Tag: lake

  • ಕೆರೆ ತುಂಬಿದ್ರೂ ಹಾವೇರಿ ಜನರಿಗೆ ಗಗನ ಕುಸುಮವಾದ ಕುಡಿಯುವ ನೀರು

    ಕೆರೆ ತುಂಬಿದ್ರೂ ಹಾವೇರಿ ಜನರಿಗೆ ಗಗನ ಕುಸುಮವಾದ ಕುಡಿಯುವ ನೀರು

    – ನೀರು ಕಾಣದೇ ತುಕ್ಕು ಹಿಡಿದ ನಲ್ಲಿಗಳು

    ಹಾವೇರಿ: ಕೆರೆ ಭರ್ತಿಯಾಗಿ ದಿನಗಳೇ ಕಳೆದ್ರೂ ಹಾವೇರಿ ಜನತೆಗೆ ಕುಡಿಯುವ ನೀರು ಗಗನ ಕುಸುಮವಾಗಿದೆ. ಹದಿನೈದು ದಿನಗಳಿಗೊಮ್ಮೆ ಬರುವ ನೀರಿಗಾಗಿ ಜನರು ಕಾಯುತ್ತಿರುವ ದೃಶ್ಯಗಳು ಹಾವೇರಿಯಲ್ಲಿ ಕಾಣಸಿಗುತ್ತವೆ.

    ಹಾವೇರಿ ನಗರದ ಹೊರವಲಯದಲ್ಲಿ ವಿಶಾಲವಾದ ಕೆರೆ ಇದೆ. ಈ ಕೆರೆ ತುಂಬಿದರೆ ಹಾವೇರಿ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರಿಗೆ ಕುಡಿಯೋಕೆ ಭರಪೂರ ನೀರು ಸಿಗಲಿದೆ. ಅಲ್ಲದೇ ಹಾವೇರಿ ನಗರಕ್ಕೆ ಇದೇ ಕೆರೆ ತುಂಬಿಸಿ ದಿನದ ಇಪ್ಪತ್ತು ನಾಲ್ಕು ಗಂಟೆ ನೀರು ಪೂರೈಸುವ ಯೋಜನೆಗೆ ಸಿದ್ದರಾಮಯ್ಯ ಸರ್ಕಾರ ಕೋಟಿ ಕೋಟಿ ಹಣವನ್ನ ಖರ್ಚು ಮಾಡಿತ್ತು. ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಮೂಲಕ ಕೆರೆಗೆ ನೀರು ತುಂಬಿಸೋದು ಯೋಜನೆ ಉದ್ದೇಶವಾಗಿತ್ತು. ಗ್ಲಾಸ್ ಹೌಸ್ ನಿರ್ಮಿಸಿ ಕೆರೆಯನ್ನ ಸುಂದರ ಪ್ರವಾಸಿ ತಾಣ ಮಾಡೋ ಉದ್ದೇಶವೂ ಯೋಜನೆಯಲ್ಲಿತ್ತು. ಅದಕ್ಕಾಗಿ ಕೋಟಿ ಕೋಟಿ ಹಣ ಕೂಡ ಖರ್ಚಾಗಿತ್ತು. ಆದರೆ ಕೆರೆಗೆ ನೀರು ಮಾತ್ರ ಬಂದಿರಲಿಲ್ಲ.

    ಕೆಲವು ದಿನಗಳ ಹಿಂದೆ ಸುರಿದ ನಿರಂತರ ಮಳೆಗೆ ಈಗ ಕೆರೆ ತುಂಬಿದೆ. ನೀರಿನಿಂದ ತುಂಬಿ ಕಂಗೊಳಿಸುತ್ತಿದೆ. ಇತ್ತ ನಗರದಲ್ಲಿ ನಿರಂತರ ನೀರು ಯೋಜನೆಗೆ ಹಾಕಿರೋ ನಲ್ಲಿಗಳು ತುಕ್ಕು ಹಿಡಿದು, ಧೂಳುಮಯವಾಗಿವೆ. ಹೀಗಾಗಿ ಯೋಜನೆಯನ್ನ ಸಮರ್ಪಕವಾಗಿ ಜಾರಿ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಏನೆಲ್ಲ ಪ್ರಯತ್ನ ಮಾಡಿದರೂ ಕೆರೆಗೆ ಹನಿ ನೀರೂ ಬಂದಿರಲಿಲ್ಲ. ಈಗ ಕೆರೆ ತುಂಬಿ ಹತ್ತು ಹದಿನೈದು ದಿನಗಳೆ ಕಳೆದಿವೆ. ಆದರೂ ನಗರಸಭೆ ಅಧಿಕಾರಿಗಳು ನಿರಂತರ ನೀರು ಪೂರೈಕೆಗೆ ಮುಂದಾಗುತ್ತಿಲ್ಲ. ಇಪ್ಪತ್ತು ನಾಲ್ಕು ಗಂಟೆ ನೀರು ಪೂರೈಸುವ ಯೋಜನೆಯ ನಲ್ಲಿಗಳು ನೀರು ಕಂಡು ಬಹಳ ದಿನಗಳು ಕಳೆದಿವೆ. ದಿನದ ಇಪ್ಪತ್ತು ನಾಲ್ಕು ಗಂಟೆ ಇರಲಿ, ಕನಿಷ್ಠ ದಿನಕ್ಕೊಮ್ಮೆಯಾದರೂ ಈ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ನಾಲ್ಕೈದು ದಿನಗಳು, ವಾರಕ್ಕೊಮ್ಮೆ ಮಾತ್ರ ಈ ನಲ್ಲಿಗಳಲ್ಲಿ ನೀರು ಬರುತ್ತಿವೆ. ಹೀಗಾಗಿ ಕೋಟಿ ಕೋಟಿ ಖರ್ಚು ಮಾಡಿದ ಯೋಜನೆಯ ಗತಿ ಏನಾಯ್ತು? ಅನ್ನೋ ಪ್ರಶ್ನೆ ಜನರಲ್ಲಿ ಮನೆ ಮಾಡಿದೆ.

