Tag: lake

  • ಮಂಡ್ಯದಲ್ಲಿ ಮೀನುಗಾರರ ಬಲೆಗೆ ಬಿತ್ತು 1ಕೆ.ಜಿ ತೂಕದ ಏರೋಪ್ಲೇನ್ ಮಾದರಿಯ ಮೀನು

    ಮಂಡ್ಯದಲ್ಲಿ ಮೀನುಗಾರರ ಬಲೆಗೆ ಬಿತ್ತು 1ಕೆ.ಜಿ ತೂಕದ ಏರೋಪ್ಲೇನ್ ಮಾದರಿಯ ಮೀನು

    ಮಂಡ್ಯ: ಜಿಲ್ಲೆಯ ಮದ್ದೂರು ಸಮೀಪದ ಮದ್ದೂರಮ್ಮ ಕೆರೆಯಲ್ಲಿ ಅಪರೂಪದ ಏರೋಪ್ಲೇನ್ ಮಾದರಿಯ ಮೀನೊಂದು ಮೀನುಗಾರರ ಬಲೆಗೆ ಸಿಲುಕಿದೆ.

    ದೇಶಹಳ್ಳಿ ಗ್ರಾಮದ ಮೀನುಗಾರ ನಾಗರಾಜ ನಾಯಕ್ ಅವರು ಎಂದಿನಂತೆ ಮೀನು ಹಿಡಿಯಲು ಕೆರೆಯಲ್ಲಿ ಬಲೆ ಬೀಸಿದ್ದರು. ಮಧ್ಯಾಹ್ನ ಮೀನಿನ ಬಲೆಯನ್ನು ಎಳೆದು ಪರೀಕ್ಷಿಸಿದಾಗ, ಸುಮಾರು 1 ಕೆಜಿ ತೂಕದ ಏರೋಪ್ಲೇನ್ ಹೋಲುವ ವಿಶೇಷ ಮೀನು ಪತ್ತೆಯಾಗಿದೆ.

    ಕಂದು ಬಣ್ಣದ ಈ ಮೀನಿನ ಮೈ ಮೇಲೆ ಹಳದಿ ಬಣ್ಣದ ಗೆರೆಗಳಿವೆ. ಮೀನಿನ ಬಾಯಿ ತಿಮಿಂಗಲದ ಬಾಯಿಯಂತಿದ್ದು, ಮೀನಿನ ಎರಡು ಬದಿಯಲ್ಲಿ ನಾಲ್ಕು ರೆಕ್ಕೆಗಳಿವೆ. ಮೀನಿನ ಮೇಲ್ಭಾಗದಲ್ಲಿ ನಾಲ್ಕು ಹಂತದ ಚೂಪಾದ ಮುಳ್ಳುಗಳಿವೆ.

    ಇದೇ ಮೊದಲ ಬಾರಿಗೆ ಈ ರೀತಿಯ ವಿಶೇಷ ಮೀನು ನಮ್ಮ ಕೆರೆಯಲ್ಲಿ ಸಿಕ್ಕಿದೆ. ಈ ಹಿಂದೆ ಈ ರೀತಿಯ ಮೀನು ನಾನು ನೋಡಿರಲಿಲ್ಲ. ಇದು ಯಾವ ಜಾತಿಯ ಮೀನು ತಿಳಿದಿಲ್ಲ. ಬಲೆಯಲ್ಲಿ ಸಿಲುಕಿ ಈಚೆ ಬಂದ ಮೇಲೂ ಬದುಕಿದ್ದ ಈ ಮೀನನ್ನು ರೈತ ಶೈಲೇಂದ್ರ ಅವರ ತೋಟದ ಬಾವಿಯಲ್ಲಿ ಬಿಡಲಾಗಿದೆ ಎಂದು ಮೀನುಗಾರ ನಾಗರಾಜನಾಯಕ್ ತಿಳಿಸಿದ್ದಾರೆ.

