಿ ಸಹೋದರನ ವಿರುದ್ಧ ಫೈಟ್ ಗಿಳಿದಿದ್ದು ಅಷ್ಟೇ ಅಲ್ಲದೆ ತಾವೇ ಕಟ್ಟಿ ಬೆಳೆಸಿ ಕೋಟೆಯನ್ನ ಇಂದು ಕೆಡವಲು ಮುಂದಾಗಿದ್ದಾರೆ. ಇದು ಉಪಚುನಾವಣೆಯಲ್ಲಿ ಜಾರಕಿಹೊಳಿ ವಿರೋಧಿ ಬಣವನ್ನ ಸೆಳೆಯುವ ತಂತ್ರ ಕೂಡ ಅಂತಾ ಕೆಲವು ಬಿಂಬಿಸುತ್ತಿದ್ದಾರೆ.

    ಒಟ್ಟಿನಲ್ಲಿ ಅಣ್ಣ-ತಮ್ಮಂದಿರ ಜಗಳ ಕಳೆದ ಆರು ತಿಂಗಳಿನಿಂದಲೂ ಆರಂಭವಾಗಿದ್ದು, ಈಗ ಬೇರೆ ರೀತಿಯ ತಿರುವು ಪಡೆದುಕೊಂಡಿದೆ ಈ ಬ್ರದರ್ಸ್ ಫೈಟ್ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಅನ್ನೋ ಹಾಗೆ ಇಬ್ಬರು ಅಣ್ತಮ್ಮಂದಿರ ನಡುವೆ ಸದ್ಯ ಗೋಕಾಕ್ ನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು ತಮ್ಮ ಕೆಲಸ ಮಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿ ಎನನ್ನೂ ಮಾಡದ ಸ್ಥಿತಿಯಲ್ಲಿದ್ದಾರೆ. ಇತ್ತ ಆಯಾ ಬೆಂಬಲಿಗರ ಮೇಲೆ ಕೇಸ್ ಕೂಡ ಆಗುತ್ತಿದ್ದು, ಈ ಎಲ್ಲ ಕಾರಣಕ್ಕೆ ಸದ್ಯ ಗೋಕಾಕ್ ನ ಜನರು ಸಿಕ್ಕು ನಲಗುವಂತಾಗಿದೆ.