Tag: Labor

  • ಬಿಹಾರಿ ಕಾರ್ಮಿಕನಿಂದ ಮತ್ತೆ ನಾಲ್ವರಿಗೆ ಕೊರೊನಾ – ನಂಜನಗೂಡಂತೆ ಆಗುತ್ತಾ ಬೆಂಗ್ಳೂರಿನ ಹೊಂಗಸಂದ್ರ

    ಬಿಹಾರಿ ಕಾರ್ಮಿಕನಿಂದ ಮತ್ತೆ ನಾಲ್ವರಿಗೆ ಕೊರೊನಾ – ನಂಜನಗೂಡಂತೆ ಆಗುತ್ತಾ ಬೆಂಗ್ಳೂರಿನ ಹೊಂಗಸಂದ್ರ

    – ಕಂಟೈನ್‍ಮೆಂಟ್ ಝೋನ್‍ನಲ್ಲಿ ಲಾಕ್‍ಡೌನ್ ಬಿಗಿ

    ಬೆಂಗಳೂರು: ಕೊರೊನಾ ಕೇಸ್‍ನಲ್ಲಿ ಬೆಂಗಳೂರಿನ ಹೊಂಗಸಂದ್ರ ನಂಜನಗೂಡು ಆಗುತ್ತಿದಿಯಾ ಅನ್ನೋ ಆತಂಕ ಎದುರಾಗಿದೆ. ಕಾರಣ ಬಿಹಾರ ಮೂಲದ ಕಾರ್ಮಿಕನೊಬ್ಬನಿಂದಲೇ ಈ ಏರಿಯಾದಲ್ಲಿ ಒಂದೇ ದಿನ ಬರೋಬ್ಬರಿ 13 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

    ಬಿಹಾರ ಮೂಲದ ಕಾರ್ಮಿಕ ಬೊಮ್ಮನಹಳ್ಳಿ ವಲಯಕ್ಕೆ ಬರುವ ಹೊಂಗಸಂದ್ರದಲ್ಲಿ ವಾಸಿಸುತ್ತಿದ್ದ. ಈತ ನಮ್ಮ ಮೆಟ್ರೋ ಕಾಮಗಾರಿಗೆ ಕೆಲಸ ಮಾಡುತ್ತಿದ್ದು, ಬರೋಬ್ಬರಿ 13 ಮಂದಿಗೆ ಕೊರೊನಾ ಹಬ್ಬಿರುವುದು ಬೆಂಗಳೂರಲ್ಲಿ ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಇಡೀ ಏರಿಯಾವನ್ನು ಸೀಲ್‍ಡೌನ್ ಮಾಡಲಾಗಿದೆ. ಇದನ್ನೂ ಓದಿ: ಬೆಂಗ್ಳೂರಿನ ಕೊರೊನಾ ಸೋಂಕಿತ ಕಾರ್ಮಿಕನ ಟ್ರಾವೆಲ್ ಹಿಸ್ಟರಿ – ಆಟೋದಲ್ಲಿ ಪ್ರಯಾಣ

    ಈತ ವಾಸಿಸುತ್ತಿದ್ದ ವಿದ್ಯಾಜ್ಯೋತಿ ನಗರದಲ್ಲಿ ರಸ್ತೆ, ಅಂಗಡಿ, ಮನೆಗಳನ್ನು ಬಂದ್ ಮಾಡಲಾಗಿದೆ. ಬಿಹಾರ ಮೂಲದ ಈ ಕಾರ್ಮಿಕ ಹೊಂಗಸಂದ್ರದಲ್ಲಿ ಉಳಿದ 13 ಮಂದಿಯ ಒಟ್ಟಿಗೆ ವಾಸವಾಗಿದ್ದ. ಅಲ್ಲದೇ ಬಿಬಿಎಂಪಿ ನೀಡಿದ್ದ ಆಹಾರದ ಕಿಟ್‍ನಿಂದ 150 ಮಂದಿ ಒಟ್ಟಿಗೆ ಅಡುಗೆ ರೆಡಿ ಮಾಡುತ್ತಿದ್ದರು.

