Tag: lake

  • ಕೊಪ್ಪಳದಲ್ಲಿ ಸಾರ್ವಜನಿಕರಿಂದಲೇ ಕೆರೆ ಹೊಳೆತ್ತುವ ಕಾಮಗಾರಿ!

    ಕೊಪ್ಪಳದಲ್ಲಿ ಸಾರ್ವಜನಿಕರಿಂದಲೇ ಕೆರೆ ಹೊಳೆತ್ತುವ ಕಾಮಗಾರಿ!

    – ಸಾಮಾಜಿಕ ಜಾಲತಾಣದಲ್ಲಿ ಸಾಕ್ಷ್ಯಚಿತ್ರ ವೈರಲ್

    ಕೊಪ್ಪಳ: ಸಾರ್ವಜನಿಕರಿಂದಲೇ ಕೆರೆಯ ಹೂಳೆತ್ತುವ ಕಾಮಗಾರಿಗೆ ಇಂದು ಅಭಿನವ ಗವಿ ಸಿದ್ದೇಶ್ವರ ಶ್ರೀಗಳು ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಷಿಯಲ್ಲಿ ಚಾಲನೆ ನೀಡಲಿದ್ದಾರೆ.

    ಕುಷ್ಟಗಿ ತಾಲೂಕಿನ ನಿಡಶೇಷಿಯಲ್ಲಿರುವ ಕೆರೆಯನ್ನು ಸಾರ್ವಜನಿಕರು ಹಣ ಸಂಗ್ರಹಿಸಿ ಹೂಳು ತೆಗೆಯೋ ಕಾರ್ಯಕ್ಕೆ ಮುಂದಾಗಿದ್ದಾರೆ. ನಮ್ಮ ಕೆರೆ ನಮ್ಮ ಕುಷ್ಟಗಿ, `ಕೆರೆ ಉಳಿಸಿ ಜೀವ ಸಂಕುಲ ಉಳಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸಮಾನಮನಸ್ಕರು ಕೂಡಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಅಷ್ಟೇ ಅಲ್ಲದೆ ಈ ಕುರಿತು ವನ್ಯಜೀವಿ ಛಾಯಾಗ್ರಾಹಕರಾಗಿರುವ ಸುಜಿತ್ ಶೆಟ್ಟರ್ ಅವರು ಡ್ರೋನ್ ಕ್ಯಾಮೆರಾ ಮೂಲಕ ಕೆರೆಯ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಈ ದೃಶ್ಯಗಳನ್ನು ಬಳಸಿಕೊಂಡು ಸಾಕ್ಷ್ಯ ಚಿತ್ರ ಕೂಡ ತಯಾರು ಮಾಡಲಾಗಿದೆ.

    ಸುಮಾರು 1.59 ನಿಮಿಷದ ಸಾಕ್ಷ್ಯಚಿತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಸಾಕ್ಷ್ಯಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇನ್ನೂ 45 ದಿನಗಳ ಕಾಲ ಕೊಪ್ಪಳದ ಗವಿ ಸಿದ್ದೇಶ್ವರ ಮಠ ಹೂಳೆತ್ತುವ ಜನರಿಗೆ ನಿರಂತರವಾಗಿ ದಾಸೋಹ ಕಲ್ಪಿಸಿದೆ. ಮಠದಿಂದ ನಿಡಶೇಷಿಯಲ್ಲಿ ದಾಸೋಹ ಕಲ್ಪಿಸಲಾಗಿದ್ದು, ಈ ಮೂಲಕ ಗವಿ ಮಠವೂ ಕೆರೆ ಹೂಳೆತ್ತುವ ಜನರೊಂದಿಗೆ ಕೈ ಜೋಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆರೆಗಳಿಗೆ ಪುನಶ್ಚೇತನ, ಇಟ್ಟಿಗೆ ಕೈಗಾರಿಕೆಗೂ ಬಂತು ಮರುಜೀವ- ಒಂದೇ ಕಲ್ಲಿಗೆ 2 ಹಕ್ಕಿ ಹೊಡೆದ ಜಿಲ್ಲಾಡಳಿತ

    ಕೆರೆಗಳಿಗೆ ಪುನಶ್ಚೇತನ, ಇಟ್ಟಿಗೆ ಕೈಗಾರಿಕೆಗೂ ಬಂತು ಮರುಜೀವ- ಒಂದೇ ಕಲ್ಲಿಗೆ 2 ಹಕ್ಕಿ ಹೊಡೆದ ಜಿಲ್ಲಾಡಳಿತ

    ಕೋಲಾರ: ಸರಿಯಾದ ನಿರ್ವಹಣೆ ಇಲ್ಲದೆ ತಮ್ಮ ಸ್ವರೂಪವನ್ನೇ ಕಳೆದುಕೊಂಡಿದ್ದ ಜಿಲ್ಲೆಯ ಜೀವ ಜಲದ ಮೂಲ ಕೆರೆಗಳಿಗೆ ಅದೃಷ್ಟ ಕುಲಾಯಿಸಿದ್ದು, ಕೆರೆಗಳ ಜೀವ ತುಂಬಲು ಜಿಲ್ಲಾಡಳಿತದ ಮಾಸ್ಟರ್ ಪ್ಲಾನ್ ಮಾಡಿದೆ. ಇಟ್ಟಿಗೆ ಕೈಗಾರಿಕೆಗೂ ಜೀವ ನೀಡಿ ಕೆರೆಗಳ ಪುನಶ್ಚೇತನ ಮಾಡುವ ಹೊಸ ಯೋಜನೆ ಕೈಗೆತ್ತಿಕೊಂಡಿದೆ.

