Tag: lake

  • ಒಡೆದ ಕೆರೆಯ ತಡೆಗೋಡೆ- ಅಳ್ನಾವರದ ನಾಲ್ಕು ಬಡಾವಣೆ ಸ್ಥಳಾಂತರ

    ಒಡೆದ ಕೆರೆಯ ತಡೆಗೋಡೆ- ಅಳ್ನಾವರದ ನಾಲ್ಕು ಬಡಾವಣೆ ಸ್ಥಳಾಂತರ

    ಧಾರವಾಡ: ಜಿಲ್ಲೆಯ ಅಳ್ನಾವರ ತಾಲೂಕಿನ ಹುಲ್ಲಿಕೆರೆ ಗ್ರಾಮದ ಇಂದಿರಮ್ಮನ ಕೆರೆ ತುಂಬಿದ್ದು, ಭಾರೀ ನೀರು ಸಂಗ್ರಹವಾಗಿದೆ. ಅಲ್ಲದೆ ಕೆರೆಯ ತಡೆಗೋಡೆ ಒಡೆದಿದ್ದರಿಂದ ನೀರು ಅಳ್ನಾವರ ಪಟ್ಟಣಕ್ಕೆ ಹರಿದು ಬರುತ್ತಿದೆ. ಈ ಹಿನ್ನೆಲೆ ಪಟ್ಟಣದ ತಿಲಕನಗರ, ದೇಸಾಯಿ ಚಾಳ್, ಕಾಳೆ ಪ್ಲಾಟ್ ಜನರನ್ನು ಅಳ್ನಾವರ ತಾಲೂಕಾ ಆಡಳಿತ ಸ್ಥಳಾಂತರಿಸುತ್ತಿದೆ.

    ಮನೆ ಖಾಲಿ ಮಾಡಿಸುತ್ತಿದ್ದು, ಜನರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಕೆರೆಯ ಪಕ್ಕದ ಗ್ರಾಮಸ್ಥರು ಭಯಭೀತರಾಗಿದ್ದು, ಸಾಕಷ್ಟು ಬೆಳೆ ಸಹ ನಾಶವಾಗಿದೆ.

    ಸದ್ಯ ಅಳ್ನಾವರ ಪಟ್ಟಣಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಗೋಪಾಲ ಕೃಷ್ಣ ಹಾಗೂ ಅಳ್ನಾವರ ತಹಶೀಲ್ದಾರ್ ಅಮರೇಶ ಪಮ್ಮಾರ್, ಡವಗಿ ನಾಕಾ ಪರಿಶೀಲನೆ ನಡೆಸಿದರು. ಜನರ ಸ್ಥಳಾಂತರಕ್ಕೆ 6 ಪರಿಹಾರ ಕೇಂದ್ರ ತೆರೆಯಲಾಗಿದೆ. ಜನರನ್ನು ಸ್ಥಳಾಂತರ ಮಾಡುವ ಕೆಲಸ ನಡೆದಿದೆ ಎಂದು ಗೋಪಾಲಕೃಷ್ಣ ತಿಳಿಸಿದರು.

  • ನಮ್ಮ ಕೆರೆ ನಮ್ಮ ಹಕ್ಕು ಅಭಿಯಾನಕ್ಕೆ ವ್ಯಾಪಕ ಬೆಂಬಲ

    ನಮ್ಮ ಕೆರೆ ನಮ್ಮ ಹಕ್ಕು ಅಭಿಯಾನಕ್ಕೆ ವ್ಯಾಪಕ ಬೆಂಬಲ

    – ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

    ಬೆಂಗಳೂರು: ದಿನೇ ದಿನೇ ಬದಲಾಗುತ್ತಿರುವ ಕಾಲಘಟ್ಟದಲ್ಲಿ, ನಮ್ಮ ಭೂಮಿ ಕಸದ ತೊಟ್ಟಿಯಾಗುತ್ತಿದೆ. ಪರಿಸರ ಮಾಲಿನ್ಯ ಎಲ್ಲೆ ಮೀರಿದೆ ಇದರ ಪರಿಣಾಮ, ಕೊರೊನಾದಂತಹ ಹೊಸ ಬಗೆಯ ರೋಗಾಣುಗಳ ಸೃಷ್ಟಿಯಾಗಿದೆ. ಹಾಗಾಗಿ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಲುವಾಗಿ ಸಂಪೂರ್ಣ ಕಲುಷಿತಗೊಂಡಿರುವ ನೆಲಮಂಗಲ ಮತ್ತು ಬಿನ್ನಮಂಗಲ ಕೆರೆಗಳನ್ನು ಉಳಿಸಿ ಎಂಬ ಅಭಿಯಾನವನ್ನು ಸಾರ್ವಜನಿಕರು ಹಮ್ಮಿಕೊಂಡಿದ್ದಾರೆ.

    ಕೊರೊನಾದಿಂದ ಆದಂತಹ ಅವಾಂತರಗಳು, ದುರಂತಗಳು ನಮ್ಮ ಕಣ್ಣ ಮುಂದಿದೆ. ಮುಂದಿನ ದಿನಗಳಲ್ಲಿ ಇಂತಹ ಕಾಯಿಲೆಗಳಿಂದ ನಮ್ಮನ್ನು ಮತ್ತು ಮುಂದಿನ ತಲೆಮಾರನ್ನು ರಕ್ಷಿಸಲು ನಮಗಿರುವ ಮಾರ್ಗ, ನಗರದ ಹೆಮ್ಮೆಯಾಗಿದ್ದ ಐತಿಹಾಸಿಕ ಹಿನ್ನೆಲೆಯಿರುವ ಈ ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯತೆಯಾಗಿದೆ. ಅದಕ್ಕಾಗಿ ಎಲ್ಲರೂ ಕೈಜೋಡಿಸಿ ಅಭಿಯಾನವೊಂದನ್ನು ಆರಂಭಿಸೋಣ ಎಂದು ಕೆರೆ ಅಭಿವೃದ್ಧಿ ಉತ್ಸಾಹಿಗಳ ತಂಡ ನೆಲಮಂಗಲ ತಾಲೂಕಿನಲ್ಲಿ ರಚನೆಯಾಗಿದೆ. ಇದನ್ನೂ ಓದಿ: ನೀರಾವರಿ ಇಲಾಖೆಗೆ 12 ಸಾವಿರ ಕೋಟಿ ನೀಡಿರುವುದು ದುಡ್ಡು ಲೂಟಿ ಮಾಡೋಕೆ: ಹೆಚ್‍ಡಿಕೆ