    ಈಗ ಯಾರು ಏನೇ ಸಾಹಸ ಮಾಡದಿದ್ದರೂ ಕೆರೆಗೆ ಭರಪೂರ ನೀರು ಬಂದಿದೆ. ಕೆರೆ ಖಾಲಿ ಇದೆ. ಕೆರೆಯಲ್ಲಿ ನೀರಿಲ್ಲ. ದಿನಪೂರ್ತಿ ನೀರು ಕೊಡೋದು ಹೇಗೆ ಅನ್ನೋ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೂ ಈಗ ಅದರ ಚಿಂತೆ ತಪ್ಪಿದಂತಾಗಿದೆ. ಆದ್ರೆ ಆದಷ್ಟು ಬೇಗ ಯೋಜನೆ ಕಾರ್ಯರೂಪಕ್ಕೆ ಬರಲಿ. ದಿನದ ಇಪ್ಪತ್ತು ನಾಲ್ಕು ಗಂಟೆ ಕಾಲ ಜನರಿಗೆ ನೀರು ಸಿಗುವಂತಾಗಲಿ ಎಂದು ಸ್ಥಳೀಯ ನಿವಾಸಿ ಮಾರುತಿ ಹೇಳುತ್ತಾರೆ.

  • ಹಬ್ಬದ ದಿನವೇ ಒಂದೇ ಕುಟುಂಬದ ನಾಲ್ವರ ದುರ್ಮರಣ

    ಹಬ್ಬದ ದಿನವೇ ಒಂದೇ ಕುಟುಂಬದ ನಾಲ್ವರ ದುರ್ಮರಣ

    ಮಂಗಳೂರು: ಗಣೇಶ ಹಬ್ಬದ ದಿನವೇ ಕಾರು ಕೆರೆಗೆ ಬಿದ್ದು ನಾಲ್ವರು ದಾರುಣವಾಗಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಸಮೀಪದ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಕೌಡಿಚ್ಚಾರ್ ಬಳಿ ನಡೆದಿದೆ.

    ಈ ಘಟನೆ ಇಂದು ಬೆಳಗ್ಗೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯಲ್ಲಿರುವ ಕೆರೆಗೆ ಬಿದ್ದಿದೆ ಎನ್ನಲಾಗಿದ್ದು. ಕಾರಿನಲ್ಲಿ ಗಂಡ, ಹೆಂಡತಿ ಇಬ್ಬರು ಮಕ್ಕಳು ಇದ್ದರು. ಮೃತರು ಮಡಿಕೇರಿ ಶುಂಠಿಕೊಪ್ಪ ನಿವಾಸಿಗಳು ಎಂಬುದಾಗಿ ತಿಳಿದುಬಂದಿದೆ.

    ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಕಾರು ಮೇಲಕ್ಕೆತ್ತಿದ್ದಾರೆ. ಅಲ್ಲದೆ ಮೃತದೇಹಗಳನ್ನೂ ಹೊರ ತೆಗೆದಿದ್ದಾರೆ. ಸದ್ಯ ನಾಲ್ವರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶೌಆಗಾರದಲ್ಲಿ ಇರಿಸಲಾಗಿದೆ.

    ಪುತ್ತೂರಿನ ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿದೆ.

  • ಕೆರೆಗೆ ಕಲುಷಿತ ನೀರು – ಲಕ್ಷಾಂತರ ಮೀನುಗಳ ಮಾರಣಹೋಮ

    ಕೆರೆಗೆ ಕಲುಷಿತ ನೀರು – ಲಕ್ಷಾಂತರ ಮೀನುಗಳ ಮಾರಣಹೋಮ

    ಬೆಂಗಳೂರು: ಕೆರೆಯ ನೀರಿಗೆ ಕಲುಷಿತ ನೀರು ಸೇರಿ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳು ಸಾವನ್ನಪ್ಪಿರುವಂತಹ ಘಟನೆ ಕರ್ನಾಟಕ ತಮಿಳುನಾಡು ಗಡಿ ಮಾರಗೊಂಡಪಲ್ಲಿ ಕೆರೆಯಲ್ಲಿ ನಡೆದಿದೆ.

    ಈ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು 3 ಲಕ್ಷಕ್ಕೂ ಹೆಚ್ಚು ಮೀನು ಮರಿಗಳನ್ನು ಬಿಟ್ಟಿದ್ದು ಕೆರೆಗೆ ಬೆಂಗಳೂರಿನ ವರ್ತೂರು ಕೆರೆಯ ಕಲುಷಿತ ನೀರು ಹರಿದು ಬರುತ್ತದೆ ಇದರಿಂದಲೇ ನಿನ್ನೆ ರಾತ್ರಿ ಲಕ್ಷಾಂತರ ಮೀನುಗಳ ಮಾರಣಹೋಮವಾಗಿದೆ ಎಂದು ಅಲ್ಲಿನ ಜನರು ಆರೋಪಿಸಿದ್ದಾರೆ.