    ಈತನ ಸಂಪರ್ಕದಲ್ಲಿದ್ದ 150 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ. ಆದರೆ ಈ ಕಾರ್ಮಿಕನಿಗೆ ಕೊರೊನಾ ಹೇಗೆ ಬಂತು ಅನ್ನೋದೇ ಈಗ ರಹಸ್ಯವಾಗಿಬಿಟ್ಟಿದೆ. ಲಾಕ್‍ಡೌನ್‍ಗೂ ಮೊದಲು ಈತ ಬಿಹಾರಕ್ಕೆ ಹೋಗಿಬಂದಿದ್ದ ಎಂದು ತಿಳಿದುಬಂದಿದೆ. ಈತನಿಂದ ಸೋಂಕಿತರಾದವರು ಪಕ್ಕದ ಮಂಗಮ್ಮನ ಪಾಳ್ಯದಲ್ಲೂ ಕೆಲಸ ಮಾಡುತ್ತಿದ್ದರು. ಹೀಗಾಗಿ ಈ ಸೋಂಕಿತರ ಸಂಪರ್ಕಕ್ಕೆ ಯಾರೆಲ್ಲ ಬಂದಿದ್ದಾರೆ ಅನ್ನೋ ಬಗ್ಗೆಯೂ ಇವತ್ತಿನಿಂದ ಬಿಬಿಎಂಪಿ ಮಾಹಿತಿ ಸಂಗ್ರಹಿಸಲಿದೆ. ಇನ್ನೂ ಈತ ಓಡಾಡುತ್ತಿದ್ದ ಆಟೋ ಚಾಲಕ ಮತ್ತು ಆತನ ಮನೆಯವರಿಗೆ ಕೊರೊನಾ ನೆಗೆಟಿವ್ ಬಂದಿದೆ.

  • ಕೊರೊನಾ ವೈರಸ್ ಭೀತಿ- ಕಾರ್ಮಿಕರಿಗೆ ವೇತನ ಸಹಿತ ರಜೆಗೆ ಆದೇಶ

    ಕೊರೊನಾ ವೈರಸ್ ಭೀತಿ- ಕಾರ್ಮಿಕರಿಗೆ ವೇತನ ಸಹಿತ ರಜೆಗೆ ಆದೇಶ

    ಬೆಂಗಳೂರು: ವಿಶ್ವಾದ್ಯಂತ ಡೆಡ್ಲಿ ಕೊರೊನಾ ವೈರಸ್ ಭಯದ ವಾತಾವರಣ ಸೃಷ್ಟಿ ಮಾಡಿದೆ. ಕರ್ನಾಟಕದಲ್ಲೂ ವೈರಸ್ ಭೀತಿ ಜನರಲ್ಲಿ ಮನೆ ಮಾಡಿದೆ. ನಿತ್ಯ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ತಪಾಸಣೆ ಮಾಡೋ ಕೆಲಸ ನಡೆಯುತ್ತಿದೆ. ಈಗ ಕಾರ್ಮಿಕ ಇಲಾಖೆ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಕೊರೊನಾ ವೈರಸ್ ಶಂಕಿತ ವ್ಯಕ್ತಿಗೆ ವೇತನ ಸಹಿತ 28 ದಿನಗಳ ಕಾಲ ರಜೆ ನೀಡುವಂತೆ ಕಾರ್ಮಿಕ ಇಲಾಖೆಗೆ ಆದೇಶ ಹೊರಡಿಸಿದೆ.

    ಕೊರೊನಾ ವೈರಸ್ ಹರಡೋದನ್ನ ತಡೆಗಟ್ಟಲು ಕಾರ್ಮಿಕ ಇಲಾಖೆ ಈ ಮಹತ್ವದ ನಿರ್ಧಾರ ಮಾಡಿದೆ. ರಜೆ ಸಹಿತ 28 ದಿನ ರಜೆ ಕೊಡಲೇಬೇಕು ಅಂತ ಸುತ್ತೋಲೆ ಹೊರಡಿಸಿದೆ. ಇದಲ್ಲದೆ ಕೊರೊನಾ ವೈರಸ್ ಬಾಧಿತರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಬೇಕು ಅಂತಲೂ ಕಾರ್ಮಿಕ ಇಲಾಖೆ ತಿಳಿಸಿದೆ. ವೈದ್ಯಕೀಯ ಚಿಕಿತ್ಸೆ ಮತ್ತು ರಜೆ ನೀಡಲು ಅನುಸರಿಸಲು 4 ಅಂಶಗಳ ಮಾರ್ಗಸೂಚಿಗಳನ್ನ ಕಾರ್ಮಿಕ ಇಲಾಖೆ ನೀಡಿದೆ.

