ಮಂಡ್ಯ: ಕೊರೊನಾ ವೈರಸ್ ಹರಡುವುದನ್ನು ತಪ್ಪಿಸುವುದಕ್ಕೆ ಲಾಕ್‍ಡೌನ್ ಮಾಡಲಾಗಿದೆ. ಆದರೆ ಎಲ್ಲಿಗೂ ಹೋಗಬೇಡಿ ಎಂದರು ಕೇಳದ ಯುವಕರು ಕೆರೆಯಲ್ಲಿ ಆಟ ಆಡಲು ಹೋಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ವಡೇರಹಳ್ಳಿಯಲ್ಲಿ ನಡೆದಿದೆ.
ವಡೇರಹಳ್ಳಿಯಲ್ಲಿ ಭರತ್ (18) ಮತ್ತು ಅವಿನಾಶ್ (20) ಮೃತ ಯುವಕರು. ಕೆರೆಯಲ್ಲಿ ತೆಪ್ಪ ತೆಗೆದುಕೊಂಡು ಆಡ ಆಡಲು ಹೋಗಿದ್ದರು. ಆದರೆ ಇಬ್ಬರು ಯುವಕರು ತೂತಾಗಿರುವ ತೆಪ್ಪವನ್ನು ತೆಗೆದುಕೊಂಡು ಕೆರೆಯಲ್ಲಿ ಆಟವಾಡಲು ಹೋಗಿದ್ದಾರೆ. ಈ ವೇಳೆ ತೆಪ್ಪದಲ್ಲಿ ನೀರು ತುಂಬಿಕೊಂಡ ಪರಿಣಾಮ ತೆಪ್ಪ ಮುಳುಗಿದೆ. ಆಗ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಯುವಕರು ಬೆಂಗಳೂರಿನಿಂದ ಸಂಬಂಧಿಕರ ಮನೆಗೆ ಬಂದಿದ್ದರು. ಮನೆಯವರು ಕೊರೊನಾ ವೈರಸ್‍ನಿಂದ ಲಾಕ್‍ಡೌನ್ ಮಾಡಿದ್ದಾರೆ. ಎಲ್ಲೂ ಹೋಗಬೇಡಿ ಎಂದು ಹೇಳಿದ್ದರು. ಆದರೆ ಯುವಕರು ನಮಗೆ ಕೊರೊನಾ ವೈರಸ್ ಏನು ಮಾಡಲ್ಲ ಎಂಬಂತೆ ಕೆರೆಗೆ ಆಟವಾಡಲು ಹೋಗಿ ಸಾವನ್ನಪ್ಪಿದ್ದಾರೆ.
ಸದ್ಯಕ್ಕೆ ಯುವಕರ ಮೃತದೇಹಕ್ಕಾಗಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ. ಇತ್ತ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು: ಸಂಬಳ ಹೆಚ್ಚು ಕೇಳಿದಕ್ಕೆ ಚಾಲಕನ ಮೇಲೆ ಮಾಲೀಕ ಹಾಗೂ ಆತನ ಸ್ನೇಹಿತ ಕಲ್ಲು ಎತ್ತಾಕಿ ಕೊಲೆಗೈದು, ಮೃತದೇಹ ಸುಟ್ಟು, ಅರ್ಧಂಬರ್ಧ ಸುಟ್ಟ ಮೃತದೇಹವನ್ನು ರಾಮ್‍ಪುರ ಕೆರೆಯಲ್ಲಿ ಎಸೆದ ಅಮಾನವೀಯ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಮಾರ್ಚ್ 10ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪ್ಯಾಕರ್ಸ್ ಅಂಡ್ ಮೂವರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಚಿಂತಾಮಣಿ ನಿವಾಸಿ ಕೃಷ್ಣ ಹಾಗೂ ಹಲಸೂರು ನಿವಾಸಿ ಮಾಯಾಕೃಷ್ಣ ಎಂದು ಗುರುತಿಸಲಾಗಿದೆ. ಕೃಷ್ಣ ನಡೆಸುತ್ತಿದ್ದ ಕಂಪನಿಯನ್ನು ಚಾಲಕನಾಗಿದ್ದ ಶ್ರೀನಿವಾಸ್ ಪಾರ್ಸೆಲ್‌ಗಳನ್ನು ಗ್ರಾಹಕರ ಮನೆ ಬಾಗಲಿಗೆ ಡೆಲಿವರಿ ಮಾಡುತ್ತಿದ್ದನು.