    ವರ್ತೂರು ಕೆರೆಯ ಕಲುಷಿತ ನೀರಿನಿಂದ ಈಗಾಗಲೇ ಅಲ್ಲಿನ ಸುತ್ತಮುತ್ತಲಿನ ಜನರಿಗೆ ಸಾಕಷ್ಟು ತೊಂದರೆ ಆಗುತ್ತಿದ್ದು, ಇದೀಗ ಆ ನೀರು ಹರಿದು ಹೋಗುವ ಕೆರೆಗಳಲ್ಲಿಯು ಸಹ ಮೀನುಗಳ ಸಾವು ಹಾಗೂ ನೊರೆ ಸಮಸ್ಯೆ ಕಾಡುತ್ತಿದೆ. ಮೀನುಗಳ ಸಾವಿನ ನಂತರ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೀನುಗಳ ಸಾವಿಗೆ ನಿಖರ ಕಾರಣ ಏನು ಎಂಬುದಕ್ಕೆ ಕೆರೆಯ ನೀರು ಹಾಗು ಮೀನುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ.

  • ಗ್ರಾಮಸ್ಥರ ಹೃದಯ ಗೆದ್ದ ವಜ್ರದ ವ್ಯಾಪಾರಿ ಸಾವಜಿ ಡೊಲಕಿಯಾ

    ಗ್ರಾಮಸ್ಥರ ಹೃದಯ ಗೆದ್ದ ವಜ್ರದ ವ್ಯಾಪಾರಿ ಸಾವಜಿ ಡೊಲಕಿಯಾ

    -ಉದ್ಯೋಗಿಗಳಿಗೆ ಕಾರ್, ಫ್ಲ್ಯಾಟ್ ಗಿಫ್ಟ್ ನೀಡ್ತಿದ್ದ ಉದ್ಯಮಿ

    ಸೂರತ್: ತನ್ನ ಉದ್ಯೋಗಿಗಳಿಗೆ ಕಾರ್, ಫ್ಲ್ಯಾಟ್ ನೀಡುವ ಮೂಲಕ ಹೆಸರುವಾಸಿಯಾಗಿರುವ ವಜ್ರದ ವ್ಯಾಪಾರಿ ಸಾವಜಿ ಡೊಲಕಿಯಾ ತಮ್ಮ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸಾವಿರಾರು ಕೋಟಿ ಗಳಿಸಿದ್ದರೂ ತಮ್ಮ ಸ್ವಂತ ಊರನ್ನು ಮರೆಯದ ಉದ್ಯಮಿ ಡೊಲಕಿಯಾ ಗ್ರಾಮದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಅಮ್ರೇಲಿ ಜಿಲ್ಲೆಯ ಧೂದಲ್ ಗ್ರಾಮದ ಅಭಿವೃದ್ಧಿಗೆ ಮುಂದಾಗಿದ್ದು, ಕೆರೆ ನಿರ್ಮಾಣಗಳ ಕಾರ್ಯ ನಡೆದಿದೆ.

    ತಾಯಿಯ ಪ್ರೇರಣೆ: ಮಹಿಳೆಯರಿಗೆ ವಜ್ರ, ವಜ್ರಾಭರಣಗಳು ಅಂದ್ರೆ ಹೆಚ್ಚು ಇಷ್ಟಪಡುತ್ತಾರೆ. ಆದ್ರೆ ಡೊಲಕಿಯಾ ಅವರ ತಾಯಿ ಎಂದೂ ವಜ್ರಗಳನ್ನು ಇಷ್ಟಪಟ್ಟಿಲ್ಲ. ತನ್ನೂರಿನ ಜನರಿಗೆ ಕುಡಿಯುವ ನೀರು ಸಿಗಬೇಕು ಎಂಬ ಆಸೆಯನ್ನು ಹೊಂದಿದ್ದರು. ತಾಯಿಯ ಆಸೆಯನ್ನು ಪೂರ್ಣಗೊಳಿಸಲು ಡೊಲಕಿಯಾ ಗ್ರಾಮದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಬಾಲ್ಯದಿಂದ ತಾಯಿ ಮೋಡಗಳಲ್ಲಿ ಮಳೆ ಸುರಿಸುವಂತೆ ಪ್ರಾರ್ಥಿಸುತ್ತಿರೋದನ್ನು ಡೊಲಕಿಯಾ ನೋಡಿದ್ದರು.

    ಆರು ಸಾವಿರ ಕೋಟಿಯ ಮಾಲೀಕರಾಗಿರುವ ಡೊಲಕಿಯಾ ಅವರು ಬರಗಾಲ ಹಿನ್ನೆಲೆಯಲ್ಲಿ ಗ್ರಾಮ ತೊರೆದು ಸೂರತ್ ಸೇರಿಕೊಂಡಿದ್ದರು. ಅಂದಿನಿಂದ ಸತತ ಪರಿಶ್ರಮದಿಂದ ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿದ್ದಾರೆ.

