Tag: lake

  • ವಿಡಿಯೋ: ಮೂರು ವರ್ಷಗಳ ಬಳಿಕ ಕೋಡಿ ಹರಿದ ಮದಗದ ಕೆರೆ

    ವಿಡಿಯೋ: ಮೂರು ವರ್ಷಗಳ ಬಳಿಕ ಕೋಡಿ ಹರಿದ ಮದಗದ ಕೆರೆ

    ಚಿಕ್ಕಮಗಳೂರು: ಅಣ್ಣೇನಹಳ್ಳಿ ಅಣ್ಣೆಗೌಡ, ಕೋಡಿಹಳ್ಳಿ ಕೋಡಿಗೌಡ, ಮಲ್ಲೇನಹಳ್ಳಿ ಮಲ್ಲೇಗೌಡ ಎಂಟು ದಿಕ್ಕಲ್ಲಿ 22 ಕಡೆ ಗಂಗಮ್ಮನ ಕೂರಿಸಿ, ಆರು ಸಾವಿರ ಜನರು, ಮೂರು ಸಾವಿರ ಕುಡುಗೋಲಿನಿಂದ ನಿರ್ಮಿಸಿದ್ದ ಕೆರೆ ಮೂರು ವರ್ಷಗಳ ಬಳಿಕ ಕೋಡಿ ಬಿದ್ದಿರೋದ್ರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಜಾನಪದದ ಬಾಯಲ್ಲಿ ಅದ್ಭುತ ಪರಿಕಲ್ಪನೆಯೊಂದಿಗೆ ಮೂಡಿದೆ ಗೀತೆಗೆ ಸಾಥ್ ನೀಡಿದ್ದ ಕೆರೆಯ ಕಾಫಿನಾಡಿನ ಮದಗದ ಕೆರೆ. ಈ ಕೆರೆಗೆ ಬರೋದೇ ಮಾಯದಂತ ಮಳೆ. ಆದರೆ ಈ ಬಾರಿ ಚಿಕ್ಕಮಗಳೂರಿನ ಗಿರಿ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಜುಲೈ ತಿಂಗಳಿನಲ್ಲೇ ಈ ಕೆರೆ ಮೈದುಂಬಿ ಹರಿಯುತ್ತಿದೆ. ಶಾಶ್ವತ ಬರಗಾಲಕ್ಕೆ ತುತ್ತಾದ ಕಡೂರು ತಾಲೂಕಿಗೆ ಈ ಕೆರೆ ತುಂಬಿರೋದು ಮರಳುಗಾಡಲ್ಲಿ ಓಯಾಸೀಸ್ ಸಿಕ್ಕಂತಾಗಿದೆ.

    ಸುಮಾರು 2,036ಕ್ಕೂ ಅಧಿಕ ಹೆಕ್ಟೇರ್ ನಲ್ಲಿರೋ ಈ ಕೆರೆ ಮೂರು ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಿದೆ. ಬರಪೀಡಿತ ತಾಲೂಕಿನ ಈ ಕೆರೆ ಕೋಡಿ ಬಿದ್ದಿರೋದ್ರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಸುಮಧುರ ಕ್ಷಣವನ್ನು ಕಣ್ತುಂಬಿಕೊಂಡು ಸಂಭ್ರಮಿಸ್ತಿದ್ದಾರೆ. ನೋಡೋದಕ್ಕೆ ಸಮುದ್ರದಂತಿರೋ ಈ ಕೆರೆಯ ಬಳಿ ಸೆಲ್ಫಿ ಕ್ರೇಜಿನ ಕಿಂಗ್, ಕ್ವೀನ್‍ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ ಹಾಲ್ನೋರೆಯಂತೆ ಧುಮ್ಮಿಕ್ತಿರೋ ಈ ಕೆರೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರೋದಂತು ಸತ್ಯ.

    ಈ ಮಾಯದ ಕೆರೆಯ ಸುತ್ತ ಪ್ರಕೃತಿ ಸೌಂದರ್ಯವೇ ಮನೆ ಮಾಡಿದೆ. ಮುಗಿಲೆತ್ತರದ ಬೆಟ್ಟಗುಡ್ಡಗಳು. ಕಣ್ಣಾಯಿಸಿದಲ್ಲೆಲ್ಲಾ ಹಸಿರ ವನರಾಶಿ. ತಣ್ಣಗೆ ಬೀಸೋ ಸ್ವಚ್ಛ ಗಾಳಿ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಮಲೆನಾಡಲ್ಲಿ ದಶಕದ ಬಳಿಕ ವರುಣನ ಆರ್ಭಟ ಜೋರಾಗಿದ್ದು, ಎರಡು ವರ್ಷಗಳ ಬಳಿಕ ಜುಲೈ ತಿಂಗಳಿನಲ್ಲೇ ಕೋಡಿ ಬಿದ್ದಿರೋದು ರೈತರಿಗಂತು ಹಾಲು ಕುಡಿದಷ್ಟು ಸಂತೋಷವಾಗಿದೆ.

    ಈ ಬಾರಿ ಮಾತ್ರ ಈ ಕೆರೆಗೆ ಮಯಾದಂತ ಮಳೆ ಬಂದಿಲ್ಲ. ಬದಲಾಗಿ ಕಾಫಿನಾಡಿನ ಗಿರಿ ಭಾಗದ ಮಳೆಯೇ ಬಂದಿರೋದು. ಈ ಕೆರೆ ತುಂಬೋದ್ರಿಂದ ಕಡೂರಿನ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗೋದರ ಜೊತೆ ಜನ-ಜಾನುವಾರುಗಳಿಗೆ ಕುಡಿಯೋ ನೀರು ಸಿಕ್ಕಿದೆ. ಅಲ್ಲದೇ ಬಯಲುಸೀಮೆಯ 25ಕ್ಕೂ ಹೆಚ್ಚು ಕೆರೆಗಳಿಗೆ ಈ ಕೆರೆ ಸಂಪರ್ಕ ಸೇತುವೆಯಾಗಿರೋದ್ರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

    ಒಟ್ಟಾರೆ ಬರದಿಂದ ಬಸವಳಿದಿದ್ದ ಕಡೂರಿನ ರೈತರಿಗೆ ಮದಗದ ಕೆರೆ ತುಂಬಿರೋದು ಜೀವಕಳೆ ತಂದಂತಾಗಿದೆ. ಆದ್ದರಿಂದ ರೈತರ ಮೊಗದಲ್ಲೂ ಮಂದಹಾಸ ಮೂಡಿದೆ. ಆದರೆ ಮತ್ತೊಂದೆಡೆ ಕೆರೆಯನ್ನ ಮತ್ತಷ್ಟು ಅಭಿವೃದ್ಧಿಪಡಿಸಿ ಬೇಸಿಗೆಯಲ್ಲೂ ಕೆರೆಗೆ ಮಲೆನಾಡಿನಲ್ಲಿ ಪೋಲಾಗುವ ನೀರನ್ನು ಹರಿಸಬೇಕೆಂದು ರೈತರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.

