Tag: lake

  • ಬರಿದಾಗಿದೆ 4 ಕೋಟಿ ವೆಚ್ಚದಲ್ಲಿ ನಟ ಯಶ್ ಅಭಿವೃದ್ಧಿ ಪಡಿಸಿದ್ದ ಕೆರೆ!

    ಬರಿದಾಗಿದೆ 4 ಕೋಟಿ ವೆಚ್ಚದಲ್ಲಿ ನಟ ಯಶ್ ಅಭಿವೃದ್ಧಿ ಪಡಿಸಿದ್ದ ಕೆರೆ!

    ಕೊಪ್ಪಳ: ರಾಕಿಂಗ್ ಸ್ಟಾರ್ ಯಶ್ ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದ ಕೆರೆ ಇದೀಗ ನೀರಿಲ್ಲದೆ ಬರಿದಾಗಿದೆ.

    ಪ್ರತಿವರ್ಷ ತುಂಬಿ ತುಳುಕುತ್ತಿದ್ದ ಕೆರೆ ಈ ಬಾರಿ ಭಣ ಭಣ ಅಂತಿದೆ. ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಕೆರೆಕಟ್ಟೆ, ಹಳ್ಳ-ಕೊಳ್ಳ ಭರ್ತಿಯಾಗಿದೆ. ಆದರೆ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ ಮಾತ್ರ ನೀರಿಲ್ಲದೆ ಬರಿದಾಗಿದೆ. ಇದನ್ನೂ ಓದಿ: ಕೆರೆ ಹೂಳೆತ್ತುವ ಕೆಲಸ ಜಲಕ್ರಾಂತಿಗೆ ನಾಂದಿಯಾಗಲಿ: ಯಶ್

    ಈ ತಲ್ಲೂರು ಕೆರೆಯನ್ನು ನಟ ಯಶ್ ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದರು. ಹೀಗಾಗಿ ಕೊಪ್ಪಳ ಜಿಲ್ಲೆಯಲ್ಲಿ ಯಶ್ ಕೆರೆಯಂತಲೇ ಪ್ರಸಿದ್ಧಿ ಪಡೆದಿದೆ. ಅಭಿವೃದ್ಧಿ ಪಡಿಸಿದಾಗಿನಿಂದ ತುಂಬಿ ತುಳುಕುತ್ತಿದ್ದ ಕೆರೆ ಈ ಬಾರಿ ಜಿಲ್ಲೆಯ ಎಲ್ಲಾ ಕೆರೆ ತುಂಬಿದರೂ ತಲ್ಲೂರು ಕೆರೆ ಮಾತ್ರ ನೀರಿಲ್ಲದೆ ಬರಿದಾಗಿದೆ. ಇದನ್ನೂ ಓದಿ: ಒಬ್ಬನಿಂದ ಕಾಯಕವಾಗುವುದಿಲ್ಲ, ಎಲ್ಲರೂ ಕೈ ಜೋಡಿಸಬೇಕು: ತಲ್ಲೂರು ಕೆರೆಗೆ ಯಶ್, ರಾಧಿಕಾ ಬಾಗಿನ ಅರ್ಪಣೆ

    ಕೆರೆ ಬರಿದಾಗಲು ರೇಲ್ವೆ ಅವೈಜ್ಞಾನಿಕ ಕಾಮಗಾರಿಯ ಕಾರಣವಾಗಿದೆ. ಗದಗ-ವಾಡಿ ರೇಲ್ವೆ ಕಾಮಗಾರಿಯಿಂದ ಕೆರೆಯಲ್ಲಿ ನೀರಿಲ್ಲ. ಕೆರೆಗೆ ನೀರು ಹರಿದು ಬರುವ ಮಾರ್ಗವನ್ನು ರೈಲ್ವೇ ಕಾಮಗಾರಿ ನಿಲ್ಲಿಸಿದೆ. ರೈಲ್ವೇ ಕಾಮಗಾರಿ ಮಾಡಿದ ಎಡವಟ್ಟಿನಿಂದಗಿಯೇ ಕೆರೆಗೆ ನೀರಿಲ್ಲ ಎಂದು ರೈಲ್ವೇ ಕಾಮಗಾರಿ ಗುತ್ತಿಗೆದಾರರ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕೊಪ್ಪಳ: ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ ನಟ ಯಶ್ ಸನ್ಮಾನ

  • 15 ವರ್ಷಗಳ ಬಳಿಕ ತುಂಬಿದ ಕೆರೆ- ರೈತರ ಮೊಗದಲ್ಲಿ ಮಂದಹಾಸ

    15 ವರ್ಷಗಳ ಬಳಿಕ ತುಂಬಿದ ಕೆರೆ- ರೈತರ ಮೊಗದಲ್ಲಿ ಮಂದಹಾಸ

    ಚಿಕ್ಕಮಗಳೂರು: ಕಳೆದ 15 ವರ್ಷಗಳಿಂದ ನೀರೇ ಇಲ್ಲದ ಮಕ್ಕಳ ಆಟದ ಮೈದಾನವಾಗಿದ್ದ ಬೃಹತ್ ಕೆರೆಗೆ ನೀರು ಹರಿದು ಬರುತ್ತಿದ್ದು ಚಿಕ್ಕಮಗಳೂರು ತಾಲೂಕಿನ ಬೆಳವಾಡಿ, ಕಳಸಾಪುರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ತಾಲೂಕಿಣ ಬೆಳವಾಡಿಯ ಬೃಹತ್ ಕೆರೆಗೆ ನೀರು ಬಂದಿದ್ದು, ರೈತರಿಗೆ ಮರುಳುಗಾಡಲ್ಲಿ ಓಯಾಸಿಸ್ ಸಿಕ್ಕಂತಾಗಿದ್ದು, ಸ್ಥಳೀಯರ ಪಾಲಿಗೆ ಈ ಕೆರೆ ಪ್ರವಾಸಿ ತಾಣವಾಗಿದೆ. ತಾಲೂಕಿನ ಬೆಳವಾಡಿ, ಕಳಸಾಪುರ ಸೇರಿದಂತೆ ಈ ಭಾಗದ ಹತ್ತಾರು ಹಳ್ಳಿಗಳು ಶಾಶ್ವತ ಬರಗಾಲಕ್ಕೆ ತುತ್ತಾದ ಗ್ರಾಮಗಳು. ಈ ಭಾಗದ ಹತ್ತಾರು ಹಳ್ಳಿಯ ಸಾವಿರಾರು ಜನ-ಜಾನುವಾರುಗಳು ಕುಡಿಯೋ ನೀರಿಗೂ ಹಾಹಾಕಾರ ಅನುಭವಿಸಿದ್ದರು.

    ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಊರಿಗೆ ಊರೇ ಕೊಚ್ಚಿ ಹೋಗುವಂತಹ ಮಳೆ ಬಂದಿದ್ದರೂ ಈ ಭಾಗದಲ್ಲಿ ವರುಣದೇವನ ಕೃಪೆ ಸಿಕ್ಕಿರಲಿಲ್ಲ. ಮಲೆನಾಡಿಗರು ಮಳೆ ನಿಲ್ಲಲಿ ಎಂದು ಆಕಾಶ ನೋಡುತ್ತಿದ್ದರೆ, ಈ ಭಾಗದ ರೈತರು ಮಳೆಗಾಗಿ ಆಕಾಶ ನೋಡುತ್ತಿದ್ದರು. ಆದರೆ ಸುಮಾರು 800 ಎಕರೆ ವಿಸ್ತೀರ್ಣದ ಈ ಬೃಹತ್ ಬೆಳವಾಡಿ ಕೆರೆ ಕಳೆದ 15 ವರ್ಷಗಳಿಂದ ಖಾಲಿಯಾಗಿತ್ತು. ಮಳೆಯೂ ಇರಲಿಲ್ಲ. ಯಾವ ಮೂಲದಿಂದಲೂ ಈ ಕೆರೆಗೆ ನೀರು ಬಂದಿರಲಿಲ್ಲ. ಕೆರೆಯಲ್ಲಿ ಮಕ್ಕಳು ಆಟವಾಡುತ್ತಿದ್ದರು.

    ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಹಳೇಬೀಡು ಕೆರೆ ಕೋಡಿ ಬಿದ್ದಿದ್ದು, ಅಲ್ಲಿಂದ ಕೋಡಿ ಬಿದ್ದ ನೀರು ಬೆಳವಾಡಿ ಕೆರೆಗೆ ಸೇರುತ್ತಿದೆ. ಇದು ರೈತರು ಸಂತಸಕ್ಕೆ ಕಾರಣವಾಗಿದ್ದು, ಕೆರೆಯಲ್ಲಿ ನೀರು ಕಂಡು ರೈತರಿಗೆ ಯುಗಾದಿಯಲ್ಲೂ ಪಟಾಕಿ ಹೊಡೆಯುವಷ್ಟು ಖುಷಿಯಾಗಿದೆ. ಈ ಕೆರೆಗೆ ನೀರಿನ ಸೌಲಭ್ಯ ಕಲ್ಪಿಸುವ ಕರಗಡ ನೀರಾವರಿ ಯೋಜನೆಯಿಂದಲೂ ಈ ಕೆರೆಗೆ ನೀರು ಬಂದಿರಲಿಲ್ಲ. ಈಗಾಗಲೇ ಸುಮಾರು 20 ಕೋಟಿಯಷ್ಟು ಖರ್ಚು ಮಾಡಿದ್ದರು ಕರಗಡ ಯೋಜನೆಯಿಂದ ಬೆಳವಾಡಿ ಕೆರೆಗೆ ನೀರು ಬಂದಿರಲಿಲ್ಲ. ರೈತರು ಕರಗಡ ಯೋಜನೆ ಮುಗಿಸಿ ಎಂದು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಯೋಜನೆಯಿಂದ ನೀರು ಮಾತ್ರ ಬರಲೇ ಇಲ್ಲ.

    ಇದೀಗ ಯಾವುದೋ ಒಂದು ಮೂಲೆಯಿಂದ ಕೆರೆಗೆ ನೀರು ಬರ್ತಿರೋದನ್ನು ಕಂಡು ರೈತರ ಮನೆ-ಮನಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕರಗಡ ಯೋಜನೆ ಪೂರ್ಣಗೊಂಡು ಈ ಕೆರೆಗೆ ನೀರು ಬಂದರೆ ಈ ಭಾಗದ ಸಾವಿರಾರು ರೈತರ ನೀರಿನ ಬವಣೆ ತಪ್ಪಲಿದೆ. ಆದರೆ ಕಳೆದ ಎರಡು ದಶಕಗಳಿಂದ ಯೋಜನೆ ಸಾಗುತ್ತಲೇ ಇದೆ.

  • ಮನೆ ಪಾಠಕ್ಕೆ ತೆರಳಿದ್ದ ಬಾಲಕನ ಶವ ಕೆರೆಯಲ್ಲಿ ಪತ್ತೆ

    ಮನೆ ಪಾಠಕ್ಕೆ ತೆರಳಿದ್ದ ಬಾಲಕನ ಶವ ಕೆರೆಯಲ್ಲಿ ಪತ್ತೆ

    ರಾಯಚೂರು: ಕೆರೆ ನೋಡಲು ಹೋಗಿದ್ದ ಬಾಲಕ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಕೃಷ್ಣಗಿರಿ ಹಿಲ್ಸ್‌ನಲ್ಲಿರುವ  ಕೆರೆಯಲ್ಲಿ ನಡೆದಿದೆ.