    ನಾಳೆ ತಾಲೂಕಿನ ಪೂಜ್ಯ ಸ್ವಾಮೀಜಿಗಳು, ಸರ್ವ ಪಕ್ಷಗಳ ಜನ ಪ್ರತಿನಿಧಿಗಳು ಮತ್ತು ಮುಖಂಡರು, ಸಾಹಿತಿಗಳು, ಕಲಾವಿದರು, ಹಿರಿಯರು, ಚಿಂತಕರು, ಕೊರೊನಾ ಮುಕ್ತ ನೆಲಮಂಗಲ ತಂಡದವರು, ಪರಿಸರ ಪ್ರೇಮಿಗಳು, ರೈತಪರ ಹೋರಾಟಗಾರರು, ವರ್ತಕರು, ಸಾರ್ವಜನಿಕ ಹಿತಾಸಕ್ತಿಯ ಕಟ್ಟಾಳುಗಳು, ಮಹಿಳೆಯರು, ಪ್ರಜ್ಞಾವಂತ ನಾಗರಿಕರು ಹಾಗೂ ಯುವಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕರೆ ನೀಡಲಾಗಿದೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಬಿನ್ನಮಂಗಲ ಕೆರೆಯಿಂದ ಪ್ರವಾಸಿ ಮಂದಿರದವರೆಗೆ ಬೈಕ್ ರ್ಯಾಲಿ ನಡೆಯಲಿದ್ದು, ನಂತರ ಪ್ರವಾಸಿ ಮಂದಿರದಿಂದ ನೆಲಮಂಗಲ ಕೆರೆಯವರೆಗೆ ಪಾದಯಾತ್ರೆ ನಡೆಯಲಿದೆ. ನೂರಾರು ಜನರು ಸೇರುವ ನಿರೀಕ್ಷೆ ಇದ್ದು, ಈ ಅಭಿಯಾನಕ್ಕೆ ವ್ಯಾಪಕವಾಗಿ ಬೆಂಬಲ ಸಿಕ್ಕಿದೆ.

  • ಸಮುದ್ರದ ಅಬ್ಬರಕ್ಕೆ ಕೊಚ್ಚಿ ಹೋದ ಮರಗಳು – ರಾಯಚೂರಿನಲ್ಲಿ ಹಳ್ಳಕೊಳ್ಳಗಳು ಭರ್ತಿ

    ಸಮುದ್ರದ ಅಬ್ಬರಕ್ಕೆ ಕೊಚ್ಚಿ ಹೋದ ಮರಗಳು – ರಾಯಚೂರಿನಲ್ಲಿ ಹಳ್ಳಕೊಳ್ಳಗಳು ಭರ್ತಿ

    ಕಾರವಾರ/ರಾಯಚೂರು: ರಾಜ್ಯದಲ್ಲಿ ಮಳೆ ಮುಂದುವರಿದಿದ್ದು, ಹಳ್ಳಕೊಳ್ಳಗಳು ಭರ್ತಿ ಆಗಿವೆ. ಕಡಲತೀರಕ್ಕೆ ಭಾರೀ ಗಾತ್ರದ ಅಲೆಗಳು ಅಬ್ಬರಿಸುತ್ತಿದ್ದು, ಮರಗಳು ಕೊಚ್ಚಿ ಹೋಗಿವೆ.

    ಕಾರವಾರ:
    ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು ಇದೇ ತಿಂಗಳ 15 ರ ವರೆಗೆ ರೆಡ್ ಅಲರ್ಟ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ಸಮುದ್ರದ ಭೋರ್ಗರೆತ ಹೆಚ್ಚಾಗಿದ್ದು ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಅಲೆಗಳು ಏಳತೊಡಗಿದೆ. ಇದರಿಂದಾಗಿ ಸಮುದ್ರ ಕೊರೆತ ಪ್ರಾರಂಭವಾಗಿದ್ದು, ಕಾರವಾರ ಕಡಲತೀರ ಭಾಗದಲ್ಲಿ ಮರಗಳು, ತಡೆಗೋಡೆ ಸಮುದ್ರದಲ್ಲಿ ಕೊಚ್ಚಿಹೋಗಿವೆ. ಇನ್ನು ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಸಂಪ್ರದಾಯಿಕ ಮೀನುಗಾರಿಗೆ ನಿರ್ಬಂಧ ವಿಧಿಸಲಾಗಿದ್ದು ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಸದ್ಯ ಮಳೆಗಿಂತ ಸಮುದ್ರದ ಆರ್ಭಟ ಹೆಚ್ಚಿದ್ದು ಇದರಿಂದಾಗಿ ಕಡಲ ಕೊರತ ಸಹ ಕರಾವಳಿ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಗಿದೆ.

