Tag: Lacknow Super Gaints

  • ಸ್ಟೊಯಿನಿಸ್‌ ಶತಕ; ಚೆನ್ನೈ ವಿರುದ್ಧ ಲಕ್ನೋಗೆ 6 ವಿಕೆಟ್‌ ಜಯ

    ಸ್ಟೊಯಿನಿಸ್‌ ಶತಕ; ಚೆನ್ನೈ ವಿರುದ್ಧ ಲಕ್ನೋಗೆ 6 ವಿಕೆಟ್‌ ಜಯ

    – ಧೋನಿ ದಾಖಲೆ ಉಡೀಸ್‌ ಮಾಡಿದ ಗಾಯಕ್ವಾಡ್‌
    – IPLನಲ್ಲಿ ಶತಕ ಸಿಡಿಸಿದ ಮೊದಲ ಸಿಎಸ್‌ಕೆ ನಾಯಕ ಋತುರಾಜ್‌

    ಚೆನ್ನೈ: ಮಾರ್ಕಸ್‌ ಸ್ಟೊಯಿನಿಸ್‌ ಅಬ್ಬರದ ಶತಕದಾಟದ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ 6 ವಿಕೆಟ್‌ಗಳ ಜಯ ಸಾಧಿಸಿತು.

    ಚೆನ್ನೈನಲ್ಲಿ ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಕೆ.ಎಲ್‌.ರಾಹುಲ್‌ ಪಡೆ ಫೀಲ್ಡಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಚೆನ್ನೈ ನಾಯಕ ಋತುರಾಜ್‌ ಶತಕದಾಟ ಮತ್ತು ಶಿವಂ ದುಬೆ ಸ್ಫೋಟಕ ಶೈಲಿಯ ಅರ್ಧಶತಕ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 210 ರನ್‌ ಗಳಿಸಿತು. 211 ರನ್‌ ಗುರಿ ಬೆನ್ನತ್ತಿದ ಲಕ್ನೋ 20 ಓವರ್‌ಗೆ 3 ಬಾಲ್‌ ಬಾಕಿ ಇರುವಾಗಲೇ 4 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿ ಗೆಲುವು ಸಾಧಿಸಿತು.

    ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಆರಂಭದಲ್ಲೇ ಆಘಾತ ಎದುರಿಸಿತು. ಅಜಿಂಕ್ಯ ರಹಾನೆ ಕೇವಲ 1 ರನ್‌ ಗಳಿಸುತ್ತಿದ್ದಂತೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ಈ ವೇಳೆ ಜವಾಬ್ದಾರಿಯುತ ಆಟವಾಡಿದ ಋತುರಾಜ್‌ ಗಾಯಕ್ವಾಡ್‌ ಶತಕ ಗಳಿಸಿ ಗಮನ ಸೆಳೆದರು. ಚೆನ್ನೈ ತಂಡದ ಇತಿಹಾಸದಲ್ಲೇ ನಾಯಕ ಸಿಡಿಸಿದ ಮೊದಲ ಶತಕ ಎಂಬ ದಾಖಲೆಯನ್ನು ಗಾಯಕ್ವಾಡ್‌ ಬರೆದರು. ಗಾಯಕ್ವಾಡ್‌ ಔಟಾಗದೇ ಶತಕ ಸಿಡಿಸಿ (108 ರನ್‌, 60 ಬಾಲ್, 12‌ ಫೋರ್‌, 3 ಸಿಕ್ಸರ್‌) ಮಿಂಚಿದರು.

    ಇವರಿಗೆ ರವೀಂದ್ರ ಜಡೇಜಾ ಉತ್ತಮ ಜೊತೆಯಾಟ ನೀಡಿದರು. ಗಾಯಕ್ವಾಡ್‌ ಮತ್ತು ಜಡೇಜಾ ಜೋಡಿ 39 ಬಾಲ್‌ಗೆ 52 ರನ್‌ಗಳ ಜೊತೆಯಾಟವಾಡಿತು. ಈ ವೇಳೆ ಜಡೇಜಾ 16 ರನ್‌ ಗಳಿಸಿ ಔಟಾದರು. ರನ್‌ ಗಳಿಕೆ ವೇಗ ಕಡಿಮೆಯಿದ್ದರೂ ಇನ್ನಿಂಗ್ಸ್‌ಗೆ ಸ್ಥಿರತೆ ಒದಗಿಸುವಲ್ಲಿ ಈ ಜೊತೆಯಾಟ ನೆರವಾಯಿತು.

