Tag: labourers

  • ಕೂಲಿ ಕಾರ್ಮಿಕರಿದ್ದ ಮಿನಿ ಟ್ರಕ್‌ಗೆ ಲಾರಿ ಡಿಕ್ಕಿ – ಐವರು ಸಾವು

    ಕೂಲಿ ಕಾರ್ಮಿಕರಿದ್ದ ಮಿನಿ ಟ್ರಕ್‌ಗೆ ಲಾರಿ ಡಿಕ್ಕಿ – ಐವರು ಸಾವು

    – ಟ್ರಕ್‍ನಲ್ಲಿದ್ದ 30 ಜನರಲ್ಲಿ  6 ಜನರಿಗೆ ಗಂಭೀರ ಗಾಯ

    ರಾಯಚೂರು: ಲಾರಿ ಹಾಗೂ ಕೂಲಿ ಕಾರ್ಮಿಕರಿದ್ದ ಮಿನಿ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ ರಾಯಚೂರು ಜಿಲ್ಲೆಯ 5 ಜನ ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತೆಲಂಗಾಣದ ಶಂಶಾಬಾದ್ ಬಳಿ ಘಟನೆ ನಡೆದಿದೆ.

    ಘಟನೆಯಲ್ಲಿ ಮೂವರು ಮಹಿಳೆಯರು, ಬಾಲಕಿ, ಬಾಲಕ ಸೇರಿ ಒಟ್ಟು ಐವರು ಮೃತಪಟ್ಟಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಶಂಶಾಬಾದ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಲಾರಿ ಚಾಲಕ ನಿರ್ಲಕ್ಷದಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

    ಕೊರೊನಾ ವೈರಸ್‍ನಿಂದ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದ್ದು, ರಾಯಚೂರಿನ ರಸ್ತೆ ನಿರ್ಮಾಣ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಸೂರ್ಯಪೇಟೆಯಿಂದ 30 ಜನರು ತಮ್ಮ ಗ್ರಾಮಗಳಿಗೆ KA 36 B 8264  ನಂಬರಿನ ಮಿನಿ ಟ್ರಕ್‍ನಲ್ಲಿ ಸಾಗಿಸುತ್ತಿದ್ದರು. ಶಂಶಾಬಾದ್ ಬಳಿ ವೇಗವಾಗಿ ಬಂದ GJ 06 BT 0823 ನಂಬರಿನ ಲಾರಿ ಚಾಲಕ ನಿಯಂತ್ರಣ ತಪ್ಪಿ ಹಿಂಬದಿಯಿಂದ ಮಿನಿ ಟ್ರಕ್‍ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಐವರು ಸ್ಥಳದಲ್ಲಿ ಪ್ರಾಣಬಿಟ್ಟಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಶಂಶಾಬಾದ್ ಗ್ರಾಮೀಣ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್‍ಆರ್.ವೆಂಕಟೇಶ್ ಅವರು ಪರಿಶೀಲನೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.

  • ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿ ಕೂಲಿ ಕಾರ್ಮಿಕರು ನೀರು ಪಾಲು

    ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿ ಕೂಲಿ ಕಾರ್ಮಿಕರು ನೀರು ಪಾಲು

    ಮಡಿಕೇರಿ: ಬಟ್ಟೆ ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದ ಇಬ್ಬರ ಮೃತದೇಹಗಳನ್ನು ಸತತ ಐದು ಗಂಟೆಗಳ ಕಾರ್ಯಚರಣೆ ಮೂಲಕ ಹೊರ ತೆಗೆಯಲಾಗಿದೆ.

