Tag: Laboratory

  • ಪಾಕಿಸ್ತಾನ, ಚೀನಾದಿಂದ ಡೆಡ್ಲಿ ವೈರಸ್ ಸೃಷ್ಟಿಸಲು ತಯಾರಿ – ಭಾರತಕ್ಕಿದೆಯಾ ಆಪತ್ತು?

    ಪಾಕಿಸ್ತಾನ, ಚೀನಾದಿಂದ ಡೆಡ್ಲಿ ವೈರಸ್ ಸೃಷ್ಟಿಸಲು ತಯಾರಿ – ಭಾರತಕ್ಕಿದೆಯಾ ಆಪತ್ತು?

    ಇಸ್ಲಾಮಾಬಾದ್: ಕೊರೊನಾ ವೈರಸ್‌ನಿಂದ (Corona Virus) ಈಗಷ್ಟೇ ಜಗತ್ತು ಚೇತರಿಸಿಕೊಳ್ಳುತ್ತಿದೆ. ಹೀಗಿರುವಾಗಲೇ ಚೀನಾ (China) ಹಾಗೂ ಪಾಕಿಸ್ತಾನ (Pakistan) ಜೈವಿಕ ಅಸ್ತ್ರ ಅಭಿವೃದ್ಧಿಪಡಿಸುವ ರಹಸ್ಯ ಸಂಶೋಧನೆ (Research) ನಡೆಸುತ್ತಿವೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

    ಪಾಕಿಸ್ತಾನದ ರಾವಲ್ಪಿಂಡಿಯ ಪ್ರಯೋಗಾಲಯ (Laboratory) ಬಳಸಿಕೊಂಡು ಕೋವಿಡ್‌ಗಿಂತಲೂ ಭೀಕರವಾದ ಹಾಗೂ ಅದಕ್ಕಿಂತ ಹೆಚ್ಚು ಹಾನಿ ಉಂಟುಮಾಡಬಹುದಾದ ವೈರಸ್ (Virus) ಅನ್ನು ಚೀನಾ ಸೃಷ್ಟಿಸಲು ಹೊರಟಿದೆ ಎಂದು ಹಲವು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಮೊದಲ ಬಲಿ – ಸ್ಥಳದಲ್ಲಿಯೇ ಮಹಿಳೆ ಸಾವು

    ಜೈವಿಕ ಅಸ್ತ್ರ ಕುರಿತು ಸಂಶೋಧನೆ ನಡೆಸುವ ಸಲುವಾಗಿ ವಿಶ್ವಕ್ಕೆ ಕೋವಿಡ್ ಹಬ್ಬಿಸಿದ ಕುಖ್ಯಾತಿ ಹೊಂದಿರುವ ಚೀನಾದ ವುಹಾನ್ ವೈರಾಲಜಿ ಸಂಸ್ಥೆ ಹಾಗೂ ಪಾಕಿಸ್ತಾನದ ರಕ್ಷಣಾ ವಿಜ್ಞಾನ-ತಂತ್ರಜ್ಞಾನ ಸಂಸ್ಥೆಗಳು ಅತ್ಯಾಧುನಿಕ ವೈಜ್ಞಾನಿಕ ಮೂಲಸೌಕರ್ಯ ಸೃಷ್ಟಿಸಿವೆ. ಅತ್ಯಂತ ಅಪಾಯಕಾರಿ ರೋಗಕಾರಕ ವೈರಸ್‌ಗಳ (Virus) ಕುರಿತು ಸಂಶೋಧನೆ ನಡೆಸುವ ಕೇಂದ್ರ ಇದಾಗಿದ್ದು, ಈ ಪ್ರಯೋಗಾಲಯ ರಾವಲ್ಪಿಂಡಿಯ ಚಾಲಾ ಕಂಟೋನ್ಮೆಂಟ್ ಪ್ರದೇಶದಲ್ಲಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: 10 ಬಾರಿ ಶಾಸಕರಾಗಿದ್ದ ಪ್ರಭಾವಿ ನಾಯಕ ಕಾಂಗ್ರೆಸ್‌ಗೆ ಗುಡ್‌ಬೈ – BJP ಸೇರ್ಪಡೆ

    2 ಸ್ಟಾರ್ ಹೊಂದಿರುವ ಜನರಲ್‌ವೊಬ್ಬರು ಇದರ ನೇತೃತ್ವ ವಹಿಸಿದ್ದಾರೆ. `ಬಯೋಸೇಫ್ಟಿ ಲೆವೆಲ್ 4′ (BSL-4) ಘಟಕ ಇದಾಗಿದ್ದು, ಇಲ್ಲಿ ಅತಿ ಅಪಾಯಕಾರಿ ಹಾಗೂ ಹೆಚ್ಚು ಸೋಂಕು ಹರಡುವ ವೈರಸ್‌ಗಳನ್ನು ಪರೀಕ್ಷಿಸಿ, ಅಭಿವೃದ್ಧಿಪಡಿಸಲಾಗುತ್ತದೆ. ಸಾಮಾನ್ಯವಾಗಿ BSL-4 ಲ್ಯಾಬ್‌ಗಳನ್ನು ಮಾರಣಾಂತಿಕ ಸೋಂಕುಗಳಿಗೆ ಕಾರಣವಾಗುವ ಸೋಂಕು ಕಾರಕಗಳ ಕುರಿತ ಅಧ್ಯಯನಕ್ಕೆ ಬಳಸಲಾಗುತ್ತದೆ. ಇಂತಹ ರೋಗಗಳಿಗೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿರುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