    ತಂಡದ ಮೊತ್ತ 200 ರ ಗಡಿ ದಾಟಲು ದುಬೆ ಕೊಡುಗೆಯೂ ಇದೆ. 244 ರ ಸ್ಟೈಕ್‌ರೇಟ್‌ನಲ್ಲಿ ಬ್ಯಾಟ್‌ ಮಾಡಿದ ದುಬೆ 22 ಎಸೆತಕ್ಕೆ 66 ರನ್‌ ಸಿಡಿಸಿ ಮಿಂಚಿದರು. ದುಬೆ ಆಟದ ರಭಸಕ್ಕೆ ಲಕ್ನೋ ಬೌಲರ್‌ಗಳು ಬಸವಳಿದರು. ನಂತರ ದುಬೆ ರನ್‌ಔಟ್‌ ಆಗಿ ಪೆವಿಲಿಯನ್‌ ಸೇರಿದರು. ನಂತರ ಕ್ರೀಸ್‌ಗೆ ಬಂದ ಮಹೇಂದ್ರ ಸಿಂಗ್‌ ಧೋನಿ ತಮಗೆ ಸಿಕ್ಕ ಏಕೈಕ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಅಭಿಮಾನಿಗಳಿಗೆ ಖುಷಿ ಕೊಟ್ಟರು.

    ಲಕ್ನೋ ಪರ ಮ್ಯಾಟ್ ಹೆನ್ರಿ, ಮೊಹ್ಸಿನ್ ಖಾನ್, ಯಶ್ ಠಾಕೂರ್ ತಲಾ 1 ವಿಕೆಟ್‌ ಕಿತ್ತರು.

    ಚೆನ್ನೈ ನೀಡಿದ 211 ರನ್‌ ಗುರಿ ಬೆನ್ನತ್ತಿದ ಲಕ್ನೋ ಕೂಡ ಆರಂಭಿಕ ಆಘಾತ ಎದುರಿಸಿತು. ಓಪನರ್‌ ಕ್ವಿಂಟನ್‌ ಡಿ ಕಾಕ್‌ 3 ಎಸೆತಗಳನ್ನು ಎದುರಿಸಲು ತಿಣುಕಾಡಿ ಕೊನೆಗೆ ಶೂನ್ಯ ವಿಕೆಟ್‌ ಒಪ್ಪಿಸಿ ಹೊರನಡೆದರು. ನಾಯಕ ಕೆ.ಎಲ್‌.ರಾಹುಲ್‌ ಕೂಡ ಕೇವಲ 16 ರನ್‌ಗಳಿಸಲಷ್ಟೇ ಶಕ್ತರಾದರು.

    ಈ ವೇಳೆ ತಂಡಕ್ಕೆ ಆಸರೆಯಾದವರು ಸ್ಟೊಯಿನಿಸ್‌. ಕೊನೆವರೆಗೂ ಹೋರಾಡಿ ಲಕ್ನೋವನ್ನು ಗೆಲುವಿನ ದಡ ಸೇರಿದರು. ಸ್ಟೊಯಿನಿಸ್‌ ಶತಕದಾಟದೊಂದಿಗೆ ಅಬ್ಬರಿಸಿದರು. 63 ಬಾಲ್‌ಗೆ 124 ರನ್‌ (13 ಫೋರ್‌, 6 ಸಿಕ್ಸರ್‌) ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

    ದೇವದತ್ ಪಡಿಕ್ಕಲ್ 13, ನಿಕೋಲಸ್ ಪೂರನ್ 34, ದೀಪಕ್ ಹೂಡಾ ಔಟಾಗದೇ 17 ರನ್‌ ಗಳಿಸಿದರು. ಚೆನ್ನೈ ಪರ ಮತೀಶ ಪತಿರಾನ 2, ದೀಪಕ್ ಚಹಾರ್ ಹಾಗೂ ಮುಸ್ತಫಿಜುರ್ ರೆಹಮಾನ್ ತಲಾ 1 ವಿಕೆಟ್‌ ಕಬಳಿಸಿದರು.

