Tag: lake

  • ಕೆರೆಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

    ಕೆರೆಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

    ಹಾವೇರಿ: ಕೆರೆಗೆ ಹಾರಿ ತಾಯಿ ಮತ್ತು ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ದುರ್ಗಾದೇವಿ ಕೆರೆಯಲ್ಲಿ ನಡೆದಿದೆ.

    ಮೃತ ತಾಯಿಯನ್ನು ಶಿವಕ್ಕ (40) ಮತ್ತು ಮಗಳು ಸಂಗೀತಾ (20) ಎಂದು ಗುರುತಿಸಲಾಗಿದೆ. ಮೃತ ತಾಯಿ-ಮಗಳು ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಹಳ್ಯಾಳ ತಾಂಡಾದ ನಿವಾಸಿಗಳು ಎಂದು ಗುರುತಿಸಲಾಗಿದೆ.

    ಕೌಟುಂಬಿಕ ಕಲಹದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ತಾಯಿ ಮಗಳನ್ನು ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸ್ಥಳೀಯರು ಹಾಗೂ ಪೊಲೀಸರು ಸೇರಿ ಮೃತದೇಹಗಳನ್ನ ಕೆರೆಯಿಂದ ಹೊರತೆಗೆದಿದ್ದಾರೆ.

    ತಾಯಿ ಮಗಳು ಒಟ್ಟಿಗೆ ಕೆರೆಗೆ ಹಾರಿ ಪ್ರಾಣ ಬಿಟ್ಟಿರುವ ಪ್ರಕರಣ ಹಿರೇಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

  • ಸಾಲಗಾರರ ಕಿರುಕುಳಕ್ಕೆ ಬೇಸತ್ತು ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

    ಸಾಲಗಾರರ ಕಿರುಕುಳಕ್ಕೆ ಬೇಸತ್ತು ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

    ಹುಬ್ಬಳ್ಳಿ: ಸಾಲಗಾರರ ಕಿರುಕುಳಕ್ಕೆ ಬೇಸತ್ತು ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ನಡೆದಿದೆ.

    ಮಲ್ಲವ್ವ ಸುಣಗಾರ (43) ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ. ಕಿರು ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ಮಲ್ಲವ್ವ ಬೇರೆಯವರಿಂದ ಹಣ ಪಡೆದು ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಸಾಲಗಾರರ ಕಿರುಕುಳ ಹೆಚ್ಚಾದ ಹಿನ್ನಲೆಯಲ್ಲಿ ಮನನೊಂದು ಅಂಚಟಗೇರಿಯ ಬಿಡ್ನಾಳ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

    ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಗೆ ಸಾಲ ನೀಡಿದವರು ಹಾಗು ಕಿರುಕುಳ ನೀಡಿದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ವಿವಿಧ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • 3 ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿವಾಹಿತೆಯ ಶವ ಕೆರೆಯಲ್ಲಿ ಪತ್ತೆ!

    3 ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿವಾಹಿತೆಯ ಶವ ಕೆರೆಯಲ್ಲಿ ಪತ್ತೆ!

    – ಶಂಕಿತನ ಮನೆ ಮೇಲೆ ದಾಳಿ, ಹೆಂಚು ಒಡೆದು ಆಕ್ರೊಶ
    – ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ ಸಂಬಂಧಿಕರು

    ಮೈಸೂರು: ನಾಪತ್ತೆಯಾಗಿದ್ದ ವಿವಾಹಿತೆ ಶವವಾಗಿ ಕೆರೆಯಲ್ಲಿ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಎರಡು ಬೈಕ್ ಗಳಿಗೆ ಬೆಂಕಿ ಹಚ್ಚಿ ಸಂಬಂಧಿಕರು ತಮ್ಮ ಆಕ್ರೋಶ ಹೊರಹಾಕಿದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಶ್ವೇತಾ (20) ಮೃತ ದುರ್ದೈವಿ. ನಂಜನಗೂಡು ತಾಲೂಕಿನ ಕೆಂಬಾಲು ಗ್ರಾಮದ ನಿವಾಸಿಯಾಗಿರುವ ಶ್ವೇತಾ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

    ಸೋದರ ಮಾವ ಶಶಿ ಕುಮಾರ್ ಜೊತೆ 2 ವರ್ಷಗಳ ಹಿಂದೆ ಶ್ವೇತಾ ಮದುವೆಯಾಗಿದ್ದರು. ಶಶಿಕುಮಾರ್ ಕಾಸರಗೋಡಿನ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿರುವುದರಿಂದ ದಂಪತಿ ಅಲ್ಲಿಯೇ ನೆಲೆಸಿತ್ತು. ಆದರೆ ಒಂದೂವರೆ ತಿಂಗಳ ಹಿಂದೆ ಸ್ವಗ್ರಾಮ ಕೆಂಬಾಲು ಗ್ರಾಮಕ್ಕೆ ಆಗಮಿಸಿದ್ದ ಶ್ವೇತಾ, ಮೂರು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು.