    ಸದ್ಯ ಇದು ವೈಜ್ಞಾನಿಕ ಪ್ರಯೋಗವಲ್ಲ, ವೈರಸ್‌ಗಳನ್ನು ಅಸ್ತ್ರ ಮಾಡಿಕೊಳ್ಳುವ ಕೆಲಸ ಎಂದು ಜೈವಿಕ ಅಸ್ತçಗಳ ಪರಿಣತರು ಎಚ್ಚರಿಸಿರುವುದಾಗಿ ವರದಿ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಸೂಕ್ಷ್ಮಾಣು ಜೀವಿಯಿಂದ ಸಮುದ್ರದಲ್ಲಿ ನೀಲಿ ಬೆಳಕಿನ ವಿಸ್ಮಯ

    ಸೂಕ್ಷ್ಮಾಣು ಜೀವಿಯಿಂದ ಸಮುದ್ರದಲ್ಲಿ ನೀಲಿ ಬೆಳಕಿನ ವಿಸ್ಮಯ

    ಕಾರವಾರದಿಂದ ಉಳ್ಳಾಲದ ಸೋಮೇಶ್ವರದವರೆಗೆ, ಅರಬ್ಬೀ ಸಮುದ್ರದ ಪ್ರಕಾಶಮಾನವಾದ ನೀಲ ತೆರೆಗಳ ಸುದ್ದಿ ಜನರ ಕುತೂಹಲ ಕೆರಳಿಸಿದ್ದು, ಜನರು ನಿದ್ದೆಗೆಟ್ಟು ರಾತ್ರಿಯೆಲ್ಲಾ ಸಮುದ್ರ ತೀರದಲ್ಲಿ ಗುಂಪಾಗಿ ಸೇರಿ ಈ ಪ್ರಕೃತಿಯ ರಮಣೀಯ ವಿಸ್ಮಯವನ್ನುಕಣ್ತುಂಬಿ, ನೀಲ ತೆರೆಗಳಲ್ಲಿ ಮಿಂದೆದ್ದು ಸಂಭ್ರಮಿಸುತ್ತಿದ್ದಾರೆ. ಬಿಸಿಲ ಝಳದ ಹಗಲಿಗೆ ಅರ್ಥಪೂರ್ಣ ವಿರಾಮವನ್ನು ನೀಡುವ ಈ ನೀಲ ಹಿಮದಂತಹ ತೆರೆಗಳ ವಿರಳ ವಿದ್ಯಮಾನಕ್ಕೆ ಕಾರಣವಾದರೂ ಏನು ಎಂದು ಎಲ್ಲರಲ್ಲಿ ಸದ್ಯಕ್ಕಿರುವ ಪ್ರಶ್ನೆ.

    ಮಿಂಚುಹುಳ ಹೇಗೆ ಹಸಿರು ಬಣ್ಣ ಸೂಸುತ್ತದೋ ಅದೇ ರೀತಿ ಸ್ವ ಪ್ರಕಾಶವನ್ನುಹೊರಸೂಸುವ ಸೂಕ್ಷ್ಮಜೀವಿಗಳು ಇದಕ್ಕೆ ಕಾರಣ. ಇಂತಹ ವಿದ್ಯಮಾನಕ್ಕೆ ವಿಜ್ಞಾನದಲ್ಲಿ ಬಯೋ ಲುಮಿನೆಸ್ಸ್ನನ್ಸ್ (Bioluminescence) ಎಂದು ಕರೆಯುತ್ತಾರೆ . ಅಂದರೆ ಸ್ವ ಪ್ರಕಾಶವನ್ನು ಉತ್ಸರ್ಜಿಸುವ ಜೀವಿಗಳುಎಂದರ್ಥ. ಪಾಚಿಯಂತೆ ಕಾಣುವ ಈ ಏಕಕೋಶ ಜೀವಿಗಳು ಅದೇಕೋ ಈ ವರ್ಷ ಅತ್ಯಧಿಕ ಸಂತಾನಾಭಿವೃದ್ಧಿ ಹೊಂದಿ ಕರಾವಳಿಯಾದ್ಯಂತ ತುಂಬಿಹೋಗಿವೆ.

    ಸಾಮಾನ್ಯವಾಗಿ ಮಳೆಗಾಲದ ನಂತರ ಕಲುಷಿತ ಕೆರೆ, ನದಿಗಳು ಹೇಗೆ ಪಾಚಿಕಟ್ಟಿ ನೀರೆಲ್ಲಾ ಪಚ್ಚೆಯಾಗುತ್ತದೋ ಅದೇರೀತಿ ಈ ವರ್ಷ ನದಿಗಳಿಂದ ಕೊಚ್ಚಿ ಬಂದ ಕಶ್ಮಲಗಳು ಈ ಜೀವಿಗಳ ಸಂತಾನಾಭಿವೃಧಿಗೆ ಕಾರಣವಾಗಿರಬೇಕು. ಅದಲ್ಲದೆ ಸಾಗರದ ತಾಪಮಾನವು ವಾತಾವರಣದ ತಾಪಮಾನಕ್ಕಿಂತ ಒಂದೆರಡು ಡಿಗ್ರಿ ಹೆಚ್ಚಾಗಿರುವ ಕಾರಣ ಈ ಜೀವಿಗಳ ಬೆಳವಣಿಗೆಗೆ ಪ್ರೋತ್ಸಾಹ ಸಿಕ್ಕಿರಬಹುದುಎಂದು ಅಂದಾಜಿಸಲಾಗಿದೆ.