    ಇಎಸ್‍ಐ ಕಾಯ್ದೆ ಅನ್ವಯವಾಗುವ ಸಂಸ್ಥೆಗಳ ಕಾರ್ಮಿಕರು ತಮ್ಮ ಹತ್ತಿರದ ಇಎಸ್‍ಐ ಔಷಾಧಾಲಯ ಮತ್ತು ಆಸ್ಪತ್ರೆಗಳಿಗೆ ತೆರಳಿ ಸದರಿ ಆಸ್ಪತ್ರೆಗಳಲ್ಲಿನ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕು. ಪ್ರಮಾಣ ಪತ್ರ ಪಡೆಯಲು ಬರುವ ಕಾರ್ಮಿಕರಿಗೆ ಎಲ್ಲಾ ಇಎಸ್‍ಐ ವೈದ್ಯಾಧಿಕಾರಿಗಳು ತುರ್ತಾಗಿ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡಬೇಕು. ಕಾರ್ಮಿಕರು ಪ್ರಮಾಣ ಪತ್ರವನ್ನು ಸಂಸ್ಥೆಯ ಆಡಳಿತ ಮಂಡಳಿಗೆ ನೀಡಬೇಕು.

    ಪ್ರಮಾಣ ಪತ್ರದ ಮೇಲೆ ಸಂಸ್ಥೆ 28 ದಿನ ಕಡ್ಡಾಯ ರಜೆ ನೀಡಬೇಕು. ಇಎಸ್‍ಐ ಅನ್ವಯವಾಗದೇ ಇರುವ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ಕೊರೊನಾ ವೈರಸ್ ಬಾಧಿತರಾದಲ್ಲಿ ಅವರಿಗೆ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಲಂ 15 ರ ಅನ್ವಯ ತಕ್ಷಣ 28 ದಿನ ವೇತನ ಸಹಿತ ರಜೆ ನೀಡಬೇಕು ಅಂತ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ. ಈ ಎಲ್ಲಾ ಅಂಶಗಳನ್ನ ಆಯಾ ಜಿಲ್ಲಾಧಿಕಾರಿಗಳು ಅನುಷ್ಠಾನ ಮಾಡಲು ಕಾರ್ಮಿಕ ಇಲಾಖೆ ಸೂಚನೆ ನೀಡಿದೆ.

  • ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕ ಸಾವು

    ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕ ಸಾವು

    ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದ ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬನಿಗೆ ಯಂತ್ರ ತಗುಲಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

    ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ತಾಲೂಕಿನ ಗೊಲ್ಲರಹೊಸಹಳ್ಳಿ ಗ್ರಾಮದ ಚನ್ನಕೇಶವ (40) ಮೃತ ಕಾರ್ಮಿಕ. ಹಲವು ವರ್ಷಗಳಿಂದ ಕಾರ್ಖಾನೆಯ ಮೆಕ್ಯಾನಿಕಲ್ ವಿಭಾಗದಲ್ಲಿ (ಪಿಟ್ಟರ್) ಕಾರ್ಮಿಕನಾಗಿ ಚನ್ನಕೇಶವ ಕೆಲಸ ಮಾಡಿಕೊಂಡು ಕೊಪ್ಪ ಗ್ರಾಮದಲ್ಲಿ ವಾಸವಾಗಿದ್ದರು. ಎಂದಿನಂತೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಯಂತ್ರ ತಗುಲಿ ಈ ಘಟನೆ ಸಂಭವಿಸಿದೆ.

    ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟಿರುವ ಕಾರ್ಮಿಕರಿಗೆ ಕಾರ್ಖಾನೆಯ ಆಡಳಿತ ಮಂಡಳಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತ ಮುಖಂಡ ಉಮೇಶ್ ನೇತೃತ್ವದಲ್ಲಿ ಕಾರ್ಮಿಕರು ಕಾರ್ಖಾನೆಯ ಆವರಣದಲ್ಲಿ ಪ್ರತಿಭಟನೆ ಮಾಡಿದರು.