    ಇಂದು ಮಾರ್ಬಳ್ಳಿ ಗ್ರಾಮದ ಕೆರೆಯಲ್ಲಿ ಗೋಣಿಚೀಲದಲ್ಲಿ ಶ್ವೇತಾ ಶವ ಪತ್ತೆಯಾಗಿದೆ. ಅದೇ ಗ್ರಾಮದ ಶಿವು ಎಂಬಾತ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಶಿವು ಮನೆ ಮೇಲೆ ದಾಳಿ ನಡೆಸಿರುವ ಶ್ವೇತಾ ಸಂಬಂಧಿಕರು, 2 ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ, ಮನೆಯ ಹೆಂಚುಗಳನ್ನು ಒಡೆದು ಆಕ್ರೋಶ ಹೊರಹಾಕಿದ್ದಾರೆ.

    ಸದ್ಯ ತಲೆಮರೆಸಿಕೊಂಡಿರುವ ಶಿವುಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದು, ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಒಬ್ಬರ ಹಿಂದೆ ಒಬ್ಬರು – ಒಂದೇ ಕುಟುಂಬದ ಮೂವರು ಸೇರಿ ಐವರು ನೀರುಪಾಲು

    ಒಬ್ಬರ ಹಿಂದೆ ಒಬ್ಬರು – ಒಂದೇ ಕುಟುಂಬದ ಮೂವರು ಸೇರಿ ಐವರು ನೀರುಪಾಲು

    – ಮಾಲೀಕನಿಗಾಗಿ ಕೆರೆ ಬಳಿ ಕಾದು ಕೂತ ಶ್ವಾನ

    ಚಿಕ್ಕಮಗಳೂರು: ಅಣ್ಣನನ್ನು ಕಾಪಾಡಲು ತಮ್ಮ. ತಮ್ಮನನ್ನು ಕಾಪಾಡಲು ಮತ್ತೊಬ್ಬ ಅಣ್ಣ. ಹೀಗೆ ಒಬ್ಬರನೊಬ್ಬರು ಕಾಪಾಡಲು ಹೋಗಿ ಒಂದೇ ಕುಟುಂಬದ ಮೂವರು ಸೇರಿದಂತೆ ಐವರು ನೀರುಪಾಲಾಗಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಸಮೀಪದ ಹರೇಕೆರೆಯಲ್ಲಿ ನಡೆದಿದೆ.

    ಮೃತರೆಲ್ಲರೂ 20 ರಿಂದ 24 ವರ್ಷದ ಯುವಕರಾಗಿದ್ದು, ಮೃತರ ಯುವಕರನ್ನು ಸುದೀಪ್, ಸಂದೀಪ್, ದಿಲೀಪ್, ರಘು ಹಾಗೂ ದೀಪಕ್ ಎಂದು ಗುರುತಿಸಲಾಗಿದೆ. ನವೆಂಬರ್ 20ರಂದು ಸಂದೀಪ್ ಅಕ್ಕ ಸಂಧ್ಯಾಳ ಮದುವೆಯಾಗಿತ್ತು. ನಿನ್ನೆ ತಾನೇ ಬೀಗರ ಊಟದ ಕಾರ್ಯಕ್ರಮವೂ ಮುಗಿದಿತ್ತು. ಇಂದು ಅಕ್ಕ-ಬಾವನನ್ನು ಬಾವನ ಮನೆಗೆ ಕಳಿಸಿ ಮದುವೆ ನಂತರದ ಕಾರ್ಯದಲ್ಲಿ ತೊಡಗಿದ್ದರು. ಬೀಗರ ಊಟಕ್ಕೆ ತಂದಿದ್ದ ಪಾತ್ರೆಗಳನ್ನು ವಾಪಸ್ ಕೊಡಲು ತಯಾರಾಗಿದ್ದರು.

    ಪಾತ್ರೆ ಕೊಡಲು ಹೋಗಿದ್ದರೆ ಐವರು ಯುವಕರು ಸಾವಿನಿಂದ ಪಾರಾಗುತ್ತಿದ್ದರೋ ಏನೋ. ಆದರೆ ವಿಧಿ ಅವರನ್ನು ಸಾವಿನ ಮನೆಗೆ ದೂಡಿದೆ. ಕೆರೆಯಲ್ಲಿ ಮೀನು ಹಿಡಿದು ತಂದು ಅಡುಗೆ ಮಾಡಿ ಊಟದ ಬಳಿಕ ಪಾತ್ರೆ ಕೊಡಲು ಹೋಗೋಣವೆಂದು ಐವರು ಅಣ್ಣತಮ್ಮಂದಿರು ಕೆರೆಗೆ ಹೋಗಿದ್ದಾರೆ. ಮೀನಿಗೆ ಗಾಳ ಹಾಕುವ ಮುನ್ನ ಈಜಲು ನೀರಿಗೆ ಇಳಿದಿದ್ದಾರೆ. ಆದರೆ ಸುಮಾರು 30 ಅಡಿ ಆಳವಿದ್ದ ಕಾರಣ ಓರ್ವ ನೀರಿನಲ್ಲಿ ಮುಳುಗಿದ್ದಾನೆ. ಅವನನ್ನ ರಕ್ಷಿಸಲು ಮತ್ತೊಬ್ಬ ನೀರಿಗಿಳಿದಿದ್ದಾನೆ.

