Tag: lake

  • ಧರ್ಮಸ್ಥಳ ಯೋಜನೆಯಡಿ ಅಭಿವೃದ್ಧಿಗೊಂಡ ಕೆರೆಗೆ ಬಾಗಿನ ಅರ್ಪಿಸಿದ ವೀರೇಂದ್ರ ಹೆಗ್ಗಡೆ

    ಧರ್ಮಸ್ಥಳ ಯೋಜನೆಯಡಿ ಅಭಿವೃದ್ಧಿಗೊಂಡ ಕೆರೆಗೆ ಬಾಗಿನ ಅರ್ಪಿಸಿದ ವೀರೇಂದ್ರ ಹೆಗ್ಗಡೆ

    ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದ ಚನ್ನಬಸವೇಶ್ವರ ಸಮುದಾಯ ಭವನದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಗ್ರಾಮದ ಕೆರೆ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮದ ಕೆರೆ ಲೋಕಾರ್ಪಣೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಸಾಧನಾ ಸಮಾವೇಶ ಮತ್ತು ಸುಜ್ಞಾನ ನಿಧಿ ಶಿಷ್ಯವೇತನ ಕಾರ್ಯಕ್ರಮಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ ಡಾ. ವೀರೇಂದ್ರ ಹೆಗ್ಗಡೆ ಅವರು ಚಾಲನೆ ನೀಡಿದರು.

    ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರನ್ನು ಮತ್ತು ನಾಗರಿಕರನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಕೆಲ ವರ್ಷಗಳಲ್ಲಿ ಬರಗಾಲ ಬಂದ ಪ್ರದೇಶಗಳ ನಾಗರಿಕರು ಮಳೆಗಾಗಿ ಕಪ್ಪೆಗಳ ಮದುವೆ ಮಾಡಿದ್ದರು. ಕೆಲವೆಡೆ ಕತ್ತೆಗಳ ಮೆರವಣಿಗೆ ಮಾಡಿ ವರುಣನಕೃಪೆ ಬೇಡಿದ್ದರು. ಆದರೆ ಬೆಳೆಯುತ್ತಿರುವ ಜನಸಂಖ್ಯೆ ಅನುಗುಣವಾಗಿ ನೀರಿನ ಲಭ್ಯತೆಯ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳಲಿಲ್ಲ. ಜಲಮೂಲಗಳನ್ನು ಸಂರಕ್ಷಿಸದೇ ಕುಡಿಯುವ ನೀರಿಗಾಗಿ ಸರ್ಕಾರವನ್ನು ಜನರು ದೂರುತ್ತಾರೆ. ಈ ಸಮಸ್ಯೆ ಅರಿತ ಧರ್ಮಸ್ಥಳ ಯೋಜನೆ ರಾಜ್ಯಾದ್ಯಂತ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಸರ್ಕಾರ, ಸ್ಥಳೀಯರು ಮತ್ತು ಯೋಜನೆಯ ಸಹಭಾಗಿತ್ವದಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಕೈಹಾಕಿ ಯಶಸ್ವಿಯಾಗಿದೆ. ಈ ಕಾರ್ಯಕ್ರಮದ ಮೂಲಕ ಜಲಮೂಲಗಳ ಸಂರಕ್ಷಣೆಯಿಂದ ಮಾತ್ರ ಜೀವಜಲ ಪಡೆಯಲು ಸಾಧ್ಯ ಎಂಬ ಸಂದೇಶವನ್ನು ಮನುಕುಲಕ್ಕೆ ನೀಡುವ ಉದ್ದೇಶವನ್ನು ಯೋಜನೆ ಹೊಂದಿದೆ ಎಂದು ಮಾಹಿತಿ ನೀಡಿದರು.

    ಹಿಂದಿನ ದಿನಗಳಲ್ಲಿ ಮನೆ ಕೆಲಸಗಳಿಗೆ ಮಾತ್ರ ಸೀಮಿತರಾಗಿದ್ದ ಗೃಹಿಣಿಯರಿಗೆ ಪ್ರಪಂಚ ಜ್ಞಾನ, ವ್ಯವಹಾರ ಜ್ಞಾನ, ಸ್ವಾವಲಂಬನೆ, ಉಳಿತಾಯ ಮನೋಭಾವ ಮತ್ತಿತರ ಜೀವನ ಪರಿವರ್ತನೆ ತರುವ ಸಂಗತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಶೇಷ ಪ್ರಯತ್ನ ಕೈಗೊಂಡಿದೆ. ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರ ಸಬಲೀಕರಣದತ್ತ ಹೆಜ್ಜೆ ಹಾಕುವ ಪ್ರಯತ್ನ ನಡೆದಿದೆ ಎಂದರು.

    ಸಮಾವೇಶದಲ್ಲಿ ಸುಜ್ಞಾನ ನಿಧಿ ಶಿಷ್ಯವೇತನ ವಿತರಿಸಿ ಮಾತನಾಡಿದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್, ಧರ್ಮಸ್ಥಳ ಮಹಿಳಾ ಸ್ವ-ಸಹಾಯ ಸಂಘಗಳ ಮಾದರಿಯಲ್ಲಿ ತಾವೂ ಸಹ ಈ ಹಿಂದೆ ಅರಿಷಿನ-ಕುಂಕುಮ ಕಾರ್ಯಕ್ರಮ ಆಯೋಜಿಸುವ ಮೂಲಕ ತಾಲೂಕಿನ ಸಾವಿರಾರು ಮಹಿಳೆಯನ್ನು ಸಂಘಟಿಸಿ ಮಹಿಳಾ ಸಬಲೀಕರಣದತ್ತ ಪ್ರಯತ್ನ ನಡೆಸಿರುವುದಾಗಿ ಹೇಳಿದರು. ಬಳಿಕ ಅವರು ತಾಲೂಕಿನ ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಯೋಜನೆಯ ವತಿಯಿಂದ ಮಂಜೂರಾದ ಅನುದಾನದ ಚೆಕ್ ವಿತರಿಸಿದರು.

    ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಚಿಕ್ಕಮುನವಳ್ಳಿ ಆರೂಢಮಠದ ಶಿವಪುತ್ರ ಶ್ರೀಗಳು ಆಶೀರ್ವಚನ ನೀಡಿದರು. ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ಬಿ ಹಿರೇಮಠ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಯೋಜನಾಧಿಕಾರಿಗಳಾದ ಪ್ರಭಾಕರ ನಾಯ್ಕ, ಮಂಜುನಾಥ ಹೆಗಡೆ, ಸುರೇಂದ್ರ ಆಚಾರ್ಯ, ಪ್ರಶಾಂತ ನಾಯ್ಕ, ಪುರುಷೋತ್ತಮ, ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಒಕ್ಕೂಟದ ಅಧ್ಯಕ್ಷೆ ಅನ್ನಪೂರ್ಣ ಬಾಗೇವಾಡಿ, ಬಿಜೆಪಿ ಬ್ಲಾಕ್ ಅಧ್ಯಕ್ಷ ಸಂಜಯ ಕುಬಲ, ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ರಾಜು ರಪಾಟಿ, ಅಪ್ಪಯ್ಯ ಕೋಡೊಳಿ, ವ್ಯವಸ್ಥಾಪಕ ಬಸವರಾಜ ಕುರಹಟ್ಟಿ, ಜೀವನದಾಸ್ ಕುಮಾರ, ಪ್ರವೀಣ ದೊಡಮನಿ ಸೇರಿದಂತೆ ಯೋಜನೆಯ ಅಧಿಕಾರಿಗಳು, ಸಿಬ್ಬಂದಿ, ಸೇವಾ ಪ್ರತಿನಿಧಿಗಳು, ಸ್ವ-ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳು, ಸದಸ್ಯರು, ಲಿಂಗನಮಠ ಹಾಗೂ ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

    ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈಶಸ್ತವನ ಪಠಿಸಿದರು. ಜಿಲ್ಲಾ ನಿರ್ದೇಶಕ ಶೀನಪ್ಪ ಮೂಲ್ಯ ಸ್ವಾಗತಿಸಿದರು. ಸಂತೋಷ ನಾಯ್ಕ ನಿರೂಪಿಸಿದರು. ರಿಯಾಜ್ ಅತ್ತಾರ ವಂದಿಸಿದರು. ಯೋಜನೆಯ ಸ್ವ-ಸಹಾಯ ಸಂಘಗಳ ಸಾಧನಾ ಸಮಾವೇಶಕ್ಕೆ ಚಾಲನೆ ನೀಡಬೇಕಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಬದಲಿಗೆ ತಮ್ಮ ಸಂದೇಶವನ್ನು ಆಪ್ತರ ಮೂಲಕ ಕಳಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಜೊತೆಗೆ ಆಹ್ವಾನ ಪತ್ರಿಕೆಯಲ್ಲಿ ನಮೂದಿಸಿದಂತೆ ಜಿ.ಪಂ. ಸದಸ್ಯೆ ಅಂಜನಾ ದೇಸಾಯಿ, ತಾ.ಪಂ. ಸದಸ್ಯೆ ಪೂಜಾ ಹರಿಜನ ಅವರೂ ಸಹ ಕಾರ್ಯಕ್ರಮದಿಂದ ದೂರ ಉಳಿದಿದ್ದರು.

  • 4 ತಿಂಗ್ಳು ಶ್ರಮವಹಿಸಿ ಕೆರೆಗೆ ನೀರು ತುಂಬಿಸಿದ್ರು- ಯಗಟಿಯ ಗಣಪತಿ ಸಮಿತಿ ಪಬ್ಲಿಕ್ ಹೀರೋ

    4 ತಿಂಗ್ಳು ಶ್ರಮವಹಿಸಿ ಕೆರೆಗೆ ನೀರು ತುಂಬಿಸಿದ್ರು- ಯಗಟಿಯ ಗಣಪತಿ ಸಮಿತಿ ಪಬ್ಲಿಕ್ ಹೀರೋ

    ಚಿಕ್ಕಮಗಳೂರು: ಜಿಲ್ಲೆಯ ತಾಲೂಕು ಒಂದು ಶಾಶ್ವತ ಬರಗಾಲಕ್ಕೆ ತುತ್ತಾಗಿತ್ತು. ಜನ-ಜಾನುವಾರುಗಳಿಗೆ ಕುಡಿಯೋ ನೀರಿಗೂ ಹಾಹಾಕಾರ. ಗುಡ್ಡಕ್ಕೆ ಮೇವಿಗೆಂದು ಹೊಡೆದ ದನಕರುಗಳನ್ನ ಅಲ್ಲೇ ಬಿಟ್ಟು ಬರುವಷ್ಟು, ಬಂದ ರೇಟಿಗೆ ಮಾರುವಷ್ಟು ನೀರಿಗಾಗಿ ಪರದಾಡವಿತ್ತು. ಸರ್ಕಾರ ಕೊಡುತ್ತಿದ್ದ ನೀರು ಒಂದಕ್ಕಾದ್ರೆ ಒಂದಕ್ಕಾಗುತ್ತಿರಲಿಲ್ಲ. ಹೀಗಿರುವಾಗ ಆ ಊರಿನ ಯುವಕರೇ ತಮ್ಮ ಕೆರೆ ತುಂಬಿಸಿಕೊಳ್ಳುವ ಹಠಕ್ಕೆ ಬಿದ್ರು. ಊರಿಗೆ-ಊರೇ ಶ್ರಮದಾನಕ್ಕೆ ನಿಂತಿತು. ಇಪ್ಪತ್ತೇ ದಿನ 345 ಎಕರೆಯ ಕೆರೆ ತುಂಬೋದಕ್ಕೆ ಆರೇ ಅಡಿ ಬಾಕಿ ಇತ್ತು. ಕಾಫಿನಾಡಿನ ಆ ದೇವ ಮಾನವರೇ ಇಂದಿನ ಪಬ್ಲಿಕ್ ಹೀರೋಗಳು.

    ಹೌದು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿ ಗ್ರಾಮದ ಕೆರೆ. 345 ಎಕರೆಯಷ್ಟು ದೊಡ್ಡದಾದ ಈ ಕೆರೆಯಲ್ಲಿ ಸದ್ಯ ನೀರಿದೆ. ಆದರೆ ಆರು ತಿಂಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. 10 ವರ್ಷದಿಂದ ಕೆರೆಗೆ ನೀರು ಹರಿದಿರಲಿಲ್ಲ. ವರ್ಷದ ಹಿಂದೆ ಕಾರಣ ಹುಡುಕುತ್ತಾ ಹೊರಟ ಊರ ಮಂದಿಗೆ ಕಂಡಿದ್ದು ಕುಸಿದು ಬಿದ್ದ ಸೇತುವೆ, ಹೂಳು ತುಂಬಿದ ಕಾಲುವೆ. ಗಣಪತಿ ಸೇವಾ ಸಮಿತಿ ಯುವಕರು, ತಾವೇ 70 ಸಾವಿರ ಖರ್ಚು ಮಾಡಿ ಶತಮಾನದ ಸೇತುವೆಯ ದುರಸ್ತಿ ಮಾಡಿದ್ರು. 4 ತಿಂಗಳ ಕಾಲ ನಾಲ್ಕು ಕಿಲೋಮೀಟರ್ ಉದ್ದದಷ್ಟು ಕಾಲುವೆಯನ್ನು ಕ್ಲೀನ್ ಮಾಡಿ, ಹೂಳನ್ನು ತೆಗೆದ್ರು. ಪರಿಣಾಮ ಈಗ ನೀರು ತುಂಬಿದೆ ಎಂದು ಶಿಕ್ಷಕ ಹಾಗೂ ಗಣಪತಿ ಸಮಿತಿ ಸದಸ್ಯ ಸತೀಶ್ ತಿಳಿಸಿದ್ದಾರೆ.

    ಚೆಕ್ ಡ್ಯಾಂ ಮತ್ತು ಕೆರೆ ನಡುವೆ ಇರುವ ಕಾಲುವೆಯ ಸಂಪೂರ್ಣ ದುರಸ್ತಿ ಕಾರ್ಯ ಆಗಬೇಕಿದೆ. ಸಣ್ಣ ನೀರಾವರಿ ಇಲಾಖೆ ಮುತುವರ್ಜಿ ವಹಿಸಿ ಕಾಲುವೆ ದುರಸ್ತಿ ಮಾಡಿದ್ರೆ ಯಗಟಿ ಗ್ರಾಮಕ್ಕೆ ನೀರಿನ ತೊಂದೆರೆಯೇ ಇರಲ್ಲ ಅನ್ನೋದು ಗ್ರಾಮಸ್ಥ ಗೋವಿಂದಪ್ಪ ಹೇಳುತ್ತಾರೆ.

