Tag: Labour

  • ಬೋರ್‌ವೆಲ್ ಲಾರಿ ಪಲ್ಟಿ- ಮೂವರು ದಾರುಣ ಸಾವು

    ಬೋರ್‌ವೆಲ್ ಲಾರಿ ಪಲ್ಟಿ- ಮೂವರು ದಾರುಣ ಸಾವು

    ಚಿಕ್ಕಬಳ್ಳಾಪುರ: ಬೋರ್‌ವೆಲ್ ಲಾರಿ ಪಲ್ಟಿಯಾಗಿ ಮೂವರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯ ಗ್ರಾಮದ ಬಳಿ ನಡೆದಿದೆ.

    ಮಧ್ಯಪ್ರದೇಶ ಮೂಲದ ಮೂವರು ಕಾರ್ಮಿಕರಾದ ಅನದೇಶ್(25), ಜಗದೇವ್(21) ಹಾಗೂ ರಾಜಾರಾಮ್(26) ಮೃತ ದುರ್ದೈವಿಗಳು. ಲಾರಿ ತಮಿಳುನಾಡಿಗೆ ಸೇರಿದ್ದು, ಘಟನೆಯಲ್ಲಿ ಮತ್ತಿಬ್ಬರಿಗೆ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಕಾಮಾಗಾರಿ ವೇಳೆ ಮಣ್ಣು ಕುಸಿತ – ಚರಂಡಿಯಲ್ಲಿ ಸಿಲುಕಿದ ಕಾರ್ಮಿಕ

    ಕಾಮಾಗಾರಿ ವೇಳೆ ಮಣ್ಣು ಕುಸಿತ – ಚರಂಡಿಯಲ್ಲಿ ಸಿಲುಕಿದ ಕಾರ್ಮಿಕ

    ಹುಬ್ಬಳ್ಳಿ: ಒಳಚರಂಡಿ ಕಾಮಾಗಾರಿ ಮಾಡುತ್ತಿದ್ದಾಗ ಮಣ್ಣು ಕುಸಿದ ಪರಿಣಾಮ ಮಣ್ಣಿನಡಿಯಲ್ಲಿ ಕಾರ್ಮಿಕನೋರ್ವ ಸಿಲುಕಿಕೊಂಡ ಘಟನೆ ಹುಬ್ಬಳ್ಳಿಯ ಬೈಲಪ್ಪನವರ ನಗರದ ನಡೆದಿದೆ.

    ಕಾರ್ಮಿಕ ಯಲ್ಲಪ್ಪ ಮಣ್ಣಿನಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸಿದ್ದಾರೆ. ಇಂದು ಬೆಳಗ್ಗೆ ಒಳಚರಂಡಿ ಒಳಗೆ ಇಳಿದು ಯಲ್ಲಪ್ಪ ಕೆಲಸ ಮಾಡುತ್ತಿದ್ದರು. ಈ ವೇಳೆ ಮೇಲಿಂದ ಮಣ್ಣು ಕುಸಿದು ಯಲ್ಲಪ್ಪ ಅವರ ಮೇಲೆ ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅವರ ರಕ್ಷಣೆಗೆ ಧಾವಿಸಿದರು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಕುಸಿದ ಪರಿಣಾಮ ಅವರನ್ನು ಮೇಲೆ ಎತ್ತಲು ಸ್ಥಳೀಯರಿಂದ ಸಾಧ್ಯವಾಗದಿದ್ದಾಗ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.

    ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಯಲ್ಲಪ್ಪ ಅವರನ್ನು ರಕ್ಷಿಸಿ ಕಿಮ್ಸ್ ಗೆ ದಾಖಲಿಸಿದ್ದಾರೆ. ನಾಗೇಶ್ ಹಂಚಿನಮನಿ ಎಂಬಾತ ಈ ಕಾಮಗಾರಿ ಗುತ್ತಿಗೆ ಪಡೆದಿದ್ದ ಎನ್ನಲಾಗಿದ್ದು, ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮಂಗಮ್ಮನಪಾಳ್ಯದ ಕಾರ್ಮಿಕನ ಪುತ್ರಿಗೆ ಕೊರೊನಾ ನೆಗೆಟಿವ್

    ಮಂಗಮ್ಮನಪಾಳ್ಯದ ಕಾರ್ಮಿಕನ ಪುತ್ರಿಗೆ ಕೊರೊನಾ ನೆಗೆಟಿವ್

    ಬೆಂಗಳೂರು: ಮಂಗಮ್ಮನಪಾಳ್ಯದ ಕಾರ್ಮಿಕನ ಪುತ್ರಿಯ ಕೋವಿಡ್-19 ವರದಿ ನೆಗೆಟಿವ್ ಬಂದಿದೆ.