    ಹೀಗೆ ಒಬ್ಬರನ್ನೊಬ್ಬರು ರಕ್ಷಿಸಲು ಒಟ್ಟು ಆರು ಜನ ನೀರಿಗೆ ಇಳಿದಿದ್ದಾರೆ. ಆದರೆ ಬಾನು ಎಂಬುವನು ಈಜಿ ದಡಸೇರಿದ್ದಾನೆ. ದಡದಲ್ಲಿದ್ದ ಬಾನು ಮಕ್ಕಳು ನೀರಿಗೆ ಬರುತ್ತಾವೆಂದು ಆತ ದಡಕ್ಕೆ ವಾಪಸ್ ಬಂದಿದ್ದಾನೆ. ಉಳಿದ ಐವರು ಯುವಕರು ನೋಡ-ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಮನೆಯವರು ಕೆರೆ ಬಳಿ ಹೋದಾಗ ಮೃತ ಸಂದೀಪ್ ಪ್ರೀತಿಯಿಂದ ಸಾಕಿದ್ದ ನಾಯಿ ಡ್ಯಾನಿ ಕೂಡ ಮಾಲೀಕನಿಗಾಗಿ ಕೆರೆ ಬಳಿ ಅನಾಥನಂತೆ ಕೂತಿತ್ತು. ಕೊನೆಗೆ ಸಂದೀಪ್ ಮೃತದೇಹ ಸಿಕ್ಕ ಬಳಿಕ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ತರುವಾಗ ನಾಯಿ ಅಂಬುಲೆನ್ಸ್ ಹಿಂದೆ ಮಗುವಂತೆ ಓಡಿ ಬಂದಿದ್ದು ಸ್ಥಳೀಯರ ಕಣ್ಣಲ್ಲಿ ನೀರು ತರಿಸಿತ್ತು.

    ಒಂದೇ ಕುಟುಂಬದ ಮೂವರು ನೀರುಪಾಲು: ಈ ಐವರು ಯುವಕರಲ್ಲಿ ಒಂದೇ ಕುಟುಂಬದ ಮೂರು ನೀರುಪಾಲಾಗಿರೋದು ಮತ್ತೊಂದು ಮಹಾ ದುರಂತ. ಮದುವೆಗಾಗಿ ಸಂಬಂಧಿಗಳ ಮನೆಗೆ ಬಂದಿದ್ದ ತಾಲೂಕಿನ ಹಂಚರವಳ್ಳಿ ಗ್ರಾಮದ ಕೃಷ್ಣಮೂರ್ತಿ-ಕುಸುಮ ದಂಪತಿಯ ಮೂವರು ಮಕ್ಕಳು ನೀರಿಪಾಲಾಗಿದ್ದಾರೆ. ಸಂತೋಷದಿಂದ ಅಕ್ಕನ ಮದುವೆ ಮಾಡಿ ದಿಲೀಪ್, ದೀಪಕ್ ಮತ್ತು ಸುದೀಪ್ ಅಕ್ಕ ಗಂಡನಮನೆ ಸೇರುತ್ತಿದ್ದಂತೆ ಇತ್ತ ತಮ್ಮಂದಿರು ಸಾವಿನ ಮನೆ ಸೇರಿದ್ದಾರೆ.

    ನಾಯಿಯನ್ನು ಕಂಡು ಕಣ್ಣೀರಿಟ್ಟ ಜನ: ಐವರು ಸಾವಿನ ವಿಷಯ ಕೇಳಿ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿತ್ತು. ಇಡೀ ಊರಿನ ಜನ ಕೆರೆ ಬಳಿ ಜಮಾಯಿಸಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆದರೆ ಮೃತ ಸಂದೀಪ್ ಪ್ರೀತಿಯಿಂದ ಸಾಕಿದ್ದ ನಾಯಿ ಕೆರೆ ಬಳಿ ಮಾಲೀಕನಿಗಾಗಿ ಕಾದು ಕೂತಿತ್ತು. ನನ್ನೊಡೆಯ ಬರುತ್ತಾನೆಂದು ಅತ್ತಿತ್ತ ತಲೆಯಾಡಿಸುತ್ತಾ ಎದುರು ಬರುವವರನ್ನ ನೋಡಿ ಸುಮ್ಮನಾಗುತ್ತಿತ್ತು. ಕೊನೆ-ಕೊನೆಗೆ ಒಂದೊಂದು ಮೃತದೇಹ ಪತ್ತೆಯಾದಾಗಲು ಕುಟುಂಬಸ್ಥರ ನೋವು ಹೇಳತೀರದ್ದಾಗಿತ್ತು. ಸಂದೀಪ್‍ನನ್ನ ನೆನೆದು ಮಂಕಾಗಿ ಕೂತಿದ್ದ ನಾಯಿ ಡ್ಯಾನಿ ಅವನನ್ನ ನೆನೆದು ಕಣ್ಣೀರಿಟ್ಟಿತ್ತು.