  • ಆರ್‌ಟಿಪಿಎಸ್‌ನಲ್ಲಿ ಕಲ್ಲಿದ್ದಲು ಶಾಖಕ್ಕೆ ಸುಟ್ಟು ಕರಕಲಾದ ಕಾರ್ಮಿಕ

    ಆರ್‌ಟಿಪಿಎಸ್‌ನಲ್ಲಿ ಕಲ್ಲಿದ್ದಲು ಶಾಖಕ್ಕೆ ಸುಟ್ಟು ಕರಕಲಾದ ಕಾರ್ಮಿಕ

    ರಾಯಚೂರು: ಜಿಲ್ಲೆಯ ಶಕ್ತಿನಗರದಲ್ಲಿರುವ ಆರ್‌ಟಿಪಿಎಸ್‌ನಲ್ಲಿ ಅವಘಡ ಸಂಭವಿಸಿದ್ದು, ಗುತ್ತಿಗೆ ಕಾರ್ಮಿಕನೋರ್ವ ಕಲ್ಲಿದ್ದಲು ಶಾಖಕ್ಕೆ ಸುಟ್ಟು ಕರಕಲಾದ ದುರಂತ ನಡೆದಿದೆ.

    ಓರಿಸ್ಸಾ ಮೂಲದ ದೀಪಕ್ ನಾಯಕ್(27) ಮೃತ ಕಾರ್ಮಿಕ. ಗುತ್ತಿಗೆ ಆಧಾರದ ಮೇಲೆ ದೀಪಕ್ ಆರ್‌ಟಿಪಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದನು. ಕಲ್ಲಿದ್ದಲು ಬಂಕರ್‌ನಲ್ಲಿ ದೀಪಕ್ ಕೆಲಸ ಮಾಡುವಾಗ ಈ ಘಟನೆ ನಡೆದಿದೆ. ರಾತ್ರಿ ಸುಮಾರು 11:30ರ ವೇಳೆಗೆ ಈ ದುರಂತ ನಡೆದಿದೆ ಎನ್ನಲಾಗಿದೆ. ರಾತ್ರಿ ತನ್ನ ಪಾಳಿ ಸಮಯ ಮುಗಿದ ಮೇಲೂ ಕಾರ್ಮಿಕ ಹೆಚ್ಚುವರಿ ಕೆಲಸ ಮಾಡುತ್ತಿದ್ದ ವೇಳೆ ಕಲ್ಲಿದ್ದಲು ಶಾಖಕ್ಕೆ ಸಾವನ್ನಪ್ಪಿದ್ದಾನೆ.

    ಅಧಿಕಾರಿಗಳ ನಿರ್ಲಕ್ಷ್ಯವೇ ಕಾರ್ಮಿಕನ ಸಾವಿಗೆ ಕಾರಣ. ಅಧಿಕಾರಿಗಳು ಯಾವುದೇ ಸುರಕ್ಷತಾ ಕ್ರಮಗಳನ್ನು ಕಾರ್ಮಿಕರಿಗೆ ಒದಗಿಸಿದೆ ನಿರ್ಲಕ್ಷ್ಯ ತೋರಿದ್ದಾರೆ. ಆದ್ದರಿಂದಲೇ ಕಾರ್ಮಿಕ ಸಾವನ್ನಪ್ಪಿದ್ದಾನೆ ಎಂದು ಇತರೆ ಕಾರ್ಮಿಕರು ಆರೋಪಿಸಿದ್ದಾರೆ. ಸದ್ಯ ಈ ಸಂಬಂಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರ್ಮಿಕನ ಕುತ್ತಿಗೆಗೆ ಸುತ್ತಿಕೊಂಡ 10 ಅಡಿ ಹೆಬ್ಬಾವು – ಸ್ಥಳೀಯರಿಂದ ರಕ್ಷಣೆ

    ಕಾರ್ಮಿಕನ ಕುತ್ತಿಗೆಗೆ ಸುತ್ತಿಕೊಂಡ 10 ಅಡಿ ಹೆಬ್ಬಾವು – ಸ್ಥಳೀಯರಿಂದ ರಕ್ಷಣೆ

    ತಿರುವನಂತಪುರಂ: ಕೆಲಸ ಮಾಡುತ್ತಿದ್ದ ಕಾರ್ಮಿಕನ ಕುತ್ತಿಗೆಗೆ 10 ಅಡಿ ಹೆಬ್ಬಾವು ಸುತ್ತಿಕೊಂಡ ಘಟನೆ ತಿರುವನಂತಪುರಂನ ಕಾಲೇಜು ಆವರಣದಲ್ಲಿ ನಡೆದಿದೆ.