    ತಾಯಿಯ ಆಸೆಯನ್ನು ಪೂರ್ಣಗೊಳಿಸುವ ಸಮಯ ಬಂದಿದ್ದರಿಂದ ಗ್ರಾಮಕ್ಕೆ ಹಿಂದಿರುಗಿದ್ದೇನೆ. 15 ವರ್ಷದ ಹಿಂದೆ ಗುಜರಾತಿನ ಜಲ ಸಮಸ್ಯೆ ನಿವಾರಣೆಗಾಗಿ ಟ್ರಸ್ಟ್ ಒಂದಕ್ಕೆ 33 ಲಕ್ಷ ರೂ. ದೇಣಿಗೆ ನೀಡಿದ್ದೆ. ಈ ರೀತಿ ದೇಣಿಗೆ ನೀಡುವದರಿಂದ ನೀರಿನ ಸಮಸ್ಯೆ ಪರಿಹಾರ ಸಾಧ್ಯವಿಲ್ಲ ಎಂಬುವುದು ನನಗೆ ಮನವರಿಕೆ ಆಯ್ತು. ಬರಗಾಲ ಪೀಡಿತ ಪ್ರದೇಶದಲ್ಲಿ ಕೆರೆಗಳ ನಿರ್ಮಾಣ ಮತ್ತು ಪುನಶ್ಚೇತನಕ್ಕೆ ಮುಂದಾದೆ. ಆರಂಭದಲ್ಲಿ ನನ್ನೂರಿನ ಗ್ರಾಮಕ್ಕೆ 5 ಕೋಟಿ ರೂ. ವೆಚ್ಚದಲ್ಲಿ 5 ಕೆರಗಳ ನಿರ್ಮಾಣ ಮಾಡಲಾಯ್ತು. ಕೆರೆಗಳ ನಿರ್ಮಾಣದಿಂದ ಗ್ರಾಮದ ಬಹುತೇಕ ಸಮಸ್ಯೆಗಳು ದೂರು ಆಯ್ತು. ಆರಂಭದಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ, ಇದೀಗ ನಮ್ಮ ಕೆಲಸದ ಪ್ರತಿಫಲ ನಮ್ಮ ಮುಂದಿದೆ ಎಂದು ಸಾವಜಿ ಡೊಲಕಿಯಾ ಸಂತೋಷ ವ್ಯಕ್ತಪಡಿಸುತ್ತಾರೆ.

    ಸಾವಜಿ ಡೊಲಕಿಯಾ ಫೌಂಡೇಶನ್ ಅಡಿಯಲ್ಲಿ ಇನ್ನುಳಿದ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ದಿಟ್ಟ ಹೆಜ್ಜೆಯನ್ನು ಇರಿಸಿದ್ದಾರೆ. ಫೌಂಡೇಶನ್ ವತಿಯಿಂದ ಆಯ್ದ ಗ್ರಾಮಗಳಿಗೆ ತಲಾ 25 ಲಕ್ಷ ರೂ. ನೀಡಲಾಗಿದೆ. ಗ್ರಾಮಸ್ಥರು ಸಹ ಸ್ವಇಚ್ಛೆಯಿಂದ ಕೆಲಸದಲ್ಲಿ ಭಾಗಿಯಾಗುತ್ತಿರೋದು ಖುಷಿ ತಂದಿದೆ. 45 ಕೆರೆಗಳ ನಿರ್ಮಾಣದಲ್ಲಿ 2,500ಕ್ಕೂ ಹೆಚ್ಚು ಜನರು ನಮ್ಮ ಕೆಲಸದಲ್ಲಿ ಭಾಗಿಯಾಗಿದ್ದಾರೆ ಎಂದು ಡೊಲಕಿಯಾ ಹೇಳುತ್ತಾರೆ.

    ತಮ್ಮ ಗ್ರಾಮದಲ್ಲಿ ಸೇರಿದಂತೆ ಒಟ್ಟು 45 ಕೆರೆಗಳ ನಿರ್ಮಾಣ ಕಾರ್ಯವನ್ನು ಡೊಲಕಿಯಾ ಪೂರ್ಣಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ 70 ಕೆರೆಗಳ ನಿರ್ಮಾಣದ ಗುರಿಯನ್ನು ಡೊಲಕಿಯಾ ಹೊಂದಿದ್ದಾರೆ.

    ಹರಿಕೃಷ್ಣ ಎಕ್ಸ್ ಪೋರ್ಟ್  ಕಂಪನಿಯ ಮಾಲೀಕರಾಗಿರುವ ಸಾವಜಿ ಡೊಲಕಿಯಾ 2018ರ ದೀಪಾವಳಿ ಸಂದರ್ಭದಲ್ಲಿ ಬೋನಸ್ ರೂಪದಲ್ಲಿ ತಮ್ಮ ನೌಕರರಿಗೆ 600 ಕಾರು ಮತ್ತು 900 ಜನರಿಗೆ ಎಫ್‍ಡಿ ನೀಡಿದ್ದರು. ವಿಶೇಷ ಬೋನಸ್ ಪಡೆಯಲು 1500 ಜನರನ್ನು ಆಯ್ಕೆ ಮಾಡಲಾಗಿತ್ತು. ಇದಕ್ಕಾಗಿ ಬರೋಬ್ಬರಿ 50 ಕೋಟಿ ರೂ. ವ್ಯಯಿಸಲಾಗಿತ್ತು.

