Tag: Labour Organizations

  • ಸಕ್ಕರೆ ನಾಡಿಗೆ ತಟ್ಟದ ಬಂದ್ ಬಿಸಿ

    ಸಕ್ಕರೆ ನಾಡಿಗೆ ತಟ್ಟದ ಬಂದ್ ಬಿಸಿ

    ಮಂಡ್ಯ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಮಂಡ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಡ್ಯ ನಗರ ಹಾಗೂ ಜಿಲ್ಲೆಯಾದ್ಯಂತ ಎಂದಿನಂತೆ ವಾಹನ ಸಂಚಾರ ಹಾಗೂ ಜನ ಜೀವನ ನಡೆಯುತ್ತಿದೆ. ಈ ಮೂಲಕ ಜಿಲ್ಲೆಯಾದ್ಯಂತ ಬಂದ್‍ಗೆ ಯಾವುದೇ ರೀತಿಯ ಬೆಂಬಲ ವ್ಯಕ್ತವಾಗಿಲ್ಲ.

    ಬಂದ್ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲೂ ಸಹ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದವು. ಆದರೆ ಜಿಲ್ಲೆಯಾದ್ಯಂತ ಎಂದಿನಂತೆ ವ್ಯಾಪಾರ ವಹಿವಾಟು, ವಾಹನ ಸಂಚಾರ, ಜನ ಜೀವನ ಸುಗಮವಾಗಿ ನಡೆಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

    ಇಂದು ಬಂದ್ ಇದ್ದರೂ ಸಹ ಮಂಡ್ಯಗೆ ಬಂದ್ ಬಿಸಿ ತಟ್ಟುವುದಿಲ್ಲ ಎಂಬ ಕಾರಣಕ್ಕೆ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿರಲಿಲ್ಲ. ಹೀಗಾಗಿ ಶಾಲಾ-ಕಾಲೇಜುಗಳು ಸಹ ಎಂದಿನಂತೆ ತೆರೆದಿವೆ. ಕೆಎಸ್ಆರ್‌ಟಿಸಿ ಬಸ್‍ನ ನೌಕರರು ಸಹ ಬಂದ್‍ಗೆ ಬೆಂಬಲ ನೀಡಿದ್ದರು. ಆದರೂ ಬಂದ್‍ನಲ್ಲಿ ಭಾಗಿಯಾಗದೇ ಎಂದಿನಂತೆ ತಮ್ಮ ಕೆಲಸ ಮಾಡುತ್ತಿದ್ದಾರೆ.

    ಮಂಡ್ಯದಲ್ಲಿ ಕರ್ನಾಟಕ ಬಂದ್ ಹಾಗೂ ಕಾವೇರಿ ಹೋರಾಟದ ಸಂದರ್ಭದಲ್ಲಿ ಮಾತ್ರ ಬಂದ್‍ಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ. ಹಿಂದೆ ಭಾರತ್ ಬಂದ್ ಆದ ಸಂದರ್ಭದಲ್ಲೂ ಸಹ ಬೆಂಬಲ ವ್ಯಕ್ತವಾಗಿರಲಿಲ್ಲ. ಅದೇ ರೀತಿ ಇಂದು ನಡೆಯುತ್ತಿರುವ ಭಾರತ್ ಬಂದ್‍ಗೆ ಪ್ರತಿಕ್ರಿಯೆ ದೊರೆತಿಲ್ಲ.

  • ಭಾರತ್ ಬಂದ್‍ಗೆ ರಾಯಚೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ

    ಭಾರತ್ ಬಂದ್‍ಗೆ ರಾಯಚೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ

    ರಾಯಚೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧ ನೀತಿಗಳು, ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆಯಿಂದ ಸಾರಿಗೆ ನಿಯಮಗಳನ್ನು ಖಾಸಗಿಯವರಿಗೆ ವಹಿಸಿರುವ ನೀತಿಗಳ ವಿರುದ್ಧ ಹಾಗೂ ಕಾರ್ಮಿಕರ ಇನ್ನಿತರೆ ಬೇಡಿಕೆಗಳನ್ನು ಒತ್ತಾಯಿಸಿ ನಾಳೆ ನಡೆಯಲಿರುವ ಭಾರತ ಬಂದ್ ಹಿನ್ನೆಲೆ ರಾಯಚೂರಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯಾದ್ಯಂತ 3 ಕೆಎಸ್‌ಆರ್‌ಪಿ, 10 ಡಿಎಆರ್, 500 ಪೊಲೀಸ್ ಕಾನ್‍ಸ್ಟೇಬಲ್‍ಗಳು, ಅತಿ ಸೂಕ್ಷ್ಮ ಸ್ಥಳಗಳಲ್ಲಿ ಕ್ಯಾಮೆರಾ ಮ್ಯಾನ್‍ಗಳನ್ನು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 40 ಪಿಎಸ್‍ಐಗಳು, 20 ಸಿಪಿಐಗಳು, 04 ಡಿವೈಎಪಿಗಳು, ಹಾಗೂ ಇಬ್ಬರು ಎಸ್‍ಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ನಡೆಯಲಿದೆ.

    ಬಂದ್ ಸಮಯದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವ ಪ್ರಕರಣ ನಡೆದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಸ್ತೆ ಮೇಲೆ ಟೈಯರ್‍ಗಳನ್ನು ಸುಟ್ಟು ಸಂಚಾರಕ್ಕೆ ಅಡ್ಡಿ ಪಡಿಸುವವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾದ್ಯಾಂತ ಚೆಕ್ ಪೋಸ್ಟ್‍ಗಳನ್ನು ನಿರ್ಮಿಸಿ ಅನುಮಾನಾಸ್ಪದ ವಾಹನಗಳನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇಧಮೂರ್ತಿ ಹೇಳಿದರು.

    ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಲ್ಲಿನ ಸಿಐಟಿಯು, ಎಐಟಿಯುಸಿ, ಬಿಎಸ್‍ಎನ್‍ಎಲ್‍ಇಯು, ಎಐಯುಟಿಯುಸಿ ಸೇರಿ 10ಕ್ಕೂ ಹೆಚ್ಚು ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿದ್ದು, ಬೆಳಗ್ಗೆ 10 ಗಂಟೆಯಿಂದ 12ರವರೆಗೆ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶ ನಡೆಸಲಿವೆ. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿವೆ.

    ಬುಧವಾರ ಎಂದಿನಂತೆ ಬಸ್ ಸಂಚಾರ, ಶಾಲಾ ಕಾಲೇಜುಗಳು ನಡೆಯಲಿದ್ದು, ಸ್ವಯಂ ಪ್ರೇರಿತರಾಗಿ ವ್ಯಾಪಾರಿಗಳು ಅಂಗಡಿ ಮುಗ್ಗಟ್ಟು ಬಂದ್ ಮಾಡುವ ಸಾಧ್ಯತಯಿದೆ. ವಿದ್ಯಾರ್ಥಿ ಸಂಘಟನೆಗಳು ಹೋರಾಟಕ್ಕೆ ಬೆಂಬಲಿಸಿರುವುದರಿಂದ ಖಾಸಗಿ ಶಾಲಾ ಕಾಲೇಜುಗಳು ರಜೆ ಘೋಷಿಸುವ ಸಾಧ್ಯತೆಯಿದೆ. ಬ್ಯಾಂಕ್ ನೌಕರರು ಮುಷ್ಕರದಲ್ಲಿ ಭಾಗವಹಿಸುತ್ತಿರುವುದರಿಂದ ಬ್ಯಾಂಕ್ ವಹಿವಾಟು ಸ್ಥಗಿತಗೊಳ್ಳಲಿದೆ.