  • ವಿಡಿಯೋ: ಸುಂದರ ನಿಸರ್ಗದ ಮಡಿಲಲ್ಲಿ ಹಾಲಿನ ನೊರೆಯಂತೆ ಧುಮ್ಮಿಕ್ಕಿ ಬೀಳುತ್ತಿರೋ ಮದಗಮಾಸೂರು ಫಾಲ್ಸ್!

    ವಿಡಿಯೋ: ಸುಂದರ ನಿಸರ್ಗದ ಮಡಿಲಲ್ಲಿ ಹಾಲಿನ ನೊರೆಯಂತೆ ಧುಮ್ಮಿಕ್ಕಿ ಬೀಳುತ್ತಿರೋ ಮದಗಮಾಸೂರು ಫಾಲ್ಸ್!

    ಹಾವೇರಿ: ಕೆಲವು ತಿಂಗಳ ಹಿಂದೆ ಮದಗಮಾಸೂರು ಕೆರೆಯಲ್ಲಿ ಹನಿ ನೀರು ಇರಲಿಲ್ಲ. ಕೆರೆಯ ನೀರಿನಿಂದ ಕೋಡಿ ಬಿದ್ದು ಎರಡು ಜಲಪಾತಗಳು ಸೃಷ್ಟಿಯಾಗಿವೆ. ಮಿನಿ ಜೋಗ್ ಫಾಲ್ಸ್ ಎನ್ನುವಂತೆ ಸುಂದರ ನಿಸರ್ಗದ ಮಡಿಲಲ್ಲಿ ಹಾಲಿನ ನೊರೆಯಂತೆ ಧುಮ್ಮಿಕ್ಕಿ ಬೀಳುತ್ತಿರೋ ಫಾಲ್ಸ್ ನೋಡಲು ಜನರ ದಂಡೇ ಇಲ್ಲಿಗೆ ಬರುತ್ತಿದೆ.

    ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮದಗಮಾಸೂರು ಕೆರೆಯ ಬಳಿ ಎರಡು ಜಲಪಾತಗಳು ಸೃಷ್ಟಿಯಾಗಿವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಎದುರಾಗಿದ್ದ ಬರಗಾಲದಿಂದ ಕೆರೆ ಸಂಪೂರ್ಣ ಬತ್ತಿ ಬರಿದಾಗಿ ಹೋಗಿತ್ತು. ಮತ್ತೊಂದು ಕಡೆ ಜನರು ಕೆರೆಯನ್ನು ಒತ್ತುವರಿ ಮಾಡಿಕೊಂಡು ಕೆರೆಯ ಸೌಂದರ್ಯವನ್ನೇ ಹಾಳು ಮಾಡಿದ್ದರು.

    ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಐತಿಹಾಸಿಕ ಕೆರೆಗೆ ಈಗ ಮಾಯದಂತಾ ಮಳೆ ನೀರು ತಂದಿದೆ. ಕೆರೆ ತುಂಬಿ ಹರಿಯುತ್ತಿರುವಾಗ ಕೋಡಿ ಬಿದ್ದು ಎರಡು ಜಲಪಾತಗಳು ಸೃಷ್ಟಿಯಾಗಿವೆ. ಜಲಪಾತಗಳನ್ನು ನೋಡಲು ಜನರು ತಂಡೋಪ ತಂಡವಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಹಾಲಿನ ನೊರೆಯಂತೆ ಧುಮ್ಮಿಕ್ಕಿ ಬೀಳುತ್ತಿರೋ ಜಲಪಾತವನ್ನ ನೋಡಿ ಕಣ್ಣು ತುಂಬಿಕೊಳ್ಳುತ್ತಿದ್ದಾರೆ.

    ಮದಗಮಾಸೂರು ಕೆರೆಗೆ ಹಲವಾರು ವರ್ಷಗಳ ಇತಿಹಾಸವಿದೆ. ಈ ಕೆರೆಯ ಕುರಿತು ಜಾನಪದ ಗೀತೆಗಳು ಮತ್ತು ನಾಟಕಗಳು ಸಹ ಹೊರಬಂದಿದೆ. ಈ ಕೆರೆ ಹಿರೇಕೆರೂರು ತಾಲೂಕಿನ ನೂರಾರು ಎಕರೆ ಪ್ರದೇಶದ ರೈತರಿಗೆ ಆಸರೆಯಾಗಿದೆ. ಕೆಲವು ದಿನಗಳಿಂದ ಸುರಿದ ಮಾಯದಂತ ಮಳೆಗೆ ಮದಗದ ಕೆರೆಗೆ ನೀರು ಬಂದಿದೆ. ಇದರಿಂದ ಕೆರೆ ನೀರಿನಿಂದ ತುಂಬಿ ಕಂಗೊಳಿಸ್ತಿದ್ದು ಮಿನಿ ಜೋಗ ಜಲಪಾತ ಸೃಷ್ಟಿಯಾಗಿದೆ.

    ಕೆರೆಯ ನೀರಿನಿಂದ ಕುಮುದ್ವತಿಗೆ ಹರಿದು ಹೋಗುವಲ್ಲಿ ಬೀಳುವ ಜಲಪಾತವನ್ನು ನೋಡಲು ಜನರ ದಂಡೇ ಇಲ್ಲಿಗೆ ಆಗಮಿಸ್ತಿದೆ. ಸುಂದರ ನಿಸರ್ಗದ ಮಡಿಲಲ್ಲಿ ಹಾಲಿನ ನೊರೆಯಂತೆ ಬೀಳ್ತಿರೋ ಜಲಪಾತವನ್ನು ನೋಡಿವುದೇ ಕಣ್ಣಿಗೆ ಹಬ್ಬ ಎಂಬಂತಿದೆ. ಮದಗಮಾಸೂರು ಕೆರೆಗೆ ಸರ್ಕಾರ ಮತ್ತು ಪ್ರವಾದೋದ್ಯಮ ಇಲಾಖೆ ಕಾಯಕಲ್ಪ ನೀಡಬೇಕಿದೆ.