    ರಾಯಚೂರಿಲ್ಲಿ ತುಂಬಿ ಹರಿಯುತ್ತಿರುವ ಹಳ್ಳಗಳು
    ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಜೋರು ಮಳೆ ಸುರಿಯುತ್ತಿದೆ. ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣ ಮುಂದುವರಿದಿದೆ. ಇದನ್ನೂ ಓದಿ: ಉಡುಪಿಯಲ್ಲಿ ಮುಂದುವರಿದ ಮುಂಗಾರು ಮಳೆ- ಐದು ದಿನ ಆರೆಂಜ್ ಅಲರ್ಟ್

    ಮಾನ್ವಿ ತಾಲೂಕಿನ ಮುಷ್ಟೂರು ಹಳ್ಳಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದುಬಂದಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಸೇತುವೆಯಿಲ್ಲದೆ ನೀರಿನಲ್ಲೇ ಜನ ಓಡಾಡುತ್ತಿದ್ದಾರೆ. 2009 ರಲ್ಲಿ ಕೊಚ್ಚಿಹೋದ ಸೇತುವೆಯನ್ನು ಈವರೆಗೂ ಪುನರ್ ನಿರ್ಮಾಣ ಮಾಡಿಲ್ಲ. ನೀರಿಲ್ಲದ ವೇಳೆ ಹಳ್ಳದಲ್ಲೇ ಜನ ಓಡಾಡುತ್ತಿದ್ದರು. ಈಗ ಸುರಿಯುತ್ತಿರುವ ಮಳೆಗೆ ಹಳ್ಳದಲ್ಲಿ ಹೆಚ್ಚು ನೀರು ಬಂದಿರುವುದರಿಂದ ರಸ್ತೆ ಮಾರ್ಗ ಬಂದ್ ಆಗಿದೆ. ಇದನ್ನೂ ಓದಿ: ಮೈಶುಗರ್ ಖಾಸಗೀಕರಣದಲ್ಲಿ ಅಂಧ್ರದ ಕಂಪನಿಯೊಂದಿಗೆ ಬಿಎಸ್‍ವೈ ಕುಟುಂಬ ಶಾಮೀಲು: ಎಎಪಿ

    ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ಹಿನ್ನೆಲೆ ಜಿಲ್ಲಾಡಳಿತ ಈಗಾಗಲೇ ನೋಡಲ್ ಅಧಿಕಾರಿಗಳನ್ನ ನೇಮಕ ಮಾಡಿದೆ. ಕಂಟ್ರೋಲ್ ರೂಂ ಸಹ ತೆರೆದಿದ್ದು ಮಳೆ ಅನಾಹುತಕ್ಕೆ ಸಿಲುಕುವ ಜನರ ರಕ್ಷಣೆಗೆ ಕ್ರಮಕೈಗೊಂಡಿದೆ. ಸತತ ಮಳೆಯಿಂದ ಜಿಲ್ಲೆಯ ಹಳ್ಳ ಹಾಗು ನದಿಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ನದಿ ಪಾತ್ರದ ಜನರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

  • ವೃಷಭಾವತಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ: ಯೋಗೇಶ್ವರ್

    ವೃಷಭಾವತಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ: ಯೋಗೇಶ್ವರ್

    ಬೆಂಗಳೂರು: ವೃಷಭಾವತಿ ನದಿಯ ಕೊಳಚೆ ನೀರನ್ನು ಮುಂದಿನ 5 ವರ್ಷಗಳಲ್ಲಿ 1500. ಕೋಟಿ ರೂ.ಗಳ ವೆಚ್ಚದಲ್ಲಿ ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಿ ಕೃಷಿಗೆ ಹಾಗೂ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.


    ಸಚಿವ ಯೋಗೇಶ್ವರ್ ಅವರು ಇಂದು ಬೆಳಗ್ಗೆ ಬೆಂಗಳೂರಿನ ಮೈಸೂರು ರಸ್ತೆಯ ಶ್ರೀ ಗಾಳಿ ಆಂಜನೇಯ ದೇವಾಲಯದಿಂದ ಬಿಡದಿಯ ಬೈರಮಂಗಲ ಕೆರೆಯವರೆಗೂ ವೃಷಭಾವತಿ ನದಿಯನ್ನು ಪರಿಶೀಲಿಸಿದರು. ಬೆಂಗಳೂರು ಜಲ ಮಂಡಳಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

    ಬೆಂಗಳೂರು ನಗರದ ಶೇ.40 ರಷ್ಟು ತ್ಯಾಜ್ಯ ನೀರು ವೃಷಭಾವತಿ ನದಿ ಮೂಲಕ ಬಿಡದಿಯ ಬೈರಮಂಗಲ ಕೆರೆಗೆ ಸೇರುತ್ತಿದೆ. ಪ್ರಸಕ್ತ ಕೇವಲ ಎರಡು ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದ್ದು, ಈ ನೀರು ಕೃಷಿ ಸೇರಿದಂತೆ ಯಾವುದಕ್ಕೂ ಬಳಸಲು ಸಾಧ್ಯವಿಲ್ಲ. ಇನ್ನೊಂದೆಡೆ ಸಂಸ್ಕರಣೆ ಮಾಡಿದ ನೀರನ್ನು ಚರಂಡಿಗಳಿಗೆ ಹರಿಸುತ್ತಿದ್ದು, ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ.

    ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ನಗರದ ವೃಷಭಾವತಿ ಕಣಿವೆ ವ್ಯಾಪ್ತಿಯಲ್ಲಿ ಹರಿಯುವ 1500 ಎಂ.ಎಲ್.ಡಿ ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡಿ, ಕೆರೆಗಳನ್ನು ತುಂಬಿಸುವುದು ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸುವುದು ನಮ್ಮ ಉದ್ದೇಶವಾಗಿದೆ. ಒಂದು ಎಂ.ಎಲ್.ಡಿ ತ್ಯಾಜ್ಯ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಲು 1.00 ಕೋಟಿ ರೂ. ವೆಚ್ಚವಾಗುತ್ತದೆ. 1500 ಎಂ.ಎಲ್.ಡಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲು 1500 ರೂ. ಕೋಟಿ ವೆಚ್ಚವಾಗಲಿದ್ದು, 3-5 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಆನಂತರ ಕುಡಿಯುವುದಕ್ಕೆ ಹೊರತುಪಡಿಸಿ, ಬೇರೆ ಎಲ್ಲಾ ಚಟುವಟಿಕೆಗಳಿಗೆ ಈ ಶುದ್ಧ ನೀರನ್ನು ಬಳಸಬಹುದಾಗಿದೆ ಎಂದು ಸಚಿವರು ಇದೇ ವೇಳೆ ವಿವರಿಸಿದ್ದಾರೆ.