    ಮೇಲ್ನೋಟಕ್ಕೆ ಸಣ್ಣಜೀವಿಯಾದರೂ ಅದ್ಭುತ ವಿಸ್ಮಯಗಳನ್ನುಒಡಲಲ್ಲಿ ಹೊತ್ತಿರುವ ಈ ಜೀವಿಯನ್ನು ಸೆರೆಹಿಡಿದು ಸಂತ ಅಲೋಶಿಯಸ್ ಕಾಲೇಜಿನ ಅನ್ವಯಿಕ ಜೀವಶಸ್ತ್ರ ಪ್ರಯೋಗಾಲಯದಲ್ಲಿ ವಿಶ್ಲೇಷಿಸಿ, ಗುರುತಿಸಿದಾಗ ಇದೊಂದು ಸ್ವತಃ ಹರಿತ್ತು ರಹಿತ ಪರಾವಲಂಬಿ ಜೀವಿಯಾದ ನೊಕ್ಟಿಲುಕಾ ಸಿಂಟಿಲಾನ್ಸ್ (Noctiluca Scintillans) ಎಂದು ತಿಳಿದುಬಂದಿದೆ. ಈ ಜೀವಿಯು ಇತರ ಸಣ್ಣಪುಟ್ಟ ಸಾಗರದ ಪಾಚಿಗಳನ್ನುತಿಂದು ಬದುಕುತ್ತದೆ. ಮಾತ್ರವಲ್ಲದೆ, ಕೆಲವು ಸಣ್ಣ ಪಾಚಿ ಜಾತಿಗೆ ಸೇರಿದ ಜೀವಿಗಳು ಈ ಜೀವಿಯ ಒಡಲಿನೊಳಗೆ ಸಹಬಾಳ್ವೆಯ ಜೀವನ ನಡೆಸುತ್ತವೆ. ಹೀಗಾಗಿ ಹಗಲಿನ ಹೊತ್ತಿನಲ್ಲಿ ಪಾಚಿಯ ಇರುವಿಕೆಯಿಂದಾಗಿ ಸಾಗರವೆಲ್ಲಾ ಹಸುರಾಗಿ ಕಾಣುತ್ತದೆ.

    ನೊಕ್ಟಿಲುಕಾ ಸಿಂಟಿಲಾನ್ಸ್, ಡೈನೋಫ್ಲಾಜೆಲೇಟ್ (Dinoflagellate) ಎಂಬ ಪಾಚಿಯ ಜಾತಿಗೆ ಸೇರಿದ ಏಕಕೋಶ ಜೀವಿಯಾಗಿದ್ದು ಸೂಕ್ಷ್ಮ ದರ್ಶಕದಲ್ಲಿ ಅನ್ವೇಷಿಸಿದಾಗ ಬಲೂನ್ ಆಕೃತಿಯನ್ನು ಹೋಲುತ್ತದೆ. ಇದಕ್ಕೊಂದು ಈಜಾಡಲು ನೆರವಾಗುವ  ಬಾಲತಂತಹ ಅಂಗವಿದ್ದು, ಇದನ್ನು ಪ್ಲಾಜೆಲ್ಲಮ್ (Flagellum) ಎಂದು ಕರೆಯುತ್ತಾರೆ. ಈ ಬಾಲದ ತುದಿಯು ಚಮಚೆಯ ಆಕೃತಿಯಂತಿದ್ದು, ಇತರ ಸಣ್ಣ ಪಾಚಿಯನ್ನು ಹಿಡಿದು ತಿನ್ನಲು ಸಹಕಾರಿಯಾಗಿದೆ. ಈ ಜೀವಿಯ ದೇಹದಲ್ಲಿ ಲೂಸಿಫೆರಿನ್ ಎಂಬ ರಾಸಾಯನಿಕವು ಲೂಸಿಫೆರೇಸ್ ಎಂಬ ಕಿಣ್ವದ ಸಹಾಯದಿಂದ ಆಮ್ಲಜನಕದೊಂದಿಕೆ ವರ್ತಿಸಿದಾಗ ನೀಲಿ ಬೆಳಕು ಪ್ರಜ್ವಲಿಸುತ್ತದೆ. ಮುಟ್ಟಿದರೆ ಮುನಿ ಸಸ್ಯವು ಹೇಗೆ ಸ್ಪರ್ಶವನ್ನು ಗ್ರಹಿಸಿ ಎಲೆ ಮುದುಡಿಸುತ್ತದೋ, ಅದೇ ರೀತಿ ಈ ಜೀವಿ ಅಲೆಗಳ ಹೊಡೆತ, ಕದಡು ವಿಕೆಯನ್ನು ಗ್ರಹಿಸಿ ನೀಲಿ ಬಣ್ಣವನ್ನು ಹೊರಸೂಸುತ್ತದೆ.

    ಜೀವಜಗತ್ತಿನಲ್ಲಿ ಇಂತಹ ಹಲವಾರು ಸ್ವಪ್ರಜ್ವಲಿಸುವ ಜೀವಿಗಳಿದ್ದು, ಮಿಂಚುಹುಳ, ಮಿನುಗುವ ಅಣಬೆಗಳು, ಮೀನುಗಳು, ಕೆಲ ಜಾತಿಯ ಆಳಸಾಗಲಾರದ ಜೀವಿಗಳು ಇದಕ್ಕೆ ಉದಾಹರಣೆ. ಒಟ್ಟಿನಲ್ಲಿ ಈ ಎಲ್ಲ ವಿದ್ಯಮಾನವು ಮಾನವನ ಚಟುವಟಿಕೆಗಳಿಂದ ಕಲುಷಿತಗೊಂಡ ಸಮುದ್ರವು ನೀಡುವ ಎಚ್ಚರಿಕೆಯ ಸಂದೇಶ ಎಂದು ಅರ್ಥೈಸಿದರೆ ತಪ್ಪಾಗಲಾರದು. ಈ ಜೀವಿಗಳ ವಿಪರೀತ ಬೆಳವಣಿಗೆಯಿಂದಾಗಿ ಸಮುದ್ರದ ಅಮೋನಿಯಾ ಮಟ್ಟ ಹೆಚ್ಚಿ ಜೀವ ಸಂತುಲತೆ ತಪ್ಪಿ ಇತರೆ ಜೀವಿಗಳಿಗೆ ಕಂಟಕಪ್ರಾಯವಾಗುವುದರೊಂದಿಗೆ ಮೀನುಗಾರಿಕೆಗೆ ಹೊಡೆತ ಬೀಳುವ ಸಾಧ್ಯಾಸಾಧ್ಯತೆಗಳು ಇದ್ದು, ಈ ವಿದ್ಯಮಾನಗಳ ಕೂಲಂಕಷ ಸಂಶೋಧನೆಯ ಅಗತ್ಯವಿದೆ.