  • ದಾಹ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾದ ಗ್ರಾಮಸ್ಥರು – 4 ಕೆರೆಗಳು ಭರ್ತಿ

    ದಾಹ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾದ ಗ್ರಾಮಸ್ಥರು – 4 ಕೆರೆಗಳು ಭರ್ತಿ

    ಗದಗ: ಒಂದು ಕಾಲದಲ್ಲಿ ಅಲ್ಲಿ ಬರ ತಾಂಡವಾಡ್ತಿತ್ತು. ಜನ-ಜಾನುವಾರುಗಳು ನೀರಿಗಾಗಿ ಹಾಹಾಕಾರ ಪಡುತ್ತಿದ್ದವು. ಇಡೀ ಊರಿಗೆ ಊರೆ ದಾಹ ನೀಗಿಸಿಕೊಳ್ಳಲು ಹಾತೊರೆಯುತ್ತಿತ್ತು. ಅಲ್ಲಿರುವ ಕೆರೆಗಳನ್ನ ತುಂಬಿಸಿಕೊಡಿ ಅಂತ ಗ್ರಾಮಸ್ಥರು ಸರ್ಕಾರಕ್ಕೆ ಸಾಕಷ್ಟು ಬಾರಿ ಬೇಡಿಕೊಂಡರು ಪ್ರಯೋಜನವಾಗಿರಲಿಲ್ಲ. ಕೊನೆಗೆ ತಾವೇ ದಾಹ ನೀಗಿಸಿಕೊಳ್ಳಲು ಮುಂದಾದರು. ಯಾವ ಸರ್ಕಾರಗಳೂ ಮಾಡದ ಕೆಲಸವನ್ನ ತಾವೇ ಮಾಡಲು ಮುಂದಾದರು.

    ಹೌದು. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಕೆರೆಗಳಲ್ಲಿ ನೀರು ತುಂಬಿದೆ. ನರೇಗಲ್ ಸುತ್ತ-ಮುತ್ತ ನದಿ ಮೂಲಗಳು ಇಲ್ಲದೇ ಇರುವುದರಿಂದ ಕೆರೆಗಳು ಬರಿದಾಗಿದ್ದವು. ಹೀಗಾಗಿ ಗ್ರಾಮದಲ್ಲಿನ ಜನ ನೀರಿಗಾಗಿ ಪರದಾಡುತ್ತಿದ್ದರು. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸ್ಥಳೀಯರು ಸಾಕಷ್ಟು ಮನವಿ ಮಾಡಿದ್ರೂ ಪ್ರಯೋಜನವಾಗಿರಲಿಲ್ಲ. ಸರ್ಕಾರದ ಯಾವ ನಿರೀಕ್ಷೆ ಇಟ್ಟುಕೊಳ್ಳದೆ, ಸ್ಥಳೀಯರು ಒಟ್ಟಾಗಿ ಖರ್ಚು ಮಾಡಿ ಗ್ರಾಮದ ನಾಲ್ಕು ಕೆರೆಗಳ ಹೂಳು ತೆಗೆದು ನೀರು ಬರುವಂತೆ ಮಾಡಿದ್ದಾರೆ. ಈ ವರ್ಷ ನಿರಂತರ ಮಳೆಯಿಂದ ನಾಲ್ಕು ಕೆರೆಗಳು ಭರ್ತಿಯಾಗಿದ್ದು, ಸ್ಥಳೀಯರಲ್ಲಿ ಮಂದಹಾಸ ಮೂಡಿಸಿದೆ.

    ನೀರಿಗಾಗಿ ಹಾಹಾಕಾರ ಪಡುತ್ತಿದ್ದ ನರೇಗಲ್ ಜನ ತಾವೇ, ನೆಲಜಲ ಸಂರಕ್ಷಣಾ ಸಮಿತಿ ಅಂತ ತಂಡ ಮಾಡಿಕೊಂಡರು. ಇದೇ ತಂಡದಿಂದ ಹೂಳೆತ್ತುವ ಕೆಲಸ ಮಾಡಿದ್ದರಿಂದ ಇಂದು ಜೀವಜಲ ಎಲ್ಲೆಂದರಲ್ಲಿ ಹರಿಯುತ್ತಿದೆ. ಕೆರೆಗಳು ಭರ್ತಿಯಾಗಿದ್ದರಿಂದ ಸದ್ಯ ಗ್ರಾಮದಲ್ಲಿ ಈ ಹಿಂದೆ ಉದ್ಭವಿಸಿದ್ದ ನೀರಿನ ಸಮಸ್ಯೆ ಇಂದು ಇಲ್ಲ. ಬೋರ್‍ವೆಲ್‍ಗಳು ರಿಚಾರ್ಜ್ ಆಗಿವೆ. ಜೊತೆಗೆ ಕೆರೆ ಸುತ್ತಲೂ ಗಿಡಗಳನ್ನ ನೆಡಲಾಗಿದೆ. ಮುಂದೊಂದು ದಿನ ಗಿಡಮರಗಳು ಚೆನ್ನಾಗಿ ಬೆಳೆದು ಶುದ್ಧ ಗಾಳಿ ಜೊತೆಗೆ ಮಳೆ ಬರುವಂತಾಗಲೆಂದು ಹಸಿರು ನಿರ್ಮಿಸಿದೆ. ಕೆರೆ ತುಂಬಿರುವುದು ತುಂಬಾನೆ ಖುಷಿಯಾಗಿದೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ.

