Tag: lake

  • ಪ್ರಾಣವನ್ನೇ ಪಣಕ್ಕಿಟ್ಟು ತೆಪ್ಪದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಮಹಿಳೆಯರು

    ಪ್ರಾಣವನ್ನೇ ಪಣಕ್ಕಿಟ್ಟು ತೆಪ್ಪದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಮಹಿಳೆಯರು

    ಚಿಕ್ಕಬಳ್ಳಾಪುರ: ಬಡತನ ಎಂಬುದು ಮನುಷ್ಯನ ಕೈಯಲ್ಲಿ ಏನ್ ಬೇಕಾದರೂ ಮಾಡಿಸುತ್ತದೆ ಎಂಬುವುದಕ್ಕೆ ಈ ಮಹಿಳೆಯರೇ ಸಾಕ್ಷಿ. ಮೂರು ಹೊತ್ತು ನೆಮ್ಮದಿಯಾಗಿ ಊಟ ಮಾಡಲು ಮೂವರು ಮಹಿಳೆಯರು ತೆಪ್ಪದಲ್ಲಿ ಕೆರೆಗೆ ಸಾಗಿ ಮೀನು ಹಿಡಿಯುತ್ತಿದ್ದಾರೆ.

    ಈ ಸಾಹಸಿ ಮಹಿಳೆಯರು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವೆಂಕಟಾಪುರ ಕೆರೆಯಲ್ಲಿ. ಇಲ್ಲಿನ ಆಂಧ್ರ ಮೂಲದ ಈ ಮಹಿಳೆಯರು ಸಾಹಸ ಎಲ್ಲರೂ ಹುಬ್ಬೇರುವಂತೆ ಮಾಡಿದೆ.

    ಆ ಮಹಿಳೆಯರು ಗಂಡ-ಮಕ್ಕಳು ಸಂಸಾರ ಎಲ್ಲವನ್ನು ಕಟ್ಟಿಕೊಂಡು ತೆಪ್ಪ ಏರಿದ್ದಾರೆ ಅಂದರೆ ಸಾಕು ಹೊಟ್ಟೆ ತುಂಬುವವರೆಗೂ ಭೂಮಿ ಮೇಲೆ ಬರಲ್ಲ. ಪ್ರತಿ ದಿನ ಬದುಕಿನ ಬಂಡಿ ಸಾಗಿಸಲು ಇರುವ ಹಳೆ ತೆಪ್ಪದಲ್ಲೇ ಕೆರೆಗೆ ಸಾಗುವ ಮಹಿಳೆಯರು ಭರ್ಜರಿ ಮೀನುಗಳನ್ನು ಹಿಡಿದು ಮರಳಿ ದಡಕ್ಕೆ ವಾಪಸಾಗುತ್ತಾರೆ. ಪ್ರತಿದಿನ ಕೆರೆಗೆ ಸಾಗಿ ಮೀನು ತರುವ ಮಹಿಳೆಯರ ಕಾಯಕ ಕಂಡ ಜನ ಮಹಿಳೆಯರ ಸಾಹಸ ಕಂಡು ಮೆಚ್ಚುಗೆ ಜೊತೆ ಆಶ್ಚರ್ಯ ಮತ್ತು ಆತಂಕವನ್ನೂ ವ್ಯಕ್ತಪಡಿಸ್ತಾರೆ.

    ಬದುಕಿನ ಬಂಡಿ ಸಾಗಿಸಲು ಗಂಡ ಮಕ್ಕಳು ಕುಟುಂಬ ಸಮೇತ ಚಿಕ್ಕಬಳ್ಳಾಪುರ ಜಿಲ್ಲೆಯತ್ತ ಬಂದಿರೋ ಈ ಮಹಿಳೆಯರು ಪ್ರತಿದಿನ ಒಂದಲ್ಲ ಒಂದು ಕೆರೆಯಲ್ಲಿ ಮೀನು ಹಿಡಿಯುವ ಕಾಯಕ ಮಾಡುತ್ತಾರೆ. ಮೀನು ಸಾಕಿರುವ ಗುತ್ತಿಗೆದಾರನಿಗೆ ತಂದ ಮೀನು ಕೊಟ್ಟು ತಲಾ ಕೆಜಿಗೆ 20 ರೂಪಾಯಿ ಪಡೆಯುತ್ತಾರೆ. ಹೀಗೆ ಬಂದ ಹಣದಿಂದಲೇ ತಮ್ಮ ಜೀವನ ಸಾಗಿಸುತ್ತಾ ತೆಪ್ಪದಲ್ಲೊಂದು ಬದುಕು ಕಂಡುಕೊಂಡಿದ್ದಾರೆ.