    – ಸಚಿನ್‌ ಪಟವರ್ಧನ್‌

    (ಲೇಖಕರು ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಅನ್ವಯಿಕ ಜೀವಶಾಸ್ತ್ರಸಂಶೋಧಕರಾಗಿದ್ದಾರೆ)

  • ದಿನಕ್ಕೆ 1 ಸಾವಿರ ಕೋವಿಡ್-19 ಟೆಸ್ಟ್ ಗುರಿ- ಸಚಿವ ಸುಧಾಕರ್

    ದಿನಕ್ಕೆ 1 ಸಾವಿರ ಕೋವಿಡ್-19 ಟೆಸ್ಟ್ ಗುರಿ- ಸಚಿವ ಸುಧಾಕರ್

    – ಟೆಸ್ಟ್ ಹೆಚ್ಚಿಸುವಂತೆ ಮೆಡಿಕಲ್ ಕಾಲೇಜು, ಖಾಸಗಿ ಸಂಸ್ಥೆಗಳಿಗೆ ಸೂಚನೆ
    – 10- 15 ದಿನಗಳಲ್ಲಿ ಟೆಸ್ಟ್ ಹೆಚ್ಚಿಸಲು ಗಡುವು

    ಬೆಂಗಳೂರು: ಕೋವಿಡ್-19 ಪರೀಕ್ಷೆ ವಿಷಯದಲ್ಲಿ ನಿರ್ಲಕ್ಷ್ಯ ತೋರಿಸುವ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಮುಂದಿನ 10-15 ದಿನಗಳಲ್ಲಿ ಪ್ರತಿ ದಿನ 500ರಿಂದ 1 ಸಾವಿರ ಟೆಸ್ಟ್ ಗಳವರೆಗೆ ಗುರಿ ತಲುಪಬೇಕು. ಈ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಸರ್ಕಾರ ಕಳೆದ ನಾಲ್ಕು ತಿಂಗಳಿಂದ ಅನೇಕ ಸೂಚನೆಗಳನ್ನು ನೀಡಿದೆ. ಲ್ಯಾಬ್ ಸ್ಥಾಪನೆಗೆ ಅಗತ್ಯವಿರುವ ನೆರವು ನೀಡಲಾಗಿದೆ. ಸಿಬ್ಬಂದಿಗೆ ನಿಮ್ಹಾನ್ಸ್ ಮೂಲಕ ತರಬೇತಿ ನೀಡಲಾಗಿದೆ. ಆದರೂ ಸರ್ಕಾರದ ಜೊತೆ ಕೈಜೋಡಿಸುತ್ತಿಲ್ಲ. ಇಂತಹ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮೆಡಿಕಲ್ ಕಾಲೇಜುಗಳಲ್ಲಿ ಪ್ರಯೋಗಾಲಯ ಸ್ಥಾಪನೆ ಮಾಡುವುದು ಕಡ್ಡಾಯ. ಎಂಸಿಐನಿಂದ ಸ್ಪಷ್ಟ ನಿದರ್ಶನಗಳಿವೆ. ಆದರೂ ಕೆಲವರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇನ್ನು ಇಂತಹ ಮೀನಮೇಷ ವರ್ತನೆಯನ್ನು ಸಹಿಸುವುದಿಲ್ಲ ಎಂದರು.

    ರಾಜ್ಯದಲ್ಲಿ ಸೋಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಟೆಸ್ಟ್ ಫಲಿತಾಂಶ ವಾರಗಳವರೆಗೆ ಬರುತ್ತಿಲ್ಲ ಎಂಬ ದೂರುಗಳಿವೆ. ಇನ್ನು ಮುಂದೆ 24 ರಿಂದ 30 ಗಂಟೆಗಳಲ್ಲಿ ವರದಿ ಕೈಸೇರಬೇಕು. ಈ ಉದ್ದೇಶದಿಂದ ಹಿರಿಯ ಅಧಿಕಾರಿ ಶಾಲಿನಿ ರಜನೀಶ್ ಅವರಿಗೆ ಇದರ ಉಸ್ತುವಾರಿಗೆ ನಿಯೋಜಿಸಲಾಗಿದೆ ಎಂದರು.

    ಕೊಪ್ಪಳ ಆಸ್ಪತ್ರೆಯಲ್ಲಿ ಕನಿಷ್ಠ ಸಿಬ್ಬಂದಿ ಇಟ್ಟುಕೊಂಡು 1200 ಟೆಸ್ಟ್‍ಗಳನ್ನು ಮಾಡಿ ರಾಜ್ಯಕ್ಕೆ ಮಾದರಿಯಾಗಿದೆ. ಉಳಿದ ಸಂಸ್ಥೆಗಳು ಈ ಗುರಿ ತಲುಪಬೇಕು. ಅದಕ್ಕಾಗಿ ಅಗತ್ಯ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ಅಳವಡಿಸಬೇಕು. ಪ್ರತಿದಿನ ಮಾಡುವ ಟೆಸ್ಟ್ ಮತ್ತು ಬಾಕಿ ಉಳಿದ ಸ್ಯಾಂಪಲ್ ವಿವರಗಳನ್ನು ರಾಜ್ಯದ ಡ್ಯಾಷ್ ಬೋಡ್9ನಲ್ಲಿ ಸಿಗುವಂತೆ ಎಲ್ಲರೂ ಮಾಹಿತಿ ಒದಗಿಸಬೇಕು. ಇದಕ್ಕಾಗಿಯೇ ಡಾಟಾ ಆಪರೇಟರ್ ಗಳನ್ನು ನೇಮಕ ಮಾಡಬೇಕು. ಇನ್ನು ಮುಂದೆ ನೆಪಗಳನ್ನು ಹೇಳುವಂತಿಲ್ಲ ಎಂದರು.