    ಕೆರೆಗೆ ನೀರಿನಲ್ಲದ ವೇಳೆ ಊರ ಗೌಡ ತನ್ನ ಸೊಸೆಯನ್ನೆ ಕೆರೆಗೆ ಹಾರವಾಗಿ ನೀಡಿದ್ದರಿಂದ ಕೆರೆಗೆ ನೀರು ಬಂದಿತ್ತು ಅನ್ನೋದು ಇತಿಹಾಸ. ಕೆಂಚಮ್ಮನ ಕೆರೆ ಈಗ ಪ್ರವಾಸಿಗರ ಕಣ್ಣಿಗೆ ಹಬ್ಬ. ಮನಸ್ಸಿಗೆ ಆನಂದವನ್ನುಂಟು ಮಾಡುತ್ತಿದೆ. ಕುಟುಂಬ ಸಮೇತ ಜನರು ಇಲ್ಲಿಗೆ ಬಂದು ಕೆರೆಯ ಸೌಂದರ್ಯದ ಜೊತೆಗೆ ಜಲಪಾತವನ್ನು ನೋಡಿಕೊಂಡು ಹೋಗ್ತಿದ್ದಾರೆ.

  • ಪತ್ರಕರ್ತೆಯ ಸ್ಟೈಲ್ ನಲ್ಲೇ ತನ್ನೂರಿನ ಸಮಸ್ಯೆ ಬಿಚ್ಚಿಟ್ಟ ಬಾಲಕಿ!

    ಪತ್ರಕರ್ತೆಯ ಸ್ಟೈಲ್ ನಲ್ಲೇ ತನ್ನೂರಿನ ಸಮಸ್ಯೆ ಬಿಚ್ಚಿಟ್ಟ ಬಾಲಕಿ!

    ಬಳ್ಳಾರಿ: ಮೊನ್ನೆಯಷ್ಟೇ ಕೊಡಗಿನ ಬಾಲಕನೊಬ್ಬ ತನ್ನೂರಿನ ಸಮಸ್ಯೆಗಳ ಬಗ್ಗೆ ಮಾತನಾಡಿ ಸಿಎಂ ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದನು. ಇದೀಗ ಅದೇ ರೀತಿಯಾಗಿ ಮತ್ತೊಬ್ಬ ಬಾಲಕಿ ತನ್ನೂರಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪತ್ರಕರ್ತೆಯ ರೀತಿಯಲ್ಲೇ ವರದಿ ಮಾಡಿದ್ದಾಳೆ.

    ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತಳಕಲ್ ಗ್ರಾಮದ 7ನೇ ತರಗತಿಯಲ್ಲಿ ಓದುತ್ತಿರುವ ರೋಜಾ ಎಂಬ ಬಾಲಕಿ ತನ್ನೂರಿನ ಕೆರೆಯ ಸಮಸ್ಯೆ ಬಗ್ಗೆ ವಿವರಿಸಿದ್ದಾಳೆ. ಈ ಭಾಗದ ರೈತರ ಪ್ರಮುಖ ಜೀವನಾಧಾರವಾದ ಕೆರೆಗೆ ನೀರು ತುಂಬಿಸುವ ಯೋಜನೆಗೆ ಪೂಜೆ ಮಾಡಿ ಎರಡು ವರ್ಷವಾಗಿದೆ. ಆದರೆ ಇದುವರೆಗೂ ಕೆರೆಗೆ ಹನಿ ನೀರುಬ ಸಹ ಬಂದಿಲ್ಲ ಎಂದು ಹೇಳಿದ್ದಾಳೆ.

    ಶಾಸಕ ಪರಮೇಶ್ವರ ನಾಯ್ಕ್ ಭರವಸೆ ನೀಡಿ ಪೂಜೆ ಮಾಡಿ ಹೋದ ಕೆರೆಗೆ ಇನ್ನೂ ನೀರು ಬಂದಿಲ್ಲ. ಅಲ್ಲದೇ ಶಿಂಗಟಾಲೂರ ಬ್ಯಾರೇಜ್ ನಿಂದ ನಿತ್ಯ 40 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದುಹೋಗುತ್ತಿದೆ. ಆ ನೀರನ್ನ ಕೆರೆ ತುಂಬಿಸುವ ಯೋಜನೆಗೆ ಬಳಸಬೇಕಾದ ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯತನ ಇದಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ಶಿಂಗಟಲೂರ ಬ್ಯಾರೇಜ್ ಬಳಿಯಿಂದ ಪೈಪ್ ಲೈನ್ ಕಾರ್ಯ ಆಳವಡಿಕೆ ಕಾರ್ಯ ನಡೆದಿದ್ದರು ಕೂಡ ಕೆರೆಗೆ ನೀರು ಹರಿದಿಲ್ಲ. ಅಲ್ಲದೇ ಕೆರೆಯ ನಿರ್ವಹಣೆ ಇಲ್ಲದೇ ಮುಳ್ಳುಗಂಟೆಗಳೇ ಹರಡಿಕೊಂಡಿದೆ ಎಂದು ಮಾಹಿತಿ ನೀಡಿದ್ದಾಳೆ.

  • ಕೆಸಿ ವ್ಯಾಲಿ ಮೂಲಕ ಕೋಲಾರಕ್ಕೆ ಬೆಂಗ್ಳೂರಿನ ನೊರೆ ನೀರು!

    ಕೆಸಿ ವ್ಯಾಲಿ ಮೂಲಕ ಕೋಲಾರಕ್ಕೆ ಬೆಂಗ್ಳೂರಿನ ನೊರೆ ನೀರು!

    ಕೋಲಾರ: ಬರದ ನಾಡಿಗೆ ಕೋರಮಂಗಲ -ಚಲ್ಲಘಟ್ಟ ಕಣಿವೆ(ಕೆಸಿ ವ್ಯಾಲಿ) ಮೂಲಕ ಜೂನ್ ತಿಂಗಳಿನಲ್ಲಿ ನೀರು ಹರಿದು ಬಂದಾಗ ರೈತರು ಸಂಭ್ರಮಿಸಿದ್ದರು. ಆದರೆ ಈ ಸಂಭ್ರಮ ಒಂದೇ ತಿಂಗಳಿನಲ್ಲಿ ಕಮರಿ ಹೋಗಿದ್ದು ಬಂದ ಬೆಳ್ಳಂದೂರು-ವರ್ತೂರು ಕೆರೆಯಲ್ಲಿ ಸೃಷ್ಟಿಯಾಗಿದ್ದ ನೊರೆ ಈಗ ಲಕ್ಷ್ಮೀಸಾಗರ ಕೆರೆಯಲ್ಲೂ ಕಾಣಿಸಿದೆ.