    ಬಸವನಗುಡಿಯಲ್ಲಿ ಹುಟ್ಟುವ ವೃಷಭಾವತಿ ನದಿ ಬಿಡದಿಯ ಬೈರಮಂಗಲ ಕೆರೆಗೆ ತಲುಪುತ್ತದೆ. ನಾಯಂಡನಹಳ್ಳಿ ಹಾಗೂ ಮೈಲಸಂಧ್ರದಲ್ಲಿ ಇದಿಗ ಎರಡು ಹಂತಗಳಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯ 600 ಪ್ರದೇಶದಲ್ಲಿದ್ದು, ಅಲ್ಲಿಯೂ ಸಹ ಒಂದು ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಸಿಂಡಿಕೇಟ್ ಸದಸ್ಯರಿಗೆ ಈ ಯೋಜನೆಯ ಮಹತ್ವವನ್ನು ವಿವರಿಸಿ, ಅಲ್ಲಿಯೂ ತ್ಯಾಜ್ಯ ನೀರು ಸಂಸ್ಕರಣ ಘಟಕವನ್ನು ರಾಜ್ಯ ಸರ್ಕಾರದ ವತಿಯಿಂದ ಸ್ಥಾಪಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಅಂಬರೀಶ್‍ಗೆ ನಾನೇನು ಗುಲಾಮನಾಗಿದ್ನಾ: ಫೋಟೋ ವೈರಲ್‍ಗೆ ಹೆಚ್‍ಡಿಕೆ ಪ್ರಶ್ನೆ

    ವೃಷಭಾವತಿ ನದಿಯಲ್ಲಿ ಹರಿಯುವ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡುವ ಬಗ್ಗೆ ಕಾರ್ಖಾನೆಗಳು, ಜನವಸತಿ ಪ್ರದೇಶಗಳು ಹಾಗೂ ಅಪಾರ್ಟ್‍ಮೆಂಟ್‍ಗಳಿಂದ ಸಂಸ್ಕರಣೆ ಮಾಡದೇ ನದಿಗೆ ನೇರವಾಗಿ ತ್ಯಾಜ್ಯ ನೀರು ಹರಿಸುತ್ತಿರುವುದರ ವಿರುದ್ಧ ಹಾಗೂ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದೇನೆ. ಮುಂದಿನ ವಾರದಲ್ಲಿ ಇದಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಸಭೆ ಕರೆದು ಒಂದು ದೃಢ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.

    ವೃಷಭಾವತಿ ಹುಟ್ಟುವ ಪ್ರದೇಶದಿಂದ ಅರ್ಕಾವತಿ ನದಿ ತಲುಪುವರೆಗೆ ಸಮೀಕ್ಷೆ ಮಾಡಿ ವರದಿ ಸಲ್ಲಿಸಿ ಎಂದು ಹೈಕೋರ್ಟ್ ನಿರ್ದೇಶನ ನೀಡಿದ್ದು, ಈ ನಿಟ್ಟಿನಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಯೋನ್ಮುಖವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

    ವೃಷಭಾವತಿ ನಿಧಿ ಪ್ರದೇಶದಲ್ಲಿ 3304 ಕೈಗಾರಿಕೆಗಳಿದ್ದು, 1396 ಕೈಗಾರಿಕೆಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಉಲ್ಲಂಘನೆ ಮಾಡಿ, ನದಿಗೆ ನೇರವಾಗಿ ತ್ಯಾಜ್ಯ ನೀರನ್ನು ಹರಿಸುತ್ತಿವೆ. 1476 ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, 77 ಕಾರ್ಖಾನೆಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. 275 ಕಾರ್ಖಾನೆಗಳನ್ನು ಮುಚ್ಚಿಸಲಾಗಿದೆ ಎಂದು ಇದೇ ವೇಳೆ ಸಚಿವರು ವಿವರಿಸಿದರು. ಕೇವಲ ಉದ್ಯಮಿಗಳ ಮೇಲಲ್ಲದೇ ಸಂಬಂಧಪಟ್ಟ ಅಧಿಕಾರಿಗಳ ಮೇಲೆಯೂ ಸಹ ದೂರು ದಾಖಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಆದೇಶಿಸಿದರು.

    ಬೈರಮಂಗಲ ಕೆರೆ :
    ರೂ.250.00 ಕೋಟಿಗಳ ವೆಚ್ಚದಲ್ಲಿ ಬೈರಮಂಗಲ ಕೆರೆಯನ್ನು ಏತ ನೀರಾವರಿ ಯೋಜನೆಯನ್ನು ಅನುಷ್ಟಾನಗೊಳಿಸಲು ಟೆಂಡರ್ ಕರೆಯಲಾಗಿದೆ. ಬಿಡದಿ ಕೈಗಾರಿಕಾ ಪ್ರದೇಶದಿಂದ ಹಾಗೂ ಬೆಂಗಳೂರಿನ ವೃಷಭಾವತಿ ನದಿಯಲ್ಲಿ ಹರಿದು ಬರುವ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಿ ಬೈರಮಂಗಲ ಕೆರೆಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ನಗರದ ಶೇ.40 ರಷ್ಟು ನೀರು ಈ ಕೆರೆಗೆ ಬರುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಜೊತೆಯಲ್ಲಿ ಮಾತನಾಡಿ ಮಳೆ ನೀರು ಹಾಗೂ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬೇರ್ಪಡಿಸಿ, ಸುತ್ತ-ಮುತ್ತ ಹಳ್ಳಿಗಳಲ್ಲಿರುವ 142 ಕೆರೆಗಳಿಗೆ ನೀರನ್ನು ಹರಿಸಲಾಗುವುದು. ಮುಂದಿನ 1-2 ವರ್ಷಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದಾಗಿ ಬೈರಮಂಗಲ ಕೆರೆಯನ್ನು ವೀಕ್ಷಿಸಿದ ನಂತರ ಹೇಳಿದರು.

