Tag: lake

  • ಕೆರೆ ತುಂಬಿದ ಖುಷಿಗೆ 70 ವರ್ಷದ ಬಳಿಕ ಸುಂದರ ತೆಪ್ಪೋತ್ಸವ

    ಕೆರೆ ತುಂಬಿದ ಖುಷಿಗೆ 70 ವರ್ಷದ ಬಳಿಕ ಸುಂದರ ತೆಪ್ಪೋತ್ಸವ

    ಚಿಕ್ಕಮಗಳೂರು: ಶಾಶ್ವತ ಬರದ ತವರಲ್ಲಿ 12 ವರ್ಷಗಳ ಬಳಿಕ ಕೆರೆ ತುಂಬಿದ ಖುಷಿಗೆ ಗ್ರಾಮಸ್ಥರು ಅದ್ಧೂರಿ ಹಾಗೂ ಸುಂದರ ತೆಪ್ಪೋತ್ಸವ ಮಾಡಿ ಬಸವೇಶ್ವರ ಸ್ವಾಮಿಗೆ ಉಘೇ ಅಂದಿದ್ದಾರೆ.

    ಕಡೂರು ತಾಲೂಕು ಸಿಂಗಟಗೆರೆ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದ ಕೆರೆ 12 ವರ್ಷಗಳಿಂದ ತುಂಬಿರಲಿಲ್ಲ. 70 ವರ್ಷಗಳಿಂದ ತೆಪ್ಪೋತ್ಸವ ನಿಂತಿದರಿಂದ ಈ ತಲೆಮಾರಿನ ಜನ ಗ್ರಾಮದ ತೆಪ್ಪೋತ್ಸವವನ್ನೇ ಕಂಡಿರಲಿಲ್ಲ. 75 ವರ್ಷಗಳ ಅವಧಿಯಲ್ಲಿ ಹತ್ತಾರು ಬಾರಿ ಕೆರೆ ತುಂಬಿದ್ರು ಹಣದ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ತೆಪ್ಪೋತ್ಸವ ನಡೆದಿರಲಿಲ್ಲ. ಈ ವರ್ಷ ಕೆರೆ ತುಂಬಿದ ಪರಿಣಾಮ ವೃದ್ಧರು, ಯುವಕ-ಯುವತಿಯರೆಲ್ಲಾ ಸೇರಿ ತೆಪ್ಪೋತ್ಸವ ನಡೆಸಿದ್ದಾರೆ.

    ಜಿಲ್ಲೆಯ ಕಡೂರು ತಾಲೂಕು ಶಾಶ್ವತ ಬರಗಾಲಕ್ಕೆ ತುತ್ತಾದ ಕ್ಷೇತ್ರ. ಕಡೂರು ತಾಲೂಕಿನ ಜನ-ಜಾನುವಾರಗಳಿಗೆ ಕುಡಿಯೋ ನೀರಿಗೂ ಹಾಹಾಕಾರವಿತ್ತು. ಎಷ್ಟು ಹಾಹಾಕಾರವಂದರೆ ಗುಡ್ಡಕ್ಕೆ ಮೇವಿಗೆ ಹೊಡೆದ ದನಕರುಗಳನ್ನ ಅಲ್ಲೆ ಬಿಟ್ಟು ಬರುವಷ್ಟು ಮತ್ತು ಹೋದ ಬೆಲೆಗೆ ಮಾರುವಷ್ಟು ಇವರನ್ನು ಬರಗಾಲ ಕಾಡುತ್ತಿತ್ತು. ಆದರೆ ಈ ವರ್ಷ ಮಳೆಯಿಂದ ಕೆರೆ ತುಂಬಿದ್ದು, ಹಳ್ಳಿಗರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಅದೇ ಖುಷಿಯಲ್ಲಿ ಈ ವರ್ಷ ವಿಧ-ವಿಧದ ಹೂವುಗಳಿಂದ ಅಲಂಕಾರ ಮಾಡಿ ತೆಪ್ಪೋತ್ಸವ ನಡೆಸಿ ಖುಷಿ ಪಟ್ಟಿದ್ದಾರೆ.

    ಹಾಸನ-ಚಿತ್ರದುರ್ಗ-ಚಿಕ್ಕಮಗಳೂರಿನ ಗಡಿಗ್ರಾಮವಾದ ಈ ಹಳ್ಳಿಯ ತೆಪ್ಪೋತ್ಸವದಲ್ಲಿ ಹೊಸದುರ್ಗ, ಕಡೂರು, ಅರಸೀಕೆರೆ ತಾಲೂಕಿನ ಹತ್ತಾರು ಹಳ್ಳಿಯ ಜನ ಒಗ್ಗೂಡಿ ತೆಪ್ಪೋತ್ಸವ ನಡೆಸಿದರು. ಜಾತ್ರೆಯಲ್ಲಿ ಐದು ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು.

  • ಈಜಲು ತೆರಳಿದ್ದ ವಿದ್ಯಾರ್ಥಿ ನೀರು ಪಾಲು

    ಈಜಲು ತೆರಳಿದ್ದ ವಿದ್ಯಾರ್ಥಿ ನೀರು ಪಾಲು

    ಚಾಮರಾಜನಗರ: ಕೆರೆಯಲ್ಲಿ ಈಜಲು ಹೋಗಿ ಮುಳಗಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದಾನೆ.