    600 ನೌಕರರಿಗೆ ಮಾರುತಿ ಸುಜುಕಿ ಸೆಲೆರಿಯೋ ಕಾರ್ ಬೋನಸ್ ರೂಪದಲ್ಲಿ ಲಭ್ಯವಾಗಿತ್ತು. ಹಬ್ಬದ ದಿನದಂದು 6,000 ಸಾವಿರ ಜನರಿಗೆ ಔತಣಕೂಟವನ್ನು ಸಹ ಏರ್ಪಡಿಸಲಾಗಿತ್ತು. 2018ರ ವೇಳೆ ಕಂಪನಿಯಲ್ಲಿ 25 ವರ್ಷ ಪೂರೈಸಿದ್ದ ದೆಹಲಿ ಶಾಖೆಯ ಮೂವರಿಗೆ ಬೆಂಜ್ ಕಾರ್ ಉಡುಗೊರೆಯಾಗಿ ನೀಡಿದ್ದರು. 2011ರಿಂದಲೂ ಡೊಲಕಿಯಾವರು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಪ್ರಯುಕ್ತ ವಿಶೇಷ ಬೋನಸ್ ನೀಡಲು ಪ್ರಾರಂಭಿಸಿದ್ದಾರೆ. 2015ರಲ್ಲಿ ಹಬ್ಬದ ಪ್ರಯುಕ್ತ 491 ಕಾರ್ ಮತ್ತು 200 ಫ್ಲ್ಯಾಟ್‍ಗಳನ್ನು ಗಿಫ್ಟ್ ನೀಡಿದ್ದರು. 2014ರಲ್ಲಿ ಕಂಪನಿಯ ನೌಕರರಿಗೆ 50 ಕೋಟಿ ರೂ. ಹಂಚಿದ್ದರು.

  • ನೋಡುಗರನ್ನು ಆಕರ್ಷಿಸುತ್ತಿರುವ ಹಕ್ಕಿಗಳ ಗೂಡಿನ ವಿನ್ಯಾಸ

    ನೋಡುಗರನ್ನು ಆಕರ್ಷಿಸುತ್ತಿರುವ ಹಕ್ಕಿಗಳ ಗೂಡಿನ ವಿನ್ಯಾಸ

    ಕೋಲಾರ: ಬರದ ನಾಡು, ಚಿನ್ನದ ಬೀಡು ಕೋಲಾರದಲ್ಲಿ ಗೀಜಗ ಗೂಡಿನ ಸುಂದರ ಸೊಬಗಿನ ಅಂದ ನೋಡಲು ಎರಡು ಕಣ್ಣುಗಳು ಸಾಲದಾಗಿವೆ. ಬಣ್ಣ ಬಣ್ಣದ ಗೀಜಗ ಪಕ್ಷಿಗಳು ನೀರಿಲ್ಲದ ಬರಿದಾಗಿರುವ ಕೆರೆಗಳಲ್ಲಿ ಬೆಳೆದಿರುವ ಜಾಲಿ ಮರಗಳಲ್ಲಿ ತಮ್ಮದೆ ಕನಸಿನ ಗೂಡು ಕಟ್ಟಿಕೊಂಡು ಆನಂದವಾಗಿವೆ.

    ತಾವೆ ನಿರ್ಮಿಸಿಕೊಂಡಿರುವ ಗೂಡಿನಲ್ಲಿ ಕದ್ದು ಮುಚ್ಚಿ ಹಾಡುತ್ತಿರುವ ಬಣ್ಣ ಬಣ್ಣದ ಹಕ್ಕಿ ಸದ್ದು, ಸುಂದರವಾದ ಗೂಡಿನ ವಿನ್ಯಾಸ ನೋಡುಗರನ್ನು ಆಕರ್ಷಿಸುತ್ತಿದೆ. ಕೆಲವು ಪಕ್ಷಿಗಳು ಬೆಳಗ್ಗೆ ಆಹಾರ ಅರಸಿ ಹೊರಟರೆ ಮತ್ತೆ ಸಂಜೆ ಗೂಡು ಸೇರಿಕೊಳ್ಳುತ್ತವೆ. ಅವುಗಳು ಗೂಡು ಸೇರಿಕೊಳ್ಳುತ್ತಿದ್ದಂತೆ ಖುಷಿಯಾಗಿ ಉಳಿದ ಪಕ್ಷಿಗಳೆಲ್ಲ ಗಜಿ ಬಿಜಿ ಎಂದು ಮಾಡುವ ಸದ್ದು, ಅವುಗಳೊಂದಿಗೆ ಮರಿಗಳ ಸಂತೋಷದ ಕ್ಷಣಗಳು ನೋಡುವ ಕಣ್ಣುಗಳಿಗೆ ಮುದ ನೀಡುವುದಲ್ಲದೆ, ಅವುಗಳ ಸದ್ದು ಕಿವಿಗೆ ಸಂಗೀತದ ಮಾದರಿಯ ಆನಂದ ನೀಡುತ್ತದೆ.

    ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಜಮ್ಮನಹಳ್ಳಿ ಕೆರೆ, ಕೋಲಾರಮ್ಮ, ಜಿಲ್ಲೆಯ ಅನೇಕ ಕೆರೆಗಳಲ್ಲಿ ಗೀಜಗ ಪಕ್ಷಿಗಳ ಗೂಡು ನಿರ್ಮಿಸಿಕೊಂಡಿವೆ. ಗೀಜಗ ಪಕ್ಷಿಗಳು ಗೂಡು ನಿರ್ಮಾಣ ಮಾಡುವುದು, ಅವುಗಳ ಸಲುಗೆ, ಪ್ರೀತಿ ಎಲ್ಲಾ ಅದ್ಭುತವಾದ ದೃಶ್ಯಗಳು ಹೊಸ ಪ್ರಪಂಚದ ನಿಸರ್ಗದ ಕೊಡುಗೆ ಎಂದರೆ ತಪ್ಪಲ್ಲ.