    ಮಂಗಮ್ಮನಪಾಳ್ಯದ ಕೂಲಿ ಕಾರ್ಮಿಕನಿ(ರೋಗಿ ನಂಬರ್ 654)ಗೆ ಸೋಂಕು ತಗುಲಿರೋದು ದೃಢವಾಗ್ತಿದ್ದಂತೆ ಆತನ ಕುಟುಂಬಸ್ಥರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಕಾರ್ಮಿಕನ ಪುತ್ರ ಮತ್ತು ಪತ್ನಿಗೆ ಸೋಂಕು ತಗುಲಿದೆ. ಆದ್ರೆ ಅವರ ಜೊತೆಯಲ್ಲಿದ್ದ ಪುತ್ರಿಯ ವರದಿ ನೆಗೆಟಿವ್ ಬಂದಿದೆ.

    ಕಾರ್ಮಿಕನ ಪುತ್ರ ನಗರದಲ್ಲಿ ಡೆಲಿವರಿ ಬಾಯ್ (ರೋಗಿ ನಂಬರ್ 678) ಆಗಿ ಕೆಲಸ ಮಾಡಿಕೊಂಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಇದೀಗ ಆರೋಗ್ಯ ಇಲಾಖೆಗೆ ಡೆಲಿವರಿ ಬಾಯ್ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡೋದು ಮತ್ತು ಆತನ ಸಂಪರ್ಕದಲ್ಲಿರುವ ಜನರ ಪತ್ತೆ ಮಾಡಲಾಗುತ್ತಿದೆ. ಡೆಲಿವರಿ ಬಾಯ್ ನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿ 35 ಜನರನ್ನು ಗುರುತಿಸಿ ಎಲ್ಲರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

  • ಕೊರೊನಾ ಸೋಂಕಿನ ಭಯಕ್ಕೆ ಆತ್ಮಹತ್ಯೆಗೆ ಶರಣಾದ ಕೂಲಿ ಕಾರ್ಮಿಕ

    ಕೊರೊನಾ ಸೋಂಕಿನ ಭಯಕ್ಕೆ ಆತ್ಮಹತ್ಯೆಗೆ ಶರಣಾದ ಕೂಲಿ ಕಾರ್ಮಿಕ

    ಗದಗ: ಮಂಗಳೂರಿಗೆ ಗುಳೆಹೋಗಿದ್ದ ಗಜೇಂದ್ರಗಡ ತಾಲೂಕಿನ ಕಲ್ಲಿಗನೂರು ಗ್ರಾಮದ ಕೂಲಿ ಕಾರ್ಮಿಕನೋರ್ವ ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದನು. ಹೀಗೆ ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಕೊರೊನಾ ಸೋಂಕು ತಗುಲಿರಬಹುದು ಎಂದು ಭಯಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಕಲ್ಲಿಗನೂರು ಗ್ರಾಮದ ನಿವಾಸಿ ಗುರುಸಂಗಪ್ಪ ಜಂಗಣ್ಣವರ(40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕೂಲಿ ಕಾರ್ಮಿಕನಾಗಿದ್ದ ಗುರುಸಂಗಪ್ಪ ದುಡಿಯಲು ಮಂಗಳೂರಿಗೆ ಹೋಗಿದ್ದನು. ಮೂರು ದಿನಗಳ ಹಿಂದೆ ಕಲ್ಲಿಗನೂರು ಗ್ರಾಮಕ್ಕೆ ವಾಪಸ್ ಆಗಿದ್ದನು. ಆದ್ರೆ ಗ್ರಾಮಕ್ಕೆ ಬಂದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಶಾಂತಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದನು. ಈ ವೇಳೆ ತಪಾಸಣೆ ಮಾಡಿದ್ದ ವೈದ್ಯರು ಆತನಿಗೆ ಕೊರೊನಾ ವೈರಸ್ ಸೋಂಕು ತಗುಲಿಲ್ಲ ಎಂದು ದೃಢಪಡಿಸಿದ್ದರು.