    ಒಟ್ಟಿನಲ್ಲಿ ಮಹಿಳೆಯರು ಯಾರಿಗೇನು ಕಮ್ಮಿಯಿಲ್ಲ ಬಾಹ್ಯಾಕಾಶಕ್ಕೆ ಹಾರಿದವರು ಉಂಟು, ಆಗಸದಲ್ಲಿ ವಿಮಾನ ಹಾರಿಸದವರು ಉಂಟು ಆದರೆ ಕಡುಬಡತನದ ಈ ಮಹಿಳೆಯರು ತಮ್ಮ ಬದುಕಿನ ಬಂಡಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ತೆಪ್ಪದಲ್ಲೊಂದು ಬದುಕು ಕಟ್ಟಿಕೊಂಡಿದ್ದಾರೆ. ಇವರ ಬದುಕು ಸಾಹಸ ಹಲವು ಮಂದಿಗೆ ಸ್ಪೂರ್ತಿಯಾಗಲಿದೆ.

  • ಕೆರೆಯಲ್ಲಿ ಮುಳುಗಿದ ಎತ್ತಿನ ಗಾಡಿ – ದಂಪತಿ ಸೇರಿ ಇಬ್ಬರು ಮಕ್ಕಳು ದುರ್ಮರಣ

    ಕೆರೆಯಲ್ಲಿ ಮುಳುಗಿದ ಎತ್ತಿನ ಗಾಡಿ – ದಂಪತಿ ಸೇರಿ ಇಬ್ಬರು ಮಕ್ಕಳು ದುರ್ಮರಣ

    ಹಾಸನ: ಕರೆಯಲ್ಲಿ ಎತ್ತಿನ ಗಾಡಿ ಮುಳುಗಿದ ಪರಿಣಾಮ ಜಮೀನಿನ ಕಡೆಗೆ ಹೊರಟಿದ್ದ ರೈತ ದಂಪತಿ ಸೇರಿದಂತೆ ಇಬ್ಬರು ಮಕ್ಕಳು ದುರ್ಮರಣ ಹೊಂದಿರುವ ಘಟನೆ ಹೊಳೆನರಸೀಪುರದದಲ್ಲಿ ನಡೆದಿದೆ.

    ಮೃತ ರೈತ ದಂಪತಿಯನ್ನು ರಾಜೇಗೌಡ (48), ಶಾರದಮ್ಮ (40), ಎಂದು ಗುರುತಿಸಲಾಗಿದೆ. ಬೇಸಿಗೆ ರಜೆ ಎಂದು ಮೈಸೂರಿನಿಂದ ಅಜ್ಜಿ ಮನೆಗೆ ಬಂದಿದ್ದ  ದೃತಿ (5) ಮೃತ  ಎಂಬ ಬಾಲಕಿರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.

    ಬೇಸಿಗೆ ಸಮಯವಾಗಿದ್ದರಿಂದ ಕೆರೆಯ ನೀರಿನ ಪ್ರಮಾಣ ಕಡಿಮೆಯಾಗಿತ್ತು. ನೀರಿಲ್ಲದ ಸಂದರ್ಭದಲ್ಲಿ ಕರೆಯೊಳಗೆ ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದರು. ಆದರೆ ಇತ್ತೀಚೆಗೆ ಮಳೆ ಬಂದ ಕಾರಣ ಕೆರೆಯಲ್ಲಿ ನೀರು ತುಂಬಿತ್ತು. ಇಂದು ಈ ದಡದಿಂದ ಆ ದಡಕ್ಕೆ ಹೋಗಲು ಹತ್ತಿರವಾಗುತ್ತೆ ಎಂಬ ಕಾರಣಕ್ಕೆ ನೀರಿನೊಳಗೆ ಎತ್ತಿನಗಾಡಿಯನ್ನು ಹೊಡೆಯಲಾಗಿದೆ. ಆದರೆ ನೀರಿನ ಮಧ್ಯ ಎತ್ತುಗಳು ಗಾಬರಿಗೊಂಡು ಅಲ್ಲಿ ಮುಂಚೆಯೇ ಇದ್ದ ಗುಂಡಿಯೊಳಗೆ ಗಾಡಿ ಬಿದ್ದಿದೆ. ಈ ಪರಿಣಾಮ ಈಜು ಬಾರದ ಒಂದೇ ಕುಟುಂಬದ ಎಲ್ಲರು ಮೃತ ಪಟ್ಟಿದ್ದಾರೆ.