    ಸದ್ಯ ಮರಗಳಿಲ್ಲದೆ, ಕೆರೆ ಕುಂಟೆಗಳೆಲ್ಲಾ ಒಣಗಿದ್ದು ಪಕ್ಷಿಗಳನ್ನು ನೋಡಲು ರಂಗನತಿಟ್ಟುನಂತಹ ಪಕ್ಷಿಧಾಮಗಳಿಗೆ ತೆರಳಬೇಕಿದೆ. ನಗರ ಪ್ರದೇಶಗಳಲ್ಲಿ ಸಣ್ಣ-ಪುಟ್ಟ ಪಕ್ಷಿಗಳಾದ ಗೀಜಗ, ಗುಬ್ಬಚ್ಚಿಗಳನ್ನು ಅಥವಾ ಸಣ್ಣ ಪ್ರಾಣಿ ಪಕ್ಷಿ ಸಂಕುಲವನ್ನು ಪರದೆಯ ಮೇಲೆ ನೋಡುವಂತಹ ಪರಿಸ್ಥಿತಿ ಬಂದೊದಗಿದೆ.

  • ಕಾಣೆಯಾಗಿದ್ದ ಬಾಲಕರಿಬ್ಬರ ಶವ 2 ದಿನ ನಂತ್ರ ಕೆರೆಯಲ್ಲಿ ಪತ್ತೆ

    ಕಾಣೆಯಾಗಿದ್ದ ಬಾಲಕರಿಬ್ಬರ ಶವ 2 ದಿನ ನಂತ್ರ ಕೆರೆಯಲ್ಲಿ ಪತ್ತೆ

    ಹೈದರಾಬಾದ್: ತಮ್ಮ ಮನೆಯಿಂದ ನಾಪತ್ತೆಯಾಗಿದ್ದ ಇಬ್ಬರು ಅಪ್ರಾಪ್ತ ಬಾಲಕರು ಎರಡು ದಿನಗಳ ನಂತರ ಮೈಲಾರ್‍ದೇವ್‍ಪಲ್ಲಿಯ ಶಾಸ್ತ್ರಿಪುರಂ ಎಂಬ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

    ರಫಿಯುದ್ದೀನ್ ಹರುನ್ (9) ಮತ್ತು ಮೊಹಮ್ಮದ್ ಯೂಸುಫ್ (12) ಮೃತ ಬಾಲಕರು. ಇಬ್ಬರು ಕಲಾಪಥಾರ್ ನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. ಇಬ್ಬರು ಬಾಲಕರು ಗುರುವಾರ ಸಂಜೆ ಸುಮಾರು 4 ಗಂಟೆಗೆ ಶಾಲೆಯಿಂದ ಬಂದು ನಂತರ ಮನೆಯಿಂದ ಹೊರಗಡೆ ಹೋಗಿದ್ದಾರೆ.

    ಸಂಜೆಯಾದರೂ ಇಬ್ಬರು ಮನೆಗೆ ಹಿಂದಿರುಗಲಿಲ್ಲ. ಇದರಿಂದ ಗಾಬರಿಗೊಂಡು ಪೋಷಕರು ಎಲ್ಲ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಮೈಲಾರ್‍ದೇವ್‍ಪಲ್ಲಿ ಪೊಲೀಸ್ ಠಾಣೆಗೆ ಹೋಗಿ ಶುಕ್ರವಾರ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡು ಪೊಲೀಸರು ಬಾಲಕರಿಗಾಗಿ ಹುಡುಕಾಟ ಆರಂಭಿಸಿದ್ದರು.

    ಇಬ್ಬರು ಹುಡುಗರ ಶವಗಳು ಬಮ್ರೌಕ್‍ಡೌಲ್ಲಾ ಕೆರೆಯಲ್ಲಿ ತೇಲುತ್ತಿವೆ ಎಂದು ಪೊಲೀಸರಿಗೆ ಮಾಹಿತಿ ಬಂದಿದೆ. ಕೂಡಲೇ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ನಂತರ ಬಾಲಕರ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೋಷಕರು ಬಂದು ಅವರನ್ನು ತಮ್ಮ ಮಕ್ಕಳೆಂದು ದೃಢಪಡಿಸಿದರು. ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮೇನಿಯಾ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ.