    ಆದರ್ಶ್ (13) ಮೃತ ಬಾಲಕ. ಆದರ್ಶ್ 8ನೇ ತರಗತಿ ವಿದ್ಯಾರ್ಥಿಯಾಗಿದ್ದು, ಶನಿವಾರ ಬೆಳಗ್ಗೆ 8 ಗಂಟೆಗೆ ಮನೆ ಪಾಠಕ್ಕೆಂದು ಹೋಗಿದ್ದನು. ಆದರೆ ಸಂಜೆಯಾದರೂ ಆದರ್ಶ್ ಮನೆಗೆ ವಾಪಸ್ ಬಂದಿರಲಿಲ್ಲ. ಆದರೆ ಇಂದು ಕೆರೆಯಲ್ಲಿ ಆದರ್ಶ್ ಶವ ಪತ್ತೆಯಾಗಿದೆ.

    ಆದರ್ಶ್ ಮನೆ ಪಾಠ ಮುಗಿಸಿದ ನಂತರ ಸ್ನೇಹಿತರೊಂದಿಗೆ ಕೆರೆಗೆ ತೆರಳಿದ್ದನು ಎನ್ನಲಾಗಿದೆ. ಯಾಕೆಂದರೆ ಕೆರೆ ದಡದಲ್ಲಿ ಬೈಕ್ ಮತ್ತು ಬಟ್ಟೆ ಪತ್ತೆಯಾಗಿದ್ದವು. ನಂತರ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿದೆ ಅಗ್ನಿಶಾಮಕ ದಳ ಬಾಲಕನಿಗಾಗಿ ಕೆರೆಯಲ್ಲಿ ಶೋಧಕಾರ್ಯ ನಡೆಸಿದೆ. ಈ ವೇಳೆ ಆದರ್ಶ್ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.

    ಸದರಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ಕೆರೆಯಲ್ಲಿ ಈಜಲು ಹೋಗಿ ಬಾಲಕ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

  • ಲಕ್ಷಾಂತರ ಮೀನುಗಳ ಮಾರಣಹೋಮ – 150 ಕುಟುಂಬಗಳ ಆದಾಯಕ್ಕೆ ಕೊಡಲಿಪೆಟ್ಟು

    ಲಕ್ಷಾಂತರ ಮೀನುಗಳ ಮಾರಣಹೋಮ – 150 ಕುಟುಂಬಗಳ ಆದಾಯಕ್ಕೆ ಕೊಡಲಿಪೆಟ್ಟು

    – ದುಷ್ಕರ್ಮಿಗಳಿಂದ ವಿಷಪ್ರಾಶನ ಶಂಕೆ

    ರಾಯಚೂರು: ತಾಲೂಕಿನ ಕಟ್ಲಾಟಕೂರ ಕೆರೆಯ ನೀರು ರಾತ್ರೋ ರಾತ್ರಿ ವಿಷವಾಗಿದ್ದು ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ. ಇದರಿಂದ ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದ ಗ್ರಾಮದ 150 ಕುಟುಂಬಗಳ ಮುಖ್ಯ ಆದಾಯಕ್ಕೆ ಕತ್ತರಿ ಬಿದ್ದಿದೆ.

    ಕೆರೆಯಲ್ಲಿನ 5 ಲಕ್ಷಕ್ಕೂ ಹೆಚ್ಚು ಮೀನುಗಳು ಸಾವನ್ನಪ್ಪಿದ್ದು ಮೀನುಗಾರರು ಬೀದಿಗೆ ಬರುವಂತಾಗಿದೆ. ಕೆರೆಯ ನೀರಿಗೆ ವಿಷಪ್ರಾಶನವಾಗಿದ್ದು ಬಹುತೇಕ ಎಲ್ಲಾ ಮೀನುಗಳು ಸಾವನ್ನಪ್ಪಿವೆ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 350 ಎಕರೆ ಪ್ರದೇಶದ ಕೆರೆ ಈ ವರ್ಷ ಸತತವಾಗಿ ಸುರಿದ ಮಳೆಯಿಂದ ಸಂಪೂರ್ಣ ತುಂಬಿತ್ತು. ಹೀಗಾಗಿ ಮೀನುಗಾರರು ಒಳ್ಳೆಯ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಒಂದು ರಾತ್ರಿ ಕಳೆಯುವದರೊಳಗೆ ಲಕ್ಷಾಂತರ ಮೀನುಗಳ ಮಾರಣಹೋಮ ನಡೆದಿದೆ.

    ಮೂರು ತಿಂಗಳ ಕೆಳಗೆ ಆಂಧ್ರಪ್ರದೇಶದ ಕಾಕಿನಾಡದಿಂದ ಕಟ್ಲಾ, ರೂಹು, ಮೃಗಲಾ ಸೇರಿ ನಾನಾ ತಳಿಯ ಐದು ಲಕ್ಷಕ್ಕೂ ಅಧಿಕ ಮೀನು ಮರಿಗಳನ್ನು ತಂದು ಕೆರೆಗೆ ಬಿಡಲಾಗಿತ್ತು. ಇನ್ನೂ ಮೂರು ತಿಂಗಳು ಕಳೆದಿದ್ದರೆ ಮೀನುಗಾರರಿಗೆ ಫಸಲು ಕೈಸೇರುತ್ತಿತ್ತು. ಅಷ್ಟರಲ್ಲೇ ಈ ಅವಾಂತರ ನಡೆದಿದೆ. ಗುಂಜಳ್ಳಿಯ ಗಂಗಾಮತಸ್ಥರ ಮೀನುಗಾರರ ಸಹಕಾರ ಸಂಘದ ಅಡಿಯಲ್ಲಿ 150 ಕುಟುಂಬಗಳು ಬಂಡವಾಳ ಹಾಕಿವೆ. ಈಗ ಮೀನುಗಳು ಸತ್ತಿರುವುದರಿಂದ ಸುಮಾರು 25 ಲಕ್ಷ ರೂಪಾಯಿ ನಷ್ಟವಾಗಿದೆ.