    ಖಂಡನೀಯ: ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ರವರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವಾಚ್ಯ ಪದ ಬಳಕೆ ಮಾಡಲಾಗಿದ್ದು, ಖಂಡನೀಯ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ. ಇದನ್ನೂ ಓದಿ: ಸುಮಲತಾರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್

    ಕೆ.ಆರ್.ಎಸ್ ಆಣೆಕಟ್ಟಿನ 30 ಕಿ.ಮೀ ವ್ಯಾಪ್ತಿಯ ಹಲವು ದಶಕಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕಲ್ಲು ಗಣಿಗಾರಿಕೆಗೆ ಸ್ಪೋಟಕಗಳನ್ನು ಬಳಸುತ್ತಾರೆ. ಇದರಿಂದ ಕೆ.ಆರ್.ಎಸ್ ಗೋಡೆಗೆ ದಕ್ಕೆಯುಂಟಾಗಲಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿಯೂ ಸಹ ಬಂದಿವೆ. ಈ ನಿಟ್ಟಿನಲ್ಲಿ ಸುಮಲತಾರವರು ಕೆ.ಆರ್.ಎಸ್ ಆಣೆಕಟ್ಟು ಬಿರುಕು ಬೀಳುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರು ತಮ್ಮ ಬಳಿ ಇರುವ ಮಾಹಿತಿಯನ್ನು ಹೇಳಬೇಕಿತ್ತು. ಅದನ್ನು ಬಿಟ್ಟು ಸುಮಲತಾ ರವರನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿರುವುದು ಅವರಿಗೆ ಶೋಭೆ ತರುವುದಿಲ್ಲ. ಕುಮಾರಸ್ವಾಮಿ ವ್ಯಕ್ತಿತ್ವ ಕಳೆದುಕೊಂಡಿದ್ದಾರೆ. ಅವರನ್ನು ಮಾದ್ಯಮಗಳು ವಿಜೃಂಭಿಸುವುದು ಬೇಡ. ಅವರು ಘನತೆ ಹಾಗೂ ತೂಕವನ್ನು ಕಳೆದುಕೊಂಡಿದ್ದಾರೆ.

    ನಾನು ನನ್ನ ಜಿಲ್ಲೆ ರಾಮನಗರದ ಸಮಸ್ಯೆಗಳ ಬಗ್ಗೆ ಮಾತನಾಡಿದ ಮರುದಿನವೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳ ಮನೆಗೆ ಓಡಿ ಹೋಗುತ್ತಾರೆ. ಅದು ನನಗೆ ತಿರುಗುಬಾಣವಾಗುತ್ತಿದೆ. ಕುಮಾರಸ್ವಾಮಿ ರಾಜಕೀಯವಾಗಿ ನೆಲೆ ಕಳೆದುಕೊಂಡಿದ್ದಾರೆ. ರಾಜಕೀಯವಾಗಿ ದಿನೇ-ದಿನೇ ದುರ್ಬಲವಾಗುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಸಹಕಾರವಿಲ್ಲದಿದ್ದರೇ ಜೆ.ಡಿ.ಎಸ್, ಎಂ.ಎಲ್.ಎ ಗಳು ಆ ಪಕ್ಷದಲ್ಲಿ ಇರುತ್ತಿರಲಿಲ್ಲ. ಅವರನ್ನು ಉಳಿಸಿಕೊಳ್ಳಲು ಪದೇ-ಪದೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದಾರೆ. ರಾಮನಗರ, ಮಂಡ್ಯ ಬಿಟ್ಟರೇ ಅವರ ಪಕ್ಷಕ್ಕೆ ಬೇರೆ ಎಲ್ಲೂ ಅಸ್ತಿತ್ವವಿಲ್ಲ. ಉತ್ತರ ಕರ್ನಾಟಕಕ್ಕೆ ಹೋಗಿ ಪಕ್ಷ ಕಟ್ಟಲೀ ನೋಡೋಣ ಎಂದು ಕುಮಾರಸ್ವಾಮಿಗೆ ಯೋಗೇಶ್ವರ್ ತಿರುಗೇಟು ನೀಡಿದ್ದಾರೆ.

  • ಕೆರೆಗೆ ಬಿದ್ದು ಇಬ್ಬರು ಬಾಲಕರ ಧಾರುಣ ಸಾವು

    ಕೆರೆಗೆ ಬಿದ್ದು ಇಬ್ಬರು ಬಾಲಕರ ಧಾರುಣ ಸಾವು

    ಹಾವೇರಿ: ಎತ್ತುಗಳ ಮೈತೊಳೆಯಲು ಹೋಗಿ ಕಾಲು ಜಾರಿ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಅಭಿಷೇಕ್ ಬಸನಗೌಡ ಹಂಡೋರಿ (14) ಮತ್ತು ಹರೀಶ್ ಬಸವರಾಜ್ ಬಾಳಿಕಾಯಿ (14) ಮೃತಪಟ್ಟ ಇಬ್ಬರು ದುರ್ದೈವಿ ಬಾಲಕರು. ಇಬ್ಬರು ಗ್ರಾಮದ ಮಾಸೂರು ರಸ್ತೆಯಲ್ಲಿರುವ ಬಂದಮ್ಮನ ಕೆರೆಗೆ ಎತ್ತುಗಳ ಮೈತೊಳೆಯಲು ಹೊಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾರೆ. ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಇದ್ದ ಪರಿಣಾಮ ನೀರಿನಿಂದ ಮೇಲೆ ಬರಲಾಗದೆ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ತೆಂಗಿನಮರದ ಕಾಯಿ ಬಿದ್ದು 11 ತಿಂಗಳ ಹಸುಗೂಸು ಸಾವು

    ಇಬ್ಬರು ಬಾಲಕರ ಮೃತ ದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕಾರ್ಯಚರಣೆ ನಡೆಸಿ ಹೊರ ತೆಗೆದಿದ್ದಾರೆ. ಮೃತ ಬಾಲಕರ ಮನೆಯಲ್ಲಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿದ್ದು, ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ಕೆರೆಗಳು ಅಳಿವಿನಂಚಿಗೆ ಸಾಗುತ್ತಿರುವುದು ವಿಷಾದನೀಯ: ಶಶಿಕಲಾ ಜೊಲ್ಲೆ