    ರೋಗ ಲಕ್ಷಣ ಇದ್ದವರು ಮತ್ತು ಇಲ್ಲದವರ ಸ್ಯಾಂಪಲ್ ಗಳನ್ನು ಸರ್ಕಾರ ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಟೆಸ್ಟ್ ಮಾಡಬೇಕು. ಚೌಕಾಸಿ ಪ್ರಶ್ನೆಯೇ ಇಲ್ಲ. ಮೆಡಿಕಲ್ ಕಾಲೇಜು ಹೊರತು ಪಡಿಸಿ ಇರುವ ಖಾಸಗಿ ಪ್ರಯೋಗಾಲಯಗಳ ಜೊತೆ ಬುಧವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ಪರಾಮರ್ಶೆ ಮಾಡಲಾಗುತ್ತದೆ ಎಂದು ಸಚಿವರು ಎಂದು ತಿಳಿಸಿದರು.

    ಪ್ರಯೋಗಾಲಯ ಸ್ಥಾಪನೆ, ಸಿಬ್ಬಂದಿ ತರಬೇತಿ ಹಾಗೂ ನಾನಾ ಸಂಸ್ಥೆಗಳ ಅಕ್ರಡೇಶನ್ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತಿರುವ ನಿಮ್ಹಾನ್ಸ್ ನ ಡಾ.ರವಿ ಅವರನ್ನು ಸಚಿವರು ಅಭಿನಂದಿಸಿದರು. ಮುಂದಿನ ಹತ್ತು ದಿನಗಳಲ್ಲಿ ಬಾಕಿ ಇರುವ 25 ರಿಂದ 30 ಪ್ರಯೋಗಾಲಯಗಳನ್ನು ಸ್ಥಾಪಿಸಿ ಟೆಸ್ಟ್ ಗಳ ವಿಷಯದಲ್ಲಿ ಗೊಂದಲ ಉದ್ಭವಿಸದಂತೆ ನೋಡಿಕೊಳ್ಳಬೇಕು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದರು.

  • ಚಾಮರಾಜನಗರದಲ್ಲಿ ಕೋವಿಡ್-19 ಪ್ರಯೋಗಾಲಯ ಸ್ಥಾಪನೆಗೆ ಐಸಿಎಂಆರ್ ಅನುಮತಿ

    ಚಾಮರಾಜನಗರದಲ್ಲಿ ಕೋವಿಡ್-19 ಪ್ರಯೋಗಾಲಯ ಸ್ಥಾಪನೆಗೆ ಐಸಿಎಂಆರ್ ಅನುಮತಿ

    ಚಾಮರಾಜನಗರ: ಮೆಡಿಕಲ್ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಅಧುನಿಕ ಕೋವಿಡ್-19 ಪ್ರಯೋಗಾಲಯಕ್ಕೆ ಐಸಿಎಂಆರ್ ಅನುಮೋದನೆ ನೀಡಿದ್ದು, ನಾಳೆಯಿಂದಲೇ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದೆ.

    ಎಸ್.ಡಿ.ಆರ್.ಎಫ್ ನಿಧಿಯಿಂದ ಬಿಡುಗಡೆಯಾದ 1.72 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪ್ರಯೋಗಾಲಯ ನಿರ್ಮಾಣವಾಗಿದ್ದು, ಇನ್ನು ಮುಂದೆ ಶಂಕಿತರ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆಗಳು ಈ ಪ್ರಯೋಗಾಲಯದಲ್ಲೇ ನಡೆಯಲಿವೆ. ಇದುವರೆಗೆ ಚಾಮರಾಜನಗರ ಜಿಲ್ಲೆಯ ಕೊರೊನಾ ಶಂಕಿತರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಮೈಸೂರು ಮೆಡಿಕಲ್ ಕಾಲೇಜಿಗೆ ಕಳುಹಿಸಲಾಗುತ್ತಿತ್ತು. ಇದೀಗ ಐಸಿಎಂಆರ್ ಅನುಮೋದನೆ ನೀಡಿರುವ ಹಿನ್ನಲೆಯಲ್ಲಿ ನಾಳೆಯಿಂದಲೇ ಶಂಕಿತರ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆಗಳನ್ನು ಇದೇ ಪ್ರಯೋಗಾಲಯದಲ್ಲಿ ನಡೆಸಲಾಗವುದು ಎಂದು ಚಾಮರಾಜನಗರ ಮೆಡಿಕಲ್ ಕಾಲೇಜಿನ ಡೀನ್ ಡಾ.ಸಂಜೀವ್ ತಿಳಿಸಿದ್ದಾರೆ.

    ಒಂದು ಬಾರಿಗೆ 96 ಪ್ರಕರಣಗಳಂತೆ ದಿನಕ್ಕೆ 300 ಪ್ರಕರಣಗಳ ಪರೀಕ್ಷೆ ಮಾಡಬಹುದಾಗಿದ್ದು, ಕೊರೊನಾ ಪರೀಕ್ಷೆ ಮಾತ್ರವಲ್ಲದೆ ಇತರ ಖಾಯಿಲೆಗಳ ಪರೀಕ್ಷೆಗಳನ್ನು ಇಲ್ಲಿ ಕೈಗೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

  • ರಾಜ್ಯದಲ್ಲೇ ಅತ್ಯುತ್ತಮ ಕೋವಿಡ್ ಪ್ರಯೋಗಾಲಯ ಚಾಮರಾಜನಗರದಲ್ಲಿ ಸ್ಥಾಪನೆ: ಸುರೇಶ್ ಕುಮಾರ್

    ರಾಜ್ಯದಲ್ಲೇ ಅತ್ಯುತ್ತಮ ಕೋವಿಡ್ ಪ್ರಯೋಗಾಲಯ ಚಾಮರಾಜನಗರದಲ್ಲಿ ಸ್ಥಾಪನೆ: ಸುರೇಶ್ ಕುಮಾರ್

    ಚಾಮರಾಜನಗರ: ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 1.79 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕೋವಿಡ್-19 ಪರೀಕ್ಷಾ ಪಿಸಿಆರ್ ಪ್ರಯೋಗಾಲಯ ರಾಜ್ಯದಲ್ಲಿಯೇ ಅತ್ಯುತ್ತಮ ಪ್ರಯೋಗಾಲಯವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಈ ಕೋವಿಡ್-19 ಪಿಸಿಆರ್ ಪ್ರಯೋಗಾಲಯಕ್ಕೆ 1.79 ಕೋಟಿ ರೂ. ಬಿಡುಗಡೆಯಾಗಿದೆ. ಐಸಿಎಂಆರ್ ನಿಯಮಾವಳಿಯ ಅನುಗುಣವಾಗಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಿರ್ಮಿಸಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

    ಒಂದು ಬಾರಿಗೆ ಸುಮಾರು 96 ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯ ವಿರುವ ಈ ಪಿಸಿಆರ್ ಪ್ರಯೋಗಾಲಯದಲ್ಲಿ ಒಂದು ದಿನಕ್ಕೆ 300 ಮಾದರಿಗಳನ್ನು ಪರೀಕ್ಷಿಸಬಹುದಾಗಿದ್ದು, 6 ರಿಂದ 8 ಗಂಟೆಯ ಒಳಗೆ ಅವುಗಳ ಫಲಿತಾಂಶ ಹೊರಬಲಿದೆ. ಇದು ಸಂಪೂರ್ಣವಾಗಿ ಸ್ವಯಂ ಚಾಲಿತ ಯಂತ್ರವಾಗಿದ್ದು, ಇದಕ್ಕಾಗಿ ಹೆಚ್ಚಿನ ಸಿಬ್ಬಂದಿಯೂ ಬೇಕಿಲ್ಲ ಎಂದು ಮಾಹಿತಿ ನೀಡಿದರು.

    ಕೊವಿಡ್-19 ಸಮಯದಲ್ಲಿ ಕೊರೊನಾ ವೈರಸ್ ಸಂಬಂಧಿತ ಪರೀಕ್ಷೆಗಳನ್ನು ಮಾಡಲು ಅನುಕೂಲವಾದರೆ, ಕೋವಿಡ್-19 ನಂತರದ ದಿನಗಳಲ್ಲಿ ಅನ್ಯ ಪರೀಕ್ಷೆಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಚಾಮರಾಜನಗರದಲ್ಲಿ ಲೋಕಾರ್ಪಣೆ ಮಾಡಲಾಗಿದೆ ಎಂದ ಅವರು, ಪಿಸಿಆರ್ ಟೆಸ್ಟ್ ಯಾವುದೇ ರೋಗವನ್ನು ಹಾಗೂ ಕಾಯಿಲೆಯನ್ನು ನಿಖರವಾಗಿ ಪತ್ತೆ ಹಚ್ಚುವ ಕಾರ್ಯವನ್ನು ಮಾಡಲಿದೆ ಎಂದರು.

  • ಮಲೆನಾಡ ಹೆಬ್ಬಾಗಿಲಿಗೆ ಕಾಲಿಟ್ಟ ಮಂಗನ ಕಾಯಿಲೆ

    ಮಲೆನಾಡ ಹೆಬ್ಬಾಗಿಲಿಗೆ ಕಾಲಿಟ್ಟ ಮಂಗನ ಕಾಯಿಲೆ

    ಚಿಕ್ಕಮಗಳೂರು: ಮಲೆನಾಡಿಗರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆ ಭೀತಿ ಇದೀಗ ಮಲೆನಾಡ ಹೆಬ್ಬಾಗಿಲು ತರೀಕೆರೆಗೂ ಕಾಲಿಟ್ಟಿರುವ ಸಂಶಯ ಮೂಡಿದೆ.

    ಕಳೆದೊಂದು ತಿಂಗಳ ಅವಧಿಯಲ್ಲಿ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಒಟ್ಟು 9 ಮಂಗಗಳು ಮೃತಪಟ್ಟಿದ್ದು, ನಾಲ್ಕು ಮಾದರಿಯ ರಕ್ತವನ್ನು ಮೈಸೂರು, ಮಂಗಳೂರು, ಶಿವಮೊಗ್ಗ ಹಾಗೂ ಪುಣೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತಾಲೂಕು ಹಾಗೂ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

    ಇದೀಗ ಮಲೆನಾಡ ಹೆಬ್ಬಾಗಿಲು ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪದ ಗೋಪಾಲ ಕಾಲೋನಿಯಲ್ಲೂ ಒಂದೇ ದಿನ ನರಳಿ-ನರಳಿ ದಿಢೀರನೇ ಎರಡು ಮಂಗಗಳು ಮೃತಪಟ್ಟರುವದರಿಂದ ಸುತ್ತಮುತ್ತಲಿನ ಜನರು ಆತಂಕಕ್ಕೀಡಾಗಿದ್ದಾರೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ತಾಲೂಕು ವೈದ್ಯಾಧಿಕಾರಿ ಚಂದ್ರಶೇಖರ್ ಭೇಟಿ ನೀಡಿ, ಮಂಗಗಳ ರಕ್ತದ ಮಾದರಿಯನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಬಳಿಕ ಗ್ರಾಮದ ಸುತ್ತಲೂ ಔಷಧಿ ಸಿಂಪಡಿಸಿ, ಮಂಗಗಳನ್ನು ಸುಟ್ಟು ಹಾಕಿದ್ದಾರೆ. ಭದ್ರಾ ಡ್ಯಾಂ ತಪ್ಪಲಿನಲ್ಲಿರುವ ಲಕ್ಕವಳ್ಳಿ ಗ್ರಾಮದ ಸುತ್ತಲೂ ದಟ್ಟ ಅರಣ್ಯವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರತಿಷ್ಠಿತ ಆಸ್ಪತ್ರೆಯಲ್ಲೇ ಎಡವಟ್ಟು