    ಕೋಲಾರ ತಾಲೂಕು ಲಕ್ಷ್ಮೀಸಾಗರ ಕೆರೆ ಹಾಗೂ ಸುತ್ತಮುತ್ತಲ ಗಾಳಿಯಲ್ಲಿ ನೊರೆ ಹಾರಾಡುತ್ತಿದೆ. ಬೆಂಗಳೂರಿನ ತ್ಯಾಜ್ಯ ನೀರನ್ನು ಎರಡು ಹಂತದಲ್ಲಿ ಸಂಸ್ಕರಣ ಮಾಡದೇ ಹರಿಸದ ಕಾರಣ ನೊರೆ ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

    ಕೋಲಾರಕ್ಕೆ ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ಹರಿಸಲಾಗುತ್ತಿರುವ ಮಾರಕ ನೊರೆ ಮಿಶ್ರಿತ ನೀರನ್ನು ಅಧಿಕಾರಿಗಳು ತಕ್ಷಣವೇ ನಿಲ್ಲಿಸಿದ್ದಾರೆ. ಸದ್ಯ ಮಲಿನವಾದ ನೊರೆ ನೀರನ್ನು ಹರಿಸುತ್ತಿರುವ ಪರಿಣಾಮ ಕೋಲಾರ ಜಿಲ್ಲೆಯ ಅಂತರ್ಜಲ ಹಾಗೂ ಕೆರೆಯ ನೀರು ಹಾಳಾಗುವ ಆತಂಕ ಎದುರಾಗಿದೆ.

    ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದು, ಈ ಕೆಸಿ ವ್ಯಾಲಿ ತ್ಯಾಜ್ಯ ನೀರು ಬೇಡವೇ ಬೇಡ. ಈ ನೀರಿನಿಂದ ಕೆರೆಯ ಜಲಚರಗಳು ಹಾಗೂ ಪ್ರಾಣಿಗಳು ಸಾಯುವ ಆತಂಕ ಸೃಷ್ಟಿಯಾಗಿದೆ. ನಮಗೆ ಯಾವುದಾದರೂ ನದಿ ಮೂಲದ ನೀರನ್ನು ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ.

    1400 ಕೋಟಿ ರೂ. ವೆಚ್ಚದಲ್ಲಿ ಕೋಲಾರ ಜಿಲ್ಲೆಯ 130 ಕೆರೆಗಳನ್ನು ತುಂಬಿಸುವ ಯೋಜನೆ ಸಿಕೆ ವ್ಯಾಲಿ ಆಗಿದ್ದು, ಕಳೆದ ಒಂದುವರೆ ವರ್ಷದ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಯೋಜನೆಗೆ ಅಡಿಗಲ್ಲು ಹಾಕಿ, ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ರು. ಜೂನ್ 2 ರಂದು ಕೆಸಿ ವ್ಯಾಲಿ ಯೋಜನೆಯ ನೀರು ಲಕ್ಷ್ಮೀ ಸಾಗರ ಕೆರೆಯನ್ನು ಪ್ರವೇಶಿಸಿತ್ತು.

  • ಹೈವೇಯಲ್ಲೇ ಕೈಬೀಸಿ ಕರೆಯುತ್ತಿವೆ ವಿದೇಶಿ ಬಾನಾಡಿಗಳು

    ಹೈವೇಯಲ್ಲೇ ಕೈಬೀಸಿ ಕರೆಯುತ್ತಿವೆ ವಿದೇಶಿ ಬಾನಾಡಿಗಳು

    ಬೆಂಗಳೂರು: ಸಾಮಾನ್ಯವಾಗಿ ನಾವೆಲ್ಲ ನಾನಾ ಜಾತಿಯ ಪಕ್ಷಿ ಸಂಕುಲವನ್ನು ನೋಡಬೇಕು ಅಂದಾಕ್ಷಣ ಪ್ರವಾಸಕ್ಕೆ ತೆರಳುತ್ತೇವೆ. ಅದರಲ್ಲೂ ವಿದೇಶಿ ಪಕ್ಷಿಗಳ ಸೈಡ್ ಸೀನಿಂಗ್ ನೋಡಲು ರಂಗನತಿಟ್ಟು ಅಂತ ಥಟ್ ಅಂತ ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಬೆಂಗಳೂರಿಗೆ ಸಮೀಪವಿರುವ ಕೆರೆಯಲ್ಲೇ ಈ ಬಾನಾಡಿಗಳು ಕಲರವ ಕಂಡುಬಂದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ, ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ದಾಸನಪುರ ಕೆರೆಯಲ್ಲಿ ಬಾನಾಡಿ ಪಕ್ಷಿಗಳು ಕಂಡುಬಂದಿವೆ. ಯುರೇಷಿಯನ್ ಕೂಟ್ ಎಂಬ ಜಾತಿಗೆ ಸೇರಿರುವ ಈ ಪಕ್ಷಿಗಳು, ಯುರೋಪ್ ಹಾಗೂ ಏಷ್ಯಾ ಖಂಡದಲ್ಲಿ ಕಂಡುಬರುವ ಅಪರೂಪದ ಪಕ್ಷಿಗಳಾಗಿವೆ.

    ರಾಜಾದ್ಯಂತ ಮುಂಗಾರು ಪ್ರಾರಂಭವಾಗಿ ಉತ್ತಮ ಮಳೆಯಾಗುತ್ತಿದ್ದು, ಬಹುತೇಕ ಎಲ್ಲಾ ಜಲಾಶಯಗಳು ಮೈತುಂಬಿ ಹರಿಯುತ್ತಿವೆ. ಇತ್ತ ಯುರೋಪ್ ಹಾಗೂ ಏಷ್ಯಾ ಖಂಡದಲ್ಲಿ ಅತೀ ಹೆಚ್ಚಾಗಿ ಕಂಡು ಬರುವ ಅಪರೂಪದ ಪಕ್ಷಿಗಳ ಕಲರವ, ಕಂಡುಬರುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

    ಈ ಪಕ್ಷಿಗಳನ್ನು ಕಂಡು ಪ್ರವಾಸಿಗರಲ್ಲಿ ಸಂತಸವನ್ನ ಉಂಟು ಮಾಡುವುದರ ಜೊತೆಗೆ ತನ್ನತ್ತ ಸೆಳೆಯುವಂತೆ ಮಾಡಿವೆ. ಬಾನಾಡಿಗಳ ಹಿಂಡು ಈ ಕೆರೆಯಲ್ಲಿ ಗುಂಪು ಗುಂಪಾಗಿ ತನ್ನ ನರ್ತನದ ಮೂಲಕ, ಮೀನುಗಳನ್ನು ಹಿಡಿಯುತ್ತಿರುವ ದೃಶ್ಯಗಳು ಪಕ್ಷಿ ಪ್ರೇಮಿಗಳನ್ನ ಕೈಬೀಸಿ ಕರೆಯುತ್ತಿದೆ.

    ಕೆರೆಯ ನೀರಿನಲ್ಲಿ ಈ ಬಾನಾಡಿಗಳು ಒಂದು ಹಾಡಿಗೆ ತಾಳ ಹಾಕುವಂತೆ ಒಂದು ಕಡೆಯಿಂದ ಮತ್ತೊಂದೆಡೆಗೆ ಚಲಿಸಿ, ಅವುಗಳ ಭಾವನೆಗೆ ತಕ್ಕಂತೆ ಇರುವುದನ್ನ ನೋಡುವುದೇ ಉಲ್ಲಾಸ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಈ ಎಲ್ಲಾ ದೃಶ್ಯಗಳನ್ನ ನೋಡುವುದೇ ಚಂದ ಎಂದು ಸ್ಥಳೀಯ ಹನುಮಂತರಾಜು ಹೇಳಿದ್ದಾರೆ.