    ಗುಂಡ್ಲುಪೇಟೆ ತಾಲೂಕಿನ ಅರೇಪುರ ಗ್ರಾಮದ ಕೊರೆಯ ಬಳಿ ಇರುವ ಕೆರೆಯಲ್ಲಿ ಘಟನೆ ನಡೆದಿದ್ದು, ಬೇಗೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಕಿಲ್.ಎನ್ (17) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

    ಕಾಲೇಜು ವತಿಯಿಂದ ಅರೇಪುರ ಗ್ರಾಮದಲ್ಲಿ ಎನ್‍ಎಸ್‍ಎಸ್ ಕ್ಯಾಂಪ್ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಇಂದು ಮಧ್ಯಾಹ್ನ ಊಟ ಮಾಡಿಕೊಂಡು ಪಕ್ಕದಲ್ಲಿಯೇ ಇದ್ದ ಕೆರೆಯಲ್ಲಿ ನಾಲ್ಕು ಜನ ವಿದ್ಯಾರ್ಥಿಗಳ ಜೊತೆಯಲ್ಲಿ ತೆರಳಿ ಕೆರೆಗೆ ಇಳಿದಿದ್ದರು. ಅಕಿಲ್ ಈಜು ಬಾರದೆ ಕೆರೆಯಲ್ಲಿ ಸಾವನ್ನಪ್ಪಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಶವವನ್ನ ಹೊರತೆಗೆದಿದ್ದಾರೆ. ಈ ಸಂಬಂಧ ಬೇಗೂರು ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

  • ಕೆರೆ ಸ್ವಚ್ಛತೆಗೆ ಪಣ ತೊಟ್ಟ ವಿದ್ಯಾರ್ಥಿಗಳು

    ಕೆರೆ ಸ್ವಚ್ಛತೆಗೆ ಪಣ ತೊಟ್ಟ ವಿದ್ಯಾರ್ಥಿಗಳು

    ದಾವಣಗೆರೆ: ಸಾಮಾನ್ಯವಾಗಿ ಎನ್‍ಎಸ್‍ಎಸ್ ಕ್ಯಾಂಪ್, ಎಸ್ ಸಿಸಿ ಕ್ಯಾಂಪ್ ಗಳನ್ನು ಗ್ರಾಮಗಳಲ್ಲಿ ನೆರವೇರಿಸಿ ಗ್ರಾಮಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ. ಆದರೆ ದಾವಣಗೆರೆಯ ಕೆಲ ಕಾಲೇಜು ವಿದ್ಯಾರ್ಥಿಗಳು ಜಿಲ್ಲೆಗೆ ಕುಡಿಯುವ ನೀರನ್ನು ಒದಗಿಸುವ ಕೆರೆಯ ಸ್ವಚ್ಛತೆಗೆ ಪಣ ತೊಟ್ಟಿದ್ದಾರೆ.

    ದಾವಣಗೆರೆ ಕುಂದುವಾಡ ಕೆರೆ ನಗರದ ಜೀವನಾಡಿಯಾಗಿದ್ದು, ಇಡೀ ನಗರಕ್ಕೆ ನೀರುಣಿಸುವ ಕೆರೆಯಾಗಿದೆ. ಆದರೆ ಈ ಕೆರೆಯ ಸುತ್ತ ಗಿಡ-ಗಂಟಿ, ಕಸ-ಕಡ್ಡಿ ಹಾಗೂ ತ್ಯಾಜ್ಯ ನಿರ್ವಹಣೆ ಇಲ್ಲದೆ ಬಡವಾಗಿತ್ತು. ಕೇವಲ ವಾಯು ವಿಹಾರಕ್ಕೆ ಹಾಗೂ ಪ್ರಕೃತಿ ಸೌಂದರ್ಯ ಸವಿಯಲು ಬರುವ ಜನರು ಮಾತ್ರ ಇಲ್ಲಿನ ಪರಿಸರವನ್ನು ಹಾಳು ಮಾಡುವುದು ಬಿಟ್ಟರೆ, ಕೆರೆಯ ಸ್ವಚ್ಛತೆ ಬಗ್ಗೆ ಕಾಳಜಿ ತೋರಿಸುವುದೇ ಕಡಿಮೆಯಾಗಿತ್ತು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್‍ಪಿ ಹನುಮಂತರಾಯ ಒಂದು ದಿನ ಅಧಿಕಾರಿಗಳೊಂದಿಗೆ ಸ್ವಚ್ಛತಾ ಅಭಿಯಾನ ನಡೆಸಿ ಶುಚಿಗೊಳಿಸಿದರು. ಆದರೆ ಒಂದೇ ದಿನಕ್ಕೆ ಸೀಮಿತವಾಗದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.

    ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪಾಲಿಕೆ ಈ ಮೂರು ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನಮ್ಮ ನಗರ ನಮ್ಮ ಕೆರೆ ಸ್ವಚ್ಛತಾ ಆಂದೋಲನ ಮಾಡಿದ್ದರು. ಆಗ ಕೆರೆ ಸ್ವಚ್ಛತೆ ಒಂದು ದಿನಕ್ಕೆ ಮುಗಿಯುವಂತದ್ದಲ್ಲ ಎಂದು ಭಾವಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದರು. ಅದುವೇ ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ಮಟ್ಟದ ವಿಶೇಷ ಸೇವಾ ಶಿಬಿರ.

    ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ನಗರ ಪಾಲಿಕೆ ಸಹಯೋಗದಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಮೋತಿ ವೀರಪ್ಪ ಸರ್ಕಾರಿ ಕಾಲೇಜು, ಸರ್ಕಾರಿ ಬಾಲಕರ ಕಾಲೇಜು, ಎಸ್ ಎಲ್ ಕಾಲೇಜು ಹಾಗೂ ಡಿ. ಮಂಜುನಾಥ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

    ಶಿಬಿರದಲ್ಲಿ ಈ ನಾಲ್ಕು ಕಾಲೇಜುಗಳ ಎನ್ ಎಸ್ ಎಸ್ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳ ಹಾಗೂ ತಮ್ಮ ಕಾಲೇಜುಗಳ ಪ್ರಾಚಾರ್ಯರು, ಶಿಕ್ಷಕ ವೃಂದದ ಮಾರ್ಗದರ್ಶನದಲ್ಲಿ ಕೆರೆಯ ಸುತ್ತಮುತ್ತ ಸ್ವಚ್ಛತಾ ಅಭಿಯಾನ ಮತ್ತು ಶ್ರಮದಾನ ಕೈಗೊಂಡಿದ್ದಾರೆ. ಅಲ್ಲದೆ ಪ್ರತಿ ದಿನ ಕೆರೆ ಅಂಗಳದಲ್ಲಿ ವಾಯು ವಿಹಾರಕ್ಕೆ ಮತ್ತು ಕೆರೆಯ ಸೊಬಗನ್ನು ಸವಿಯಲು ಬರುವ ಸಾರ್ವಜನಿಕರಿಗೆ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಜೊತೆಗೆ ಪ್ರೇರಣೆಯಾಗಿದ್ದಾರೆ.

  • ಸಾವಿಗೆ ಆಹ್ವಾನ ನೀಡುತ್ತಿವೆ ಬೊಂಬೆನಗರಿಯ ಮೈದುಂಬಿದ ಕೆರೆಗಳು

    ಸಾವಿಗೆ ಆಹ್ವಾನ ನೀಡುತ್ತಿವೆ ಬೊಂಬೆನಗರಿಯ ಮೈದುಂಬಿದ ಕೆರೆಗಳು

    ರಾಮನಗರ: ಚನ್ನಪಟ್ಟಣ ತಾಲೂಕಿನ ಕೆರೆ ಕಟ್ಟೆಗಳೆಲ್ಲ ಇದೀಗ ತುಂಬಿ ತುಳುಕುತ್ತಿವೆ. ಅಲ್ಪಸ್ವಲ್ಪ ಮಳೆಯ ಜೊತೆಗೆ ಏತ ನೀರಾವರಿ ಮೂಲಕ ತಾಲೂಕಿನ ಬಹುತೇಕ ಕೆರೆಗಳಿಗೆ ನೀರು ಹರಿಸಿ ತುಂಬಿಸಲಾಗಿದೆ. ಆದರೆ ಇದೀಗ ಈ ತುಂಬಿದ ಕೆರೆಗಳೇ ಆಹಾರಕ್ಕಾಗಿ ಕಾಯುತ್ತಾ ಕುಳಿತಿವೆ.

    ಚನ್ನಪಟ್ಟಣದ ಇಗ್ಗಲೂರು ದೇವೇಗೌಡ ಬ್ಯಾರೇಜ್ ನಿಂದ ತಾಲೂಕಿನ ಸುಮಾರು 100ಕ್ಕೂ ಹೆಚ್ಚು ದೊಡ್ಡ ಹಾಗೂ ಚಿಕ್ಕ ಕೆರೆಗಳಿಗೆ ನೀರು ಹರಿಸಿ ತುಂಬಿಸಲಾಗಿದೆ. ಒಂದೊಂದು ಕೆರೆಗೂ ಒಂದೊಂದು ಲಿಂಕ್ ಮೂಲಕ ನೀರು ಹರಿಸುವುದಲ್ಲದೇ ಹಲವಾರು ಕೆರೆಗಳಿಗೆ ನೀರನ್ನು ಲಿಫ್ಟ್ ಮಾಡಿ ತುಂಬಿಸಲಾಗಿದೆ.