    ಆದರೂ ಕೊರೊನಾ ವೈರಸ್‍ನ ಲಕ್ಷಣಗಳಾದ ಜ್ವರ, ನೆಗಡಿ, ಕೆಮ್ಮು ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಸೋಂಕು ತಗುಲಿರಬಹುದು ಎಂದು ಗುರುಸಂಗಪ್ಪ ಭಯಗೊಂಡಿದ್ದನು. ಇದೇ ಭಯದಲ್ಲಿ ಮಂಗಳವಾರ ಗ್ರಾಮದ ಹೊರವಲಯದ ಜಮೀನಿನಲ್ಲಿದ್ದ ಹುಣಸೆ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದುಕೊಂಡು ಗುರುಸಂಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಗಜೇಂದ್ರಗಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗುರುಸಂಗಪ್ಪ ತನಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ಭಯಗೊಂಡಿದ್ದರು, ಆ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಲೆನಾಡಿನಲ್ಲಿ ಮಂಗನ ಕಾಯಿಲೆ ಭೀತಿ – ಸೋಂಕು ತಗುಲಿ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಶಂಕೆ

    ಮಲೆನಾಡಿನಲ್ಲಿ ಮಂಗನ ಕಾಯಿಲೆ ಭೀತಿ – ಸೋಂಕು ತಗುಲಿ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಶಂಕೆ

    ಶಿವಮೊಗ್ಗ: ಮಂಗನ ಕಾಯಿಲೆ ಸೋಂಕು ತಗುಲಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

    ಮೃತಪಟ್ಟವರನ್ನು ಜಿಲ್ಲೆಯ ಸಾಗರ ತಾಲೂಕಿನ ಮಂಡವಳ್ಳಿ ಗ್ರಾಮದ ಚೌಡಪ್ಪ(33) ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳಿಂದ ಜ್ವರದಿಂದ ಚೌಡಪ್ಪ ಬಳಲುತ್ತಿದ್ದರು. ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಮಲೆನಾಡಿನ ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಎಫ್‍ಡಿ ಲಸಿಕೆ ಹಾಕಲಾಗಿತ್ತು. ಆದರೆ ಕೆಎಫ್‍ಡಿ ಲಸಿಕೆ ಹಾಕಿಸಿಕೊಳ್ಳಲು ಚೌಡಪ್ಪ ನಿರಾಕರಿಸಿದ್ದರು ಎನ್ನಲಾಗಿದೆ.

    ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ಭಾಗದಲ್ಲಿ ಕೆಎಫ್‍ಡಿ ಸಂಬಂಧ ನಿರಂತರವಾಗಿ ಲಸಿಕೆ ನೀಡಲಾಗುತ್ತಿದೆ. ಅಲ್ಲದೇ ಮಂಡವಳ್ಳಿ ಭಾಗದಲ್ಲಿ ಕಳೆದ 5 ತಿಂಗಳಿನಿಂದ ಸುಮಾರು 14 ಮಂಗಗಳು ಕೂಡ ಸಾವನಪ್ಪಿರುವ ಪ್ರಕರಣ ವರದಿಯಾಗಿದ್ದು, ಈಗಾಗಲೇ ಇಲ್ಲಿನ 6 ಜನರಿಗೆ ಮಂಗನ ಕಾಯಿಲೆ ಸೋಂಕು ತಗುಲಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಈ 6 ಜನರಿಗೂ ನಿರಂತರವಾಗಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

    ಇತ್ತ ಜಿಲ್ಲಾ ಆರೋಗ್ಯಾಧಿಕಾರಿಗಳು ಮಾತ್ರ ಚೌಡಪ್ಪ ಮಂಗನ ಕಾಯಿಲೆ ಸೋಂಕಿನಿಂದ ಮೃತಪಟ್ಟಿಲ್ಲ ಎಂದು ತಿಳಿಸಿದ್ದಾರೆ. ಆದರೂ ಕೆಎಫ್‍ಡಿ ಲಸಿಕೆ ಹಾಕಿಸಿಕೊಳ್ಳದ ಕಾರಣ ಮಂಗನ ಕಾಯಿಲೆ ಸೋಂಕು ತಗುಲಿಯೇ ಚೌಡಪ್ಪ ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