    ಪ್ರತಿಷ್ಠಿತ ಆಸ್ಪತ್ರೆಯಲ್ಲೇ ಎಡವಟ್ಟು

    ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳೇ ಹಾಗೆ ರೋಗಿಗಳಿಗೆ ಸರಿಯಾದ ಟ್ರೀಟ್‍ಮೆಂಟ್ ಕೊಡುವುದನ್ನು ಬಿಟ್ಟು ಬೇರೆಲ್ಲ ಕೆಲಸಗಳನ್ನು ಮಾಡುತ್ತವೆ. ಇಂತಹದ್ದೊಂದು ಎಡವಟ್ಟನ್ನು ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯ ಲ್ಯಾಬೋರೇಟರಿ ಮಾಡಿದೆ.

    ಕಿಡ್ನಿಯಲ್ಲಿ ಕಲ್ಲಾಗಿದೆ ಅಂತ ವಿಕ್ಟೋರಿಯ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಂಡ ರೋಗಿಯೊಬ್ಬರಿಗೆ ಏನು ಆಗಿಲ್ಲ ಅಂತ ಲ್ಯಾಬ್ ಸಿಬ್ಬಂದಿ ರಿಪೋರ್ಟ್ ಕೊಟ್ಟಿದ್ದಾರೆ. ರಿಪೋರ್ಟ್ ನಲ್ಲಿ ನೋ ಪ್ರಾಬ್ಲಂ ಅಂತ ಬಂದ ಹಿನ್ನೆಲೆಯಲ್ಲಿ ರೋಗಿ ಸುಮ್ಮನಾಗಿದ್ದಾರೆ. ಆದರೆ ಕೆಲವು ದಿನಗಳ ನಂತರ ಇವರಿಗೆ ಮತ್ತೆ ನೋವು ಕಾಣಿಸಿಕೊಂಡಿದೆ. ಖಾಸಗಿ ಲ್ಯಾಬೋರೇಟರಿನಲ್ಲಿ ಮತ್ತೆ ಸ್ಕ್ಯಾನಿಂಗ್ ಮಾಡಿಸಿದಾಗ ಕಿಡ್ನಿಯಲ್ಲಿ ಕಲ್ಲಾಗಿದೆ ಅನ್ನೋ ರಿಪೋರ್ಟ್ ಬಂದಿದೆ. ಇದನ್ನು ನೋಡಿದ ರೋಗಿ ಶಾಕ್ ಆಗಿದ್ದಾರೆ.

    ಖಾಸಗಿ ಲ್ಯಾಬ್ ರಿಪೋರ್ಟ್ ತೆಗೆದುಕೊಂಡು ವಿಕ್ಟೋರಿಯಾ ಆಸ್ಪತ್ರೆಗೆ ಹೋದಾಗ, ಲ್ಯಾಬ್ ಸಿಬ್ಬಂದಿ ಆ ಹಳೆಯ ರಿಪೋರ್ಟ್ ವಾಪಸ್ ಇಸ್ಕೊಂಡಿದ್ದಾರೆ. ಹೊಸದಾಗಿ ಸ್ಕ್ಯಾನ್ ಮಾಡಿ ಕಿಡ್ನಿಯಲ್ಲಿ ಕಲ್ಲಿರುವುದನ್ನು ದೃಢಪಡಿಸಿ ಇನ್ನೊಂದು ರಿಪೋರ್ಟ್ ಕೊಟ್ಟಿದ್ದಾರೆ. ಈ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕರನ್ನು ಕೇಳಿದರೆ ಏನೋ ಎಡವಟ್ಟು ಆಗಿದೆ. ಸರಿಪಡಿಸಿದರೆ ಆಯ್ತು ಬಿಡಿ ಅನ್ನೋ ಉಡಾಫೆ ಉತ್ತರ ಕೊಡುತ್ತಿದ್ದಾರೆ ಎಂದು ನೊಂದ ರೋಗಿ ಬಿ.ಎಸ್.ಗೌಡ ಹೇಳಿದ್ದಾರೆ.

    ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಹೋದರೆ ಯಾವ ರೀತಿ ಸೇವೆ ಸಿಗುತ್ತೆ ಅನ್ನೋದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ. ಇಂತಹ ನೂರು ಪ್ರಕರಣಗಳು ರಾಜ್ಯದಲ್ಲಿ ಪ್ರತಿನಿತ್ಯ ಕಂಡು ಬರುತ್ತವೆ. ಇನ್ನಾದರೂ ಅಧಿಕಾರಿಗಳು ಇಂತವರ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ಲಾಸ್ಟಿಕ್ ಮೊಟ್ಟೆ ಪತ್ತೆ- ಜನರಲ್ಲಿ ಆತಂಕ

    ಪ್ಲಾಸ್ಟಿಕ್ ಮೊಟ್ಟೆ ಪತ್ತೆ- ಜನರಲ್ಲಿ ಆತಂಕ

    ಬಳ್ಳಾರಿ: ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ ಸಿಕ್ಕಿದ್ದಾಯ್ತು, ಇದೀಗ ಪ್ಲಾಸ್ಟಿಕ್ ಮೊಟ್ಟೆ ಹಾವಳಿ ಶುರುವಾಗಿದ್ದು, ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮೊಟ್ಟೆ ಪತ್ತೆಯಾಗಿದೆ.