    ಕಳೆದ ಹತ್ತಾರು ವರ್ಷಗಳಿಂದ ಕೆರೆಯಲ್ಲಿ ನೀರಿಲ್ಲ. ಜಾಲಿ ಮರಗಳು ಬೆಳೆದು ಸ್ವರೂಪವನ್ನೇ ಕಳೆದುಕೊಂಡಿತ್ತು. ಇದನ್ನ ಸರಿಪಡಿಸಲು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

    ಜಿಲ್ಲೆಯಲ್ಲಿ ಒಟ್ಟು 600ಕ್ಕೂ ಹೆಚ್ಚು ಇಟ್ಟಿಗೆ ಕಾರ್ಖಾನೆಗಳಿವೆ. ಆದ್ರೆ ಕೆರೆಯಲ್ಲಿ ಮಣ್ಣು ತೆಗೆಯಲು ಅನುಮತಿ ಇಲ್ಲದೆ ಕಾರ್ಖಾನೆಗಳು ಮುಚ್ಚುವ ಪರಿಸ್ಥಿತಿ ಎದುರಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಮಾಡಿದ ಹೊಸ ಕಾನೂನಿನಡಿ, ಇಟ್ಟಿಗೆ ಕಾರ್ಖಾನೆ ಮಾಲೀಕರು ಅನುಮತಿ ಪಡೆದು ಕೆರೆಯಲ್ಲಿ ಮಣ್ಣು ತೆಗೆಯಲು ಮುಂದಾಗಿದ್ದಾರೆ. 1 ಮೆಟ್ರಿಕ್ ಟನ್ ಮಣ್ಣಿಗೆ 60 ರೂಪಾಯಿಯಂತೆ ಪಾವತಿ ಮಾಡಿ ಮಣ್ಣು ತೆಗೆದುಕೊಳ್ಳಬಹುದಾಗಿದೆ. ಇದರಿಂದ ಜಿಲ್ಲೆಯ ಕೆರೆಗಳಿಗೆ ಮರುಜೀವ ಬಂದಂತಾಗಿದ್ದು, ಸರ್ಕಾರಕ್ಕೂ ಇಂತಿಷ್ಟು ಆದಾಯ ಹಾಗೂ ಮುಚ್ಚುವ ಪರಿಸ್ಥಿತಿಯಲ್ಲಿದ್ದ ಇಟ್ಟಿಗೆ ಕಾರ್ಖಾನೆಗಳಿಗೂ ಹೊಸ ಜೀವ ಬಂದಂತಾಗಿದೆ.


    696 ಎಕರೆ ವಿಸ್ತೀರ್ಣ ಹೊಂದಿರುವ ಕೋಲಾರಮ್ಮ ಕೆರೆಯ ಹೂಳು ತೆಗೆದು, ಕೆ.ಸಿ.ವ್ಯಾಲಿ ಯೋಜನೆ ನೀರು ತುಂಬಿಸುವುದು ಜಿಲ್ಲಾಡಳಿತದ ಮಾಸ್ಟರ್ ಪ್ಲಾನ್ ಆಗಿದೆ. ಜೊತೆಗೆ ಜಿಲ್ಲೆಯ ಕೆರೆಗಳನ್ನ ಇದೇ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ. ಮಾತ್ರವಲ್ಲದೆ ಕೋಲಾರ ನಗರಕ್ಕೆ ಹೊಂದಿಕೊಂಡಂತಿರುವ ಕೆರೆಯನ್ನು ಒಳ್ಳೆಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸಣ್ಣ ನೀರಾವರಿ ಇಲಾಖೆ 12 ಕೋಟಿ ರೂಪಾಯಿ ವೆಚ್ಚದ ಯೋಜನೆಯೊಂದನ್ನು ರೂಪಿಸುತ್ತಿದೆ ಎಂದು ಇಟ್ಟಿಗೆ ಕಾರ್ಖಾನೆ ಮಾಲೀಕ ರಾಜಪ್ಪ ಹೇಳಿದ್ದಾರೆ.

    ಒಟ್ಟಿನಲ್ಲಿ ಜಿಲ್ಲಾಡಳಿತದ ಈ ಯೋಜನೆಯಿಂದ ಸಾರ್ವಜನಿಕರಿಗೂ ಫುಲ್ ಖುಷಿಯಾಗಿದೆ. ಅಕ್ರಮವಾಗಿ ಕೆರೆಗಳಲ್ಲಿ ಮಣ್ಣು ತೆಗೆದು ಸೀಜ್ ಆಗುತ್ತಿದ್ದ ಲಾರಿಗಳು, ಇಟ್ಟಿಗೆ ಕಾರ್ಖಾನೆ ಮಾಲೀಕರಿಗೂ ದೊಡ್ಡ ರಿಲೀಫ್ ಸಿಕ್ಕಿದೆ. ಕೆರೆಗಳ ಹೂಳೆತ್ತಲು ಸರ್ಕಾರದ ನೆರವಿಗಾಗಿ ಕಾದು ಕೂರುವ ಕೆರೆಗೆ ಮರು ಜೀವ ಸಿಕ್ಕಂತಾಗಿರುವುದು ಮತ್ತೊಂದು ಸಂತೋಷದ ವಿಷಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಲವಿಲ ಅಂತ ಒದ್ದಾಡಿ ಸಾವನ್ನಪ್ಪಿದವು ಸಾವಿರಾರು ಮೀನುಗಳು..!

    ವಿಲವಿಲ ಅಂತ ಒದ್ದಾಡಿ ಸಾವನ್ನಪ್ಪಿದವು ಸಾವಿರಾರು ಮೀನುಗಳು..!

    ಚಿಕ್ಕಬಳ್ಳಾಪುರ: ಇದ್ದಕ್ಕಿದ್ದಂತೆ ಸಾವಿರಾರು ಮೀನುಗಳು ಒಮ್ಮೇಲೆ ವಿಲವಿಲ ಒದ್ದಾಡಿ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದಲ್ಲಿರುವ ಅಮಾನಿಗೋಪಾಲಕೃಷ್ಣ ಕೆರೆಯಲ್ಲಿ ನಡೆದಿದೆ.

    ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಹೊಂದಿಕೊಂಡಿರುವ ಅಮಾನಿಗೋಪಾಲಕೃಷ್ಣ ಕೆರೆಯಲ್ಲಿ ಮೀನುಗಳ ಮಾರಣ ಹೋಮವೇ ನಡೆದು ಹೋಗಿದೆ. ರಾಶಿ ರಾಶಿ ಮೀನುಗಳು ಸತ್ತು ದಡ ಸೇರಿದ್ರೇ ಅಳಿದುಳಿದಿರುವ ಮೀನುಗಳು ವಿಲವಿಲ ಅಂತ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಅಂದಹಾಗೆ ಗಂಗಾಧರ್-ಮಂಜುಳಮ್ಮ ದಂಪತಿ ಈ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ಟೆಂಡರ್ ಪಡೆದಿದ್ದರು. ಬಾಡಿಗೆ ಮನೆಯಲ್ಲಿ ವಾಸವಾಗಿರೋ ದಂಪತಿ 2 ಲಕ್ಷ ಸಾಲ ಸೋಲ ಮಾಡಿ ಕೆರೆಯಲ್ಲಿ ಮೀನು ಮರಿಗಳನ್ನ ಬಿಟ್ಟು ಸಾಕಾಣಿಕೆ ಮಾಡುತ್ತಿದ್ದರು. ಆದ್ರೆ ಕಳೆದ ಎರಡು ಮೂರು ದಿನಗಳಿಂದ ಇದ್ದಕ್ಕಿದ್ದಂತೆ ಮೀನುಗಳು ಸಾವನ್ನಪ್ಪುತ್ತಿರೋದು ಬಡದಂಪತಿಗೆ ನೋವು ತಂದಿದೆ.

    ಸಾಲ ಸೋಲ ಮಾಡಿ ಮೀನು ಸಾಕಾಣಿಕೆ ಮಾಡುತ್ತಿದ್ದ ದಂಪತಿ ಮೀನುಗಳ ಸಾವಿನಿಂದ ಕಂಗಲಾಗಿದ್ದು ಮಾಡಿದ ಸಾಲ ತೀರಿಸೋದಾದ್ರೂ ಹೇಗೆ ಅಂತ ಕಣ್ಣೀರು ಸುರಿಸುತ್ತಿದ್ದಾರೆ. ಇನ್ನೂ ನಗರಸಭೆಯ ಒಳಚರಂಡಿ ಘಟಕದ ನೀರು ಕರೆಗೆ ಸೇರಿರುವುದು ಮೀನುಗಳ ಸಾವಿಗೆ ಕಾರಣ ಅಂತ ಶಂಕಿಸಿಲಾಗಿದೆ. ಮತ್ತೊಂದೆಡೆ ಚಳಿಗಾಲದಲ್ಲಿ ಅಮ್ಲಜನಕದ ಕೊರತೆಯಿಂದ ಮೀನುಗಳು ಸಾವನ್ನಪ್ಪೋದು ಸರ್ವೆ ಸಾಮಾನ್ಯ ಎಂದು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟಾರ್ಚರ್ ತಾಳಲಾರದೆ ಮಡಿವಾಳ ಕೆರೆಗೆ ಬಿದ್ದು ಟೆಕ್ಕಿ ಆತ್ಮಹತ್ಯೆ

    ಟಾರ್ಚರ್ ತಾಳಲಾರದೆ ಮಡಿವಾಳ ಕೆರೆಗೆ ಬಿದ್ದು ಟೆಕ್ಕಿ ಆತ್ಮಹತ್ಯೆ

    ಬೆಂಗಳೂರು: ಮಡಿವಾಳ ಕೆರೆಯಲ್ಲಿ ಯುವಕ ಆತ್ಮಹತ್ಯೆಗೈದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಯುವಕನ ಸಾವಿನ ಹಿಂದೆ ಆಫೀಸ್ ಟೆನ್ಷನ್ ಕಾರಣ ಎನ್ನುವ ವಿಚಾರ ಪೊಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ವಿಶ್ವಾಸ್(27) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಡಿ.13ರಂದು ಮನೆ ಬಿಟ್ಟು ಹೋಗಿದ್ದ ವಿಶ್ವಾಸ್ ಶವ ಡಿ. 20ರಂದು ಮಡಿವಾಳ ಕೆರೆಯಲ್ಲಿ ಪತ್ತೆಯಾಗಿತ್ತು. ವಿಶ್ವಾಸ್ ಪೋಷಕರು ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುವಾಗ ಅಸಲಿ ವಿಷಯ ಪತ್ತೆಯಾಗಿದೆ.

    ಐಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ವಿಶ್ವಾಸ್ ನನ್ನು 1 ತಿಂಗಳ ಹಿಂದೆ ಕಾರ್ಯಕ್ಷಮತೆ(ಪರ್ಫಮೆನ್ಸ್) ಸರಿ ಇಲ್ಲ ಎಂದು ಹೇಳಿ ಆತನನ್ನು ಕೆಲಸದಿಂದ ತೆಗೆದು ಹಾಕಿತ್ತು. ಹಾಗಾಗಿ ವಿಶ್ವಾಸ್ ಕೆಲಸದ ಒತ್ತಡ ಸಹಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಹೆಣ ಸಿಕ್ಕ ಬಳಿಕ ಮೇಲ್ ಒಪನ್ ಮಾಡಿದ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದೆ. ಪೊಲೀಸರು ಐಪಿಸಿ 306(ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಖಾಸಗಿ ಕಂಪನಿಗೆ ನೋಟಿಸ್ ಜಾರಿಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಂತಿಸಾಗರದಲ್ಲೀಗ ಒತ್ತುವರಿಕೋರರ ಅಲೆ-ಸಾವಿರಾರು ಎಕರೆ ಒತ್ತುವರಿ ವಿರುದ್ಧ ಹೋರಾಟ..!

    ಶಾಂತಿಸಾಗರದಲ್ಲೀಗ ಒತ್ತುವರಿಕೋರರ ಅಲೆ-ಸಾವಿರಾರು ಎಕರೆ ಒತ್ತುವರಿ ವಿರುದ್ಧ ಹೋರಾಟ..!

    -ಸ್ವಾಮೀಜಿಗಳ ಜೊತೆ ಕೈ ಜೋಡಿಸಿದ ಟೆಕ್ಕಿಗಳು..!

    ದಾವಣಗೆರೆ: ಜಿಲ್ಲೆಯ ಶಾಂತಿಸಾಗರ ಅಥವಾ ಸೂಳೆಕೆರೆ ಏಷ್ಯಾದಲ್ಲೇ ಎರಡನೇ ದೊಡ್ಡ ಕೆರೆ. ಇಂತಹ ಕೆರೆಯ ಸಾವಿರಾರು ಎಕರೆ ಒತ್ತುವರಿಯಾಗಿದೆ. ಇದರ ವಿರುದ್ಧ ಸೆಟೆದು ನಿಂತು ಹೋರಾಟ ಮಾಡುತ್ತಿರುವ ಟೆಕ್ಕಿಗಳು ಇವತ್ತಿನ ನಮ್ಮ ಪಬ್ಲಿಕ್ ಹೀರೋ.

    ದಾವಣಗೆರೆಯ ಚನ್ನಗಿರಿಯ ಶಾಂತಿಸಾಗರ ಇದು ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ. ವಿಸ್ತೀರ್ಣದಲ್ಲಿ 6,550 ಎಕರೆ ಇರೋ ಕೆರೆಯಲ್ಲೀಗ ಸಾವಿರಾರು ಎಕರೆ ಒತ್ತುವರಿಯಾಗಿದೆ. ಕೆರೆಯ ಮಹತ್ವ ಅರಿತ ಸ್ಥಳೀಯರಾಗಿರೋ ಟೆಕ್ಕಿಗಳು, ಕೆಲ ಸ್ವಾಮೀಜಿಗಳು ಜೊತೆ ಸೇರಿ ಕೆರೆ ಉಳಿಸುವ ಅಭಿಯಾನಕ್ಕೆ ಮುಂದಾಗಿದ್ದಾರೆ. 2008ರಲ್ಲಿ ಖಡ್ಗ ಸಂಘಟನೆ ಹಾಗೂ ಕೆರೆ ಸಂರಕ್ಷಣಾ ಸಮಿತಿ ಎಂದು ಸಂಘಟನೆ ಕಟ್ಟಿದ್ದಾರೆ. ಆರಂಭದಲ್ಲಿ ಬೆರಳೆಣಿಕೆಯಷ್ಟಿದ್ದ ಸದಸ್ಯರ ಸಂಖ್ಯೆ ಇದೀಗ 3 ಸಾವಿರ ಮೀರಿದೆ. ಬೆಂಗಳೂರು ಸೇರಿದಂತೆ ದೇಶ- ವಿದೇಶಗಳಲ್ಲಿ ಸಂಘಟನೆ ಸದಸ್ಯರಿದ್ದಾರೆ.

    ಕೆರೆಯ ನಕಾಶೆಯಲ್ಲಿರುವ ಜಾಗವನ್ನು ಸರ್ವೆ ಮಾಡಿಸಿ ತಾವೇ ಹಣ ಹಾಕಿಕೊಂಡು ಕೆರೆಯ ಸುತ್ತ ಟ್ರಂಚ್ ಹೊಡೆಸ್ತಿದ್ದಾರೆ. ಜಿಲ್ಲಾಡಳಿತ ಸೂಜಿಮೊನೆಯಷ್ಟೂ ಆಸಕ್ತಿ ತೋರಿಲ್ಲ ಅಂತ ಸಂಘಟನಾ ಸದಸ್ಯರು ದೂರಿದ್ದಾರೆ. ಈ ಯುವಕರ ಉತ್ಸಾಹಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ಸಾಥ್ ನೀಡದೇ ಇರುವುದೇ ದುರದೃಷ್ಟಕರವಾಗಿದೆ.

    https://www.youtube.com/watch?v=nmtaXhttVJQ

  • ಬೆಳ್ಳಂದೂರು ಕೆರೆ ಮಾಲಿನ್ಯ – ರಾಜ್ಯ ಸರ್ಕಾರಕ್ಕೆ 50 ಕೋಟಿ, ಪಾಲಿಕೆಗೆ 25 ಕೋಟಿ ರೂ. ದಂಡ

    ಬೆಳ್ಳಂದೂರು ಕೆರೆ ಮಾಲಿನ್ಯ – ರಾಜ್ಯ ಸರ್ಕಾರಕ್ಕೆ 50 ಕೋಟಿ, ಪಾಲಿಕೆಗೆ 25 ಕೋಟಿ ರೂ. ದಂಡ

    – ಕೆರೆಗಳಿಗಾಗಿ 500 ಕೋಟಿ ಹಣ ಮೀಸಲಿಗೆ ಎನ್‍ಜಿಟಿ ಸೂಚನೆ

    ಬೆಂಗಳೂರು: ಬೆಳ್ಳಂದೂರು ಕೆರೆ ಮಾಲಿನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಹತ್ವದ ತೀರ್ಪು ಪ್ರಕಟಿಸಿದೆ. ಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರಕ್ಕೆ 50 ಕೋಟಿ ಬಿಬಿಎಂಪಿಗೆ 25 ಕೋಟಿ ರೂಪಾಯಿ ದಂಡ ವಿಧಿಸಿದೆ.

    ಇಂದು ಅಂತಿಮ ವಿಚಾರಣೆ ನಡೆಸಿದ ನ್ಯಾ. ಆದರ್ಶ ಕುಮಾರ್ ಗೊಯಲ್ ನೇತೃತ್ವದ ಪೀಠ ಈ ಮಹತ್ವದ ಆದೇಶ ನೀಡಿದೆ. ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವಿಧಿಸಿದ ದಂಡವನ್ನು ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಬೇಕು. ಅಲ್ಲದೆ 500 ಕೋಟಿ ಬೆಳ್ಳಂದೂರು, ವರ್ತೂರು ಹಾಗೂ ಅಗರ ಕೆರೆ ಅಭಿವೃದ್ಧಿಗೆ ಮೀಸಲು ನಿಧಿಗೆ ನೀಡಲು ಸೂಚಿಸಿದ್ದು ಆ ಹಣವನ್ನು ಕೆರೆ ಸಂರಕ್ಷಣೆಗೆ ಬಳಸಿಕೊಳ್ಳಲು ಆದೇಶಿಸಿದೆ.

    ಇನ್ಮುಂದೆ ಕೆರೆ ಮತ್ತೆ ಕಲುಷಿತಗೊಂಡರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. ಅಲ್ಲದೆ, ಆ ವಿಷಯವನ್ನು ಅಧಿಕಾರಿಗಳ ಕೆರಿಯರ್ ರೆಕಾರ್ಡ್ ನಲ್ಲಿ ಬರೆಯಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆದೇಶ ನೀಡಿದೆ.

    ಬೆಳ್ಳಂದೂರು ಕೆರೆ ರಕ್ಷಣೆ ಆಗಿಲ್ಲ. ರಾಜ್ಯ ಸರ್ಕಾರ, ಬಿಬಿಎಂಪಿಯಿಂದ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ರಾಜಕಾಲುವೆ ಅತಿಕ್ರಮಣ ತಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಜಲಮಾಲಿನ್ಯ ಮಾಡುವುದು ಅಪರಾಧವಾಗಿದೆ. ಘನತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತದ ಕರ್ತವ್ಯವಾಗಿದೆ. ಇದನ್ನು ಸಂವಿಧಾನದಲ್ಲಿ ಕೂಡ ಹೇಳಲಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ, ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ ಅಂತ ಅಧಿಕಾರಿಗಳ ಮೇಲೂ ಎನ್ ಜಿಟಿ ಕಿಡಿಕಾರಿದೆ.

    ಜವಾಬ್ದಾರಿ ನಿಭಾಯಿಸದಿದ್ದರೆ ಮುಂದೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಉನ್ನತ ಸಮಿತಿ ನೀಡಿರುವ ಶಿಫಾರಸ್ಸು ಪಾಲಿಸಬೇಕು. ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು. ಕೆರೆಗಳ ಅಭಿವೃದ್ಧಿ ಸಂಬಂಧ ಎನ್ ಜಿಟಿ ಆದೇಶ ಪಾಲನೆಗಾಗಿ ನಿವೃತ್ತಿ ನ್ಯಾ. ಸಂತೋಷ್ ಹೆಗಡೆ ನೇತೃತ್ವದ ಸಮಿತಿ ರಚನೆ ಮಾಡುವಂತೆ ಸೂಚಿಸಲಾಗಿದೆ. ವೆಬ್ ಸೈಟ್ ರಚಿಸಲು ಸಮಿತಿಗೆ ನಿರ್ದೇಶನ ನೀಡಲಾಗಿದೆ. ಈ ಮೂಲಕ ಜನರು ವೆಬ್ ಸೈಟ್ ನಲ್ಲಿ ದೂರು, ಸಲಹೆ ನೀಡಬಹುದು.

    ಬೆಳ್ಳಂದೂರು ಕೆರೆ ಮಾಲಿನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ವಯಂ ದೂರು ದಾಖಲಿಸಿಕೊಂಡಿದ್ದ ಎನ್ ಜಿಟಿ ಇಂದು ತೀರ್ಪು ನೀಡಿ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.

    ಉತ್ತಮ ತೀರ್ಪು:
    ತೀರ್ಪು ಕುರಿತು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪ್ರತಿಕ್ರಿಯಿಸಿ, ಬೆಳ್ಳಂದೂರು ಕೆರೆ ವಿಚಾರದಲ್ಲಿ ತೀರ್ಪು ಸಿಕ್ಕಿದೆ. 50 ಕೋಟಿ, ಪಾಲಿಕೆಗೆ 25 ಕೋಟಿ ದಂಡ ಹಾಕಿರೋದು ಉತ್ತಮ ತೀರ್ಪು ಎಂದು ಹೇಳಿದರು.

    ಎನ್ ಜಿಟಿ ಈ ರೀತಿ ದಂಡ ಹಾಕಿರೋದು ಇದು ಎರಡನೇ ಬಾರಿ. ಇದು ಇಲ್ಲಿನ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದ್ದು, ಸಂತೋಷ್ ಹೆಗ್ಡೆ ಅವ್ರ ಸಮಿತಿ ರಚನೆಗೆ ಸೂಚಿಸಿದ್ದು ಖುಷಿಯಾಗಿದೆ. ಕೆರೆಗಳು ಹಾಳಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹಾಗೂ ಅವರ ಸೇವಾ ರಿಜಿಸ್ಟರ್ ನಲ್ಲಿ ಉಲ್ಲೇಖೀಸಬೇಕೆಂದು ಸೂಚನೆ ಕೊಟ್ಟಿರೋದು ಒಪ್ಪಬೇಕಿದೆ. ಕೆರೆಗಳ ಅಭಿವೃದ್ದಿ ವಿಚಾರದಲ್ಲಿ ಉಲ್ಲೇಖಿಸಿರೋ ವೆಬ್ ಸೈಟ್ ಆರಂಭಿಸೋದು ಉತ್ತಮವಾಗಿದೆ. ಕೆರೆ ಸಂರಕ್ಷಣಾ ಮೀಸಲು ನಿಧಿ 500 ಕೋಟಿ ಇಡಲು ಸೂಚಿಸಿದೆ. ಈ ತೀರ್ಪು ನೋಡಿದ್ರೆ ರಾಜ್ಯ ಸರ್ಕಾರದ ಮೇಲಿನ ವಿಶ್ವಾಸ ಕಳೆದುಕೊಂಡಿರೋದು ಗೊತ್ತಾಗಿದೆ. ರಾಜ್ಯದಲ್ಲಿ ಹಾಗೂ ಪಾಲಿಕೆಯಲ್ಲಿ ಆಡಳಿತ ಇಲ್ಲ ಅನ್ನೋದು ಗೊತ್ತಾಗುತ್ತೆ. ಕೂಡಲೇ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕು. ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಅಂತ ಅವರು ಆಗ್ರಹಿಸಿದರು.

    https://www.youtube.com/watch?v=syYAEeLN9wc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಚ್‍ಐವಿ ಪೀಡಿತ ಮಹಿಳೆ ಸಾವನ್ನಪ್ಪಿದ್ದಕ್ಕೆ ಕೆರೆ ನೀರನ್ನು ಖಾಲಿ ಮಾಡಿಸಿದ್ರು!

    ಎಚ್‍ಐವಿ ಪೀಡಿತ ಮಹಿಳೆ ಸಾವನ್ನಪ್ಪಿದ್ದಕ್ಕೆ ಕೆರೆ ನೀರನ್ನು ಖಾಲಿ ಮಾಡಿಸಿದ್ರು!

    – ಪಂಪ್ ಮೂಲಕ ಮೂರು ದಿನಗಳಿಂದ ನಡೆಯುತ್ತಿದೆ ಹೊರ ಹಾಕೋ ಕೆಲಸ
    – ಜನರ ಆಗ್ರಹಕ್ಕೆ ಮಣಿದು ಪಂಚಾಯತ್‍ನಿಂದ ನಿರ್ಧಾರ

    ಧಾರವಾಡ: ಎಚ್‍ಐವಿ ಪೀಡಿತ ಮಹಿಳೆ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಕ್ಕೆ ಗ್ರಾಮ ಪಂಚಾಯತ್ ಇಡೀ ಕೆರೆಯನ್ನೇ ಖಾಲಿ ಮಾಡಿಸಲು ಮುಂದಾಗಿದೆ.

    ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿರುವ 18 ಸಾವಿರ ಜನರ ನೀರಿನ ದಾಹ ತೀರಿಸುವ ಕೆರೆಯ ನೀರನ್ನು ಗ್ರಾಮ ಪಂಚಾಯತ್ ಖಾಲಿ ಮಾಡಿಸುತ್ತಿದೆ. ಕಳೆದ ವಾರ ಈ ಕೆರೆಯಲ್ಲಿ ಗ್ರಾಮದ ಎಚ್‍ಐವಿ ಪೀಡಿತ ಮಹಿಳೆ ಬಿದ್ದು ಸಾವನ್ನಪ್ಪಿದ್ದಳು. ಈ ಸುದ್ದಿ ಕೇಳಿ ಇಡೀ ಗ್ರಾಮದ ಜನರಿಗೆ ಶಾಕ್ ಆಗಿದ್ದು, ಆ ರೋಗ ನಮಗೂ ಬರಬಹುದು ಎಂದು ಗ್ರಾಮದ ಜನರು ಕೆರೆಯ ಪಕ್ಕಕ್ಕೆ ಕೂಡಾ ಹಾದು ಹೋಗುತ್ತಿಲ್ಲ.

     

    ಕೆರೆಯು ಸುಮಾರು 36 ಏಕರೆ ಜಾಗದಲ್ಲಿ ಹರಡಿಕೊಂಡಿದ್ದು, ಇದರಲ್ಲಿ 2 ವರ್ಷಕ್ಕೆ ಆಗುವಷ್ಟು ನೀರಿದೆ. ಆದರೆ ಗ್ರಾಮದ ಜನರು ಆತಂಕ ಪಟ್ಟಿದ್ದಕ್ಕೆ ಪಂಚಾಯತ್ ಕೂಡಾ ಅನಿವಾರ್ಯವಾಗಿ ಈ ಕೆರೆಯ ನೀರನ್ನು ಚರಂಡಿಗೆ ಬಿಡುವ ಸ್ಥಿತಿ ಬಂದಿದೆ. ಅದಕ್ಕಾಗಿ 20 ಪೈಪಗಳನ್ನು ಅಳವಡಿಸಿ ಕಳೆದ ಮೂರು ದಿನಗಳಿಂದ ನೀರನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಕೆರೆಯ ನೀರು ಅಷ್ಟು ಸುಲಭವಾಗಿ ಖಾಲಿಯಾಗಲ್ಲ ಎಂದು ಕೆರೆಯ ವಾಲನ್ನ ಕೂಡಾ ಬಿಚ್ಚಿ ನೀರು ಖಾಲಿ ಮಾಡಲಾಗುತ್ತಿದೆ.

    ನೀರು ಖಾಲಿಮಾಡಿಸಿದ ನಂತರ ಮತ್ತೆ ಕೆರೆ ಭರ್ತಿಯಾಗಲು ಕನಿಷ್ಠ 15 ದಿನಗಳಾದರೂ ಬೇಕಾಗುತ್ತದೆ. ಸದ್ಯ ಗ್ರಾಮದ ಜನರು ಮಲಪ್ರಭಾ ಬಲದಂಡೆ ಕಾಲುವೆಗೆ ಬಿಟ್ಟಿರುವ ನೀರನ್ನು ತಂದು ಕುಡಿಯುತಿದ್ದಾರೆ. ಆದರೆ ಈ ನೀರು ಸರ್ಕಾರ ಬಂದ್ ಮಾಡಿದ್ದೇ ಆದರೆ ಇಲ್ಲಿ ಹನಿ ನೀರಿಗೂ ತೊಂದರೆಯಾಗಲಿದೆ.

    ಪಂಚಾಯತ್ ಗ್ರಾಮದ ಜನರು ಹೇಳಿದ ತಕ್ಷಣ ಕೆರೆಯನ್ನ ಖಾಲಿ ಮಾಡಿಸಲು ಹೋಗಲಿಲ್ಲ. ಮೊದಲು ನೀರಿನ ಪರೀಕ್ಷೆ ಕೂಡ ಮಾಡಿಸಿತ್ತು. ಆದರೂ ಜನರ ಭಯ ಕಡಿಮೆಯಾಗಲಿಲ್ಲ. ಹೀಗಾಗಿ ಜನರ ಒತ್ತಾಯದಂತೆ ಕೆರೆ ನೀರನ್ನು ಖಾಲಿ ಮಾಡಲಾಗುತ್ತಿದೆ. ಕಾಲುವೆಗೆ ಬಿಟ್ಟಿರುವ ನೀರು ಇನ್ನು 15 ದಿನ ಬಿಟ್ಟರೆ ನಮ್ಮ ಕೆರೆಯನ್ನು ಮತ್ತೆ ನಾವು ತುಂಬಿಸಿಕೊಳ್ಳುತ್ತೇವೆ ಎಂದು ಗ್ರಾಮಸ್ಥ ಮುತ್ತಣ್ಣ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯ ಬಸ್ ಅಪಘಾತಕ್ಕೆ ಕಾರಣ ಸಿಕ್ತು!

    ಮಂಡ್ಯ ಬಸ್ ಅಪಘಾತಕ್ಕೆ ಕಾರಣ ಸಿಕ್ತು!

    -ಅಧಿಕಾರಿಗಳ ವರದಿಯಲ್ಲಿ ಏನಿದೆ?

    ಮಂಡ್ಯ: ಜಿಲ್ಲೆಯಲ್ಲಿ ಬಸ್ ನಾಲೆಗೆ ಉರುಳಿ 30 ಜನರು ಜಲಸಮಾಧಿಯಾದ ದುರಂತ ಘಟನೆಗೆ ನಿಖರವಾದ ಕಾರಣ ಸಿಕ್ಕಿದೆ.

    ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಬಸ್ ಅಪಘಾತ ಕುರಿತು ತನಿಖೆ ನಡೆಸಿ ಸರ್ಕಾರಕ್ಕೆ ಪ್ರಮುಖ ನಾಲ್ಕು ಅಂಶಗಳ ವರದಿಯನ್ನು ಕೊಟ್ಟಿದ್ದಾರೆ.

    ಮೊದಲನೇಯದು ಬಸ್ ಚಾಲಕನ ನಿರ್ಲಕ್ಷ್ಯ ತೋರಿದ್ದು, ಚಾಲನೆ ವೇಳೆ ಮೊಬೈಲ್ ಉಪಯೋಗಿಸಿದ್ದು ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ. ನಾಲೆ ಪಕ್ಕ ತಡೆಗೋಡೆ ಇಲ್ಲದೇ ಇರುವುದು ಜೊತೆಗೆ ರಸ್ತೆಯಿಂದ ನಾಲೆವರೆಗೆ ಇಳಿಜಾರು ಇರುವುದು ಸಹ ಅಪಘಾತಕ್ಕೆ ಕಾರಣವಾಗಿದೆ. ಇನ್ನೂ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು ಹಾಗೂ ಕಿರಿದಾದ ರಸ್ತೆ ಇದ್ದ ಕಾರಣ 30 ಜನರ ಸಾವಿಗೆ ಕಾರಣವಾಗಿರ ಬಹುದು ಎಂದು ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.

    ಈ ಹಿಂದೆ ಬಸ್ ಅಪಘಾತವಾದ ಸ್ಥಳಿಯರು, ರಸ್ತೆ ಕಿರಿದಾಗಿಲ್ಲ, ಇಲ್ಲಿ ಇದುವರೆಗೂ ಯಾವುದೇ ಅಪಘಾತವೂ ಸಂಭವಿಸಿಲ್ಲ. ಬಸ್ ಹಳೆಯದಾಗಿದ್ದು, ಸ್ಟೇರಿಂಗ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ನಾಲೆಗೆ ಬಂದು ಪಲ್ಟಿಯಾಗಿ ಬಿದ್ದಿದೆ. ಅಷ್ಟೇ ಅಲ್ಲದೇ ಬಸ್ಸಿನ ಬಾಗಿಲು ನಾಲೆಗೆ ಕೆಳಮುಖವಾಗಿ ಬಿದ್ದ ಕಾರಣ ಪ್ರಯಾಣಿಕರು ಸಹ ಹೊರಗಡೆ ಬರಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದರು.

    ಅಪಘಾತ ನಡೆದಿದ್ದು ಹೇಗೆ?
    ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕನಗನಮರಡಿ ರಸ್ತೆ ಬದಿಯ ವಿಸಿ ನಾಲೆಗೆ ಉರುಳಿತ್ತು. ಖಾಸಗಿ ಬಸ್ ಪ್ರತಿನಿತ್ಯ ಎರಡು ಬಾರಿ ಸಂಚರಿಸುತ್ತಿತ್ತು. ಬಸ್ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು, 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ವಿಷಯ ತಿಳಿಯುತ್ತಿದ್ದಂತೆ ನಾಲೆಗೆ ಹರಿಸುವ ನೀರನ್ನು ನಿಲ್ಲಿಸಲಾಗಿತ್ತು. ಬಸ್ ಉಲ್ಟಾ ಅಂದರೆ ಬಾಗಿಲು ಕೆಳಗಡೆ ಆಗಿ ಬಿದ್ದಿದ್ದರಿಂದ ಪ್ರಯಾಣಿಕರು ಹೊರ ಬರಲಾರದೇ ಉಸಿರುಗಟ್ಟಿ ಸಾವನ್ನಪ್ಪಿದ್ದರು.

    ಮಂಡ್ಯ ಬಸ್ ದುರಂತಕ್ಕೆ ಇಡೀ ರಾಜ್ಯವೇ ಸಂತಾಪ ಸೂಚಿಸಿದ್ದು, ಸರ್ಕಾರ ಮೃತಪಟ್ಟ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ಧನವನ್ನು ನೀಡಿದೆ. ಸಿನಿಮಾರಂಗದವರು ಕೂಡ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಾಲುವೆ ಒಡೆದು ನೀರು ನುಗ್ಗಿದ್ದರಿಂದ ಕೆರೆಯಂತಾದ ನೂರಾರು ಎಕ್ರೆ ಜಮೀನು!

    ಕಾಲುವೆ ಒಡೆದು ನೀರು ನುಗ್ಗಿದ್ದರಿಂದ ಕೆರೆಯಂತಾದ ನೂರಾರು ಎಕ್ರೆ ಜಮೀನು!

    ಗದಗ: ಕಾಲುವೆ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗಿದ್ದರಿಂದ ನೂರಾರು ಎಕರೆ ಜಮೀನು ಕೆರೆಯಂತೆ ಭಾಸವಾಗುತ್ತಿರುವ ಘಟನೆ ತಾಲೂಕಿನ ಕದಡಿ ಗ್ರಾಮದಲ್ಲಿ ನಡೆದಿದೆ.