    ಗದಗ ಜಿಲ್ಲೆ ನರಗೇಲ್ ಭಾಘದಲ್ಲಿ ರೈತರಿಗೂ ಸಾಕಷ್ಟು ಜಾಗೃತಿ ಮೂಡಿಸಲಾಗ್ತಿದೆ. ಜಮೀನುಗಳಲ್ಲಿಯೂ ಹೊಂಡಗಳನ್ನ ನಿರ್ಮಿಸಿ ಅಂತರ್ಜಲ ವೃದ್ಧಿಗೆ ಮುಂದಾಗುತ್ತಿದ್ದಾರೆ. ತಾವೇ ತಮ್ಮ ದಾಹ ನೀಗಿಸಿಕೊಳ್ಳುವ ಮೂಲಕ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ. ಒಟ್ಟಾರೆ ಯಾವ ಸರ್ಕಾರಗಳೂ ಸಹ ಮುತುವರ್ಜಿಯಿಂದ ಮಾಡದ ಕೆಲಸವನ್ನ ಸ್ಥಳೀಯರು ಮಾಡಿದ್ದು, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಿದ್ದಾರೆ.

  • ತಂದೆ ಮೇಲಿನ ಸಿಟ್ಟಲ್ಲಿ ಕೆರೆಗೆ ಹಾರಿದ ಯುವಕ!

    ತಂದೆ ಮೇಲಿನ ಸಿಟ್ಟಲ್ಲಿ ಕೆರೆಗೆ ಹಾರಿದ ಯುವಕ!

    – ರಕ್ಷಿಸಲು ಹೋದ ಬಾವನೂ ನೀರುಪಾಲು

    ಮೈಸೂರು: ಬಾಮೈದುನನ್ನ ರಕ್ಷಿಸಲು ಹೋದ ಬಾವ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹೆಚ್.ಡಿ ಕೋಟೆ ತಾಲೂಕಿನ ಅಣ್ಣೂರು ಹೊಸಳ್ಳಿ ಕೆರೆಯಲ್ಲಿ ನಡೆದಿದೆ.

    ಪ್ರಸನ್ನ (25) ಮತ್ತು ನಿಂಗರಾಜು (35) ಮೃತ ದುರ್ದೈವಿಗಳು. ತಂದೆ ಜೊತೆ ಜಗಳ ಮಾಡಿಕೊಂಡು ಕುಪಿತನಾದ ಪ್ರಸನ್ನ ಕೆರೆಗೆ ಹಾರಿದ್ದಾನೆ. ಬಾಮೈದ ಪ್ರಸನ್ನ ಆತ್ಮಹತ್ಯೆಗೆ ಯತ್ನಸಿದಾಗ ಬಾವ ನಿಂಗರಾಜು ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ನುರಿತ ಈಜುಪಟುಗಳು ಇಬ್ಬರ ಮೃತದೇಹಗಳನ್ನು ಕೂಡ ಕೆರೆಯಿಂದ ಹೊರತೆಗೆದಿದ್ದಾರೆ. ಈ ಸಂಬಂಧ ಹೆಚ್.ಡಿ ಕೋಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ಇತಿಹಾಸ ಪ್ರಸಿದ್ಧ ಹಳೇಬೀಡಿನ ಕೆರೆ ಕೋಡಿ ಒಡೆದು ನೀರು ಹೊರಕ್ಕೆ- ರೈತರ ಆಕ್ರೋಶ

    ಇತಿಹಾಸ ಪ್ರಸಿದ್ಧ ಹಳೇಬೀಡಿನ ಕೆರೆ ಕೋಡಿ ಒಡೆದು ನೀರು ಹೊರಕ್ಕೆ- ರೈತರ ಆಕ್ರೋಶ

    – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು ಕಿಡಿ

    ಹಾಸನ: ಇತಿಹಾಸ ಪ್ರಸಿದ್ಧ ಹಳೇಬೀಡಿನ ದ್ವಾರ ಸಮುದ್ರ ಕೆರೆಕೋಡಿಯನ್ನು ಒಡೆದು ನೀರು ಖಾಲಿ ಮಾಡಲು ಮುಂದಾಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ರೈತರು, ಸಾರ್ವಜನಿಕರು ಆಕ್ರೋಶ ಹೊರಹಾಕಿ, ಪ್ರತಿಭಟನೆ ನಡೆಸಿದ್ದಾರೆ.