  • ಫ್ಯಾಕ್ಟರಿ ಅವಘಡದಲ್ಲಿ ಸಾವಿನ ಸಂಖ್ಯೆ 43ಕ್ಕೆ ಏರಿಕೆ- ಸಿಎಂರಿಂದ ತಲಾ 10 ಲಕ್ಷ ಪರಿಹಾರ

    ಫ್ಯಾಕ್ಟರಿ ಅವಘಡದಲ್ಲಿ ಸಾವಿನ ಸಂಖ್ಯೆ 43ಕ್ಕೆ ಏರಿಕೆ- ಸಿಎಂರಿಂದ ತಲಾ 10 ಲಕ್ಷ ಪರಿಹಾರ

    ನವದೆಹಲಿ: ನಗರದ ಕೃಷಿ ಮಾರುಕಟ್ಟೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 43ಕ್ಕೆ ಏರಿಕೆಯಾಗಿದ್ದು, ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

    ಇಂದು ಮುಂಜಾನೆ 5.22ರ ಸುಮಾರಿಗೆ ನಡೆದ ಈ ಅವಘಡ ಸಂಬಂಧ ತನಿಖೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದು, ವಾರದೊಳಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದಾರೆ.

    ದುರ್ಘಟನೆ ನಡೆದ ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಸಿಎಂ, ಮೃತಪಟ್ಟ ಪ್ರತಿಯೊಬ್ಬ ಕಾರ್ಮಿಕನ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಹಾಗೂ ಗಾಯಗೊಂಡವರ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದಾರೆ.

    ಘಟನೆ ನಡೆದ ಬಳಿಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಂತಾಪ ಸೂಚಿಸಿದ್ದಾರೆ.

    ಉತ್ತರ ದೆಹಲಿಯ ರಾಣಿ ಜಾನ್ಸಿ ರಾಣಿ ರಸ್ತೆಯಲ್ಲಿರುವ ಅನಜ್ ಮಂಡಿ ಪ್ರದೇಶದ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ಘಟನೆಯಲ್ಲಿ ಹೊಗೆಯಿಂದ ಉಸಿರುಗಟ್ಟಿ 8 ಮಂದಿ ಆಸ್ಪತ್ರೆಗೆ ದಾಖಲಾದರೆ, ಸುಮಾರು 15 ಮಂದಿ ದುರ್ಘಟನೆಯಿಂದ ಗಾಯಗೊಂಡಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಓರ್ವನ ದೇಹ ಶೇ.80ರಷ್ಟು ಸುಟ್ಟಿದ್ದು, ಹೀಗೆ ಹಲವಾರು ಮಂದಿ ಗಾಯಗೊಂಡು  ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕೃಷಿ ಮಾರುಕಟ್ಟೆ ಗೋದಾಮಿನಲ್ಲಿ ಅಗ್ನಿ ಅವಘಡ- 35 ಮಂದಿ ಸಾವು

    ಘಟನೆಯ ಬಳಿಕ ಕಟ್ಟಡದ ಮಾಲೀಕ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ಸಂಬಂಧ ಕಟ್ಟಡ ಮಾಲೀಕನ ವಿರುದ್ಧ ಐಪಿಸಿ ಸೆಕ್ಷನ್ 304(ಉದ್ದೇಶ ಪೂರ್ವಕ ಅಲ್ಲದ ಕೊಲೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಕಾಡಾನೆ ತುಳಿತಕ್ಕೆ ಕೂಲಿ ಕಾರ್ಮಿಕ ಬಲಿ!

    ಕಾಡಾನೆ ತುಳಿತಕ್ಕೆ ಕೂಲಿ ಕಾರ್ಮಿಕ ಬಲಿ!

    ಮೈಸೂರು: ಕಾಡಾನೆಯೊಂದು ಕೆಲಸದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕನನ್ನು ಕಾಲಿನಿಂದ ತುಳಿದು ಸಾಯಿಸಿದ ಘಟನೆ ಎಚ್.ಡಿ.ಕೋಟೆಯ ಹೈರಿಗೆ-ಮಾದಾಪುರ ಸಮೀಪದಲ್ಲಿ ನಡೆದಿದೆ.