    ಕಾಲೇಜು ಆವರಣದಲ್ಲಿ ಬೆಳೆದಿದ್ದ ಪೊದೆಯನ್ನು ತೆರವುಗೊಳಿಸುತ್ತಿದ್ದ 58 ವರ್ಷದ ಭುವಚಂದ್ರನ್ ನಾಯರ್ ಅವರ ಕುತ್ತಿಗೆಗೆ ಹಾವು ಸುತ್ತಿಕೊಂಡಿದೆ. ಈ ವೇಳೆ ಕುತ್ತಿಗೆಗೆ ಹೆಬ್ಬಾವು ಗಟ್ಟಿಯಾಗಿ ಸುತ್ತಿಕೊಂಡು ಉಸಿರಾಟದ ತೊಂದರೆಯಿಂದ ನರಳುತ್ತಿದ್ದ ನಾಯರ್ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

    ಕಾಲೇಜು ಆವರಣದಲ್ಲಿ ಪೊದೆ ತೆರವುಗೊಳಿಸುತ್ತಿದ್ದ ನಾಯರ್ ಅವರಿಗೆ ಪೊದೆಯೊಳಗೆ ಉದ್ದವಾದ ಬಟ್ಟೆಯ ರೀತಿಯ ವಸ್ತು ಕಂಡು ಬಂದಿದೆ. ನಂತರ ಹತ್ತಿರಕ್ಕೆ ಹೋಗಿ ನೋಡಿದಾಗ ಅದು ಹೆಬ್ಬಾವು ಎಂದು ಗೊತ್ತಾಗಿದೆ. ನಂತರ ಅವರು ತನ್ನ ಜೊತೆ ಕೆಲಸ ಮಾಡುತ್ತಿದ್ದ ಬೇರೆ ಕೆಲಸಗಾರರನ್ನು ಕರೆದು ಹಾವನ್ನು ಹಿಡಿದು ಚೀಲಗೆ ತುಂಬುವ ಸಮಯದಲ್ಲಿ ಕೈಯಿಂದ ಹೆಬ್ಬಾವು ತಪ್ಪಿಸಿಕೊಂಡಿದೆ. ಅದನ್ನು ಮತ್ತೆ ಹಿಡಿಯಲು ಹೋದ ನಾಯರ್ ಅವರ ಕುತ್ತಿಗೆಗೆ ಹಾವು ಸುತ್ತಿಕೊಂಡಿದೆ.

    https://www.youtube.com/watch?v=_UM_PMB6iVI#action=share

    ನಾಯರ್ ಅವರ ಕುತ್ತಿಗೆಗೆ ಹಾವು ಸುತ್ತಿಕೊಂಡಿದ್ದನ್ನು ನೋಡಿದ ಬೇರೆ ಕಾರ್ಮಿಕರು ಭಯಗೊಂಡು ನಾಯರ್ ಅವರ ರಕ್ಷಣೆ ಮಾಡದೇ ನಿಂತು ಬಿಟ್ಟಿದ್ದಾರೆ. ಆದರೆ ಅಲ್ಲಿದ್ದ ಕೆಲ ಸ್ಥಳೀಯರು ನಾಯರ್ ಅವರು ಉಸಿರುಗಟ್ಟಿರುವುದನ್ನು ಕಂಡು ಹಾವನ್ನು ಕುತ್ತಿಗೆಯಿಂದ ಬಿಡಿಸಿ ಅದನ್ನು ಚೀಲಕ್ಕೆ ಹಾಕಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿದ್ದಾರೆ.