    ಈ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಬಾಲಕರು ಈಜಲು ಅಥವಾ ಆಟವಾಡಲು ಕೆರೆಗೆ ಇಳಿದಿದ್ದಾರೆ. ಆಗ ಆಕಸ್ಮಿಕವಾಗಿ ಮುಳುಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯಕ್ಕೆ ಇದು ಆಕಸ್ಮಿಕವೋ ಅಥವಾ ಅವರ ಸಾವಿನಲ್ಲಿ ಹಿಂದೆ ಬೇರೆ ಏನಾದರೂ ಕಾರಣ ಇದಿಯಾ ಎಂದು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

  • ಟೈರ್ ಸ್ಫೋಟಗೊಂಡು ಪಲ್ಟಿಯಾಗಿ ಕೆರೆಯಲ್ಲಿ ಬಿದ್ದ ಕಾರು- ಮಹಿಳೆ ಸಾವು

    ಟೈರ್ ಸ್ಫೋಟಗೊಂಡು ಪಲ್ಟಿಯಾಗಿ ಕೆರೆಯಲ್ಲಿ ಬಿದ್ದ ಕಾರು- ಮಹಿಳೆ ಸಾವು

    ಬೆಂಗಳೂರು: ಟೈರ್ ಸ್ಫೋಟಗೊಂಡು ಕಾರೊಂದು ಪಲ್ಟಿಯಾಗಿ ಕೆರೆಗೆ ಬಿದ್ದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಬಳಿ ನಡೆದಿದೆ.

    ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಮೃತ ಮಹಿಳೆಯನ್ನು ಮಮತಾ (35) ಎಂದು ಗುರುತಿಸಲಾಗಿದೆ. ಪತಿ ಆನಂದ್ ಗಂಭೀರ ಗಾಯಗೊಂಡಿದ್ದಾರೆ. ಹುಲಿಮಂಗಲದಿಂದ ಜಿಗಣಿ ಕಡೆಗೆ ದಂಪತಿ ಬರುತ್ತಿದ್ದರು. ಈ ವೇಳೆ ಕಾರಿನ ಮುಂಭಾಗದ ಟೈರ್ ಸ್ಫೋಟಗೊಂಡ ಪರಿಣಾಮ ಅಪಘಾತ ಸಂಭವಿಸಿದೆ.

    ಟೈರ್ ಸ್ಫೋಟಗೊಂಡು ಕಾರು ನಿಯಂತ್ರಣ ತಪ್ಪಿ ಜಿಗಣೆ ಕೆರೆಯಲ್ಲಿ ಪಲ್ಟಿಯಾಗಿ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆರೆಗಳ ಪುನಶ್ಚೇತನಕ್ಕೆ ಕರೆ ನೀಡಿದ್ದ ಸಿಎಂ ಸ್ವಕ್ಷೇತ್ರದಲ್ಲೇ ಕೆರೆ ಒತ್ತುವರಿ

    ಕೆರೆಗಳ ಪುನಶ್ಚೇತನಕ್ಕೆ ಕರೆ ನೀಡಿದ್ದ ಸಿಎಂ ಸ್ವಕ್ಷೇತ್ರದಲ್ಲೇ ಕೆರೆ ಒತ್ತುವರಿ

    ರಾಮನಗರ: ಇತ್ತೀಚೆಗೆ ಎಲ್ಲ ಕೆರೆಗಳನ್ನು ಪುನಶ್ಚೇತನಗೊಳಿಸುವುದಾಗಿ ಸಿಎಂ ತಿಳಿಸಿದ್ದರು. ಆದರೆ, ಇದೀಗ ಸ್ವತಃ ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿಯೇ ಕೆರೆ ಒತ್ತುವರಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

    ಚನ್ನಪಟ್ಟಣ ನಗರದಲ್ಲಿರುವ ಶೆಟ್ಟಿಹಳ್ಳಿ ಕೆರೆಯ ಸಾಕಷ್ಟು ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಶೆಟ್ಟಿಹಳ್ಳಿ ಕೆರೆ ಒಟ್ಟು 22 ಎಕರೆ 14 ಗುಂಟೆ ವಿಸ್ತೀರ್ಣವನ್ನು ಹೊಂದಿದೆ. ಆದರೆ, ಇದೀಗ ಕೆರೆಯ ಸುಮಾರು 9 ಎಕರೆಯಷ್ಟು ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ, ಕಟ್ಟಡ ಸಂಕೀರ್ಣ, ಮಸೀದಿ, ದೇವಾಲಯ ಅಲ್ಲದೇ ಸಮತಟ್ಟು ಮಾಡಿಕೊಂಡು ವ್ಯವಸಾಯಕ್ಕೂ ಬಳಕೆ ಮಾಡಲಾಗುತ್ತಿದೆ.

    ಶೆಟ್ಟಿಹಳ್ಳಿ ಕೆರೆಯ ಒತ್ತುವರಿ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಸ್ಥಳೀಯರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಲೋಕಾಯುಕ್ತ ಎಸ್‍ಪಿ ಅಂಜಲಿಯವರು ಇಂದು ಚನ್ನಪಟ್ಟಣಕ್ಕೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು. ಮೇಲ್ನೋಟಕ್ಕೆ ಕೆರೆ ಒತ್ತುವರಿಯಾಗಿರುವುದು ಕಂಡುಬಂದಿದ್ದು, ಒತ್ತುವರಿ ತೆರವಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

  • ನೀರಿನಲ್ಲಿ ನಿಂತು ಟಿಕ್‍ಟಾಕ್ ಮಾಡಲು ಹೋಗಿ ಯುವಕ ಸಾವು

    ನೀರಿನಲ್ಲಿ ನಿಂತು ಟಿಕ್‍ಟಾಕ್ ಮಾಡಲು ಹೋಗಿ ಯುವಕ ಸಾವು

    ಹೈದರಾಬಾದ್: ಟಿಕ್‍ಟಾಕ್ ವಿಡಿಯೋ ಮಾಡುವಾಗ ಈಗಾಗಲೇ ಅನೇಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಇದೀಗ ಯುವಕನೊಬ್ಬ ಕೆರೆಯಲ್ಲಿ ನಿಂತು ಟಿಕ್‍ಟಾಕ್ ಮಾಡುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹೈದರಾಬಾದ್‍ನ ಮೇಡ್ಚಲ್ ಜಿಲ್ಲೆಯ ದುಲಪಲ್ಲಿ ಕೆರೆಯಲ್ಲಿ ನಡೆದಿದೆ.