    ಇದೀಗ ಮೈತುಂಬಿ ನಿಂತಿರುವ ಕೆರೆಗಳ ಎರಡು ಬದಿಗಳಲ್ಲಿ ತಡೆಗೋಡೆಗಳೇ ಇಲ್ಲದಿರುವುದು ವಾಹನ ಸವಾರರನ್ನು ಚಿಂತೆಗೀಡು ಮಾಡಿದೆ. ಕೆರೆಯ ಏರಿಯ ರಸ್ತೆಗಳು ಚಿಕ್ಕದಾಗಿದೆ. ಸ್ವಲ್ಪ ಯಾಮಾರಿದ್ರು ಯಮಪುರಿಗೆ ಸೇರುವುದು ಫಿಕ್ಸ್ ಆಗಿದ್ದು ವಾಹನ ಅಂಗೈನಲ್ಲಿ ಜೀವ ಹಿಡಿದು ಓಡಾಡುವಂತಾಗಿದೆ.

    ಕಿಲ್ಲರ್ ಲೇಕ್ಸ್:
    ಚನ್ನಪಟ್ಟಣದ ತಿಟ್ಟಮಾರನಹಳ್ಳಿ ಕೆರೆ, ಹೊಂಗನೂರು, ಮತ್ತಿಕೆರೆ, ಸುಳ್ಳೇರಿ, ಸೋಗಾಲ, ಸಿಂಗ್ರಾಜಿಪುರ ಸೇರಿದಂತೆ ಅನೇಕ ದೊಡ್ಡ ದೊಡ್ಡ ಕೆರೆಗಳು ತಡೆಗೋಡರಯನ್ನೇ ಹೊಂದಿಲ್ಲ. ಇದರಿಂದ ಕೆರೆಯ ಬದಿಯ ರಸ್ತೆಗಳಲ್ಲಿ ಓಡಾಡುವುದು ಅಸಾಧ್ಯವಾಗಿದೆ.

    ಅದರಲ್ಲೂ ತಿಟ್ಟಮಾರನಹಳ್ಳಿ ಕೆರೆ ಸಾಕಷ್ಟು ಸಾವುಗಳನ್ನು ಕಂಡಿದೆ. ತಡೆಗೋಡೆಗಾಗಿಯೇ ಪ್ರತಿಭಟನೆ ರೂಪದಲ್ಲಿ ಮೇಕೆ ಬಲಿ ನೀಡುವ ಮೂಲಕ ಕೆರೆಗೆ ಆಹಾರ ನೀಡಿ ಅಪಘಾತ ನಡೆಯದಂತೆ ಪೂಜೆ ಸಲ್ಲಿಸಿದರು. ಆದರೂ ಕೂಡ ಈ ಭಾಗದಲ್ಲಿ ಅಪಘಾತಗಳು, ಕೆರೆಗೆ ವಾಹನ ಬೀಳುವುದು ನಿಂತೇ ಇಲ್ಲ.

    ಹೀಗಾಗಿ ತಾಲೂಕಿನ ಬಹುತೇಕ ಕೆರೆಗಳಿಗೆ ಶೀಘ್ರವಾಗಿ ತಡೆಗೋಡೆ ನಿರ್ಮಿಸಿ ಪ್ರಾಣಹಾನಿಯನ್ನು ತಪ್ಪಿಸುವಂತೆ ತಾಲೂಕಿನ ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ. ಅಲ್ಲದೆ ತಡೆಗೋಡೆ ನಿರ್ಮಿಸದಿದ್ದರೆ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

  • ಸಾಯ್ತೀನಿ ಅಂದವ ಕೊನೆ ಕ್ಷಣದಲ್ಲಿ ಮನಸು ಬದಲಾವಣೆ- ಕೆರೆಗೆ ಹಾರಿ ಕೂಗಿಕೊಂಡ

    ಸಾಯ್ತೀನಿ ಅಂದವ ಕೊನೆ ಕ್ಷಣದಲ್ಲಿ ಮನಸು ಬದಲಾವಣೆ- ಕೆರೆಗೆ ಹಾರಿ ಕೂಗಿಕೊಂಡ

    ಬೆಂಗಳೂರು: ನನಗೆ ಜೀವನದಲ್ಲಿ ಜಿಗುಪ್ಸೆ ಬಂದಿದೆ, ನಾನು ಬದುಕಿ ಸಾಧಿಸೋದು ಏನು ಇಲ್ಲ, ಸಾಯುವುದೊಂದೆ ಪರಿಹಾರ ಅಂದುಕೊಂಡು ಸಾಯಲು ಕೆರೆಗೆ ಇಳಿದಿದ್ದ ವ್ಯಕ್ತಿ ಕೊನೆಯ ಕ್ಷಣದಲ್ಲಿ ಮನಸ್ಸು ಬದಲಿಸಿದ್ದಾನೆ. ಬಳಿಕ ನನ್ನನ್ನು ಉಳಿಸಿ ಎಂದು ಕೂಗಿಕೊಂಡಿದ್ದಾನೆ.

    ಐವತ್ತು ವರ್ಷದ ಸುರೇಶ್ ಹೊಸಕೋಟೆ ಬಳಿಯ ತಾವರೆಕೆರೆ ಕೆರೆಗೆ ಇಳಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ನೀರಿಗೆ ಇಳಿದ ಬಳಿಕ ಮನಸ್ಸು ಬದಲಾಗಿದೆ. ಬದುಕಬೇಕು ಎಂದು ಮೇಲೆ ಬರಲು ಯತ್ನಿಸಿದರೂ ಕೆಸರಿನಲ್ಲಿ ಸಿಲುಕಿ ಬರಲು ಆಗದೇ ಕೂಗಿಕೊಂಡಿದ್ದಾನೆ.