    ರಾಯಚೂರಿನ ಕಕ್ಕೇರಿ ಮೂಲದ ಹನುಮಂತಪ್ಪ(50) ಮೃತ ದುರ್ದೈವಿ. ನಾಲೆ ಕೆಲಸಕ್ಕಾಗಿ ಮೈಸೂರಿಗೆ 8 ಮಂದಿ ಕೂಲಿ ಕಾರ್ಮಿಕರು ಬಂದಿದ್ದರು. ಅವರಲ್ಲಿ ಹನುಮಂತಪ್ಪ ಕೂಡ ಒಬ್ಬರು. ಬೇರೆ ಊರಿನಿಂದ ಜೀವನ ನಡೆಸಲು ಕೆಲಸಕ್ಕೆಂದು ಬಂದ ಹನುಮಂತಪ್ಪ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಇಂದು ಮುಂಜಾನೆ ಕಾರ್ಮಿಕರೆಲ್ಲ ನಾಲೆ ಕೆಲಸದಲ್ಲಿ ತೊಡಗಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿ ಕಾಲಿನಿಂದ ಕಾರ್ಮಿಕನನ್ನು ತುಳಿದಿದೆ. ಪರಿಣಾಮ ಸ್ಥಳದಲ್ಲೇ ಹನುಮಂತಪ್ಪ ಸಾವನ್ನಪ್ಪಿದ್ದಾರೆ.

    ಶುಕ್ರವಾರ ರಾತ್ರಿ ಹೈರಿಗೆ-ಮಾದಾಪುರ ಸಮೀಪದ ಜಮೀನಿಗೆ ಕಾಡಾನೆಗಳು ನುಗ್ಗಿದ್ದವು. ಈ ವೇಳೆ ರೈತರು ಆನೆಯನ್ನ ಓಡಿಸಲು ಮುಂದಾಗಿದ್ದು, ಜಮೀನಿಂದ ನಾಲೆಯತ್ತ ಬಂದ ಕಾಡಾನೆ ಕಾರ್ಮಿಕನ ಮೇಲೆ ದಾಳಿ ಮಾಡಿ ಬಲಿ ಪಡೆದಿದೆ.

    ಇದೀಗ ಮೃತ ವ್ಯಕ್ತಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವೆಲ್ಡಿಂಗ್ ಕಾರ್ಮಿಕನ ಅಚಾತುರ್ಯದಿಂದ ಧಗಧಗನೆ ಹೊತ್ತಿ ಉರಿದ ಲಾರಿ!

    ವೆಲ್ಡಿಂಗ್ ಕಾರ್ಮಿಕನ ಅಚಾತುರ್ಯದಿಂದ ಧಗಧಗನೆ ಹೊತ್ತಿ ಉರಿದ ಲಾರಿ!

    ಬೀದರ್: ವೆಲ್ಡಿಂಗ್ ಕಾರ್ಮಿಕನ ಅಚಾತುರ್ಯದಿಂದಾಗಿ ಲಾರಿಯೊಂದು ಧಗಧಗನೆ ಉರಿದ ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಹೊರವಲಯದ ಶಾಪೂರ್ ಗೇಟ್ ಬಳಿ ನಡೆದಿದೆ.

    ಲಾರಿಯಲ್ಲಿದ್ದ ಡೀಸೆಲ್ ಖಾಲಿ ಮಾಡದೇ ವೆಲ್ಡಿಂಗ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ವೆಲ್ಡಿಂಗ್ ಕಾರ್ಮಿಕನ ಅಚಾರ್ತುದಿಂದಾಗ ಬೆಂಕಿಯ ಕೆನ್ನಾಲಿಗೆ ಲಾರಿ ಸುಟ್ಟು ಕರಕಲಾಗಿದೆ. ತುಕ್ಕು ಹಿಡಿದಿದ್ದ ಲಾರಿಯ ಟ್ಯಾಂಕರ್ ಗೆ ಕಾರ್ಮಿಕ ವೆಲ್ಡಿಂಗ್ ಮಾಡುತ್ತಿದ್ದನು. ಆದರೆ ಟ್ಯಾಂಕರ್ ನಲ್ಲಿದ್ದ ಡೀಸೆಲನ್ನು ಹಾಗೆಯೇ ಬಿಟ್ಟು ವೆಲ್ಡಿಂಗ್ ಮಾಡುವಾಗ ಬೆಂಕಿ ಕಿಡಿ ಹಾರಿ ಡೀಸೆಲ್ ಟ್ಯಾಂಕರ್ ನಲ್ಲಿ ಬಿದ್ದಿದ್ದು, ಕ್ಷಣಾರ್ಧದಲ್ಲಿ ಲಾರಿ ಧಗಧಗನೆ ಹೊತ್ತಿ ಉರಿದಿದೆ. ಇದನ್ನೂ ಓದಿ:ಆಕ್ಸಿಡೆಂಟ್ ರಭಸಕ್ಕೆ ಹೊತ್ತಿ ಉರಿದ ಕಂಟೇನರ್ – ಚಾಲಕರಿಬ್ಬರ ಸಜೀವ ದಹನ