    ಅರಣ್ಯ ಅಧಿಕಾರಿಗಳು ಹಾವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವು ಕುತ್ತಿಗೆಗೆ ಗಟ್ಟಿಯಾಗಿ ಸುತ್ತಿಕೊಂಡ ಕಾರಣ ಉಸಿರಾಟದ ತೊಂದರೆಯಿಂದ ಅಸ್ವಸ್ತಗೊಂಡಿದ್ದ ಭುವಚಂದ್ರನ್ ನಾಯರ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಅವರ ಈಗ ಚೇತರಿಸಿಕೊಳ್ಳುತ್ತಿದ್ದಾರೆ.

  • ಹಣ ಪಡೆದು, ಸರಿಯಾಗಿ ಮೃತದೇಹ ಸುಡಲ್ಲ: ಸ್ಮಶಾನದ ಸಿಬ್ಬಂದಿ ವಿರುದ್ಧ ಆಕ್ರೋಶ

    ಹಣ ಪಡೆದು, ಸರಿಯಾಗಿ ಮೃತದೇಹ ಸುಡಲ್ಲ: ಸ್ಮಶಾನದ ಸಿಬ್ಬಂದಿ ವಿರುದ್ಧ ಆಕ್ರೋಶ

    ಗದಗ: ಜಿಲ್ಲೆಯ ಬೆಟಗೇರಿ ಮುಕ್ತಿಧಾಮ ಸ್ಮಶಾನದಲ್ಲಿ ಮೃತದೇಹವೊಂದು ಅರೆಬರೆ ಸುಟ್ಟಿದೆ. ಇದು ಮೃತನ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಬುಧವಾರ ಬೆಟಗೇರಿ ಆನಂದ್ ಅಸುಂಡಿ ಎಂಬವರು ಮೃತಪಟ್ಟಿದ್ದರು. ಈ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಈ ಸ್ಮಶಾನದ ಕಮೀಟಿಯವರು ಕಟ್ಟಿಗೆಯಿಂದ ಸುಡದೇ, ಕೇವಲ ಕ್ವಾಯಿಲ್ ಮೂಲಕ ಸುಟ್ಟಿದ್ದಾರೆ. ಇದರಿಂದ ಮೃತದೇಹ ಸರಿಯಾಗಿ ಸುಟ್ಟಿಲ್ಲ. ಇಂದು ಕುಟುಂಬದವರು ಅಸ್ತಿ ಹೊತ್ತೊಯಲು ಬಂದಾಗ ಈ ದೃಶ್ಯ ನೋಡಿ ಬೆರಗಾಗಿದ್ದಾರೆ.

    ಸರಿಯಾಗಿ ಹಣ ತೆಗೆದುಕೊಳ್ಳುತ್ತಾರೆ. ಆದರೆ ಸರಿಯಾಗಿ ಕೆಲಸ ಮಾಡಲ್ಲ. ಅಸ್ತಿ ಬಳೆದು ಪಿಂಡ ಬಿಡುವುದಾದರೂ ಹೇಗೆ? ನಮ್ಮ ಧಾರ್ಮಿಕ ವಿಧಿವಿಧಾನಗಳಿಗೆ ಸ್ಮಶಾನ ಸಮಿತಿಯವರು ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಂಬದವರು ಆರೋಪಿಸಿದರು. ಇದಕ್ಕೆ ಸಂಬಂಧಿಸಿ ಸಮಿತಿಯವರನ್ನು ಕೇಳಿದರೆ ಮುಕ್ತಿಧಾಮ ಸಮಿತಿ ರಚಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಹೇಳಿದರು.

  • ಕೂಲಿ ಕೆಲಸಕ್ಕೆ ತೆರೆಳಿದ್ದ ಯುವಕ ಶವವಾಗಿ ಪತ್ತೆ

    ಕೂಲಿ ಕೆಲಸಕ್ಕೆ ತೆರೆಳಿದ್ದ ಯುವಕ ಶವವಾಗಿ ಪತ್ತೆ

    ಯಾದಗಿರಿ: ಬುಧವಾರ ಕಾಣೆಯಾಗಿದ್ದ ಯುವಕ ಇವತ್ತು ಶವವಾಗಿ ಪತ್ತೆಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬಾಣತಿಹಾಳ ಗ್ರಾಮದಲ್ಲಿ ಇಂದು ನಡೆದಿದೆ.