    ಸ್ಥಳಕ್ಕೆ ಭೇಟಿ ನೀಡಿದ ಹಳ್ಳಿ ಮೈಸೂರು ಪೊಲೀಸರು ಶಾರದಮ್ಮ ಮೃತದೇಹ ಮತ್ತು ಎತ್ತಿನ ಗಾಡಿಯನ್ನು ಕೆರೆಯಿಂದ ಹೊರಕ್ಕೆ ತೆಗಿದಿದ್ದಾರೆ. ಇನ್ನುಳಿದ ಮೃತದೇಹಗಳ ಶೋಧಕಾರ್ಯ ಮುಂದುವರೆದಿದೆ. ಎತ್ತುಗಳು ಬಂಡಿಯಿಂದ ಹೊರ ಬಂದು ದಡ ಸೇರಿವೆ. ಈ ಸಂಬಂಧ ಹಳ್ಳಿಮೈಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

  • ದೇವಸ್ಥಾನದ ಪುಷ್ಕರಣಿಯಲ್ಲೂ ನೀರಿಲ್ಲ- ಆಡಳಿತ ಮಂಡಳಿಯಿಂದ ಕೆಸರೆತ್ತುವ ಕಾರ್ಯ

    ದೇವಸ್ಥಾನದ ಪುಷ್ಕರಣಿಯಲ್ಲೂ ನೀರಿಲ್ಲ- ಆಡಳಿತ ಮಂಡಳಿಯಿಂದ ಕೆಸರೆತ್ತುವ ಕಾರ್ಯ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಹಿಂದೆಂದೂ ಇಲ್ಲದ ನೀರಿನ ಸಮಸ್ಯೆ ಈ ಬಾರಿ ಎದುರಾಗಿದೆ. ನದಿಗಳೆಲ್ಲಾ ಬತ್ತಿದ್ದು, ಕೆರೆ ಬಾವಿಯ ನೀರು ಆವಿಯಾಗಿದೆ. ದೇವಸ್ಥಾನಗಳ ಪುಷ್ಕರಣಿಗಳು ಕೂಡ ನೀರಿಲ್ಲದೆ ಒಣಗುತ್ತಿದೆ.

    ಈ ಪರಿಸ್ಥಿತಿಯನ್ನು ಉಪಯೋಗಿಸಲು ಹೊರಟಿರುವ ದೇವಸ್ಥಾನದ ಆಡಳಿತ ಮಂಡಳಿ, ಕೆರೆಯ ಕೆಸರೆತ್ತುವ ಕೆಲಸ ಮಾಡುತ್ತಿದೆ. ಉಡುಪಿಯ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ಹೂಳೆತ್ತುವ ಕೆಲಸ ಬಿರುಸಿನಿಂದ ನಡೆಯುತ್ತಿದೆ.

    ಕಳೆದ ನಾಲ್ಕು ದಿನದಿಂದ ಈ ಕೆಲಸ ನಡೆಯುತ್ತಿದ್ದು, ಭಾರೀ ಪ್ರಮಾಣದ ಹೂಳು ಮೇಲೆತ್ತಲಾಗಿದೆ. ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನ ಉಡುಪಿಯ ಪುರಾತನ ದೇವಸ್ಥಾನವಾಗಿದ್ದು, ಕಳೆದ 30 ವರ್ಷದಲ್ಲಿ ಇದೇ ಮೊದಲ ಬಾರಿಗೆ ಕೆಸರೆತ್ತಲಾಗಿದೆ.

    ಸದ್ಯ ಅಭಿಷೇಕ ಪ್ರಿಯನಾಗಿರುವ ಈಶ್ವರ ದೇವರಿಗೆ ಈ ಮಳೆಗಾಲದಲ್ಲಿ ಶುದ್ಧ ನೀರು ಲಭ್ಯವಾಗಲಿದೆ.

  • ಬೆಂಗಳೂರಲ್ಲಿ ಮಳೆ, ಬೈರಮಂಗಲ ಕೆರೆಯಲ್ಲಿ ನೊರೆ!

    ಬೆಂಗಳೂರಲ್ಲಿ ಮಳೆ, ಬೈರಮಂಗಲ ಕೆರೆಯಲ್ಲಿ ನೊರೆ!

    – ಆಸ್ಪತ್ರೆ ಸೇರುತ್ತಿದ್ದಾರೆ ಜನ
    – ಬಜೆಟಿನಲ್ಲಿ ಶುದ್ಧೀಕರಣ ಘೋಷಣೆ, ಕೆಲ್ಸ ಮಾತ್ರ ಆಗಿಲ್ಲ

    ರಾಮನಗರ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯಾದರೆ ಬೆಳ್ಳಂದೂರು ಕೆರೆಯ ನೊರೆಯದ್ದೇ ಗೋಳು. ಇತ್ತ ಬಿಡದಿ ಬೈರಮಂಗಲ ಕೆರೆಯದ್ದು ಸಹ ನೊರೆಯದ್ದೆ ವ್ಯಥೆಯಾಗಿದೆ. ಹತ್ತಾರು ಹಳ್ಳಿಗಳ ಜೀವನಾಡಿಯಾಗಿದ್ದ ಕೆರೆ ಇದೀಗ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗಿರುವುದರಿಂದ ಈಗ ನೊರೆಯ ಹಾವಳಿ ಹೆಚ್ಚಾಗಿದೆ.

    ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾದ ಪರಿಣಾಮ ಬೈರಮಂಗಲ ಕೆರೆಯಲ್ಲಿ ಇದೀಗ ನೊರೆಯ ಆರ್ಭಟ ಜೋರಾಗಿದೆ. ರಸ್ತೆ ಪಕ್ಕದಲ್ಲಿ ನೊರೆಗಳು ಹಾರುತ್ತಿದ್ದು, ರೈತರ ಜಮೀನುಗಳಲ್ಲಿನ ಬೆಳೆ ನಾಶವಾಗುತ್ತಿದೆ. ಬೈರಮಂಗಲ ಕೆರೆ ಕಳೆದ ಹತ್ತು ವರ್ಷಗಳಿಂದ ಕಲುಷಿತಗೊಂಡು ಬಳಕೆಗೆ ಇರಲಿ ಮುಟ್ಟುವುದಕ್ಕೂ ಸಹ ಹಿಂಜರಿಯುವಂತಾಗಿದೆ. ಬಿಡದಿ ಕೈಗಾರಿಕಾ ಪ್ರದೇಶದ ರಾಸಾಯನಿಕ ನೀರು ಹಾಗೂ ಬೆಂಗಳೂರಿನ ಕೊಳಚೆ ನೀರು ಕೆರೆ ಸೇರುತ್ತಿರುವುದರಿಂದ ಸುತ್ತಮುತ್ತಲ ಪರಿಸರವೆಲ್ಲ ಈಗಾಗಲೇ ಗಬ್ಬೆದ್ದು ಹೋಗಿದೆ.

    ಈ ನೊರೆ ಇದೀಗ ಮನುಷ್ಯರ ಮೇಲೂ ಸಹ ಹಾರುತ್ತಿದ್ದು, ಕೆಮಿಕಲ್‍ನಿಂದ ಕೂಡಿರುವ ನೊರೆಗೆ ಇದೀಗ ಮನುಷ್ಯರು ಸಹ ಆಸ್ಪತ್ರೆ ಹಿಡಿಯುವಂತಾಗಿದೆ. ಕಳೆದ 6 ವರ್ಷಗಳಿಂದ ಕೆರೆ ಶುದ್ಧೀಕರಣ ಮಾಡಲಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇನ್ನೂ ಆ ಕಾರ್ಯ ಮಾಡುತ್ತಿಲ್ಲ. ಇನ್ನಾದರೂ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿ ಎಂದು ಸ್ಥಳೀಯ ರಾಮಣ್ಣ  ಹೇಳಿದ್ದಾರೆ.

    ಅಂದಹಾಗೇ ಬೈರಮಂಗಲ ಕೆರೆ ಕಳೆದ 10 ವರ್ಷಗಳ ಹಿಂದೆ ಹತ್ತಾರು ಗ್ರಾಮಗಳ ಜೀವನಾಡಿಯಾಗಿತ್ತು. ಆದರೆ ಬಿಡದಿ ಕೈಗಾರಿಕಾ ಪ್ರದೇಶವಾದ ಬಳಿಕ ಕೆರೆಯೆಲ್ಲ ಕೆಮಿಕಲ್ ತ್ಯಾಜ್ಯದಿಂದ ಗಬ್ಬೆದ್ದು ಹೋಗಿದೆ. ಕಳೆದ ಕಾಂಗ್ರೆಸ್ ಸರ್ಕಾರ ಹಾಗೂ ಈಗಿನ ಸಮ್ಮಿಶ್ರ ಸರ್ಕಾರ ಕೆರೆಯ ಶುದ್ಧೀಕರಣಕ್ಕೆ ಬಜೆಟ್‍ನಲ್ಲಿ ಘೋಷಣೆ ಮಾಡಿವೆ. ಆದರೆ ಅದು ಕೇವಲ ಕಾಗದದ ಮೇಲಿನ ಘೋಷಣೆಯಾಗಿಯೇ ಉಳಿದುಕೊಂಡಿದೆ. ಒಂದೆರಡು ಬಾರಿ ಕೇಂದ್ರದಿಂದಲೂ ಕೂಡ ಕೆರೆ ಶುದ್ಧೀಕರಣಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಂಗಳೂರಿನಲ್ಲಿ ಮಳೆಯಾದರೆ ಸಾಕು ನಮಗೆ ಇಲ್ಲಿ ಓಡಾಡುವುದೇ ಕಷ್ಟವಾಗಿದೆ ಎಂದು ವೆಂಕಟೇಶ್‍ರೆಟ್ಟಿ ತಿಳಿಸಿದ್ದಾರೆ.