    ನೀರಿನಲ್ಲಿ ಸಿಲುಕಿದ್ದ ಸುರೇಶನನ್ನು ಸ್ಥಳೀಯರು ನೀರಿನಿಂದ ಮೇಲೆ ಕರೆತಂದಿದ್ದು, ಗ್ರಾಮಸ್ಥರು ಬುದ್ಧಿವಾದ ಹೇಳಿದ್ದಾರೆ.

  • ಶಾಲೆ ಬಿಟ್ಟ ಬಳಿಕ ಮೀನು ಹಿಡಿಯಲು ಹೋದ ವಿದ್ಯಾರ್ಥಿ ಕೆರೆಗೆ ಬಿದ್ದು ಸಾವು

    ಶಾಲೆ ಬಿಟ್ಟ ಬಳಿಕ ಮೀನು ಹಿಡಿಯಲು ಹೋದ ವಿದ್ಯಾರ್ಥಿ ಕೆರೆಗೆ ಬಿದ್ದು ಸಾವು

    ರಾಮನಗರ: ಶಾಲೆ ಬಿಟ್ಟ ಬಳಿಕ ಗೆಳೆಯರ ಜೊತೆ ಮೀನು ಹಿಡಿಯಲು ಹೋಗಿದ್ದ ವಿದ್ಯಾರ್ಥಿಯೋರ್ವ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ರಾಮನಗರದ ರಂಗರಾಯರದೊಡ್ಡಿ ಕೆರೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

    ರಾಮನಗರದ ನಾಗರಕಟ್ಟೆ ನಿವಾಸಿ ಮಂಜುಳಾ ಹಾಗೂ ಮಂಜುನಾಥ್ ದಂಪತಿಯ ಪುತ್ರ ಅರ್ಜುನ್ (13) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ವಿದ್ಯಾರ್ಥಿಯಾಗಿದ್ದಾನೆ.

    ಮೃತ ದುರ್ದೈವಿ ಅರ್ಜುನ್ ರಾಮನಗರದಲ್ಲಿನ ಐಜೂರಿನ ಸರ್ಕಾರಿ ಕನ್ನಡ – ಉರ್ದು ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದ. ಇಂದು ಶನಿವಾರವಾಗಿದ್ದರಿಂದ ಮಧ್ಯಾಹ್ನದ ವೇಳೆಗೆ ಶಾಲೆಯಿಂದ ಹೊರಟ ಅರ್ಜುನ್ ತನ್ನ ಇಬ್ಬರು ಸ್ನೇಹಿತರ ಜೊತೆ ನೇರವಾಗಿ ರಾಯರದೊಡ್ಡಿ ಕೆರೆಗೆ ತೆರಳಿದ್ದಾನೆ. ಅಲ್ಲದೇ ಜೊತೆಯಲ್ಲಿ ಮೀನು ಹಿಡಿಯಲು ಗಾಳವನ್ನು ಸಹ ತೆಗೆದುಕೊಂಡು ಮೂವರು ಸ್ನೇಹಿತರು ಕೆರೆಗೆ ಹೋಗಿದ್ದರು.

    ಕೆರೆಯ ದಡದಲ್ಲಿ ಮೀನಿಗೆ ಗಾಳ ಹಾಕಿಕೊಂಡು ಮೂರು ಜನ ಸ್ನೇಹಿತರು ಸಹ ಕುಳಿತಿದ್ದರು. ಈ ವೇಳೆ ಅರ್ಜುನ್ ಸ್ವಲ್ಪ ಮುಂದೆ ಹೋಗಿದ್ದು ಮೀನಿಗೆ ಗಾಳವನ್ನು ಹಿಡಿದು ಕುಳಿತಿದ್ದಾನೆ. ಈ ವೇಳೆ ಅರ್ಜುನ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಅರ್ಜುನ್ ಕೆರೆಯಲ್ಲಿ ಕಾಲು ಜಾರುತ್ತಿದ್ದಂತೆ ಆತನ ಜೊತೆಗಿದ್ದ ಸ್ನೇಹಿತರು ಜೋರಾಗಿ ಕೂಗಿಕೊಂಡಿದ್ದಾರೆ. ಆದರೆ ಕೆರೆಯ ಬಳಿ ಯಾರೂ ಇಲ್ಲದ ಕಾರಣ ಅರ್ಜುನ್‍ನನ್ನು ಬದುಕಿಸಲು ಸಾಧ್ಯವಾಗಿಲ್ಲ.

    ಈ ಘಟನೆಯ ಬಳಿಕ ಅರ್ಜುನ್‍ನ ಸ್ನೇಹಿತರು ಮಾಹಿತಿಯನ್ನು ನೀಡಿದ್ದು ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಹೊರತೆಗೆದಿದ್ದಾರೆ. ಈ ಘಟನೆ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಳ್ಳಂಬೆಳಗ್ಗೆ ಜಿಲ್ಲಾಧಿಕಾರಿ, ಎಸ್‍ಪಿಯಿಂದ ಕೆರೆ ಸ್ವಚ್ಛತೆ

    ಬೆಳ್ಳಂಬೆಳಗ್ಗೆ ಜಿಲ್ಲಾಧಿಕಾರಿ, ಎಸ್‍ಪಿಯಿಂದ ಕೆರೆ ಸ್ವಚ್ಛತೆ

    ದಾವಣಗೆರೆ: ಇಂದು ಬೆಳ್ಳಂಬೆಳಗ್ಗೆ ಜಿಲ್ಲಾಡಳಿತದ ವತಿಯಿಂದ ದಾವಣಗೆರೆಯ ಕುಂದುವಾಡ ಕೆರೆ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

    ನಮ್ಮ ಕೆರೆ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಸಿದ್ದು, ಬೆಳಗ್ಗೆ 6 ಗಂಟೆಯಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್‍ಪಿ ಹನುಮಂತರಾಯ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಿಸಿದ್ದು, ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಗೊಳಿಸಿದ್ದಾರೆ.

    ಜಿಲ್ಲಾಧಿಕಾರಿಗಳು ಹಾಗೂ ಎಸ್.ಪಿ ಹನುಮಂತರಾಯ ಕೂಡ ಸ್ವತಃ ಕೆರೆಯ ಏರಿ ಮೇಲಿರುವ ಕಳೆಯನ್ನು ತೆಗೆದು ಸ್ವಚ್ಚಗೊಳಿಸಿದರು. ಪ್ರತಿನಿತ್ಯ ಸಾರ್ವಜನಿಕರು ಕೆರೆಯ ವಾತವರಣದಲ್ಲಿ ವಾಕಿಂಗ್ ಮಾಡುವಾಗ ಕೆಲ ಕಾಲ ಸ್ವಚ್ಛತೆ ಮಾಡಿದರೆ ಇಡೀ ನಗರವನ್ನೇ ಶುಚಿಯಾಗಿಡಬಹುದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

  • ಹುಳಿಮಾವು ಕೆರೆ ದುರಂತ ನಡೆದು 2 ದಿನ – ತುಂಬಿದ್ದ ಕೆರೆಯನ್ನ ಒಡೆದವರು ಯಾರು?

    ಹುಳಿಮಾವು ಕೆರೆ ದುರಂತ ನಡೆದು 2 ದಿನ – ತುಂಬಿದ್ದ ಕೆರೆಯನ್ನ ಒಡೆದವರು ಯಾರು?

    ಬೆಂಗಳೂರು: ಹೊಸಕೆರೆಹಳ್ಳಿಯ ಕೆರೆ ಕಟ್ಟೆ ಒಡೆದು ಸಂಭವಿಸಿದ ಅನಾಹುತದ ಬೆನ್ನಲ್ಲೇ, ಇದೀಗ ಹುಳಿಮಾವು ಕೆರೆ ಒಡೆದು ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಕೆರೆಯ ನೀರು ಮನೆಗಳಿಗೆ ನುಗ್ಗಿರುವ ಪರಿಣಾಮ ಸಾವಿರಾರು ಮನೆಗಳು ನೀರಿನಲ್ಲಿ ಜಲಾವೃತವಾಗಿದ್ದು, ಜನ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.

    ಹೌದು. ಮಳೆಯಿಂದ ತುಂಬಿದ್ದ ಹುಳಿಮಾವು ಕೆರೆಯನ್ನ ಒಡೆದವರು ಯಾರು ಅನ್ನೋ ಚರ್ಚೆ ಇದೀಗ ಶುರುವಾಗಿದೆ. ಪಾಲಿಕೆಯ ಮೇಯರ್ ಏನೋ ಸ್ಥಳೀಯ ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ ಅಂತಿದ್ದಾರೆ. ಆದರೆ ಕೆರೆ ಒಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಲಮಂಡಳಿಯ ಅಸಿಸ್ಟೆಂಟ್ ಎಂಜಿನಿಯರ್ ಕಾರ್ತಿಕ್ ರನ್ನ ಹುಳಿಮಾವು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳೀಯ ವ್ಯಕ್ತಿಯಿಂದ ಈ ಅವಾಂತರ ಆಗಿದ್ದರೆ ಕಾರ್ತಿಕ್ ರನ್ನ ಯಾಕೆ ವಶಕ್ಕೆ ಪಡೆಯುತ್ತಿದ್ದರು. ಸದ್ಯ ಈ ದುರಂತಕ್ಕೆ ಜಲಮಂಡಳಿ, ಪಾಲಿಕೆ, ಹಾಗೂ ಬಿಡಿಎ ನೇ ಹೊಣೆ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸುತ್ತಿದೆ.

    ಬಿಡಿಎ ಅಧೀನದಲ್ಲಿದ್ದ ಈ ಕೆರೆಯನ್ನ 2016ರಲ್ಲಿ ರಾಜ್ಯ ಸರ್ಕಾರ, ಬಿಬಿಎಂಪಿಗೆ ಹಸ್ತಾಂತರಿಸಿತ್ತು. ಆದರೆ ಬಿಡಿಎ ಕೆರೆ ಒತ್ತುವರಿ, ಜಲಾನಯ ಪ್ರದೇಶ, ಸರಹದ್ದು ಸರ್ವೆ ಮಾಡಿ ಪಾಲಿಕೆಗೆ ಹಸ್ತಾಂತರ ಮಾಡಬೇಕಿತ್ತು. ಇದುವರೆಗೂ ಆ ಕೆಲಸ ಆಗಿರಲಿಲ್ಲ. ಅಭಿವೃದ್ಧಿ ಕಾಮಗಾರಿಗೆ ಅಡ್ಡಿ ಅಂತ ಬಿಡಿಎ, ನೀರನ್ನು ಹೊರ ತೆಗೆಯಲು ಯತ್ನಿಸಿದಾಗ ಈ ಅವಾಂತರ ಆಗಿದೆ. ಆದರೆ ಇದನ್ನ ಪಾಲಿಕೆ ಅಲ್ಲಗೆಳೆಯುತ್ತಿದೆ. ಮತ್ತೊಂದೆಡೆ ಇದೇ ಕೆರೆಯ ಮೇಲ್ಭಾಗದಲ್ಲಿ ಜಲಮಂಡಳಿಯಿಂದ ಎಸ್ ಟಿಪಿ ಪ್ಲಾಂಟ್ ಕೆಲಸ ನಡೆಯುತ್ತಿತ್ತು. ಹೀಗಾಗಿ ಜಲಮಂಡಳಿಯವ್ರ ನಿರ್ಲಕ್ಷ್ಯದಿಂದಲೂ ಈ ದುರಂತ ಆಗಿದೆ ಅಂತ ಸ್ಥಳೀಯರು ದೂರಿದ್ದಾರೆ.

    ಬಿಬಿಎಂಪಿ, ಬಿಡಿಎಯ ಕೆಲಸದಿಂದ ಇಂದು ಸಾವಿರಾರು ಜನ ಮನೆ ತೊರೆದು ಬೀದಿಗೆ ಬಂದಿದ್ದಾರೆ. ತಮ್ಮದಲ್ಲದ ತಪ್ಪಿಗೆ ನಿರಾಶ್ರಿತರ ಕೇಂದ್ರದಲ್ಲಿ ಮಕ್ಕಳನ್ನ ಕಟ್ಟಿಕೊಂಡು ವಾಸ್ತವ್ಯ ಮಾಡುತ್ತಿದ್ದಾರೆ. ಕಣ್ಣಿರಿನ ಮೂಲಕ ತಮ್ಮ ನೋವಿನ ಸಂಕಟವನ್ನ ಹೊರ ಹಾಕುತ್ತಿದ್ದಾರೆ. ಆರೇಳು ಲೇಔಟ್ ಗಳಲ್ಲಿ ನೀರು ತುಂಬಿ ಪರಸ್ಥಿತಿ ಬಿಗಡಾಯಿಸಿದೆ. ಸಂಚಾರ ವ್ಯವಸ್ಥೆ ಅಸ್ಥವ್ಯಸ್ಥಗೊಂಡಿದೆ. ಸಿಎಂ ಬಿಎಸ್ ಯಡಿಯೂರಪ್ಪನವರ ಸೂಚನೆ ಮೇರೆಗೆ, ಸೋಮವಾರ ಘಟನಾ ಸ್ಥಳಕ್ಕೆ ಸಚಿವ ಆರ್. ಅಶೋಕ್, ವಿ. ಸೋಮಣ್ಣ, ಸಂಸದ ತೇಜಸ್ವಿ ಸೂರ್ಯ ಕೂಡ ಭೇಟಿ ನೀಡಿ, ಪರಿಶೀಲಿಸಿದರು. ಈ ದುರಂತದಲ್ಲಿ ತಪ್ಪಿತಸ್ಥರು ಯಾರೇ ಇರಲಿ ಕ್ರಮಕೈಗೊಳ್ಳೋ ಕೆಲಸ ಮಾಡುತ್ತೇವೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.

    ಹುಳಿಮಾವು ಕೆರೆ ಅಭಿವೃದ್ಧಿಗೆ ಪಾಲಿಕೆ ಆರು ಕೋಟಿ ರೂಪಾಯಿಯನ್ನ ತನ್ನ ಬಜೆಟ್ ನಲ್ಲಿ ಮೀಸಲಿಟ್ಟಿತ್ತು. ಪಾಲಿಕೆ ಇದೇ ಅನುದಾನದಲ್ಲಿಯೇ ಕೆರೆಯನ್ನ ಸ್ವಚ್ಛಗೊಳಿಸುವ ವೇಳೆ ಈ ದುರಂತ ಆಯ್ತಾ ಅಥವಾ ಬಿಡಿಎನ ಅವೈಜ್ಞಾನಿಕ ನಿರ್ಧಾರದಿಂದ ಆಯ್ತಾ ಎಂಬ ಪ್ರಶ್ನೆ ಮೂಡಿದೆ. ಇದೆರೆಡು ಹೊರತುಪಡಿಸಿ, ಜಲಮಂಡಳಿಯಿಂದ ನಡೆಯುತ್ತಿದ್ದ ಕೆಲಸದಿಂದ ಈ ದುರಂತ ನಡೀತಾ ಅನ್ನೋದು ಪೊಲೀಸ್ ತನಿಖೆಯಿಂದಲೇ ತಿಳಿದುಬರಬೇಕಿದೆ.

  • ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ ಸಾವು

    ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ ಸಾವು

    – 24 ಗಂಟೆ ಕಳೆದರೂ ಶವಕ್ಕಾಗಿ ಶೋಧ

    ಚಾಮರಾಜನಗರ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಬೆಲವತ್ತ ಗ್ರಾಮದಲ್ಲಿ ನಡೆದಿದೆ.

    ಭಾನುವಾರ ಹೊಂಗನೂರು ಗ್ರಾಮದ ಲೋಕೇಶ್(15) ತನ್ನ ಸ್ನೇಹಿತರೊಂದಿಗೆ ಈಜಲು ಬೆಲವತ್ತ ಕೆರೆಗೆ ಹೋಗಿದ್ದನು. ಆದರೆ ಈಜಲು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಾಲಕನ ಶವಕ್ಕಾಗಿ ಸ್ಥಳೀಯರು ಭಾನುವಾರದಿಂದಲೂ ಹುಡುಕಾಟ ನಡೆಸುತ್ತಿದ್ದಾರೆ. 24 ಗಂಟೆ ಕಳೆದರೂ ಸಹ ಬಾಲಕನ ಶವ ಇನ್ನೂ ಪತ್ತೆಯಾಗಿಲ್ಲ.

    24 ಗಂಟೆ ಕಳೆದರೂ ಸ್ಥಳಕ್ಕೆ ನುರಿತ ಈಜುದಾರರನ್ನ ಕರೆಸಿ ಶವಪತ್ತೆ ಮಾಡದೇ ಇರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಬಾಲಕನ ಶವಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಈ ಸಂಬಂಧ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆರೆಯ ಕಟ್ಟೆ ಒಡೆದು ನೂರಾರು ಮನೆಗಳಿಗೆ ನುಗ್ಗಿದ ನೀರು

    ಕೆರೆಯ ಕಟ್ಟೆ ಒಡೆದು ನೂರಾರು ಮನೆಗಳಿಗೆ ನುಗ್ಗಿದ ನೀರು

    ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಕೆರೆಯನ್ನು ಸ್ವಚ್ಛ ಮಾಡುವಾಗ ಕೆರೆ ಕಟ್ಟೆ ಒಡೆದು ಮನೆಗಳಿಗೆ ನೀರು ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್‍ನಲ್ಲಿ ನಡೆದಿದೆ.

    ಹುಳಿಮಾವು ಕೆರೆಯ ಕಟ್ಟೆ ಒಡೆದು ಈ ಅವಾಂತರ ಸೃಷ್ಟಿಯಾಗಿದೆ. ಇಂದು ಬೆಳಗ್ಗೆಯಿಂದ ಬಿಬಿಎಂಪಿ ವತಿಯಿಂದ ಕೆರೆಯ ಕಾಮಗಾರಿ ಕೆಲಸ ನಡೆಯುತ್ತಿತ್ತು. ಈ ವೇಳೆ ಕೆರೆಯ ನೀರನ್ನು ಬೇರೆಡೆಗೆ ಹರಿಸುವ ಕೆಲಸ ನಡೆಯುತ್ತಿತ್ತು. ಆಗ ಕೆರೆಯ ಕಟ್ಟೆ ಒಡೆದಿದ್ದು, 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

    ಹುಳಿಮಾವು ಕೆರೆ ಒಟ್ಟು 140 ಎಕರೆ ಇರುವುದರಿಂದ ಕೆರೆಯ ಅಕ್ಕಪಕ್ಕದ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಶಾಂತಿನಿಕೇತನ, ಕೃಷ್ಣನಗರ, ಹುಳಿಮಾವು ಸೇರಿದಂತೆ ಹಲವು ಲೇಔಟ್‍ಗಳಿಗೆ ನೀರು ನುಗ್ಗಿದೆ. ನೀರನ್ನ ತಡೆಯಲು ಪಾಲಿಕೆಯ ಅಧಿಕಾರಿಗಳು ಹರಸಹಾಸ ಪಡುತ್ತಿದ್ದಾರೆ. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದರಿಂದ ಸ್ಥಳೀಯರು ಮತ್ತಷ್ಟು ಮನೆಗಳು ಮುಳುಗಡೆಯಾಗುವ ಆತಂಕದಲ್ಲಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪಾಲಿಕೆಯ ಕಾರ್ಪೋರೇಟರ್‌ಗಳು ಮತ್ತು ಕಮಿಷನರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆದರೆ ಸ್ಥಳೀಯ ಕಾರ್ಪೋರೇಟರ್ ಅನುಮತಿಯಿಲ್ಲದೇ ಕೆರೆಯ ನೀರನ್ನ ಖಾಲಿ ಮಾಡುವ ಕೆಲಸ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.