  • IPL 2023: ಬೌಲರ್‌ಗಳ ಬಿಗಿ ಹಿಡಿತದಲ್ಲಿ ಹೈದರಾಬಾದ್‌ ಒದ್ದಾಟ – ಲಕ್ನೋಗೆ 5 ವಿಕೆಟ್‌ಗಳ ಜಯ

    IPL 2023: ಬೌಲರ್‌ಗಳ ಬಿಗಿ ಹಿಡಿತದಲ್ಲಿ ಹೈದರಾಬಾದ್‌ ಒದ್ದಾಟ – ಲಕ್ನೋಗೆ 5 ವಿಕೆಟ್‌ಗಳ ಜಯ

    ಲಕ್ನೋ: ಬಿಗಿ ಹಿಡಿತದ ಬೌಲಿಂಗ್‌ ಹಾಗೂ ಕೆ.ಎಲ್‌.ರಾಹುಲ್‌ (KL Rahul), ಕೃನಾಲ್‌ ಪಾಂಡ್ಯ (Krunal Pandya) ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ್ದು, 16ನೇ ಆವೃತ್ತಿಯ ಐಪಿಎಲ್‌ನಲ್ಲಿ 2ನೇ ಗೆಲುವು ದಾಖಲಿಸಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಏಡೆನ್ ಮಾರ್ಕ್ರಮ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿತು. 122 ರನ್‌ ಗಳ ಅಲ್ಪಮೊತ್ತದ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ (Lacknow Super Gaints) ತಂಡವು 16 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 127 ರನ್‌ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ:  ರಿಕ್ವೆಸ್ಟ್‌ ಮಾಡಿ ಕೊಹ್ಲಿ ಕೈಹಿಡಿದು ಡಾನ್ಸ್‌ ಮಾಡಿಸಿದ ಬಾದ್‌ ಷಾ – ಚಾಂಪಿಯನ್ಸ್‌ ಆಗೋಣ ಎಂದ ಜೂಹಿ ಚಾವ್ಲಾ

    ಚೇಸಿಂಗ್‌ ಆರಂಭಿಸಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೂ ರನ್‌ ಕಲೆಹಾಕುತ್ತಾ ಸಾಗಿತು. ಆರಂಭಿಕರಾಗಿ ಕಣಕ್ಕಿಳಿದ ಕೇಲ್‌ ಮೇಯರ್ಸ್‌ 13 ರನ್‌ ಗಳಿಸಿ ಔಟಾಗುತ್ತಿದ್ದಂತೆ ದೀಪಕ್‌ 7 ರನ್‌ ಗಳಿಸಿ ವಿಕೆಟ್‌ ಕೈಚೆಲ್ಲಿದರು. 3ನೇ ವಿಕೆಟ್‌ಗೆ ಜೊತೆಯಾದ ಕೃನಾಲ್‌ ಪಾಂಡ್ಯ ಹಾಗೂ ಆರಂಭಿಕ ಕೆ.ಎಲ್‌. ರಾಹುಲ್‌ ಉತ್ತಮ ಜೊತೆಯಾಟವಾಡಿ ಚೇತರಿಕೆ ನೀಡಿದರು. 38 ಎಸೆತಗಳಲ್ಲಿ ಈ ಜೋಡಿ 55 ರನ್‌ ಕಲೆಹಾಕಿತು. ಈ ವೇಳೆ ಕೃನಾಲ್‌ ಪಾಂಡ್ಯ 23 ಎಸೆತಗಳಲ್ಲಿ 34 ರನ್‌ (4 ಬೌಂಡರಿ, 1 ಸಿಕ್ಸರ್)‌ ಗಳಿಸಿದರು. ಇನ್ನೂ 36 ಎಸೆತಗಳಲ್ಲಿ ಗೆಲುವಿಗೆ 8 ರನ್‌ಗಳ ಅಗತ್ಯವಿದ್ದಾಗಲೇ ರಾಹುಲ್‌ 35 ರನ್‌ (30 ಎಸೆತ, 4 ಬೌಂಡರಿ) ಗಳಿಸಿ ಹೊರನಡೆದರು. ಕೊನೆಯಲ್ಲಿ ಮಾರ್ಕಸ್‌ ಸ್ಟೋಯ್ನಿಸ್‌ 10 ರನ್‌, ನಿಕೊಲಸ್‌ ಪೂರನ್‌ ಅಜೇಯ 11 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಹೈದರಾಬಾದ್‌ ತಂಡದ ಪರ ಆದಿಲ್‌ ರಶೀದ್‌ 2 ವಿಕೆಟ್‌ ಪಡೆದರೆ, ಭುವನೇಶ್ವರ್‌ ಕುಮಾರ್‌, ಫಜಲ್ಹಕ್ ಫಾರೂಕಿ, ಹಾಗೂ ಉಮ್ರಾನ್‌ ಮಲಿಕ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸೋದೇಕೆ ಗೊತ್ತಾ – ಚಿಯರ್‌ ಗರ್ಲ್ಸ್‌ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ

    ಸನ್‌ರೈಸರ್ಸ್ ಹೈದರಾಬಾದ್ ತಂಡ ಪರ ಬ್ಯಾಟಿಂಗ್ ಆರಂಭಿಸಿದ ಮಯಾಂಕ್ ಅಗರ್ವಾಲ್ (Mayank Agarwal) ಮತ್ತು ಅನ್ಮೋಲ್‌ಪ್ರಿತ್ ಸಿಂಗ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. 2.5 ಓವರ್‌ಗಳಲ್ಲಿ ತಂಡದ ಮೊತ್ತ 21 ರನ್‌ಗಳಾಗಿದ್ದಾಗಲೇ 8 ರನ್ ಗಳಿಸಿ ಆಡುತ್ತಿದ್ದ ಮಯಾಂಕ್ ಅಗರ್ವಾಲ್ ಸುಲಭ ಕ್ಯಾಚ್‌ ನೀಡಿ ವಿಕೆಟ್ ಒಪ್ಪಿಸಿದರು. ನಂತರ ಬಂದ ರಾಹುಲ್ ತ್ರಿಪಾಠಿ (Rahul Tripathi) ನಿಧಾನಗತಿಯ ಬ್ಯಾಟಿಂಗ್‌ ನಡೆಸಿ 41 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 35 ರನ್ ಗಳಿಸಿದರು. ಈ ವೇಳೆ ಅನ್ಮೋಲ್‌ಪ್ರಿತ್ ಸಿಂಗ್ 26 ಎಸೆತಗಳಲ್ಲಿ 31 ರನ್ (3 ಬೌಂಡರಿ, 1 ಸಿಕ್ಸರ್)‌ ಗಳಿಸಿ ಔಟಾದರು.

    4ನೇ ವಿಕೆಟ್‌ಗೆ ಕ್ರೀಸ್‌ಗಿಳಿದ ನಾಯಕ ಏಡೆನ್ ಮಾರ್ಕ್ರಮ್ ಮೊದಲ ಎಸೆತದಲ್ಲೇ ಕೃನಾಲ್ ಪಾಂಡ್ಯ ಸ್ಪಿನ್‌ ದಾಳಿಗೆ ತುತ್ತಾದರು. ನಂತರ ಹ್ಯಾರಿ ಬ್ರೂಕ್ 3 ರನ್, ವಾಷಿಂಗ್ಟನ್ ಸುಂದರ್ 28 ಎಸೆತಗಳಲ್ಲಿ 16 ರನ್, ಅಬ್ದುಲ್ ಸಮದ್ 10 ಎಸೆತಗಳಲ್ಲಿ 21 ರನ್, ಆದಿಲ್ ರಶೀದ್ 4 ರನ್ ಗಳಿಸಿದರು.

    ಬೌಲಿಂಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕೃನಾಲ್ ಪಾಂಡ್ಯ 4 ಓವರ್‌ಗಳಲ್ಲಿ 18 ರನ್ ನೀಡಿ 3 ವಿಕೆಟ್ ಕಿತ್ತರೆ, ಅಮಿತ್ ಮಿಶ್ರಾ 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಯಶ್ ಠಾಕೂರ್ ಮತ್ತು ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.