    ಯಗಟಿ ಗ್ರಾಮಸ್ಥರು ತಮ್ಮ ಕೈಲಿ ಆಗಿದ್ದನ್ನು ಮಾಡಿ ಕೆರೆಗೆ ನೀರು ತಂದಿದ್ದಾರೆ. ಈಗ ಕಾಲುವೆ ದುರಸ್ತಿಯನ್ನು ಸಣ್ಣ ನೀರಾವರಿ ಇಲಾಖೆ ಮಾಡಬೇಕಿದೆ.

  • 30 ಎಕ್ರೆ ವಿಸ್ತೀರ್ಣದಲ್ಲಿದ್ದ ಕೆರೆ ಈಗ ಉಳಿದಿರೋದು 10 ಎಕ್ರೆ – ತೋಟಕ್ಕಾಗಿ ಕೆರೆ ಜಾಗ ಗುಳುಂ

    30 ಎಕ್ರೆ ವಿಸ್ತೀರ್ಣದಲ್ಲಿದ್ದ ಕೆರೆ ಈಗ ಉಳಿದಿರೋದು 10 ಎಕ್ರೆ – ತೋಟಕ್ಕಾಗಿ ಕೆರೆ ಜಾಗ ಗುಳುಂ

    ಮಡಿಕೇರಿ: ಸರ್ಕಾರ ಕೆರೆಗಳನ್ನು ಸಂರಕ್ಷಣೆ ಮಾಡಬೇಕು ಎಂದು ಸಾಕಷ್ಟು ಹಣವನ್ನು ವ್ಯಯಿಸುತ್ತಿದೆ. ಆದರೆ ಕೊಡಗಿನಲ್ಲಿ ಕೆರೆ ರಕ್ಷಣೆ ಮಾಡಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿ, ಜಿಲ್ಲಾಧಿಕಾರಿಯ ಮೊರೆ ಹೋದರೂ ಏನೂ ಪ್ರಯೋಜನವಾಗಿಲ್ಲ. ಕೆರೆ ಒತ್ತಿನಲ್ಲಿದ್ದ ಕೆಲ ರೈತರು ಒತ್ತುವರಿ ಮಾಡಿ ಮುಕ್ಕಾಲು ಭಾಗ ಕೆರೆಯನ್ನೇ ನುಂಗಿ ನೀರು ಕುಡಿದಿದ್ದಾರೆ. ಹೀಗಾಗಿ ಗ್ರಾಮಸ್ಥರು ಕೆರೆ ಸಂರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ.

    ಹೌದು. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕೂಡಿಗೆ ಸಮೀಪದ ಹೆಗ್ಗಡಹಳ್ಳಿ ಕೋಟೆಯಲ್ಲಿ ಪುರಾತನ ಕಾಲದ ಬಹುದೊಡ್ಡ ಕೆರೆಯನ್ನೇ ಕೆಲವರು ನುಂಗಿ ನೀರು ಕುಡಿದಿದ್ದಾರೆ. ಇಲ್ಲಿನ ದಂಡಿನಮ್ಮ ದೇವಾಲಯದ ಸರ್ವೆ ನಂಬರ್ 56ರಲ್ಲಿ ಬರೋಬ್ಬರಿ 30 ಎಕ್ರೆಯಷ್ಟಿದ್ದ ಕೆರೆಯನ್ನು ಪಕ್ಕದಲ್ಲೇ ಇರುವ ನಾಲ್ಕೈದು ರೈತರು ಸಂಪೂರ್ಣ ಒತ್ತುವರಿ ಮಾಡಿದ್ದಾರೆ. ಒತ್ತುವರಿ ಮಾಡಿರುವ ಜಾಗದಲ್ಲಿ ಗದ್ದೆ, ತೋಟಗಳನ್ನು ಮಾಡಿ ಸಿಲ್ವರ್, ತೆಂಗು ಸೇರಿದಂತೆ ವಿವಿಧ ಮರಗಳನ್ನು ಬೆಳೆಸಿದ್ದಾರೆ. ಹೀಗಾಗಿ 30 ಎಕ್ರೆಯಷ್ಟು ಇದ್ದ ಕೆರೆ ಇದೀಗ ಕೇವಲ 10 ರಿಂದ ಹನ್ನೆರಡು ಎಕ್ರೆ ಮಾತ್ರವೇ ಉಳಿದಿದೆ.

    ಕೆರೆ ಒತ್ತುವರಿಯಾಗಿರುವ ಜೊತೆಗೆ ಉಳಿದಿರುವ ಕೆರೆಯಲ್ಲೂ ಸಂಪೂರ್ಣ ಹೂಳು ತುಂಬಿಕೊಂಡಿದೆ. ಹೀಗಾಗಿ ಕೂಡಿಗೆ, ಹೆಗ್ಗಡಹಳ್ಳಿ, ಹೆಗ್ಗಡಹಳ್ಳಿ ಕೋಟೆಯ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಇನ್ನೆರಡು ವರ್ಷ ಕಳೆದರೆ ಉಳಿದಿರುವ 10 ಎಕ್ರೆಯಷ್ಟು ಕೆರೆಯೂ ಸಂಪೂರ್ಣ ಒತ್ತುವರಿಯಾಗಲಿದೆ ಎನ್ನೋದು ಜನರ ಆತಂಕವಾಗಿದೆ.

    ಸರ್ವೆಗೆ ಬರುವ ಅಧಿಕಾರಿಗಳು ಸ್ಥಳೀಯ ರಾಜಕೀಯ ಪುಡಾರಿಗಳ ಮಾತುಕೇಳಿ ವಾಪಸ್ಸು ಹೋಗುತ್ತಿದ್ದಾರೆ. ಒಂದು ವೇಳೆ ಸರ್ವೆ ಮಾಡಿದರೂ ಒತ್ತುವರಿದಾರರಿಂದ ಲಂಚ ಪಡೆದು ಸರ್ವೆ ಅಧಿಕಾರಿಗಳು ಮುಂದಿನ ಕ್ರಮಕೈಗೊಳ್ಳುವುದೇ ಇಲ್ಲ. ಹೀಗಾಗಿ ಒತ್ತುವರಿದಾರರ ವಿರುದ್ಧ 2019 ಸೆಪ್ಟೆಂಬರ್ ತಿಂಗಳಲ್ಲೇ ಜಿಲ್ಲಾಧಿಕಾರಿಗೂ ದೂರು ನೀಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಅನ್ನೋದು ಗ್ರಾಮಸ್ಥರ ಆರೋಪವಾಗಿದೆ.

    ಈ ಬಗ್ಗೆ ಒತ್ತುವರಿದಾರರನ್ನು ಕೇಳಿದರೆ, ಹೌದು. ಕೆರೆ ಜಾಗ ಒತ್ತುವರಿ ಮಾಡಿಕೊಂಡಿದ್ದೇವೆ. ಎಲ್ಲರಿಂದಲೂ ತೆರವು ಮಾಡಿದರೆ ನಾವು ಬಿಟ್ಟುಕೊಡ್ತೇವೆ. ಮೂಲ ದಾಖಲೆಯಲ್ಲಿ ಇರುವಷ್ಟು ಕೆರೆ ಜಾಗ ಈಗಲೂ ಇದೆ. ಆದರೆ ಹಾರಂಗಿ ಜಲಾಶಯ ನಿರ್ಮಾಣವಾದಾಗ ಆ ಇಲಾಖೆ ಕೆರೆಯ ಸುತ್ತ ಇದ್ದ ಜಾಗವನ್ನು ಸ್ವಾಧೀನಪಡಿಸಿಕೊಂಡಿತ್ತು. ಆ ಜಾಗ ಒತ್ತುವರಿಯಾಗಿದ್ದು, ಅಧಿಕಾರಿಗಳು ಸರಿಯಾದ ದಾಖಲೆ ಇಲ್ಲದೆ ಸರ್ವೆಗೆ ಬರುತ್ತಾರೆ. ಹೀಗಾಗಿ ಅದು ಅಪೂರ್ಣವಾಗಿ ವಾಪಸ್ಸು ಹೋಗುತ್ತಿದ್ದಾರೆ ಎನ್ನುತ್ತಿದ್ದಾರೆ.

  • ಮಳೆ ಆಶ್ರಿತ ಕಲ್ಯಾಣ ಕರ್ನಾಟಕದಲ್ಲಿ ಜಲಕ್ರಾಂತಿ-35 ಲಕ್ಷ ರೂ. ವೆಚ್ಚದಲ್ಲಿ 2 ಕೆರೆಗಳ ನಿರ್ಮಾಣ

    ಮಳೆ ಆಶ್ರಿತ ಕಲ್ಯಾಣ ಕರ್ನಾಟಕದಲ್ಲಿ ಜಲಕ್ರಾಂತಿ-35 ಲಕ್ಷ ರೂ. ವೆಚ್ಚದಲ್ಲಿ 2 ಕೆರೆಗಳ ನಿರ್ಮಾಣ

    -ಕಲಬುರಗಿಯ ಲಿಂಗರಾಜಪ್ಪ ನಮ್ಮ ಪಬ್ಲಿಕ್ ಹೀರೋ

    ಕಲಬುರಗಿ: ಶರಣಬಸವೇಶ್ವರ ಸಂಸ್ಥಾನ ಅಂದ್ರೆ ಸಾಕು ಈ ಭಾಗದ ಜನ ಅತ್ಯಂತ ಪೂಜನೀಯ ಭಾವನೆಯಿಂದ ನೋಡುತ್ತಾರೆ. ಇದಕ್ಕೆ ತಕ್ಕಂತೆ ಈ ವಂಶಸ್ಥರಾದ ಲಿಂಗರಾಜಪ್ಪನವರು ತಮ್ಮ ಜಮೀನಿಂದಲೇ ಜಲಕ್ರಾಂತಿ ಮಾಡಲು ಮುಂದಾಗಿದ್ದಾರೆ. ಅವರೇ ಇಂದಿನ ನಮ್ಮ ಪಬ್ಲಿಕ್ ಹೀರೋ.

    ಲಿಂಗರಾಜಪ್ಪನವರು ಶರಣ ಸಿರಸಗಿ ಗ್ರಾಮದ ತಮ್ಮ ಸ್ವಂತ ಜಮೀನಿನಲ್ಲಿ ಒಟ್ಟು 4 ಎಕರೆ ಪ್ರದೇಶದಲ್ಲಿ ಸರ್ಕಾರದ ನಯಾಪೈಸೆ ಪಡೆಯದೇ, ತಮ್ಮ ಸ್ವಂತ ಹಣದಿಂದ 35 ಲಕ್ಷ ರೂ.ಗೂ ಅಧಿಕ ಹಣ ಖರ್ಚು ಮಾಡಿ ಒಟ್ಟು 2 ಕೆರೆಗಳನ್ನು ನಿರ್ಮಿಸಿದ್ದಾರೆ. ಲಿಂಗರಾಜಪ್ಪನವರು ಹೀಗೆ ಕೆರೆ ನಿರ್ಮಿಸುವದರ ಹಿಂದೆ ಸಾಮಾಜಿಕ ಕಳಕಳಿಯಿದೆ. ಮಳೆಗಾಲದ ಕೆಲ ದಿನಗಳು ಬಿಟ್ಟರೆ ಈ ಭಾಗದಲ್ಲಿ ಹೆಚ್ಚಿನ ಮಳೆ ಬರಲ್ಲ. ಬಂದರೂ ಸಹ ಆ ನೀರು ಕೆರೆ ಕಟ್ಟೆಗಳಲ್ಲಿ ಹೋಗಿ ಸಂಗ್ರಹವಾಗುವುದಿಲ್ಲ. ಇದರ ಪರಿಣಾಮ ಅಂತರ್ಜಲ ಕುಸಿದು ಬೋರ್‍ವೆಲ್ ಹಾಗೂ ಬಾವಿಗಳು ಬೇಗನೆ ಬತ್ತಿ ಹೋಗುತ್ತಿದ್ದವು. ಇದನ್ನು ಅರಿತ ಲಿಂಗರಾಜಪ್ಪ ಕೆರೆ ನಿರ್ಮಿಸಿ ಅಂತರ್ಜಲ ಮಟ್ಟ ಹೆಚ್ಚಿಸಿದ್ದಾರೆ. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶರಣರು ನುಡಿದಂತೆ ಲಿಂಗರಾಜಪ್ಪ ಜಲಕ್ರಾಂತಿ ಮಾಡಲು ಮುಂದಾಗಿದ್ದಾರೆ.

    ಈ ಕೆರೆಗಳನ್ನು ನೋಡಿದ ಲಿಂಗರಾಜಪ್ಪನವರ ಸ್ನೇಹಿತರು ತಾಡಪತ್ರೆ ಅಥವಾ ಸಿಮೆಂಟ್ ಕಾಂಕ್ರೆಟ್ ಹಾಕಿದ್ರೆ ವರ್ಷವಿಡಿ ನೀರು ಇರೋದಾಗಿ ಹೇಳಿದ್ದರು. ಆದರೆ ಹೀಗೆ ಮಾಡಿದ್ರೆ ಕೇವಲ ನಮ್ಮ ಜಮೀನಿಗೇ ನೀರು ಸಿಗುತ್ತೆ ವಿನಃ ಬೇರೆ ರೈತರಿಗೆ ಅನೂಕುಲ ಆಗಲ್ಲ ಅಂತಾ ಲಿಂಗರಾಜಪ್ಪನವರು ಅವರ ಸಲಹೆಯನ್ನು ನಯವಾಗಿಯೇ ನಿರಾಕರಿಸಿದ್ದರು. ಇವರ ಈ ಸಮಾಜ ಕಳಕಳಿಯ ಮನೋಭಾವನೆ ಮತ್ತು ರೈತರ ಕುರಿತು ಹೊಂದಿರುವ ಕಾಳಜಿ ಹಿನ್ನೆಲೆ ಇಂದು ಶರಣ ಸಿರಸಗಿ ಗ್ರಾಮದ ಸುತ್ತಮುತ್ತಲಿನ ರೈತರ ಜಮೀನಿನಲ್ಲಿರುವ ಬೋರ್ ಮತ್ತು ಬಾವಿಗಳು ಬತ್ತದೆ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ಹೀಗಾಗಿ ಇಲ್ಲಿನ ರೈತರು ಬೇಸಿಗೆ ಕಾಲ ಬಂದರೂ ಜಾನುವಾರು ಮತ್ತು ಅವರ ತೋಟಗಾರಿಕಾ ಬೆಳೆಗಳಿಗೆ ಬರಪೂರ ನೀರು ಸಿಗುತ್ತಿದೆ. ಅಷ್ಟೇ ಅಲ್ಲದೇ ಲಿಂಗರಾಜಪ್ಪ ನವರ ಜಮೀನಿನ ಪಕ್ಕದಲ್ಲಿ 200 ಎಕರೆಗೂ ಅಧಿಕ ಇರುವ ಅರಣ್ಯದಲ್ಲಿರುವ ಪ್ರಾಣಿಗಳಿಗೂ ನೀರು ಸಿಗುತ್ತಿದೆ.

    ಶರಣರ ವಚನಕ್ಕೆ ತಕ್ಕಂತೆ ಲಿಂಗರಾಜಪ್ಪನವರು ಕಲಬುರಗಿಯಲ್ಲಿ ತಮ್ಮ ಕೈಲಾದಷ್ಟು ಸಮಾಜ ಸೇವೆ ಮಾಡುತ್ತಿದ್ದಾರೆ. ಈ ಮೂಲಕ ಚುನಾವಣೆ ಸಮಯದಲ್ಲಿ ನೂರಾರು ಕೆರೆಗಳ ನಿರ್ಮಿಸುವದ್ದಾಗಿ ಹೇಳಿ ವಂಚಿಸುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.

  • ಹರಕೆ ತೀರಿಸಿಲು ತೆಪ್ಪದಲ್ಲಿ ಹಸುಗೂಸನ್ನು ತೇಲಿ ಬಿಟ್ಟ ಬಾಣಂತಿಯರು

    ಹರಕೆ ತೀರಿಸಿಲು ತೆಪ್ಪದಲ್ಲಿ ಹಸುಗೂಸನ್ನು ತೇಲಿ ಬಿಟ್ಟ ಬಾಣಂತಿಯರು

    ಕಾರವಾರ: ಹರಕೆ ತೀರಿಸಲು ಬಾಳೆಯ ತೆಪ್ಪದಲ್ಲಿ ಹುಟ್ಟಿದ ಮಗುವನ್ನು ತೇಲಿ ಬಿಡ್ತಾರಾ? ಈಗಲೂ ಈ ರೀತಿ ಆಚರಣೆ ಇದೆಯಾ ಎಂದು ಆಶ್ಚರ್ಯ ಆಗಬಹುದು. ಆದರೂ ಇದು ಸತ್ಯ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಸಾಲಗಾಂವ್ ಗ್ರಾಮದಲ್ಲಿ ಇನ್ನೂ ಈ ರೀತಿಯ ಆಚರಣೆ ಜೀವಂತವಾಗಿದೆ.

    ಮುಂಡಗೋಡು ತಾಲೂಕಿನ ಸಾಲಗಾಂವ್ ಗ್ರಾಮದಲ್ಲಿರುವ ಬಾಣಂತಿ ದೇವಿಯ ಬಳಿ ಹರಕೆ ಕಟ್ಟಿಕೊಳ್ಳುವ ಮೂಲಕ ಸಂತಾನ ಭಾಗ್ಯ ಪಡೆದ ಮಹಿಳೆಯರು ಬಾಣಂತಿ ಕೆರೆಯಲ್ಲಿ ತಮ್ಮ ಮಗುವನ್ನು ತೆಪ್ಪದಲ್ಲಿ ತೇಲಿಬಿಡುವ ಮೂಲಕ ದೇವಿಯ ಹರಕೆ ತೀರಿಸಿ ಪುನೀತರಾಗುತ್ತಾರೆ.

    ಪ್ರತಿ ವರ್ಷ ಮಕರ ಸಂಕ್ರಾಂತಿ ದಿನದಿಂದ ಮೂರು ದಿನಗಳ ಕಾಲ ಸಾಲಗಾಂವ್ ಗ್ರಾಮದಲ್ಲಿ ಬಾಣಂತಿ ದೇವಿ ಜಾತ್ರೆ ನಡೆಸಲಾಗುತ್ತದೆ. ಈ ಜಾತ್ರೆ ವೇಳೆ ಮಕ್ಕಳಾಗದ ದಂಪತಿ ದೇವಿ ಬಳಿ ಹರಕೆ ಕಟ್ಟಿಕೊಳ್ಳುತ್ತಾರೆ. ಹೀಗೆ ಹರಕೆ ಕಟ್ಟಿಕೊಂಡ ದಂಪತಿಗಳಿಗೆ ಮಕ್ಕಳಾದರೇ ಈ ದೇವಸ್ಥಾನದ ಬಳಿ ಇರುವ ಬಾಣಂತಿ ಕೆರೆಯಲ್ಲಿ ತೆಪ್ಪದಲ್ಲಿ ತಮಗೆ ಹುಟ್ಟಿದ ಮಗುವನ್ನು ತೇಲಿಬಿಟ್ಟು ಹರಕೆ ತೀರಿಸುವುದು ಪ್ರತೀತಿ.

    ಹೀಗೆ ಪ್ರತಿ ವರ್ಷ ನೂರಾರು ಬಾಣಂತಿಯರು ತಮ್ಮ ಮಗುವನ್ನು ಈ ಬಾಣಂತಿ ಕೆರೆಯಲ್ಲಿ ತೆಪ್ಪದಲ್ಲಿ ತೇಲಿ ಬಿಟ್ಟು ಸ್ನಾನ ಮಾಡಿಸಿ ಹರಕೆ ತೀರಿಸುತ್ತಾರೆ. ಬಹಳಷ್ಟು ವರ್ಷಗಳಿಂದ ವೈದ್ಯಕೀಯ ಚಿಕಿತ್ಸೆ ಪಡೆದವರು ಸಹ ಇಲ್ಲಿ ಬಂದು ಹರಕೆ ಕಟ್ಟಿಕೊಂಡ ನಂತರ ಮಕ್ಕಳಾದ ಉದಾಹರಣೆ ಇದೆ ಎಂದು ಇಲ್ಲಿನ ಭಕ್ತರು ಹೇಳುತ್ತಾರೆ.

    ಈ ದೇವಿಯು ಬಾಣಂತಿ ದೇವಿ ಎಂದೇ ಪ್ರಸಿದ್ಧಿ ಹೊಂದಿದ್ದು, ಈ ಹಿಂದೆ ಪ್ರತಿ ವರ್ಷ ಸಂಕ್ರಾಂತಿ ದಿನದಿಂದ ಒಂದು ತಿಂಗಳು ಜಾತ್ರೆ ನಡೆಯುತಿತ್ತು. ಈ ಜಾತ್ರೆಯಲ್ಲಿ ತೆಪ್ಪೋತ್ಸವ, ಜಾನುವಾರುಗಳ ವ್ಯಾಪಾರ ತುಂಬಾ ಪ್ರಸಿದ್ಧಿಯಾಗಿತ್ತು. ಆದರೇ ಕಾಲ ಬದಲಾದಂತೆ ಆಚರಣೆ ಸಹ ಬದಲಾಗಿದ್ದು, ಈಗ ಈ ಜಾತ್ರೆ ಮೂರು ದಿನ ನಡೆಸಲಾಗುತ್ತಿದೆ. ಕೊನೆಯ ದಿನ ದೇವಿಯ ತೆಪ್ಪೋತ್ಸವ ವಿಜ್ರಂಭಣೆಯಿಂದ ನಡೆಯುತ್ತದೆ.

    ಇಂದೂ ಕೂಡ ನೂರಾರು ಬಾಣಂತಿಯರು ಬಾಣಂತಿ ದೇವಿಯ ಆರ್ಶಿರ್ವಾದ ಪಡೆದು ಪೂಜೆ ಸಲ್ಲಿಸಿದ್ದು, ವಿಜ್ರಂಭಣೆಯಿಂದ ಬಾಣಂತಿ ದೇವಿಯ ಹರಕೆ ಜಾತ್ರೆ ನೆರವೇರಿತು.

  • ಕೆಮಿಕಲ್ ನೀರಿನಿಂದ ಕೆರೆಯಲ್ಲಿ ಬೆಂಕಿ

    ಕೆಮಿಕಲ್ ನೀರಿನಿಂದ ಕೆರೆಯಲ್ಲಿ ಬೆಂಕಿ

    ಬೆಂಗಳೂರು: ಕೆಲ ದಿನಗಳ ಹಿಂದೆ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿ ವಿಶ್ವದಲ್ಲೇ ಬೆಂಗಳೂರಿನ ಮಾನವನ್ನು ಹರಾಜು ಹಾಕಿತ್ತು. ಇದೀಗ ಬೆಂಗಳೂರಿನ ಮತ್ತೊಂದು ಕೆರೆಯಲ್ಲಿ ಕೆಮಿಕಲ್ ನೀರಿನಿಂದ ಬೆಂಕಿ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ.

    ಬೆಂಗಳೂರು ಹೊರವಲಯದ ಆನೇಕಲ್‍ನ ಬೊಮ್ಮಸಂದ್ರ ಕೆರೆಯ ಸುತ್ತಮುತ್ತ ನೂರಾರು ಕೆಮಿಕಲ್ ಕಾರ್ಖಾನೆಗಳಿದೆ. ಈ ಕಾರ್ಖಾನೆಗಳು ಬಿಡುವ ಕೆಮಿಕಲ್‍ನಿಂದ ಕೆರೆ ಸಂಪೂರ್ಣ ಕಲುಷಿತಗೊಂಡಿದೆ. ಇಂದು ಸಹ ಕೆಲವು ಕಾರ್ಖಾನೆಗಳು ಕೆಮಿಕಲ್ ನೀರನ್ನು ಕಾಲುವೆಗೆ ಬಿಟ್ಟಿದ್ದು, ಕೆಮಿಕಲ್ ಹಾಗೂ ನೀರು ಎರಡು ಬೆರೆತ ತಕ್ಷಣ ಬೆಂಕಿ ಕಾಣಿಸಿ ಕೊಂಡಿದೆ. ಇದರಿಂದ ಕೆರೆ ಒಂದು ಭಾಗ ಸುಟ್ಟು ಹೋಗಿ ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬೆಂಕಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ನೀರನ್ನು ಬಿಟ್ಟರು ಅದು ಮತ್ತಷ್ಟು ಹೆಚ್ಚಾಗುತ್ತಿದೆ. ಕೆರೆಯ ನೀರಿಗೆ ಕೆಮಿಕಲ್ ನೀರು ಬಿಟ್ಟಿರುವುದರಿಂದ ಬೆಂಕಿ ಕಾಣಿಸಿಕೊಳ್ಳುತಿದೆ. ಪ್ರತಿ ಬಾರಿ ಬೆಂಕಿ ಕಾಣಿಸಿಕೊಂಡ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿ ಹೋಗುತ್ತಾರೆ. ಆದರೆ ಇವರೆಗೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇತ್ತ ಸುಳಿಯಲಿಲ್ಲ ಎಂದು ಸ್ಥಳೀಯರು  ಆರೋಪಿಸಿದ್ದಾರೆ.

    ಕೆಮಿಕಲ್ ನೀರಿನಿಂದ ಪ್ರತಿ ವರ್ಷ ಸಾವಿರಾರು ಮೀನುಗಳು ಸಾವನ್ನಪುತ್ತಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ, ಕೆರೆ ಅಭಿವೃಧ್ಧಿ ಪ್ರಾಧಿಕಾರ, ಬೊಮ್ಮಸಂದ್ರ ಪುರಸಭೆಗೆ ದೂರು ನೀಡಿದರೂ ಕ್ರಮ ಜರುಗಿಸುತ್ತಿಲ್ಲ. ಇವರೆಲ್ಲ ಬೊಮ್ಮಸಂದ್ರ ಕೆಮಿಕಲ್ ಕಾರ್ಖಾನೆಗಳ ಜೊತೆ ಶಾಮಿಲಾಗಿರುವ ಬಗ್ಗೆ ಸ್ಥಳೀಯರು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರದಿದ್ದರೆ ಕೆರೆ, ಹಾಗೂ ಕೆರೆಯ ಅಕ್ಕಪಕ್ಕದ ಮನೆಗಳು ಸಂಪೂರ್ಣವಾಗಿ ಸುಟ್ಟು ಹೋಗುವ ಸಾಧ್ಯತೆ ಇದೆ.

  • ಅಳಿವಿನಂಚಿನಲ್ಲಿದೆ 15ನೇ ಶತಮಾನದಲ್ಲಿ ರಾಣಿ ಕಾಳಲಾದೇವಿ ನಿರ್ಮಿಸಿದ ಕೆರೆ

    ಅಳಿವಿನಂಚಿನಲ್ಲಿದೆ 15ನೇ ಶತಮಾನದಲ್ಲಿ ರಾಣಿ ಕಾಳಲಾದೇವಿ ನಿರ್ಮಿಸಿದ ಕೆರೆ

    ಚಿಕ್ಕಮಗಳೂರು: ಹದಿನೈದನೇ ಶತಮಾನದಲ್ಲಿ ಬಗ್ಗುಂಜಿಯಿಂದ ಮೇಗೂರಿನವರೆಗೆ ಆಳಿದ ರಾಣಿ ಕಾಳಲಾದೇವಿ ತನ್ನ ಮಗಳು ಅಕಾಲಿಕ ಮರಣಕ್ಕೆ ತುತ್ತಾದಾಗ, ಮಗಳ ಆತ್ಮಕ್ಕೆ ಶಾಂತಿ ಕೋರಿ ನಿರ್ಮಿಸಿದ್ದ ಕೆರೆ ಇಂದು ಅಳಿವಿನಂಚಿನಲ್ಲಿದ್ದು, ಪಾಳು ಬಿದ್ದಿದೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಬೆಳವಾಡಿ ಗ್ರಾಮದ ಕಲ್ಬಸ್ತಿಯಲ್ಲಿ ಹನ್ನೆರಡು ಹೆಕ್ಟೇರ್ ಜಮೀನಿನ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಈ ಕೆರೆ, ತನ್ನದೆಯಾದ ಪ್ರಾಚೀನ ಇತಿಹಾಸ ಹೊಂದಿದೆ. ಆದರೆ ಇದೀಗ ಸಂಪೂರ್ಣ ಕಸದ ಗಿಡಗಳಿಂದ ಆವೃತವಾಗಿದ್ದು, ಪಾಳು ಬಿದ್ದಿದೆ.

    ಕ್ರಿ.ಶ.1530ರಲ್ಲಿ ಕಲ್ಬಸ್ತಿಯ ಪಾಶ್ರ್ವನಾಥನಿಗೆ ಜಮೀನು ದತ್ತಿ ನೀಡುವ ರಾಣಿ ಕಾಳಲಾದೇವಿ, 39 ಸಾಲುಗಳ ಶಿಲಾಶಾಸನವನ್ನು ಕೆತ್ತಿಸುತ್ತಾಳೆ. ಆಗ ರಾಣಿ ಕಾಳಲಾದೇವಿ ಈ ಕಲ್ಬಸ್ತಿ ಕೆರೆಯನ್ನು ದುರಸ್ತಿ ಮಾಡಿಸಿ, ದಂಡೆ ನಿರ್ಮಿಸಿ, ಈ ಕೆರೆ ನೀರನ್ನು ಉಪಯೋಗಿಸುವ ಗದ್ದೆಗಳನ್ನು ಪಾಶ್ರ್ವನಾಥ ಸ್ವಾಮಿಯ ಪೂಜೆಗೆ ದಾನವಾಗಿ ನೀಡುತ್ತಾಳೆ. ಇಂತಹ ವಿಶಿಷ್ಟತೆ ಹೊಂದಿರುವ, ಸಾಕಷ್ಟು ದೊಡ್ಡದಾಗಿರುವ ಈ ಕೆರೆ ಇಂದು ಅಳಿವಿನಂಚಿನಲ್ಲಿದ್ದು, ಗಿಡಗಳೆಲ್ಲ ಬೆಳೆದು, ಹೂಳು ತುಂಬಿ ಮುಚ್ಚಿ ಹೋಗುವ ಹಂತ ತಲುಪಿದೆ.

    ಕೆರೆಯ ಸ್ಥಿತಿಯನ್ನು ಗಮನಿಸಿ ಕರ್ನಾಟಕ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆಯಡಿ 2010ರಲ್ಲಿ ಗ್ರಾಮಸ್ಥರ ಸಹಕಾರದಿಂದ ಸುಮಾರು ಎಂಟು ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಲಾಗಿತ್ತು. ಆದರೆ ಕೆರೆಯ ಹೂಳೆತ್ತುವ ಅಸಮರ್ಪಕ ವ್ಯವಸ್ಥೆಯಿಂದ ದುರಸ್ತಿಯಾದ ಕೆಲವೇ ವರ್ಷಗಳಲ್ಲಿ ಕೆರೆ ಮತ್ತೆ ಮೊದಲಿನ ಸ್ಥಿತಿಗೆ ಬಂದು ನಿಂತಿದೆ.

    ಕೆರೆಯ ಸುತ್ತಲೂ ಕಾಡು ಬೆಳೆದಿದೆ. ಕೆರೆಯ ಒಳಗೆ ಹೂಳು ತುಂಬಿ, ಹುಲ್ಲು ಬೆಳೆದು ಸಂಪೂರ್ಣ ಮುಚ್ಚಿ ಹೋಗುವಂತಾಗಿದೆ. ಅಲ್ಲದೆ ಕೆರೆಯಲ್ಲಿ ಮೊದಲಿನಂತೆ ನೀರು ನಿಲ್ಲುವ ಸಾಮಥ್ರ್ಯವೂ ಇಲ್ಲವಾಗಿದೆ. ವರ್ಷದಿಂದ ವರ್ಷಕ್ಕೆ ಅಧೋಗತಿ ತಲುಪಿ, ವಿನಾಶದತ್ತ ಸಾಗುತ್ತಿರುವ ಐತಿಹಾಸಿಕ ಕೆರೆಯನ್ನು ಉಳಿಸಬೇಕಿದೆ. ಈ ಕೆರೆಗೆ ನೀರು ತುಂಬಿಸಿದಲ್ಲಿ ಸುತ್ತಮುತ್ತಲಿನ ನಾಲ್ಕೈದು ಗ್ರಾಮಗಳ ಬಾವಿಗಳಿಗೆ ಅಂತರ್ಜಲ ಲಭಿಸುತ್ತಿದೆ. ಈ ಮೂಲಕ ಕೆರೆಯನ್ನೇ ನಂಬಿ ಬದುಕುತ್ತಿರುವ ಹತ್ತಾರು ಕುಟುಂಬಗಳ ಬದುಕೂ ಅತಂತ್ರವಾಗುವುದು ತಪ್ಪುತ್ತದೆ. ಕೆರೆಯ ಹೂಳನ್ನು ವೈಜ್ಞಾನಿಕವಾಗಿ ತೆಗೆದು ದುರಸ್ತಿ ಮಾಡಿಸಿ ಪುನರ್ಜನ್ಮ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಕೆರೆಗೆ ಉರುಳಿಬಿದ್ದ ಕಾರು, ಹೊರಬರಲಾರದೆ ಬೆಂಗ್ಳೂರಿನ ನಾಲ್ವರ ದುರ್ಮರಣ

    ಕೆರೆಗೆ ಉರುಳಿಬಿದ್ದ ಕಾರು, ಹೊರಬರಲಾರದೆ ಬೆಂಗ್ಳೂರಿನ ನಾಲ್ವರ ದುರ್ಮರಣ

    ರಾಮನಗರ: ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಕಾರು ಉರುಳಿ ಬಿದ್ದ ಪರಿಣಾಮ ನಾಲ್ವರು ಮೃತಪಟ್ಟ ಭಾರೀ ದುರ್ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ದೇವಮಾಚೋಹಳ್ಳಿ ಗ್ರಾಮದ ಬಳಿ ನಡೆದಿದೆ.

    ಬೆಂಗಳೂರಿನ ಅಗ್ರಹಾರದ ನಿವಾಸಿಗಳಾದ ಸುನೀಲ್, ಸಂತೋಷ್, ಮಂಜುನಾಥ್ ಹಾಗೂ ರಾಘವೇಂದ್ರ ಮೃತ ದುರ್ದೈವಿಗಳು. ಘಟನೆಯಲ್ಲಿ ಓರ್ವರ ಸ್ಥಿತಿ ಚಿಂತಾಚನಕವಾಗಿದ್ದು, ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಸುನೀಲ್ ಸೇರಿದಂತೆ ಒಟ್ಟು ಐದು ಜನರು ಕಾರಿನಲ್ಲಿ ಬೆಂಗಳೂರುನಿಂದ ತುಮಕೂರಿನ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗಾಗೆ ಹೋಗುತ್ತಿದ್ದರು. ಆದರೆ ವೇಗವಾಗಿ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮ ಉರುಳಿ ಕೆರೆಗೆ ಬಿದ್ದಿದ್ದು, ಕಾರಿನ ಒಳಗಡೆ ನೀರು ತುಂಬಿಕೊಂಡಿತ್ತು. ಈ ವೇಳೆ ಕಾರಿನಿಂದ ಹೊರಗೆ ಬರಲು ಸಾಧ್ಯವಾಗದೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಒಬ್ಬರು ಪ್ರಯತ್ನ ಪಟ್ಟ ಹೊರ ಬಂದಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ತಾವರೆಕೆರೆ ಠಾಣೆಯ ಪೊಲೀಸರು ನಾಲ್ವರ ಮೃತದೇಹ ಹಾಗೂ ಕಾರನ್ನು ಹೊರ ತೆಗೆದಿದ್ದಾರೆ. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಿಂದಾಗಿ ಅನೇಕರು ಸ್ಥಳದಲ್ಲಿ ಸೇರಿದ್ದರು. ಹೀಗಾಗಿ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತವಾಯಿತು.

  • ಸಾಗರ ಗಣಪತಿ ಕೆರೆಗೆ ಕಾಯಕಲ್ಪ – ಬೋಟಲ್ಲಿ ಕುಳಿತು ಹೂಳು ದಬ್ಬಿದ ಶಾಸಕ ಹಾಲಪ್ಪ

    ಸಾಗರ ಗಣಪತಿ ಕೆರೆಗೆ ಕಾಯಕಲ್ಪ – ಬೋಟಲ್ಲಿ ಕುಳಿತು ಹೂಳು ದಬ್ಬಿದ ಶಾಸಕ ಹಾಲಪ್ಪ

    ಶಿವಮೊಗ್ಗ: ಮುಂಜಾನೆಯ ಚುಮು ಚುಮು ಚಳಿಯಲ್ಲೇ ಸಾಗರದ ಗಣಪತಿ ಕೆರೆ ಹೂಳು ತೆಗೆಯುವ ಕಾರ್ಯಕ್ಕೆ ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ನೂರಾರು ಮಂದಿ ಕಸರತ್ತು ನಡೆಸಿದರು.

    ಇಂದು ಮುಂಜಾನೆಯೇ ಗಣಪತಿ ಕೆರೆಯ ದಂಡೆಯ ಮೇಲೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಸಾರ್ವಜನಿಕರು ಆಗಮಿಸಿ ಕೆರೆಯ ಹೂಳು ತೆಗೆಯುವುದು, ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಯ ನಡೆಸಿದರು. ಈ ವೇಳೆ ಸ್ಥಳೀಯ ಶಾಸಕ ಹರತಾಳು ಹಾಲಪ್ಪ ಸಹ ಬೋಟಿನಲ್ಲಿ ಕುಳಿತು ಹೂಳು ದಬ್ಬುವ ಕಾರ್ಯ ಮಾಡಿದರು.

    ಸುಮಾರು 5 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ 5 ಬೋಟ್, 1 ಜೆಸಿಬಿ, ಹಾಗೂ ಟ್ರ್ಯಾಕ್ಟರ್‍ಗಳನ್ನು ಬಳಸಲಾಗಿತ್ತು. ಕೆರೆಯಿಂದ ತೆಗೆದ ಹೂಳನ್ನು ಇನ್ನೊಂದು ದಡದಲ್ಲಿ ಸಂಗ್ರಹಿಸಿದ್ದು, ಅದನ್ನು ವಿಲೇವಾರಿ ಮಾಡುವ ಕೆಲಸ ನಡೆಯುತ್ತಿದೆ. ಈ ಗಣಪತಿ ಕೆರೆ ಕಾಯಕಲ್ಪಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಹ ಮೆಚ್ಚುಗೆ ವ್ಯಕ್ತಪಡಿಸಿದರು.

  • 4 ಎಕರೆ ಬರಡು ಭೂಮಿಯಲ್ಲಿ ಕೆರೆ ನಿರ್ಮಿಸಿದ್ದಾರೆ ಚಳ್ಳಕೆರೆಯ ನವೀನ್ ಕುಮಾರ್

    4 ಎಕರೆ ಬರಡು ಭೂಮಿಯಲ್ಲಿ ಕೆರೆ ನಿರ್ಮಿಸಿದ್ದಾರೆ ಚಳ್ಳಕೆರೆಯ ನವೀನ್ ಕುಮಾರ್

    – 8 ಎಕರೆಯಲ್ಲಿ ಒಣಗ್ತಿದ್ದ ತೆಂಗು, ಅಡಿಕೆಗೆ ಮರು ಜೀವ

    ಚಿತ್ರದುರ್ಗ: ಜಲ ಸಂವರ್ಧನೆಗೆ ದೇಶಾದ್ಯಂತ ಜಾಗೃತಿ ಶುರುವಾಗಿದೆ. ಇದಕ್ಕೆ ಮುನ್ನವೇ ಪಬ್ಲಿಕ್ ಹೀರೋ ಚಿತ್ರದುರ್ಗದ ನವೀನ್ ಕುಮಾರ್ ಅವರು ಸಣ್ಣ ಕೆರೆಯನ್ನೇ ನಿರ್ಮಿಸಿ ಬದುಕು ಬಂಗಾರ ಮಾಡಿಕೊಂಡಿದ್ದಾರೆ.

    ಹೌದು. ಚಿತ್ರದುರ್ಗದ ಚಳ್ಳಕೆರೆಯ ತಾಲೂಕಿನ ದೇವರಮಗಿಕುಂಟೆ ಗ್ರಾಮದ ನಿವಾಸಿಯಾಗಿರುವ ನವೀನ್ ಕುಮಾರ್ ಅವರು ತನ್ನ ಜಮೀನಿನ 4 ಎಕರೆ ವ್ಯರ್ಥ ಭೂಮಿಯನ್ನು ಕೆರೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಈ ಕೆರೆಯಿಂದಾಗಿ 6 ತಿಂಗಳ ಕಾಲ ನೀರು ತುಂಬಿರುತ್ತದೆ. ಈ ಮೂಲಕ 8 ಎಕರೆಯಲ್ಲಿ ಒಣಗಿ ಹೋಗುತ್ತಿದ್ದ ತೆಂಗು, ಅಡಿಕೆಗೆ ಮರುಜೀವ ತುಂಬಿದ್ದಾರೆ. ಜೊತೆಗೆ, ಹೂ, ತರಕಾರಿ ಬೆಳೆದು ಲಕ್ಷಾಂತರ ಲಾಭ ಪಡೀತಿದ್ದಾರೆ.

    ನವೀನ್ ತಮ್ಮ 24 ಎಕರೆ ಜಮೀನಿನಲ್ಲಿ ಸುಮಾರು 11 ಕೊಳವೆ ಬಾವಿಗಳನ್ನು ಕೊರೆಸಿದ್ದು, ಅವುಗಳಲ್ಲಿ 9 ಫೈಲ್ ಆಗಿದ್ದವು. ಹೀಗಾಗಿ ನೀರಿಲ್ಲದೆ ಒಣಗುತ್ತಿದ್ದ ತೋಟ ಉಳಿಸಿಕೊಳ್ಳಲು ಹರಸಾಸಹ ಮಾಡಿದರು. ಕೊನೆಗೆ ಹೊಳೆದಿದ್ದೇ ಕೆರೆ ನಿರ್ಮಾಣ. ಇದರಿಂದಾಗಿ ಅಕ್ಕಪಕ್ಕದ ಜಮೀನಿನಲ್ಲಿ ಬತ್ತಿದ ಕೊಳವೆಬಾವಿಗಳು ಸಹ ರೀಚಾರ್ಜ್ ಆಗಿವೆ ಎಂದು ರೈತ ಚಂದ್ರಪ್ಪ ತಿಳಿಸಿದ್ದಾರೆ.

    ಆದರೆ ಈ ಕಾರ್ಯಕ್ಕೆ ಸರ್ಕಾರದ ಸೌಲಭ್ಯ ಸಿಗಲಿಲ್ಲ. ಎದೆಗುಂದದೆ 1 ಲಕ್ಷ ರೂಪಾಯಿ ಖರ್ಚು ಮಾಡಿ ಕೆರೆ ಕಟ್ಟಿ ಭಗೀರಥನಂತೆ ನೀರು ಸೃಷ್ಟಿಸುವ ಮೂಲಕ ನವೀನ್ ಕುಮಾರ್ ಮಾದರಿ ರೈತನಾಗಿದ್ದಾರೆ.