ಮಾಚ್ 10ರಂದು ಶ್ರೀನಿವಾಸ್ ಕೃಷ್ಣನ ಬಳಿ ತನಗೆ ಸಂಬಳ ಹೆಚ್ಚಿಗೆ ಮಾಡಿ ಎಂದು ಕೇಳಿದ್ದನು. ಈ ಬಗ್ಗೆ ಆತನ ಜೊತೆ ಕೂತು ಮಾತನಾಡಿ ಮಾಲೀಕ ನಿರ್ಧಾರ ತೆಗೆದುಕೊಳ್ಳುವ ಬದಲು ಚಾಲಕನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದು, ತನ್ನ ಸ್ನೇಹಿತ ಮಾಯಾಕೃಷ್ಣನ ಸಹಾಯ ಪಡೆದು ಚಾಲಕನನ್ನ ಕೊಲೆ ಮಾಡಲು ನಿರ್ಧರಿಸಿದನು.
ಚಾಲಕ ಮಲಗಿದ್ದ ವೇಳೆ ಆತನ ತಲೆ ಮೇಲೆ ಕಲ್ಲು ಎತ್ತಾಕಿ ಕೃಷ್ಣ ಹಾಗೂ ಆತನ ಗೆಳೆಯ ಕೊಲೆ ಮಾಡಿದರು. ಬಳಿಕ ಮೃತದೇಹವನ್ನು ಬೆಂಕಿ ಹಚ್ಚಿ ಸುಟ್ಟುಹಾಕಿದರು. ಆ ನಂತರ ಈ ಬಗ್ಗೆ ಯಾರಿಗೂ ತಿಳಿಯಬಾರದು ಎಂದು ಅರ್ಧಂಬರ್ಧ ಸುಟ್ಟಿದ್ದ ಶವವನ್ನು ರಾಮ್‍ಪುರ ಕೆರೆಯಲ್ಲಿ ಎಸೆದು ಹೋದರು.
ಆದರೆ ಸ್ಥಳೀಯರು ಕೆರೆ ಬಳಿ ಓಡಾಡುತ್ತಿದ್ದಾಗ ದುರ್ನಾತ ಬರುತ್ತಿದ್ದದನ್ನು ಗಮನಿಸಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ಕುರಿತು ತನಿಖೆ ಕೈಗೊಂಡಾಗ ಸತ್ಯಾಂಶ ಹೊರಬಿದ್ದಿದೆ.
ಪ್ರಮುಖ ಆರೋಪಿ ಕೃಷ್ಣನನ್ನು ಸದ್ಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ವಿಚಾರಣೆ ವೇಳೆ ಕೊಲೆ ಮಾಡಲು ಕಾರಣವೇನು? ಹೇಗೆ ಕೊಲೆ ಮಾಡಲಾಯ್ತು ಎಂಬ ವಿಚಾರವನ್ನು ಆರೋಪಿ ಬಾಯಿಬಿಟ್ಟಿದ್ದಾನೆ.
ಧಾರವಾಡ: ಜಿಲ್ಲೆಯ ಉರಗ ತಜ್ಞರೊಬ್ಬರು ಸುಮಾರು 45 ಹಾವಿನ ಮರಿಗಳನ್ನ ರಕ್ಷಿಸಿ ಅದನ್ನು ಕೆರೆ ದಂಡೆ ಬಳಿ ಬಿಟ್ಟು ಮಾನವಿಯತೆ ಮೆರೆದಿದ್ದಾರೆ.
ಧಾರವಾಡದ ಕಲ್ಯಾಣನಗರದ ಮಂಜುನಾಥ ಕಾಲೋನಿಯ ಕವಿತಾ ದೇವರ ಅವರ ಮನೆ ಪಕ್ಕ ಹಾವೊಂದು ಮೊಟ್ಟೆ ಇಟ್ಟು ಹೋಗಿತ್ತು. ಈ ಮೊಟ್ಟೆಗಳು ಒಡೆದು ಹಾವಿನ ಮರಿಗಳು ಹೊರಬಂದಿವೆ. ಇದನ್ನ ನೋಡಿದ ಮನೆಯ ಮಾಲೀಕರು ಉರಗ ತಜ್ಞ ಮಂಜು ಭಜಂತ್ರಿಯವರಿಗೆ ಮಾಹಿತಿ ತಿಳಿಸಿದ್ದಾರೆ. ಮಂಜು ಅವರು ಈ ಮರಿಗಳನ್ನ ರಕ್ಷಿಸಿ ಅವುಗಳನ್ನು ತಂದು ಸುರಕ್ಷಿತವಾಗಿ ಕೆರೆಯ ಪಕ್ಕದಲ್ಲಿ ಬಿಟ್ಟಿದ್ದಾರೆ.