    ದ್ವಾರಸಮುದ್ರ ಕೆರೆಯ ಏರಿ ಕುಸಿಯುವ ಭೀತಿ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆರೆ ಕೋಡಿ ಒಡೆದು ನೀರನ್ನು ಹೊರ ಬಿಡುವ ಕೆಲಸ ಮಾಡಿದ್ದಾರೆ. ಅಧಿಕಾರಿಗಳ ನಡೆಗೆ ತೀವ್ರ ಆಕ್ರೋಶ ಹೊರಹಾಕುತ್ತಿರುವ ಸಾರ್ವಜನಿಕರು, ಹದಿಮೂರು ವರ್ಷದ ನಂತರ ದ್ವಾರಸಮುದ್ರ ಕೆರೆ ತುಂಬಿದೆ. ಕೆರೆಯ ಏರಿ ಕುಸಿಯುವ ಬಗ್ಗೆ ಕೆರೆ ಖಾಲಿ ಇದ್ದಾಗಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದೆವು. ಆದರೆ ಅಧಿಕಾರಿಗಳು ಆಗ ಕೆರೆ ಏರಿ ದುರಸ್ಥಿ ಮಾಡಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈಗ ಕೆರೆ ತುಂಬಿದ ನಂತರ ಕೆರೆ ಏರಿ ಕುಸಿಯುತ್ತೆ ಎಂದು ಕೋಡಿ ಒಡೆದು ನೀರನ್ನು ಹೊರಬಿಡುತ್ತಿದ್ದಾರೆ. ಅಧಿಕಾರಿಗಳ ಬೇಜವಬ್ದಾರಿತನದಿಂದ ಕೆರೆ ತುಂಬಿದ್ದರೂ ರೈತರು ಅದರಿಂದ ಅನುಕೂಲ ಪಡೆಯದಂತೆ ಆಗಿದೆ. ಇನ್ನಾದರೂ ಅಧಿಕಾರಿಗಳು ಕೆರೆಕೋಡಿ ಪೂರ್ತಿ ಒಡೆಯುವ ಆಲೋಚನೆ ಕೈಬಿಟ್ಟು, ಕುಸಿಯುವ ಬೀತಿಯಲ್ಲಿರುವ ಕೆರೆ ಏರಿಯನ್ನು ವೈಜ್ಞಾನಿಕ ವಿಧಾನ ಅನುಸರಿಸಿ ದುರಸ್ಥಿ ಮಾಡಬೇಕಾಗಿದೆ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.

  • ಕುರಿ ಕಾಪಾಡಲು ಹೋದ ಇಬ್ಬರೂ ನೀರು ಪಾಲು- ಕುರಿ ಮಾತ್ರ ಸುರಕ್ಷಿತ

    ಕುರಿ ಕಾಪಾಡಲು ಹೋದ ಇಬ್ಬರೂ ನೀರು ಪಾಲು- ಕುರಿ ಮಾತ್ರ ಸುರಕ್ಷಿತ

    – ಬಾವ, ಭಾಮೈದ ಇಬ್ಬರೂ ಕೆರೆಯಲ್ಲಿ ಮುಳುಗಿ ಸಾವು

    ಕೋಲಾರ: ಕುರಿ ಕಾಪಾಡಲು ಹೋಗಿ ನೀರಿನಲ್ಲಿ ಮುಳುಗಿ ಇಬ್ಬರು ಕುರಿಗಾಹಿಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕೋಲಾರದಲ್ಲಿ ನಡೆದಿದೆ.

    ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಕೀಲು ಹೋಳಲಿ ಗ್ರಾಮದ ಕೆರೆಯಲ್ಲಿ ಇಂದು ಸಂಜೆ ಈ ಘಟನೆ ನಡೆದಿದ್ದು, ಮೊದಲಿಗೆ ಕುರಿ ಮೇಯಿಸುತ್ತಿದ್ದ 46 ವರ್ಷದ ತಿಮ್ಮಪ್ಪ ತನ್ನ ಕುರಿಯನ್ನ ರಕ್ಷಣೆ ಮಾಡಲು ಕೆರೆಗೆ ಇಳಿದಿದ್ದಾನೆ. ಕುರಿ ಬಚಾವ್ ಆಗಿ ಬಂದಿದೆ. ಕುರಿಯನ್ನು ಕಾಪಾಡಲು ಹೋಗಿದ್ದ ತಿಮ್ಮಪ್ಪ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಾನೆ.