    ವಿಷಯ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕೊನೆಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕರ್ನಾಟಕ ಬಜೆಟ್ 2019: ಕಾರ್ಮಿಕರ ಕಣ್ಣೊರೆಸಿದ ಸಿಎಂ

    ಕರ್ನಾಟಕ ಬಜೆಟ್ 2019: ಕಾರ್ಮಿಕರ ಕಣ್ಣೊರೆಸಿದ ಸಿಎಂ

    -ಶ್ರಮಿಕ ಸೌರಭ ಯೋಜನೆ, ಸಾರಥಿಯ ಸೂರು

    ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್ ಮಂಡನೆಗೆ ಆಪರೇಷನ್ ಕಮಲದ ಅನಿಶ್ಚಿತತೆ ಅಡ್ಡಿಯೇನೂ ಆಗಿಲ್ಲ. ಮಧ್ಯಾಹ್ನ 12.30 ಸುಮಾರಿಗೆ ಆರಂಭವಾದ ಕಲಾಪದಲ್ಲಿ ಹಣಕಾಸು ಸಚಿವರೂ ಆಗಿರೋ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಆರಂಭಿಸಿದಾಗ ತಕ್ಷಣವೇ ಬಿಜೆಪಿ ಶಾಸಕರು ಸದನದ ಬಾವಿಗೆ ಇಳಿದರು. ಬಜೆಟ್ ಪ್ರತಿಯನ್ನು ಕೊಡ್ಲಿಲ್ಲ ಅಂತ ಸಭಾತ್ಯಾಗ ಮಾಡಿ, ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದರು. ಇತ್ತ, ಸದನದಲ್ಲಿ ತಮ್ಮ ಕಾರ್ಯ ಮುಂದುವರಿಸಿದ ಕುಮಾರಸ್ವಾಮಿ ಬರೋಬ್ಬರಿ 3 ಗಂಟೆಗಳ ಕಾಲ ಬಜೆಟ್ ಓದಿದರು.

    ಶ್ರಮಿಕ ವರ್ಗವಾಗಿರೋ ಕಾರ್ಮಿಕರಿಗೆ ಹಲವಾರು ಅನುಕೂಲಗಳು ಈ ಬಜೆಟ್‍ನಲ್ಲಿ ಇದೆ.
    * ಸಿದ್ಧ ಉಡುಪು ಕಾರ್ಖಾನೆಗಳ ಮಹಿಳಾ ಕಾರ್ಮಿಕರಿಗೆ ಶಿಶುಪಾಲನಾ ಕೇಂದ್ರ.
    * ಕೆಲಸ ಮಾಡುವಾಗ ಅಪಘಾತದಿಂದ ಮರಣ ಹೊಂದಿದರೆ 2 ಲಕ್ಷ ರೂ. ಪರಿಹಾರ.
    * ಕಟ್ಟಡ ನಿರ್ಮಾಣ ಕಾರ್ಮಿಕರು, ಅವಲಂಬಿತರಿಗಾಗಿ “ಶ್ರಮಿಕ ಸೌರಭ ಯೋಜನೆ” (ಮನೆ ನಿರ್ಮಾಣ 5 ಲಕ್ಷ ರೂ. ಗಳವರೆಗೆ ಮುಂಗಡ ಹಣ)
    * ಕಾರ್ಮಿಕ ಆರೋಗ್ಯ ಭಾಗ್ಯ ಸೌಲಭ್ಯದಡಿ 1.5 ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚ ಮರುಪಾವತಿ