  • ಈಜಲು ತೆರಳಿದ್ದ ಬಾಲಕರು ಕೆರೆಯಲ್ಲಿ ಮುಳುಗಿ ಸಾವು

    ಈಜಲು ತೆರಳಿದ್ದ ಬಾಲಕರು ಕೆರೆಯಲ್ಲಿ ಮುಳುಗಿ ಸಾವು

    ಹಾವೇರಿ: ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ನಾಗನೂರು ಕೆರೆಯಲ್ಲಿ ನಡೆದಿದೆ.

    ಮೃತ ಬಾಲಕರನ್ನು ಸಾಹಿಲ್ ಹಾವೇರಿ(14) ಮತ್ತು ಖಾಜಾ ಮಂತ್ರೋಡಿ(14) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಪಟ್ಟಣದ ಮೌಲಾಲಿ ಬಡಾವಣೆಯ ನಿವಾಸಿಗಳು ಎನ್ನಲಾಗಿದೆ. ಮಧ್ಯಾಹ್ನ ಸೈಕಲ್ ಮೇಲೆ ಕೆರೆಗೆ ಈಜಲು ತೆರಳಿದ್ದರು, ಈ ವೇಳೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ಅಗ್ನಿಶಾಮಕ ದಳ ಸಿಬ್ಬಂದಿ ಕೆರೆಯಲ್ಲಿ ಶೋಧಕಾರ್ಯ ನಡೆಸಿ ಮೃತ ದೇಹಗಳನ್ನ ಹೊರತೆಗಿದ್ದಾರೆ. ತಾಲೂಕು ಆಸ್ಪತ್ರೆಗೆ ಶಾಸಕ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

    ಸ್ಥಳಕ್ಕೆ ಶಿಗ್ಗಾಂವಿ ಠಾಣೆ ಪಿಎಸ್‍ಐ ಅನ್ನಪೂರ್ಣ ಹುಲಗೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ಕೆರೆಯಲ್ಲಿ ಈಜಲು ಹೋದ ಹುಣಸೂರಿನ 10 ತರಗತಿಯ ನಾಲ್ವರು ಮಕ್ಕಳು ಜಲಸಮಾಧಿ!

    ಕೆರೆಯಲ್ಲಿ ಈಜಲು ಹೋದ ಹುಣಸೂರಿನ 10 ತರಗತಿಯ ನಾಲ್ವರು ಮಕ್ಕಳು ಜಲಸಮಾಧಿ!

    ಮೈಸೂರು: ಕೆರೆಗೆ ಈಜಲು ಹೋದ ಹತ್ತನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಘಟನೆ ಹುಣಸೂರು ತಾಲ್ಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ.

    ಮಂಗಳವಾರ ಮಧ್ಯಾಹ್ನ ಹೈರೆಗೆ ಗ್ರಾಮದ ಕೆರೆಯಲ್ಲಿ ಈಜಾಡಲು ಹೋಗಿದ್ದ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದರು. ಘಟನೆ ನಡೆದ ಬಳಿಕ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಇಬ್ಬರು ಮಕ್ಕಳ ಮೃತದೇಹವನ್ನು ಮೇಲಕ್ಕೆ ಎತ್ತಿದ್ದರು. ರಾತ್ರಿಯಾದ ಕಾರಣ ಕಾರ್ಯಚರಣೆಯನ್ನ ಸ್ಥಗಿತಗೊಳಿಸಿ ಇಂದು ಬೆಳಗ್ಗೆ ಮತ್ತೆ ಕಾರ್ಯಚರಣೆ ಆರಂಭ ಮಾಡಿ ಮತ್ತಿಬ್ಬರ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ.

    ನಾಪತ್ತೆಯಾಗಿದ್ದ ನಾಲ್ವರೂ ಸಹಪಾಠಿಗಳಾಗಿದ್ದು, ಹುಣಸೂರಿನ ಸೆಂಟ್ ಜೋಸೆಫ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹುಣಸೂರಿನ ನಿವಾಸಿಗಳಾದ ಅನಿಲ್, ಭರತ್, ಧನಂಜಯ್, ಯಶವಂತ್ ಮೃತ ವಿದ್ಯಾರ್ಥಿಗಳು.

    ಕಾರ್ಯಾಚರಣೆ ನಡೆಸಿದ ಕೆರೆಯ ದಡದಲ್ಲಿ ಚಪ್ಪಲಿ, ವಾಚ್, ಬೈಕ್ ಪತ್ತೆಯಾಗಿದ್ದು, ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೊಸಳೆಗಳಿದ್ದ ಕೆರೆಯೊಳಗೆ ಜೀವಂತ ನಾಯಿಮರಿಯನ್ನ ಎಸೆದ ಕ್ರೂರಿ

    ಮೊಸಳೆಗಳಿದ್ದ ಕೆರೆಯೊಳಗೆ ಜೀವಂತ ನಾಯಿಮರಿಯನ್ನ ಎಸೆದ ಕ್ರೂರಿ

    ಜಕಾರ್ತಾ: ನಿರ್ದಯಿ ವ್ಯಕ್ತಿಯೊಬ್ಬ ಮೊಸಳೆಗಳಿಂದ ತುಂಬಿದ್ದ ಕೆರೆಯೊಳಗೆ ಜೀವಂತ ನಾಯಿಮರಿಯನ್ನ ಎಸೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ ಎನ್ನಲಾಗಿದೆ.

    ವ್ಯಕ್ತಿ ಬ್ಯಾಗಿನಿಂದ ನಾಯಿಮರಿಯನ್ನ ತೆಗೆದುಕಂಡು ನದಿಯ ಕಡೆಗೆ ಹೋಗಿದ್ದಾನೆ. ಆತ ನಾಯಿಮರಿಯ ಕತ್ತನ್ನು ಹಿಡಿದುಕೊಂಡಿದ್ದು, ಹಿಂದೆ ಇದ್ದವರು ನಗುತ್ತಾ, ಕೂಗಾಡುತ್ತಾ ಆತನನ್ನು ಪ್ರೋತ್ಸಾಹಿಸಿದ್ದಾರೆ. ನಂತರ ಆ ವ್ಯಕ್ತಿ ನಾಯಿಮರಿಯನ್ನ ಕೆರೆಯೊಳಗೆ ಎಸೆದಿದ್ದಾನೆ. ನಾಯಿಮರಿ ಒದ್ದಾಡುತ್ತಾ ದಡದ ಕಡೆಗೆ ಈಜಲು ಯತ್ನಿಸಿದೆ. ಆದ್ರೆ ಅದರ ಪುಟ್ಟ ಕಾಲಿನಿಂದ ಈಜಲು ಸಾಧ್ಯವಾಗಿಲ್ಲ. ನಂತರ ಮೊಸಳೆಯೊಂದು ಬಂದು ನಾಯಿಮರಿಯನ್ನ ತಿಂದಿದೆ.

    ನಾಯಿಮರಿಯನ್ನ ಕೆರೆಗೆ ಎಸೆದ ವ್ಯಕ್ತಿ ಯಾರು ಹಾಗೂ ಆತ ಈ ರೀತಿ ಮಾಡಿದ್ದು ಯಾಕೆ ಎಂಬುದು ತಿಳಿದುಬಂದಿಲ್ಲ. ಆದ್ರೆ ಅಮಾನವೀಯವಾಗಿ ನಾಯಿಮರಿಯನ್ನ ಮೊಸಳೆ ಬಾಯಿಗೆ ಕೊಟ್ಟ ಆತನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಕಿಡಿ ಕಾರಿದ್ದಾರೆ.

    https://www.youtube.com/watch?v=bb4HkBQdeTg

  • ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆ

    ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆ

    ಬೆಂಗಳೂರು: ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.

    8ನೇ ತರಗತಿ ಓದುತ್ತಿದ್ದ ರಾಣಿ ಎಂಬಾಕೆ ಮೂರು ದಿನದ ಹಿಂದೆ ಸುಭಾಷ್ ನಗರದಿಂದ ನಾಪತ್ತೆಯಾಗಿದ್ದಳು. ಆದ್ರೆ ಶನಿವಾರ ಹೊಸರೋಡ್ ಜಂಕ್ಷನ್ ಬಳಿಯ ಬಸವಾಪುರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ವಿದ್ಯಾರ್ಥಿನಿಯ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

    ರಾಣಿಯ ಪೋಷಕರು ಮೂರು ದಿನಗಳ ಹಿಂದೆಯೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು. ಆದರೆ ಶನಿವಾರ ರಾಣಿ ವಿದ್ಯಾರ್ಥಿನಿಯು ಶಾಲಾ ಸಮವಸ್ತ್ರದಲ್ಲೇ ಶವವಾಗಿ ಪತ್ತೆಯಾಗಿದ್ದಾಳೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿ ಶವವನ್ನು ಕೆರೆಯಿಂದ ಹೊರ ತೆಗೆದು ಶವ ಪರೀಕ್ಷೆಗಾಗಿ ನಗರದ ವಿಕ್ಟೋರಿಯ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.

    ವಿದ್ಯಾರ್ಥಿನಿಯ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದ್ದು, ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಮೀನು ಹಿಡಿಯಲು ಹೋದ ಇಬ್ಬರು ಮಕ್ಕಳು ನೀರು ಪಾಲು

    ಮೀನು ಹಿಡಿಯಲು ಹೋದ ಇಬ್ಬರು ಮಕ್ಕಳು ನೀರು ಪಾಲು

    ವಿಜಯಪುರ: ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ಜಿಲ್ಲೆಯ ದೊಡ್ಡ ಕೆರೆಯಲ್ಲಿ ನಡೆದಿದೆ.

    12 ವರ್ಷದ ಲೋಕೇಶ್ ನಾಗರಾಜ ತಟ್ಟಿ ಎಂಬ ಬಾಲಕನ ಶವ ಪತ್ತೆಯಾಗಿದ್ದು, ಮತ್ತೊಬ್ಬನ ಶವ ಪತ್ತೆಯಾಗದ ಕಾರಣ ಬಾಲಕನ ಗುರುತು ಪತ್ತೆಯಾಗಿಲ್ಲ. ಆದರೆ ಇಬ್ಬರು ಮೃತರು ಮುದ್ದೇಬಿಹಾಳ ನಿವಾಸಿಗಳಾಗಿದ್ದಾರೆ. ಮುದ್ದೇಬಿಹಾಳ ಪಟ್ಟಣದ ಇಂದಿರಾ ಸರ್ಕಲ್ ಬಳಿಯ ದೊಡ್ಡ ಕೆರೆಯಲ್ಲಿ ಈ ಘಟನೆ ಸಂಭವಿಸಿದೆ.

    ಇಬ್ಬರು ಬಾಲಕರು ಶನಿವಾರ ಶಾಲೆ ಮುಗಿಸಿ ಮೀನು ಹಿಡಿಯಲು ಕೆರೆಗೆ ಹೋಗಿದ್ದಾರೆ. ಆದರೆ ಆಕಸ್ಮತಾಗಿ ಇಬ್ಬರು ಕಾಲುಜಾರಿ ಕೆರೆಗೆ ಬಿದ್ದಿದ್ದಾರೆ. ಸುತ್ತಮುತ್ತ ಇದ್ದವರು ನೋಡಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ವಿಚಾರ ತಿಳಿಸಿದ್ದಾರೆ.

    ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಳಿಕ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಶನಿವಾರ ಸಂಜೆಯಿಂದ ಶವಕ್ಕಾಗಿ ಶೋಧ ಕಾರ್ಯ ಮಾಡುತ್ತಿದ್ದಾರೆ. ಆದರೆ ಒಬ್ಬನ ಮೃತದೇಹ ಪತ್ತೆಯಾಗಿದ್ದು, ರಾತ್ರಿಯಾದ ಕಾರಣ ಶೋಧಕಾರ್ಯ ಮಾಡಲು ಸಾಧ್ಯವಾಗಿಲ್ಲ. ಇಂದು ಮುಂಜಾನೆಯಿಂದಲೇ ಮತ್ತೊಬ್ಬ ಬಾಲಕನ ಮೃತದೇಹಕ್ಕಾಗಿ ಅಗ್ನಿಶಾಮಕ ದಳ ಶೋಧಕಾರ್ಯ ನಡೆಸುತ್ತಿದೆ.

    ಈ ಘಟನೆ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೋಟಿ ರೂ. ಮೌಲ್ಯದ ಚಿನ್ನಾಭರಣಕ್ಕಾಗಿ ಕೊಳಚೆ ನೀರಿನಲ್ಲಿ ಮುಳುಗಿ ಹುಡುಕಾಡಿದ ಜನ!

    ಕೋಟಿ ರೂ. ಮೌಲ್ಯದ ಚಿನ್ನಾಭರಣಕ್ಕಾಗಿ ಕೊಳಚೆ ನೀರಿನಲ್ಲಿ ಮುಳುಗಿ ಹುಡುಕಾಡಿದ ಜನ!

    ಮೈಸೂರು: ಅಪ್ಪ-ಮಗ ಕದ್ದಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾಲನ್ನು ಕೆರೆಯಲ್ಲಿ ಅಡಗಿಸಿಟ್ಟಿದ್ದಾರೆಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಕೆರೆಯಲ್ಲಿ ಸಂಗ್ರಹವಾಗಿದ್ದ ಕೊಳಚೆ ನೀರಿನಲ್ಲಿ ಮುಳುಗೇಳುವ ಮೂಲಕ ಚಿನ್ನಾಭರಣಕ್ಕಾಗಿ ಹುಡುಕಾಟ ನಡೆಸಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ದಳವಾಯಿ ಕೆರೆಯಲ್ಲಿ ಈ ಹುಡುಕಾಟ ನಡೆದಿದೆ. ಕೊಳಚೆ ನೀರು ತುಂಬಿದ್ದ ಕೆರೆಯಲ್ಲಿ ಹುಡುಕಾಟ ನಡೆಸುತ್ತಿದ್ದವರನ್ನು ಕಂಡು ಜನರು ಅಚ್ಚರಿಗೊಂಡಿದ್ದಾರೆ. ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕೆರೆಯ ಬಳಿ ಜಮಾವಣೆಯಾದ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.

    ಪೊಲೀಸರು ಬರುತ್ತಿದ್ದಂತೆ ಕೆರೆಯಲ್ಲಿ ಹುಡುಕಾಟ ನಡೆಸುತ್ತಿದ್ದವರು ಪರಾರಿಯಾಗಿದ್ದಾರೆ. ಕಳ್ಳ ಮಾಲಿನ ಹುಡುಕಾಟದ ವಿಚಾರ ತಿಳಿದು ಬೇಸ್ತು ಬಿದ್ದ ಪೊಲೀಸರು, ಕೆರೆಯಲ್ಲಿ ಯಾರೂ ಕೂಡ ಕದ್ದ ಮಾಲನ್ನು ಅಡಗಿಸಿಟ್ಟಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು.

  • 3 ಕೋಟಿ ರೂ. ಸುರಿದು ಕೆರೆ ಕಟ್ಟಿಸಿದ ಸರ್ಕಾರ- ಕೆರೆ ಏರಿ ಒಡೆದು ಅಪಾರ ನೀರು ಪೋಲು

    3 ಕೋಟಿ ರೂ. ಸುರಿದು ಕೆರೆ ಕಟ್ಟಿಸಿದ ಸರ್ಕಾರ- ಕೆರೆ ಏರಿ ಒಡೆದು ಅಪಾರ ನೀರು ಪೋಲು

    ಕೊಪ್ಪಳ: ಸರ್ಕಾರ ಸುಮಾರು 3 ಕೋಟಿ ರೂ. ಸುರಿದು ಕೆರೆ ಕಟ್ಟಿಸ್ತು. ಆದರೆ ಕೆರೆ ಏರಿ ಒಡೆದು ಅಪಾರ ನೀರು ಪೋಲಾಗಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಸುಳೇಕಲ್ ಗ್ರಾಮದಲ್ಲಿ ನಡೆದಿದೆ.