    ಪ್ರತಿವರ್ಷ ಮಳೆಯ ಕೊರತೆಯಿಂದ ಕೆರೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಆದರೆ ಈ ವರ್ಷ ಕೆರೆ ತುಂಬಿದ್ದರಿಂದ ಉತ್ತಮ ಫಸಲು ಬರುವ ಎಲ್ಲಾ ಸಾಧ್ಯತೆಗಳು ಇದ್ದವು. ಈಗ ಮೀನುಗಳು ಸಾವನ್ನಪ್ಪಿವೆ. ಕೆರೆ ವಿಷಮಯವಾಗಿರುವುದರಿಂದ ಜನ ಜಾನುವಾರುಗಳು ಸಹ ಪ್ರಾಣಭೀತಿ ಎದುರಿಸುವಂತಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೀರಿನ ಮಾದರಿ ಪರೀಕ್ಷೆ ಕಳುಹಿಸಿದ್ದಾರೆ. ವರದಿ ಬಳಿಕ ಮೀನುಗಳ ಮರಣಕ್ಕೆ ಕಾರಣ ತಿಳಿದುಬರಲಿದೆ.

    ಹೊಟ್ಟೆಕಿಚ್ಚಿಗೋ ಅಥವಾ ಇನ್ಯಾವುದೋ ಕಾರಣಕ್ಕೋ ಕೆರೆಯ ನೀರನ್ನು ಮಲೀನ ಮಾಡಿದ್ದಕ್ಕೆ ಮೀನುಗಳನ್ನು ನಂಬಿ ಬದುಕುತ್ತಿದ್ದವರಿಗೆ ಅನ್ಯಾಯವಾಗಿದೆ. ಘಟನೆ ಹಿನ್ನೆಲೆ ಮೀನುಗಾರರು ಪೊಲೀಸ್ ಠಾಣಾ ಮೆಟ್ಟಿಲು ಹತ್ತಲು ಸಿದ್ಧರಾಗಿದ್ದಾರೆ. ಜೊತೆಗೆ ಪರಿಹಾರ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

  • ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು- ಸಮಯ ಪ್ರಜ್ಞೆಯಿಂದ ಪಾರಾದ ಪ್ರಯಾಣಿಕರು

    ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು- ಸಮಯ ಪ್ರಜ್ಞೆಯಿಂದ ಪಾರಾದ ಪ್ರಯಾಣಿಕರು

    ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಜಿಲ್ಲೆಯ ಕುಂದಾಪುರ ತಾಲೂಕಿನ ಬಾರಕೂರು ಬಳಿ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಗೆ ಹೊರಳಿದ್ದು, ನೋಡ ನೋಡುತ್ತಿದ್ದಂತೆ ಕೆರೆಗೆ ಬಿದ್ದಿದೆ. ಇನ್ನೇನು ನೀರಲ್ಲಿ ಮುಳಗಬೇಕು ಎನ್ನುವಷ್ಟರಲ್ಲಿ ಬಾಗಿಲು ತೆರೆದು ಎಲ್ಲರೂ ಹೊರಗೆ ಬಂದಿದ್ದಾರೆ. ನಂತರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಕೂಡ್ಲಿ ರಾಮಕೃಷ್ಣ ಅವರ ಕುಟುಂಬ ಯಡ್ತಾಡಿಯಿಂದ ಬಂಡೀಮಠಕ್ಕೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಕಾರು ಚಾಲಕ ನಿಯಂತ್ರಣ ತಪ್ಪಿ ರಸ್ತೆಯಿಂದ ಹೊರಭಾಗಕ್ಕೆ ಹೋಗಿದೆ. ಪಕ್ಕದಲ್ಲೇ ಇದ್ದ ಕೆರೆಗೆ ಹೊರಳಿದೆ. ಕಾರಿನ ಮುಂಭಾಗ ಮುಳುಗುತ್ತಿದ್ದಂತೆ ಕಾರಿನಲ್ಲಿದ್ದ ಎಲ್ಲರೂ ಬಾಗಿಲು ತೆಗೆದು ಹೊರಗೆ ಬಂದಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರ ಪ್ರಯತ್ನದಿಂದ ಕಾರನ್ನು ಮೇಲಕ್ಕೆತ್ತಲಾಗುತ್ತಿದೆ. ಕೋಟ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.

  • ರೈತರ ಪತ್ರಕ್ಕೆ ಪ್ರಧಾನಿ ಕಾರ್ಯಾಲಯದಿಂದ ಉತ್ತರ- ನೂರಾರು ವರ್ಷದ ಕೆರೆ ಉಳಿಸಲು ಸೂಚನೆ

    ರೈತರ ಪತ್ರಕ್ಕೆ ಪ್ರಧಾನಿ ಕಾರ್ಯಾಲಯದಿಂದ ಉತ್ತರ- ನೂರಾರು ವರ್ಷದ ಕೆರೆ ಉಳಿಸಲು ಸೂಚನೆ

    – ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಗ್ರಾಮಸ್ಥರು

    ಬೆಂಗಳೂರು: ನೂರಾರು ವರ್ಷದ ಹಳೆಯ ಕೆರೆ ಉಳಿಸುವಂತೆ ಗ್ರಾಮಸ್ಥರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ಕಾರ್ಯಾಲಯ ಸಹ ಪ್ರತಿಕ್ರಿಯಿಸಿ, ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದೆ.

    ಬೆಂಗಳೂರು ಉತ್ತರ ತಾಲೂಕಿನ ನೆಲಮಂಗಲ ಸಮೀಪದ ಮಾದಾವರ ಕೆರೆಯ ಕಥೆ-ವ್ಯಥೆ ಇದಾಗಿದ್ದು, ಕೆರೆ ಉಳಿಸುವ ಎಲ್ಲ ಪ್ರಯತ್ನಗಳು ವಿಫಲವಾದ ಬಳಿಕ ಸ್ಥಳೀಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಈ ವರ್ಷ ಉತ್ತಮ ಮಳೆಯಿಂದಾಗಿ ಕೆರೆ ತುಂಬಿರುವುದರಿಂದ ಸಾವಿರಾರು ರೈತ ಕುಟುಂಬಕ್ಕೆ ಅನುಕೂಲವಾಗಿದೆ. ಆದರೆ ಕೆರೆ ಉಳಿಸಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಹೋರಾಟಗಾರ ರಾಮಕೃಷ್ಣಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಹೋರಾಟಗಾರ ರಾಮಕೃಷ್ಣಯ್ಯಗೆ ಸ್ಥಳೀಯರು ಸಾಥ್ ನೀಡಿ ಕೆರೆ ಬಳಿ ಪ್ರತಿಭಟನೆ ನಡೆಸಿದರು.

    ಗ್ರಾಮಸ್ಥರು ಸ್ಥಳೀಯ ಅಧಿಕಾರಿಗಳು, ತಹಶಿಲ್ದಾರ್, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ಅಲೆದು ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಕೆರೆ ಉಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಇದೇ ವೇಳೆ ಜಿಂದಾಲ್ ಕಂಪನಿಯ ವಿರುದ್ಧ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದು, ಸುಮಾರು 10 ಎಕರೆಗೂ ಅಧಿಕ ಜಾಗವನ್ನು ಒತ್ತುವರಿ ಮಾಡಿರುವ ಆರೋಪ ವ್ಯಕ್ತವಾಗಿದೆ.

    ಮಾದಾವರ ಗ್ರಾಮಸ್ಥರು ಹಲವು ಬಾರಿ ಜಿಲ್ಲಾಧಿಕಾರಿ, ಸ್ಥಳೀಯ ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದಾರೆ, ಕಳೆದ ಐದಾರು ವರ್ಷದಿಂದ ಹೋರಾಟ ಸಹ ನಡೆಸಿದ್ದಾರೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಕೆರೆ ತುಂಬಿದ್ದು, ನೀರನ್ನು ಹೊರಕ್ಕೆ ಬಿಡುತ್ತಿಲ್ಲ. ಅಲ್ಲದೆ ಜಿಂದಾಲ್ ಕಂಪನಿಯ ಕಲುಷಿತ ನೀರು ಕೆರೆ ಒಡಲು ಸೇರುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಕಾರ್ಯಾಲಯದಿಂದ ಪ್ರತಿಕ್ರಿಯೆ
    ರೈತರ ಮನವಿಯನ್ನು ಪುರಸ್ಕರಿಸಿರುವ ಪ್ರಧಾನ ಮಂತ್ರಿ ಕಾರ್ಯಾಲಯ, ಕೆರೆ ಅಭಿವೃದ್ಧಿ, ಕಲುಶಿತ ನೀರು ಸೇರದಂತೆ ಹಾಗೂ ಒತ್ತುವರಿ ಕುರಿತು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರು ಹಾಗೂ ಬೆಂಗಳೂರು ಉತ್ತರ ತಾಲೂಕಿನ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ. ಈ ಮೂಲಕ ರೈತರ ಪತ್ರಕ್ಕೆ ಪ್ರಧಾನಿ ಕಾರ್ಯಾಲಯದಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ರೈತರ ನಡೆ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಪ್ರಿಪ್ಲಾನ್ ಮಾಡಿ 40 ದಿನದ ಹಸುಗೂಸನ್ನು ಕೆರೆಗೆ ಎಸೆದ ಪಾಪಿ ತಂದೆ!

    ಪ್ರಿಪ್ಲಾನ್ ಮಾಡಿ 40 ದಿನದ ಹಸುಗೂಸನ್ನು ಕೆರೆಗೆ ಎಸೆದ ಪಾಪಿ ತಂದೆ!

    ತಿರುವನಂತಪುರಂ: ಹಸುಗೂಸನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಉನ್ನಿಕೃಷ್ಣನ್ ಎಂದು ಗುರುತಿಸಲಾಗಿದೆ. ಈತ ತನ್ನ 40 ದಿನದ ಮಗುವನ್ನು ಪ್ರಿಪ್ಲಾನ್ ಮಾಡಿ ಕೆರೆಗೆ ಎಸೆಯುವ ಮೂಲಕ ಕೊಲೆ ಮಾಡಿದ್ದಾರೆ.

    ನೆಡುಮಂಗಡು ಮೂಲದ ಚಿಂಜು ಮತ್ತು ಪಚಲೂರ್ ಮೂಲದ ಉನ್ನಿಕೃಷ್ಣನ್ ದಂಪತಿಗೆ ಮಗು ಇದಾಗಿದೆ. ಉನ್ನಿಕೃಷ್ಣನ್ ಚಿಂಜು ಮೊದಲ ಪತ್ನಿಯಾದರೆ, ಚಿಂಜುಗೆ ಇದು ಎರಡನೇಯ ಮದುವೆಯಾಗಿತ್ತು. ಸತಿ-ಪತಿ ಮಧ್ಯೆ ಕ್ಲುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಜಗಳ ನಡೆಯುತ್ತಿತ್ತು. ಹೀಗಾಗಿ ಉನ್ನಿಕೃಷ್ಣನ್ ಮಗುವನ್ನು ಕೊಲೆ ಮಾಡಲು ಪೂರ್ವ ಯೋಜನೆ ಹಾಕಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

    ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಪತಿ ಹಾಗೂ ಮಗುವಿನ ಜೊತೆ ಚಿಂಜು ತನ್ನ ಪೋಷಕರು ಮನೆಗೆ ತೆರಳಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಉನ್ನಿಕೃಷ್ಣನ್ ಮಗುವನ್ನು ಎತ್ತಿಕೊಂಡು ಹೋಗಿ ಕೆರೆಗೆ ಎಸೆದಿದ್ದಾನೆ.

    ಇತ್ತ ಎಲ್ಲಿ ಹುಡುಕಿದರೂ ಮಗು ಸಿಗದಾಗ ಗಾಬರಿಗೊಂಡ ಚಿಂಜು ಪೊಲೀಸರಿಗೆ ನಾಪತ್ತೆ ಪ್ರಕರಣ ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಮಗುವಿನ ಪತ್ತೆಗೆ ಬಲೆ ಬೀಸಿದ್ದರು. ಅಲ್ಲದೆ ಮಗುವಿನ ತಂದೆ ಉನ್ನಿಕೃಷ್ಣನ್ ನನ್ನೇ ವಿಚಾರಣೆಗೆ ಒಳಪಡಿಸಿದರು.

    ಈ ವೇಳೆ ಪೊಲೀಸ್ ಅಧಿಕಾರಿಗಳ ಬಳಿ ಸುಳ್ಳು ಹೇಳಿದ್ದಾನೆ. ಆದರೆ ಈತ ಕೆರೆ ಬಳಿ ಹೋಗಿದ್ದನ್ನು ಸ್ಥಳೀಯರು ನೋಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದರು. ಈ ವೇಳೆ ಉನ್ನಿಕೃಷ್ಣನ್ ಸಿಕ್ಕಿಬಿದ್ದಿದ್ದಾನೆ. ಮರುದಿನ ನಸುಕಿನ ಜಾವ 2 ಗಂಟೆ ಸುಮಾರಿಗೆ ಕೆರೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಬಳಿಕ ಶವವನ್ನು ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.

  • ಕೆರೆ ಒಡೆದು ನೂರಾರು ಎಕರೆ ಜಮೀನಿಗೆ ನುಗ್ಗಿದ ನೀರು- ಲಕ್ಷಾಂತರ ರೂ. ಬೆಳೆ ನಾಶ

    ಕೆರೆ ಒಡೆದು ನೂರಾರು ಎಕರೆ ಜಮೀನಿಗೆ ನುಗ್ಗಿದ ನೀರು- ಲಕ್ಷಾಂತರ ರೂ. ಬೆಳೆ ನಾಶ

    ಚಾಮರಾಜನಗರ: ಸುಮಾರು 800 ಎಕರೆ ಕೃಷಿ ಭೂಮಿಗೆ ಆಸರೆಯಾಗಿದ್ದ ಕೆರೆ ಸರಿಯಾದ ನಿರ್ವಹಣೆ ಇಲ್ಲದೆ ಒಡೆದಿದ್ದು, ನಾಟಿ ಮಾಡಿದ ಗದ್ದೆಗಳಿಗೆ ನೀರು ನುಗ್ಗಿದೆ. ಫಸಲು ಭೂಮಿಯನ್ನು ಕಳೆದು ಕೊಂಡು ರೈತರು ಸಂಕಷ್ಟ ಎದುರಿಸುವಂತಾಗಿದೆ.

    ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಈ ಬೃಹತ್ ಕೆರೆ ಸುಮಾರು 750 ಎಕರೆಯಿದ್ದು, ಕಬಿನಿಯಿಂದ ಬಂದ ನೀರು ತುಂಬಿತ್ತು. ಕೆರೆಯ ಏರಿ ಒಡೆಯುವ ಮುನ್ಸೂಚನೆ ರೈತರಿಗೆ ಮೊದಲೆ ತಿಳಿದು, ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದೆ, ಇಂದು ಕೆರೆ ಏರಿ ಒಡೆಯಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

    ಕೆರೆ ಏರಿ ಒಡೆದ ಪರಿಣಾಮ ಸುಮಾರು 500 ಎಕರೆಗೂ ಹೆಚ್ಚು ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತದ ಬೆಳೆ ನಾಶವಾಗಿದೆ. ಕೆರೆಯನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದೇ ಈ ಘಟನೆಗೆ ಕಾರಣವಾಗಿದೆ ಎಂದು ರೈತರು ದೂರಿದ್ದಾರೆ. ಕಳೆದ ವಾರವಷ್ಟೇ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಕೆರೆ ಒತ್ತುವರಿ ತೆರವು ಮಾಡಿ, ಮಾದರಿ ಕೆರೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಹೀಗಾಗಿ ಇಂತಹ ಅಧಿಕಾರಿಗಳನ್ನು ಕೂಡಲೇ ವಜಾ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.

    ಕೆರೆ ಒಡೆದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ನರೇಂದ್ರ, ಕೆರೆ ಒಡೆಯಲು ಅಧಿಕಾರಿಗಳೇ ಕಾರಣ. ಕೆರೆ ಒಡೆಯುವ ಮುನ್ಸೂಚನೆಯನ್ನು ರೈತರು ನೆನ್ನೆಯೇ ನೀಡಿದ್ದಾರೆ. ಏರಿಗೆ ಮಣ್ಣು ಹಾಕುವಂತೆ ಹೇಳಿದರೂ ಕೆಲಸ ಮಾಡಲಿಲ್ಲ. ಇಷ್ಟೊಂದು ಬೆಳೆ ನಾಶವಾಗಿದೆ. ಇದಕ್ಕೆ ಜವಾಬ್ದಾರರು ಯಾರು ಪ್ರಶ್ನಿಸಿದರು. ಇದೇ ವೇಳೆ ಬೆಳೆ ನಾಶವಾಗಿರುವ ರೈತರಿಗೆ ಪರಿಹಾರ ಒದಗಿಸುವ ಕುರಿತು ಭರವಸೆ ನೀಡಿದರು. ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದು, ತಾಲೂಕು ಆಡಳಿತಕ್ಕೆ ಸೂಚನೆ ನೀಡಿ ಬೆಳೆ ನಷ್ಟದ ವಿವರ ಒದಗಿಸುವಂತೆ ತಿಳಿಸಿದರು.

    ಗದ್ದೆಗೆ ನೀರು ತುಂಬಿ ಬೆಳೆ ನಾಶವಾಗಿರುವುದು ಒಂದು ಕಡೆಯಾದರೆ, ಇದೇ ನೀರಲ್ಲಿ ಗ್ರಾಮದ ಯುವಕರು ಮೀನು ಹಿಡಿಯಲು ಕಾದಾಟ ನಡೆಸುತ್ತಿದ್ದರು.

  • ನಾಪತ್ತೆಯಾಗಿದ್ದ ಬಾಲಕಿ ಕೆರೆಯಲ್ಲಿ ಶವವಾಗಿ ಪತ್ತೆ

    ನಾಪತ್ತೆಯಾಗಿದ್ದ ಬಾಲಕಿ ಕೆರೆಯಲ್ಲಿ ಶವವಾಗಿ ಪತ್ತೆ

    – ಮನೆಯ ಬಳಿ ಸೈಕಲ್ ಸವಾರಿ ಮಾಡುವಾಗ ಮಿಸ್ಸಿಂಗ್
    – ಸೈಕಲ್ ಪತ್ತೆಯಾದ 2 ಕಿ.ಮೀ ದೂರದಲ್ಲಿ ಶವವಾಗಿ ಪತ್ತೆ

    ಹೈದರಾಬಾದ್: ಗುರುವಾರ ಸಂಜೆಯಿಂದ ನಾಪತ್ತೆಯಾಗಿದ್ದ 12 ವರ್ಷದ ಬಾಲಕಿ ಇಂದು ಶವವಾಗಿ ಕೆರೆಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಬಾಲಕಿಯನ್ನು ಸುಮೇಧಾ ಕಪುರಿಯಾ ಎಂದು ಗುರುತಿಸಲಾಗಿದೆ. ಸುಮೇಧಾ ಕೊನೆಯದಾಗಿ ಹೈದರಾಬಾದ್‍ನ ವಸತಿ ಪ್ರದೇಶವಾದ ನೆರೆಡ್‍ಮೆಟ್‍ನ ಕಾಕತಿಯಾ ನಗರದಲ್ಲಿ ತನ್ನ ಮನೆಯ ಹೊರಗೆ ಸೈಕಲ್ ಸವಾರಿ ಮಾಡುತ್ತಿದ್ದಳು. ಆದರೆ ಬಾಲಕಿಯ ಸೈಕಲ್ ಪತ್ತೆಯಾದ ಸ್ಥಳದಿಂದ 2 ಕಿ.ಮೀ ದೂರದಲ್ಲಿರುವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿಗಾಗಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾದ ಕೆಲವೇ ಗಂಟೆಗಳ ನಂತರ ಮೃತದೇಹ ಪತ್ತೆಯಾಗಿದೆ.

    ಸುಮೇಧಾ 5ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಈಕೆ ಗುರುವಾರ ಸಂಜೆ ನಾಪತ್ತೆಯಾಗಿದ್ದಳು. ನಂತರ ಪೋಷಕರು ಮಗಳಿಗಾಗಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೂಡಲೇ ಪೋಷಕರು ನೆರೆಡ್‍ಮೆಟ್ ಪೊಲೀಸರಿದೆ ನಾಪತ್ತೆ ದೂರ ದಾಖಲಿಸಿದ್ದರು. ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದರು. ಬಾಲಕಿ ಸೈಕಲ್ ತುಳಿಯುತ್ತಿದ್ದಾಗ ಚರಂಡಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

    ನನ್ನ ಮಗಳು ಚರಂಡಿಗೆ ಬಿದ್ದಿದ್ದಾಳೆ ಎಂದರೆ ನಾನು ನಂಬಲ್ಲ. ಹೀಗಾಗಿ ಅವಳ ಸಾವಿನ ಬಗ್ಗೆ ತನಿಖೆ ನಡೆಸಬೇಕಾಗಿದೆ. ಏನೋ ಸಂಭವಿಸಿದಂತೆ ತೋರುತ್ತದೆ ಎಂದು ಬಾಲಕಿ ತಾಯಿ ಸುಕನ್ಯಾ ಕಪುರಿಯಾ ಆಗ್ರಹಿಸಿದ್ದಾರೆ.

    ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ತಂಡಗಳು ಬಾಲಕಿಯ ಗುಲಾಬಿ ಬಣ್ಣದ ಸೈಕಲ್ ಅನ್ನು ಮನೆಗೆ ಹತ್ತಿರವಿರುವ ತೆರೆದ ಚರಂಡಿಯಲ್ಲಿ ಪತ್ತೆ ಮಾಡಿದೆ. ಕಳೆದ ಎರಡು ದಿನಗಳಿಂದ ಹೈದರಾಬಾದ್‍ನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವಾರು ಚರಂಡಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಬಾಲಕಿ ಚರಂಡಿಗೆ ಬಿದ್ದಿರಬಹುದೆಂದು ಶಂಕಿಸಿ ರಕ್ಷಣಾ ಪಡೆ ಪೊಲೀಸರಿಗೆ ಚರಂಡಿ ತೆರೆಯಲು ಸಹಾಯ ಮಾಡಿದ್ದಾರೆ.

    ಚರಂಡಿಯಲ್ಲಿ ಬಾಲಕಿ ಪತ್ತೆಯಾಗಿಲ್ಲ. ಆದರೆ ಸ್ವಲ್ಪ ಸಮಯದ ನಂತರ ಸಮೀಪದ ಕೆರೆಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಸದ್ಯಕ್ಕೆ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಸ್ಥಳದಲ್ಲಿ ಮಗಳ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಗುರುವಾರ ರಾತ್ರಿಯೇ ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ. ನಾವು ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುತ್ತಿದ್ದೇವೆ. ಸದ್ಯ ತನಿಖೆಗಾಗಿ ನಾಲ್ಕು ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಅದೇ ಕಾಲೋನಿಯ ಮನೆಯೊಂದರ ಹೊರಗಿನ ಕ್ಯಾಮೆರಾದಿಂದ ಪಡೆದ ಸಿಸಿಟಿವಿ ದೃಶ್ಯಾವಳಿಯಲ್ಲಿ ಬಾಲಕಿ ತನ್ನ ಸೈಕಲ್‍ನಲ್ಲಿ ಹೋಗುತ್ತಿರುವನ್ನು ಕಾಣಬಹುದು ಎಂದು ಸಹಾಯಕ ಪೊಲೀಸ್ ಆಯುಕ್ತ ಶಿವಕುಮಾರ್ ಹೇಳಿದರು.

  • ಹಲವೆಡೆ ಧಾರಾಕಾರ ಮಳೆ – ಕೆರೆ ತುಂಬಿ ಜಮೀನುಗಳಿಗೆ ನುಗ್ಗಿದ ನೀರು

    ಹಲವೆಡೆ ಧಾರಾಕಾರ ಮಳೆ – ಕೆರೆ ತುಂಬಿ ಜಮೀನುಗಳಿಗೆ ನುಗ್ಗಿದ ನೀರು

    – ಅಪಾರ ಪ್ರಮಾಣದ ಬೆಳೆ ನಾಶ
    – ಹಲವು ಸೇತುವೆಗಳು ಮುಳುಗಡೆ

    ರಾಯಚೂರು/ಬೀದರ್: ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಬೀದರ್‌ನಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಭಾಲ್ಕಿ ತಾಲೂಕಿನ ಆನಂದವಾಡಿ ಸೇತುವೆ ಮುಳುಗಡೆಯಾಗಿ ನಾಲ್ಕು ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಇತ್ತ ರಾಯಚೂರಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

    ರಾಯಚೂರು ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮಳೆಯಿಂದಾಗಿ ಹತ್ತಿ ಬೆಳೆ ಸಂಪೂರ್ಣ ಹಾಳಾಗುವ ಭೀತಿ ಎದುರಾಗಿದೆ. ರಾಯಚೂರು ತಾಲೂಕಿನಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿರೋ ಮಳೆಯಿಂದ ಕೆರೆ ಕೋಡಿ ತುಂಬಿ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಜಮೀನಿಗೆ ನೀರು ನುಗ್ಗಿರುವುದರಿಂದ ಬೆಳೆ ಹಾಳಾಗಿದ್ದು, ಮೊಣಕಾಲುವರೆಗೂ ಜಮೀನಿನಲ್ಲಿ ನೀರು ನಿಂತಿರುವುದರಿಂದ ಚೆನ್ನಾಗಿ ಬೆಳೆದಿದ್ದ ಬೆಳೆ ಹಾಳಾಗಿವೆ.

    ಸಿಂಧನೂರು ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೇ ರಸ್ತೆ ಮೇಲೆ ನೀರು ಹರಿದು ಓಡಾಟಕ್ಕೆ ತೊಂದರೆಯುಂಟಾಗಿದೆ. ರಾಯಚೂರಿನ ಎಸ್‍ಪಿ ಕಚೇರಿ ಬಳಿ ಮರ ನೆಲಕ್ಕುರುಳಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ರಾತ್ರಿಯಿಡಿ ಸುರಿದ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು, ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ.

    ಬೀದರ್‌ನಲ್ಲೂ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯಾದ್ಯಂತ ಹಲವು ಸೇತುವೆಗಳು ಮುಳುಗಡೆಯಾಗಿ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ತಡರಾತ್ರಿ ಕಮಲಾನಗರ ತಾಲೂಕು ವ್ಯಾಪ್ತಿಯಲ್ಲಿ ಭರ್ಜರಿ ಮಳೆಯಾಗಿದ್ದು, ತಾಲೂಕಿನ ಸೋನಾಳ್, ಲಖಣ್ ಗಾಂವ್ ಹಾಗೂ ಬೆಳಕುಣಿ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ. ಜೊತೆಗೆ ಹಲವು ಗ್ರಾಮಗಳ ಸಂಪರ್ಕ ಸಂಪೂರ್ಣ ಬಂದಾಗಿದೆ. ಔರಾದ್ ತಾಲೂಕಿನ ಚಂದಾಪೂರ್ ಸೇತುವೆ ಬಳಿಯ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಮಹಾ ಮಳೆಗೆ ನಾಶವಾಗಿದೆ. ಎರಡು ದಿನಗಳಲ್ಲಿ ಜಿಲ್ಲೆಯಾದ್ಯಂತ 100ಕ್ಕೂ ಹೆಚ್ಚು ಮೀಲಿ ಮೀಟರ್ ಮಳೆಯಾಗಿದ್ದು, ಹವಾಮಾನ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಹಾಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ.

    ಇನ್ನೂ ಬಳ್ಳಾರಿಯ ಹೊಸಪೇಟೆ ತಾಲೂಕಿನ ಡಣಾಯಕನ ಕೆರೆ ಕೋಡಿ ಒಡೆದು ನೂರಾರು ಎಕರೆ ಬೆಳೆಗೆ ನೀರು ನುಗ್ಗಿದೆ. ಕಳೆದ ವಾರ ಸುರಿದ ಮಳೆ ಕೆರೆ ಭರ್ತಿಯಾಗಿತ್ತು. ಈಗ ಮತ್ತೆ ಮಳೆಯಾಗಿದ್ದರಿಂದ ಕೋಡಿ ಒಡೆದು ಉತ್ತಮವಾಗಿ ಬೆಳದ ಫಸಲಿಗೆ ನೀರು ನುಗ್ಗಿದೆ. ಮೆಕ್ಕೆಜೋಳ, ಈರುಳ್ಳಿ, ಭತ್ತೆ ಸೇರಿದಂತೆ ನಾನಾ ಬೆಳೆಗಳಿಗೆ ಕೆರೆ ನೀರು ನುಗ್ಗಿದೆ. ಇತ್ತ ಕಲಬುರಗಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಕಾಗಿನಾ ನದಿ ತುಂಬಿ ಹರಿಯುತ್ತಿದೆ. ಪರಿಣಾಮ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಬಳಿಯಿರುವ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ಕಲಬುರಗಿ- ಸೇಡಂ ರಸ್ತೆ ಸಂಚಾರ ಸ್ಥಗಿತವಾಗಿದೆ.