  • 22 ಕೆರೆ ಯೋಜನೆ ವೀಕ್ಷಣೆ ವೇಳೆ ಜಾರಿ ಬಿದ್ದ ಬಿಜೆಪಿ ಶಾಸಕ

    22 ಕೆರೆ ಯೋಜನೆ ವೀಕ್ಷಣೆ ವೇಳೆ ಜಾರಿ ಬಿದ್ದ ಬಿಜೆಪಿ ಶಾಸಕ

    ದಾವಣಗೆರೆ: 22 ಕೆರೆಗೆ ನೀರು ತುಂಬಿಸುವ ಕಾಮಗಾರಿ ವೀಕ್ಷಣೆ ವೇಳೆ ಮಾಯಕೊಂಡ ಕ್ಷೇತ್ರದ ಬಿಜೆಪಿ ಶಾಸಕ ಪ್ರೋ ಲಿಂಗಣ್ಣ ಕಾಲು ಜಾರಿ ಬಿದ್ದ ಘಟನೆ ದಾವಣಗೆರೆ ಜಿಲ್ಲೆಯ ಮಲ್ಲಶೆಟ್ಟಿಹಳ್ಳಿಯಲ್ಲಿ ನಡೆದಿದೆ.

    ಪ್ರೋ ಲಿಂಗಣ್ಣ ಅವರು ಮಲ್ಲಶೆಟ್ಟಿಹಳ್ಳಿ ಬಳಿ 22 ಕೆರೆ ನೀರು ತುಂಬಿಸುವ ಯೋಜನೆಯ ಕಾಮಗಾರಿಯನ್ನು ವೀಕ್ಷಣೆ ಮಾಡಲು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಶಾಸಕ ಲಿಂಗಣ್ಣ ಮಣ್ಣಿನ ಹೆಂಡೆ ಮೇಲೆ ಕಾಲಿಟ್ಟು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.

    ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ್ ಹಾಗೂ ಹತ್ತಾರೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು. ಶಾಸಕ ಕಾಲು ಜಾರಿ ಬೀಳುತ್ತಿದ್ದಂತೆ ಅಲ್ಲಿದ್ದ ಕಾರ್ಯಕರ್ತರು ಅವರನ್ನು ಮೇಲೆಬ್ಬಿಸಿದ್ದಾರೆ.

    ಸದ್ಯ ಶಾಸಕ ಲಿಂಗಣ್ಣ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಅಪಾಯವಾಗಿಲ್ಲ.

  • ಈಜಲು ತೆರಳಿ ರಾಜ್ಯ ಮಟ್ಟದ ಕಬಡ್ಡಿ ಪಟು ಸಾವು

    ಈಜಲು ತೆರಳಿ ರಾಜ್ಯ ಮಟ್ಟದ ಕಬಡ್ಡಿ ಪಟು ಸಾವು

    ಕಾರವಾರ: ಈಜಲು ತೆರಳಿ ನೀರಿನಲ್ಲಿ ಮುಳುಗಿ ರಾಜ್ಯ ಮಟ್ಟದ ಕಬಡ್ಡಿ ಪಟು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕ್ಯಾದಗಿಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಶಶಾಂಕ್ ರವಿ ನಾಯ್ಕ(16) ಭಾನುವಾರ ಸಂಜೆ ಸ್ನೇಹಿತರ ಜೊತೆ ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ್ದನು. ಈ ವೇಳೆ ಶಶಾಂಕ್ ಕೆರೆಯಲ್ಲಿ ಮುಳುಗಿದ್ದಾನೆ. ಆಗ ಜೊತೆಯಲ್ಲಿದ್ದ ಸ್ನೇಹಿತರ ರಕ್ಷಿಸಲು ಮುಂದಾಗಿದ್ದಾರೆ. ಆದರೆ ಅವರಿಂದ ಸಾಧ್ಯವಾಗಿಲ್ಲ.

    ಕೊನೆಗೆ ಸ್ನೇಹಿತರು ಓಡಿ ಹೋಗಿ ಮನೆಯವರಿಗೆ ಮತ್ತು ಊರಿನವರಿಗೆ ತಿಳಿಸಿದ್ದಾರೆ. ತಕ್ಷಣ ಊರಿನವರು ಬಂದು ಆತನಿಗಾಗಿ ಹುಡುಕಾಡಿದ್ದಾರೆ. ಆದರೆ ನಾಯ್ಕ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಮೃತದೇಹ ಮೇಲೆ ತೇಲಿಕೊಂಡು ಬಂದಿದೆ. ಬಳಿಕ ಗ್ರಾಮದವರೇ ಹೋಗಿ ಮೃತದೇಹವನ್ನು ಕೆರೆಯಿಂದ ಹೊರ ತೆಗೆದುಕೊಂಡು ಬಂದಿದ್ದಾರೆ.