    ನಗರದ ಕೆಎಚ್ ಬಿ ಕಾಲೋನಿಯ ಅಂಗಡಿಯಲ್ಲಿ ಪ್ಲಾಸ್ಟಿಕ್ ಮೊಟ್ಟೆ ಪತ್ತೆಯಾಗಿದೆ. ಚಂದ್ರಶೇಖರ್ ಅವರು ಸೋಮವಾರ ಮೊಟ್ಟೆಗಳನ್ನು ಖರೀದಿಸಿ ಮನೆಗೆ ತಂದಿದ್ದಾರೆ. ಬಳಿಕ ಅಂದು ರಾತ್ರಿ ಒಂದು ಮೊಟ್ಟೆಯನ್ನು ಬೇಯಿಸಿ ತಿಂದಿದ್ದಾರೆ. ಆದರೆ ಅದು ಡೈಜೆಸ್ಟ್ ಆಗಿಲ್ಲ.

    ಸೋಮವಾರ ರಾತ್ರಿ ತಿಂದ ಮೊಟ್ಟೆಯಿಂದ ಚಂದ್ರಶೇಖರ್ ಅವರಿಗೆ ಹಸಿವೇ ಆಗಲಿಲ್ಲ. ಇದರಿಂದ ಅನುಮಾನಗೊಂಡ ಚಂದ್ರಶೇಖರ್ ಮೊಟ್ಟೆಯನ್ನು ಪರೀಕ್ಷೆ ಮಾಡಿದ ಬಂತರ ಪ್ಲಾಸ್ಟಿಕ್ ಮೊಟ್ಟೆಯೆಂದು ತಿಳಿದಿದೆ. ಹೀಗಾಗಿ ಚಂದ್ರಶೇಖರ್ ಅಂಗಡಿಯಲ್ಲಿ ಖರೀದಿಸಿದ್ದ ಮೊಟ್ಟೆಯನ್ನು ಸದ್ಯ ಪಶು ಆಸ್ಪತ್ರೆಯ ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಲಾಗಿದೆ.

  • ಮಳೆ ಬಂದ್ರೂ ಕುಡಿಯೋಕಿಲ್ಲ ಶುದ್ಧ ನೀರು- ಅಧಿಕಾರಿಗಳಿಗೆ ಚಿತ್ರದುರ್ಗದ ಜನರ ಹಿಡಿಶಾಪ

    ಮಳೆ ಬಂದ್ರೂ ಕುಡಿಯೋಕಿಲ್ಲ ಶುದ್ಧ ನೀರು- ಅಧಿಕಾರಿಗಳಿಗೆ ಚಿತ್ರದುರ್ಗದ ಜನರ ಹಿಡಿಶಾಪ

    ಚಿತ್ರದುರ್ಗ: ಶುದ್ಧ ಕುಡಿಯುವ ನೀರಿನ ವಿಷಯದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ ಭಾವನೆ ತಾಳಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

    ಇದು ಶಾಶ್ವತ ಬರದನಾಡೆಂಬ ಹಣೆಪಟ್ಟಿಯುಳ್ಳ ಕೋಟೆನಾಡು ಚಿತ್ರದುರ್ಗದ ವ್ಯಥೆ. ಈ ನಗರಕ್ಕೆ ದಾವಣಗೆರೆ ಜಿಲ್ಲೆಯ ಸೂಳೆಕೆರೆಯಿಂದ ಕುಡಿಯುವ ನೀರಿನ ವ್ಯವಸ್ತೆ ಕಲ್ಪಿಸಲಾಗಿದೆ. ಆದ್ರೆ ಕಳೆದ ನಾಲ್ಕು ವರ್ಷದಿಂದ ಮಳೆ ಆಗಿಲ್ಲ. ಹಾಗಾಗಿ ನೀರು ತಳಮಟ್ಟಕ್ಕೆ ತಲುಪಿದೆ. ಈ ಕೆರೆಯ ಕಲುಷಿತ ನೀರನ್ನು ಕುಡಿದು ಜನರು ಬೇಸಿಗೆ ಕಳೆದಿದ್ದಾರೆ.

    ಆದರೆ ಈಗ ಈ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಸಾಕಷ್ಟು ನೀರು ಕೆರೆಗೆ ಹರಿದು ಬಂದಿದೆ. ಆದರೂ ಸಹ ಕೋಟೆನಾಡಿನ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವಲ್ಲಿ ನಗರಸಭೆ ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಇನ್ನು ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಗರಸಭೆಯ ಪೌರಾಯುಕ್ತರು, ಕೆಲವು ದಿನಗಳು ಮಾತ್ರ ನೀರು ಕಲುಷಿತವಾಗಿ ಬಂದಿತ್ತು. ಆದ್ರೆ ಈ ಸಮಸ್ಯೆ ಈಗ ಬಗೆಹರಿದಿದೆ. ಜಿಲ್ಲಾಧಿಕಾರಿಗಳು ಹಾಗು ನಗರಸಭೆಯ ಅಧಿಕಾರಿಗಳು ಸೂಳೆಕೆರೆ ಹಾಗು ಹಿರೇಕಂದವಾಡಿ ಬಳಿ ಇರುವ ಶುದ್ಧಿಕರಣ ಘಟಕಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದೇವೆ. ನೀರನ್ನು ನಾಗರಿಕರು ನಿರಾತಂಕದಿಂದ ಕುಡಿಯಬಹುದೆಂದು ಪ್ರಯೋಗಾಲಯದಿಂದ ವರದಿ ಬಂದಿದೆ ಅಂತ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

    ಒಟ್ಟಾರೆ ಉತ್ತಮ ಮಳೆಯಾಗಿ ಕೆರೆ ಭರ್ತಿಯಾದರೂ ಸಹ ಕೋಟೆನಾಡಿನ ಜನರಿಗೆ ಕುಡಿಯುವ ನೀರಿನ ಸಂಕಷ್ಟ ತಪ್ಪಿಲ್ಲ. ಅಧಿಕಾರಿಗಳ ಎಡವಟ್ಟಿನಿಂದಾಗಿ ಶುದ್ಧ ಕುಡಿಯು ನೀರು ಸಿಗದೆ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.