    ಕೆರೆಗಳು ಅಳಿವಿನಂಚಿಗೆ ಸಾಗುತ್ತಿರುವುದು ವಿಷಾದನೀಯ: ಶಶಿಕಲಾ ಜೊಲ್ಲೆ

    ಚಿಕ್ಕೋಡಿ: ನಮ್ಮ ಹಿರಿಯರು ಗ್ರಾಮಗಳ ಸುತ್ತಮುತ್ತ ನಿರ್ಮಿಸಿದ್ದ ಕೆರೆಗಳು ಅಳಿವಿನಂಚಿಗೆ ಸಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ವಿಷಾದ ವ್ಯಕ್ತಪಡಿಸಿದರು. ಇದನ್ನೂ ಓದಿ: ಹುಡುಗಿಯರಿಗೆ ಒಲಿಯದ ಕ್ಯಾಪ್ಟನ್ ಪಟ್ಟ

    ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತಕ್ಷೇತ್ರದ ಭಾಟನಾಗನೂರಿನಲ್ಲಿ ಸುಮಾರು 3 ಎಕರೆಯಲ್ಲಿರುವ ಕೆರೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕೆರೆಗಳ ಅತಿಕ್ರಮಣದ ಪರಿಣಾಮವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹೀಗಾಗಿ ಪ್ರಸ್ತುತ ದಿನಮಾನಗಳಲ್ಲಿ ಕೆರೆಗಳನ್ನು ಉಳಿಸುವುದು ಬಹಳ ಮಹತ್ವದ್ದಾಗಿದೆ. ಕೆರೆ ಉಳಿವಿಗೆ ಸ್ವಯಂ ಪ್ರೇರಣೆಯಿಂದ ಮುಂದಾದಾಗ ಮಾತ್ರ ಅದರ ಅಭಿವೃದ್ಧಿ ಸಾಧ್ಯ ಎಂದಿದ್ದಾರೆ. ಇದನ್ನೂ ಓದಿ: ಟೊಮೆಟೊ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

    ಗ್ರಾಮಗಳ ಸಮೃದ್ಧಿ, ಜಲಕ್ಷಾಮ ನಿವಾರಣೆಗಾಗಿ ಕೆರೆಗಳನ್ನು ಉಳಿಸಿ, ಅಭಿವೃದ್ಧಿಗೊಳಿಸೋಣ. ಬಾಟ ನಾಗನೂರಿನಲ್ಲಿ ಈಗಾಗಲೇ ಇರುವ ಕೆರೆಯ ಅತಿಕ್ರಮಣ ತೆರವುಗೊಳಿಸಿ 3 ಎಕರೆ ಪ್ರದೇಶದಲ್ಲಿ ಕೆರೆಯನ್ನ ವಿಸ್ತರಣೆ ಮಾಡಿ ಬೃಹದಾಕಾರದ ಮಾದರಿ ಕೆರೆ ಮಾಡಲು ನೀಲಿನಕ್ಷೆ ರೂಪಿಸಲಾಗಿದೆ. ಆದಷ್ಟು ಬೇಗ ಕೆರೆ ನಿರ್ಮಾಣ ಕಾರ್ಯವನ್ನ ಕೈಗೆತ್ತಿಕೊಳ್ಳಲಾಗುವುದು ಎಂದಿದ್ದಾರೆ. ಈ ಸಂದರ್ಭದಲ್ಲಿ ಬಾಟನಾಗನೂರ ಗ್ರಾಮದ ಬಿಜೆಪಿ ಮುಖಂಡರು, ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಪ್ರವಾಹದಿಂದ ನೀರು ವ್ಯರ್ಥವಾಗುವುದನ್ನು ತಡೆದು, 35 ಕೆರೆ ತುಂಬಿಸಲು ಯಾದಗಿರಿ ಜಿಲ್ಲಾಡಳಿತ ಪ್ಲಾನ್

    ಪ್ರವಾಹದಿಂದ ನೀರು ವ್ಯರ್ಥವಾಗುವುದನ್ನು ತಡೆದು, 35 ಕೆರೆ ತುಂಬಿಸಲು ಯಾದಗಿರಿ ಜಿಲ್ಲಾಡಳಿತ ಪ್ಲಾನ್

    – ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ಧತೆ

    ಯಾದಗಿರಿ: ಜಿಲ್ಲೆಯಲ್ಲಿ ಉತ್ತಮ ಮುಂಗಾರು ಮಳೆಯಾಗುತ್ತಿದೆ, ಮತ್ತೊಂದೆಡೆ ಬಸವಸಾಗರ ಜಲಾಶಯದಿಂದ ಕೃಷ್ಣ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭೀಮಾನದಿಗೆ ಯಾವುದೇ ಕ್ಷಣದಲ್ಲಿ ನೀರು ಬಿಡುವ ಸಾಧ್ಯತೆಯಿದೆ. ಕಳೆದ ಬಾರಿ ಎರಡು ನದಿಗಳು ಸೃಷ್ಟಿಸಿದ ಪ್ರವಾಹದಿಂದ ಬುದ್ಧಿ ಕಲಿತಿರುವ ಜಿಲ್ಲಾಡಳಿತ, ಈಗ ಪ್ರವಾಹಕ್ಕೆ ಸೆಡ್ಡು ಹೊಡೆಯಲು ಮುಂದಾಗಿದೆ.