    ಈ ಘಟನೆ ಸಂಬಂಧ ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಮೃತ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

  • ದೇವಸ್ಥಾನದ ಕೊಳಕ್ಕೆ ಬಿದ್ದ ಕಾಡುಕೋಣ

    ದೇವಸ್ಥಾನದ ಕೊಳಕ್ಕೆ ಬಿದ್ದ ಕಾಡುಕೋಣ

    ಮಂಗಳೂರು: ಕಾಡುಕೋಣದ ಮರಿಯೊಂದು ದೇವಸ್ಥಾನದ ಕೊಳಕ್ಕೆ ಬಿದ್ದು ಪೇಚಿಗೆ ಸಿಲುಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.

    ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ವಳಲಂಬೆ ಮಹಾವಿಷ್ಣು ದೇವಸ್ಥಾನದ ಬಳಿ ಇರುವ ತೆರೆದ ಕೊಳಕ್ಕೆ ಕಾಡುಕೋಣ ಆಕಸ್ಮಿಕವಾಗಿ ಬಿದ್ದಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಕೊಳದ ಸುತ್ತ ಕಾಡುಕೋಣ ನೋಡಲು ಜಮಾಯಿಸಿದ್ದಾರೆ. ಇದರಿಂದ ಕಾಡುಕೋಣ ಕೆರಳಿದೆ.

    ರಾತ್ರಿ ಹೊತ್ತಿನಲ್ಲಿ ಆ ಭಾಗದಲ್ಲಿ ಕಾಡುಕೋಣಗಳ ಓಡಾಟ ಇದ್ದು, ಹಿಂಡಿನ ಜೊತೆ ಸಾಗುವಾಗ ಆಕಸ್ಮಿಕವಾಗಿ ಕೊಳಕ್ಕೆ ಬಿದ್ದಿರಬಹುದು. ಬೇಸಿಗೆಯಾದ್ದರಿಂದ ಕೊಳದಲ್ಲಿ ನೀರಿಲ್ಲದ ಪರಿಣಾಮ ಏನು ಅಪಾಯ ಸಂಭವಿಸಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಅಲ್ಲದೆ ಕೊಳದ ಸುತ್ತಲೂ ಜನ ನೆರೆದಿದ್ದನ್ನು ಕಂಡು ಕಾಡುಕೋಣಕ್ಕೆ ಗಲಿಬಿಲಿಯಾಗಿದೆ.

    ಸ್ಥಳೀಯರು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಹೀಗಾಗಿ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಕಾಡುಕೋಣವನ್ನು ಕೊಳದಿಂದ ಮೇಲೆಕ್ಕೆತ್ತಿದ್ದಾರೆ. ನೀರಿನಿಂದ ಮೇಲೆ ಬರುತ್ತಿದ್ದಂತೆಯೇ ಕಾಡುಕೋಣ ಕಾಡಿನತ್ತ ಪಲಾಯನ ಮಾಡಿದೆ.

    https://www.youtube.com/watch?v=rDuz7UJ9xPY

  • ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು- ವೃದ್ಧೆ ಸಾವು

    ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು- ವೃದ್ಧೆ ಸಾವು

    ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದು ವೃದ್ಧೆ ಮೃತಪಟ್ಟ ಘಟನೆ ಹಾಸನ ಬೇಲೂರಿನ ವಿಷ್ಣು ಸಮುದ್ರ ಕೆರೆ ಬಳಿ ನಡೆದಿದೆ.

    ಬಸುಬ್ಬಿ (55) ಮೃತ ವೃದ್ಧೆ. ಒಂದೇ ಕುಟುಂಬದ ಮೂವರು ಅರೇಹಳ್ಳಿಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಚಾಲಕನ ಅಜಾಗರೂಕತೆಯಿಂದ ಆಲ್ಟೋ ಕಾರು ಡಿವೈಡರ್ ಗೆ ಗುದ್ದಿ ಕೆರೆಗೆ ಬಿದಿದ್ದೆ.