  • ನಶಿಸುತ್ತಿರುವ ಕೆರೆ ರಕ್ಷಿಸಲು ‘ಬೆಳಕು’ ಕಾರ್ಯಕ್ರಮಕ್ಕೆ ಬಂದ ಗ್ರಾಮಸ್ಥರು

    ನಶಿಸುತ್ತಿರುವ ಕೆರೆ ರಕ್ಷಿಸಲು ‘ಬೆಳಕು’ ಕಾರ್ಯಕ್ರಮಕ್ಕೆ ಬಂದ ಗ್ರಾಮಸ್ಥರು

    ಕೋಲಾರ: ಸರ್ಕಾರ ಕೆರೆಗಳ ಅಭಿವದ್ಧಿಗೆಂದು ನೂರಾರು ಕೋಟಿ ವ್ಯಯ ಮಾಡುತ್ತಿದೆ. ಆದರೆ ಕೆಲವು ಕೆರೆಗಳು ಮಾತ್ರ ಸರ್ಕಾರದ ನಿರ್ಲಕ್ಷ್ಯ ಮತ್ತು ಸಾರ್ವಜನಿಕರ ಒತ್ತುವರಿಯಿಂದ ನಶಿಸಿಸುತ್ತಿವೆ. ಇದಕ್ಕೆ ಸಾಕ್ಷಿ ಕೋಲಾರ ತಾಲೂಕು ಹೋಳೂರು ಗ್ರಾಮದ ಐತಿಹಾಸಿಕ ಕೆರೆ.

    ನೂರಾರು ವರ್ಷಗಳ ಇತಿಹಾಸ ಇರುವ ಈ ವಿಶಾಲವಾದ ಕೆರೆ ಬರೋಬ್ಬರಿ 350 ಎಕರೆ ವಿಸ್ತೀರ್ಣವನ್ನು ಹೊಂದಿದೆ. ರೈತರ ವ್ಯವಸಾಯಕ್ಕೆ, ಜಾನವಾರುಗಳಿಗೆ ಅನುಕೂಲವಾಗಲೆಂದು ಸರ್ಕಾರವು ಬೃಹತ್ತಾದ ಕೆರೆ ನಿರ್ಮಾಣಕ್ಕೆ 80 ವರ್ಷಗಳ ಹಿಂದೆ ಭೂಸ್ವಾಧೀನ ಪಡಿಸಿಕೊಂಡು ವಾರಸುದಾರರಿಗೆ ಪರಿಹಾರ ಮೊತ್ತವನ್ನು ನೀಡಿ ಕೆರೆ ನಿರ್ಮಾಣ ಮಾಡಲಾಗಿದೆ.

    ಗ್ರಾಮದ ದೊಡ್ಡಕೆರೆಯ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳಿಂದ ಕೋಟ್ಯಾಂತರ ರುಪಾಯಿ ಅನುದಾನವನ್ನ ಖರ್ಚು ಮಾಡಿದೆ. ಕಳೆದ 20 ವರ್ಷಗಳಿಂದಲೂ ಹೋಳೂರು ಕೆರೆಯ ಅಂಗಳದಲ್ಲಿ ಗಿಡ-ಮರಗಳನ್ನು ಸಾಮಾಜಿಕ ಅರಣ್ಯ ಇಲಾಖೆ ನೆಟ್ಟು ಪೋಷಣೆ ಮಾಡುತ್ತಿದೆ. ಕೆರೆ ಕಟ್ಟೆಯ ಪುನಶ್ಚೇತನಕ್ಕಾಗಿ ಸಣ್ಣ ನೀರಾವರಿ ಇಲಾಖೆಯು 58 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ.

    ವಿಪರ್ಯಾಸ ಅಂದರೆ ಈ ಕೆರೆಯು ಸರ್ಕಾರದ್ದು ಅನ್ನೋದಕ್ಕೆ ಸಾಮಾಜಿಕ ಅರಣ್ಯ ಇಲಾಖೆಯಲ್ಲಾಗಲೀ, ಸಣ್ಣ ನೀರಾವರಿ ಇಲಾಖೆಯಲ್ಲಾಗಲೀ, ಜಿಲ್ಲಾಡಳಿತದ ಬಳಿಯಾಗಲಿ ದಾಖಲೆ ಇಲ್ಲ. ಜಮೀನು ಕೊಟ್ಟ ರೈತರ ಹೆಸರಲ್ಲೆ ಪಹಣಿ ದಾಖಲಾತಿಗಳಿದ್ದು ಈ ಹಳೇ ದಾಖಲಾತಿಗಳಿಂದ ರೈತರು, ಪ್ರಭಾವಿಗಳು, ರಿಯಲ್ ಎಸ್ಟೇಟ್ ಉದ್ಯಮಸ್ಥರು ಕೆರೆ ಜಾಗವನ್ನ ಕಬಳಿಸುತ್ತಿದ್ದಾರೆ.

    ಜಿಲ್ಲಾಡಳಿತ ಪ್ರಭಾವಿಗಳಿಗೆ ಮಣಿದು ಕಂಡು ಕಾಣದಂತೆ ಪರೋಕ್ಷವಾಗಿ ಕೆರೆಯನ್ನು ರಿಯಲ್ ಎಸ್ಟೇಟ್ ಉದ್ಯಮಸ್ಥರ ಪಾಲಾಗಲು ಸಹಕರಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಕ್ಷರಶಃ ಬೃಹತ್ತಾದ ಕೆರೆಯು ನಶಿಸಿ ಒಂದು ಸಣ್ಣ ಕೆರೆಯಾಗಿ ಮಳೆ ನೀರು ಹರಿಯದಂತೆ ನೀರು ತುಂಬದಂತೆ ಮಾಡಲಾಗಿದೆ. ಇದರಿಂದಾಗಿ ಇಲ್ಲಿನ ಗ್ರಾಮಸ್ಥರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಅನಾನುಕೂಲ ಹೆಚ್ಚಾಗಿದೆ.

    ನೂರಾರು ವರ್ಷಗಳಿದಂಲೂ ಅಸ್ತಿತ್ವದಲ್ಲಿರುವ ಕೆರೆಗೆ ಸೂಕ್ತ ದಾಖಲೆಗಳನ್ನ ಒದಗಿಸಲು ವಿಫಲವಾಗಿರುವ ಕಂದಾಯ ಇಲಾಖೆಯ ಗೊಂದಲ ನಿವಾರಣೆ ಮಾಡಿ, ಅಕ್ರಮ ಒತ್ತುವರಿ ತೆರವುಗೊಳಿಸಿ ಕೆರೆ ಸಂರಕ್ಷಣೆ ಮಾಡಿ ಎಂದು ಗ್ರಾಮಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

    https://www.youtube.com/watch?v=h1WR3OenCLk

  • ಇಂದಿರಾ ಕ್ಯಾಂಟೀನ್ ಮೇಲಿರುವ ಆಸಕ್ತಿ ಬೆಳ್ಳಂದೂರು ಕೆರೆ ಮೇಲಿಲ್ಲ ಯಾಕೆ: ಸರ್ಕಾರಕ್ಕೆ ಹೈಕೋರ್ಟ್ ಚಾಟಿ

    ಇಂದಿರಾ ಕ್ಯಾಂಟೀನ್ ಮೇಲಿರುವ ಆಸಕ್ತಿ ಬೆಳ್ಳಂದೂರು ಕೆರೆ ಮೇಲಿಲ್ಲ ಯಾಕೆ: ಸರ್ಕಾರಕ್ಕೆ ಹೈಕೋರ್ಟ್ ಚಾಟಿ

    ಬೆಂಗಳೂರು: ನಗರದ ಬೆಳ್ಳಂದೂರು ಕೆರೆ ಸ್ವಚ್ಛತೆಯ ಕುರಿತು ಹೈಕೋರ್ಟ್ ಸರ್ಕಾರವನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿದೆ.

    ಬೆಳ್ಳಂದೂರು ಕೆರೆ ತ್ಯಾಜ್ಯ ನಿರ್ವಹಣೆಯ ಕುರಿತು ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿಯವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಇಂದು ಹೈಕೋರ್ಟ್ ನ ವಿಭಾಗೀಯ ಪೀಠದಲ್ಲಿ ನಡೆಯಿತು. ವಿಚಾರಣೆ ವೇಳೆ ನಗರಾಭಿವೃದ್ಧಿ ಇಲಾಖೆಯ ಮುಖ್ಯ ಆಯುಕ್ತರಾದ ಮಹೇಂದ್ರ ಕುಮಾರ್ ಜೈನ್ ಹಾಗೂ ಬಿಡಿಎ ಆಯುಕ್ತರಾದ ರಾಕೇಶ್ ಸಿಂಗ್ ಹಾಜರಾಗಿದ್ದರು.

    ನ್ಯಾಯಮೂರ್ತಿಗಳಾದ ಎಚ್.ಜಿ.ರಮೇಶ್, ಬೆಳ್ಳಂದೂರು ಕೆರೆ ತ್ಯಾಜ್ಯ ನಿರ್ವಹಣೆ ಏನು ಕ್ರಮ ತೆಗೆದುಕೊಂಡಿದ್ದೀರಾ? ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ತಜ್ಞರ ನೇಮಕಕ್ಕೆ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದೀರಿ, ಸರ್ಕಾರಕ್ಕೆ ಇಂದಿರಾ ಕ್ಯಾಂಟೀನ್ ಮೇಲಿರುವ ಕಾಳಜಿ ಕರೆಗಳ ಮೇಲಿಲ್ಲವೇ? ಕೆರೆ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆಗೆ ಜಾಹೀರಾತು ನೀಡಿದ್ದೀರಾ ಎಂದು ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಈ ಪ್ರಶ್ನೆಗೆ ಮಹೇಂದ್ರ ಕುಮಾರ್ ಜೈನ್ ಬೆಳ್ಳಂದೂರು ಕೆರೆ ಸ್ವಚ್ಛತೆಗಾಗಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಐಐಟಿಯ ತಜ್ಞರು, ಪ್ರೊಫೆಸರ್ ಗಳು ಸೇರಿದ್ದಾರೆ. ಸಾಕಷ್ಟು ಒತ್ತುವರಿಯನ್ನು ತೆರವುಗಳಿಸಲಾಗಿದ್ದು ತ್ಯಾಜ್ಯ ನೀರನ್ನು ತಡೆಯಲಾಗಿದೆ. ಕೆರೆಗೆ ಕಾಂಪೌಂಡ್ ಸಹ ಹಾಕಿ, ತ್ಯಾಜ್ಯ ಹಾಕದಂತೆ ತಡೆಯಲು ಗಾರ್ಡ್‍ಗಳನ್ನು ಸಹ ನೇಮಿಸಲಾಗಿದೆ. 2020 ರ ವೇಳೆ ಬೆಳ್ಳಂದೂರು ಕೆರೆ ಸಂಪೂರ್ಣವಾಗಿ ಸರಿಹೋಗುತ್ತದೆ ಎಂದು ಉತ್ತರಿಸಿದರು.

    ಈ ವೇಳೆ ಮಧ್ಯಪ್ರವೇಶಿಸಿದ ಹೈಕೋರ್ಟ್, ಬೆಂಗಳೂರು ಸಿಲಿಕಾನ್ ಸಿಟಿ ಆಫ್ ದಿ ವಲ್ರ್ಡ್ ಹಾಗೂ ಐಐಟಿ ಸೇರಿದಂತೆ ಅನೇಕ ತಂತ್ರಜ್ಞಾನ ಸಂಶೋಧನೆ ಕೇಂದ್ರಗಳಿವೆ. ಇವುಗಳನ್ನು ನೀವು ಬಳಸಿಕೊಂಡಿಲ್ಲ ಯಾಕೆ? ಬೆಂಗಳೂರು ಗ್ಲೋಬಲ್ ಲೀಡರ್ ಆಗಿದ್ದು, ಕೆಟ್ಟ ಸುದ್ದಿಗಳಿಗೆ ಸುದ್ದಿಯಾಗಿದೆ. ಕಸ ವಿಲೇವಾರಿ, ಕೆರೆಗಳಲ್ಲಿ ಬೆಂಕಿಯಿಂದ ವಿಶ್ವದೆಲ್ಲೆಡೆ ಸುದ್ದಿಯಾಗಿದೆ. ನಾರ್ವೆಯಲ್ಲಿ ಕಸದಿಂದ ವಿದ್ಯುತ್ ಉತ್ಪಾದನೆ, ಸ್ಯಾನಿಟರಿ ನೀರನ್ನು ಶುದ್ಧ ಮಾಡಿ ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತದೆ. ಆದರೆ ನಮ್ಮ ಬೆಂಗಳೂರಿನಲ್ಲಿ ಕಾಲುವೆಗಳ ಬಳಿ ನಿಲ್ಲಲು ಸಾಧ್ಯವಿಲ್ಲ, ಸರ್ಕಾರ ಕಸದಿಂದ ವಿದ್ಯುತ್ ಉತ್ಪಾದನೆ ಮಾಡಲು ಚಿಂತಿಸಿದೆಯೇ ಎಂದು ಹೈಕೋರ್ಟ್ ಸರ್ಕಾರವನ್ನು ಪುನಃ ಪ್ರಶ್ನಿಸಿತು.

