Tag: lake

  • ಲಾಕ್‍ಡೌನ್ ಸಮಯದಲ್ಲಿ ಹಣ ಕೂಡಿಸಿ, ಬಡಾವಣೆ ನಿವಾಸಿಗಳಿಂದ ಕೆರೆ ನಿರ್ಮಾಣ

    ಲಾಕ್‍ಡೌನ್ ಸಮಯದಲ್ಲಿ ಹಣ ಕೂಡಿಸಿ, ಬಡಾವಣೆ ನಿವಾಸಿಗಳಿಂದ ಕೆರೆ ನಿರ್ಮಾಣ

    ಧಾರವಾಡ: ಕಳೆದ 8 ವರ್ಷಗಳಿಂದ ಕೆರೆ ನಿರ್ಮಾಣಕ್ಕಾಗಿ ಸರ್ಕಾರವನ್ನು ಎದುರು ಕಣ್ಣು ತೆರೆದು ಕುಳಿತಿದ್ದ ಬಡಾವಣೆಯ ಜನತೆ, ಕಾದು ಬೇಸತ್ತು ಇದೀಗ ತಾವೇ ಮುಂದೆ ನಿಂತು ಕೆರೆ ನಿರ್ಮಾಣ ಮಾಡಿದ್ದಾರೆ.

    ಜನ ಮನಸು ಮಾಡಿದರೆ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಧಾರವಾಡದ ಲಕಮನಹಳ್ಳಿ ಕೆರೆ ಉದಾಹರಣೆಯಾಗಿದ್ದು, ಧಾರವಾಡ ಹೊರವಲಯದ ಲಕಮನಹಳ್ಳಿ ಕೈಗಾರಿಕಾ ಪ್ರದೇಶದ ಬಸವೇಶ್ವರ, ಶಾಖಾಂಬರಿ ನಗರ, ನಂದಿನ ಲೇಔಟ್ ಹಾಗೂ ಗುರುದೇವ ನಗರದ ಜನತೆ ಲಾಕ್‍ಡೌನ್ ಸಮಯದಲ್ಲಿ 1.05 ಎಕರೆ ಕೆರೆಯನ್ನು ನಿರ್ಮಾಣ ಮಾಡಿ ಮೆಚ್ಚುಗೆಗೆ ಪಾತ್ರಾಗಿದ್ದಾರೆ.

    ಈ ಮೂಲಕ ಹಲವು ವರ್ಷಗಳ ತಮ್ಮ ಮಹದಾಸೆಯನ್ನು ತಾವೇ ಸಾಕಾರಗೊಳಿಸಿದ್ದಾರೆ. ಕಳೆದ 8 ವರ್ಷಗಳಿಂದ ಕೆರೆ ನಿರ್ಮಾಣ ಮಾಡುವಂತೆ ಇಲ್ಲಿಯ ಜನರು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಯಾರೂ ಕೈ ಜೋಡಿಸಲಿಲ್ಲ. ನಂತರ ಲಾಕ್‍ಡೌನ್ ಸಮಯದಲ್ಲಿ ಕೆರೆ ಜಾಗವನ್ನು ಸ್ವಚ್ಛಗೊಳಿಸಿದ ನಿವಾಸಿಗಳು, ನಾವೇ ಯಾಕೆ ಕೆರೆ ನಿರ್ಮಾಣ ಮಾಡಬಾರದು ಎಂದು ಕೆಲಸ ಪ್ರಾರಂಭಿಸಿದರು.

    ಅದೇ ರೀತಿ 3.5 ಲಕ್ಷ ರೂ.ಹಣವನ್ನು ತಮ್ಮ ಬಡಾವಣೆಯ ಜನರಿಂದ ಸಂಗ್ರಹಿಸಿದರು. ಕೆಲವರು ಹಣದ ಜೊತೆ ಶ್ರಮದಾನ ಮಾಡಿದ್ರೆ, ಇನ್ನು ಕೆಲವರು ಹಣ ಕೊಟ್ಟರು. ಪ್ರತಿಯೊಬ್ಬರೂ ತಮ್ಮ ಶಕ್ತಿಗೆ ತಕ್ಕಂತೆ 2 ಸಾವಿರದಿಂದ 50 ಸಾವಿರ ವರೆಗೆ ಹಣ ನೀಡಿದ್ದಾರೆ. ಕೆರೆ ಒತ್ತುವರಿ ಮಾಡಿದವರನ್ನು ಬಿಡಿಸಿ, ಜನರೇ ಕೆರೆ ನಿರ್ಮಾಣ ಮಾಡಲು ಲಾಕ್‍ಡೌನ್ ಕೂಡಾ ಕಾರಣವಾಯಿತು.

  • ಕೊರೊನಾ ಭೀತಿಯಿಂದ ಕೆರೆ ನೀರನ್ನೇ ಕುಡಿಯದ ಗ್ರಾಮಸ್ಥರು: ಇಕ್ಕಟ್ಟಿನಲ್ಲಿ ಅಧಿಕಾರಿಗಳು

    ಕೊರೊನಾ ಭೀತಿಯಿಂದ ಕೆರೆ ನೀರನ್ನೇ ಕುಡಿಯದ ಗ್ರಾಮಸ್ಥರು: ಇಕ್ಕಟ್ಟಿನಲ್ಲಿ ಅಧಿಕಾರಿಗಳು

    ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಶಾಖಾಪುರದಲ್ಲಿ ವ್ಯಕ್ತಿ  ಕೆರೆಗೆ ಕಲ್ಲು ಎಸೆದಿದ್ದರಿಂದ ಗ್ರಾಮಸ್ಥರು ಕೊರೊನಾ ಭೀತಿಯಿಂದ ಕೆರೆ ನೀರನ್ನ ಹೊರಹರಿಸಿದ ಪ್ರಕರಣ ಈಗ ಗಂಭೀರವಾಗುತ್ತಿದೆ.

    ಈ ಕುರಿತು ಪಬ್ಲಿಕ್ ಟಿವಿ ಸಹ ವರದಿ ಪ್ರಸಾರ ಮಾಡಿತ್ತು. ಸಿರವಾರ ತಹಶೀಲ್ದಾರ್ ಕೆ.ಶೃತಿ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆರೆಯಲ್ಲಿ ಉಳಿದಿರುವ ನೀರನ್ನ ಹೊರಬಿಡದಂತೆ ಎಚ್ಚರಿಸಿದ್ದಾರೆ.

    ಗ್ರಾಮ ಪಂಚಾಯ್ತಿ ಪಿಡಿಓ ಕೆರೆಯ ಹೂಳು ತೆಗೆಯಲು ನೀರು ಹೊರಬಿಟ್ಟಿರುವುದಾಗಿ ಸಮಜಾಯಿಷಿ ನೀಡಿದ್ದಾರಾದ್ರೂ ತಹಶೀಲ್ದಾರ್ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನೀರನ್ನ ಹೊರಬಿಡಬಾರದು. ನೀರಿನ ಪರೀಕ್ಷೆ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಪಕ್ಕದ ಗ್ರಾಮದ ವ್ಯಕ್ತಿ ಕೆರೆಗೆ ಕಲ್ಲನ್ನ ಎಸೆದಿದ್ದು ಕೊರೊನಾ ಭೀತಿಯಿಂದ ಜನ ಕೆರೆ ನೀರನ್ನೇ ಖಾಲಿ ಮಾಡಲು ಮುಂದಾಗಿದ್ದರು.

    ಪಂಪ್ ಸೆಟ್ ಕೆಟ್ಟಿದ್ದರಿಂದ ಕೆರೆಯಲ್ಲಿ ಅಲ್ಪಸ್ವಲ್ಪ ನೀರು ಉಳಿದಿದೆ. ಕೆರೆಗೆ ಕಲ್ಲು ಎಸೆದ ವ್ಯಕ್ತಿ ಈಗಾಗಲೇ ಕೆರೆ ನೀರನ್ನ ಕುಡಿದಿದ್ದಾನೆ. ಅದೇ ನೀರಲ್ಲಿ ಸ್ನಾನ ಮಾಡಿದ್ದಾನೆ. ಆದ್ರೆ ಗ್ರಾಮಸ್ಥರಿಗೆ ಅನುಮಾನ ಮಾತ್ರ ಹೋಗಿಲ್ಲ. ಕೆರೆ ನೀರನ್ನ ಬಿಟ್ಟು ಈಗ ಬೋರ್ ವೆಲ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.

  • ಪಕ್ಕದೂರಿನ ಅಸಾಮಿ ಕಲ್ಲು ಎಸೆದಿದ್ದರಿಂದ ಕೆರೆ ನೀರನ್ನೇ ಖಾಲಿ ಮಾಡಿದ ಗ್ರಾಮಸ್ಥರು!

    ಪಕ್ಕದೂರಿನ ಅಸಾಮಿ ಕಲ್ಲು ಎಸೆದಿದ್ದರಿಂದ ಕೆರೆ ನೀರನ್ನೇ ಖಾಲಿ ಮಾಡಿದ ಗ್ರಾಮಸ್ಥರು!

    ರಾಯಚೂರು: ಅನುಮಾನಕ್ಕಿಂತ ದೊಡ್ಡ ರೋಗವಿಲ್ಲ ಅಂತಾರೆ, ನಿಜ ಇಂತಹದ್ದೇ ಅನುಮಾನದಿಂದ ರಾಯಚೂರಿನ ಸಿರವಾರ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ಗ್ರಾಮಸ್ಥರು ಕೆರೆಯಲ್ಲಿದ್ದ ಕುಡಿಯುವ ನೀರಿನ್ನೇ ಖಾಲಿಮಾಡಿ ಈಗ ಪರದಾಡುತ್ತಿದ್ದಾರೆ. ಪಕ್ಕದ ಅತ್ತನೂರು ಗ್ರಾಮದ ವ್ಯಕ್ತಿಯೋರ್ವ ಕೆರೆಗೆ ಏನನ್ನೋ ಎಸೆದ ಎಂಬ ಕಾರಣಕ್ಕೆ ಅವನು ಏನೋ ಕೆಟ್ಟದ್ದನ್ನೇ ಎಸೆದಿದ್ದಾನೆ ಎಂದು ಕೆರೆಯ ನೀರನ್ನೇ ಖಾಲಿಮಾಡಿದ್ದಾರೆ.

    ಕೊರೊನಾ ವೈರಸ್ ಆತಂಕ ಕೂಡ ಜನರನ್ನು ಕಾಡಿದೆ. ಕೆರೆಗೆ ಕಲ್ಲಿನ ರೂಪದ ವಸ್ತುವನ್ನ ಎಸೆದ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರಿಂದ ಗ್ರಾಮಸ್ಥರ ಅನುಮಾನ ಬಲವಾಗಿದೆ. ಆದರೆ ಮರುದಿನ ಗ್ರಾಮಸ್ಥರು ಹಾಗೂ ಸಿರವಾರ ಠಾಣೆ ಪೊಲೀಸರ ಸಮ್ಮುಖದಲ್ಲಿ ಆ ವ್ಯಕ್ತಿ ಕೆರೆಯ ನೀರನ್ನು ಸ್ವತಃ ಕುಡಿದು, ನನ್ನಿಂದ ತಪ್ಪಾಗಿಲ್ಲ ಕೇವಲ ಕಲ್ಲನ್ನ ಎಸೆದಿದ್ದೆ ಎಂದು ಸ್ಪಷ್ಟಪಡಿಸಿದ್ದಾನೆ. ಆದರೆ ಗ್ರಾಮಸ್ಥರಲ್ಲಿ ಅನುಮಾನ ಕಡಿಮೆಯಾಗದ ಹಿನ್ನೆಲೆ ಕೆರೆ ನೀರನ್ನು ಪಂಪ್ ಸೆಟ್ ನಿಂದ ಖಾಲಿಮಾಡಲಾಗಿದೆ.

    ಕೆರೆಯ ಬಳಿಯ ಶುದ್ಧಕುಡಿಯುವ ನೀರಿನ ಘಟಕದಲ್ಲಿ ನೀರು ಕೇಳಿದ್ದಕ್ಕೆ, ಘಟಕದ ಸಿಬ್ಬಂದಿ ಹಣ ಕೇಳಿದ್ದಾರೆ. ಇದೇ ಗ್ರಾಮದ ಪಂಚಾಯ್ತಿಯಲ್ಲಿ ಲೈನ್ ಮ್ಯಾನ್ ಆಗಿ ಈ ಹಿಂದೆ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಹಣಕೊಟ್ಟು ನೀರು ಪಡೆಯದೇ ಕೆರೆಯ ನೀರನ್ನು ಕುಡಿದು ಕೆರೆಗೆ ಕಲ್ಲು ಎಸೆದಿದ್ದಾನೆ. ಇದನ್ನು ಗಮನಿಸಿದ ಗ್ರಾಮಸ್ಥರು ಏನೋ ವಿಷಕಾರಿ ವಸ್ತುವನ್ನ ಎಸೆದಿದ್ದಾನೆ ಎಂದು ಅನುಮಾನಗೊಂಡಿದ್ದಾರೆ ಎನ್ನಲಾಗಿದೆ.

    ಕೆರೆಯಲ್ಲಿ ನೀರು ಖಾಲಿಯಾಗಿದ್ದರಿಂದ ಈಗ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಆದಷ್ಟು ಬೇಗ ಕೆರೆಯನ್ನ ತುಂಬಿಸುವುದಾಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

  • ಕೆರೆಗೆ ವಿಷ ಪ್ರಾಶನದ ಶಂಕೆ- ಸಾವಿರಾರು ಮೀನುಗಳ ಮಾರಣ ಹೋಮ

    ಕೆರೆಗೆ ವಿಷ ಪ್ರಾಶನದ ಶಂಕೆ- ಸಾವಿರಾರು ಮೀನುಗಳ ಮಾರಣ ಹೋಮ

    ಚಿಕ್ಕಮಗಳೂರು: ಸಂಜೆ ಬಲೆ ಹಾಕಲು ಹೋದಾಗ ಚೆನ್ನಾಗಿದ್ದ ಮೀನುಗಳು ಬೆಳಗ್ಗೆ ಬಲೆ ತೆಗೆಯಲು ಹೋದಾಗ ಸತ್ತು ಕೆರೆ ದಡಕ್ಕೆ ತೇಲಿಕೊಂಡು ಬಂದಿರುವ ಘಟನೆ ನಗರದ ಆದಿಶಕ್ತಿ ನಗರದಲ್ಲಿ ನಡೆದಿದೆ.

    ಚಿಕ್ಕಮಗಳೂರು ನಗರದ ಆದಿಶಕ್ತಿ ನಗರದ ನಿವಾಸಿ ಶಾಯಿನ್ ಎಂಬವರು ಸ್ಥಳೀಯ ಕೆರೆಯನ್ನ ಟೆಂಡರ್ ಕೂಗಿಕೊಂಡು ಮೀನುಗಳನ್ನ ಸಾಕಿದ್ದರು. ಐದು ವರ್ಷಗಳ ಅವಧಿಗೆ ಶಾಯಿನ್ ಅವರೇ ಕೆರೆಯ ಟೆಂಡರ್ ತೆಗೆದುಕೊಂಡಿದ್ದರು. ಸಾವಿರಾರು ಮೌಲ್ಯದ ಲಕ್ಷಾಂತರ ಮೀನುಗಳನ್ನ ಕೆರೆಯಲ್ಲಿ ಬಿಟ್ಟಿದ್ದರು. ಮೀನಿಗಾಗಿ ನಿನ್ನೆ ಸಂಜೆ ಬಲೆ ಹಾಕುವಾಗ ಮೀನುಗಳು ಚೆನ್ನಾಗಿದ್ದವು. ಏನೂ ಆಗಿರಲಿಲ್ಲ. ಆದರೆ ಇಂದು ಬೆಳಗ್ಗೆ ಮೀನಿಗಾಗಿ ಹಾಕಿದ್ದ ಬಲೆಯನ್ನ ತೆಗೆಯಲು ಹೋದಾಗ ಸಾವಿರಾರು ಮೀನುಗಳು ಸತ್ತು ಕೆರೆಯ ದಡಕ್ಕೆ ತೇಲಿಕೊಂಡು ಬಂದಿದ್ದವು. ಇದನ್ನ ಕಂಡ ಶಾಯಿನ್ ತೀವ್ರ ಆತಂಕಕ್ಕೀಡಾಗಿದ್ದಾರೆ.

    ಯಾರೋ ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿದ್ದಾರೆಂದು ಶಂಕಿಸಲಾಗಿದೆ. ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆದಮೇಲೆ ಶಾಯಿನ್ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೀಡಾಗಿದ್ದರು. ವ್ಯವಹಾರವೂ ಇಲ್ಲದೆ ಕಂಗಾಲಾಗಿದ್ದರು. ಮೀನುಗಳು ದಪ್ಪ ಆಗಿವೆ ಲಾಕ್‍ಡೌನ್ ಕ್ರಮೇಣ ಸಂಪೂರ್ಣ ಸಡಿಲಿಕೆಯಾಗ್ತಿದೆ. ವ್ಯಾಪಾರಕ್ಕೆ ಯಾವುದೇ ತೊಂದರೆ ಇಲ್ಲವೆಂದು ಮೀನುಗಳ ಹಿಡಿಯಲು ಕೆರೆಯಲ್ಲಿ ಬಲೆ ಹಾಕಿ ಬೆಳಗ್ಗೆ ಎದ್ದು ಹೋಗುವಷ್ಟರಲ್ಲಿ ಮೀನುಗಳು ಸತ್ತಿದ್ದು ಸಾಲ ಮಾಡಿ ಮೀನು ಮರಿಗಳನ್ನ ಸಾಕಿದ್ದ ಶಾಯಿನ್ ಜರ್ಜರಿತರಾಗಿದ್ದಾರೆ.

    ಸಾಂದರ್ಭಿಕ ಚಿತ್ರ

     

    ಕೆರೆಯ ಟೆಂಡರ್ ಸಿಗದ ಕಾರಣ ಶಾಯಿನ್ ಅವರ ಮೇಲಿನ ಸಿಟ್ಟಿಗೆ ಕೆರೆಗೆ ವಿಷ ಹಾಕಿರಬಹುದೆಂದು ಅನುಮಾನಿಸಲಾಗಿದೆ. ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಗ್ರಾಮಾಂತರ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ

  • ಬೆಂಗ್ಳೂರಿನ ಮೂವರು ಯುವಕರು ದೊಡ್ಡಬಳ್ಳಾಪುರದಲ್ಲಿ ನೀರು ಪಾಲು

    ಬೆಂಗ್ಳೂರಿನ ಮೂವರು ಯುವಕರು ದೊಡ್ಡಬಳ್ಳಾಪುರದಲ್ಲಿ ನೀರು ಪಾಲು

    – ಹುಟ್ಟುಹಬ್ಬ ಆಚರಿಸಲು ಲಾಂಗ್ ಡ್ರೈವ್
    – ನಾಲ್ಕು ಬೈಕ್‍ನಲ್ಲಿ ಬಂದಿದ್ದ ಯುವಕರು, ಯುವತಿಯರು

    ಚಿಕ್ಕಬಳ್ಳಾಪುರ: ಕೊರೊನಾ ಲಾಕ್‍ಡೌನ್ ಸಡಿಲಿಕೆಯ ಬಳಿಕ ಬೆಂಗಳೂರಿನಿಂದ ಲಾಂಗ್ ಡ್ರೈವ್ ಬಂದ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತಿಪ್ಪಗಾನಹಳ್ಳಿ ಕೆರೆಯಲ್ಲಿ ನಡೆದಿದೆ.

    ಬೆಂಗಳೂರಿನ ರಾಮಮೂರ್ತಿನಗರದ ಚಂದ್ರು(20), ರಾಜು(19) ಹಾಗೂ ನವೀನ್ (24) ಮೃತ ದುರ್ದೈವಿಗಳು. ರಾಮಮೂರ್ತಿ ನಗರದಿಂದ ನಾಲ್ಕು ಬೈಕ್‍ಗಳ ಮೂಲಕ ನಾಲ್ವರು ಯುವಕರು ಹಾಗೂ ನಾಲ್ವರು ಯುವತಿಯರು ಲಾಂಗ್ ಡ್ರೈವ್ ಬಂದಿದ್ದರು.

    ನವೀನ್ ಕುಮಾರ್ ಹುಟ್ಟು ಹಬ್ಬದ ಹಿನ್ನೆಲೆ ಯುವಕ, ಯುವತಿಯರು ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ದೇವಾಲಯದ ಬಾಗಿಲು ಮುಚ್ಚಿದ್ದರಿಂದ ಹೊರಗೆ ನಿಂತು ಕೈ ಮುಗಿದು ತದನಂತರ ಕೆರೆ ಬಳಿ ಬಂದಿದ್ದರು. ಈ ವೇಳೆ ಈಜಲು ಹೋದ ಮೂವರು ಕೆರೆಯ ಪಾಲಾಗಿದ್ದಾರೆ.

    ಈ ಸಂಬಂಧ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಮೃತದೇಹಗಳಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ.

  • ರಮೇಶ್ ಕುಮಾರ್ ಲಾಕ್‍ಡೌನ್ ಉಲ್ಲಂಘನೆ- ನೂರಾರು ಜನ ಸೇರಿಸಿ ಕೆರೆ ಪೂಜೆ

    ರಮೇಶ್ ಕುಮಾರ್ ಲಾಕ್‍ಡೌನ್ ಉಲ್ಲಂಘನೆ- ನೂರಾರು ಜನ ಸೇರಿಸಿ ಕೆರೆ ಪೂಜೆ

    – ಮಾಜಿ ಸ್ಪೀಕರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರ ಆಕ್ರೋಶ

    ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೂರಾರು ಜನರನ್ನು ಸೇರಿಸಿ ಕರೆಯಲ್ಲಿ ಪೂಜೆ ಮಾಡುವ ಮೂಲಕ ಲಾಕ್‍ಡೌನ್ ನಿಯಮ ಉಲ್ಲಂಘಿಸಿದ್ದಾರೆ.

    ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಆಲವಾಟ್ಟ ಗ್ರಾಮದ ಕೆರೆಗೆ ಕೆ.ಸಿ.ವ್ಯಾಲಿ ನೀರು ಹರಿದ ಹಿನ್ನೆಲೆ ತಮ್ಮದೆ ಮುಖಂಡರು, ಸ್ಥಳೀಯರನ್ನು ಸೇರಿಸಿಕೊಂಡು ಪೂಜೆ ಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಪೂಜೆ ವೇಳೆ ನೂರಾರು ಜನರ ಜಮಾವಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಮಾಜಿ ಸ್ಪೀಕರ್ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಡವರಿಗೊಂದು, ಶ್ರೀಮಂತರಿಗೊಂದು ನ್ಯಾಯಾನಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಬಡವರ ಮದುವೆಗೆ 10 ಜನರಿಗೆ ಮಾತ್ರ ಅವಕಾಶ ನೀಡುವ ಸರ್ಕಾರ, ಜನಪ್ರತಿನಿಧಿಗಳಿಗೆ ಈ ರೀತಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಕೆರೆ ಪೂಜೆಗೆ ನೂರಾರು ಜನರನ್ನು ಸೇರಿಸಿಕೊಂಡ ರಮೇಶ್ ಕುಮಾರ್ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇನ್ನೂ ವಿಶೇಷವೆಂದರೆ ಇದನ್ನು ರಮೇಶ್ ಕುಮಾರ್ ಬೆಂಬಲಿಗರು ಫೇಸ್‍ಬುಕ್ ನಲ್ಲಿ ಲೈವ್ ಮಾಡಿದ್ದಾರೆ.

  • ಕೆರೆಗೆ ವಿಷ ಹಾಕಿದ ಕಿಡಿಗೇಡಿಗಳು – ಸಾವಿರಾರು ಮೀನುಗಳ ಮಾರಣಹೋಮ

    ಕೆರೆಗೆ ವಿಷ ಹಾಕಿದ ಕಿಡಿಗೇಡಿಗಳು – ಸಾವಿರಾರು ಮೀನುಗಳ ಮಾರಣಹೋಮ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಾಡೇಲು ಎಂಬಲ್ಲಿ ಕಿಡಿಗೇಡಿಗಳು ಫಲ್ಗುಣಿ ನದಿಗೆ ವಿಷ ಹಾಕಿದ ಪರಿಣಾಮ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ.

    ಬೆಳ್ತಂಗಡಿಯ ವೇಣೂರು ಸಮೀಪದ ಮೂಡುಕೋಡಿ ಗ್ರಾಮದ ನಡ್ತಿಕಲ್ಲಿನ ದಾಡೇಲು ನದಿಯ ದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿದೆ. ದುರ್ನಾತದಿಂದ ಆ ಪರಿಸರಕ್ಕೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದ್ದು, ರೋಗ ಹರಡುವ ಭೀತಿ ಎದುರಾಗಿದೆ.

    ಪ್ರಾಣಿ ಪಕ್ಷಿಗಳು ಈ ವಿಷ ನೀರನ್ನೇ ಕುಡಿಯುತ್ತಿದ್ದು, ಅವುಗಳು ಕೂಡ ಸಾಯುವ ಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ಕೆಲವು ಹಕ್ಕಿಗಳು ಸತ್ತು ಬಿದ್ದಿರುವ ವಿಷಯುಕ್ತ ಮೀನುಗಳನ್ನು ತಿನ್ನುತ್ತಿದೆ. ಈ ಕೆಲಸ ಯಾರೇ ಮಾಡಿರಲಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಒಂದು ವೇಳೆ ಸರಿಯಾದ ಶಿಕ್ಷೆ ಆಗದೇ ಇದ್ದಲ್ಲಿ ಹೋರಾಟದ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ.

    ಸ್ಥಳೀಯ ಒಂದು ತಂಡದ ಮೇಲೆ ಸಂಶಯ ವ್ಯಕ್ತಪಡಿಸಿದ ಸ್ಥಳೀಯರು, ಆ ತಂಡವನ್ನು ಸರಿಯಾಗಿ ವಿಚಾರಿಸಿದರೆ ಸತ್ಯ ಹೊರಬರಬಹುದು ಎನ್ನುತ್ತಿದ್ದಾರೆ. ಅದೇ ರೀತಿ ಈ ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೂ ಆಸಡ್ಡೆ ತೋರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ನಂಜನಗೂಡಿನಲ್ಲಿ ಮೀನಿಗಾಗಿ ಕೆರೆ ಬಳಿ ಮುಗಿಬಿದ್ದ ಜನರು

    ನಂಜನಗೂಡಿನಲ್ಲಿ ಮೀನಿಗಾಗಿ ಕೆರೆ ಬಳಿ ಮುಗಿಬಿದ್ದ ಜನರು

    ಮೈಸೂರು: ನಂಜನಗೂಡು ತಾಲೂಕಿನ ಹರತಲೆ ಗ್ರಾಮದಲ್ಲಿ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಜನರು ಮೀನು ಖರೀದಿಸಿದ್ದಾರೆ.

    ಮಾಂಸ ಮತ್ತು ಮೀನು ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ್ದರೂ, ಜನ ಮಾತ್ರ ಸಿಗುತ್ತೋ? ಇಲ್ವೋ ಎಂಬಂತೆ ಒಬ್ಬರ ಮೇಲೆ ಒಬ್ಬರು ಬಿದ್ದು ಮೀನು ಖರೀದಿಸಿದ್ದಾರೆ. ಹರತಲೆ ಗ್ರಾಮದ ಕೆರೆಯ ಬಳಿ ಕಾದು ಕುಳಿತಿದ್ದ ಜನರು, ಮೀನು ಬರುತ್ತಿದ್ದಂತೆ ಮುಗಿಬಿದ್ದಿದ್ದಾರೆ. ಮೀನು ಖರೀದಿಸುವ ಅವಸರದಲ್ಲಿ ಯಾರು ಸಹ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಮಾಸ್ಕ್ ಸಹ ಹಾಕದೇ ನಿರ್ಲಕ್ಷ್ಯ ತೋರಿದ್ದಾರೆ.

    ನಂಜನಗೂಡಿನ ಜ್ಯೂಬಿಲಿಯೆಂಟ್ಸ್ ಕಾರ್ಖಾನೆಯಿಂದಲೇ ಇಲ್ಲಿಯವರೆಗೆ 71 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಜ್ಯೂಬಿಲಿಯೆಂಂಟ್ಸ್ ಕಾರ್ಖಾನೆಯ 2 ಸಾವಿರಕ್ಕಿಂತ ಹೆಚ್ಚು ಮಂದಿಯ ಪರೀಕ್ಷೆ ನಡೆಸಲಾಗಿದೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದ ಪರೀಕ್ಷೆಯೂ ಮುಗಿದಿದೆ. ಮಂಗಳವಾರ ಒಂದೇ ದಿನ 160 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷೆಯ ಫಲಿತಾಂಶ ಬಂದ್ರೆ ಅಲ್ಲಿಗೆ ನಂಜನಗೂಡು ಕಾರ್ಖಾನೆಯಿಂದ ಹಬ್ಬಿದ ನಂಜಿನ ಮೂಲದ ಪರೀಕ್ಷೆ ಕೊನೆ ಆಗಲಿದೆ. ತಾಲೂಕಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದ್ರೂ, ಹರತಲೆ ಗ್ರಾಮಸ್ಥರಿಗೆ ಪ್ರಾಣಕ್ಕಿಂತ ಮೀನು ಹೆಚ್ಚಾದಂತೆ ಕಾಣಿಸಿದೆ.

  • ಲಾಕ್‍ಡೌನ್ ನಡುವೆಯೂ ದುಡಿಯುವ ಕೈಗಳಿಗೆ ಕೆಲಸ ನೀಡಿದ ಈಶ್ವರಪ್ಪ

    ಲಾಕ್‍ಡೌನ್ ನಡುವೆಯೂ ದುಡಿಯುವ ಕೈಗಳಿಗೆ ಕೆಲಸ ನೀಡಿದ ಈಶ್ವರಪ್ಪ

    ಶಿವಮೊಗ್ಗ: ದೇಶವೇ ಲಾಕ್‍ಡೌನ್‍ನಿಂದಾಗಿ ನಲುಗಿ ಹೋಗುತ್ತಿದ್ದು, ಅದೆಷ್ಟೋ ದುಡಿಯುವ ಮಂದಿ ಕೈಕಟ್ಟಿ ಮನೆಯಲ್ಲೇ ಕುಳಿತುಕೊಳ್ಳುವಂತಹ ಸ್ಥಿತಿ ಎದುರಾಗಿದೆ. ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮಾತ್ರ ಎನ್.ಆರ್.ಇ.ಜಿ. ಯೋಜನೆ ಅಡಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡಿದ್ದಾರೆ.

    ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆರೆಗಳಲ್ಲಿ ಹೂಳೆತ್ತುವ ಕಾಮಗಾರಿ ನಡೆಸಿದ್ದಾರೆ. ಕೊರೊನಾ ವೈರಸ್ ಸೋಂಕು ಭೀತಿ ಹಿನ್ನೆಲೆಯಲ್ಲಿ, ದೂರ ದೂರ ನಿಂತು ಕೆಲಸ ಮಾಡುವಂತೆ ಸೂಚನೆ ಕೂಡ ನೀಡಿದ್ದು, ಜಿಲ್ಲೆಯ 9 ಕೆರೆಗಳಲ್ಲಿನ ಹೂಳು ತೆಗೆಯುವ ಯೋಜನೆಗೆ ಚಾಲನೆ ನೀಡಿದ್ದಾರೆ.

    ಇಂದು ಶಿವಮೊಗ್ಗ ಗ್ರಾಮಾಂತರ ತಾಲ್ಲೂಕಿನ ಸೋಗಾನೆ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಅಗಸನ ಕಟ್ಟೆ ಕೆರೆ ಅಭಿವೃದ್ಧಿಗೆ ಉದ್ಯೋಗ ಚೀಟಿ ವಿತರಣೆ ಮಾಡಿದರು. ಮಾನವ ದಿನಗಳ ಪ್ರಕಾರ ಉದ್ಯೋಗ ಮಾಡಿದವರಿಗೆ ಸೂಕ್ತ ಸಮಯದೊಳಗೆ ಹಣ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ದುಡಿಯುವ ಕಾರ್ಮಿಕರಿಗೆ ಕೋವಿಡ್-19 ವೈರಸ್ ಸೋಂಕು ಹಿನ್ನೆಲೆಯಲ್ಲಿ ಪ್ರಮಾಣ ವಚನ ಕೂಡ ಬೋಧಿಸಿದರು.

    ಕೆಲಸ ಮಾಡುವ ವೇಳೆಯಲ್ಲಿ ಕೆಮ್ಮು, ಜ್ವರ, ಶೀತ ಸಮಸ್ಯೆ ಏನಾದರೂ ಕಂಡು ಬಂದರೆ ನಮ್ಮ ಅಧಿಕಾರಿಗಳಿಗೆ ತಕ್ಷಣ ತಿಳಿಸಿ ಎಂದು ಮನವಿ ಮಾಡಿದರು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸುತ್ತೇವೆ ಎಂದು ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಸಿ.ಇ.ಓ ವೈಶಾಲಿ, ಜಿ.ಪಂ. ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್, ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಸೇರಿದಂತೆ, ಇತರರು ಉಪಸ್ಥಿತರಿದ್ದರು.

  • ಜಾನುವಾರುಗಳಿಗೆ ನೀರು ತರಲು ಹೋಗಿ ಒಂದೇ ಕುಟುಂಬದ ಮೂರು ಮಕ್ಕಳು ಸಾವು

    ಜಾನುವಾರುಗಳಿಗೆ ನೀರು ತರಲು ಹೋಗಿ ಒಂದೇ ಕುಟುಂಬದ ಮೂರು ಮಕ್ಕಳು ಸಾವು

    ರಾಯಚೂರು: ಜಾನುವಾರುಗಳಿಗೆ ಕುಡಿಯಲು ನೀರು ತರಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೂರು ಮಕ್ಕಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ರೌಡಕುಂದಾ ಗ್ರಾಮದಲ್ಲಿ ನಡೆದಿದೆ.

    ನಾಗರಾಜ್ (10), ಕಾರ್ತಿಕ್ (8) ಹಾಗೂ ರವಿಕುಮಾರ್ (7) ಮೃತ ಬಾಲಕರು. ಮೃತ ಬಾಲಕರು ಒಂದೇ ಕುಟುಂಬದವರಾಗಿದ್ದು, ಇಂದು ಬೆಳಗ್ಗೆ ಸುಮಾರು 7 ಗಂಟೆಗೆ ಜಾನುವಾರಗಳಿಗಾಗಿ ನೀರು ತರಲು ಗ್ರಾಮದ ಹೊರವಲಯದಲ್ಲಿನ ಕೆರೆಯಲ್ಲಿ ಹೋಗಿದ್ದಾರೆ.

    ಈ ವೇಳೆ ಒಬ್ಬ ಬಾಲಕ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ನೋಡಿದ ಮತ್ತೊಬ್ಬ ಬಾಲಕ ಆತನನ್ನು ಕಾಪಾಡಲು ಹೋಗಿ ಆತನೂ ಕೆರೆಯಲ್ಲಿ ಮುಳುಗಿದ್ದಾನೆ. ಈ ರೀತಿ ಮೂರು ಮಕ್ಕಳು ಒಬ್ಬರನ್ನ ಕಾಪಾಡಲು ಒಬ್ಬರು ಹೋಗಿ ಮೂವರು ನೀರುಪಾಲಾಗಿದ್ದಾರೆ. ಸ್ಥಳಿಯರು ಕೆರೆಯ ಬಳಿ ಹೋಗಿ ನೋಡಿದಾಗ ಬಾಲಕರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತಕ್ಷಣ ಈ ಬಗ್ಗೆ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.