    ಸೋಮವಾರ ಸಂಜೆ ಕೊಡಗು ಜಿಲ್ಲೆಯ ವಿರಾಜಪೇಟೆ ತೆರಾಲು ಗ್ರಾಮದ ಕೆರೆಯಲ್ಲಿ ಈ ಘಟನೆ ನಡೆದಿದ್ದು, ಪುಟ್ಟ ಹಾಗೂ ವಿನೋದ್ ಮೃತ ಕೂಲಿ ಕಾರ್ಮಿಕರು. ಪುಟ್ಟ ಅವರು ಬಟ್ಟೆ ತೊಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ಈ ವೇಳೆ ಸ್ನೇಹಿತ ವಿನೋದ್ ಪುಟ್ಟನನ್ನು ರಕ್ಷಿಸಲು ಹೋಗಿ ಅವರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುವುದು ತಡವಾಗಿದ್ದು, ಆಗಲೇ ಕತ್ತಲಾಗಿತ್ತು. ಹೀಗಾಗಿ ಮೃತದೇಹಗಳನ್ನು ತೆಗೆಯಲು ಸಾಧ್ಯವಾಗಿರಲಿಲ್ಲ.

    ಮಂಗಳವಾರ ಬೆಳಗ್ಗೆಯಿಂದ ಶ್ರೀಮಂಗಲ ಪೊಲೀಸರು ಸ್ಥಳೀಯ ಮುಳುಗು ತಜ್ಞ ಮಾರಿಮುತ್ತು ಸಹಾಯದಿಂದ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಮೃತರು ತೆರಾಲು ಗ್ರಾಮದ ಪೊನ್ನಪ್ಪ ಅವರ ತೋಟದ ಕಾರ್ಮಿಕರಾಗಿದ್ದು, ಲೈನ್ ಮನೆಯಲ್ಲಿ ವಾಸವಿದ್ದರು. ಪುಟ್ಟ ತೆರಾಲು ಗ್ರಾಮದವರೇ ಆಗಿದ್ದು, ವಿನೋದ್ ಅಸ್ಸಾಂ ಮೂಲದವರು. ಕೆಲಸ ಹುಡುಕಿಕೊಂಡು ರಾಜ್ಯಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ.

  • ಚಾಮರಾಜನಗರದಲ್ಲಿ ಕೂಲಿ ಕಾರ್ಮಿಕರೇ ಲಾಟರಿ ದಂಧೆಕೋರರ ಟಾರ್ಗೆಟ್

    ಚಾಮರಾಜನಗರದಲ್ಲಿ ಕೂಲಿ ಕಾರ್ಮಿಕರೇ ಲಾಟರಿ ದಂಧೆಕೋರರ ಟಾರ್ಗೆಟ್

    ಚಾಮರಾಜನಗರ: ದಶಕದ ಹಿಂದೆಯೇ ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧ ಮಾಡಲಾಗಿದೆ. ಆದರೆ ರಾಜ್ಯದ ಗಡಿಯಂಚಿನಲ್ಲಿರುವ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಭಾಗದಲ್ಲಿ ಕದ್ದುಮುಚ್ಚಿ ಹೊರ ರಾಜ್ಯಗಳ ಲಾಟರಿ ದಂಧೆ ನಡೆಯುತ್ತಿದೆ. ಕೂಲಿ ಕಾರ್ಮಿಕರು, ಬಡವರೇ ದಂಧೆಕೋರರ ಟಾರ್ಗೆಟ್ ಆಗಿರುವುದು ಆಂತಕಕಾರಿ ವಿಷಯವಾಗಿದೆ.

    ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯದ ಏಕಮಾತ್ರ ಪಟ್ಟಣ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ. ಗುಂಡ್ಲುಪೇಟೆಯಿಂದ ಕೇರಳದ ಸುಲ್ತಾನ್ ಬತ್ತೇರಿ ಹಾಗೂ ತಮಿಳುನಾಡಿನ ಊಟಿಗೆ ಸಂಪರ್ಕ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಇಲ್ಲಿವೆ. ಈ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ರಾಜ್ಯದಲ್ಲಿ ಲಾಟರಿ ನಿಷೇಧವಿದ್ದರೂ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಲಾಟರಿ ಚಾಲ್ತಿಯಲ್ಲಿದೆ.