    ಇದಕ್ಕೆ ಉತ್ತರಿಸಿದ ಆಯುಕ್ತರು ನಗರದ ನಾಲ್ಕು ಭಾಗಳಲ್ಲಿ ವಿದ್ಯುತ್ ತಯಾರಿಸಲು ಮುಂದಾಗಿದ್ದೇವೆ, ಬೆಳ್ಳಂದೂರು ಕೆರೆ ಶುದ್ದಿಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವುದಾಗಿ ಮಾಹಿತಿ ನೀಡಿದರು.

    ವಾದವನ್ನು ಆಲಿಸಿದ ಹೈಕೋರ್ಟ್ ಬೆಳ್ಳಂದೂರು ಕೆರೆಯ ಸ್ವಚ್ಛತೆಯ ಕುರಿತು ನಿರ್ದೇಶನಗಳನ್ನು ಸರ್ಕಾರಕ್ಕೆ ನೀಡಿತು. ಇದರಲ್ಲಿ ಮೊದಲು ಸಮಿತಿ ಸಭೆಯಲ್ಲಿ ತಜ್ಞರ ಸಲಹೆ ಸೂಚನೆಗಳನ್ನು ಪರಿಗಣಿಸಿ ಕ್ರಿಯಾಯೋಜನೆ ಸಿದ್ದಪಡಿಸಬೇಕು, ಸಮನ್ವತೆಯಿಂದ ಸಮಯ ವ್ಯರ್ಥ ಮಾಡದಂತೆ ಕೆಲಸ ಮುಂದುವರಿಸಿಕೊಂಡು ಹೋಗಬೇಕು. ಕೆರೆ ಸ್ವಚ್ಛತೆಗೆ ಗುತ್ತಿಗೆ ನೀಡಬೇಕು, ಅನಗತ್ಯವಾಗಿ ಹಣ ಖರ್ಚಾಗದಂತೆ ನಿಗಾ ವಹಿಸಬೇಕು. ಮುಂದಿನ ವಿಚಾರಣೆ ದಿನದೊಳಗೆ ಕಾಮಗಾರಿ ಪ್ರಗತಿಯ ವರದಿಯನ್ನು ಸಲ್ಲಿಸಬೇಕು ಎಂದು ಆದೇಶಿಸಿ ಸೆಪ್ಟೆಂಬರ್ 18ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಚಿಕ್ಕಬಳ್ಳಾಪುರ ತಲಕಾಯಲಬೆಟ್ಟದ ಕೆರೆಗೆ ಶಾಶ್ವತ ಪರಿಹಾರದ ಭರವಸೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಚಿಕ್ಕಬಳ್ಳಾಪುರ ತಲಕಾಯಲಬೆಟ್ಟದ ಕೆರೆಗೆ ಶಾಶ್ವತ ಪರಿಹಾರದ ಭರವಸೆ

    ಚಿಕ್ಕಬಳ್ಳಾಪುರ: ರಸ್ತೆಯನ್ನೇ ನುಂಗಿದ್ದ ಕೆರೆಗೆ ಶಾಶ್ವತ ಪರಿಹಾರ ಕೊಡುವ ಭರವಸೆಯನ್ನು ಇಲ್ಲಿನ ಜಿಲ್ಲಾಪಂಚಾಯತ್ ನೀಡಿದೆ.

    ರಸ್ತೆಯನ್ನೇ ನುಂಗಿದ್ದ ಸಾವಿನಕೆರೆ ಶಿರ್ಷಿಕೆಯಡಿ ಇತ್ತೀಚೆಗೆ ನಿಮ್ಮ ಪಬ್ಲಿಕ್ ಟಿವಿ ತಲಕಾಯಲಬೆಟ್ಟದ ಕೆರೆ ವರದಿಯನ್ನ ಬಿತ್ತರ ಮಾಡಿತ್ತು. ವರದಿಗೆ ಸ್ಪಂದಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮಂಜುನಾಥ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ತಾತ್ಕಾಲಿಕ ತೆಪ್ಪ ಹಾಗೂ ಸೇತುವೆ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಕೊಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಿಂದ 11 ಮೈಲಿ ಹೋಗುವ ಮಾರ್ಗದ ರಸ್ತೆಯನ್ನೇ ಈ ಕೆರೆ ನುಂಗಿ ಹಾಕಿದೆ. ಇದ್ರಿಂದ ಬುಡಗವಾರಹಳ್ಳಿ, ದಾಸರಹಳ್ಳಿ, ಮರಳಪ್ಪನಹಳ್ಳಿ ಹಾಗೂ ತಲಕಾಯಲಬೆಟ್ಟದ ಗ್ರಾಮಸ್ಥರು ಕೆರೆ ದಾಟಿ ದಡ ಸೇರೋಕೆ ಸರ್ಕಸ್ ಮಾಡುವಂತಾಗಿತ್ತು. ಪ್ರತಿನಿತ್ಯ ಪ್ರಾಣ ಪಣಕ್ಕಿಟ್ಟು, ಗ್ರಾಮಸ್ಥರು, ವಿದ್ಯಾರ್ಥಿಗಳು ಕೆರೆ ದಾಟುವಂತಾಗಿತ್ತು. ಇನ್ನೂ ಇತ್ತೀಚೆಗೆ ತಿರುಮಳಪ್ಪ ಎಂಬವರು ಕೂಡ ದಾಟುವಾಗ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದರು. ಈ ಸಂಬಂಧ ಪಬ್ಲಿಕ್ ಟಿವಿ `ಸಾವಿನ ಕೆರೆ’ ಶಿರ್ಷಿಕೆಯಡಿ ಬುಧವಾರವಷ್ಟೇ ಸುದ್ದಿ ಪ್ರಸಾರ ಮಾಡಿತ್ತು.

    ಸುದ್ದಿಗೆ ಸ್ಪಂದಿಸಿದ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಮಂಜುನಾಥ್ ಕೆರೆ ಬಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಅಲ್ಲದೇ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳೊಂದಿಗೆ ಚರ್ಚೆ ನಡೆಸಿದ್ರು. ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡು ಸ್ಥಳದಲ್ಲೇ ಸಣ್ಣ ನೀರಾವರಿ ಇಲಾಖಾಧಿಕಾರಿಗಳಿಗೆ ಕರೆ ಮಾಡಿ ತಾತ್ಕಾಲಿಕ ತೆಪ್ಪದ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ರು.

    ಕೆರೆಯಲ್ಲಿ ಸೇತುವೆ ನಿರ್ಮಾಣ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸುವ ಭರವಸೆಯನ್ನ ಗ್ರಾಮಸ್ಥರಿಗೆ ನೀಡಿದ್ರು. ಹೀಗಾಗಿ ಈ ಬಗ್ಗೆ ಸುದ್ದಿ ಪ್ರಸಾರ ಮಾಡಿ ಜಿಲ್ಲಾ ಪಂಚಾಯತಿ ಗಮನ ಸೆಳೆದ ಪಬ್ಲಿಕ್ ಟಿವಿ ಗೆ ಗ್ರಾಮಸ್ಥರು ಧನ್ಯವಾದಗಳನ್ನ ಅರ್ಪಿಸಿದ್ರು. ಒಟ್ಟಿನಲ್ಲಿ ಪ್ರಾಣ ಪಣಕ್ಕಿಟ್ಟು ಕೆರೆ ದಾಟಿ ದಡ ಸೇರ್ತಿರೋ ಜನರಿಗೆ ಸದ್ಯ ತಾತ್ಕಲಿಕ ತೆಪ್ಪ ಸಿಗಲಿದ್ದು, ಸ್ವಲ್ಪ ರಿಲೀಫ್ ಸಿಗಲಿದೆ.

  • ನಾಲ್ಕು ವರ್ಷಗಳ ಬಳಿಕ ಕೋಡಿ ಬಿದ್ದ ಐತಿಹಾಸಿಕ ಹಿರೇಕೊಳಲೆ ಕೆರೆ

    ನಾಲ್ಕು ವರ್ಷಗಳ ಬಳಿಕ ಕೋಡಿ ಬಿದ್ದ ಐತಿಹಾಸಿಕ ಹಿರೇಕೊಳಲೆ ಕೆರೆ

    ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕೆಲವು ದಿನಗಳಿಂದ ವರುಣ ದೇವ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಪರಿಣಾಮ ಐತಿಹಾಸಿಕ ಹಿರೇಕೊಳಲೆ ಕೆರೆಯಲ್ಲಿ ಕೋಡಿ ಬಿದ್ದಿದೆ.

    ಗಿರಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆ ಕೆರೆಯಲ್ಲಿ ನಾಲ್ಕು ವರ್ಷಗಳ ಬಳಿಕ ಕೋಡಿ ಬಿದ್ದಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಚಿಕ್ಕಮಗಳೂರು ನಗರಕ್ಕೆ ಕುಡಿಯುವ ನೀರನ್ನ ಪೂರೈಸುವ ಕೆರೆಯಾಗಿದ್ದು ಈ ಕೆರೆಯಲ್ಲಿ ಅನೇಕ ಸಿನಿಮಾಗಳನ್ನೂ ಚಿತ್ರಿಸಲಾಗಿದೆ.

    ಏಪ್ರಿಲ್ ನಲ್ಲಿ ಹಿರೇಕೊಳಲೆ ಕೆರೆಯಲ್ಲಿ ಸಂಗ್ರಹಗೊಂಡಿದ್ದ ನೀರು

    ನಾಲ್ಕು ವರ್ಷಗಳ ಬಳಿಕ ಕೋಡಿ ಬಿದ್ದಿರುವುದರಿಂದ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ಕೊಡುತ್ತಿದ್ದಾರೆ. ಈ ಕೆರೆ ಚಿಕ್ಕಮಗಳೂರಿನಿಂದ ಎಂಟು ಕಿ.ಮೀ.ದೂರದಲ್ಲಿ. ಅಷ್ಟೇ ಅಲ್ಲದೇ ಭಾರೀ ಮಳೆಯಿಂದ ಕಾಫಿನಾಡಿನ ಪಂಚನದಿಗಳು ಮೈದುಂಬಿ ಹರಿಯುತ್ತಿವೆ.

    ಈಗ ಹಿರೇಕೊಳಲೆ ಕೆರೆಯಲ್ಲಿ ಸಂಗ್ರಹಗೊಂಡಿರುವ ನೀರು

    ತುಂಗಾ-ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೆ, ಶೃಂಗೇರಿಯ ಘಟ್ಟ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆರೆ ಹಾವಳಿ ಭೀತಿ ಎದುರಾಗಿದೆ. ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಮುಂಜಾಗೃತ ಕ್ರಮವಾಗಿ ಮಲೆನಾಡು ಭಾಗದ ನಾಲ್ಕು ತಾಲೂಕುಗಳಾದ ಎನ್.ಆರ್.ಪುರ, ಮೂಡಿಗೆರೆ, ಶೃಂಗೇರಿ ಹಾಗೂ ಕೊಪ್ಪ ತಾಲೂಕಿನ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ.

  • ಸ್ಕೂಲ್ ಬ್ಯಾಗಿನಲ್ಲಿ ಹಾವು ಪತ್ತೆ: ಹೌಹಾರಿದ ವಿದ್ಯಾರ್ಥಿಗಳು

    ಸ್ಕೂಲ್ ಬ್ಯಾಗಿನಲ್ಲಿ ಹಾವು ಪತ್ತೆ: ಹೌಹಾರಿದ ವಿದ್ಯಾರ್ಥಿಗಳು

    ಬೆಂಗಳೂರು: ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿ ಬ್ಯಾಗ್ ನಲ್ಲಿ ಹಾವು ಕಾಣಿಸಿಕೊಂಡ ಪರಿಣಾಮ ತಮಿಳುನಾಡಿನ ಶಾಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.

    ತಮಿಳುನಾಡಿನ ಹೊಸೂರಿನ ಕಾಮರಾಜ ನಗರದ ಖಾಸಗಿ ಶಾಲೆಯಲ್ಲಿ ಇಂತಹ ಘಟನೆ ನಡೆದಿದೆ. ಇಲ್ಲಿನ ಖಾಸಗಿ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯ ಬ್ಯಾಗ್ ನಲ್ಲಿ ಹಾವು ಕಾಣಿಸಿಕೊಂಡಿದೆ. ಹಾವಿನ ಮರಿಯನ್ನು ಕಂಡ ವಿದ್ಯಾರ್ಥಿನಿ ಬ್ಯಾಗನ್ನು ತೆಗೆದುಕೊಂಡು ಹೊರ ಹಾಕಿದಾಗ ಬ್ಯಾಗಿನಿಂದ ಹಾವಿನ ಮರಿ ಹೊರ ಬಂದಿದೆ.

    ಬಾಲಕಿ ಮನೆಯಿಂದ ಹೊರಡುವ ಮುನ್ನವೇ ಬ್ಯಾಗಿಗೆ ಹಾವು ಸೇರಿಕೊಂಡಿರುವ ಬಗ್ಗೆ ಅನುಮಾನವಿದ್ದು, ಶಾಲೆಯಲ್ಲಿ ಕಂಡ ಹಾವನ್ನು ಶಿಕ್ಷಕರು ರಕ್ಷಣೆ ಮಾಡಿ ಕೆರೆಗೆ ಬಿಟ್ಟಿದ್ದಾರೆ.