    * ಮಕ್ಕಳ ಕಿಂಡರ್ ಗಾರ್ಡನ್/ ಶಾಲಾಪೂರ್ವ/ ನರ್ಸರಿ ಶಿಕ್ಷಣಕ್ಕೆ 2000 ಮತ್ತು 2500 ರೂ. ಸೌಲಭ್ಯ
    * ಕಾರ್ಮಿಕರ ಮಕ್ಕಳಲ್ಲಿ ಸ್ವಯಂ ಉದ್ಯೋಗ ಉತ್ತೇಜಿಸಲು 50,000 ರೂ. ಬಡ್ಡಿರಹಿತ ಸಹಾಯಧನ
    * ಆಟೋ, ಟ್ಯಾಕ್ಸಿ ಚಾಲಕರಿಗಾಗಿ ಗುಂಪು ವಿಮೆ ಸೌಲಭ್ಯ ( ಜೊತೆಗೆ ಪೆಟ್ರೋಲ್ ಆಟೋಗಳನ್ನು ಎಲೆಕ್ಟ್ರಿಕ್ ಆಟೋಗಳಾಗಿ ಪರಿವರ್ತಿಸಲು ಸಹಾಯಧನ)
    * ಅಪಘಾತ ರಹಿತ ಚಾಲಕರಿಗೆ 25 ಸಾವಿರ ಪುರಸ್ಕಾರ (ಪ್ರಾಮಾಣಿಕ, ಅಪಘಾತ ರಹಿತ ವಾಹನ ಚಾಲನೆ ಮಾಡಿದ ಪ್ರತಿ ಜಿಲ್ಲೆಯ ತಲಾ 10 ಚಾಲಕರಿಗೆ ತಲಾ 25 ಸಾವಿರ ರೂ. ಪುರಸ್ಕಾರ.)
    * ಬೆಂಗಳೂರಿನ ಆಟೋ, ಟ್ಯಾಕ್ಸಿ ಚಾಲಕರಿಗೆ “ಸಾರಥಿಯ ಸೂರು” ಬಾಡಿಗೆ ಆಧಾರದ ವಸತಿ ಯೋಜನೆ
    * ಸಿದ್ಧ ಉಡುಪು ಕಾರ್ಮಿಕರಿಗೆ ಬಾಡಿಗೆ ಆಧಾರದ ವಸತಿ ಯೋಜನೆಗೆ 50 ಕೋಟಿ ರೂ. ಅನುದಾನ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರ್ಮಿಕನ ಬದುಕನ್ನ ಕತ್ತಲು ಮಾಡಿದ ಅಕ್ರಮ ಕಲ್ಲು ಗಣಿಗಾರಿಕೆ

    ಕಾರ್ಮಿಕನ ಬದುಕನ್ನ ಕತ್ತಲು ಮಾಡಿದ ಅಕ್ರಮ ಕಲ್ಲು ಗಣಿಗಾರಿಕೆ

    ಗದಗ: ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ ಬ್ರೇಕ್ ಹಾಕಿ ಅಂತ ಗಣಿ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಜನರು ಮನವಿ ಮಾಡಿದ್ದಾರೆ. ಅಧಿಕಾರಿಗಳು ಮಾತ್ರ ತಮಗೆ ಏನು ಗೊತ್ತೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಈ ಅಕ್ರಮ ಕಲ್ಲು ಗಣಿಗಾರಿಕೆಯ ಸ್ಫೋಟ ಬಡ ಕಾರ್ಮಿಕನ ಬದುಕನ್ನು ಕತ್ತಲು ಮಾಡಿದೆ. ಕ್ವಾರಿಯಲ್ಲಿ ಕಲ್ಲು ಸ್ಫೋಟಗೊಂಡ ಪರಿಣಾಮ ಕಾರ್ಮಿಕನೊಬ್ಬ ತನ್ನ ಎರಡೂ ಕಣ್ಣು, ಕೈ ಕಳೆದುಕೊಂಡಿದ್ದು, ಇಡೀ ಕುಟುಂಬ ಕಣ್ಣೀರಿಡುವಂತೆ ಮಾಡಿದೆ.

    ಹನುಮಂತಪ್ಪ ಅಕ್ರಮ ಕಲ್ಲಿನ ಕ್ವಾರಿಯಲ್ಲಿ ಕಲ್ಲು ಸಿಡಿದು ಎರಡು ಕಣ್ಣು ಕಳೆದುಕೊಂಡ ಕಾರ್ಮಿಕ. ಗದಗ ತಾಲೂಕಿನ ಚಿಂಚಲಿ ಗ್ರಾಮದ ಹೊರವಲಯದ ಕ್ವಾರಿಯಲ್ಲಿ ಬೆಂಕಿ ಹಾಕಿ ಹಾಸುಗಲ್ಲು ತೆಗೆಯುವಾಗ ಸ್ಫೋಟಗೊಂಡ ಪರಿಣಾಮ ಕಾರ್ಮಿಕ ಹನುಮಂತಪ್ಪ ಜೀವನವೇ ಅಂಧಕಾರದಲ್ಲಿ ಮುಳುಗಿದೆ. ಬೃಹತ್ ಸರ್ಕಾರಿ ಗುಡ್ಡದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಗಣಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಅಕ್ರಮ ಗಣಿಗಾರಿಕೆ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದ್ರೂ ಸಹ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