    ಈ ವಿಚಾರ ತಿಳಿದು ಸ್ಥಳಕ್ಕೆ ಧಾವಿಸುವ ತಿಮ್ಮಪ್ಪನ ಭಾಮೈದ 45 ವರ್ಷದ ಗಣೇಶ್, ಶವ ಹುಡುಕಾಟಕ್ಕೆ ಇಳಿಯುತ್ತಾನೆ. ಈತ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಾನೆ. ಇಬ್ಬರಲ್ಲಿ ಭಾಮೈದ ಗಣೇಶ್ ಶವ ಪತ್ತೆಯಾಗಿದ್ದು, ಮತ್ತೊಬ್ಬ ಬಾವ ತಿಮ್ಮಪ್ಪನ ಶವಕ್ಕಾಗಿ ಅಗ್ನಿಶಾಮಕ ದಳ, ಸ್ಥಳೀಯರು ಹಾಗೂ ಪೊಲೀಸ್ ಇಲಾಖೆಯಿಂದ ಹುಡುಕಾಟ ನಡೆಯುತ್ತಿದೆ.

    ಸ್ಥಳಕ್ಕೆ ಮುಳಬಾಗಲು ತಹಶೀಲ್ದಾರ್ ಸೋಮಶೇಖರ್, ಮುಳಬಾಗಲು ಗ್ರಾಮಾಂತರ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಶೋಧ ಕಾರ್ಯ ಮುಂದುವರೆದಿದೆ. ಘಟನೆಯಿಂದಾಗಿ ಗ್ರಾಮದ ಜನರೇ ಬೇಸರಗೊಂಡಿದ್ದಾರೆ.

  • ಬರದನಾಡು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಳೆಯೋ ಮಳೆ – ಜನರಲ್ಲಿ ಹರುಷ

    ಬರದನಾಡು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಳೆಯೋ ಮಳೆ – ಜನರಲ್ಲಿ ಹರುಷ

    ಚಿಕ್ಕಬಳ್ಳಾಪುರ: ಬರದನಾಡು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಧಾರಕಾರ ಮಳೆಯಾಗುತ್ತಿದ್ದು, ಬೆಳ್ಳಂಬೆಳಿಗ್ಗೆ ವರಣುದೇವ ಜಿಲ್ಲೆಯಲ್ಲಿ ಆರ್ಭಟಿಸುತ್ತಿದ್ದಾನೆ. ಬೆಳಿಗ್ಗೆ 5 ಗಂಟೆಯಿಂದಲೇ ವರುಣನ ಅರ್ಭಟ ಶುರುವಾಗಿದ್ದು, ಸತತ 4-5 ಗಂಟೆಗಳ ಕಾಲ ಬಿಟ್ಟು ಬಿಡದೆ ಮಳೆರಾಯ ಅಬ್ಬರಿಸಿದ್ದಾನೆ.

    ಪರಿಣಾಮ ಜಿಲ್ಲೆಯ ಬಹುತೇಕ ಹಳ್ಳ-ಕೊಳ್ಳ ಕೆರೆ ಕುಂಟೆ ಕಾಲುವೆಗಳು ಸಂಪೂರ್ಣ ಜಲಾವೃತವಾಗಿವೆ. ಚಿಕ್ಕಬಳ್ಳಾಪುರ ತಾಲೂಕಿನ ಜರಮಡಗು ಅರಣ್ಯಪ್ರದೇಶದಿಂದ ಮಾವಿನಕೆರೆಗೆ ರಭಸವಾಗಿ ನೀರು ಹರಿದುಬರುತ್ತಿದ್ದು, ಸುತ್ತ ಮುತ್ತಲ ಜನ ಸಖತ್ ಖುಷಿಪಡುತ್ತಿದ್ದಾರೆ. ಗುಡಿಬಂಡೆ ತಾಲೂಕಿನ ಹಲವೆಡೆಯೂ ಭರ್ಜರಿ ಮಳೆಯಾಗಿದ್ದು, ಕೋರೇನಹಳ್ಳಿ ಗ್ರಾಮಕ್ಕೆ ನೀರು ನುಗ್ಗಿ ಮೆಣಿಸಿನಕಾಯಿ ತೋಟ ಜಲಾವೃತವಾಗಿದೆ.

    ಚಿಂತಾಮಣಿ ತಾಲೂಕಿನಾದ್ಯಾಂತ ಭಾರೀ ಮಳೆಯಾಗಿದ್ದು, ಕೋಟಗಲ್, ಅನಕಲ್, ಕೆ.ರಾಗುಟ್ಟಹಳ್ಳಿ ಸೇರಿ ಬಾಗೇಪಲ್ಲಿ ತಾಲೂಕಿನ ಮಾಡಪ್ಪಲ್ಲಿ, ಹೊನ್ನಂಪಲ್ಲಿ ಸೇರಿದಂತೆ ಹಲವು ಕೆರೆಗಳು ಕೋಡಿ ಹರಿದಿವೆ. ಜಿಲ್ಲೆಯ ಬಹುತೇಕ ಕೆರೆಗಳಿಗೆ ಮಳೆನೀರು ಹರಿದು ಬರುತ್ತಿದ್ದು, ಜಿಲ್ಲೆಯ ಜನತೆಗೆ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಮಳೆಯಿಂದ ಜಿಲ್ಲೆಯ ರೈತರಿಗೆ ಸಂಕಷ್ಟ ಎದುರಾಗಿದ್ದರೂ ಕೆರೆಗಳು ತುಂಬುತ್ತಿರುವುದು ಅಂತರ್ಜಲ ಅಭಿವೃದ್ಧಿ ಆಗಲಿದೆ ಅಂತ ಸಂತೋಷ ತರುತ್ತದೆ.