    ಈ ಬಾರಿ ಪ್ರವಾಹ ಉಂಟಾದರೆ ಅದೇ ನೀರಿನಿಂದ ಜಿಲ್ಲೆಯಲ್ಲಿನ 35 ಕೆರೆಗಳನ್ನು ತುಂಬಿಸುವ ಸಾಹಸಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಇದಕ್ಕಾಗಿ ಗುರುಸುಣಗಿ ಹತ್ತಿರದ ಬ್ರಿಡ್ಜ್ ಕಂ ಬ್ಯಾರೇಜ್ ಹತ್ತಿರ ವಿಶೇಷ ಯೋಜನೆ ನಿರ್ಮಾಣಗೊಳುತ್ತಿದೆ.

    ಸದ್ಯ ಕೆರೆ ತುಂಬಿಸಲು ದಡದಲ್ಲಿ ಕಾಮಗಾರಿ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಅಕ್ಟೋಬರ್ ತಿಂಗಳೊಳಗಾಗಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

  • ಮೀನು ಹಿಡಿಯಲು ಮುಗಿಬಿದ್ದ ನೂರಾರು ಜನ- ಕೊರೊನಾ ರೂಲ್ಸ್ ಬ್ರೇಕ್

    ಮೀನು ಹಿಡಿಯಲು ಮುಗಿಬಿದ್ದ ನೂರಾರು ಜನ- ಕೊರೊನಾ ರೂಲ್ಸ್ ಬ್ರೇಕ್

    ಹಾಸನ: ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ನಿಯಮ ಗಾಳಿಗೆ ತೂರಿ ಮೀನು ಹಿಡಿಯಲು ನೂರಾರು ಜನ ಕೆರೆಗೆ ನುಗ್ಗಿದ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಸೋಮನಹಳ್ಳಿ ಗ್ರಾಮದ ಸಮೀಪದ ಕೆರೆಯಲ್ಲಿ ನಡೆದಿದೆ.

    ಮೀನು ಹಿಡಿಯೋ ಉಪಕರಣ ಹಿಡಿದು ನೂರಾರು ಮಂದಿ ಕೆರೆಗಿಳಿದು ನಾಮುಂದು, ತಾಮುಂದು ಎಂದು ಮೀನಿನ ಹುಡುಕಾಟದಲ್ಲಿ ತೊಡಗಿದ್ದರು. ಕೆರೆಯ ದಡದ ಮೇಲೂ ಕೊರೊನಾ ನಿಯಮ ಗಾಳಿಗೆ ತೂರಿ ನೂರಾರು ಜನ ನಿಂತಿದ್ದರು. ತಲೆಗೆ 200 ರೂ.ನಂತೆ ಹಣ ಕಟ್ಟಿ ಯಾರು ಬೇಕಾದರೂ ಮೀನು ಹಿಡಿಯೋ ಬಗ್ಗೆ ವೀಡಿಯೋ ವೈರಲ್ ಆಗಿದ್ದರಿಂದ ಇಷ್ಟೊಂದು ಜನ ಬಂದಿದ್ದಾರೆ ಎಂದು ಸ್ಥಳೀಯರು ವಿವರಿಸಿದ್ದಾರೆ.

    ಮನೆಯಲ್ಲಿ ಮದುವೆ ಮಾಡಲು ಕೊರೊನಾ ನಿಯಮ ಇದೆ. ಈ ರೀತಿ ಜನ ಸೇರಲು ಬಿಡೋದು ಎಷ್ಟು ಸರಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಕೊರೊನಾ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‍ಡೌನ್ ಸಹ ಇದೆ. ಇದರ ನಡುವೆ ಜನ ಮೀನು ಹಿಡಿಯಲು ಮುಗಿಬಿದ್ದಿದ್ದಾರೆ.

  • ಧಾರವಾಡ ಜಿಲ್ಲೆಯಲ್ಲಿ ಮಳೆ – ಕೆರೆಯ ಕಟ್ಟೆ ಒಡೆದು ನೂರಾರು ಎಕರೆ ಜಮೀನು ಜಲಾವೃತ!

    ಧಾರವಾಡ ಜಿಲ್ಲೆಯಲ್ಲಿ ಮಳೆ – ಕೆರೆಯ ಕಟ್ಟೆ ಒಡೆದು ನೂರಾರು ಎಕರೆ ಜಮೀನು ಜಲಾವೃತ!

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಕಾರ ಮಳೆಯಿಂದ ಕಲಘಟಗಿ ತಾಲೂಕಿನ ಹಟಕಿನಾಳದ ಜಿಗಳಿ ಕೆರೆ ಒಡೆದು ಅವಾಂತರ ಸೃಷ್ಟಿಯಾಗಿದೆ. ಕೆರೆ ಭರ್ತಿಯಾಗಿ ಕಟ್ಟೆ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಕರೆಯಿಂದ ರೈತರ ಜಮೀನುಗಳಿಗೆ ನುಗ್ಗಿ ನೂರಾರು ಎಕರೆಯಲ್ಲಿ ಬೆಳೆದ ಬೆಳಗಳು ಸಂಪೂರ್ಣ ಜಲಾವೃತಗೊಂಡಿವೆ.

    ಕೆರೆಯ ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ, ಸೋಯಾಬಿನ್, ಕಬ್ಬು, ಹತ್ತಿ, ಗೋವಿನಜೋಳ ಬೆಳೆಗಳು ನೀರಿನಲ್ಲಿ ಜಲಾವೃತವಾಗಿದ್ದು. ಇದರಿಂದ ಅನ್ನದಾತನ ಬದುಕು ದಿಕ್ಕು ತೋಚದಂತಾಗಿದೆ.

    ಕೆರೆಯ ಕಟ್ಟೆ ಒಡೆದು ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗುತ್ತಿದ್ದರು. ರೈತರ ಬೆಳೆಗಳು ಜಲಾವೃತಗೊಂಡರು ಸ್ಥಳಕ್ಕೆ ಅಧಿಕಾರಿಗಳು ಮಾತ್ರ ಭೇಟಿ ನೀಡಿಲ್ಲ. ಹೀಗಾಗಿ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು. ಕೂಡಲೇ ಕೆರೆಯ ಕಟ್ಟೆ ರಿಪೇರಿ ಮಾಡಬೇಕೆಂದು ಆಗ್ರಹಿಸಿದ್ದಾರೆ.

