Tag: Labour

  • ಕೆಲಸ ಮಾಡುವಾಗ ತುಂಡಾಯ್ತು ಕಾರ್ಮಿಕನ ಬೆರಳುಗಳು- ಚಿಕಿತ್ಸೆಗೆ ಹಣ ಕೇಳಿದಕ್ಕೆ ಕೊಲೆ ಬೆದರಿಕೆ

    ಕೆಲಸ ಮಾಡುವಾಗ ತುಂಡಾಯ್ತು ಕಾರ್ಮಿಕನ ಬೆರಳುಗಳು- ಚಿಕಿತ್ಸೆಗೆ ಹಣ ಕೇಳಿದಕ್ಕೆ ಕೊಲೆ ಬೆದರಿಕೆ

    ಬೆಂಗಳೂರು: ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಬರಿಗೈನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬನ ಬೆರಳುಗಳು ಮಷಿನ್‍ಗೆ ಸಿಲುಕಿ ತುಂಡಾದ ಘಟನೆ ಕಾಮಾಕ್ಷಿಪಾಳ್ಯದಲ್ಲಿ ಇಂದು ನಡೆದಿದೆ.

    ಕಾಮಾಕ್ಷಿಪಾಳ್ಯದ ತಿಮ್ಮೇಗೌಡ ಎಂಬ ವ್ಯಕ್ತಿಗೆ ಸೇರಿದ ಪ್ಲ್ಯಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಅನಂತ್ ಬರ್ಮನ್ ಎಂಬ ಯುವಕ ನಾಲ್ಕು ಬೆರಳಗಳನ್ನು ಕಳೆದುಕೊಂಡಿದ್ದಾನೆ. ಈ ಫ್ಯಾಕ್ಟರಿಯಲ್ಲಿ ಕಾರ್ಮಿಕರಿಗೆ ತಿಮ್ಮೇಗೌಡ ಸುರಕ್ಷತಾ ವಸ್ತ್ರ ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಅನಂತ್ ಬರಿಗೈಯಲ್ಲಿ ಪ್ಲಾಸ್ಟಿಕ್ ಅನ್ನು ಮೆಷಿನ್‍ಗೆ ಹಾಕುವ ವೇಳೆ ಆತನ ಬೆರಳುಗಳು ಸಿಲುಕಿ ತುಂಡಾಗಿದೆ. ಕೂಡಲೆ ಗಾಯಗೊಂಡ ಅನಂತ್‍ನನ್ನು ಸ್ಥಳೀಯ ಆಸ್ಪತ್ರೆಗೆ ಸಹೋದರ ಹೇಮಂತ್ ದಾಖಲಿಸಿದ್ದಾನೆ.

    ಈ ಸಂದರ್ಭದಲ್ಲಿ ಸಹೋದರನ ಚಿಕಿತ್ಸಾ ವೆಚ್ಚಕ್ಕಾಗಿ ಹೇಮಂತ್ ಮಾಲೀಕನ ಬಳಿ ಹಣ ಕೇಳಲು ಹೋದಾಗ, ಮಾಲೀಕ ಆತನಿಗೆ ಬಾಯಿಗೆ ಬಂದಂತೆ ಬೈದು, ಚಿಕಿತ್ಸಾ ವೆಚ್ಚ ಭರಿಸಲು ನಿರಾಕರಿಸಿದ್ದಾನೆ. ಬಳಿಕ ಮಾಲೀಕ ಹಾಗೂ ಹೇಮಂತ್ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಚಿಕಿತ್ಸಾ ವೆಚ್ಚ ಭರಿಸದಿದ್ದರೆ ಪೊಲೀಸರಿಗೆ ದೂರು ನೀಡೋದಾಗಿ ಹೇಮಂತ್ ಹೇಳಿದ್ದಾರೆ. ಈ ವೇಳೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಮಾಲೀಕ ಬೆದರಿಕೆ ಹಾಕಿದ್ದಾನೆ ಎಂದು ಹೇಮಂತ್ ಆರೋಪಿಸಿದ್ದಾರೆ.