    ಶಹಾಪುರ ತಾಲೂಕಿನ ಹಳಿಸಗರ ಗ್ರಾಮದ ಸುರೇಶ್ (19) ಮೃತ ಯುವಕ. ಬುಧವಾರ ಕೂಲಿ ಕೆಲಸಕ್ಕೆಂದು ತೆರಳಿದ್ದ ಸುರೇಶ್ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಈ ಸಂಬಂಧ ಸುರೇಶ್‍ನ ಪಾಲಕರು ಶಹಪುರ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.

    ಇಂದು ಬಾಣತಿಹಾಳ ಗ್ರಾಮದ ಬಳಿಯ ಕೆಬಿಜೆಎನ್‍ಎಲ್ ಮುಖ್ಯ ಕಾಲುವೆಯಲ್ಲಿ ಯುವಕನ ಶವ ಪತ್ತೆಯಾಗಿದೆ. ಕಾಲುವೆ ಬಳಿ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯುವಕನನ್ನು ಕೈ ಕಾಲು ಕಟ್ಟಿ ಕಾಲುವೆಗೆ ಬಿಸಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಸಂಬಂಧ ಗೋಗಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

  • ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಅರ್ಧ ಕೈ ಕಟ್

    ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಅರ್ಧ ಕೈ ಕಟ್

    ಕೋಲಾರ: ಕೆಲಸ ಮಾಡುವ ವೇಳೆ ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಕೈ ಅರ್ಧ ತುಂಡಾದ ಘಟನೆ ಕೋಲಾರದ ನತಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ನಹಾರ್ಸ್ ಎಂಜಿನಿಯರಿಂಗ್ ಇಂಡಿಯಾ ಕಂಪನಿಯಲ್ಲಿಂದು ಈ ಘಟನೆ ನಡೆದಿದೆ. ಹೈದರ್ ಎಂಬ ಕಾರ್ಮಿಕನ ಕೈ ತುಂಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಕಾರ್ಖಾನೆಯ ಆಡಳಿತ ಮಂಡಳಿಯಿಂದ ಸೂಕ್ತ ಚಿಕಿತ್ಸೆ ಹಾಗೂ ಭದ್ರತೆ ನೀಡದ ಆರೋಪ ಕೇಳಿಬಂದಿದೆ. ಕಾರ್ಖಾನೆ ಎದುರು ನೂರಾರು ಕಾರ್ಮಿಕರು ಭದ್ರತೆ ಹಾಗೂ ರಕ್ಷಣೆ ನೀಡುವಂತೆ ಪ್ರತಿಭಟನೆ ನಡೆಸಿದರು. ಗಾಯಾಳುಗೆ ಸೂಕ್ತ ಪರಿಹಾರ ನೀಡುವಂತೆ, ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇಎಸ್‍ಐ ನೀಡುವಂತೆ ಆಗ್ರಹ ಮಾಡಿದರು.

    ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

  • ಗುತ್ತಿಗೆದಾರನ ನಿರ್ಲಕ್ಷ್ಯ- ಬೃಹತ್ ಟ್ಯಾಂಕ್ ಕುಸಿದು ಕೂಲಿ ಕಾರ್ಮಿಕ ಸಾವು

    ಗುತ್ತಿಗೆದಾರನ ನಿರ್ಲಕ್ಷ್ಯ- ಬೃಹತ್ ಟ್ಯಾಂಕ್ ಕುಸಿದು ಕೂಲಿ ಕಾರ್ಮಿಕ ಸಾವು

    ಯಾದಗಿರಿ: ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಕುಡಿಯುವ ನೀರಿನ ಬೃಹತ್ ಟ್ಯಾಂಕ್ ಕುಸಿದು ಕೂಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೋಳೂರಿನಲ್ಲಿ ಇಂದು ನಡೆದಿದೆ.

    ಪಶ್ಚಿಮ ಬಂಗಾಳ ಮೂಲದ ಮಹಮದ್ ಕಬೀರ್ (30) ಸಾವನ್ನಪ್ಪಿದ ಕಾರ್ಮಿಕ. ಇಂದು ಕಬೀರ್ ಮತ್ತು ಆತನ ಸ್ನೇಹಿತ ಟ್ಯಾಂಕ್‍ನನ್ನು ಡೆಮಾಲಿಶ್ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಟ್ಯಾಂಕ್ ಈ ಇಬ್ಬರೂ ಕಾರ್ಮಿಕರ ಮೇಲೆ ಕುಸಿದು ಬಿದ್ದಿದೆ.