    ಮತ್ತೊಂದಡೆ ರೈತರು ಬೆಳೆದ ಬೆಳೆಗಳು ಮಳೆಪಾಲಾಗುತ್ತಿದ್ದು, ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ಮಾರ್ಗದ ಜಾತವಾರ ಹೊಸಹಳ್ಳಿ ಬಳಿಯ ರೈಲ್ವೇ ಅಂಡರ್ ಪಾಸ್ ಜಲಾವೃತವಾಗಿ ವಾಹನಸವಾರರು ಪರದಾಡುವಂತಾಗಿದೆ.

  • ಕೋಲಾರದಲ್ಲೂ ಮಳೆಯಬ್ಬರ – ತುಂಬಿದ ಕೆರೆ ಕುಂಟೆ, ಬೆಳೆದ ರಾಗಿ ಬೆಳೆ ಮಣ್ಣು ಪಾಲು

    ಕೋಲಾರದಲ್ಲೂ ಮಳೆಯಬ್ಬರ – ತುಂಬಿದ ಕೆರೆ ಕುಂಟೆ, ಬೆಳೆದ ರಾಗಿ ಬೆಳೆ ಮಣ್ಣು ಪಾಲು

    ಕೋಲಾರ: ಉತ್ತರ ಕರ್ನಾಟಕ ಮಾತ್ರವಲ್ಲದೆ ಬಯಲು ಸೀಮೆ ಕೋಲಾರ ಜಿಲ್ಲೆಯಲ್ಲೂ ಮಳೆರಾಯನ ಆರ್ಭಟ ಜೋರಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಕೋಲಾರ, ಬಂಗಾರಪೇಟೆ ಮತ್ತು ಕೆಜಿಎಫ್ ನಗರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಮಾತ್ರವಲ್ಲದೆ ಜಿಲ್ಲೆಯ ಹಲವೆಡೆ ಮುಳಬಾಗಲು, ಶ್ರೀನಿವಾಸಪುರ ಮತ್ತು ಮಾಲೂರು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ರೈತರಲ್ಲಿ ಅತಂಕ ಮೂಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

    ಜೋರು ಮಳೆಗೆ ರಾಗಿ ಸೇರಿದಂತೆ ವಿವಿಧ ಬೆಳೆಗಳು ನೆಲ ಕಚ್ಚುತ್ತಿದ್ದು, ಬೆಳೆದ ಬೆಳೆಯೆಲ್ಲ ಮಣ್ಣು ಪಾಲಾಗುತ್ತಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಬಹುತೇಕ ಕೆರೆ ಕುಂಟೆಗಳೆಲ್ಲ ತುಂಬಿವೆ. ಕೋಲಾರ ಜಿಲ್ಲೆಯಲ್ಲಿ ಮುಂಗಾರಿನಿಂದ ವಾರ್ಷಿಕ ವಾಡಿಕೆ ಮಳೆ 643 ಮಿ.ಮೀ ಇದ್ದು, ಈ ಬಾರಿ ಹೆಚ್ಚಾಗಿ 794 ಮಿ.ಮೀ ನಷ್ಟು ಮಳೆಯಾಗಿದೆ. ಅಂದ್ರೆ ಶೇ 23ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ.

    ಅಲ್ಲದೆ ಮಳೆಯಿಂದಾಗಿ 1 ಲಕ್ಷ 2 ಸಾವಿರ ಎಕ್ರೆ ಬಿತ್ತನೆ ಕಾರ್ಯ ಟಾರ್ಗೆಟ್ ಇದ್ದು, ಈ ಬಾರಿ 92 ಸಾವಿರ ಎಕ್ರೆಯಷ್ಟು ಭಿತ್ತನೆ ಕಾರ್ಯ ನಡೆದಿದೆ. ಶೇ 90ರಷ್ಟು ವಿಸ್ತೀರ್ಣದಲ್ಲಿ ಭಿತ್ತನೆ ಕಾರ್ಯ ನಡೆದಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ದೇವಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ರಾಗಿ 68 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, ಮಳೆಗೆ ರಾಗಿ ತೆನೆ ಭಾಗುತಿದೆ. ಮಳೆ ಹೀಗೆ ಮುಂದುವರೆದಿದ್ದೆ ಆದಲ್ಲಿ ಬೆಳೆ ಹಾನಿಯಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.