ಈ ಹಾವಿನ ಮರಿಗಳು ಚಾಗರೆಟ್ ಎಂಬ ಕೆರೆ ಹಾವಿನ ಜಾತಿಗೆ ಸೇರಿದ್ದು, ಇವು ಯಾರಿಗಾದರೂ ಕಚ್ಚಿದರೂ ವಿಷ ಏರಲ್ಲ ಎನ್ನಲಾಗುತ್ತೆ. ಯಾಕಂದರೆ ಇವು ಕೆರೆಯ ಹಾವಿನ ಮರಿಗಳಾಗಿರುವುದರಿಂದ ಇವುಗಳಲ್ಲಿ ವಿಷ ಇರಲ್ಲ. ಆದರೆ ಜನರಿಗೆ ಈ ಬಗ್ಗೆ ಗೊತ್ತಿರಲ್ಲ, ಹೀಗಾಗಿ ಯಾವುದೇ ಹಾವು ಕಚ್ಚಿದರೂ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು ಎಂದು ಈ ಉರಗ ತಜ್ಞ ತಿಳಿಸಿದರು. ಮಂಗಳವಾರ ಸಂಜೆ ಈ ಮರಿಗಳನ್ನ ಹಿಡಿದಿದ್ದ ಮಂಜು, ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಇವುಗಳನ್ನ ಹಿಡಿದು ತಂದು ಕೆರೆಯ ಪಕ್ಕದಲ್ಲಿ ಬಿಟ್ಟು, ಈ ಹಾವಿನ ಮರಿಗಳನ್ನ ಉಳಿಸಿದ್ದಾರೆ.
ಚಿಕ್ಕಬಳ್ಳಾಪುರ: ಕುರಿ ತೊಳೆಯುತ್ತಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆ ಕೆರೆಯಲ್ಲಿ ನಡೆದಿದೆ.
ಆಂಧ್ರ ಮೂಲದ ಶಿವಶಂಕರ್ (20) ಬಾಬು (25) ಮೃತರು. ಅಂದಹಾಗೆ ಕರ್ನಾಟಕ ಆಂಧ್ರ ಗಡಿಭಾಗದ ಕುಡುಮಲಕುಂಟೆ ಕೆರೆಗ ಕುರಿಗಳನ್ನು ತೊಳೆಯಲು ಬಂದಿದ್ದ ಈ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕುರಿ ತೊಳೆದು ದಡದ ಮೇಲೆ ಕುಳಿತ್ತಿದ್ದಾಗ ಓರ್ವ ಜಾರಿ ಕೆರೆಗೆ ಬಿದ್ದಿದ್ದು ಆತನನ್ನ ರಕ್ಷಿಸಲು ಹೋದ ಮತ್ತೋರ್ವ ಸಹ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಅದೇ ಕರೆಯಲ್ಲಿ ಕುರಿ ಮೇಯಿಸುತ್ತಿದ್ದ ಮಹಿಳೆ ಘಟನೆಯನ್ನು ಇತರರಿಗೆ ತಿಳಿಸಿದ್ದು, ಗೌರಿಬಿದನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ಎರಡು ಮೃತದೇಹಗಳನ್ನ ಹೊರತೆಗೆದಿದ್ದಾರೆ. ಕೆರೆಯಲ್ಲಿನ ಕುಂಟೆ 15 ರಿಂದ 20 ಅಡಿ ಆಳವಿದ್ದು ಸಾಕಷ್ಟು ಜೇಡಿಮಣ್ಣಿನಿಂದ ಕೂಡಿದ್ದು, ಇಬ್ಬರು ಹೂಳಿನಲ್ಲಿ ಸಿಲುಕಿ ಹಾಕಿಕೊಂಡು ಮೇಲಕ್ಕೆ ಬರಲಾಗದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ತಾಯಿಯೊಬ್ಬಳು ತನ್ನಿಬ್ಬರು ಮಕ್ಕಳನ್ನು ವೇಲ್‍ನಲ್ಲಿ ತನ್ನ ಸೊಂಟಕ್ಕೆ ಕಟ್ಟಿಕೊಂಡು ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನಲ್ಲಿ ನಡೆದಿದೆ.
ಇಂದು ಬೆಳ್ಳಂಬೆಳಗ್ಗೆ ಆನೇಕಲ್ ಸಮೀಪದ ಹೆನ್ನಾಗರ ಗ್ರಾಮ ಪಂಚಾಯತಿಯ ಕೆರೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಮೃತ ದೇಹಗಳು ತೇಲುತ್ತಿದ್ದವು. ವಾಯು ವಿಹಾರಕ್ಕೆಂದು ಬಂದಿದ್ದ ಗ್ರಾಮಸ್ಥರು ಮೃತದೇಹವನ್ನು ನೋಡಿ ಕೂಡಲೇ ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ತೆಪ್ಪದ ಮೂಲಕ ಹೊರತೆಗೆದ್ದಾರೆ.
ಮೃತ ತಾಯಿ ಮತ್ತು ಇಬ್ಬರು ಮಕ್ಕಳು ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯ ಗ್ರಾಮಸ್ಥರು, ಮಹಿಳೆಯನ್ನು ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೋಡಿಲ್ಲ. ಹೀಗಾಗಿ ಅವರ ಗುರುತು ಪತ್ತೆಯಾಗುತ್ತಿಲ್ಲ ಎಂದಿದ್ದಾರೆ.
ಜಿಗಿಣಿ ಪೊಲೀಸರು ಸಹ ಮೃತರ ಗುರುತು ಪತ್ತೆಗಾಗಿ ಸ್ಥಳೀಯರನ್ನು ವಿಚಾರಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಸದ್ಯಕ್ಕೆ ಮೃತಪಟ್ಟವರು ಯಾರು? ಅವರ ಹಿನ್ನೆಲೆ ಏನು? ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಬೆಳಗಾವಿ(ಚಿಕ್ಕೋಡಿ): ಜಾತ್ರೆಯ ಅಂಗವಾಗಿ ಅಜ್ಜಿಯ ಮನೆಗೆ ಬಂದಿದ್ದ ಯುವಕ ಕೆರೆಯಲ್ಲಿ ಈಜಲು ಹೋಗಿ ನೀರುಪಾಲಾದ ದುರ್ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಾಡವಾಡಿ ಗ್ರಾಮದಲ್ಲಿ ನಡೆದಿದೆ.
ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ಯುವಕ ಮದುಕರ ಮಾಳಗಿ(17) ಕಳೆದ ಎರಡು ದಿನದ ಹಿಂದೆ ಅಜ್ಜಿಯ ಊರಾದ ಮಾವನೂರ ಗ್ರಾಮಕ್ಕೆ ಜಾತ್ರೆಯ ನಿಮಿತ್ಯ ಬಂದಿದ್ದನು. ಮುಂಜಾನೆ ಸ್ನೇಹಿತರೊಡನೆ ಪಕ್ಕದ ಬಾಡವಾಡಿ ಗ್ರಾಮದ ಕೆರೆಗೆ ಸ್ನಾನಕ್ಕೆ ತೆರೆಳಿದ್ದನು. ಸ್ನೇಹಿತರು ಈಜುವುದನ್ನು ನೋಡಿ ತಾನು ಈಜಲು ಹೋಗಿದ್ದ ಯುವಕ ಈಜು ಬಾರದೆ ಕೆರೆಯಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ.
ಯುವಕ ಮುಳುಗಿರುವುದನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿ ಶಾಮಕ ದಳ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಮುಳುಗಿದ್ದ ಯುವಕನ ರಕ್ಷಣಾ ಕಾರ್ಯಾಚರಣೆಗೆ ಮುಂದಾದರು. ಆದರೆ 2 ದಿನ ಶೋಧದ ಬಳಿಕ ಇಂದು ಮಧ್ಯಾಹ್ನ ಯುವಕನ ಮೃತದೇಹ ಪತ್ತೆಯಾಗಿದ್ದು, ಕೆರೆಯಿಂದ ಶವ ಹೊರತೆಗೆಯಲಾಗಿದೆ. ಈ ಸಂಬಂಧ ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿ: ಬಟ್ಟೆ ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದ ಇಬ್ಬರ ಮೃತದೇಹಗಳನ್ನು ಸತತ ಐದು ಗಂಟೆಗಳ ಕಾರ್ಯಚರಣೆ ಮೂಲಕ ಹೊರ ತೆಗೆಯಲಾಗಿದೆ.
ಸೋಮವಾರ ಸಂಜೆ ಕೊಡಗು ಜಿಲ್ಲೆಯ ವಿರಾಜಪೇಟೆ ತೆರಾಲು ಗ್ರಾಮದ ಕೆರೆಯಲ್ಲಿ ಈ ಘಟನೆ ನಡೆದಿದ್ದು, ಪುಟ್ಟ ಹಾಗೂ ವಿನೋದ್ ಮೃತ ಕೂಲಿ ಕಾರ್ಮಿಕರು. ಪುಟ್ಟ ಅವರು ಬಟ್ಟೆ ತೊಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ಈ ವೇಳೆ ಸ್ನೇಹಿತ ವಿನೋದ್ ಪುಟ್ಟನನ್ನು ರಕ್ಷಿಸಲು ಹೋಗಿ ಅವರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುವುದು ತಡವಾಗಿದ್ದು, ಆಗಲೇ ಕತ್ತಲಾಗಿತ್ತು. ಹೀಗಾಗಿ ಮೃತದೇಹಗಳನ್ನು ತೆಗೆಯಲು ಸಾಧ್ಯವಾಗಿರಲಿಲ್ಲ.
ಮಂಗಳವಾರ ಬೆಳಗ್ಗೆಯಿಂದ ಶ್ರೀಮಂಗಲ ಪೊಲೀಸರು ಸ್ಥಳೀಯ ಮುಳುಗು ತಜ್ಞ ಮಾರಿಮುತ್ತು ಸಹಾಯದಿಂದ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಮೃತರು ತೆರಾಲು ಗ್ರಾಮದ ಪೊನ್ನಪ್ಪ ಅವರ ತೋಟದ ಕಾರ್ಮಿಕರಾಗಿದ್ದು, ಲೈನ್ ಮನೆಯಲ್ಲಿ ವಾಸವಿದ್ದರು. ಪುಟ್ಟ ತೆರಾಲು ಗ್ರಾಮದವರೇ ಆಗಿದ್ದು, ವಿನೋದ್ ಅಸ್ಸಾಂ ಮೂಲದವರು. ಕೆಲಸ ಹುಡುಕಿಕೊಂಡು ರಾಜ್ಯಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಇರುವ ಇತಿಹಾಸ ಪ್ರಸಿದ್ಧ ಕಾರಿಂಜ ಕ್ಷೇತ್ರದ ತೀರ್ಥ ಕೆರೆಯಲ್ಲಿ ಯುವಕನೋರ್ವ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಸುದೇಶ್ (26) ಮೃತಪಟ್ಟ ದುರ್ದೈವಿ. ಸುದೇಶ್ ಇಬ್ಬರು ಸ್ನೇಹಿತರೊಂದಿಗೆ ಬಂಟ್ವಾಳ ತಾಲೂಕಿನ ಕಾರಿಂಜ ಕ್ಷೇತ್ರಕ್ಕೆ ಆಗಮಿಸಿದ್ದರು. ಅಲ್ಲಿನ ರಸ್ತೆ ಪಕ್ಕದಲ್ಲೇ ಇದ್ದ ಗಜ ತೀರ್ಥ ಕೆರೆಗೆ ಸುದೇಶ್ ಆಯ ತಪ್ಪಿ ಬಿದ್ದಿದ್ದು ಸಾವನ್ನಪ್ಪಿದ್ದಾರೆ.
ಈ ಕುರಿತು ಮಾಹಿತಿ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಅಗ್ನಿಶಾಮಕ ದಳವು ಘಟನಾ ಸ್ಥಳಕ್ಕೆ ದೌಡಾಯಿಸಿತು. ಬಳಿಕ ಸುದೇಶ್ ಅವರ ಮೃತದೇಹ ಮೇಲೆಕ್ಕೆತ್ತಲಾಯಿತು. ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಕಲ್ಕೆರೆ ಕೆರೆಯಲ್ಲಿ ಟೆಕ್ಕಿ ನಾಪತ್ತೆ ಹಿನ್ನೆಲೆಯಲ್ಲಿ ಇಂದು ಕೂಡ ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಹುಡುಕಾಟ ಶುರುಮಾಡಿದ್ದಾರೆ.
ಶನಿವಾರ ಬೆಳಗಿನ ಜಾವ 3 ಗಂಟೆಗೆ ಸಚಿನ್ ಮತ್ತು ಉಲ್ಲಾಸ್ ಇಬ್ಬರು ಟೆಕ್ಕಿಗಳು ಕಲ್ಕೆರೆಯ ಕೆರೆಯಲ್ಲಿ ಮಧ್ಯದ ಐಲ್ಯಾಂಡ್‍ಗೆ ಹೊರಟಿದ್ದರು. ಸುಮಾರು ನೂರು ಮೀಟರ್ ಕೆರೆಯ ಒಳಗೆ ಹೋಗುತ್ತಿದ್ದಂತೆ ಹುಟ್ಟು ಜಾರಿ ಬಿದ್ದು, ಬರಿ ಕೈಯಲ್ಲಿ ತೆಪ್ಪ ತಳ್ಳುವ ವೇಳೆ ಮುಗುಚಿ ಬಿದ್ದು ಇಬ್ಬರು ನೀರಲ್ಲಿ ಮುಳುಗಿದರು. ಇದನ್ನೂ ಓದಿ: ಕೆರೆಯಲ್ಲಿ ತೆಪ್ಪ ಮುಗುಚಿ ಟೆಕ್ಕಿ ಕಣ್ಮರೆ – ಪಾರ್ಟಿ ಅಮಲಿನಲ್ಲಿ ಮುಳುಗಿದ್ರು
ಟೆಕ್ಕಿ ಉಲ್ಲಾಸ್ ಈಜಿ ದಡ ಸೇರಿದರೆ, ಮತ್ತೊಬ್ಬ ಟೆಕ್ಕಿ ಸಚಿನ್ ನೀರಿನಲ್ಲಿ ಮುಳುಗಿದರು. ವಿಷಯ ತಿಳಿದು ಸ್ಥಳಕ್ಕೆ ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಶನಿವಾರ ಇಡೀ ದಿನ ಕಾರ್ಯಾಚರಣೆ ನಡೆಸಿದರು. ಸಂಜೆ ವೇಳೆ ಮುಗುಚಿ ಬಿದ್ದ ತೆಪ್ಪ ಪತ್ತೆಯಾಗಿತ್ತು. ಆದರೆ ಟೆಕ್ಕಿ ಸಚಿನ್ ಎಲ್ಲೂ ಪತ್ತೆಯಾಗಿರಲಿಲ್ಲ.
ಕತ್ತಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಸಿಬ್ಬಂದಿ ಇಂದು ಬೆಳಗಿನ ಜಾವ 6 ಗಂಟೆಯಿಂದಲೇ ಶೋಧ ಕಾರ್ಯ ಮುಂದುವರೆಸಿದ್ದಾರೆ. ಇಡೀ ಕೆರೆಯಲ್ಲಿ ಹುಡುಕಾಟ ನಡೆದಿದ್ದು, ಇಲ್ಲಿವರೆಗೂ ಟೆಕ್ಕಿ ಸಚಿನ್ ಪತ್ತೆಯಾಗಿಲ್ಲ. ಇಂದೂ ಕೂಡ ಮುಳುಗು ತಜ್ಞರು ಕೆರೆಯಲ್ಲಿ ಇಳಿಯಲಿದ್ದು, ಹೈ ಕ್ವಾಲಿಟಿ ಕ್ಯಾಮೆರಾ ಬಳಸಿ ಕೆರೆಯಲ್ಲಿ ಶೋಧ ನಡೆಸಲಿದ್ದಾರೆ.
ಕೊಡಗು ವಿರಾಜಪೇಟೆ ಮೂಲದ ಸಚಿನ್ ಕಣ್ಮರೆಯಾಗಿರುವ ಟೆಕ್ಕಿ. ಸಚಿನ್ ಮತ್ತು ಆರ್‌ಟಿ ನಗರದ ಉಲ್ಲಾಸ್ ಇಬ್ಬರೂ ಟೆಕ್ಕಿಗಳಾಗಿದ್ದು, ಶುಕ್ರವಾರ ರಾತ್ರಿ ಕಲ್ಕೆರೆಯಲ್ಲಿ ಪಾರ್ಟಿ ಮಾಡಿದ್ದರು. ಮುಂಜಾನೆ ಸುಮಾರು 3 ಗಂಟೆಗೆ ಇಬ್ಬರು ಕೆಲ್ಕೆರೆ ಕೆರೆ ಏರಿ ಮೇಲೆ ಬಂದಿದ್ದರು. ಈ ವೇಳೆ ಕೆರೆ ಏರಿ ಮೇಲೆ ತೆಪ್ಪ ಕಂಡು ತೆಪ್ಪದಲ್ಲಿ ವಿಹಾರಕ್ಕೆ ಹೊರಟ್ಟಿದ್ದರು.
ತೆಪ್ಪದಲ್ಲಿ ಹೋಗುವಾಗ ಹುಟ್ಟು ಜಾರಿ ನೀರಿಗೆ ಬಿದ್ದಿದೆ. ಈ ವೇಳೆ ಕೈಯಲ್ಲಿ ತೆಪ್ಪ ನಡೆಸುವಾಗ ತೆಪ್ಪ ಮಗುಚಿ ಇಬ್ಬರು ಟೆಕ್ಕಿಗಳು ಕೆರೆಗೆ ಬಿದ್ದಿದ್ದಾರೆ. ಟೆಕ್ಕಿ ಉಲ್ಲಾಸ ಈಜಿ ದಡ ಸೇರಿದ ಬದುಕುಳಿದ್ದಾರೆ. ಆದರೆ ಸಚಿನ್ ಮಾತ್ರ ಎಲ್ಲೂ ಪತ್ತೆಯಾಗಿಲ್ಲ. ತಕ್ಷಣ ಉಲ್ಲಾಸ್ ತನ್ನ ಅಣ್ಣನಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬಂದು ಕಲ್ಕೆರೆ ಕೆರೆಯಲ್ಲಿ ಟೆಕ್ಕಿ ಸಚಿನ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಮಧ್ಯಾಹ್ನನವಾದರೂ ಸಚಿನ್ ಪತ್ತೆಯಾಗಿಲ್ಲ.
ಉಲ್ಲಾಸ್ ಬ್ಯಾಗ್ ಹಾಕಿಕೊಂಡಿದ್ದರು. ಹೀಗಾಗಿ ಬ್ಯಾಗ್ ಹಾಕಿದ್ದರಿಂದ ಸೇಫ್ ಆಗಿ ಉಲ್ಲಾಸ್ ದಡ ಸೇರಿದ್ದಾರೆ. ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಈ ನಡೆದ ಘಟನೆ ನಡೆದಿದೆ. ಸಚಿನ್ ಮಾನ್ಯತಾ ಟೆಕ್ ಪಾರ್ಕ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಅಲ್ಲದೇ ಸಚಿನ್‍ಗೆ ಈಜು ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ಆದರೆ ತೆಪ್ಪ ಮಗುಚಿದಾಗ ಈಜಿ ದಡ ತಲುಪಲು ವಿಫಲರಾಗಿದ್ದಾರೆ.
ರಾತ್ರಿ ಸುಮಾರು 12 ಗಂಟೆಗೆ ಬೀಟ್ ಬಂದಿದ್ದೆ. ಬಳಿಕ ಮತ್ತೆ 3 ಗಂಟೆಗೆ ಬೀಟ್‍ಗೆ ಬಂದೆ. ಆದರೆ ಈ ವೇಳೆ ರಸ್ತೆ ಪಕ್ಕ ಕುಳಿತುಕೊಂಡು ಓರ್ವ ಅಳುತಿದ್ದರು. ಏನಾಯ್ತು ಅಂತ ಕೇಳಿದಾಗ ಕೆರೆಯಲ್ಲಿ ಮುಳುಗಿರುವ ಬಗ್ಗೆ ಹೇಳಿದರು. ರಾತ್ರಿ ಪಾರ್ಟಿ ಮಾಡೊಕೆ ಬಂದಿದ್ದಾರೆ. ಕುಡಿದು ಹೋದಾಗ ಈ ಘಟನೆ ಆಗಿದೆ. ಶುಕ್ರವಾರ ನಾನೊಬ್ಬನೇ ಇದ್ದೆ. ನಾನು ಬರುವ ವೇಳೆಗಾಗಲೇ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು. ಯಾರನ್ನೂ ಕೂಡ ಕೆರೆ ಒಳಗೆ ಬಿಡೋದಿಲ್ಲ. ಇವರು ಕುಡಿದು ಬಂದು ತೆಪ್ಪ ತೆಗೆದುಕೊಂಡು ಹೋಗಿದ್ದಾರೆ ಎಂದು ಕೆರೆಯ ಸೆಕ್ಯೂರಿಟಿ ರಾಜೇಶ್ ಹೇಳಿದ್ದಾನೆ.
ಅಪರೂಪಕ್ಕೆ ಗೆಳೆಯರು ಭೇಟಿ:
ಸಚಿನ್ ಮತ್ತು ಉಲ್ಲಾಸ್ ಇಬ್ಬರ ಅಪರೂಪಕ್ಕೆ ಭೇಟಿಯಾಗಿದ್ದರು. ಈ ಹಿಂದೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಇಬ್ಬರು ಬೇರೆ ಕಂಪನಿಗೆ ಕೆಲಸ ಬದಲಾಯಿಸಿದ್ದರು. ಅದರಂತೆ ಸಚಿನ್ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಉದ್ಯೋಗದಲ್ಲಿದ್ದರು. ವೀಕೆಂಡ್ ಹಿನ್ನೆಲೆಯಲ್ಲಿ ಶುಕ್ರವಾರ ಇಬ್ಬರು ಭೇಟಿಯಾಗಿದ್ದರು. ಈ ವೇಳೆ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿಸಿಕೊಂಡು ಕೆರೆಯಲ್ಲಿ ವಿಹಾರ ಮಾಡುವುದಕ್ಕೆ ಇಬ್ಬರು ಬಂದಿದ್ದರು. ಆಗ ಸಚಿನ್ ಬಲವಂತ ಮಾಡಿ ಉಲ್ಲಾಸ್ ಕರೆತಂದಿದ್ದರು. ಈ ಹಿಂದೆ ಒಂದು ಬಾರಿ ಇದೇ ರೀತಿ ತೆಪ್ಪದಲ್ಲಿ ವಿಹಾರ ಹೋಗಿ ಬಂದಿದ್ದರು. ಅದೇ ರೀತಿ ರಾತ್ರಿ ತೆಪ್ಪದಲ್ಲಿ ವಿಹಾರ ಮಾಡಲು ಬಂದಿದ್ದರು. ಇಬ್ಬರು ಬಂದ ವೇಳೆ ಈ ಅವಘಡ ಸಂಭವಿದೆ.
ಉಲ್ಲಾಸ್ ಹಾಗೂ ಸಚಿನ್ ಕೆರೆ ಮಧ್ಯದ ಐಲ್ಯಾಂಡ್‍ಗೆ ತೆರಳಲು ಮುಂದಾಗಿದ್ದರು. ಆದರೆ ಸಚಿನ್ ಹೆಚ್ಚು ಭಾರವಿದ್ದ, ಹೀಗಾಗಿ ಒಂದೇ ಕಡೆ ತೆಪ್ಪ ವಾಲಿತ್ತು. ಆದ್ದರಿಂದ ಕೆರೆ ಏರಿಯಿಂದ 100 ಮೀಟರ್ ತೆರಳುತ್ತಿದ್ದಂತೆ ತೆಪ್ಪ ಆಯ ತಪ್ಪಿದೆ. ಈ ವೇಳೆ ನೀರಿನಲ್ಲೇ ಹುಟ್ಟನ್ನು ಬಿಟ್ಟಿದ್ದಾರು. ಆಗ ತೆಪ್ಪದೊಳಗೆ ನೀರು ತುಂಬಿ ಮುಗುಚಿ ಬಿದ್ದಿತ್ತು. ಇಬ್ಬರು ನುರಿತ ಈಜಿಗಾರರಲ್ಲ, ಸಾಧಾರಣ ಈಜು ಕಲಿತಿದ್ದರು. ಸಚಿನ್ ಹೆಚ್ಚು ಭಾರ ಹಾಗೂ ಮದ್ಯಪಾನ ಮಾಡಿದ್ದರಿಂದ ಈಜಲಾಗದೇ ನೀರಿನಲ್ಲಿ ಮುಳುಗಿರೋ ಸಾಧ್ಯತೆ ಇದೆ ಎಂದು ಶಂಕಿಸಲಾಗುತ್ತಿದೆ.
ವರ್ಷದ ಹಿಂದೆ ಮದುವೆ:
ಉಲ್ಲಾಸ್ ಹಾಗೂ ಸಚಿನ್ ಇಬ್ಬರೂ ವರ್ಷದ ಹಿಂದೆ ಮದುವೆಯಾಗಿದ್ದರು. ಕಲ್ಕೆರೆಯ ಯುವತಿಯನ್ನು ಉಲ್ಲಾಸ್ ಮದುವೆಯಾಗಿದ್ದರು. ಅಲ್ಲದೇ ಉಲ್ಲಾಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿಯ ಸಹೋದರ ಕೃಷ್ಣಪ್ಪರ ಅಳಿಯರಾಗಿದ್ದಾರೆ. ಉಲ್ಲಾಸ್ ಹೆಂಡತಿ, ಉಲ್ಲಾಸ್ ಮತ್ತು ಅವರ ಸ್ನೇಹಿತ ಕೆರೆ ಬಳಿ ಹೋಗಿದ್ದರಂತೆ. ಆದರೆ ತೆಪ್ಪ ಮಗುಚಿ ಸಚಿನ್ ಕಾಣಿಸುತ್ತಿಲ್ಲ ಎಂದು ಅಪ್ಪನ ಬಳಿ ವಿಚಾರ ಹೇಳಿದ್ದಾರೆ. ಕೂಡಲೇ ಉಲ್ಲಾಸ್ ಮಾವ ಕೃಷ್ಣಪ್ಪ ಮೀನುಗಾರರಿಗೆ ಫೋನ್ ಮಾಡಿ ಕೆರೆ ಬಳಿ ಬಂದಿದ್ದಾರೆ. ಕಾರಿನಲ್ಲಿ ಇಡೀ ಪ್ರದೇಶವನ್ನು ಒಂದು ರೌಂಡ್ ಬಂದಿದ್ದಾರೆ. ಸಚಿನ್ ಕಾಣದಾದಾಗ ಅವರ ಪತ್ನಿ ಮತ್ತು ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ. ಈ ಘಟನೆಯ ಹಿನ್ನೆಲೆಯನ್ನು ಉಲ್ಲಾಸ್ ಮಾವ ಕೃಷ್ಣಪ್ಪ ಸಂಪೂರ್ಣವಾಗಿ ವಿವರಿಸಿದ್ದಾರೆ.