    ಇದ್ಯಾವುದಕ್ಕು ಹೆದರದ ಹೇಮಂತ್ ನ್ಯಾಯ ಕೊಡಿಸುವಂತೆ ಕಾಮಾಕ್ಷಿಪಾಳ್ಯದ ಪೊಲೀಸ್ ಠಾಣೆಯಲ್ಲಿ ತಿಮ್ಮೇಗೌಡ ವಿರುದ್ಧ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಕ್ಕರೆ ಕಾರ್ಖಾನೆಯಲ್ಲಿ ಹಾವು ಕಚ್ಚಿ ಕೂಲಿ ಕಾರ್ಮಿಕ ಸಾವು

    ಸಕ್ಕರೆ ಕಾರ್ಖಾನೆಯಲ್ಲಿ ಹಾವು ಕಚ್ಚಿ ಕೂಲಿ ಕಾರ್ಮಿಕ ಸಾವು

    ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ಕಬ್ಬು ಅನ್‍ಲೋಡ್ ಮಾಡುತ್ತಿದ್ದಾಗ ಹಾವು ಕಚ್ಚಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.

    ಬೊಮ್ಮಯ್ಯ (48) ಹಾವು ಕಚ್ಚಿ ಮೃತಪಟ್ಟ ವ್ಯಕ್ತಿ. ಬೊಮ್ಮಯ್ಯ ಕೂಲಿಗೆಂದು ಎತ್ತಿನ ಗಾಡಿಯಲ್ಲಿ ಬೇರೆ ರೈತರ ಕಬ್ಬನ್ನು ಮೈಷುಗರ್ ಕಾರ್ಖಾನೆಗೆ ತಂದಿದ್ದರು. ಇಂದು ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಕ್ರೇನ್ ಸಹಾಯದಿಂದ ಕಬ್ಬನ್ನು ಕಾರ್ಖಾನೆಗೆ ಅನ್‍ಲೋಡ್ ಮಾಡುತ್ತಿದ್ದ ವೇಳೆ ಮಂಡಲದ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ.

    ಒಂದು ಕಡೆ ಕಾರ್ಖಾನೆಗೆ ಕಬ್ಬು ಪೂರೈಸಿದರೂ ಸಕಾಲಕ್ಕೆ ಹಣ ಸಿಗದೇ ರೈತರು ಪರಡಾಡುತ್ತಿದ್ದಾರೆ. ಮತ್ತೊಂದು ಕಡೆ ಸಕ್ಕರೆ ಕಾರ್ಖಾನೆಯಲ್ಲಿ ರಾತ್ರಿಯೆಲ್ಲಾ ಕೆಲಸ ಮಾಡುವ ಕೂಲಿ ಕಾರ್ಮಿಕರು ಹಾವಿನಂತ ವಿಷ ಜಂತುವಿಗೆ ಬಲಿಯಾಗುತ್ತಿದ್ದಾರೆ. ಮೃತ ಕಾರ್ಮಿಕನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಸಕ್ಕರೆ ಕಾರ್ಖಾನೆಯಿಂದ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಮಂಡ್ಯ ಸೆಂಟ್ರಲ್ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೆಂಗ್ಳೂರಿನ ಜಿಟಿ ಮಾಲ್‍ನಲ್ಲಿ ಲಿಫ್ಟ್ ನಲ್ಲಿ ಸಿಲುಕಿ ಕಾರ್ಮಿಕ ದುರ್ಮರಣ

    ಬೆಂಗ್ಳೂರಿನ ಜಿಟಿ ಮಾಲ್‍ನಲ್ಲಿ ಲಿಫ್ಟ್ ನಲ್ಲಿ ಸಿಲುಕಿ ಕಾರ್ಮಿಕ ದುರ್ಮರಣ

    ಬೆಂಗಳೂರು: ಲಿಫ್ಟ್ ನಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಇಂದು ನಗರದಲ್ಲಿ ನಡೆದಿದೆ.

    ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಈ ದುರಂತ ಸಂಭವಿಸಿದ್ದು, ಮೃತ ದುರ್ದೈವಿಯನ್ನು 40 ವರ್ಷದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಇವರು ಕೆಪಿ ಅಗ್ರಹಾರದ ನಿವಾಸಿಯಾಗಿದ್ದು ಜಿಟಿ ಮಾಲ್ ನ ಬಿಗ್ ಬಜಾರ್ ನಲ್ಲಿ ಕೆಲಸ ಮಾಡುತ್ತಿದ್ದರು.