    ತಾಯಿ ಝರೀನಾ ಹಾಗೂ ಮಗ ಇಂತಿಯಾಜ್ ಈ ಘಟನೆಯಿಂದ ಪಾರಾಗಿದ್ದಾರೆ. ಕಾರು ಕೆರೆಗೆ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಸಮಯ ಪ್ರಜ್ಞೆಯಿಂದ ತಾಯಿ- ಮಗ ಇಬ್ಬರನ್ನು ರಕ್ಷಿಸಿದ್ದಾರೆ. ಸದ್ಯ ಇಬ್ಬರಿಗೂ ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಬಗ್ಗೆ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಾಯಿ ಜೊತೆ ಆಟವಾಡ್ತಿದ್ದಂತೆ ಕೆರೆಗೆ ಬಿದ್ದ ಬಾಲಕಿ!

    ನಾಯಿ ಜೊತೆ ಆಟವಾಡ್ತಿದ್ದಂತೆ ಕೆರೆಗೆ ಬಿದ್ದ ಬಾಲಕಿ!

    ಮಡಿಕೇರಿ: ಮುದ್ದಿನ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಕೆರೆಯೊಳಗೆ ಬಿದ್ದು ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸಮೀಪದ 7ನೇ ಹೊಸಕೋಟೆಯಲ್ಲಿ ನಡೆದಿದೆ.

    ಭಾರತಿ(13) ಮೃತ ಬಾಲಕಿ. ಭಾರತಿ ಗ್ರಾಮದ ರಂಜನ್ ಎಂಬವರ ತೋಟದಲ್ಲಿ ಕಾರ್ಮಿಕರಾಗಿರುವ ಚೋಮ ಎಂಬವರ ಪುತ್ರಿಯಾಗಿದ್ದು, ನಾಯಿಯೊಂದಿಗೆ ಆಟವಾಡುತ್ತಾ ಕೆರೆಗೆ ಬಿದ್ದಿದ್ದಾಳೆ.

    ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ ತೋಟದ ಲೈನ್ ಮನೆಯ ಪಕ್ಕದಲ್ಲಿ ಮುದ್ದಿನ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದಳು. ಆಟದ ನಡುವೆ ಭಾರತಿಯನ್ನು ನಾಯಿ ಓಡಿಸಿಕೊಂಡು ಹೋಗಿದೆ. ಆಟವಾಡುತ್ತಿದ್ದ ಜಾಗದ ಒತ್ತಿನಲ್ಲಿ ಇಳಿಜಾರಿನಿಂದ ಕೂಡಿದ ಪ್ರದೇಶದಲ್ಲಿ ಕೆರೆಯೊಂದಿದ್ದು ನಾಯಿಯ ಕೈಗೆ ಸಿಗದಂತೆ ಭಾರತಿ ಓಡಿದ್ದಳು.

    ಭಾರತಿ ನಿಯಂತ್ರಣ ಕಳೆದುಕೊಂಡು ಅದರೊಳಗೆ ಜಾರಿ ಬಿದ್ದಿದ್ದಾಳೆ. ನಂತರ ಮೇಲಕ್ಕೆ ಬರಲಾಗದೇ ಮೃತಪಟ್ಟಿದ್ದಾಳೆ. ಕುಶಾಲನಗರ ಆಸ್ಪತ್ರೆಯಲ್ಲಿ ಬಾಲಕಿಯ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಸಂಬಂಧಿಕರಿಗೆ ಒಪ್ಪಿಸಲಾಗಿದೆ.

  • ಸೆಕ್ಸ್ ವಿಡಿಯೋ ತೋರಿಸಿ ಬ್ಲಾಕ್‍ಮೇಲ್ ಮಾಡಿದ್ದ ಮಾಡೆಲ್ ಶವ ಕೆರೆಯಲ್ಲಿ ಪತ್ತೆ

    ಸೆಕ್ಸ್ ವಿಡಿಯೋ ತೋರಿಸಿ ಬ್ಲಾಕ್‍ಮೇಲ್ ಮಾಡಿದ್ದ ಮಾಡೆಲ್ ಶವ ಕೆರೆಯಲ್ಲಿ ಪತ್ತೆ

    ರಾಂಚಿ: ಮಾಡೆಲ್‍ಯೊಬ್ಬಳ ಶವ ಕೆರೆಯಲ್ಲಿ ಪತ್ತೆಯಾದ ಘಟನೆ ಮಂಗಳವಾರ ಸಂಜೆ ಜಾರ್ಖಂಡ್‍ನ ದಂಥಾರಿ ಜಿಲ್ಲೆಯಲ್ಲಿ ನಡೆದಿದೆ.

    ಆಂಚಲ್ ಯಾದವ್(32) ಮೃತ ಮಾಡೆಲ್. ಆಂಚಲ್ ದಂಥಾರಿಯ ನಿವಾಸಿಯಾಗಿದ್ದು, ಮಾಡೆಲಿಂಗ್ ಜೊತೆ ವಿಮಾ ಕಂಪನಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ನಗರದಲ್ಲಿ ಯಾವುದೇ ಗಣ್ಯ ವ್ಯಕ್ತಿಗಳ ಪಾರ್ಟಿ ನಡೆದರೂ ಅಲ್ಲಿಗೆ ಆಂಚಲ್ ಕೂಡ ಆಗಮಿಸುತ್ತಿದ್ದಳು.

    ಆಂಚಲ್ ಸೋಮವಾರ ರಾತ್ರಿ ಸುಮಾರು 9 ಗಂಟೆಗೆ ರಾಯ್‍ಪುರದಿಂದ ದಾಂಥಾರಿ ನಿವಾಸಕ್ಕೆ ಆಗಮಿಸಿದ್ದಳು. ಆಂಚಲ್ ಮನೆಗೆ ಬರುತ್ತಿದ್ದಂತೆ ಆಕೆಗೆ ಒಂದು ಕರೆ ಬಂದಿದೆ. ಆಗ ಅವಳು ಮನೆ ಹೊರಗೆ ಬೈಕಿನಲ್ಲಿ ಕಾಯುತ್ತಿದ್ದ ವ್ಯಕ್ತಿಯನ್ನು ಭೇಟಿ ಮಾಡಲು ಹೋದಳು. ಅಲ್ಲದೆ ತನ್ನ ತಾಯಿಯ ಬಳಿ ಅರ್ಧ ಗಂಟೆಯಲ್ಲಿ ಮನೆಗೆ ಮರಳುತ್ತೇನೆ ಎಂದು ಹೇಳಿ ಹೋಗಿದ್ದಳು. ಆದರೆ ಮಂಗಳವಾರ ಆಕೆ ಶವವಾಗಿ ಪತ್ತೆ ಆಗಿದ್ದಾಳೆ.

    ಮಂಗಳವಾರ ಸಂಜೆ ಆಂಚಲ್ ಸಹೋದರನಿಗೆ ಕರೆ ಮಾಡಿ ಆಕೆಯ ಮೃತದೇಹವನ್ನು ತಲುಪಿಸಲಾಗಿದೆ. ಆಂಚಲ್‍ನನ್ನು ಕೊಲೆ ಮಾಡಲಾಗಿದ್ದು, ಆಕೆಯ ಕೈ-ಕಾಲು ಹಾಗೂ ಕುತ್ತಿಗೆಯನ್ನು ಹಗ್ಗದಿಂದ ಕಟ್ಟಲಾಗಿತ್ತು. ಅಲ್ಲದೆ ಆಕೆಯ ಹೊಟ್ಟೆಗೆ ಚಾಕು ಇರಿದ ಗುರುತು ಕೂಡ ಪತ್ತೆಯಾಗಿದೆ. ಆಂಚಲ್‍ನನ್ನು ಕೊಲೆ ಮಾಡಿದ ವ್ಯಕ್ತಿ ಮೊದಲೇ ಆಕೆಯ ಪರಿಚಯಸ್ಥನು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಪೊಲೀಸರು ಸಾಕ್ಷಿಗಾಗಿ ಆಂಚಲ್‍ನ ಸಾಮಾಜಿಕ ಜಾಲತಾಣ ಹಾಗೂ ಕಾಲ್ ಡಿಟೇಲ್ಸ್ ಕೂಡ ಪರಿಶೀಲಿಸುತ್ತಿದ್ದಾರೆ. ಆಂಚಲ್ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಮೊಬೈಲ್ ಸಿಗಲಿಲ್ಲ. ಆಂಚಲ್ ಮೃತದೇಹ ಕೆರೆಯಲ್ಲಿ 12 ಗಂಟೆಕ್ಕಿಂತ ಹೆಚ್ಚು ಹೊತ್ತು ತೇಲಾಡಿದೆ ಎಂದು ಪೊಲೀಸರು ಅನುಮಾನ ಪಡುತ್ತಿದ್ದಾರೆ. ಅಲ್ಲದೆ ವ್ಯಕ್ತಿ ಜೊತೆ ಬೈಕಿನಲ್ಲಿ ಹೋದ ಸ್ವಲ್ಪ ಸಮಯದಲ್ಲಿ ಆಕೆಯ ಕೊಲೆ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    2014ರಲ್ಲಿ ಬರನಾವಾಪಾರಾದಲ್ಲಿ ಅರಣ್ಯ ಅಧಿಕಾರಿಗೆ ಸೆಕ್ಸ್ ವಿಡಿಯೋ ತೋರಿಸಿ ಬ್ಲಾಕ್‍ಮೇಲ್ ಮಾಡಿದ ಆರೋಪದ ಅಡಿಯಲ್ಲಿ ಆಂಚಲ್‍ಳನ್ನು ಬಂಧಿಸಲಾಗಿತ್ತು.