    ಶುಕ್ರವಾರ ಸಂಜೆ ಸುಳೇಕಲ್ ಗ್ರಾಮದ ಹೊರವಲಯದಲ್ಲಿರೋ ಕೆರೆಯ ಏರಿ ಒಡೆದು ಅಪಾರ ಪ್ರಮಾಣ ನೀರು ಪೋಲಾಗಿದೆ. ಈ ಕೆರೆ ಸುಮಾರು 16 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದು, ರಾಜೀವ್ ಗಾಂಧಿ ವಾಟರ್ ಬಸ್ ಮಿಷನ್ ಕುಡಿವ ನೀರಿನ ಯೋಜನೆಯಡಿ ನಿರ್ಮಾಣವಾಗಿತ್ತು.

    ಶಾಸಕ ಶಿವರಾಜ ತಂಗಡಗಿ ಬೆಂಬಗಲಿಗರಿಂದ ನಿರ್ಮಾಣವಾಗಿದ್ದ ಕೆರೆಯಾಗಿದ್ದು, ಇದರಿಂದ ಸುಮಾರು 16 ಗ್ರಾಮಕ್ಕೆ ಕುಡಿವ ನೀರು ಒದಗಿಸುವ ಯೋಜನೆಯಾಗಿತ್ತು. ಈ ಕೆರೆಯನ್ನ ಬರೋಬ್ಬರಿ ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದ ಕೆರೆ ಒಡೆದಿದೆ. ಸಮರ್ಪಕ ನಿರ್ವಹಣೆ ಇಲ್ಲದೆ ಅಪಾರ ಪ್ರಮಾಣದ ನೀರು ಮಣ್ಣು ಪಾಲಾಗಿದೆ.

    ಕೆರೆ ಏರಿ ಒಡೆದ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ, ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ.

  • ಎಳ್ಳಮಾವಾಸ್ಯೆ ಆಚರಿಸಲು ಹೋಗಿದ್ದಾಗ ತೆಪ್ಪ ಮುಳುಗಿ ನಾಲ್ವರ ಸಾವು

    ಎಳ್ಳಮಾವಾಸ್ಯೆ ಆಚರಿಸಲು ಹೋಗಿದ್ದಾಗ ತೆಪ್ಪ ಮುಳುಗಿ ನಾಲ್ವರ ಸಾವು

    ಬೀದರ್: ಎಳ್ಳಮಾವಾಸ್ಯೆ ಆಚರಿಸಲು ಹೋಗುವಾಗ ತೆಪ್ಪ ಮುಳುಗಿ ನಾಲ್ವರು ಬಾಲಕಿಯರು ಹಾಗೂ ಒಬ್ಬ ಬಾಲಕ ಸಾವನ್ನಪ್ಪಿದ ಘಟನೆ ಸೋಮವಾರ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೊಹಿನೂರ ಬಳಿಯ ಕೆರೆಯಲ್ಲಿ ನಡೆದಿದೆ.

    ಎನ್‍ಡಿಆರ್‍ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿ ಕಾರ್ಯಚರಣೆ ನಡೆಸಿ ಕೆರೆ ಪಾಲಾಗಿದ್ದ ನಾಲ್ವರು ಬಾಲಕ, ಬಾಲಕಿಯರ ಶವ ಹೊರತೆಗೆದಿದ್ದಾರೆ. ಮೃತರನ್ನು 17 ವರ್ಷದ ಜೀಯಾಬಾನು ಅಬ್ದುಲ್ ಸತ್ತಾರ್, 10 ವರ್ಷದ ತಬರೇಜ್ ನಾಜೀರಸಾಬ್, 15 ವರ್ಷದ ಇಸ್ರಾತ್ ಇಸ್ಮಾಯಿಲ್ ಖೂರೋಷಿ ಹಾಗೂ 18 ವರ್ಷದ ತನಾಜು ಬಾನು ಲಾಲ ಮಹ್ಮದ್ ಎಂದು ಗುರುತಿಸಲಾಗಿದೆ.