    ನರಸಿಂಹ(24) ಮೃತ ಯುವಕ. ನರಸಿಂಹ ತನ್ನ ಸ್ನೇಹಿತ ಪ್ರಶಾಂತ್‍ನೊಂದಿಗೆ ದುಲಪಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದನು. ನಂತರ ಇಬ್ಬರು ಟಿಕ್‍ಟಾಕ್ ವಿಡಿಯೋಗೆ ಪೋಸ್ ನೀಡಲು ಕೆರೆಗೆ ಇಳಿದಿದ್ದರು. ಬಳಿಕ ಪ್ರಶಾಂತ್‍ನೊಂದಿಗೆ ನೀರಿನಲ್ಲಿ ನಿಂತು ನರಸಿಂಹ ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿದ್ದನು.

    ಸ್ನೇಹಿತ ಪ್ರಶಾಂತ್ ಮೊಬೈಲ್ ಫೋನ್‍ನಲ್ಲಿ ಟಿಕ್‍ಟಾಕ್ ರೆಕಾರ್ಡ್ ಮಾಡುತ್ತಿದ್ದನು. ಈ ವೇಳೆ ನರಸಿಂಹ ಪ್ರಶಾಂತ್‍ನಿಂದ ದೂರ ಹೋಗಿ ವಿಡಿಯೋಗೆ ಪೋಸ್ ನೀಡಿದ್ದಾನೆ. ಆಗ ನರಸಿಂಹ ಆಕಸ್ಮಿಕವಾಗಿ ನೀರು ಆಳವಾಗಿದ್ದ ಸ್ಥಳದಲ್ಲಿ ಜಾರಿ ಬಿದ್ದಿದ್ದು, ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾನೆ.

    ತಕ್ಷಣ ಪ್ರಶಾಂತ್ ರಕ್ಷಣೆಗಾಗಿ ಕೂಗಿಕೊಂಡಿದ್ದಾನೆ. ಆದರೆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ನರಸಿಂಹನನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಗುರುವಾರ ಮೃತದೇಹವನ್ನು ಮೇಲೆತ್ತಿದ್ದಾರೆ.

  • ಕೆಸರಲ್ಲಿ ಸಿಲುಕಿ ಆನೆ ಪರದಾಟ – ಒಂದೆಜ್ಜೆ ಎತ್ತಿಡಲಾಗದೇ ನರಳಾಟ

    ಕೆಸರಲ್ಲಿ ಸಿಲುಕಿ ಆನೆ ಪರದಾಟ – ಒಂದೆಜ್ಜೆ ಎತ್ತಿಡಲಾಗದೇ ನರಳಾಟ

    ಮಂಡ್ಯ: ಕಾಡಿನಿಂದ ನಾಡಿಗೆ ಬಂದ ಆನೆಗಳು ಕೆರೆಯ ಕೆಸರಲ್ಲಿ ಸಿಲುಕಿ ಮೇಲೆ ಬರಲು ಹರಸಾಹಸಪಟ್ಟ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸುಮಾರು ನಾಲ್ಕು ಆನೆಗಳ ಹಿಂಡು ಶುಕ್ರವಾರದಿಂದ ಮಳವಳ್ಳಿ ತಾಲೂಕಿನ ಹಲವೆಡೆ ಓಡಾಡುತ್ತಿದ್ದು ಇಂದು ದೋರನಹಳ್ಳಿ ಗ್ರಾಮದ ಕೆರೆಯಲ್ಲಿ ಬೀಡು ಬಿಟ್ಟಿದ್ದವು. ಕೆರೆ ನೀರಿಲ್ಲದೆ ಒಣಗಿದ್ದು ಅಲ್ಲಲ್ಲಿ ಕೆಸರು ಮಯವಾಗಿತ್ತು. ಈ ವೇಳೆ ಆನೆ ಕೆರೆಯ ಕೆಸರಲ್ಲಿ ಸಿಲುಕಿ ಮೇಲೆ ಬರಲು ಹರಸಾಹಸ ಪಡುತ್ತಿತ್ತು.

    ಆನೆಯನ್ನು ನೋಡಲು ಗ್ರಾಮಸ್ಥರು ಜಮಾಯಿಸುತ್ತಿದ್ದಂತೆ ಕೆಸರಿನಿಂದ ಹೊರಬಂದ ಆನೆ ತನ್ನ ಗುಂಪು ಸೇರಿಕೊಂಡಿದ್ದನ್ನು ನೋಡಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತ ಆನೆಗಳು ತಾವು ಹೋದಲೆಲ್ಲ ಬೆಳೆ ನಾಶ ಮಾಡುತ್ತಿದ್ದು ರೈತರು ಆತಂಕ ಪಡುತ್ತಿದ್ದಾರೆ.

    ಸದ್ಯ ಸ್ಥಳಕ್ಕೆ ಕಿರುಗಾವಲು ಪೊಲೀಸರು ಆಗಮಿಸಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.