    ಕದಡಿ ಗ್ರಾಮದ ಬಳಿಯಿರುವ ಮಲಪ್ರಭಾ ಬಲದಂಡೆ ಕಾಲುವೆ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಹತ್ತಿರದ ಜಮೀನುಗಳಿಗೆ ನುಗ್ಗಿದೆ. ಪರಿಣಾಮ ನೂರಾರು ಎಕರೆ ಜಮೀನುಗಳು ಕೆರೆಯಂತೆ ನಿರ್ಮಾಣವಾಗಿದೆ. ಅಲ್ಲದೇ ಜಮೀನುಗಳಲ್ಲಿ ರೈತರು ಕಷ್ಟಪಟ್ಟು ಬೆಳೆದಿದ್ದ ಬೆಳೆಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣ ಬೆಳೆ ನಷ್ಟವಾಗಿದೆ.

    ಮಾಹಿತಿಗಳ ಪ್ರಕಾರ ಕಾಲುವೆ ಗುಣಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ, ಕಾಲುವೆ ಒಡೆದಿದೆ ಎಂದು ಹೇಳಲಾಗುತ್ತಿದೆ. ಕಾಲುವೆ ಒಡೆಯಲು ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಕಾಲುವೇ ಒಡೆದಿರುವ ಬಗ್ಗೆ ನೀರಾವರಿ ನಿಗಮದ ಅಧಿಕಾರಿಗಳಿಗೆ ರೈತರು ಮಾಹಿತಿ ನೀಡಿದ್ದರೂ, ನೀರನ್ನು ಸ್ಥಗಿತಗೊಳಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

     

  • ಬೆಂಕಿ ಹತ್ತಿದ್ದ ಟ್ರ್ಯಾಕ್ಟರನ್ನು ಕೆರೆಗೆ ಇಳಿಸಿ ಅನಾಹುತ ತಪ್ಪಿಸಿದ ಚಾಲಕ

    ಬೆಂಕಿ ಹತ್ತಿದ್ದ ಟ್ರ್ಯಾಕ್ಟರನ್ನು ಕೆರೆಗೆ ಇಳಿಸಿ ಅನಾಹುತ ತಪ್ಪಿಸಿದ ಚಾಲಕ

    ಬಾಗಲಕೋಟೆ: ಮೇವು ಕೊಂಡೊಯ್ಯುತ್ತಿದ್ದ ಟ್ರ್ಯಾಕ್ಟರ್ ಲೋಡಿಗೆ ಬೆಂಕಿ ತಗುಲಿದ್ದನ್ನು ಅರಿತ ಚಾಲಕ ಟ್ರ್ಯಾಕ್ಟರನ್ನೇ ಕೆರೆಗೆ ಇಳಿಸಿ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಚಾಲಕ ಯಂಕಪ್ಪ ಜಾಣ್ಮೆಯಿಂದ ಟ್ರ್ಯಾಕ್ಟರನ್ನು ಕೆರೆಗೆ ಇಳಿಸುವ ಮೂಲಕ ಆಗಬಹುದಾಗಿದ್ದ ಭಾರೀ ಅನಾಹುತವನ್ನು ತಡೆದಿದ್ದಾರೆ. ಈ ಘಟನೆಯಿಂದಾಗಿ ಸುಮಾರು 30 ಸಾವಿರ ಮೌಲ್ಯದ ಮೇವು ಹಾಗೂ ಟ್ರ್ಯಾಕ್ಟರ್ ಎಂಜಿನಿಗೆ ಹಾನಿಯಾಗಿದೆ. ಬೆಂಕಿ ಅನಾಹುತವನ್ನು ತಪ್ಪಿಸಿದ ಚಾಲಕನಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಟ್ರ್ಯಾಕ್ಟರ್ ಗೆ ಬೆಂಕಿ ತಗುಲಿ, ಕೆರೆಗೆ ಇಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಏನಿದು ಘಟನೆ?
    ಕಳೆದ ಎರಡು ದಿನಗಳ ಹಿಂದೆ ಜಮ್ಮನಕಟ್ಟಿ ಗ್ರಾಮದ ಬಳಿ, ರೈತ ಸಂಜೀವ ಜಲಗೇರಿ ಎಂಬವರಿಗೆ ಸೇರಿದ್ದ ಮೇವಿನ ಲೋಡನ್ನು ಟ್ರ್ಯಾಕ್ಟರ್ ಮೂಲಕ ಸಾಗಿಸಲಾಗುತ್ತಿತ್ತು. ಈ ವೇಳೆ ಹುಲ್ಲಿನ ಬಣವೆಯ ಎತ್ತರ ಜಾಸ್ತಿಯಾಗಿದ್ದರಿಂದ, ರಸ್ತೆಯಲ್ಲಿ ಹೋಗುತ್ತಿರುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿಕೊಂಡಿತ್ತು. ಬೆಂಕಿಯನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಚಾಲಕ ಯಂಕಪ್ಪನಿಗೆ ತಿಳಿಸಿದ್ದರು.

    ಕೂಡಲೇ ಎಚ್ಚೆತ್ತ ಯಂಕಪ್ಪ ಟ್ರ್ಯಾಕ್ಟರನ್ನು ಗ್ರಾಮಸ್ಥರ ಸೂಚನೆಯಂತೆ ಕೆರೆಯಲ್ಲಿ ಇಳಿಸಲು ಮುಂದಾಗಿದ್ದನು. ಆದರೆ ಎರಡೂ ಕಡೆ ಬಣವೆಗಳಿದ್ದರಿಂದ ಟ್ರ್ಯಾಕ್ಟರನ್ನು ಗ್ರಾಮಸ್ಥರ ಸಹಾಯದಿಂದ ಹೊರಗೆ ತಂದು, ಹತ್ತಿರದ ಕೆರೆಯಲ್ಲಿ ಅರ್ಧದವರೆಗೂ ಇಳಿಸಿದ್ದಾರೆ. ಟ್ರ್ಯಾಕ್ಟರ್ ಕೆರೆಗೆ ಇಳಿಯುತ್ತಿದ್ದಂತೆ ಗ್ರಾಮಸ್ಥರು ನೀರು ಎರಚಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews