Tag: lake

  • 15 ವರ್ಷಗಳ ಬಳಿಕ ತುಂಬಿದ ಕೋಲಾರದ ಕೆರೆ- ನೀರಲ್ಲಿ ಕುಣಿದು ಕುಪ್ಪಳಿಸಿದ ಬಯಲುಸೀಮೆ ಜನ

    15 ವರ್ಷಗಳ ಬಳಿಕ ತುಂಬಿದ ಕೋಲಾರದ ಕೆರೆ- ನೀರಲ್ಲಿ ಕುಣಿದು ಕುಪ್ಪಳಿಸಿದ ಬಯಲುಸೀಮೆ ಜನ

    – ರಮೇಶ್ ಕುಮಾರ್ ಸೇರಿ ಮೂರು ಪಕ್ಷದ ಗಣ್ಯರಿಂದ ಬಾಗಿನ ಅರ್ಪಣೆ

    ಕೋಲಾರ: ನದಿ, ನಾಲೆಗಳಿಲ್ಲದ ಬರಗಾಲದ ಜಿಲ್ಲೆ, ಮಳೆ ಬರುವುದೇ ಅಪರೂಪ. ಪ್ರತಿ ವರ್ಷ ಯಾವಾಗ ಮಳೆ ಬರುತ್ತೋ ಎಂದು ಜನ ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಳೆ ರಾತ್ರೋರಾತ್ರಿ ಸುಂದರ, ನಯನ ಮನೋಹರ, ರಮಣೀಯ ಸ್ಥಳವನ್ನು ಸೃಷ್ಟಿಸಿದೆ. ಈ ಸ್ಥಳವನ್ನು ನೋಡಲು ಜಿಲ್ಲೆಯ ನಾನಾ ಕಡೆಗಳಿಂದ ಸಾವಿರಾರು ಜನರು ಬಂದಿದ್ದು, ರಾಜಕಾರಣಿಗಳು, ಅಧಿಕಾರಿಗಳ ದಂಡು ಸಹ ಬೀಡು ಬಿಟ್ಟಿದೆ.

    ಮಳೆಯಿಂದಾಗಿ ಕೋಲಾರ ತಾಲೂಕಿನ ಎಸ್.ಅಗ್ರಹಾರ ಕೆರೆ 15 ವರ್ಷಗಳ ಬಳಿಕ ಈ ಬಾರಿ ತುಂಬಿದ್ದು, ಸ್ಥಳೀಯರ ಮೊಗದಲ್ಲಿ ಮಂದಹಾಸ ಮೂಡಿದೆ. ನದಿ, ನಾಲೆಗಳಿಲ್ಲದ ಜಿಲ್ಲೆಗೆ ಇಂತಹ ಬೃಹತ್ ಕೆರೆಗಳೇ ಜೀವಾಳ, ಹೀಗಿರುವಾಗ ಕಳೆದ ಹದಿನೈದು ವರ್ಷಗಳಿಂದ ಸರಿಯಾದ ಮಳೆ ಇಲ್ಲದೆ ಒಣಗಿ ಹೋಗಿದ್ದ ಎಸ್.ಅಗ್ರಹಾರ ಕೆರೆಗೆ ಸದ್ಯ ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ನೀರು ಹರಿಸಲಾಗುತ್ತಿದೆ.

    ಇದರ ಜೊತೆಗೆ ಇತ್ತೀಚೆಗೆ ಜಿಲ್ಲೆಯಲ್ಲಿ ಒಳ್ಳೆಯ ಮಳೆಯಾದ ಪರಿಣಾಮ ಸುಮಾರು 1,200 ಎರಕೆಯಷ್ಟು ವಿಸ್ತೀರ್ಣ ಹೊಂದಿರುವ ಅಗ್ರಹಾರ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಈ ವಿಷಯ ತಿಳಿದ ಜಿಲ್ಲೆಯ ಜನರು, ಬರದ ಭೂಮಿಯಲ್ಲಿ ಇಂಥಹದ್ದೊಂದು ನಯನ ಮನೋಹರ ದೃಷ್ಯಗಳನ್ನು ಸವಿಯಲು ಸಾವಿರಾರು ಸಂಖ್ಯೆಯಲ್ಲಿ ತಂಡೋಪ ತಂಡವಾಗಿ ಅಗ್ರಹಾರ ಕೆರೆಯತ್ತ ಹರಿದು ಬರುತ್ತಿದ್ದಾರೆ. ಬರದ ನಾಡಲ್ಲಿ ಸುಂದರ ಜಲಧಾರೆಯನ್ನು ಹರಿಯುವುದನ್ನು ಅನುಭವಿಸುತ್ತಿದ್ದಾರೆ. ಇದೇ ವೇಳೆ ಹರಿಯುತ್ತಿರುವ ನೀರಿಗೆ ಜನಪ್ರತಿನಿಧಿಗಳು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ್ದಾರೆ.

    ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಅಂತರ್ಜಲ ವೃದ್ಧಿಸುವ ಕೆ.ಸಿ.ವ್ಯಾಲಿ ಯೋಜನೆಯಿಂದ ಈಗಾಗಲೇ ಜಿಲ್ಲೆಯಲ್ಲಿ 75 ಕೆರೆಗಳು ತುಂಬಿವೆ. ಆದರೆ ಜಿಲ್ಲೆಯ ಅತಿ ದೊಡ್ಡ ಎಸ್.ಆಗ್ರಹಾರ ಕೆರೆ ತುಂಬಿದ್ದು ಜಿಲ್ಲೆಯ ಜನರಲ್ಲಿ ಪರಮಾನಂದವನ್ನುಂಟು ಮಾಡಿದೆ. ಜಿಲ್ಲೆಯ ಅತಿ ದೊಡ್ಡ ಕೆರೆಗಳಲ್ಲಿ ಇದೂ ಒಂದು. ಹೀಗಾಗಿ ತುಂಬಿ ಹರಿಯುತ್ತಿದ್ದ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲು ಪಕ್ಷಾತೀತವಾಗಿ ರಾಜಕಾರಣಿಗಳ ದಂಡು ಡೋಲು ವಾದ್ಯ ಸಮೇತ ಆಗಮಿಸಿತ್ತು.

    ಮಾಜಿ ಸ್ಪೀಕರ್ ರಮೇಶ್‍ಕುಮಾರ್, ಶಾಸಕ ಶ್ರೀನಿವಾಸಗೌಡ, ಮಾಜಿ ಸಚಿವ ಕೃಷ್ಣ ಭೈರೇಗೌಡ, ಸಂಸದ ಮುನಿಸ್ವಾಮಿ ಹೀಗೆ ಮೂರು ಪಕ್ಷಗಳ ಮುಖಂಡರು ಒಟ್ಟಾಗಿ ಆಗಮಿಸಿ ಅಗ್ರಹಾರ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ವೇಳೆ ಮಾತನಾಡಿದ ಮುಖಂಡರು ಇದೊಂದು ಸುಂದರ ಪ್ರವಾಸಿ ತಾಣವಾಗಿಸಿ ಅಭಿವೃದ್ಧಿ ಪಡಿಸಬೇಕೆಂದು ಅಭಿಪ್ರಾಯ ಪಟ್ಟರು. ಜೊತೆಗೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡುತ್ತಿರುವ ಯೋಜನೆ ದೇಶಕ್ಕೆ ಹಾಗೂ ವಿಶ್ವಕ್ಕೆ ಮಾದರಿ ಎಂದರು.

    ಬರದ ನಾಡು ಕೋಲಾರಕ್ಕೆ ಕೆ.ಸಿ.ವ್ಯಾಲಿ ನೀರು ವರವಾಗಿ ಪರಿಣಮಿಸಿದ್ದು, ಯೋಜನೆಯಿಂದ ಜಿಲ್ಲೆಯ ಚಿತ್ರಣವೇ ಬದಲಾಗುತ್ತಿದೆ. ಜನರು ಕೂಡಾ ಯೋಜನೆಯಿಂದಾಗುತ್ತಿರುವ ಬದಲಾವಣೆಯನ್ನು ಸಂತೋಷವಾಗಿ ಅನುಭವಿಸುತ್ತಿದ್ದು, ಮುಂದಿನ ದಿನಗಳಲ್ಲಿ ಬರಗಾಲದ ಹಣೆ ಪಟ್ಟಿ ಕಳಚಲಿ ಅನ್ನೋದು ಜನರ ಮಾತಾಗಿದೆ.

  • ತನ್ನ ಬಳಿ ಬಂದು ನಿಂತಿದ್ದ ಶ್ವಾನವನ್ನು ಏಕಾಏಕಿ ಸರೋವರಕ್ಕೆ ಎಸೆದ- ವಿಡಿಯೋ ವೈರಲ್

    ತನ್ನ ಬಳಿ ಬಂದು ನಿಂತಿದ್ದ ಶ್ವಾನವನ್ನು ಏಕಾಏಕಿ ಸರೋವರಕ್ಕೆ ಎಸೆದ- ವಿಡಿಯೋ ವೈರಲ್

    ಭೋಪಾಲ್: ತನ್ನ ಬಳಿ ನಿಂತಿದ್ದ ಶ್ವಾನವನ್ನು ವ್ಯಕ್ತಿಯೊಬ್ಬ ಏಕಾಏಕಿ ಎತ್ತಿ ಸರೋವರಕ್ಕೆ ಎಸೆದ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಘಟನೆ ಪ್ರಾಣಿಪ್ರಿಯರ ಆಕ್ರೋಶ ಹೊರಹಾಕುವಂತೆ ಮಾಡಿದೆ.

    ಭೋಪಾಲ್‍ನಲ್ಲಿರುವ ಸರೋವರವೊಂದರಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿ ಶ್ವಾನವನ್ನು ನೀರಿಗೆ ಬಿಸಾಕುತ್ತಿರುವುದನ್ನು ವಿಡಿಯೋ ಕೂಡ ಮಾಡಲಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ವಿಡಿಯೋದಲ್ಲಿ ಕಪ್ಪು ಬಣ್ಣದ ಟೀ- ಶರ್ಟ್ ಧರಿಸಿದ್ದ ವ್ಯಕ್ತಿಯ ಬಳಿ ಎರಡು ಶ್ವಾನಗಳು ಬಂದು ನಿಲ್ಲುತ್ತವೆ. ಒಂದು ಶ್ವಾನ ಆತನ ಹಿಂದೆ ಬಂದು ನಿಂತರೆ, ಇನ್ನೊಂದು ಈತನ ಕಾಲ ಪಕ್ಕವೇ ಬಂದು ಬಾಲ ಅಲ್ಲಾಡಿಸಿಕೊಂಡು ನಿಲ್ಲುತ್ತದೆ. ಈ ವೇಳೆ ವ್ಯಕ್ತಿ ತನ್ನ ಪಕ್ಕ ನಿಂತಿರುವ ಶ್ವಾನವನ್ನು ಹಾಗೆಯೇ ಎತ್ತಿಕೊಂಡು ಏಕಾಏಕಿ ನೀರಿಗೆ ಬಿಸಾಕುತ್ತಾನೆ. ಇದರ ಸಂಪೂರ್ಣ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತಯೇ ಪ್ರಾಣಿಪ್ರಿಯರು, ಎನ್‍ಜಿಓಗಳು ತಮ್ಮ ಆಕ್ರೋಶ ಹೊರಹಾಕಿದ್ದು, ವ್ಯಕ್ತಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದೆ.

    ವರದಿಗಳ ಪ್ರಕಾರ, ಈ ವಿಡಿಯೋವನ್ನು ವ್ಯಾನ್ ವಿಹಾರ್ ಬಳಿಕ ಬೋಟ್ ಕ್ಲಬ್ ರಸ್ತೆಯಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ವಿಡಿಯೋದಲ್ಲಿ ವ್ಯಕ್ತಿ ಶ್ವಾನವನ್ನು ನೀರಿಗೆ ಬಿಸಾಕಿದ ಬಳಿಕ ವಿಡಿಯೋ ಮಾಡುತ್ತಿರುವವನತ್ತ ತಿರುಗಿ ನಸುನಕ್ಕಿರುವುದನ್ನು ಕೂಡ ಕಾಣಬಹುದಾಗಿದೆ.

    ಆರೋಪಿಯನ್ನು ಸಲ್ಮಾನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಗೋವಿಂದ್ ಸಿಂಗ್ ಹೇಳಿದ್ದಾರೆ. ಘಟನೆಯ ಸಂಬಂಧ ಐಪಿಸಿ ಸೆಕ್ಷನ್ 429(ಯಾವುದೇ ಪ್ರಾಣಿಯನ್ನು ಕೊಲ್ಲುವ ಅಥವಾ ದುರ್ಬಲಗೊಳಿಸುವ ಮೂಲಕ ಕಿಡಿಗೇಡಿತನ) ಅಡಿಯಲ್ಲಿ ಆರೋಪಿ ಸಲ್ಮಾನ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

  • ಧಾರಾಕಾರ ಮಳೆ – ಮನೆ, ಅಂಗಡಿ, ವಸತಿಗೃಹಗಳಿಗೆ ನುಗ್ಗಿದ ನೀರು

    ಧಾರಾಕಾರ ಮಳೆ – ಮನೆ, ಅಂಗಡಿ, ವಸತಿಗೃಹಗಳಿಗೆ ನುಗ್ಗಿದ ನೀರು

    ಹುಬ್ಬಳ್ಳಿ/ಬೆಳಗಾವಿ: ರಾಜ್ಯದಲ್ಲಿ ವರುಣನ ಅಬ್ಬರ ಮತ್ತೆ ಶುರುವಾಗಿದ್ದು, ಹುಬ್ಬಳ್ಳಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ.

    ಭಾನುವಾರ ಮಧ್ಯರಾತ್ರಿ ಹುಬ್ಬಳ್ಳಿಯಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು, ನಗರದ ಹಲವು ತಗ್ಗು ಪ್ರದೇಶದ ಅಂಗಡಿ ಮತ್ತು ಮನೆಗಳಿಗೆ ಮಳೆ ನೀರು ನುಗ್ಗಿದೆ. ಪಾಲಿಕೆಯ ನಿರ್ಲಕ್ಷ್ಯದಿಂದ ಚರಂಡಿ ನೀರು ಹಾಗೂ ಮಳೆ ನೀರು ನುಗ್ಗಿದ ಪರಿಣಾಮ ನಗರದ ಕಾಟನ್ ಮಾರ್ಕೇಟಿನ ಹಲವು ಅಂಗಡಿಗಳು ನೀರಿನಿಂದ ಜಲಾವೃತಗೊಂಡಿವೆ.

    ಹೊಟೇಲ್‍ನ ಮಾಲೀಕರು ಇದೀಗ ಕಷ್ಟ ಅನುಭವಿಸುವಂತಾಗಿದೆ. ಚರಂಡಿ ದುರಸ್ತಿ ಮಾಡಿಸಿ ಅಂತ ಈ ಭಾಗದ ವ್ಯಾಪಾರಸ್ಥರು ಪಾಲಿಕೆಗೆ ಮನವಿ ಮಾಡಿದ್ದರು. ಆದರೆ ಮಹಾನಗರ ಪಾಲಿಕೆ ಮಾತ್ರ ಅವರಿ ಮನವಿಗೆ ಸ್ಪಂದಿಸಿಲ್ಲ. ಹೀಗಾಗಿ ವರುಣನ ಆರ್ಭಟದಿಂದ ಚರಂಡಿ ನೀರು ಅಂಗಡಿ ಮುಗ್ಗಟ್ಟುಗಳಿಗೆ ನುಗ್ಗಿದೆ.

    ಇತ್ತ ಬೆಳಗಾವಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ತಡರಾತ್ರಿ ಧಾರಾಕಾರ ಮಳೆಯಾಗಿದೆ. ಮಳೆಯಿಂದ ಉಗರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕರ ವಸತಿ ಗೃಹಗಳಿಗೆ ನೀರು ನುಗ್ಗಿದೆ. ಶಿಥಿಲಾವಸ್ಥೆಯಲ್ಲಿದ್ದ ವಸತಿಗೃಹಗಳಿಗೆ ನೀರು ನುಗ್ಗಿದ್ದರಿಂದ ಸಿಬ್ಬಂದಿ ನೀರನ್ನು ಹೊರಹಾಕಲು ಹರಸಾಹಸ ಮಾಡಿದ್ದಾರೆ.

    ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿರುವ ಕೆರೆ ಕೂಡ ಭರ್ತಿಯಾಗಿದೆ. ಅಷ್ಟೇ ಅಲ್ಲದೇ ಉಗರಗೋಳ ಗ್ರಾಮದ ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿದೆ.

  • ಕೋಟೆ ನಾಡಲ್ಲಿ ವರುಣನ ಅಬ್ಬರ- ಎಂಟು ವರ್ಷಗಳ ಬಳಿಕ ಕೋಡಿ ಬಿದ್ದ ಪಕ್ಕುರ್ತಿ ಕೆರೆ

    ಕೋಟೆ ನಾಡಲ್ಲಿ ವರುಣನ ಅಬ್ಬರ- ಎಂಟು ವರ್ಷಗಳ ಬಳಿಕ ಕೋಡಿ ಬಿದ್ದ ಪಕ್ಕುರ್ತಿ ಕೆರೆ

    – ರೈತರ ಮೊಗದಲ್ಲಿ ಮಂದಹಾಸ

    ಚಿತ್ರದುರ್ಗ: ಜಿಲ್ಲೆಯಲ್ಲಿ ಈ ಬಾರಿ ವರುಣ ಕೃಪೆ ತೋರಿದ್ದು, ಈ ಮೂಲಕ ಕಳೆದ ಎಂಟು ವರ್ಷಗಳಿಂದ ಬರದ ಪರಿಸ್ಥಿತಿ ಎದುರಿಸುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ. ಭಾರೀ ಮಳೆಯಿಂದಾಗಿ ಕೆರೆಗಳು ಕೋಡಿ ಬಿದ್ದಿವೆ.

    ಮೊಳಕಾಲ್ಮೂರು ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕಳೆದ ರಾತ್ರಿ ಉತ್ತಮ ಮಳೆಯಾಗಿದ್ದು, ತಳವಾರ ಹಳ್ಳಿ ಬಳಿಯ ಸಿದ್ಲಹಳ್ಳ ತುಂಬಿ ಹರಿಯುತ್ತಿದೆ. ಅಲ್ಲದೆ ಕಳೆದ ಎಂಟು ವರ್ಷಗಳ ಹಿಂದೆ ಕೋಡಿ ಬಿದ್ದಿದ್ದ ಪಕ್ಕುರ್ತಿ ಕೆರೆ ಈ ಬಾರಿ ಮತ್ತೆ ಕೋಡಿ ಬಿದ್ದಿದ್ದು, ಗುಂಡೇರ ಹಳ್ಳದ ಮೂಲಕ ರಾಂಪುರ ಕೆರೆಯತ್ತ ನೀರಿನ ಹರಿವು ಹೆಚ್ಚಾಗಿದೆ. ಹೀಗಾಗಿ ಪಕ್ಕುರ್ತಿ ಕೆರೆಯ ದಡದಲ್ಲಿರುವ ಜಿಲ್ಲಾದಿಗೊಂದಿ ಪ್ರದೇಶದ ಜನರು ತೆಪ್ಪದಲ್ಲಿ ಸಂಚಾರ ಮಾಡದಂತೆ ಜೆ.ಬಿ.ಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

    ಸತತ ಎಂಟು ವರ್ಷಗಳಿಂದ ಬತ್ತಿ ಬರಿದಾಗಿದ್ದ ಜಿಲ್ಲೆಯ ಮೊಳಕಾಲ್ಮೂರು ಭಾಗದ ಹಳ್ಳ, ಕೊಳ್ಳ ಸೇರಿದಂತೆ ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ತಳವಾರ ಹಳ್ಳಿ ಬಳಿಯ ಸಿದ್ಲಹಳ್ಳ ತುಂಬಿ ಹರಿಯುತ್ತಿದೆ. ಇತ್ತ ಪಕ್ಕುರ್ತಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಎಂಟು ವರ್ಷಗಳ ಬಳಿಕ ಕೆರೆ ಕೋಡಿ ಬಿದ್ದಿರುವುದನ್ನು ಕಂಡು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಈಜಲು ಹೋಗಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಸಾವು

    ಈಜಲು ಹೋಗಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಸಾವು

    ರಾಯಚೂರು: ಕೂಲಿ ಕೆಲಸಕ್ಕೆ ಹೋದ ಬಾಲಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗುಡಗಲದಿನ್ನಿ ಗ್ರಾಮದ ಬಳಿ ನಡದಿದೆ.

    ಮಸ್ಕಿ ತಾಲೂಕಿನ ಬೋಗಾಪುರ ಗ್ರಾಮದ ಕೇಶವ (15) ಸಾವನ್ನಪ್ಪಿರುವ ಬಾಲಕ. ಕೂಲಿ ಕೆಲಸ ಮಾಡಲು ಹೋದಾಗ ಕೆರೆಯಲ್ಲಿ ಈಜಲು ಹೋಗಿದ್ದಾನೆ. ಈ ವೇಳೆ ಕೆರೆಯಲ್ಲಿ ಕೆಸರಿದ್ದ ಕಾರಣ ಈಜಲು ಆಗದೇ ಬಾಲಕ ಸಾವನ್ನಪ್ಪಿದ್ದಾನೆ.

    ಶಾಲೆ ಇಲ್ಲದ ಹಿನ್ನೆಲೆ ಬಾಲಕ ಕೃಷಿ ಕೂಲಿ ಕೆಲಸಕ್ಕೆ ತೆರಳಿದ್ದ. ಎರಡು ದಿನಗಳಿಂದ ಶವಕ್ಕಾಗಿ ಹುಡುಕಾಟ ನಡೆದಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ನಿರಂತರವಾಗಿ ಹುಡುಕಾಟ ನಡೆಸಿ ಶವ ಪತ್ತೆ ಹಚ್ಚಿದ್ದಾರೆ.

    ತುರವಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

  • ಮಾಯದಂಥ ಮಳೆ ಬಂದು ಮದಗಾದ ಕೆರೆ ಬಳಿ ಜಲಪಾತ ಉದ್ಭವ

    ಮಾಯದಂಥ ಮಳೆ ಬಂದು ಮದಗಾದ ಕೆರೆ ಬಳಿ ಜಲಪಾತ ಉದ್ಭವ

    – ಹಸಿರ ಹೊದ್ದ ಬೆಟ್ಟ, ಗುಡ್ಡಗಳ ಮಧ್ಯೆ ಜಲಧಾರೆ
    – ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ ಜನ

    ಹಾವೇರಿ: ಸುತ್ತ ಹಸಿರ ರಾಶಿ, ಗುಡ್ಡ ಬೆಟ್ಟಗಳ ಸಾಲು, ಹಸಿರು ಬೆಟ್ಟದ ನಡುವೆ ಧುಮ್ಮಿಕ್ಕಿ ಹರಿಯೋ ಜಲಧಾರೆ. ಆ ಸೌಂದರ್ಯವನ್ನ ಕಣ್ತುಂಬಿಕೊಳ್ಳೋದೆ ಕಣ್ಣಿಗೆ ಹಬ್ಬ, ಮನಸ್ಸಿಗೆ ಆನಂದ. ಇಲ್ಲಿನ ಸೌಂದರ್ಯಕ್ಕೆ ಮನಸೋತ ಜನ, ಧುಮ್ಮಿಕ್ಕುವ ಜಲಪಾತ ನೋಡಲು ಸಾಲುಗಟ್ಟಿ ಆಗಮಿಸುತ್ತಿದ್ದಾರೆ.

    ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮದಗಮಾಸೂರು ಕೆರೆಯ ಬಳಿ ಜಲಪಾತ ಉಂಟಾಗಿದ್ದು, ಕಣ್ತುಂಬಿಕೊಳ್ಳಲು ಸಚಿವರು ಸೇರಿದಂತೆ ಜನರು ಮುಗಿಬೀಳುತ್ತಿದ್ದಾರೆ. ಮದಗಮಾಸೂರು ಕೆರೆ ಐತಿಹಾಸಿಕವಾಗಿ ಸಾಕಷ್ಟು ಮಹತ್ವ ಪಡೆದಿದೆ. ಕೆರೆಯ ಕುರಿತು ಜಾನಪದೀಯರು ಮಾಯದಂಥಾ ಮಳೆ ಬಂತಣ್ಣ, ಮದಗದ ಕೆರೆಗೆ ಎಂದು ಹಾಡು ಕಟ್ಟಿದ್ದಾರೆ. ಅಂಥ ಮದಗಮಾಸೂರು ಕೆರೆಗೆ ಈಗ ಮಾಯದಂಥಾ ಮಳೆ ಬಂದಿದೆ. ಮಳೆಯ ಪರಿಣಾಮ ಕೆರೆ ಭರಪೂರ ತುಂಬಿಕೊಂಡಿದೆ.

    ಸಾವಿರಾರು ಎಕರೆ ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿರೋ ಮದಗಮಾಸೂರು ಕೆರೆ ತುಂಬಿ, ಕೆರೆಗೆ ಕೋಡಿ ಬಿದ್ದು ನೀರು ಹರಿತಿದೆ. ಬೆಟ್ಟ ಗುಡ್ಡಗಳ ಸಾಲಿನ ನಡುವೆ ಹರಿತಿರೋ ಜಲಧಾರೆ ನೋಡಲು ಎರಡು ಕಣ್ಣುಗಳು ಸಾಲದು. ಕೆರೆಯ ನೀರು ಹಸಿರಿನಿಂದ ಕಂಗೊಳಿಸೋ ಬೆಟ್ಟಗಳ ಸಾಲಿನ ನಡುವೆ ಧುಮ್ಮಿಕ್ಕಿ ಹರಿತಿದೆ. ಈ ಭಾಗದಲ್ಲಿ ಮದಗಮಾಸೂರು ಫಾಲ್ಸ್ ಮಿನಿ ಜೋಗ ಪಾಲ್ಸ್ ಎಂದೇ ಫೇಮಸ್ ಆಗಿದೆ. ಕೊರೊನಾ ಭೀತಿ ಇರುವುದರಿಂದ ಅಷ್ಟೊಂದು ಪ್ರಮಾಣದಲ್ಲಿ ಜನರ ದಂಡು ಆಗಮಿಸುತ್ತಿಲ್ಲ. ಆದರೂ ಕೆಲವರು ಮಾತ್ರ ಸ್ನೇಹಿತರ ಜೊತೆ, ಕುಟುಂಬದ ಜೊತೆಗೂಡಿ ಬಂದು ಇಲ್ಲಿನ ಹಸಿರ ಸೌಂದರ್ಯ, ಜಲಧಾರೆಯನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.

    ಇಲ್ಲಿನ ಜಲಧಾರೆ, ಹಸಿರ ಸೌಂದರ್ಯಕ್ಕೆ ಮನಸೋತು ಹಲವರು ಫೋಟೋ ಶೂಟ್ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಕೆಲವರು ಕುಟುಂಬ ಸಮೇತ, ಕೆಲವರು ಸ್ನೇಹಿತರೊಂದಿಗೆ ಇಲ್ಲಿಗೆ ಬಂದು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮಳೆಗಾಲದ ಇಲ್ಲಿನ ಸೌಂದರ್ಯಕ್ಕೆ ಫುಲ್ ಫಿದಾ ಆಗಿದ್ದಾರೆ.

  • ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ – ಮೃತದೇಹದ ಪಕ್ಕದಲ್ಲೇ ಕುಳಿತ ಆರೋಪಿ

    ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ – ಮೃತದೇಹದ ಪಕ್ಕದಲ್ಲೇ ಕುಳಿತ ಆರೋಪಿ

    ಹಾಸನ: ಗಣೇಶ ಹಬ್ಬದಂದು ಹಾಡಹಗಲೇ ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಹಾಸನದ ಹೊರವಲಯದಲ್ಲಿ ನಡೆದಿದೆ.

    ಕುಮಾರ್ (43) ಕೊಲೆಯಾದ ದುರ್ದೈವಿ. ಕೊಲೆಯಾದ ಕುಮಾರ್ ನಿಂಗೇಗೌಡನ ಕೊಪ್ಪಲು ಬಳಿಯಲ್ಲಿರುವ ಕೆರೆಯಲ್ಲಿ ಬೈಕ್ ತೊಳೆಯಲು ಬಂದಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಆರೋಪಿ ಗೋವಿಂದೇಗೌಡ ಹಿಂದಿನಿಂದ ಬಂದು ಬೈಕ್ ತೊಳೆಯುತ್ತಿದ್ದ ಕುಮಾರ್‌ನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

    ಕೊಲೆ ಮಾಡಿದ ನಂತರ ಮೃತದೇಹದ ಪಕ್ಕದಲ್ಲೇ ಕುಳಿತಿದ್ದ ಆರೋಪಿ ಗೋವಿಂದೇಗೌಡನನ್ನು ನೋಡಿ ಸ್ಥಳೀಯರು ಭಯಭೀತರಾಗಿದ್ದರು. ಕೂಡಲೇ  ಸ್ಥಳದಲ್ಲಿದ್ದರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಧಾರವಾಡದಲ್ಲಿ ಧಾರಾಕಾರ ಮಳೆ- ಹಳ್ಳ ತುಂಬಿ ಹರಿಯುತ್ತಿರುವುದರಿಂದ ರಸ್ತೆ ಸಂಚಾರ ಬಂದ್

    ಧಾರವಾಡದಲ್ಲಿ ಧಾರಾಕಾರ ಮಳೆ- ಹಳ್ಳ ತುಂಬಿ ಹರಿಯುತ್ತಿರುವುದರಿಂದ ರಸ್ತೆ ಸಂಚಾರ ಬಂದ್

    – ಬಹುತೇಕ ತುಂಬಿದ ಕೆರೆಗಳು

    ಧಾರವಾಡ: ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಬಹುತೇಕ ಕೆರೆಗಳು ತುಂಬಿದ್ದು, ತುಪ್ರಿಹಳ್ಳ ಹಾಗೂ ಬೆಣ್ಣಿಹಳ್ಳ ಸಹ ತುಂಬಿ ಹಡಿಯುತ್ತಿರುವುದರಿಂದ ಹಲವು ರಸ್ತೆಗಳ ಸಂಚಾರ ಕಡಿತಗೊಂಡಿದೆ.

    ಜಿಲ್ಲೆಯ ಹಾರೋಬೆಳವಡಿ ಬಳಿ ಇರುವ ತಾತ್ಕಾಲಿಕ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಸೌದತ್ತಿ ರಸ್ತೆ ಕಡಿತಗೊಂಡಿದೆ. ಅಲ್ಲದೆ ಧಾರವಾಡ ತಾಲೂಕಿನ ಕಂಬಾರಗಣವಿ ಗ್ರಾಮಕ್ಕೆ ಹೋಗುವ ರಸ್ತೆ ಕೂಡ ಜಲಾವೃತಗೊಂಡಿದ್ದರಿಂದ ಗ್ರಾಮಸ್ಥರು ಗ್ರಾಮದಿಂದ ಹೊರಗೆ ಬರದಂತಾಗಿದೆ.

    ಹೊಸೆಟ್ಟಿ ಗ್ರಾಮದ ಬೀದಿಗಳಿಗೆ ನೀರು ನುಗ್ಗಿದ್ದು, ಕೆರೆ ಭರ್ತಿಯಾಗಿದ್ದರಿಂದ ಅಪಾರ ಪ್ರಮಾಣದ ನೀರು ಗ್ರಾಮಕ್ಕೆ ನುಗ್ಗಿದೆ. ಕೆರೆಯ ಸಂಗ್ರಹ ಸಾಮರ್ಥ್ಯ ಮೀರಿ ನೀರು ಬರುತ್ತಿರುವ ಹಿನ್ನೆಲೆ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸಂಪೂರ್ಣ ಜಲಾವೃತವಾಗಿರುವುದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ.

  • ಆರ್ಥಿಕ ಸಂಕಷ್ಟ- ಪತ್ನಿ, ಮಕ್ಕಳಿಬ್ಬರನ್ನು ಕೆರೆಗೆ ತಳ್ಳಿ ಪತಿ ಎಸ್ಕೇಪ್

    ಆರ್ಥಿಕ ಸಂಕಷ್ಟ- ಪತ್ನಿ, ಮಕ್ಕಳಿಬ್ಬರನ್ನು ಕೆರೆಗೆ ತಳ್ಳಿ ಪತಿ ಎಸ್ಕೇಪ್

    -ಮಕ್ಕಳು ಸಾವು, ಪತ್ನಿ ಬಚಾವ್

    ಬಳ್ಳಾರಿ: ಆರ್ಥಿಕ ಸಂಕಷ್ಟದಿಂದಾಗಿ ವ್ಯಕ್ತಿಯೋರ್ವ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೆರೆಗೆ ತಳ್ಳಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದು, ಮಕ್ಕಳಿಬ್ಬರು ಶವಕ್ಕಾಗಿ ಶೋಧ ಕಾರ್ಯ ನಡೆದಿದೆ.

    ಚಿರಂಜೀವಿ ಪತ್ನಿ ಮತ್ತು ಮಕ್ಕಳನ್ನು ಕೆರೆಗೆ ದೂಡಿದ ವ್ಯಕ್ತಿ. ಚಿರಂಜೀವಿ ಕೊಟ್ಟರು ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಅತಿಯಾದ ಖಾಸಗಿ ಸಾಲ ಮಾಡಿಕೊಂಡಿದ್ದನು. ಮಂಗಳವಾರ ಸಂಬಂಧಿಕರ ಮದುವೆಗೆ ಚಿರಂಜೀವಿ ಕುಟುಂಬ ಸಮೇತನಾಗಿ ತೆರಳಿದ್ದನು. ಮದುವೆಯಿಂದ ಗ್ರಾಮಕ್ಕೆ ಹಿಂದಿರುಗುವ ಮಾರ್ಗ ಮಧ್ಯೆ ರಾಮದುರ್ಗದ ಕೆರೆಯ ಬಳಿ ಬೈಕ್ ನಿಲ್ಲಿಸಿದ್ದಾನೆ. ಕೆರೆಯ ಬಳಿ ಎಲ್ಲರನ್ನು ಕರೆದುಕೊಂಡು ಹೋಗಿ ತಳ್ಳಿ ಪರಾರಿಯಾಗಿದ್ದಾನೆ.

    ನಾಲ್ಕು ವರ್ಷದ ಹಿಂದೆ ಚಿರಂಜೀವಿ ಮತ್ತು ನಂದಿನಿ ಮದುವೆಯಾಗಿದ್ರು. ಇತ್ತೀಚೆಗೆ ಕುಟುಂಬ ನಿರ್ವಹಣೆಗಾಗಿ ಚಿರಂಜೀವಿ ಸ್ಥಳೀಯವಾಗಿ ಸಾಲ ಮಾಡಿಕೊಂಡಿದ್ದನು ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕ ಗುಡೇಕೋಟೆ ಪಿಎಸ್‍ಐ ರಾಮಪ್ಪ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳಿಬ್ಬರ ಮೃತದೇಹಕ್ಕಾಗಿ ಶೋಧ ಮುಂದುವರಿದಿದ್ದು, ಈ ಸಂಬಂಧ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಾವೇರಿಯಲ್ಲಿ ಮಳೆಯ ಆರ್ಭಟ- ಕೆರೆ ಕೋಡಿ ಒಡೆದು ಧುಮ್ಮಿಕ್ಕಿ ಹರಿದ ನೀರು

    ಹಾವೇರಿಯಲ್ಲಿ ಮಳೆಯ ಆರ್ಭಟ- ಕೆರೆ ಕೋಡಿ ಒಡೆದು ಧುಮ್ಮಿಕ್ಕಿ ಹರಿದ ನೀರು

    ಹಾವೇರಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಧಾರಾಕಾರ ಮಳೆಯಿಂದಾಗಿ ಕೆರೆ ತುಂಬಿದೆ. ನೀರಿನ ಒತ್ತಡಕ್ಕೆ ಕೆರೆ ಕೋಡಿ ನೀರು ರಭಸವಾಗಿ ಹರಿದಿದೆ.

    ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮದಗಮಾಸೂರು ಕೆರೆ ಕೋಡಿ ಒಡೆದಿದ್ದು, ಅಪಾರ ಪ್ರಮಾಣದ ನೀರು ಹೊರ ಬಿದ್ದಿದೆ. ಧುಮ್ಮಿಕ್ಕಿ ನೀರು ಹರಿದಿದ್ದು, ಭಯಾನಕ ವಾತಾವರಣ ನಿರ್ಮಾಣವಾಗಿದೆ. ಕೆರೆ ಭರಪೂರ ತುಂಬಿದ್ದು, ಒತ್ತಡಕ್ಕೆ ಕೋಡಿ ಒಡೆದಿದೆ. ಅಪಾರ ಪ್ರಮಾಣದ ನೀರು ಕುಮುದ್ವತಿ ನದಿಗೆ ಸೇರುತ್ತಿದ್ದು, ನೀರಿನ ಹರಿವಿನ ರಭಸಕ್ಕೆ ಸ್ಥಳಿಯರು ಭಯಭೀತರಾಗಿದ್ದಾರೆ. ಜಿಲ್ಲೆಯಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಎಡಬಿಡದೆ ಸುರಿಯುತ್ತಿದೆ.

    ಅಪಾರ ಪ್ರಮಾಣದ ಮಳೆಯಿಂದಾಗಿ ವರದಾ ನದಿ ತುಂಬಿ ಹರಿಯುತ್ತಿದ್ದು, ಹಾವೇರಿ ತಾಲೂಕಿನ ನಾಗನೂರು ಮತ್ತು ಸವಣೂರು ತಾಲೂಕಿನ ಕಳಸೂರು ಸೇತುವೆಗಳು ಜಲಾವೃತವಾಗಿವೆ. ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದು, ನಾಗನೂರು-ಕೂಡಲ, ಕಳಸೂರು-ದೇವಗಿರಿ ಸಂಪರ್ಕ ಕಡಿತವಾಗಿದೆ.

    ಅಲ್ಲದೆ ವರದಾ ನದಿಗೆ ಭಾರೀ ಪ್ರಮಾಣದ ನೀರು ಬರುತ್ತಿರುವ ಹಿನ್ನೆಲೆ ಹಿರೇಮರಳಿಹಳ್ಳಿ ಮತ್ತು ಕೋಣನತಂಬಗಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಮೇಲೆ ನೀರು ಭರಪೂರ ತುಂಬಿ ಹರಿಯುತ್ತಿದೆ. ಜಿಲ್ಲೆಯ ಸವಣೂರು ತಾಲೂಕಿನ ಹಿರೇಮರಳಿಹಳ್ಳಿ ಗ್ರಾಮದ ಬಳಿ ಸೇತುವೆ ಸೇತುವೆ ಜಲಾವೃತವಾಗಿದೆ. ಇದರಿಂದಾಗಿ ನದಿ ಪಾತ್ರದ ಕೆಲವು ಗ್ರಾಮಗಳ ಜನರಿಗೆ ಆತಂಕ ಉಂಟಾಗಿದೆ.