    ಕೆಲವು ದಂಧೆಕೋರರು ಕೇರಳ ಮತ್ತು ತಮಿಳುನಾಡಿನಲ್ಲಿ ಚಾಲ್ತಿಯಲ್ಲಿ ಇರುವ ಲಾಟರಿಗಳನ್ನು ಗುಂಡ್ಲುಪೇಟೆ ಭಾಗಕ್ಕೆ ತಂದು ಕದ್ದು ಮಾರಾಟ ಮಾಡುತ್ತಿದ್ದಾರೆ. ಜೇಬಿನಲ್ಲಿ ಲಾಟರಿಗಳನ್ನು ತಂದು ಮಾರಾಟ ಮಾಡಿ ಹೋಗುತ್ತಾರೆ. ಒಂದು ವೇಳೆ ಸಿಕ್ಕಿ ಹಾಕಿಕೊಂಡರೆ ತಮ್ಮ ರಾಜ್ಯದಲ್ಲಿ ಲಾಟರಿ ಖರೀದಿಸಿ ಜೇಬಿನಲ್ಲಿ ಇಟ್ಟುಕೊಂಡಿದ್ದೇವೆ. ಕೆಲಸದ ನಿಮಿತ್ತ ಇಲ್ಲಿಗೆ ಬಂದಿದ್ದೇವೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ಪ್ರತಿಕ್ರಿಯಿಸಿ, ಗುಂಡ್ಲುಪೇಟೆ ಭಾಗದಲ್ಲಿ ಸಂಜೆ ವೇಳೆ ಹೊರ ರಾಜ್ಯದ ಲಾಟರಿಗಳನ್ನು ಕದ್ದು ಮಾರಾಟ ಮಾಡುವುದು ತಿಳಿದು ಬಂದಿದೆ. ಲಾಟರಿ ಮಾರಾಟ ಮಾಡಿ ಸಿಕ್ಕಿ ಬಿದ್ದವರ ಮೇಲೆ ಈಗಾಗಲೇ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಹೊರ ರಾಜ್ಯದ ಲಾಟರಿ ಮಾರಾಟದ ಬಗ್ಗೆ ಹದ್ದಿನ ಕಣ್ಣಿಡಲಾಗುವುದು ಎಂದು ತಿಳಿಸಿದ್ದಾರೆ.

    ಖದೀಮರ ಬಗ್ಗೆ ಪೊಲೀಸರು ಎಷ್ಟೇ ಹದ್ದಿನ ಕಣ್ಣು ಇಟ್ಟಿದ್ದರೂ ಲಾಟರಿ ಮಾರಾಟ ದಂಧೆ ನಡೆಯುತ್ತಲೇ ಇದೆ. ಅಮಾಯಕ ಕೂಲಿ ಕಾರ್ಮಿಕರು, ಬಡವರು ಲಾಟರಿ ದಂಧೆಗೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ.

  • ರಾಜಕಾಲುವೆಯಲ್ಲಿ ಮಣ್ಣು ಕುಸಿದು ಇಬ್ಬರ ದುರ್ಮರಣ

    ರಾಜಕಾಲುವೆಯಲ್ಲಿ ಮಣ್ಣು ಕುಸಿದು ಇಬ್ಬರ ದುರ್ಮರಣ

    – ನಾಲ್ವರು ಕಾರ್ಮಿಕರಿಗೆ ಗಾಯ

    ಬೆಂಗಳೂರು: ರಾಜಕಾಲುವೆಯಲ್ಲಿ ಕೆಲಸ ಮಾಡುವ ವೇಳೆ ಮಣ್ಣು ಕುಸಿದು ಇಬ್ಬರ ಮೃತಪಟ್ಟ ಘಟನೆ ಬೆಂಗಳೂರಿನ ಪುಲಕೇಶಿನಗರ ಮುಖ್ಯರಸ್ತೆಯ ಬಿಜಿ ಗಾರ್ಡನ್ ಬಳಿ ನಡೆದಿದೆ.