     

    ಎಳ್ಳಮಾವಾಸ್ಯೆ ಆಚರಿಸಲು 9 ಮಕ್ಕಳು ಹೊಲಕ್ಕೆ ಹೋಗಿದ್ದರು. ಊಟ ಮುಗಿಸಿಕೊಂಡ ಪಕ್ಕದಲ್ಲೇ ಇದ್ದ ಸಿನಿ ಕೆರೆಯಲ್ಲಿ ಆಟವಾಡಲು ಹೋಗಿದ್ದರು. ಈ ವೇಳೆ ತೆಪ್ಪ ಮಗುಚಿ ಮೂವರು ಬಾಲಕಿಯರು ಹಾಗೂ ಒಬ್ಬ ಬಾಲಕ ಸೇರಿ ನಾಲ್ವರು ನೀರು ಪಾಲಾಗಿದ್ದು, ಉಳಿದ ಐವರು ಈಜುಕೊಂಡು ದಡ ಸೇರಿದ್ದರು.

    ನೀರು ಪಾಲಾಗಿದ್ದ ನಾಲ್ವರ ಶವವನ್ನು ಇಂದು NDRF, ಅಗ್ನಿಶಾಮಕ ದಳ ಸಿಬ್ಬಂದಿಯ ಕಾರ್ಯಚರಣೆಯಿಂದ ಹೊರತೆಗೆಯಲಾಗಿದೆ.

     

  • ಸತ್ತಿದ್ದಾರೆ ಎಂದು ತಿಳಿದ ಮಹಿಳೆ ಸಂಬಂಧಿಕರ ಮನೆಯಲ್ಲಿ ಪತ್ತೆ

    ಸತ್ತಿದ್ದಾರೆ ಎಂದು ತಿಳಿದ ಮಹಿಳೆ ಸಂಬಂಧಿಕರ ಮನೆಯಲ್ಲಿ ಪತ್ತೆ

    ಮಂಡ್ಯ: ಸತ್ತಿದ್ದಾರೆ ಎಂದು ತಿಳಿದಿದ್ದ ಮಹಿಳೆ ಸಂಬಂಧಿಕರ ಮನೆಯಲ್ಲಿ ಪತ್ತೆಯಾದ ಘಟನೆ ಮಂಡ್ಯ ಜಿಲ್ಲೆಯ ಕೆಆರ್‍ಪೇಟೆ ಪಟ್ಟಣದಲ್ಲಿ ನಡೆದಿದೆ.

    ಸರಸ್ವತಿ(25) ನಾಪತ್ತೆಯಾಗಿದ್ದ ಮಹಿಳೆ. ಮೂರು ದಿನಗಳ ಹಿಂದೆ ಕೆ.ಆರ್.ಪೇಟೆ ಪಟ್ಟಣದ ದೇವೀರಮ್ಮಣ್ಣಿ ಕೆರೆಗೆ ಬಟ್ಟೆ ತೊಳೆಯಲು ಹೋಗಿದ್ದರು. ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕೆ ವ್ಯಕ್ತವಾಗಿತ್ತು. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸತತವಾಗಿ ಎರಡು ದಿನಗಳ ಕಾಲ ಶವಕ್ಕಾಗಿ ಶೋಧ ನಡೆಸಿದ್ದರು.

    ಆದ್ರೆ ಗೃಹಿಣಿ ಬೆಂಗಳೂರಿನ ಶಿವಾಜಿನಗರದಲ್ಲಿನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ. ನಂತರ ಬಂಧುಗಳು ಗೃಹಿಣಿಯನ್ನು ಕೆ.ಆರ್.ಪೇಟೆಗೆ ಕರೆ ತಂದಿದ್ದಾರೆ. ಸತ್ತಿದ್ದಾರೆಂದು ತಿಳಿದಿದ್ದ ಮಹಿಳೆ ಬದುಕಿರುವುದು ಗೊತ್ತಾಗಿ ಮನೆಯವರಿಗೆ ಆತಂಕದ ದೂರಾಗಿದೆ.

    ಗೃಹಿಣಿ ಬದುಕಿದ್ದಾರೆ ಎಂದು ದಂಪತಿ ಮತ್ತು ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಘಟನೆಗೆ ಕಾರಣ ತಿಳಿದುಬಂದಿಲ್ಲ.