  • ಕೆರೆ ಸರ್ವೆ ಕಾರ್ಯ, ಒತ್ತುವರಿ ತೆರವಿಗೆ ವಿಳಂಬ ಮಾಡಬೇಡಿ: ಡಿಸಿ ಜೆ ಮಂಜುನಾಥ್

    ಕೆರೆ ಸರ್ವೆ ಕಾರ್ಯ, ಒತ್ತುವರಿ ತೆರವಿಗೆ ವಿಳಂಬ ಮಾಡಬೇಡಿ: ಡಿಸಿ ಜೆ ಮಂಜುನಾಥ್

    ಬೆಂಗಳೂರು: ನಗರ, ಜಿಲ್ಲೆ ಕೆರೆಗಳನ್ನು ಶಾಶ್ವತ ಆಸ್ತಿಯನ್ನಾಗಿ ಅಭಿವೃದ್ಧಿಪಡಿಸಿ ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತ ಪರಿಸರ ಉಳಿಸುವುದು ನಮ್ಮ ಜವಾಬ್ದಾರಿ. ಹಾಗಾಗಿ ಜಿಲ್ಲೆಯ ಎಲ್ಲ ಕೆರೆಗಳ ಸರ್ವೆ ಕಾರ್ಯ ಕೈಗೊಂಡು ಒತ್ತುವರಿಯನ್ನು ಕೂಡಲೇ ತೆರವುಗೊಳಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

    ಇಂದು ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಕೆರೆಗಳ ಅಭಿವೃದ್ಧಿ ಕುರಿತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆರೆಗಳ ಸುತ್ತ ಗಡಿ ಗುರುತಿಸಿ, ಅದರ ಸುತ್ತ ಇರುವ ಬಫರ್ ಝೋನ್ ಪ್ರದೇಶದಲ್ಲಿ ಯಾವುದೇ ಕಟ್ಟಡ ಅಥವಾ ಇತರೆ ಕಾಮಗಾರಿಗಳಿಗೆ ಅನುಮತಿ ನೀಡುವಂತ್ತಿಲ್ಲ. ಈ ಬಗ್ಗೆ ಕೂಡಲೇ ಸರ್ವೆ ನಡೆಸಿ ಒತ್ತುವರಿ ಮಾಹಿತಿ ನೀಡುವಂತೆ ಅವರು ಸೂಚಿಸಿದರು.

    ಕೆರೆಗಳಿಗೆ ನೀರು ಪೂರೈಸುವ ರಾಜಕಾಲುವೆಗಳ ಒತ್ತುವರಿಯನ್ನೂ ಸಹ ಕೂಡಲೆ ತೆರವುಗೊಳಿಸಬೇಕು ಎಂದ ಜಿಲ್ಲಾಧಿಕಾರಿಗಳು, ನಾಳೆಯೊಳಗೆ ಈ ಸಂಪೂರ್ಣ ಕಾರ್ಯ ನಿರ್ವಹಿಸಲು ವೇಳಾಪಟ್ಟಿ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲೆಯಲ್ಲಿ ಒಟ್ಟು 836 ಕೆರೆಗಳಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ 204 ಕೆರೆಗಳು, ಸಣ್ಣ ನೀರಾವರಿ ಇಲಾಖೆಗೆ 46 ಕೆರೆಗಳು, ಜಿಲ್ಲಾ ಪಂಚಾಯ್ತಿಗೆ 421, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಐದು ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಗೆ ಒಂದು ಕೆರೆ ಸೇರುತ್ತದೆ. ಉಳಿದ ಕೆರೆಗಳು ಯಾವ ಇಲಾಖೆಗೆ ಸೇರುತ್ತದೆ ಎಂಬ ಬಗ್ಗೆ ನಿರ್ಧರಿಸಲು ಸಮೀಕ್ಷೆ ನಡೆಸಲು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಪ್ರವಾಸಿ ಮಾರ್ಗದರ್ಶಿಗಳಿಗೆ 5 ಸಾವಿರ ರೂ. ಕೋವಿಡ್ ಪರಿಹಾರ – ಯೋಗೇಶ್ವರ್

    ಬೆಂಗಳೂರು ಕೇವಲ ಸಿಲಿಕಾನ್ ವ್ಯಾಲಿಯಾಗಿ ಜಾಗತಿಕವಾಗಿ ಬ್ರಾಂಡ್ ಆಗುವುದು ಮಾತ್ರವಲ್ಲ, ಆರೋಗ್ಯಕರ ಪರಿಸರವನ್ನು ನಿವಾಸಿಗಳಿಗೆ ಒದಗಿಸಿ ಜೀವನ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಅವರು ಸೂಚಿಸಿದರು.

    ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಳಿಸಿದಲ್ಲಿ ಕೈಗಾರಿಕೆಗಳಿಗೆ ಅವುಗಳನ್ನು ಅಭಿವೃದ್ಧಿ ಪಡಿಸಲು ನೀಡಲಾಗುವುದು ಎಂದ ಅವರು, ಸರ್ಕಾರದ ಮಟ್ಟದಲ್ಲಿ ಪ್ರತಿ 15 ದಿನಗಳಿಗೊಮ್ಮೆ ಕೆರೆ ಅಭಿವೃದ್ಧಿ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಅನುಷ್ಠಾನ ಇಲಾಖೆಗಳು ಕ್ರಿಯಾಶೀಲರಾಗುವುದು ಅತ್ಯಗತ್ಯ ಎಂದು ತಿಳಿಸಿದರು.

    ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ, ಅಪರ ಜಿಲ್ಲಾಧಿಕಾರಿ ಅನಿತಾ ಲಕ್ಷ್ಮೀ, ಉತ್ತರ ವಿಭಾಗಾಧಿಕಾರಿ ರಂಗನಾಥ್, ದಕ್ಷಿಣ ಉಪವಿಭಾಗಾಧಿಕಾರಿ ಡಾ. ಶಿವಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀನಿವಾಸ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.