    ಶ್ರೀನಿವಾಸ್ ಇಂದು ಲಿಫ್ಟ್ ನಲ್ಲಿ ಗೂಡ್ಸ್ ಹಾಕಿಕೊಂಡು ಹೋಗುವಾಗ ಲಿಫ್ಟ್ ಆಫ್ ಆಗಿತ್ತು. ಈ ವೇಳೆ ಲಿಫ್ಟ್ ನಲ್ಲಿ ಸಿಲುಕಿದ್ದ ಶ್ರೀನಿವಾಸ್ ಬಗ್ಗಿದಾಗ ಲಿಫ್ಟ್ ತಲೆಗೆ ಬಡಿದಿದೆ. ಪರಿಣಾಮ ಶ್ರೀನಿವಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    https://www.youtube.com/watch?v=NT4mgAvc1yc

     

  • ಸಾಲ ವಾಪಸ್ ಕೊಡದ್ದಕ್ಕೆ ನಾಯಿ ಬಿಟ್ಟು ದಾಳಿ- ಕೊಡಗಿನಲ್ಲೊಬ್ಬ ಭಯಾನಕ ಮಾಲೀಕ

    ಸಾಲ ವಾಪಸ್ ಕೊಡದ್ದಕ್ಕೆ ನಾಯಿ ಬಿಟ್ಟು ದಾಳಿ- ಕೊಡಗಿನಲ್ಲೊಬ್ಬ ಭಯಾನಕ ಮಾಲೀಕ

    ಮಡಿಕೇರಿ: ಪಡೆದ ಸಾಲದ ಹಣ ಹಿಂದಿರುಗಿಸದ ತನ್ನ ಕಾರ್ಮಿಕನ ವಿರುದ್ಧ ಅಮಾನವೀಯವಾಗಿ ವರ್ತಿಸಿರೋ ಮಾಲೀಕನೋರ್ವ ಕಾರ್ಮಿಕನನ್ನು ಕಟ್ಟಿಹಾಕಿ ನಾಯಿಯಿಂದ ಕಚ್ಚಿಸಿರೋ ಪ್ರಕರಣ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳೆಲೆಯ ಹರೀಶ್ ಎಂಬವರ ಮೇಲೆ ಮಾಲೀಕ ಕಿಶನ್ ನಾಯಿ ದಾಳಿ ನಡೆಸಿದ್ದಾರೆ.

    ಏನಿದು ಘಟನೆ?: ಕಳೆದ ಒಂದೂವರೆ ವರ್ಷಗಳಿಂದ ಹರೀಶ್ ರಾಜಾಪುರ ಗ್ರಾಮದ ಕಿಶನ್ ಎಂಬವರ ಮನೆಯಲ್ಲಿ ಕೂಲಿ ಕೆಲಸಮಾಡಿಕೊಂಡಿದ್ದರು. ತನ್ನ ಮಾಲೀಕನಿಂದ 4 ಸಾವಿರ ಹಣ ಸಾಲಪಡೆದಿದ್ದ ಹರೀಶ್ ಅದನ್ನು ವಾಪಸ್ ನೀಡದೆ ಕೆಲಸಕ್ಕೂ ಹೋಗದೆ ಕದ್ದು ಮುಚ್ಚಿ ಓಡಾಡುತ್ತಿದ್ದನಂತೆ. ಹಣ ನೀಡದೆ ಕೆಲಸಕ್ಕೂ ಬಾರದೆ ಇದ್ದ ಕಾರ್ಮಿಕನ ವಿರುದ್ಧ ತೀರಾ ಸಿಟ್ಟಿಗೆದ್ದಿದ್ದ ಮಾಲೀಕ ಕಿಶನ್ ಅಗಸ್ಟ್ 29ರಂದು ಬಾಳೆಲೆಯಲ್ಲಿ ಆತನನ್ನು ಕಂಡವನೆ ನೇರವಾಗಿ ತನ್ನ ಜೀಪಲ್ಲಿ ಕೂರಿಸಿಕೊಂಡು ಹೋಗಿ ಮನೆ ಬಳಿ ಅಮಾನವೀಯತೆ ಮೆರೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

    ಕಾರ್ಮಿಕ ಹರೀಶ್ ನನ್ನು ಕಟ್ಟಿಹಾಕಿ ತನ್ನ ಶೆಡ್ ನೊಳಗೆ ಕೂಡಿ ಹಾಕಿ ನಾಯಿಗಳನ್ನ ಛೂ ಬಿಟ್ಟು ಕಚ್ಚಿಸಿದ್ದಾನೆ. ಎರಡು ಮೂರು ನಾಯಿಗಳ ದಾಳಿಯಿಂದ ತಲೆ, ದೇಹ, ಕೈಕಾಲುಗಳು ತೀವ್ರ ಗಾಯಗಳಾಗರೋ ಹರೀಶ್ ಇದೀಗ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹರೀಶ್ ಆರೋಪಿಸಿದ್ದಾರೆ. ಆದ್ರೆ ಕಿಶನ್, `ತನಗೆ ಹರೀಶ್ 20 ಸಾವಿರ ಹಣ ಕೊಡೋಕೆ ಬಾಕಿಯಿದೆ. ಇಷ್ಟಿದ್ದರೂ ಆತ ಕದ್ದು ಮುಚ್ಚಿ ಓಡಾಡುತ್ತಿದ್ದ’ ಎಂದು ಪೊಲೀಸರಲ್ಲಿ ಹೇಳಿದ್ದಾರೆ.

    ಅದೇನೇ ಇರಲಿ ಮಾಲೀಕನ ಇಂತಹ ಅಮಾನವೀಯ ವರ್ತನೆ ಬಡ ಕಾರ್ಮಿಕನನ್ನು ಕಂಗಾಲುಗೊಳಿಸಿದ್ದು, ಇಷ್ಟೆಲ್ಲಾ ಆದ್ರೂ ನೊಂದ ಕಾರ್ಮಿಕನ ನೆರವಿಗೆ ಯಾವೊಂದು ಇಲಾಖೆಯೂ ಬಂದಿಲ್ಲ, ಆತನ ನೋವು ಕೇಳಿಲ್ಲ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರಷ್ಟೆ ಎಂದು ದಲಿತ ಸಂಘರ್ಷ ಸಮಿತಿ ಪ್ರಮುಖರು ಆರೋಪಿಸುತ್ತಿದ್ದು, ನೊಂದ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ಎಂದು ಆಗ್ರಹಿಸುತ್ತಿದ್ದಾರೆ.

    ಸದ್ಯ ಮಾಲೀಕ ಕಿಶನ್ ವಿರುದ್ಧ ಅಪಹರಣ, ಹಲ್ಲೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಕಿಶನ್ ಬಂಧನಕ್ಕೆ ಬಲೆ ಬೀಸಿದ್ದಾರೆ. ವಿರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ನಾಗಪ್ಪ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

  • ವಿಡಿಯೋ: ಮಂಡ್ಯದಲ್ಲಿ ವಿದ್ಯುತ್ ಹರಿದು ಕಂಬದಲ್ಲೇ ಒದ್ದಾಡಿದ ಕಾರ್ಮಿಕನ ರಕ್ಷಣೆ

    ವಿಡಿಯೋ: ಮಂಡ್ಯದಲ್ಲಿ ವಿದ್ಯುತ್ ಹರಿದು ಕಂಬದಲ್ಲೇ ಒದ್ದಾಡಿದ ಕಾರ್ಮಿಕನ ರಕ್ಷಣೆ

    ಮಂಡ್ಯ: ವಿದ್ಯುತ್ ಕಂಬ ಸ್ಥಳಾಂತರದ ವೇಳೆ ತಂತಿಯಲ್ಲಿ ವಿದ್ಯುತ್ ಹರಿದು ಒದ್ದಾಡುತ್ತಿದ್ದ ಕಾರ್ಮಿಕನನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ನಾಗಮಂಗಲ ತಾಲೂಕು ಬೆಳ್ಳೂರಿನಲ್ಲಿ ಭಾನುವಾರ ಸಂಜೆ ಈ ಘಟನೆ ಸಂಭವಿಸಿದೆ. ನಾಗಮಂಗಲ ತಾಲೂಕಿನ ಅರಸೇಗೌಡನಕೊಪ್ಪಲು ಗ್ರಾಮದ ಕುಮಾರ್ ಅಪಾಯದಿಂದ ಪಾರಾದ ವ್ಯಕ್ತಿ.