    ಸುದರ್ಶನ್ ಹಾಗೂ ಶಫೀಕ್ ಮೃತ ದುರ್ದೈವಿಗಳು. ಸುದರ್ಶನ್ ಹಾಗೂ ಶಫೀಕ್ ಇಬ್ಬರು ಜಾರ್ಖಂಡ್ ಮೂಲದ ಕಾರ್ಮಿಕರು. ಸುದರ್ಶನ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಆಸ್ಪತ್ರೆ ಸಾಗಿಸುವಾಗ ಮಾರ್ಗ ಮಧ್ಯೆ ಶಫೀಕ್ ಮೃತಪಟ್ಟಿದ್ದಾನೆ.

    ಶನಿವಾರ ಸಂಜೆ 5:30ರ ಸುಮಾರಿಗೆ ಈ ಘಟನೆ ನಡೆದಿದೆ. ಒಟ್ಟು ಎಂಟು ಜನ ಕಾರ್ಮಿಕರು ಒಳಚರಂಡಿ ಕಾಮಗಾರಿ ಕೆಲಸ ಮಾಡುತ್ತಿದ್ದರು. ಈ ಘಟನೆಯಲ್ಲಿ ನಾಲ್ವರು ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ.

    ಸುದರ್ಶನ್ ಹಾಗೂ ಶಫೀಕ್ ಮೃತದೇಹವನ್ನು ಬೋರಿಂಗ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

  • ಕೊಪ್ಪಳ: ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ ನಟ ಯಶ್ ಸನ್ಮಾನ

    ಕೊಪ್ಪಳ: ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ ನಟ ಯಶ್ ಸನ್ಮಾನ

    ಕೊಪ್ಪಳ: ಕಳೆದ ಎರಡು ತಿಂಗಳ ಹಿಂದೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ ಹೂಳೆತ್ತಲು ಚಾಲನೆ ನೀಡಿದ್ದ ನಟ ಯಶ್, ಸೋಮವಾರ ಕೆರೆಗೆ ದಿಢೀರ್ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ನಟ ಯಶ್ ಕಾರ್ಮಿಕರಿಗೆ ಸನ್ಮಾನ ಮಾಡಿದ್ರು.

    ಸೋಮವಾರ ಸಂಜೆ ದಿಢೀರ್ ಭೇಟಿ ನೀಡಿದ ಯಶ್, ವಿಶ್ವ ಕಾರ್ಮಿಕ ದಿನದ ಅಂಗವಾಗಿ 35 ಕಾರ್ಮಿಕರಿಗೆ ಫಲಪುಷ್ಪ ನೀಡಿ ಗೌರವಿಸಿದರು. ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡೋ ವೇಳೆ ನಟ ಯಶ್ ಹೇಳಿದ ಮಾತಿನಂತೆ ಯಾರಿಗೂ ಮಾಹಿತಿ ನೀಡದಂತೆ ಕೆರೆಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ್ದಾರೆ. ಯಶೋಮಾರ್ಗ ಫೌಂಡೇಶನ್ ವತಿಯಿಂದ 4 ಕೋಟಿ ವೆಚ್ಚದಲ್ಲಿ ತಲ್ಲೂರ ಕೆರೆ ಹೂಳನ್ನು ಎತ್ತಲಾಗುತ್ತಿದೆ.

    ಈ ವೇಳೆ ಯಶ್ ಜೆಸಿಬಿಯನ್ನು ಚಲಾಯಿಸುವ ಮೂಲಕ ಕಾರ್ಮಿಕರಿಗೆ ಹುರಿದುಂಬಿಸಿದರು. ಕಾಮಗಾರಿಗೆ ಚಾಲನೆ ನೀಡುವ ವೇಳೆ ಪತ್ನಿ ರಾಧಿಕಾ ಪಂಡಿತ್ ಸಮೇತ ಆಗಮಿಸಿದ್ದ ನಟ ಯಶ್ ಈ ಬಾರಿ ಒಬ್ಬರೇ ಅಗಮಿಸಿದ್ದರು.