    ಘಟನೆಯಲ್ಲಿ ಓರ್ವ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹತ್ತಾರು ವರ್ಷದ ಹಳೆಯ ಟ್ಯಾಂಕ್ ಇದಾಗಿದ್ದು, ತಾಳಿಕೋಟಿ ಮೂಲದ ಅಶ್ಪಾಕ್ ಎಂಬವರಿಗೆ ಜಿಲ್ಲಾಡಳಿತ, ಟ್ಯಾಂಕರ್ ಕೆಡವಲು ಟೆಂಡರ್ ನೀಡಿತ್ತು. ಮುಂಜಾಗ್ರತೆಯ ಇಲ್ಲದೆ ಬೃಹತ್ ಟ್ಯಾಂಕ್ ಕೆಡುವಲು ಗುತ್ತಿಗೆದಾರ ಮುಂದಾಗಿರುವುದೆ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತದೆ.

    ಸದ್ಯ ಘಟನಾ ಸ್ಥಳಕ್ಕೆ ಕೊಡೆಕಲ್ ಪೊಲೀಸರು ಭೇಟಿ ನೀಡಿದ್ದು, ಟ್ಯಾಂಕ್ ಅಡಿಯಲ್ಲಿ ಸಿಲುಕಿದ ಕಾರ್ಮಿಕನ ಮೃತ ದೇಹ ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ.

  • ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ – ಪ್ರಾಣಾಪಾಯದಿಂದ ಪಾರು

    ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ – ಪ್ರಾಣಾಪಾಯದಿಂದ ಪಾರು

    ಸಾಂದರ್ಭಿಕ ಚಿತ್ರ

    ಮಡಿಕೇರಿ: ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಕೊಡಗು ವಿರಾಜಪೇಟೆ ತಾಲೂಕಿನ ಕುರ್ಚಿ ಗ್ರಾಮದಲ್ಲಿ ನಡೆದಿದೆ.

    ಮಾರಾ (55) ಗಾಯಗೊಂಡ ಕಾರ್ಮಿಕರಾಗಿದ್ದು, ಆನೆ ದಾಳಿಯ ರಭಸಕ್ಕೆ ಎಡಗಾಲು ಸೀಳಿ ಹೋಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಇಂದು ತೋಟದ ಬಳಿ ನಡೆದುಕೊಂಡು ಬರುವಾಗ ಆನೆ ಏಕಾಏಕಿ ದಾಳಿ ನಡೆಸಿದೆ. ಕೂಡಲೇ ಸ್ಥಳೀಯರು ಅವರನ್ನು ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಮಂಗಲ ವನ್ಯಜೀವಿ ವಲಯದ ಆರ್ ಎಫ್‍ಒ ವೀರೇಂದ್ರರವರು ಕಾರ್ಮಿಕರನ್ನು ಗೊಣಿಕೊಪ್ಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು ಕೂಡಲೇ ಈ ಭಾಗದಲ್ಲಿ ಕಾಡಾನೆ ಹಾವಳಿಯನ್ನು ತಡೆಗಟ್ಟುವಂತೆ ಒತ್ತಾಯ ಮಾಡಿದರು. ಅಲ್ಲದೇ ಕಾರ್ಮಿಕನ ದಿನ ನಿತ್ಯದ ಖರ್ಚಿಗೆ ಹಣ ನೀಡುವಂತೆ ಮತ್ತು ಸಂಪೂರ್ಣ ವೈದ್ಯಕೀಯ ವೆಚ್ಚ ಭರಿಸಲು ಒತ್ತಾಯ ಮಾಡಿದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು 10 ಸಾವಿರ ರೂ. ನೀಡಿ, ಅರಣ್ಯ ಇಲಾಖೆಯ ವತಿಯಿಂದ ವೈದ್ಯಕೀಯ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು.

    ಘಟನೆ ಬಗ್ಗೆ ಮಾಹಿತಿ ಪಡೆದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಮನು ಸೋಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಮಿಕನ ಆರೋಗ್ಯ ವಿಚಾರಿಸಿದರು.