    ಬೆಳ್ಳೂರಿನ ಸಂತೆ ಬೀದಿಯಲ್ಲಿ ವಿದ್ಯುತ್ ಕಂಬ ಸ್ಥಳಾಂತರ ಮಾಡುವ ಕೆಲಸ ನಡೆಯುತ್ತಿತ್ತು. ಹೀಗಾಗಿ ಕಾರ್ಮಿಕ ಕುಮಾರ್ ವಿದ್ಯುತ್ ಕಂಬದ ಮೇಲೇರಿ ಕೆಲಸ ಮಾಡುತ್ತಿದ್ದರು. ಈ ವೇಳೆ ಒಂದು ತಂತಿಯಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಹರಿದಿದ್ದು, ಪರಿಣಾಮ ಕಾರ್ಮಿಕ ಕುಮಾರ್ ಕಂಬದ ಮೇಲೆಯೇ ಒದ್ದಾಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ದೊಣ್ಣೆಯಿಂದ ಅವರನ್ನು ತಳ್ಳಿ ರಕ್ಷಣೆ ಮಾಡಿದ್ದಾರೆ.

    ಕೂಡಲೇ ಬೆಳ್ಳೂರು ಉಪಶಾಖೆಗೆ ಕರೆ ಮಾಡಿ ಲೈನ್ ಆಫ್ ಮಾಡಿಸಿ, ಕುಮಾರ್ ಅವರನ್ನು ಕಂಬದಿಂದ ಕೆಳಗೆ ಇಳಿಸಲಾಗಿದೆ. ತೀವ್ರ ಅಸ್ವಸ್ಥಗೊಂಡಿದ್ದ ಅವರಿಗೆ ಬಿಜಿ ನಗರದ ಎಐಎಂಎಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತ್ರ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿಗೆ ರವಾನಿಸಲಾಗಿದೆ. ಅಪಾಯದಿಂದ ಪಾರಾಗಿರುವ ಕುಮಾರ್, ಚೇತರಿಸಿಕೊಳ್ಳುತ್ತಿದ್ದಾರೆ. ಆದ್ರೆ, ಈ ಘಟನೆಗೆ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಆದ್ರಿಂದ ತಪಿತಸ್ಥರಿಗೆ ಶಿಕ್ಷೆ ಆಗಬೇಕು ಅಂತಾ ಸ್ಥಳೀಯರು ಆಗ್ರಹಿಸ್ತಿದ್ದಾರೆ.

    https://www.youtube.com/watch?v=wM5ibO098AI

  • ವೇತನ ಹೆಚ್ಚಳಕ್ಕಾಗಿ ಟೆಕ್ಸ್ಪೋಟರ್ ಕಂಪೆನಿಯ ಸಾವಿರಾರು ಮಹಿಳಾ ಕಾರ್ಮಿಕರಿಂದ ಪ್ರತಿಭಟನೆ

    ವೇತನ ಹೆಚ್ಚಳಕ್ಕಾಗಿ ಟೆಕ್ಸ್ಪೋಟರ್ ಕಂಪೆನಿಯ ಸಾವಿರಾರು ಮಹಿಳಾ ಕಾರ್ಮಿಕರಿಂದ ಪ್ರತಿಭಟನೆ

    ಬೆಂಗಳೂರು: ನಗರದ ಹೊರವಲಯ ನೆಲಮಂಗಲದ ಟೆಕ್ಸ್ಪೋಟರ್ ಇಂಡಸ್ಟ್ರೀಸ್ ಕಂಪನಿಯ ಸಾವಿರಾರು ಮಹಿಳಾ ಕಾರ್ಮಿಕರು ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಕಂಪನಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ರು.

    ಪ್ರತಿ ವರ್ಷದಂತೆ ಕಾರ್ಮಿಕರ ವೇತನ ಹೆಚ್ಚಿಸಬೇಕು. ಆಡಳಿತ ಮಂಡಳಿ ಕಾರ್ಮಿಕರಿಗೆ ನೀಡಬೇಕಿದ್ದ ಸಾರಿಗೆ ವ್ಯವಸ್ಥೆ ಇನ್ನಿತರ ಮೂಲಭೂತ ಸೌಕರ್ಯವನ್ನ ನೀಡುವಲ್ಲಿ ವಿಫಲವಾಗಿದೆ. ಕೂಡಲೇ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಎಂದು ಆಗ್ರಹಿಸಿದ್ದಾರೆ.

    ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಆಡಳಿತ ಮಂಡಳಿ ಹಾಗೂ ಕಾರ್ಮಿಕರು ಜೊತೆಯ ಸಂಧಾನ ಮಾತುಕತೆ ನಡೆಸಿದ್ದಾರೆ. ಆಡಳಿತ ಮಂಡಳಿ ಶೀಘ್ರವೇ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ ನಂತರ ಕಾರ್ಮಿಕರು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.