    ಕಲ್ಲಿನ ಕ್ವಾರಿಯಲ್ಲಿ ಬೆಂಕಿ ಹಾಕಿ ಹಾಸುಗಲ್ಲು ತೆಗೆಯುವಾಗ ಕಲ್ಲು ಸ್ಫೋಟಗೊಂಡು ಕಾರ್ಮಿಕ ಹನುಮಂತಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಹನುಮಂತಪ್ಪ ಸ್ಥಿತಿ ಗಂಭೀರವಾಗಿದ್ದು, ಸ್ಫೋಟದ ತೀವ್ರತೆಗೆ ಎರಡೂ ಕಣ್ಣು ಹಾಗೂ ಕೈಗಳಿಗೆ ತೀವ್ರವಾದ ಗಾಯಗಳಾಗಿವೆ. ಸದ್ಯ ಅವರು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಣ್ಣಿಗೆ ಬಲವಾದ ಪೆಟ್ಟಾಗಿದ್ದು ದೃಷ್ಟಿ ಬರೋದು ಅನುಮಾನ ಎನ್ನಲಾಗುತ್ತಿದೆ.

    ಬೃಹತ್ ಸರ್ಕಾರಿ ಗುಡ್ಡ ಅಕ್ರಮ ಕಲ್ಲು ಗಣಿಗಾರಿಕೆಯಿಂದ ನಲುಗುತ್ತಿದೆ. ಹಗಲಲ್ಲೇ ನಿತ್ಯ ನಡೆಯುವ ಗಣಿಗಾರಿಕೆಯಿಂದ ಗುಡ್ಡ ಕರಗುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳಿಗೆ ಅಕ್ರಮ ಬಗ್ಗೆ ಗೊತ್ತಿದ್ರೂ ತಲೆ ಕೆಡಿಸಿಕೊಳ್ತಾಯಿಲ್ಲ. ಹೀಗಾಗಿ ಅಕ್ರಮ ಕಲ್ಲು ದಂಧೆಕೋರರಿಗೆ ಭಯ ಇಲ್ಲದಂತಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ತಾಲೂಕಾಡಳಿತದ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕಿದ್ರೆ ಈ ದುರಂತವೇ ನಡೆಯುತ್ತಿರಲಿಲ್ಲ. ಅಕ್ರಮ ಕಲ್ಲು ಗಣಿಗಾರಿಕೆ ಗೊತ್ತಿದ್ರೂ ಕ್ರಮ ಕೈಗೊಳ್ಳದ, ಗದಗ ಜಿಲ್ಲಾಡಳಿತ ಹಾಗೂ ಗಣಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದೆ ಎಂದು ಸ್ಥಳೀಯ ಮಂಜುನಾಥ್ ಮುಳಗುಂದ ಕಿಡಿಕಾರಿದ್ದಾರೆ.

    ಇಷ್ಟೊಂದು ಗಂಭೀರ ಪ್ರಕರಣ ನಡೆದರೂ ಇದುವರೆಗೂ ಜಿಲ್ಲಾಡಳಿತ ಯಾವ ಕ್ರಮ ಕೈಗೊಂಡಿಲ್ಲ. ವಿಪರ್ಯಾಸವೆಂದರೆ ಇಂಥ ದುರಂತ ನಡೆದು ಕಾರ್ಮಿಕ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ರೂ ಜಿಲ್ಲಾಧಿಕಾರಿಗಳು, ಗಣಿ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯೇ ಇಲ್ವಂತೆ. ಈ ಬಗ್ಗೆ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವ್ರನ್ನು ಕೇಳಿದ್ರೆ ನನಗೆ ಈ ವಿಷಯ ಗೊತ್ತಿಲ್ಲ. ಯಾವಾಗ ನಡೆದಿದೆ ಅನ್ನೋ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಅಂತ ಹೇಳ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv